ವಿರಾಟ ಪರ್ವ: ಗೋಹರಣ ಪರ್ವ
೪೧
ಅರ್ಜುನನ ಶಂಖನಾದದಿಂದ ಕುರುಸೇನೆಯು ಸಂಭ್ರಾಂತಿಗೊಂಡಿದುದು
ಅರ್ಜುನನು ಮಹಾಶಂಖವನ್ನು ಊದುವುದು (೧-೭). ಶಂಖದ ಮಹಾಸ್ವನವನ್ನು ಕೇಳಿ ಉತ್ತರನು ನಡುಗಲು, ಅರ್ಜುನನು ಅವನಿಗೆ ಆಶ್ವಾಸನೆಯನ್ನಿತ್ತು ಇನ್ನೊಮ್ಮೆ ಶಂಖವನ್ನು ಮೊಳಗಿಸುವುದು (೮-೧೭). ಶಂಖಧ್ವನಿಯನ್ನು ಕೇಳಿ ಕೌರವ ಸೇನೆಯಲ್ಲಿದ್ದ ದ್ರೋಣನು ಅದು ಅರ್ಜುನನ ಶಂಖಧ್ವನಿಯೇ ಹೌದು ಎಂದೂ, ಕುರುಸೇನೆಗೆ ಆಪತ್ತನ್ನು ಸೂಚಿಸುವ ಶಕುನಗಳು ಕಾಣಿಸಿಕೊಳ್ಳುತ್ತಿವೆ ಎಂದೂ, ಎಲ್ಲರೂ ಸಾವಧಾನರಾಗಿರಬೇಕೆಂದೂ ಎಚ್ಚರಿಸುವುದು (೧೮-೨೩).
04041001 ವೈಶಂಪಾಯನ ಉವಾಚ|
04041001a ಉತ್ತರಂ ಸಾರಥಿಂ ಕೃತ್ವಾ ಶಮೀಂ ಕೃತ್ವಾ ಪ್ರದಕ್ಷಿಣಂ|
04041001c ಆಯುಧಂ ಸರ್ವಮಾದಾಯ ತತಃ ಪ್ರಾಯಾದ್ಧನಂಜಯಃ||
ವೈಶಂಪಾಯನನು ಹೇಳಿದನು: “ಬಳಿಕ ಧನಂಜಯನು ಎಲ್ಲ ಆಯುಧಗಳನ್ನೂ ತೆಗೆದುಕೊಂಡು, ಉತ್ತರನನ್ನು ಸಾರಥಿಯನ್ನಾಗಿ ಮಾಡಿಕೊಂಡು, ಶಮೀವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ಹೊರಟನು.
04041002a ಧ್ವಜಂ ಸಿಂಹಂ ರಥಾತ್ತಸ್ಮಾದಪನೀಯ ಮಹಾರಥಃ|
04041002c ಪ್ರಣಿಧಾಯ ಶಮೀಮೂಲೇ ಪ್ರಾಯಾದುತ್ತರಸಾರಥಿಃ||
ಆ ರಥದಿಂದ ಮಹಾರಥನು ಸಿಂಹಧ್ವಜವನ್ನು ತೆಗೆದು ಶಮೀವೃಕ್ಷದ ಬುಡದಲ್ಲಿರಿಸಿ ಆ ಉತ್ತರ ಸಾರಥಿಯು ಹೊರಟನು.
04041003a ದೈವೀಂ ಮಾಯಾಂ ರಥೇ ಯುಕ್ತ್ವಾ ವಿಹಿತಾಂ ವಿಶ್ವಕರ್ಮಣಾ|
04041003c ಕಾಂಚನಂ ಸಿಂಹಲಾಂಗೂಲಂ ಧ್ವಜಂ ವಾನರಲಕ್ಷಣಂ||
04041004a ಮನಸಾ ಚಿಂತಯಾಮಾಸ ಪ್ರಸಾದಂ ಪಾವಕಸ್ಯ ಚ|
04041004c ಸ ಚ ತಚ್ಚಿಂತಿತಂ ಜ್ಞಾತ್ವಾ ಧ್ವಜೇ ಭೂತಾನ್ಯಚೋದಯತ್||
ಅವನು ಸಿಂಹದಂತೆ ಬಾಲವುಳ್ಳ, ವಾನರನ ಚಿಹ್ನೆಯ ತನ್ನ ಕಾಂಚನ ಧ್ವಜವನ್ನು – ವಿಶ್ವಕರ್ಮನಿಂದ ನಿರ್ಮಿತವಾದ ದೈವಮಾಯೆಯನ್ನು – ಆ ರಥಕ್ಕೆ ಕಟ್ಟಿ ಅಗ್ನಿಯ ಕೃಪೆಯನ್ನು ಮನಸ್ಸಿನಲ್ಲಿ ನೆನೆದನು. ಅಗ್ನಿಯು ಅವನ ಬಯಕೆಯನ್ನು ಅರಿತು ಧ್ವಜದಲ್ಲಿ ನೆಲೆಸುವಂತೆ ಭೂತಗಳನ್ನು ಪ್ರೇರಿಸಿದನು.
04041005a ಸಪತಾಕಂ ವಿಚಿತ್ರಾಂಗಂ ಸೋಪಾಸಂಗಂ ಮಹಾರಥಃ|
04041005c ರಥಮಾಸ್ಥಾಯ ಬೀಭತ್ಸುಃ ಕೌಂತೇಯಃ ಶ್ವೇತವಾಹನಃ||
ಆ ಮಹಾರಥ ಬೀಭತ್ಸು, ಶ್ವೇತವಾಹನ ಕುಂತೀಪುತ್ರನು ಪತಾಕೆ ಮತ್ತು ಎತ್ತರ ಪೀಠದಿಂದ ಕೂಡಿದ ಸುಂದರ ರಥದಲ್ಲಿ ಕುಳಿತನು.
04041006a ಬದ್ಧಾಸಿಃ ಸತನುತ್ರಾಣಃ ಪ್ರಗೃಹೀತಶರಾಸನಃ|
04041006c ತತಃ ಪ್ರಾಯಾದುದೀಚೀಂ ಸ ಕಪಿಪ್ರವರಕೇತನಃ||
ಆಮೇಲೆ ಆ ಕಪಿವರಧ್ವಜನು ಖಡ್ಗವನ್ನು ಸೊಂಟಕ್ಕೆ ಬಿಗಿದು, ಕವಚವನ್ನು ಧರಿಸಿ, ಬಿಲ್ಲನ್ನು ಹಿಡಿದು ಉತ್ತರ ದಿಕ್ಕಿಗೆ ಹೊರಟನು.
04041007a ಸ್ವನವಂತಂ ಮಹಾಶಂಖಂ ಬಲವಾನರಿಮರ್ದನಃ|
04041007c ಪ್ರಾಧಮದ್ಬಲಮಾಸ್ಥಾಯ ದ್ವಿಷತಾಂ ಲೋಮಹರ್ಷಣಂ||
ಆ ಶತ್ರುನಾಶಕ ಬಲಶಾಲಿಯು ಭಾರಿ ಶಬ್ಧಮಾಡುವ, ಶತ್ರುಗಳಿಗೆ ರೋಮಾಂಚನವನ್ನುಂಟುಮಾಡುವ ಮಹಾಶಂಖವನ್ನು ಬಲವನ್ನೆಲ್ಲ ಬಿಟ್ಟು ಊದಿದನು.
04041008a ತತಸ್ತೇ ಜವನಾ ಧುರ್ಯಾ ಜಾನುಭ್ಯಾಮಗಮನ್ಮಹೀಂ|
04041008c ಉತ್ತರಶ್ಚಾಪಿ ಸಂತ್ರಸ್ತೋ ರಥೋಪಸ್ಥ ಉಪಾವಿಶತ್||
ಅನಂತರ ಆ ವೇಗಗಾಮಿ ಕುದುರೆಗಳು ನೆಲಕ್ಕೆ ಮೊಣಕಾಲೂರಿದವು. ಉತ್ತರನೂ ಹೆದರಿ ರಥದಲ್ಲಿ ಕುಳಿತುಬಿಟ್ಟನು.
04041009a ಸಂಸ್ಥಾಪ್ಯ ಚಾಶ್ವಾನ್ಕೌಂತೇಯಃ ಸಮುದ್ಯಮ್ಯ ಚ ರಶ್ಮಿಭಿಃ|
04041009c ಉತ್ತರಂ ಚ ಪರಿಷ್ವಜ್ಯ ಸಮಾಶ್ವಾಸಯದರ್ಜುನಃ||
ಕುಂತೀಪುತ್ರ ಅರ್ಜುನನು ಕುದುರೆಗಳನ್ನು ಎಬ್ಬಿಸಿ ನಿಲ್ಲಿಸಿ ಕಡಿವಾಣಗಳನ್ನು ಎಳೆದು ಉತ್ತರನನ್ನು ತಬ್ಬಿಕೊಂಡು ಹೀಗೆ ಸಮಾಧಾನಗೊಳಿಸಿದನು:
04041010a ಮಾ ಭೈಸ್ತ್ವಂ ರಾಜಪುತ್ರಾಗ್ರ್ಯ ಕ್ಷತ್ರಿಯೋಽಸಿ ಪರಂತಪ|
04041010c ಕಥಂ ಪುರುಷಶಾರ್ದೂಲ ಶತ್ರುಮಧ್ಯೇ ವಿಷೀದಸಿ||
“ಶ್ರೇಷ್ಠ ರಾಜಪುತ್ರ! ಹೆದರಬೇಡ! ಶತ್ರುನಾಶಕ! ನೀನು ಕ್ಷತ್ರಿಯ. ಪುರುಷಶ್ರೇಷ್ಠ! ವೈರಿಗಳ ನಡುವೆ ನೀನು ಹೇಗೆ ಎದೆಗುಂದುವೆ?
04041011a ಶ್ರುತಾಸ್ತೇ ಶಂಖಶಬ್ದಾಶ್ಚ ಭೇರೀಶಬ್ದಾಶ್ಚ ಪುಷ್ಕಲಾಃ|
04041011c ಕುಂಜರಾಣಾಂ ಚ ನದತಾಂ ವ್ಯೂಢಾನೀಕೇಷು ತಿಷ್ಠತಾಂ||
ಶಂಖಗಳ ಶಬ್ಧವನ್ನೂ, ಭೇರಿಗಳ ಶಬ್ಧವನ್ನೂ, ಸೇನಾವ್ಯೂಹಗಳ ನಡುವೆ ನಿಂತ ಆನೆಗಳ ಗರ್ಜನೆಯನ್ನೂ ನೀನೂ ಬೇಕಾದಷ್ಟು ಕೇಳಿದ್ದೀಯೆ.
04041012a ಸ ತ್ವಂ ಕಥಮಿಹಾನೇನ ಶಂಖಶಬ್ದೇನ ಭೀಷಿತಃ|
04041012c ವಿಷಣ್ಣರೂಪೋ ವಿತ್ರಸ್ತಃ ಪುರುಷಃ ಪ್ರಾಕೃತೋ ಯಥಾ||
ಅಂತಹ ನೀನು ಇಲ್ಲಿ ಹೆದರಿದ ಸಾಮಾನ್ಯ ಮನುಷ್ಯನಂತೆ ಹೇಗೆ ಈ ಶಂಖದ ಶಬ್ಧದಿಂದ ಭೀತಿಗೊಂಡು ವಿಷಣ್ಣನಾಗಿರುವೆ?”
04041013 ಉತ್ತರ ಉವಾಚ|
04041013a ಶ್ರುತಾ ಮೇ ಶಂಖಶಬ್ದಾಶ್ಚ ಭೇರೀಶಬ್ದಾಶ್ಚ ಪುಷ್ಕಲಾಃ|
04041013c ಕುಂಜರಾಣಾಂ ಚ ನಿನದಾ ವ್ಯೂಢಾನೀಕೇಷು ತಿಷ್ಠತಾಂ||
ಉತ್ತರನು ಹೇಳಿದನು: “ಶಂಖಗಳ ಶಬ್ಧವನ್ನೂ ಭೇರಿಗಳ ಶಬ್ಧವನ್ನೂ ಸೇನಾವ್ಯೂಹಗಳ ಮಧ್ಯೆ ನಿಂತಿರುವ ಆನೆಗಳ ಗರ್ಜನೆಯನ್ನೂ ನಾನು ಬೇಕಾದಷ್ಟು ಕೇಳಿದ್ದೇನೆ.
04041014a ನೈವಂವಿಧಃ ಶಂಖಶಬ್ದಃ ಪುರಾ ಜಾತು ಮಯಾ ಶ್ರುತಃ|
04041014c ಧ್ವಜಸ್ಯ ಚಾಪಿ ರೂಪಂ ಮೇ ದೃಷ್ಟಪೂರ್ವಂ ನ ಹೀದೃಶಂ|
04041014e ಧನುಷಶ್ಚೈವ ನಿರ್ಘೋಷಃ ಶ್ರುತಪೂರ್ವೋ ನ ಮೇ ಕ್ವ ಚಿತ್||
ಆದರೆ ಇಂತಹ ಶಂಖಶಬ್ಧವನ್ನು ಹಿಂದೆ ನಾನೆಂದೂ ಕೇಳಿರಲಿಲ್ಲ. ಇಂತಹ ಧ್ವಜರೂಪವನ್ನು ಹಿಂದೆಂದೂ ನಾನು ಕಂಡಿಲ್ಲ. ಇಂತಹ ಬಿಲ್ಲಿನ ಘೋಷವನ್ನು ಹಿಂದೆ ನಾನು ಎಲ್ಲಿಯೂ ಕೇಳಿಲ್ಲ.
04041015a ಅಸ್ಯ ಶಂಖಸ್ಯ ಶಬ್ದೇನ ಧನುಷೋ ನಿಸ್ವನೇನ ಚ|
04041015c ರಥಸ್ಯ ಚ ನಿನಾದೇನ ಮನೋ ಮುಹ್ಯತಿ ಮೇ ಭೃಶಂ||
ಈ ಶಂಖದ ಶಬ್ಧದಿಂದಲೂ ಬಿಲ್ಲಿನ ಧ್ವನಿಯಿಂದಲೂ ರಥದ ಘೋಷದಿಂದಲೂ ನನ್ನ ಮನಸ್ಸು ಬಹಳ ದಿಗ್ಭ್ರಮೆಗೊಳ್ಳುತ್ತಿದೆ.
04041016a ವ್ಯಾಕುಲಾಶ್ಚ ದಿಶಃ ಸರ್ವಾ ಹೃದಯಂ ವ್ಯಥತೀವ ಮೇ|
04041016c ಧ್ವಜೇನ ಪಿಹಿತಾಃ ಸರ್ವಾ ದಿಶೋ ನ ಪ್ರತಿಭಾಂತಿ ಮೇ|
04041016e ಗಾಂಡೀವಸ್ಯ ಚ ಶಬ್ದೇನ ಕರ್ಣೌ ಮೇ ಬಧಿರೀಕೃತೌ||
ನನ್ನ ಪಾಲಿಗೆ ದಿಕ್ಕುಗಳೆಲ್ಲ ಗೊಂದಲಗೊಂಡಿವೆ; ನನ್ನ ಹೃದಯ ವ್ಯಥೆಗೊಂಡಿದೆ; ಬಾವುಟದಿಂದ ಮುಚ್ಚಿಹೋಗಿ ದಿಕ್ಕುಗಳೆಲ್ಲ ನನಗೆ ಕಾಣುತ್ತಿಲ್ಲ. ಗಾಂಡೀವದ ಶಬ್ಧದಿಂದ ನನ್ನ ಕಿವಿಗಳು ಕಿವುಡಾಗಿವೆ.”
04041017 ಅರ್ಜುನ ಉವಾಚ|
04041017a ಏಕಾಂತೇ ರಥಮಾಸ್ಥಾಯ ಪದ್ಭ್ಯಾಂ ತ್ವಮವಪೀಡಯ|
04041017c ದೃಢಂ ಚ ರಶ್ಮೀನ್ಸಮ್ಯಚ್ಛ ಶಂಖಂ ಧ್ಮಾಸ್ಯಾಮ್ಯಹಂ ಪುನಃ||
ಅರ್ಜುನನು ಹೇಳಿದನು: “ನೀನು ರಥವನ್ನು ಒಂದುಕಡೆ ನಿಲ್ಲಿಸಿಕೊಂಡು ಪಾದಗಳನ್ನು ಊರಿಕೊಂಡು ನಿಂತು ಕಡಿವಾಣಗಳನ್ನು ಬಲವಾಗಿ ಹಿಡಿದುಕೋ. ನಾನು ಮತ್ತೆ ಶಂಖವನ್ನೂದುತ್ತೇನೆ.””
04041018 ವೈಶಂಪಾಯನ ಉವಾಚ|
04041018a ತಸ್ಯ ಶಂಖಸ್ಯ ಶಬ್ದೇನ ರಥನೇಮಿಸ್ವನೇನ ಚ|
04041018c ಗಾಂಡೀವಸ್ಯ ಚ ಘೋಷೇಣ ಪೃಥಿವೀ ಸಮಕಂಪತ||
ವೈಶಂಪಾಯನನು ಹೇಳಿದನು: “ಆ ಶಂಖದ ಶಬ್ಧದಿಂದಲೂ ರಥಚಕ್ರದ ಧ್ವನಿಯಿಂದಲೂ ಗಾಂಡೀವದ ಘೋಷದಿಂದಲೂ ಭೂಮಿಯು ನಡುಗಿತು.
04041019 ದ್ರೋಣ ಉವಾಚ|
04041019a ಯಥಾ ರಥಸ್ಯ ನಿರ್ಘೋಷೋ ಯಥಾ ಶಂಖ ಉದೀರ್ಯತೇ|
04041019c ಕಂಪತೇ ಚ ಯಥಾ ಭೂಮಿರ್ನೈಷೋಽನ್ಯಃ ಸವ್ಯಸಾಚಿನಃ||
ದ್ರೋಣನು ಹೇಳಿದನು: “ರಥನಿರ್ಘೋಷದ ರೀತಿ, ಶಂಖಶಬ್ಧದ ರೀತಿ, ಭೂಕಂಪನದ ರೀತಿ ಇವುಗಳಿಂದ ಹೇಳುವುದಾದರೆ ಇವನು ಅರ್ಜುನನಲ್ಲದೇ ಬೇರೆಯಲ್ಲ.
04041020a ಶಸ್ತ್ರಾಣಿ ನ ಪ್ರಕಾಶಂತೇ ನ ಪ್ರಹೃಷ್ಯಂತಿ ವಾಜಿನಃ|
04041020c ಅಗ್ನಯಶ್ಚ ನ ಭಾಸಂತೇ ಸಮಿದ್ಧಾಸ್ತನ್ನ ಶೋಭನಂ||
ಶಸ್ತ್ರಗಳು ಹೊಳೆಯುತ್ತಿಲ್ಲ; ಕುದುರೆಗಳು ಹರ್ಷಿಸುತ್ತಿಲ್ಲ; ಚೆನ್ನಾಗಿ ಹೊತ್ತಿಸಿದ ಬೆಂಕಿಯೂ ಜ್ವಲಿಸುತ್ತಿಲ್ಲ. ಇದು ಒಳ್ಳೆಯದಲ್ಲ.
04041021a ಪ್ರತ್ಯಾದಿತ್ಯಂ ಚ ನಃ ಸರ್ವೇ ಮೃಗಾ ಘೋರಪ್ರವಾದಿನಃ|
04041021c ಧ್ವಜೇಷು ಚ ನಿಲೀಯಂತೇ ವಾಯಸಾಸ್ತನ್ನ ಶೋಭನಂ|
04041021e ಶಕುನಾಶ್ಚಾಪಸವ್ಯಾ ನೋ ವೇದಯಂತಿ ಮಹದ್ಭಯಂ||
ನಮ್ಮ ಪ್ರಾಣಿಗಳೆಲ್ಲ ಸೂರ್ಯನಿಗೆ ಎದುರಾಗಿ ಘೋರವಾಗಿ ಕೂಗಿಕೊಳ್ಳುತ್ತಿವೆ. ಕಾಗೆಗಳು ಧ್ವಜಗಳ ಮೇಲೆ ಕುಳಿತುಕೊಳ್ಳುತ್ತಿವೆ. ಇದು ಒಳ್ಳೆಯದಲ್ಲ. ಬಲಕ್ಕೆ ಹೋಗುತ್ತಿರುವ ಪಕ್ಷಿಗಳು ಮಹಾಭಯವನ್ನು ಸೂಚಿಸುತ್ತಿವೆ.
04041022a ಗೋಮಾಯುರೇಷ ಸೇನಾಯಾ ರುವನ್ಮಧ್ಯೇಽನುಧಾವತಿ|
04041022c ಅನಾಹತಶ್ಚ ನಿಷ್ಕ್ರಾಂತೋ ಮಹದ್ವೇದಯತೇ ಭಯಂ|
04041022e ಭವತಾಂ ರೋಮಕೂಪಾಣಿ ಪ್ರಹೃಷ್ಟಾನ್ಯುಪಲಕ್ಷಯೇ||
ಈ ನರಿಯು ಸೇನೆಯ ನಡುವೆ ಒರಲುತ್ತ ಓಡಿಹೋಗುತ್ತಿದೆ. ಹೊಡೆತಕ್ಕೆ ಸಿಕ್ಕದೇ ತಪ್ಪಿಸಿಕೊಂಡು ಓಡುತ್ತಿರುವ ಅದು ಮಹಾಭಯವನ್ನು ಸೂಚಿಸುತ್ತಿದೆ. ನಿಮ್ಮ ರೋಮಗಳು ನಿಮಿರಿ ನಿಂತಿರುವುದನ್ನು ಕಾಣುತ್ತಿದ್ದೇನೆ.
04041023a ಪರಾಭೂತಾ ಚ ವಃ ಸೇನಾ ನ ಕಶ್ಚಿದ್ಯೋದ್ಧುಮಿಚ್ಛತಿ|
04041023c ವಿವರ್ಣಮುಖಭೂಯಿಷ್ಠಾಃ ಸರ್ವೇ ಯೋಧಾ ವಿಚೇತಸಃ|
04041023e ಗಾಃ ಸಂಪ್ರಸ್ಥಾಪ್ಯ ತಿಷ್ಠಾಮೋ ವ್ಯೂಢಾನೀಕಾಃ ಪ್ರಹಾರಿಣಃ||
ನಿಮ್ಮ ಸೇನೆ ಇದಾಗಲೇ ಪರಾಭವಗೊಂಡಂತಿದೆ. ಯಾರೂ ಯುದ್ಧಮಾಡಲು ಇಚ್ಛಿಸುತ್ತಿಲ್ಲ. ಎಲ್ಲ ಯೋಧರ ಮುಖಗಳೂ ಅತಿಯಾಗಿ ಬಿಳಿಚಿಕೊಂಡಿವೆ; ಭ್ರಾಂತರಂತೆ ಆಗಿದ್ದಾರೆ. ಗೋವುಗಳನ್ನು ಮುಂದೆ ಕಳುಹಿಸಿ, ವ್ಯೂಹವನ್ನು ರಚಿಸಿ ಆಯುಧಸನ್ನದ್ದರಾಗಿ ನಿಲ್ಲೋಣ.””
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಔತ್ಪಾತಿಕೇ ಏಕಚತ್ವಾರಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಔತ್ಪಾತಿಕದಲ್ಲಿ ನಲ್ವತ್ತೊಂದನೆಯ ಅಧ್ಯಾಯವು.