Virata Parva: Chapter 44

ವಿರಾಟ ಪರ್ವ: ಗೋಹರಣ ಪರ್ವ

೪೪

ಕರ್ಣನ ಆತ್ಮಶ್ಲಾಘನೆಗೆ ಕೃಪನ ಪ್ರತಿಕ್ರಿಯೆ

ಕೃಪನು ಕರ್ಣನ ಪೌರುಷವನ್ನು ನಿಂದಿಸಿ, ಅರ್ಜುನನ ಪರಾಕ್ರಮವನ್ನು ಹೊಗಳುತ್ತಾ, ತಾವೆಲ್ಲ ಷಡ್ರಥರೂ ಒಟ್ಟಾದರೆ ಮಾತ್ರ ಅರ್ಜುನನೊಂದಿಗೆ ಹೋರಾಡಬಲ್ಲೆವು ಎಂದು ಹೇಳಿದುದು (೧-೨೧).

04044001 ಕೃಪ ಉವಾಚ|

04044001a ಸದೈವ ತವ ರಾಧೇಯ ಯುದ್ಧೇ ಕ್ರೂರತರಾ ಮತಿಃ|

04044001c ನಾರ್ಥಾನಾಂ ಪ್ರಕೃತಿಂ ವೇತ್ಥ ನಾನುಬಂಧಮವೇಕ್ಷಸೇ||

ಕೃಪನು ಹೇಳಿದನು: “ಕರ್ಣ! ನಿನ್ನ ಕ್ರೂರತರ ಮನಸ್ಸು ಯಾವಾಗಲೂ ಯುದ್ಧದಲ್ಲಿ ಆಸಕ್ತವಾಗಿರುತ್ತದೆ. ವಿಷಯಗಳ ಸ್ವರೂಪ ನಿನಗೆ ತಿಳಿಯದು. ಅವುಗಳ ಪರಿಣಾಮವೂ ನಿನಗೆ ಕಾಣುವುದಿಲ್ಲ.

04044002a ನಯಾ ಹಿ ಬಹವಃ ಸಂತಿ ಶಾಸ್ತ್ರಾಣ್ಯಾಶ್ರಿತ್ಯ ಚಿಂತಿತಾಃ|

04044002c ತೇಷಾಂ ಯುದ್ಧಂ ತು ಪಾಪಿಷ್ಠಂ ವೇದಯಂತಿ ಪುರಾವಿದಃ||

ಶಾಸ್ತ್ರಗಳ ಆಧಾರದಿಂದ ಚಿಂತಿತವಾದ ನೀತಿಗಳು ಬಹಳಷ್ಟುಂಟು. ಅವುಗಳಲ್ಲಿ ಯುದ್ಧವು ಪಾಪಪೂರಿತವಾದುದೆಂದು ಹಿಂದಿನದನ್ನು ಬಲ್ಲವರು ಭಾವಿಸುತ್ತಾರೆ.

04044003a ದೇಶಕಾಲೇನ ಸಮ್ಯುಕ್ತಂ ಯುದ್ಧಂ ವಿಜಯದಂ ಭವೇತ್|

04044003c ಹೀನಕಾಲಂ ತದೇವೇಹ ಫಲವನ್ನ ಭವತ್ಯುತ|

04044003e ದೇಶೇ ಕಾಲೇ ಚ ವಿಕ್ರಾಂತಂ ಕಲ್ಯಾಣಾಯ ವಿಧೀಯತೇ||

ದೇಶಕಾಲಗಳು ಕೂಡಿಬಂದಾಗ ಮಾತ್ರ ಯುದ್ಧವು ವಿಜಯವನ್ನು ತರುತ್ತದೆ. ಕೆಟ್ಟ ಕಾಲಗಳಲ್ಲಿ ಅದು ಫಲವನ್ನು ಕೊಡುವುದಿಲ್ಲ. ತಕ್ಕ ದೇಶಕಾಲಗಳಲ್ಲಿ ತೋರುವ ಪರಾಕ್ರಮವು ಕಲ್ಯಾಣವನ್ನುಂಟುಮಾಡುತ್ತದೆ.

04044004a ಆನುಕೂಲ್ಯೇನ ಕಾರ್ಯಾಣಾಮಂತರಂ ಸಂವಿಧೀಯತಾಂ|

04044004c ಭಾರಂ ಹಿ ರಥಕಾರಸ್ಯ ನ ವ್ಯವಸ್ಯಂತಿ ಪಂಡಿತಾಃ||

ದೇಶಕಾಲಗಳ ಅನುಕೂಲಕ್ಕೆ ತಕ್ಕಂತೆ ಕಾರ್ಯಗಳ ಸಫಲತೆಯನ್ನು ಯೋಚಿಸಿಕೊಳ್ಳಬೇಕು. ರಥ ತಯಾರಿಸುವವನ ಅಭಿಪ್ರಾಯದಂತೆ ಪಂಡಿತರು ಆದರೆ ಯುದ್ಧ ಯೋಗ್ಯತೆಯನ್ನು ನಿರ್ಧರಿಸುವುದಿಲ್ಲ.

04044005a ಪರಿಚಿಂತ್ಯ ತು ಪಾರ್ಥೇನ ಸಂನಿಪಾತೋ ನ ನಃ ಕ್ಷಮಃ|

04044005c ಏಕಃ ಕುರೂನಭ್ಯರಕ್ಷದೇಕಶ್ಚಾಗ್ನಿಮತರ್ಪಯತ್||

ಇದನ್ನೆಲ್ಲ ಆಲೋಚಿಸಿದರೆ ಪಾರ್ಥನೊಡನೆ ಯುದ್ಧಮಾಡುವುದು ನಮಗೆ ಉಚಿತವಲ್ಲ. ಅವನು ಒಂಟಿಯಾಗಿಯೇ ಕೌರವರನ್ನು ಗಂಧರ್ವರಿಂದ ರಕ್ಷಿಸಿದವನು. ಒಂಟಿಯಾಗಿಯೇ ಅಗ್ನಿಯನ್ನು ತೃಪ್ತಿಗೊಳಿಸಿದನು.

04044006a ಏಕಶ್ಚ ಪಂಚ ವರ್ಷಾಣಿ ಬ್ರಹ್ಮಚರ್ಯಮಧಾರಯತ್|

04044006c ಏಕಃ ಸುಭದ್ರಾಮಾರೋಪ್ಯ ದ್ವೈರಥೇ ಕೃಷ್ಣಮಾಹ್ವಯತ್|

04044006e ಅಸ್ಮಿನ್ನೇವ ವನೇ ಕೃಷ್ಣೋ ಹೃತಾಂ ಕೃಷ್ಣಾಮವಾಜಯತ್||

ಅರ್ಜುನನು ಒಂಟಿಯಾಗಿ ಐದು ವರ್ಷ ಬ್ರಹ್ಮಚರ್ಯವನ್ನಾಚರಿಸಿದನು. ಸುಭದ್ರೆಯನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಒಂಟಿಯಾಗಿಯೇ ಕೃಷ್ಣನನ್ನು ದ್ವಂದ್ವಯುದ್ಧಕ್ಕೆ ಕರೆದನು. ಈ ವನದಲ್ಲಿಯೇ ಅಪಹೃತಳಾದ ಕೃಷ್ಣೆಯನ್ನು ಗೆದ್ದುಕೊಂಡನು.

04044007a ಏಕಶ್ಚ ಪಂಚ ವರ್ಷಾಣಿ ಶಕ್ರಾದಸ್ತ್ರಾಣ್ಯಶಿಕ್ಷತ|

04044007c ಏಕಃ ಸಾಮ್ಯಮಿನೀಂ ಜಿತ್ವಾ ಕುರೂಣಾಮಕರೋದ್ಯಶಃ||

ಒಂಟಿಯಾಗಿ ಐದು ವರ್ಷ ಇಂದ್ರನಿಂದ ಅಸ್ತ್ರಗಳನ್ನು ಕಲಿತನು. ಒಂಟಿಯಾಗಿಯೇ ಶತ್ರುಗಳನ್ನು ಗೆದ್ದು ಕುರುಗಳಿಗೆ ಯಶವನ್ನುಂಟುಮಾಡಿದನು.

04044008a ಏಕೋ ಗಂಧರ್ವರಾಜಾನಂ ಚಿತ್ರಸೇನಮರಿಂದಮಃ|

04044008c ವಿಜಿಗ್ಯೇ ತರಸಾ ಸಂಖ್ಯೇ ಸೇನಾಂ ಚಾಸ್ಯ ಸುದುರ್ಜಯಾಂ||

ಆ ಶತ್ರುವಿನಾಶಕನು ಗಂಧರ್ವರಾಜ ಚಿತ್ರಸೇನನನ್ನೂ ಅವನ ಅಜೇಯ ಸೈನ್ಯವನ್ನೂ ಯುದ್ಧದಲ್ಲಿ ಒಂಟಿಯಾಗಿಯೇ ಬೇಗ ಸೋಲಿಸಿದ್ದನು.

04044009a ತಥಾ ನಿವಾತಕವಚಾಃ ಕಾಲಖಂಜಾಶ್ಚ ದಾನವಾಃ|

04044009c ದೈವತೈರಪ್ಯವಧ್ಯಾಸ್ತೇ ಏಕೇನ ಯುಧಿ ಪಾತಿತಾಃ||

ಹಾಗೆಯೇ ದೇವತೆಗಳೂ ಕೊಲ್ಲಲಾಗದಿದ್ದ ನಿವಾತಕವಚ ಮತ್ತು ಕಾಲಖಂಜರೆಂಬ ರಾಕ್ಷಸರನ್ನೂ ಅವನೊಬ್ಬನೇ ಯುದ್ಧದಲ್ಲಿ ಉರುಳಿಸಿದನು.

04044010a ಏಕೇನ ಹಿ ತ್ವಯಾ ಕರ್ಣ ಕಿಂ ನಾಮೇಹ ಕೃತಂ ಪುರಾ|

04044010c ಏಕೈಕೇನ ಯಥಾ ತೇಷಾಂ ಭೂಮಿಪಾಲಾ ವಶೀಕೃತಾಃ||

ಕರ್ಣ! ಆ ಪಾಂಡವರಲ್ಲಿ ಒಬ್ಬೊಬ್ಬರೇ ಅನೇಕ ರಾಜರನ್ನು ವಶಪಡಿಸಿಕೊಂಡಂತೆ ನೀನು ಒಂಟಿಯಾಗಿ ಹಿಂದೆ ಏನನ್ನಾದರೂ ಮಾಡಿರುವೆಯೇನು?

04044011a ಇಂದ್ರೋಽಪಿ ಹಿ ನ ಪಾರ್ಥೇನ ಸಮ್ಯುಗೇ ಯೋದ್ಧುಮರ್ಹತಿ|

04044011c ಯಸ್ತೇನಾಶಂಸತೇ ಯೋದ್ಧುಂ ಕರ್ತವ್ಯಂ ತಸ್ಯ ಭೇಷಜಂ||

ಇಂದ್ರನೂ ಪಾರ್ಥನೊಡನೆ ಯುದ್ಧಮಾಡಲಾರ. ಅವನೊಡನೆ ಯುದ್ಧಮಾಡಬಯಸುವವನಿಗೆ ಯಾವುದಾದರೂ ಔಷಧ ಮಾಡಬೇಕು.

04044012a ಆಶೀವಿಷಸ್ಯ ಕ್ರುದ್ಧಸ್ಯ ಪಾಣಿಮುದ್ಯಮ್ಯ ದಕ್ಷಿಣಂ|

04044012c ಅವಿಮೃಶ್ಯ ಪ್ರದೇಶಿನ್ಯಾ ದಂಷ್ಟ್ರಾಮಾದಾತುಮಿಚ್ಛಸಿ||

ನೀನು ವಿಚಾರಮಾಡದೇ ಬಲಗೈಯನ್ನೆತ್ತಿ ತೋರುಬೆರಳನ್ನು ಚಾಚಿ ರೋಷಗೊಂಡಿರುವ ವಿಷಸರ್ಪದ ಹಲ್ಲನ್ನು ಕೀಳಬಯಸುತ್ತಿರುವೆ.

04044013a ಅಥ ವಾ ಕುಂಜರಂ ಮತ್ತಮೇಕ ಏವ ಚರನ್ವನೇ|

04044013c ಅನಂಕುಶಂ ಸಮಾರುಹ್ಯ ನಗರಂ ಗಂತುಮಿಚ್ಛಸಿ||

ಅಥವಾ ಒಬ್ಬನೇ ಅರಣ್ಯದಲ್ಲಿ ಅಲೆಯುತ್ತ ಅಂಕುಶವಿಲ್ಲದೆ ಮದಗಜವನ್ನು ಹತ್ತಿ ನಗರಕ್ಕೆ ಹೋಗಬಯಸುತ್ತಿರುವೆ.

04044014a ಸಮಿದ್ಧಂ ಪಾವಕಂ ವಾಪಿ ಘೃತಮೇದೋವಸಾಹುತಂ|

04044014c ಘೃತಾಕ್ತಶ್ಚೀರವಾಸಾಸ್ತ್ವಂ ಮಧ್ಯೇನೋತ್ತರ್ತುಮಿಚ್ಛಸಿ||

ಅಥವಾ ತುಪ್ಪ, ಕೊಬ್ಬು, ಮಜ್ಜೆಗಳ ಆಹುತಿಯಿಂದ ಪ್ರಜ್ವಲಿಸುತ್ತಿರುವ ಅಗ್ನಿಯನ್ನು ತುಪ್ಪದಲ್ಲಿ ತೊಯ್ದ ವಸ್ತ್ರ ತೊಟ್ಟುಕೊಂಡು ದಾಟಿಹೋಗಬಯಸುತ್ತಿರುವೆ.

04044015a ಆತ್ಮಾನಂ ಯಃ ಸಮುದ್ಬಧ್ಯ ಕಂಠೇ ಬದ್ಧ್ವಾ ಮಹಾಶಿಲಾಂ|

04044015c ಸಮುದ್ರಂ ಪ್ರತರೇದ್ದೋರ್ಭ್ಯಾಂ ತತ್ರ ಕಿಂ ನಾಮ ಪೌರುಷಂ||

ತನ್ನನ್ನು ಹಗ್ಗದಿಂದ ಬಿಗಿದುಕೊಂಡು ಕೊರಳಿನಲ್ಲಿ ದೊಡ್ಡ ಕಲ್ಲೊಂದನ್ನು ಕಟ್ಟಿಕೊಂಡು ತೋಳುಗಳಿಂದ ಈಜಿ ಸಮುದ್ರವನ್ನು ದಾಟುವವನಾರು? ಇದು ಎಂಥ ಪೌರುಷ?

04044016a ಅಕೃತಾಸ್ತ್ರಃ ಕೃತಾಸ್ತ್ರಂ ವೈ ಬಲವಂತಂ ಸುದುರ್ಬಲಃ|

04044016c ತಾದೃಶಂ ಕರ್ಣ ಯಃ ಪಾರ್ಥಂ ಯೋದ್ಧುಮಿಚ್ಛೇತ್ಸ ದುರ್ಮತಿಃ||

ಕರ್ಣ! ಕೃತಾಸ್ತ್ರನೂ ಬಲಶಾಲಿಯೂ ಆದ ಅಂತಹ ಪಾರ್ಥನೊಡನೆ ಯುದ್ಧಮಾಡಬಯಸುವ ಅಸ್ತ್ರ ಪರಿಣಿತಿಯಿಲ್ಲದವನೂ ದುರ್ಬಲನೂ ಆದವನು ದುರ್ಮತಿ.

04044017a ಅಸ್ಮಾಭಿರೇಷ ನಿಕೃತೋ ವರ್ಷಾಣೀಹ ತ್ರಯೋದಶ|

04044017c ಸಿಂಹಃ ಪಾಶವಿನಿರ್ಮುಕ್ತೋ ನ ನಃ ಶೇಷಂ ಕರಿಷ್ಯತಿ||

ನಮ್ಮಿಂದ ಹದಿಮೂರು ವರ್ಷಕಾಲ ವಂಚಿತರಾಗಿ ಈಗ ಪಾಶದಿಂದ ಬಿಡುಗಡೆಗೊಂಡಿರುವ ಈ ಸಿಂಹವು ನಮ್ಮಲ್ಲಿ ಯಾರನ್ನೂ ಉಳಿಸುವುದಿಲ್ಲ.

04044018a ಏಕಾಂತೇ ಪಾರ್ಥಮಾಸೀನಂ ಕೂಪೇಽಗ್ನಿಮಿವ ಸಂವೃತಂ|

04044018c ಅಜ್ಞಾನಾದಭ್ಯವಸ್ಕಂದ್ಯ ಪ್ರಾಪ್ತಾಃ ಸ್ಮೋ ಭಯಮುತ್ತಮಂ||

ಬಾವಿಯಲ್ಲಿ ಅಡಗಿರುವ ಬೆಂಕಿಯಂತೆ ಏಕಾಂತದಲ್ಲಿ ಇದ್ದಂತ ಪಾರ್ಥನನ್ನು ಅಜ್ಞಾನದಿಂದ ಎದುರಿಸಿ ನಾವು ಮಹಾಭಯಕ್ಕೊಳಗಾದೆವು.

04044019a ಸಹ ಯುಧ್ಯಾಮಹೇ ಪಾರ್ಥಮಾಗತಂ ಯುದ್ಧದುರ್ಮದಂ|

04044019c ಸೈನ್ಯಾಸ್ತಿಷ್ಠಂತು ಸಂನದ್ಧಾ ವ್ಯೂಢಾನೀಕಾಃ ಪ್ರಹಾರಿಣಃ||

ಯುದ್ಧೋನ್ಮತ್ತನಾಗಿ ಬಂದಿರುವ ಪಾರ್ಥನೊಡನೆ ನಾವು ಹೋರಾಡೋಣ. ಸೈನ್ಯ ಸನ್ನದ್ಧವಾಗಿ ನಿಲ್ಲಲಿ. ಯೋಧರು ವ್ಯೂಹಗೊಳ್ಳಲಿ.

04044020a ದ್ರೋಣೋ ದುರ್ಯೋಧನೋ ಭೀಷ್ಮೋ ಭವಾನ್ದ್ರೌಣಿಸ್ತಥಾ ವಯಂ|

04044020c ಸರ್ವೇ ಯುಧ್ಯಾಮಹೇ ಪಾರ್ಥಂ ಕರ್ಣ ಮಾ ಸಾಹಸಂ ಕೃಥಾಃ||

ದ್ರೋಣ, ದುರ್ಯೋಧನ, ಭೀಷ್ಮ, ನೀನು, ಅಶ್ವತ್ಥಾಮ - ನಾವೆಲ್ಲರೂ ಪಾರ್ಥನೊಡನೆ ಯುದ್ಧಮಾಡೋಣ ಕರ್ಣ. ನೀನೊಬ್ಬನೇ ಸಾಹಸಮಾಡಬೇಡ.

04044021a ವಯಂ ವ್ಯವಸಿತಂ ಪಾರ್ಥಂ ವಜ್ರಪಾಣಿಮಿವೋದ್ಯತಂ|

04044021c ಷಡ್ರಥಾಃ ಪ್ರತಿಯುಧ್ಯೇಮ ತಿಷ್ಠೇಮ ಯದಿ ಸಂಹತಾಹಃ|

ಷಡ್ರಥರಾದ ನಾವು ಒಟ್ಟಾಗಿ ನಿಂತರೆ ವಜ್ರಪಾಣಿಯಂತೆ ಸಿದ್ಧವಾಗಿ ಯುದ್ಧಕ್ಕೆ ನಿಶ್ಚಯಿಸಿರುವ ಪಾರ್ಥನೊಡನೆ ಹೋರಾಡಬಲ್ಲೆವು.

04044022a ವ್ಯೂಢಾನೀಕಾನಿ ಸೈನ್ಯಾನಿ ಯತ್ತಾಃ ಪರಮಧನ್ವಿನಃ|

04044022c ಯುಧ್ಯಾಮಹೇಽರ್ಜುನಂ ಸಂಖ್ಯೇ ದಾನವಾ ವಾಸವಂ ಯಥಾ||

ವ್ಯೂಹಗೊಂಡು ನಿಂತ ಸೈನ್ಯದೊಡಗೂಡಿದ ಶ್ರೇಷ್ಠ ಧನುರ್ಧರರಾದ ನಾವು ಎಚ್ಚರಿಕೆಯಿಂದ ರಣದಲ್ಲಿ ದಾನವರು ಇಂದ್ರನೊಡನೆ ಯುದ್ಧಮಾಡುವಂತೆ ಅರ್ಜುನನೊಡನೆ ಯುದ್ಧಮಾಡೋಣ.”

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಕೃಪವಾಕ್ಯೇ ಚತುಶ್ಚತ್ವಾರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಕೃಪವಾಕ್ಯದಲ್ಲಿ ನಲ್ವತ್ನಾಲ್ಕನೆಯ ಅಧ್ಯಾಯವು.

Related image

Comments are closed.