ವಿರಾಟ ಪರ್ವ: ಗೋಹರಣ ಪರ್ವ
೪೬
ದ್ರೋಣನಲ್ಲಿ ಕ್ಷಮೆ
ತಮ್ಮ ತಮ್ಮಲ್ಲಿ ಭಿನ್ನಾಭಿಪ್ರಾಯಗಳು ಬರಬಾರದೆಂದು ಭೀಷ್ಮನು ಹೇಳಲು (೧-೧೧), ದುರ್ಯೋಧನನು ದ್ರೋಣನ ಕ್ಷಮೆ ಬೇಡಿದುದು (೧೨-೧೩). ದ್ರೋಣನು ಪ್ರಸನ್ನನಾದುದು (೧೪-೧೮).
04046001 ಭೀಷ್ಮ ಉವಾಚ|
04046001a ಸಾಧು ಪಶ್ಯತಿ ವೈ ದ್ರೋಣಃ ಕೃಪಃ ಸಾಧ್ವನುಪಶ್ಯತಿ|
04046001c ಕರ್ಣಸ್ತು ಕ್ಷತ್ರಧರ್ಮೇಣ ಯಥಾವದ್ಯೋದ್ಧುಮಿಚ್ಛತಿ||
ಭೀಷ್ಮನು ಹೇಳಿದನು: “ದ್ರೋಣನು ಹೇಳಿದ್ದು ಸರಿ. ಕೃಪನು ಹೇಳಿದ್ದೂ ಸರಿ. ಕರ್ಣನಾದರೋ ಕ್ಷತ್ರಧರ್ಮದಿಂದ ಪ್ರೇರಿತನಾಗಿ ಯಥೋಚಿತವಾಗಿ ಯುದ್ಧಮಾಡಬಯಸುತ್ತಾನೆ.
04046002a ಆಚಾರ್ಯೋ ನಾಭಿಷಕ್ತವ್ಯಃ ಪುರುಷೇಣ ವಿಜಾನತಾ|
04046002c ದೇಶಕಾಲೌ ತು ಸಂಪ್ರೇಕ್ಷ್ಯ ಯೋದ್ಧವ್ಯಮಿತಿ ಮೇ ಮತಿಃ||
ತಿಳಿದವರು ಆಚಾರ್ಯನನ್ನು ತೆಗಳಲಾಗದು. ಆದರೆ ದೇಶಕಾಲಗಳನ್ನು ಪರಿಗಣಿಸಿ ಯುದ್ಧಮಾಡಬೇಕೆಂಬುದು ನನ್ನ ಅಭಿಪ್ರಾಯ.
04046003a ಯಸ್ಯ ಸೂರ್ಯಸಮಾಃ ಪಂಚ ಸಪತ್ನಾಃ ಸ್ಯುಃ ಪ್ರಹಾರಿಣಃ|
04046003c ಕಥಮಭ್ಯುದಯೇ ತೇಷಾಂ ನ ಪ್ರಮುಹ್ಯೇತ ಪಂಡಿತಃ||
ಸೂರ್ಯಸಮಾನರೂ ವೀರರೂ ಆದ ಐವರು ಶತ್ರುಗಳನ್ನುಳ್ಳ ಪಂಡಿತನು ಅವರ ಅಭ್ಯುದಯದ ವಿಷಯದಲ್ಲಿ ಹೊಯ್ದಾಡದಿರುವುದು ಹೇಗೆ?
04046004a ಸ್ವಾರ್ಥೇ ಸರ್ವೇ ವಿಮುಹ್ಯಂತಿ ಯೇಽಪಿ ಧರ್ಮವಿದೋ ಜನಾಃ|
04046004c ತಸ್ಮಾದ್ರಾಜನ್ಬ್ರವೀಮ್ಯೇಷ ವಾಕ್ಯಂ ತೇ ಯದಿ ರೋಚತೇ||
ರಾಜ! ಧರ್ಮವಿದರಾದರೂ ಕೂಡ ಎಲ್ಲ ಜನರೂ ಸ್ವಾರ್ಥದ ವಿಷಯದಲ್ಲಿ ಚಂಚಲರಾಗುತ್ತಾರೆ. ಆದ್ದರಿಂದ ನಿನಗೆ ಹಿಡಿಸುವುದಾದರೆ ಈ ಮಾತನ್ನು ಹೇಳುತ್ತೇನೆ.
04046005a ಕರ್ಣೋ ಯದಭ್ಯವೋಚನ್ನಸ್ತೇಜಃಸಂಜನನಾಯ ತತ್|
04046005c ಆಚಾರ್ಯಪುತ್ರಃ ಕ್ಷಮತಾಂ ಮಹತ್ಕಾರ್ಯಮುಪಸ್ಥಿತಂ||
ಕರ್ಣನು ಆಡಿದ ಮಾತು ನಮ್ಮನ್ನು ಹುರಿದುಂಬಿಸುವುದಕ್ಕಾಗಿ ಅಷ್ಟೆ. ಆಚಾರ್ಯ ಪುತ್ರನು ಕ್ಷಮಿಸಿಬಿಡಲಿ. ಏಕೆಂದರೆ ಮಹತ್ಕಾರ್ಯ ಒದಗಿಬಂದಿದೆ.
04046006a ನಾಯಂ ಕಾಲೋ ವಿರೋಧಸ್ಯ ಕೌಂತೇಯೇ ಸಮುಪಸ್ಥಿತೇ|
04046006c ಕ್ಷಂತವ್ಯಂ ಭವತಾ ಸರ್ವಮಾಚಾರ್ಯೇಣ ಕೃಪೇಣ ಚ||
ಅರ್ಜುನನು ಬಂದಿರುವಾಗ ಇದು ವಿರೋಧಕ್ಕೆ ಕಾಲವಲ್ಲ. ನೀನೂ ಆಚಾರ್ಯನೂ ಕೃಪನೂ ಎಲ್ಲವನ್ನು ಕ್ಷಮಿಸಬೇಕು.
04046007a ಭವತಾಂ ಹಿ ಕೃತಾಸ್ತ್ರತ್ವಂ ಯಥಾದಿತ್ಯೇ ಪ್ರಭಾ ತಥಾ|
04046007c ಯಥಾ ಚಂದ್ರಮಸೋ ಲಕ್ಷ್ಮ ಸರ್ವಥಾ ನಾಪಕೃಷ್ಯತೇ|
04046007e ಏವಂ ಭವತ್ಸು ಬ್ರಾಹ್ಮಣ್ಯಂ ಬ್ರಹ್ಮಾಸ್ತ್ರಂ ಚ ಪ್ರತಿಷ್ಠಿತಂ||
ಸೂರ್ಯನಲ್ಲಿ ಪ್ರಭೆಯಿರುವಂತೆ ನಿಮ್ಮಲ್ಲಿ ಅಸ್ತ್ರಪರಿಣಿತಿಯಿದೆ. ಚಂದ್ರನಿಂದ ಕಲೆ ಹೇಗೆ ಎಂದೂ ಬೇರೆಯಾಗುವುದಿಲ್ಲವೋ ಹಾಗೆ ನಿಮ್ಮಲ್ಲಿ ಬ್ರಾಹ್ಮಣ್ಯವೂ ಬ್ರಹ್ಮಾಸ್ತ್ರವೂ ನೆಲೆಗೊಂಡಿವೆ.
04046008a ಚತ್ವಾರ ಏಕತೋ ವೇದಾಃ ಕ್ಷಾತ್ರಮೇಕತ್ರ ದೃಶ್ಯತೇ|
04046008c ನೈತತ್ಸಮಸ್ತಮುಭಯಂ ಕಸ್ಮಿಂಶ್ಚಿದನುಶುಶ್ರುಮಃ||
04046009a ಅನ್ಯತ್ರ ಭಾರತಾಚಾರ್ಯಾತ್ಸಪುತ್ರಾದಿತಿ ಮೇ ಮತಿಃ|
04046009c ಬ್ರಹ್ಮಾಸ್ತ್ರಂ ಚೈವ ವೇದಾಶ್ಚ ನೈತದನ್ಯತ್ರ ದೃಶ್ಯತೇ||
ನಾಲ್ಕು ವೇದಗಳು ಒಂದು ಕಡೆ ಇರುತ್ತವೆ; ಕ್ಷಾತ್ರ ಒಂದು ಕಡೆ ಕಂಡುಬರುತ್ತದೆ. ಭಾರತಾಚಾರ್ಯನನ್ನೂ ಅವನ ಮಗನನ್ನೂ ಬಿಟ್ಟರೆ, ಇವೆರಡೂ ಒಬ್ಬನಲ್ಲೇ ಇನ್ನೆಲ್ಲಿಯಾದರೂ ಇರುವುದನ್ನು ನಾವು ಕೇಳಿಲ್ಲ. ಬ್ರಹ್ಮಾಸ್ತ್ರವೂ ವೇದಗಳೂ ಒಟ್ಟಿಗೆ ಮತ್ತೆಲ್ಲಿಯೂ ಕಂಡುಬರುವುದಿಲ್ಲವೆಂದು ನನ್ನ ಅಭಿಪ್ರಾಯ.
04046010a ಆಚಾರ್ಯಪುತ್ರಃ ಕ್ಷಮತಾಂ ನಾಯಂ ಕಾಲಃ ಸ್ವಭೇದನೇ|
04046010c ಸರ್ವೇ ಸಂಹತ್ಯ ಯುಧ್ಯಾಮಃ ಪಾಕಶಾಸನಿಮಾಗತಂ||
ಆಚಾರ್ಯಪುತ್ರನು ಕ್ಷಮಿಸಬೇಕು. ನಮ್ಮನಮ್ಮಲ್ಲೆ ಒಡಕಿಗೆ ಇದು ಕಾಲವಲ್ಲ. ನಾವೆಲ್ಲರೂ ಸೇರಿ ಬಂದಿರುವ ಅರ್ಜುನನೊಡನೆ ಕಾದೋಣ.
04046011a ಬಲಸ್ಯ ವ್ಯಸನಾನೀಹ ಯಾನ್ಯುಕ್ತಾನಿ ಮನೀಷಿಭಿಃ|
04046011c ಮುಖ್ಯೋ ಭೇದೋ ಹಿ ತೇಷಾಂ ವೈ ಪಾಪಿಷ್ಠೋ ವಿದುಷಾಂ ಮತಃ||
ವಿದ್ವಾಂಸರು ಹೇಳಿರುವ ಸೈನ್ಯದ ವಿಪತ್ತುಗಳಲ್ಲಿ ಮುಖ್ಯವೂ ಕೆಟ್ಟುದೂ ಆದುದು ಯಾವುದೆಂದರೆ ಅದರ ಅನೈಕಮತ್ಯ ಎಂಬುದು ಬಲ್ಲವರ ಅಭಿಪ್ರಾಯ.”
04046012 ಅಶ್ವತ್ಥಾಮೋವಾಚ|
04046012a ಆಚಾರ್ಯ ಏವ ಕ್ಷಮತಾಂ ಶಾಂತಿರತ್ರ ವಿಧೀಯತಾಂ|
04046012c ಅಭಿಷಜ್ಯಮಾನೇ ಹಿ ಗುರೌ ತದ್ವೃತ್ತಂ ರೋಷಕಾರಿತಂ||
ಅಶ್ವತ್ಥಾಮನು ಹೇಳಿದನು: “ಆಚಾರ್ಯನೇ ಕ್ಷಮಿಸಲಿ; ಇಲ್ಲಿ ಶಾಂತಿಯುಂಟಾಗಲಿ. ಗುರುವನ್ನು ನಿಂದಿಸಲಾಗಿ ಅವರ ಆ ನಡತೆ ರೋಷದಿಂದುಂಟಾಯಿತು.””
04046013 ವೈಶಂಪಾಯನ ಉವಾಚ|
04046013a ತತೋ ದುರ್ಯೋಧನೋ ದ್ರೋಣಂ ಕ್ಷಮಯಾಮಾಸ ಭಾರತ|
04046013c ಸಹ ಕರ್ಣೇನ ಭೀಷ್ಮೇಣ ಕೃಪೇಣ ಚ ಮಹಾತ್ಮನಾ||
ವೈಶಂಪಾಯನನು ಹೇಳಿದನು: “ಭಾರತ! ಅನಂತರ ದುರ್ಯೋಧನನು ಕರ್ಣ, ಭೀಷ್ಮ ಹಾಗೂ ಮಹಾತ್ಮ ಕೃಪನೊಡನೆ ದ್ರೋಣನ ಕ್ಷಮೆ ಬೇಡಿದನು.
04046014 ದ್ರೋಣ ಉವಾಚ|
04046014a ಯದೇವ ಪ್ರಥಮಂ ವಾಕ್ಯಂ ಭೀಷ್ಮಃ ಶಾಂತನವೋಽಬ್ರವೀತ್|
04046014c ತೇನೈವಾಹಂ ಪ್ರಸನ್ನೋ ವೈ ಪರಮತ್ರ ವಿಧೀಯತಾಂ||
ದ್ರೋಣನು ಹೇಳಿದನು: “ಶಂತನು ಪುತ್ರ ಭೀಷ್ಮನು ಆಡಿದ ಮೊದಲ ಮಾತಿನಿಂದಲೇ ನಾನು ಪ್ರಸನ್ನನಾದೆನು. ಈಗ ಮುಂದಿನದನ್ನು ಮಾಡಬೇಕು.
04046015a ಯಥಾ ದುರ್ಯೋಧನೇಽಯತ್ತೇ ನಾಗಃ ಸ್ಪೃಶತಿ ಸೈನಿಕಾನ್|
04046015c ಸಾಹಸಾದ್ಯದಿ ವಾ ಮೋಹಾತ್ತಥಾ ನೀತಿರ್ವಿಧೀಯತಾಂ||
ದುರ್ಯೋಧನನು ನಮ್ಮನ್ನು ಅವಲಂಬಿಸಿರಲಾಗಿ ಸಾಹಸದಿಂದಾಗಲೀ ಭ್ರಾಂತಿಯಿಂದಾಗಲೀ ಯಾವುದೇ ವಿಪತ್ತು ಸೈನಿಕರನ್ನು ಸಮೀಪಿಸದಂತೆ ಯುದ್ಧನೀತಿಯನ್ನು ರೂಪಿಸಬೇಕು.
04046016a ವನವಾಸೇ ಹ್ಯನಿರ್ವೃತ್ತೇ ದರ್ಶಯೇನ್ನ ಧನಂಜಯಃ|
04046016c ಧನಂ ವಾಲಭಮಾನೋಽತ್ರ ನಾದ್ಯ ನಃ ಕ್ಷಂತುಮರ್ಹತಿ||
ವನವಾಸದ ಅವಧಿ ಮುಗಿಯದೆ ಧನಂಜಯನು ಕಾಣಿಸಿಕೊಂಡಿಲ್ಲ. ಅಥವಾ ಗೋಧನವನ್ನು ಪಡೆಯದೇ ನಮ್ಮನ್ನು ಅವನಿಂದು ಕ್ಷಮಿಸಲಾರ.
04046017a ಯಥಾ ನಾಯಂ ಸಮಾಯುಜ್ಯಾದ್ಧಾರ್ತರಾಷ್ಟ್ರಾನ್ಕಥಂ ಚನ|
04046017c ಯಥಾ ಚ ನ ಪರಾಜಯ್ಯಾತ್ತಥಾ ನೀತಿರ್ವಿಧೀಯತಾಂ||
ಅವನು ಯವುದೇ ರೀತಿಯಲ್ಲಿ ಧೃತರಾಷ್ಟ್ರಪುತ್ರರನ್ನು ಆಕ್ರಮಿಸದಂತೆ ಮತ್ತು ನಮಗೆ ಪರಾಜಯವಾಗದಂತೆ ಯುದ್ಧ ನೀತಿಯನ್ನು ರೂಪಿಸತಕ್ಕದ್ದು.
04046018a ಉಕ್ತಂ ದುರ್ಯೋಧನೇನಾಪಿ ಪುರಸ್ತಾದ್ವಾಕ್ಯಮೀದೃಶಂ|
04046018c ತದನುಸ್ಮೃತ್ಯ ಗಾಂಗೇಯ ಯಥಾವದ್ವಕ್ತುಮರ್ಹಸಿ||
ದುರ್ಯೋಧನನು ಹಿಂದೆ ಇಂಥ ಮಾತನ್ನೇ ಹೇಳಿದ್ದನು. ಭೀಷ್ಮ! ಅದನ್ನು ನೆನೆದು ಉಚಿತವಾದುದನ್ನು ಹೇಳಲು ನೀನು ತಕ್ಕವನು.”
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ದ್ರೋಣವಾಕ್ಯೇ ಷಟ್‌ಚತ್ವಾರಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ದ್ರೋಣವಾಕ್ಯದಲ್ಲಿ ನಲ್ವತ್ತಾರನೆಯ ಅಧ್ಯಾಯವು.