Virata Parva: Chapter 47

ವಿರಾಟ ಪರ್ವ: ಗೋಹರಣ ಪರ್ವ

೪೭

ಭೀಷ್ಮನಿಂದ ಸೈನ್ಯವ್ಯೂಹ

ಲೆಕ್ಕ ಹಾಕಿದರೆ ಹದಿಮೂರುವರ್ಷಗಳಲ್ಲಿ ಐದು ತಿಂಗಳುಗಳೂ ಹನ್ನೆರಡು ರಾತ್ರಿಗಳೂ ಅಧಿಕವಾಗಿ ಬಂದಿವೆಯೆಂದೂ, ಪಾಂಡವರು ತಮ್ಮ ಪ್ರತಿಜ್ಞೆಯನ್ನು ಯಥಾವತ್ತಾಗಿ ಮಾಡಿ ಮುಗಿಸಿದ್ದಾರೆಂದೂ (೧-೫), ಅರ್ಜುನನನ್ನು ಎದುರಿಸಲು ಯುದ್ಧ ಯೋಜನೆಯನ್ನು ರೂಪಿಸಿಕೊಳ್ಳಬೇಕೆಂದು ಭೀಷ್ಮನು ಹೇಳಿದುದು (೬-೧೪). ಪಾಂಡವರಿಗೆ ತಾನು ರಾಜ್ಯವನ್ನು ಕೊಡುವುದಿಲ್ಲವಾದುದರಿಂದ ಯುದ್ಧೋಚಿತ ಕ್ರಮಗಳನ್ನು ಬೇಗನೇ ಕೈಗೊಳ್ಳಿ ಎಂದು ದುರ್ಯೋಧನನು ಕೇಳಿಕೊಳ್ಳಲು ಭೀಷ್ಮನು ಯುದ್ಧಕ್ಕೆ ಯೋಜನೆಯನ್ನು ಸೂಚಿಸುವುದು (೧೫-೧೯).

04047001 ಭೀಷ್ಮ ಉವಾಚ|

04047001a ಕಲಾಂಶಾಸ್ತಾತ ಯುಜ್ಯಂತೇ ಮುಹೂರ್ತಾಶ್ಚ ದಿನಾನಿ ಚ|

04047001c ಅರ್ಧಮಾಸಾಶ್ಚ ಮಾಸಾಶ್ಚ ನಕ್ಷತ್ರಾಣಿ ಗ್ರಹಾಸ್ತಥಾ||

04047002a ಋತವಶ್ಚಾಪಿ ಯುಜ್ಯಂತೇ ತಥಾ ಸಂವತ್ಸರಾ ಅಪಿ|

04047002c ಏವಂ ಕಾಲವಿಭಾಗೇನ ಕಾಲಚಕ್ರಂ ಪ್ರವರ್ತತೇ||

ಭೀಷ್ಮನು ಹೇಳಿದನು: “ಅಯ್ಯಾ! ಕಲೆಗಳು, ಮುಹೂರ್ತಗಳು, ದಿನಗಳು, ಅರ್ಧಮಾಸಗಳು, ಮಾಸಗಳು, ನಕ್ಷತ್ರಗಳು, ಗ್ರಹಗಳು, ಋತುಗಳು, ಸಂವತ್ಸರಗಳು - ಈ ಕಾಲವಿಭಾಗಗಳಿಂದ ಕೂಡಿ ಕಾಲಚಕ್ರವು ಉರುಳುತ್ತದೆ.

04047003a ತೇಷಾಂ ಕಾಲಾತಿರೇಕೇಣ ಜ್ಯೋತಿಷಾಂ ಚ ವ್ಯತಿಕ್ರಮಾತ್|

04047003c ಪಂಚಮೇ ಪಂಚಮೇ ವರ್ಷೇ ದ್ವೌ ಮಾಸಾವುಪಜಾಯತಃ||

ಅವುಗಳ ಕಾಲಾತಿರೇಕದಿಂದಲೂ ಗ್ರಹನಕ್ಷತ್ರಗಳ ವ್ಯತಿಕ್ರಮದಿಂದಲೂ ಐದೈದು ವರ್ಷಕ್ಕೊಮ್ಮೆ ಎರಡು ಮಾಸಗಳು ಹೆಚ್ಚಾಗಿ ಬರುತ್ತವೆ.

04047004a ತೇಷಾಮಭ್ಯಧಿಕಾ ಮಾಸಾಃ ಪಂಚ ದ್ವಾದಶ ಚ ಕ್ಷಪಾಃ|

04047004c ತ್ರಯೋದಶಾನಾಂ ವರ್ಷಾಣಾಮಿತಿ ಮೇ ವರ್ತತೇ ಮತಿಃ||

ಹೀಗೆ ಲೆಕ್ಕ ಹಾಕಿದರೆ ಹದಿಮೂರುವರ್ಷಗಳಲ್ಲಿ ಐದು ತಿಂಗಳುಗಳೂ ಹನ್ನೆರಡು ರಾತ್ರಿಗಳೂ ಅಧಿಕವಾಗಿ ಬಂದಿವೆಯೆಂದು ನನ್ನ ಬುದ್ಧಿಗೆ ತೋರುತ್ತದೆ.

04047005a ಸರ್ವಂ ಯಥಾವಚ್ಚರಿತಂ ಯದ್ಯದೇಭಿಃ ಪರಿಶ್ರುತಂ|

04047005c ಏವಮೇತದ್ಧ್ರುವಂ ಜ್ಞಾತ್ವಾ ತತೋ ಬೀಭತ್ಸುರಾಗತಃ||

ಈ ಪಾಂಡವರು ಮಾಡಿದ ಪ್ರತಿಜ್ಞೆಯನ್ನೆಲ್ಲಾ ಯಥಾವತ್ತಾಗಿ ನೆರವೇರಿಸಿದ್ದಾರೆ. ಇದು ಹೀಗೆಯೇ ಸರಿ ಎಂದು ನಿಶ್ಚಿತವಾಗಿ ತಿಳಿದುಕೊಂಡೇ ಅರ್ಜುನನು ಬಂದಿದ್ದಾನೆ.

04047006a ಸರ್ವೇ ಚೈವ ಮಹಾತ್ಮಾನಃ ಸರ್ವೇ   ಧರ್ಮಾರ್ಥಕೋವಿದಾಃ|

04047006c ಯೇಷಾಂ ಯುಧಿಷ್ಠಿರೋ ರಾಜಾ       ಕಸ್ಮಾದ್ಧರ್ಮೇಽಪರಾಧ್ನುಯುಃ||

ಅವರೆಲ್ಲರೂ ಮಹಾತ್ಮರು; ಎಲ್ಲರೂ ಧರ್ಮಾರ್ಥಕೋವಿದರು. ಅವರಿಗೆ ಯುಧಿಷ್ಠಿರನೇ ರಾಜನಾಗಿರುವಾಗ, ಅವರು ಧರ್ಮದ ವಿಷಯದಲ್ಲಿ ತಪ್ಪು ಮಾಡುವುದಾದರೂ ಹೇಗೆ?

04047007a ಅಲುಬ್ಧಾಶ್ಚೈವ ಕೌಂತೇಯಾಃ ಕೃತವಂತಶ್ಚ ದುಷ್ಕರಂ|

04047007c ನ ಚಾಪಿ ಕೇವಲಂ ರಾಜ್ಯಮಿಚ್ಛೇಯುಸ್ತೇಽನುಪಾಯತಃ||

ಪಾಂಡವರು ಲೋಭರಹಿತರು; ದುಷ್ಕರವಾದುದನ್ನು ಸಾಧಿಸಿದವರು. ಮಾರ್ಗವಿಲ್ಲದೆ ಅವರು ಸುಮ್ಮನೆ ರಾಜ್ಯವನ್ನು ಬಯಸುವವರಲ್ಲ.

04047008a ತದೈವ ತೇ ಹಿ ವಿಕ್ರಾಂತುಮೀಷುಃ ಕೌರವನಂದನಾಃ|

04047008c ಧರ್ಮಪಾಶನಿಬದ್ಧಾಸ್ತು ನ ಚೇಲುಃ ಕ್ಷತ್ರಿಯವ್ರತಾತ್||

ಆ ಕೌರವನಂದನರು ಆಗಲೇ ಮೇಲೆರಗಬಯಸಿದ್ದರು. ಆದರೆ ಧರ್ಮಪಾಶಬದ್ಧರಾಗಿ ಕ್ಷತ್ರಿಯ ವ್ರತದಿಂದ ಕದಲಲಿಲ್ಲ.

04047009a ಯಚ್ಚಾನೃತ ಇತಿ ಖ್ಯಾಯೇದ್ಯಚ್ಚ ಗಚ್ಛೇತ್ಪರಾಭವಂ|

04047009c ವೃಣುಯುರ್ಮರಣಂ ಪಾರ್ಥಾ ನಾನೃತತ್ವಂ ಕಥಂ ಚನ||

ಸುಳ್ಳುಗಾರನೆನಿಸಿಕೊಳ್ಳುವುದು, ಪರಾಭವಗೊಳ್ಳುವುದು ಇವುಗಳಲ್ಲೊಂದನ್ನು ನಿರ್ಧರಿಸಬೇಕಾದಲ್ಲಿ ಪಾಂಡವರು ಮರಣವನ್ನಾದರೂ ಅಪ್ಪಿಯಾರು, ಆದರೆ ಯಾವರೀತಿಯಲ್ಲೂ ಸುಳ್ಳುಗಾರಿಕೆಯನ್ನಪ್ಪುವುದಿಲ್ಲ.

04047010a ಪ್ರಾಪ್ತೇ ತು ಕಾಲೇ ಪ್ರಾಪ್ತವ್ಯಂ ನೋತ್ಸೃಜೇಯುರ್ನರರ್ಷಭಾಃ|

04047010c ಅಪಿ ವಜ್ರಭೃತಾ ಗುಪ್ತಂ ತಥಾವೀರ್ಯಾ ಹಿ ಪಾಂಡವಾಃ||

ತಕ್ಕ ಕಾಲ ಬಂದಿರುವಾಗ ಅಂತಹ ವೀರ್ಯಶಾಲಿಗಳೂ ನರಶ್ರೇಷ್ಠರೂ ಆದ ಪಾಂಡವರು ತಮಗೆ ಬರಬೇಕಾದುದನ್ನು ಇಂದ್ರನೇ ಅದನ್ನು ರಕ್ಷಿಸುತ್ತಿದ್ದರೂ ಕೂಡ - ಬಿಡುವುದಿಲ್ಲ.

04047011a ಪ್ರತಿಯುಧ್ಯಾಮ ಸಮರೇ ಸರ್ವಶಸ್ತ್ರಭೃತಾಂ ವರಂ|

04047011c ತಸ್ಮಾದ್ಯದತ್ರ ಕಲ್ಯಾಣಂ ಲೋಕೇ ಸದ್ಭಿರನುಷ್ಠಿತಂ|

04047011e ತತ್ಸಂವಿಧೀಯತಾಂ ಕ್ಷಿಪ್ರಂ ಮಾ ನೋ ಹ್ಯರ್ಥೋಽತಿಗಾತ್ಪರಾನ್||

ಎಲ್ಲ ಶಸ್ತ್ರಧರರಲ್ಲಿ ಶ್ರೇಷ್ಠ ಅರ್ಜುನನನ್ನು ನಾವು ಯುದ್ಧದಲ್ಲಿ ಎದುರಿಸಬೇಕಾಗಿದೆ. ಆದ್ದರಿಂದ ಲೋಕದಲ್ಲಿ ಸಜ್ಜನರು ಅನುಸರಿಸುವ ಶುಭಕರ ಕ್ರಮವನ್ನು ಬೇಗ ಕೈಗೊಳ್ಳೋಣ. ನಮ್ಮ ಗೋಧನವು ಶತ್ರುಗಳಿಗೆ ಸೇರದಿರಲಿ.

04047012a ನ ಹಿ ಪಶ್ಯಾಮಿ ಸಂಗ್ರಾಮೇ ಕದಾ ಚಿದಪಿ ಕೌರವ|

04047012c ಏಕಾಂತಸಿದ್ಧಿಂ ರಾಜೇಂದ್ರ ಸಂಪ್ರಾಪ್ತಶ್ಚ ಧನಂಜಯಃ||

ಕೌರವ! ಯುದ್ಧದಲ್ಲಿ ಸಂಪೂರ್ಣ ಗೆಲುವಿನ ಭರವಸೆಯಿರುವುದನ್ನು ಎಂದೂ ನಾನು ಕಂಡಿಲ್ಲ. ಅದರಲ್ಲೂ ಈಗ ಬಂದಿರುವವನು ಧನಂಜಯ.

04047013a ಸಂಪ್ರವೃತ್ತೇ ತು ಸಂಗ್ರಾಮೇ ಭಾವಾಭಾವೌ ಜಯಾಜಯೌ|

04047013c ಅವಶ್ಯಮೇಕಂ ಸ್ಪೃಶತೋ ದೃಷ್ಟಮೇತದಸಂಶಯಂ||

ಯುದ್ಧವೊದಗಿದಾಗ ಲಾಭ-ನಷ್ಟಗಳು, ಜಯಾಪಜಯಗಳು ಒಂದು ಪಕ್ಷಕ್ಕೆ ಅವಶ್ಯವಾಗಿ ತಟ್ಟಲೇಬೇಕು. ಇದು ನಿಸ್ಸಂದೇಹವಾಗಿ ಕಂಡದ್ದು.

04047014a ತಸ್ಮಾದ್ಯುದ್ಧಾವಚರಿಕಂ ಕರ್ಮ ವಾ ಧರ್ಮಸಂಹಿತಂ|

04047014c ಕ್ರಿಯತಾಮಾಶು ರಾಜೇಂದ್ರ ಸಂಪ್ರಾಪ್ತೋ ಹಿ ಧನಂಜಯಃ||

ಆದ್ದರಿಂದ, ರಾಜೇಂದ್ರ! ಈಗ ನಾವು ಯುದ್ಧೋಚಿತವಾದ ಅಥವಾ ಧರ್ಮಸಮ್ಮತವಾದ ಕಾರ್ಯವನ್ನು ಬೇಗ ಮಾಡಬೇಕು. ಧನಂಜಯನು ಬಂದುಬಿಟ್ಟಿದ್ದಾನೆ.”

04047015 ದುರ್ಯೋಧನ ಉವಾಚ|

04047015a ನಾಹಂ ರಾಜ್ಯಂ ಪ್ರದಾಸ್ಯಾಮಿ ಪಾಂಡವಾನಾಂ ಪಿತಾಮಹ|

04047015c ಯುದ್ಧಾವಚಾರಿಕಂ ಯತ್ತು ತಚ್ಚೀಘ್ರಂ ಸಂವಿಧೀಯತಾಂ||

ದುರ್ಯೋಧನನು ಹೇಳಿದನು: “ಅಜ್ಜ! ಪಾಂಡವರಿಗೆ ನಾನು ರಾಜ್ಯವನ್ನು ಕೊಡುವುದಿಲ್ಲ. ಅದ್ದರಿಂದ ಯುದ್ಧೋಚಿತವಾದುದನ್ನು ಶೀಘ್ರವಾಗಿ ಕೈಕೊಳ್ಳಿ.”

04047016 ಭೀಷ್ಮ ಉವಾಚ|

04047016a ಅತ್ರ ಯಾ ಮಾಮಕೀ ಬುದ್ಧಿಃ ಶ್ರೂಯತಾಂ ಯದಿ ರೋಚತೇ|

04047016c ಕ್ಷಿಪ್ರಂ ಬಲಚತುರ್ಭಾಗಂ ಗೃಹ್ಯ ಗಚ್ಛ ಪುರಂ ಪ್ರತಿ|

04047016e ತತೋಽಪರಶ್ಚತುರ್ಭಾಗೋ ಗಾಃ ಸಮಾದಾಯ ಗಚ್ಛತು||

ಭೀಷ್ಮನು ಹೇಳಿದನು: “ನಿನಗೆ ರುಚಿಸುವುದಾದರೆ ಈಗ ನಾನು ಹೇಳುವ ಬುದ್ಧಿವಚನವನ್ನು ಕೇಳು. ಸೈನ್ಯದ ನಾಲ್ಕನೆಯ ಒಂದು ಭಾಗವನ್ನು ತೆಗೆದುಕೊಂಡು ಬೇಗ ನಗರಕ್ಕೆ ಹೋಗು. ಅನಂತರ ಇನ್ನೊಂದು ನಾಲ್ಕನೆಯ ಒಂದು ಭಾಗ ಗೋವುಗಳನ್ನಟ್ಟಿಕೊಂಡು ಹೋಗಲಿ.

04047017a ವಯಂ ತ್ವರ್ಧೇನ ಸೈನ್ಯೇನ ಪ್ರತಿಯೋತ್ಸ್ಯಾಮ ಪಾಂಡವಂ|

04047017c ಮತ್ಸ್ಯಂ ವಾ ಪುನರಾಯಾತಮಥ ವಾಪಿ ಶತಕ್ರತುಂ||

ಅರ್ಧ ಸೈನ್ಯ ಸಹಿತ ನಾವು ಅರ್ಜುನನೊಡನೆ ಯುದ್ಧಮಾಡುತ್ತೇವೆ. ಮತ್ತೆ ಮತ್ಸ್ಯನೇ ಬರಲಿ ಅಥವಾ ದೇವೇಂದ್ರನೇ ಬರಲಿ ಅವನೊಡನೆ ಯುದ್ಧಮಾಡುತ್ತೇವೆ.

04047018a ಆಚಾರ್ಯೋ ಮಧ್ಯತಸ್ತಿಷ್ಠತ್ವಶ್ವತ್ಥಾಮಾ ತು ಸವ್ಯತಃ|

04047018c ಕೃಪಃ ಶಾರದ್ವತೋ ಧೀಮಾನ್ಪಾರ್ಶ್ವಂ ರಕ್ಷತು ದಕ್ಷಿಣಂ||

ಆಚಾರ್ಯನು ನಡುವೆ ನಿಲ್ಲಲಿ, ಅಶ್ವತ್ಥಾಮನು ಎಡಗಡೆ ನಿಲ್ಲಲಿ. ಶಾರದ್ವತ ಧೀಮಂತ ಕೃಪನು ಬಲಗಡೆಯಲ್ಲಿ ರಕ್ಷಿಸಲಿ.

04047019a ಅಗ್ರತಃ ಸೂತಪುತ್ರಸ್ತು ಕರ್ಣಸ್ತಿಷ್ಠತು ದಂಶಿತಃ|

04047019c ಅಹಂ ಸರ್ವಸ್ಯ ಸೈನ್ಯಸ್ಯ ಪಶ್ಚಾತ್ಸ್ಥಾಸ್ಯಾಮಿ ಪಾಲಯನ್||

ಸೂತಪುತ್ರ ಕರ್ಣನು ಕವಚಧಾರಿಯಾಗಿ ಮುಂದುಗಡೆ ನಿಲ್ಲಲಿ. ನಾನು ಎಲ್ಲ ಸೈನ್ಯದ ಹಿಂದೆ ಅದನ್ನು ರಕ್ಷಿಸುತ್ತ ನಿಲ್ಲುತ್ತೇನೆ.””

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಭೀಷ್ಮಸೈನ್ಯವ್ಯೂಹೇ ಸಪ್ತಚತ್ವಾರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಭೀಷ್ಮಸೈನ್ಯವ್ಯೂಹದಲ್ಲಿ ನಲ್ವತ್ತೇಳನೆಯ ಅಧ್ಯಾಯವು.

Related image

Comments are closed.