ವಿರಾಟ ಪರ್ವ: ಗೋಹರಣ ಪರ್ವ
೪೩
ಕರ್ಣನ ಆತ್ಮ ಶ್ಲಾಘನೆ
ಕರ್ಣನು ತಾನು ಅರ್ಜುನನನ್ನು ಎದುರಿಸಿ ಸೋಲಿಸುವೆನೆಂದು ಪೌರುಷವನ್ನು ಕೊಚ್ಚಿಕೊಳ್ಳುವುದು (೧-೨೧).
04043001 ಕರ್ಣ ಉವಾಚ|
04043001a ಸರ್ವಾನಾಯುಷ್ಮತೋ ಭೀತಾನ್ಸಂತ್ರಸ್ತಾನಿವ ಲಕ್ಷಯೇ|
04043001c ಅಯುದ್ಧಮನಸಶ್ಚೈವ ಸರ್ವಾಂಶ್ಚೈವಾನವಸ್ಥಿತಾನ್||
ಕರ್ಣನು ಹೇಳಿದನು: “ಈ ಎಲ್ಲ ಆಯುಷ್ಮಂತರೂ ಹೆದರಿದವರಂತೆ, ತಲ್ಲಣಗೊಂಡವರಂತೆ, ಯುದ್ಧಮಾಡಲು ಮನಸ್ಸಿಲ್ಲದವರಂತೆ ಮತ್ತು ಅಸ್ಥಿರರಂತೆ ಕಂಡು ಬರುತ್ತಿದ್ದಾರೆ.
04043002a ಯದ್ಯೇಷ ರಾಜಾ ಮತ್ಸ್ಯಾನಾಂ ಯದಿ ಬೀಭತ್ಸುರಾಗತಃ|
04043002c ಅಹಮಾವಾರಯಿಷ್ಯಾಮಿ ವೇಲೇವ ಮಕರಾಲಯಂ||
ಬಂದಿರುವವನು ಮತ್ಸ್ಯನಾಗಿರಲಿ ಅಥವಾ ಅರ್ಜುನನಾಗಿರಲಿ, ಅವನನ್ನು ದಡವು ಸಮುದ್ರವನ್ನು ತಡೆಯುವಂತೆ ನಾನು ತಡೆಯುತ್ತೇನೆ.
04043003a ಮಮ ಚಾಪಪ್ರಮುಕ್ತಾನಾಂ ಶರಾಣಾಂ ನತಪರ್ವಣಾಂ|
04043003c ನಾವೃತ್ತಿರ್ಗಚ್ಛತಾಮಸ್ತಿ ಸರ್ಪಾಣಾಮಿವ ಸರ್ಪತಾಂ||
ನನ್ನ ಬಿಲ್ಲಿನಿಂದ ಹೊರಟ, ನೇರಗೊಳಿಸಿದ ಗೆಣ್ಣುಗಳನ್ನುಳ್ಳ, ಸರ್ಪಗಳಂತೆ ಹರಿಯುವ ಬಾಣಗಳು ಎಂದೂ ವ್ಯರ್ಥವಾಗಿ ಹಿಂದಿರುಗಿ ಬರುವುದಿಲ್ಲ.
04043004a ರುಕ್ಮಪುಂಖಾಃ ಸುತೀಕ್ಷ್ಣಾಗ್ರಾ ಮುಕ್ತಾ ಹಸ್ತವತಾ ಮಯಾ|
04043004c ಚಾದಯಂತು ಶರಾಃ ಪಾರ್ಥಂ ಶಲಭಾ ಇವ ಪಾದಪಂ||
ನನ್ನ ಪಳಗಿದ ಕೈಗಳಿಂದ ಹೊರಡುವ ಚಿನ್ನದ ಗರಿಯ ಚೂಪು ಮೊನೆಯ ಬಾಣಗಳು ಮರವನ್ನು ಕವಿಯುವ ಮಿಡತೆಗಳಂತೆ ಪಾರ್ಥನನ್ನು ಕವಿಯಲಿ.
04043005a ಶರಾಣಾಂ ಪುಂಖಸಕ್ತಾನಾಂ ಮೌರ್ವ್ಯಾಭಿಹತಯಾ ದೃಢಂ|
04043005c ಶ್ರೂಯತಾಂ ತಲಯೋಃ ಶಬ್ದೋ ಭೇರ್ಯೋರಾಹತಯೋರಿವ||
ಗರಿಗಳುಳ್ಳ ಬಾಣಗಳ ಮೇಲೆ ಬಲವಾಗಿ ಅಪ್ಪಳಿಸಿದ ಹೆದೆಯಿಂದ ನನ್ನ ಕೈಗಾಪಿನ ಮೇಲೆ ಉಂಟಾಗುವ ಭೇರಿ ಬಾರಿಸಿದಂಥ ಶಬ್ಧವನ್ನು ಶತ್ರುಗಳು ಕೇಳಲಿ.
04043006a ಸಮಾಹಿತೋ ಹಿ ಬೀಭತ್ಸುರ್ವರ್ಷಾಣ್ಯಷ್ಟೌ ಚ ಪಂಚ ಚ|
04043006c ಜಾತಸ್ನೇಹಶ್ಚ ಯುದ್ಧಸ್ಯ ಮಯಿ ಸಂಪ್ರಹರಿಷ್ಯತಿ||
ಹದಿಮೂರು ವರ್ಷ ಸಂಯಮದಿಂದಿದ್ದ ಅರ್ಜುನನು ಈಗ ಯುದ್ಧದಲ್ಲಿ ಆಸಕ್ತಿಯುಳ್ಳವನಾಗಿ ನನ್ನನ್ನು ಬಲವಾಗಿಯೇ ಹೊಡೆಯುತ್ತಾನೆ.
04043007a ಪಾತ್ರೀಭೂತಶ್ಚ ಕೌಂತೇಯೋ ಬ್ರಾಹ್ಮಣೋ ಗುಣವಾನಿವ|
04043007c ಶರೌಘಾನ್ಪ್ರತಿಗೃಹ್ಣಾತು ಮಯಾ ಮುಕ್ತಾನ್ಸಹಸ್ರಶಃ||
ಗುಣಶಾಲಿ ಬ್ರಾಹ್ಮಣನಂತೆ ದಾನಪಾತ್ರನಾಗಿರುವ ಆ ಕುಂತೀಪುತ್ರನು ನಾನು ಬಿಡುವ ಸಾವಿರಾರು ಬಾಣಗಳ ಸಮೂಹವನ್ನು ಸ್ವೀಕರಿಸಲಿ.
04043008a ಏಷ ಚೈವ ಮಹೇಷ್ವಾಸಸ್ತ್ರಿಷು ಲೋಕೇಷು ವಿಶ್ರುತಃ|
04043008c ಅಹಂ ಚಾಪಿ ಕುರುಶ್ರೇಷ್ಠಾ ಅರ್ಜುನಾನ್ನಾವರಃ ಕ್ವ ಚಿತ್||
ಇವನು ಮೂರುಲೋಕಗಳಲ್ಲೂ ಪ್ರಸಿದ್ಧನಾದ ದೊಡ್ಡ ಬಿಲ್ಲುಗಾರ. ಕುರುಶ್ರೇಷ್ಠರೇ! ನಾನು ಕೂಡ ಈ ಅರ್ಜುನನಿಗೆ ಯಾವ ರೀತಿಯಲ್ಲೂ ಕಡಿಮೆಯಿಲ್ಲ.
04043009a ಇತಶ್ಚೇತಶ್ಚ ನಿರ್ಮುಕ್ತೈಃ ಕಾಂಚನೈರ್ಗಾರ್ಧ್ರವಾಜಿತೈಃ|
04043009c ದೃಶ್ಯತಾಮದ್ಯ ವೈ ವ್ಯೋಮ ಖದ್ಯೋತೈರಿವ ಸಂವೃತಂ||
ನಾನು ಎಲ್ಲ ಕಡೆಗಳಲ್ಲೂ ಬಿಡುವ ಹದ್ದಿನ ಗರಿಗಳಿಂದ ಕೂಡಿದ ಚಿನ್ನದ ಬಾಣಗಳಿಂದ ಆಕಾಶವು ಮಿಂಚು ಹುಳುಗಳಿಂದ ತುಂಬಿದಂತಾಗುವುದನ್ನು ಇಂದು ನೋಡಿರಿ.
04043010a ಅದ್ಯಾಹಮೃಣಮಕ್ಷಯ್ಯಂ ಪುರಾ ವಾಚಾ ಪ್ರತಿಶ್ರುತಂ|
04043010c ಧಾರ್ತರಾಷ್ಟ್ರಸ್ಯ ದಾಸ್ಯಾಮಿ ನಿಹತ್ಯ ಸಮರೇಽರ್ಜುನಂ||
ನಾನಿಂದು ಯುದ್ಧದಲ್ಲಿ ಅರ್ಜುನನನ್ನು ಕೊಂದು ದುರ್ಯೋಧನನಿಗೆ ಹಿಂದೆ ಮಾತುಕೊಟ್ಟಿದ್ದಂತೆ ಅಕ್ಷಯವಾದ ಋಣವನ್ನು ತೀರಿಸಿಬಿಡುತ್ತೇನೆ.
04043011a ಅಂತರಾ ಚಿದ್ಯಮಾನಾನಾಂ ಪುಂಖಾನಾಂ ವ್ಯತಿಶೀರ್ಯತಾಂ|
04043011c ಶಲಭಾನಾಮಿವಾಕಾಶೇ ಪ್ರಚಾರಃ ಸಂಪ್ರದೃಶ್ಯತಾಂ||
ಮಧ್ಯಮಾರ್ಗದಲ್ಲೆ ಕಡಿದುಹೋಗಿ ಬಾಣಗಳ ಉದುರಿದ ಗರಿಗಳ ಸಂಚಾರವು ಆಕಾಶದಲ್ಲಿ ಮಿಡತೆಗಳ ಸಂಚಾರದಂತೆ ತೋರಲಿ.
04043012a ಇಂದ್ರಾಶನಿಸಮಸ್ಪರ್ಶಂ ಮಹೇಂದ್ರಸಮತೇಜಸಂ|
04043012c ಅರ್ದಯಿಷ್ಯಾಮ್ಯಹಂ ಪಾರ್ಥಮುಲ್ಕಾಭಿರಿವ ಕುಂಜರಂ||
ಪಂಜುಗಳು ಆನೆಯನ್ನು ಪೀಡಿಸುವಂತೆ, ಇಂದ್ರನ ವಜ್ರಾಯುಧದಂತೆ ಕಠಿನಸ್ಪರ್ಶದವನೂ ಮಹೇಂದ್ರಸಮಾನವಾದ ತೇಜಸ್ಸುಳ್ಳವನೂ ಆದ ಆ ಪಾರ್ಥನನ್ನು ಪೀಡಿಸುತ್ತೇನೆ.
04043013a ತಮಗ್ನಿಮಿವ ದುರ್ಧರ್ಷಮಸಿಶಕ್ತಿಶರೇಂಧನಂ|
04043013c ಪಾಂಡವಾಗ್ನಿಮಹಂ ದೀಪ್ತಂ ಪ್ರದಹಂತಮಿವಾಹಿತಾನ್||
ಎದುರಿಸಲಾಗದ, ಖಡ್ಗ, ಶಕ್ತಿ, ಶರಗಳನ್ನು ಇಂಧನವಾಗುಳ್ಳ, ಶತ್ರುಗಳನ್ನು ಸುಟ್ಟುಹಾಕುವಂತೆ ಜ್ವಲಿಸುವ ಪಾಂಡವಾಗ್ನಿಯು ಅವನು.
04043014a ಅಶ್ವವೇಗಪುರೋವಾತೋ ರಥೌಘಸ್ತನಯಿತ್ನುಮಾನ್|
04043014c ಶರಧಾರೋ ಮಹಾಮೇಘಃ ಶಮಯಿಷ್ಯಾಮಿ ಪಾಂಡವಂ||
ಕುದುರೆಗಳ ವೇಗವೇ ಮುಂದೆ ಹೋಗುವ ಗಾಳಿಯಾಗಿರುವ, ರಥಗಳ ರಭಸವೇ ಗುಡುಗಾಗಿಯೂ ಬಾಣಗಳೇ ಮಳೆಯಾಗಿಯೂ ಉಳ್ಳ ಮಹಾಮೇಘನಾಗಿ ನಾನು ಆ ಬೆಂಕಿಯಂತಹ ಪಾಂಡವನನ್ನು ನಂದಿಸುತ್ತೇನೆ.
04043015a ಮತ್ಕಾರ್ಮುಕವಿನಿರ್ಮುಕ್ತಾಃ ಪಾರ್ಥಮಾಶೀವಿಷೋಪಮಾಃ|
04043015c ಶರಾಃ ಸಮಭಿಸರ್ಪಂತು ವಲ್ಮೀಕಮಿವ ಪನ್ನಗಾಃ||
ಹಾವುಗಳು ಹುತ್ತವನ್ನು ಹೊಗುವಂತೆ ನನ್ನ ಬಿಲ್ಲಿನಿಂದ ಹೊರಡುವ ವಿಷಸರ್ಪ ಸಮಾನ ಬಾಣಗಳು ಪಾರ್ಥನನ್ನು ತಾಗಲಿ.
04043016a ಜಾಮದಗ್ನ್ಯಾನ್ಮಯಾ ಹ್ಯಸ್ತ್ರಂ ಯತ್ಪ್ರಾಪ್ತಮೃಷಿಸತ್ತಮಾತ್|
04043016c ತದುಪಾಶ್ರಿತ್ಯ ವೀರ್ಯಂ ಚ ಯುಧ್ಯೇಯಮಪಿ ವಾಸವಂ||
ಋಷಿಶ್ರೇಷ್ಠ ಪರಶುರಾಮನಿಂದ ಅಸ್ತ್ರವನ್ನು ಪಡೆದಿರುವ ನಾನು ಅದರ ಸತ್ವವನ್ನು ಅವಲಂಬಿಸಿ ದೇವೇಂದ್ರನೊಡನೆ ಕೂಡ ಯುದ್ಧಮಾಡುತ್ತೇನೆ.
04043017a ಧ್ವಜಾಗ್ರೇ ವಾನರಸ್ತಿಷ್ಠನ್ಭಲ್ಲೇನ ನಿಹತೋ ಮಯಾ|
04043017c ಅದ್ಯೈವ ಪತತಾಂ ಭೂಮೌ ವಿನದನ್ಭೈರವಾನ್ರವಾನ್||
ಅರ್ಜುನನ ಬಾವುಟದ ತುದಿಯಲ್ಲಿರುವ ವಾನರನು ಇಂದೇ ನನ್ನ ಭಲ್ಲೆಯಿಂದ ಹತನಾಗಿ ಭಯಂಕರವಾಗಿ ಶಬ್ಧಮಾಡುತ್ತಾ ರಥದಿಂದ ನೆಲಕ್ಕುರಳಲಿ.
04043018a ಶತ್ರೋರ್ಮಯಾಭಿಪನ್ನಾನಾಂ ಭೂತಾನಾಂ ಧ್ವಜವಾಸಿನಾಂ|
04043018c ದಿಶಃ ಪ್ರತಿಷ್ಠಮಾನಾನಾಮಸ್ತು ಶಬ್ದೋ ದಿವಂ ಗತಃ||
ದಿಕ್ಕುಗಳಲ್ಲಿ ಪ್ರತಿಷ್ಠಿತವಾಗಿರುವ ಮತ್ತು ಶತ್ರುಗಳ ಧ್ವಜಗಳಲ್ಲಿ ಬಂದು ವಾಸಿಸುವ ಭೂತಗಳು ನನ್ನಿಂದ ಬಾಧೆಗೊಂಡು ಹೊರಡಿಸುವ ಚೀತ್ಕಾರವು ಆಗಸವನ್ನು ಮುಟ್ಟಲಿ.
04043019a ಅದ್ಯ ದುರ್ಯೋಧನಸ್ಯಾಹಂ ಶಲ್ಯಂ ಹೃದಿ ಚಿರಸ್ಥಿತಂ|
04043019c ಸಮೂಲಮುದ್ಧರಿಷ್ಯಾಮಿ ಬೀಭತ್ಸುಂ ಪಾತಯನ್ರಥಾತ್||
ಇಂದು ಅರ್ಜುನನನ್ನು ರಥದಿಂದ ಕೆಡವಿ ದುರ್ಯೋಧನನ ಹೃದಯದಲ್ಲಿ ಬಹುಕಾಲದಿಂದ ನಾಟಿಕೊಂಡಿರುವ ಮುಳ್ಳನ್ನು ಬೇರುಸಹಿತ ಕಿತ್ತು ಹಾಕುತ್ತೇನೆ.
04043020a ಹತಾಶ್ವಂ ವಿರಥಂ ಪಾರ್ಥಂ ಪೌರುಷೇ ಪರ್ಯವಸ್ಥಿತಂ|
04043020c ನಿಃಶ್ವಸಂತಂ ಯಥಾ ನಾಗಮದ್ಯ ಪಶ್ಯಂತು ಕೌರವಾಃ||
ಕುದುರೆಗಳು ಹತವಾಗಿ ರಥಹೀನರಾಗಿ ಪೌರುಷವನ್ನು ಕಳೆದುಕೊಂಡ ಪಾರ್ಥ ಹಾವಿನಂತೆ ನಿಟ್ಟುಸಿರು ಬಿಡುವುದನ್ನು ಕೌರವರು ಇಂದು ನೋಡಲಿ.
04043021a ಕಾಮಂ ಗಚ್ಛಂತು ಕುರವೋ ಧನಮಾದಾಯ ಕೇವಲಂ|
04043021c ರಥೇಷು ವಾಪಿ ತಿಷ್ಠಂತೋ ಯುದ್ಧಂ ಪಶ್ಯಂತು ಮಾಮಕಂ||
ಬೇಕಾದರೆ ಕೌರವರು ಕೇವಲ ಗೋಧನವನ್ನು ತೆಗೆದುಕೊಂಡು ಹೋಗಿಬಿಡಲಿ ಅಥವಾ ರಥಗಳಲ್ಲಿದ್ದು ನನ್ನ ಯುದ್ಧವನ್ನು ನೋಡಲಿ.”
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಕರ್ಣವಿಕತ್ಥನೇ ತ್ರಿಚತ್ವಾರಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಕರ್ಣವಿಕತ್ಥನದಲ್ಲಿ ನಲ್ವತ್ಮೂರನೆಯ ಅಧ್ಯಾಯವು.