Virata Parva: Chapter 31

ವಿರಾಟ ಪರ್ವ: ಗೋಹರಣ ಪರ್ವ

೩೧

ತ್ರಿಗರ್ತ ಮತ್ತು ವಿರಾಟರ ನಡುವೆ ಯುದ್ಧ

ವಿರಾಟ ಮತ್ತು ಸುಶರ್ಮ ಸೇನೆಗಳ ನಡುವೆ ನಡೆದ ಯುದ್ಧ (೧-೨೪).

04031001 ವೈಶಂಪಾಯನ ಉವಾಚ|

04031001a ನಿರ್ಯಾಯ ನಗರಾಚ್ಚೂರಾ ವ್ಯೂಢಾನೀಕಾಃ ಪ್ರಹಾರಿಣಃ|

04031001c ತ್ರಿಗರ್ತಾನಸ್ಪೃಶನ್ಮತ್ಸ್ಯಾಃ ಸೂರ್ಯೇ ಪರಿಣತೇ ಸತಿ||

ವೈಶಂಪಾಯನನು ಹೇಳಿದನು: ಮತ್ಸ್ಯದೇಶದ ಶೂರ ಯೋಧರು ನಗರದಿಂದ ಹೊರಟು ಸೈನ್ಯವ್ಯೂಹವನ್ನು ರಚಿಸಿಕೊಂಡು, ಹೊತ್ತು ಇಳಿದಾಗ ತ್ರಿಗರ್ತರನ್ನು ತಾಗಿದರು.

04031002a ತೇ ತ್ರಿಗರ್ತಾಶ್ಚ ಮತ್ಸ್ಯಾಶ್ಚ ಸಂರಬ್ಧಾ ಯುದ್ಧದುರ್ಮದಾಃ|

04031002c ಅನ್ಯೋನ್ಯಮಭಿಗರ್ಜಂತೋ ಗೋಷು ಗೃದ್ಧಾ ಮಹಾಬಲಾಃ||

ಕೋಪೋದ್ರಿಕ್ತರೂ, ಗೋವುಗಳ ಮೇಲೆ ಆಶೆಯುಳ್ಳವರೂ, ಯುದ್ಧೋನ್ಮತ್ತರೂ, ಮಹಾಬಲರೂ ಆದ ಆ ತ್ರಿಗರ್ತರು ಮತ್ತು ಮತ್ಸ್ಯರು ಪರಸ್ಪರ ಗರ್ಜನೆ ಮಾಡಿದರು.

04031003a ಭೀಮಾಶ್ಚ ಮತ್ತಮಾತಂಗಾಸ್ತೋಮರಾಮ್ಕುಶಚೋದಿತಾಃ|

04031003c ಗ್ರಾಮಣೀಯೈಃ ಸಮಾರೂಢಾಃ ಕುಶಲೈರ್ಹಸ್ತಿಸಾದಿಭಿಃ||

ಆಗ ಸೈನ್ಯ ವಿಭಾಗ ಪ್ರಮುಖರೂ ಕುಶಲ ಗಜಾರೋಹಕರೂ ಏರಿ ಕುಳಿತ ಭಯಂಕರ ಮದಗಜಗಳು ತೋಮರಗಳಿಂದಲೂ ಅಂಕುಶಗಳಿಂದಲೂ ಪ್ರಚೋದಿತಗೊಂಡವು.

04031004a ತೇಷಾಂ ಸಮಾಗಮೋ ಘೋರಸ್ತುಮುಲೋ ಲೋಮಹರ್ಷಣ|

04031004c ದೇವಾಸುರಸಮೋ ರಾಜನ್ನಾಸೀತ್ಸೂರ್ಯೇ ವಿಲಂಬತಿ||

ರಾಜ! ಹೊತ್ತು ಇಳಿಯುವ ಸಮಯದಲ್ಲಿ ಅವರ ಘೋರ ಮತ್ತು ರೋಮಾಂಚಕಾರಿ ತುಮುಲಯುದ್ಧವು ದೇವಾಸುರರ ಯುದ್ಧಕ್ಕೆ ಸಮಾನವಾಗಿತ್ತು.

04031005a ಉದತಿಷ್ಠದ್ರಜೋ ಭೌಮಂ ನ ಪ್ರಜ್ಞಾಯತ ಕಿಂ ಚನ|

04031005c ಪಕ್ಷಿಣಶ್ಚಾಪತನ್ಭೂಮೌ ಸೈನ್ಯೇನ ರಜಸಾವೃತಾಃ||

ನೆಲದ ಧೂಳು ಮೇಲೆದ್ದಿತು; ಅದರಿಂದಾಗಿ ಏನೊಂದೂ ಗೊತ್ತಾಗುತ್ತಿರಲಿಲ್ಲ. ಸೈನ್ಯದ ಧೂಳು ಕವಿದ ಪಕ್ಷಿಗಳು ನೆಲಕ್ಕೆ ಬಿದ್ದವು.

04031006a ಇಷುಭಿರ್ವ್ಯತಿಸಮ್ಯದ್ಭಿರಾದಿತ್ಯೋಽಂತರಧೀಯತ|

04031006c ಖದ್ಯೋತೈರಿವ ಸಮ್ಯುಕ್ತಮಂತರಿಕ್ಷಂ ವ್ಯರಾಜತ||

ಪ್ರಯೋಗಿಸುತ್ತಿದ್ದ ಬಾಣಗಳಿಂದ ಸೂರ್ಯನು ಕಣ್ಮರೆಯಾದನು. ಆಕಾಶವು ಮಿಂಚು ಹುಳುಗಳಿಂದ ಕೂಡಿದಂತೆ ವಿರಾಜಿಸಿತು.

04031007a ರುಕ್ಮಪೃಷ್ಠಾನಿ ಚಾಪಾನಿ ವ್ಯತಿಷಕ್ತಾನಿ ಧನ್ವಿನಾಂ|

04031007c ಪತತಾಂ ಲೋಕವೀರಾಣಾಂ ಸವ್ಯದಕ್ಷಿಣಮಸ್ಯತಾಂ||

ಬಲಗೈ, ಎಡಗೈಗಳಿಂದ ಬಾಣ ಬಿಡುತ್ತಿದ್ದ ಲೋಕಪ್ರಸಿದ್ಧ ವೀರ ಬಿಲ್ಗಾರರು ಬಿದ್ದಾಗ, ಚಿನ್ನದ ಹಿಂಬಾಗವುಳ್ಳ ಅವರ ಬಿಲ್ಲುಗಳು ಪರಸ್ಪರ ತೊಡರಿಕೊಳ್ಳುತ್ತಿದ್ದವು.

04031008a ರಥಾ ರಥೈಃ ಸಮಾಜಗ್ಮುಃ ಪಾದಾತೈಶ್ಚ ಪದಾತಯಃ|

04031008c ಸಾದಿಭಿಃ ಸಾದಿನಶ್ಚೈವ ಗಜೈಶ್ಚಾಪಿ ಮಹಾಗಜಾಃ||

ರಥಗಳು ರಥಗಳನ್ನೂ, ಪದಾತಿಗಳು ಪದಾತಿಗಳನ್ನೂ, ಮಾವುತರು ಮಾವುತರನ್ನೂ, ಗಜಗಳು ಮಹಾಗಜಗಳನ್ನೂ ಎದುರಿಸಿದವು.

04031009a ಅಸಿಭಿಃ ಪಟ್ಟಿಶೈಃ ಪ್ರಾಸೈಃ ಶಕ್ತಿಭಿಸ್ತೋಮರೈರಪಿ|

04031009c ಸಂರಬ್ಧಾಃ ಸಮರೇ ರಾಜನ್ನಿಜಘ್ನುರಿತರೇತರಂ||

ರಾಜ! ಕೃದ್ಧರಾದ ಆ ಯೋಧರು ಕತ್ತಿಗಳಿಂದಲೂ, ಪಟ್ಟಿಶ, ಭರ್ಜಿ, ಶಕ್ತಿ, ತೋಮರಗಳಿಂದಲೂ ಯುದ್ಧದಲ್ಲಿ ಒಬ್ಬರನ್ನೊಬ್ಬರು ಹೊಡೆದರು.

04031010a ನಿಘ್ನಂತಃ ಸಮರೇಽನ್ಯೋನ್ಯಂ ಶೂರಾಃ ಪರಿಘಬಾಹವಃ|

04031010c ನ ಶೇಕುರಭಿಸಂರಬ್ಧಾಃ ಶೂರಾನ್ಕರ್ತುಂ ಪರಾಂಙ್ಮುಖಾನ್||

ಪರಿಘದಂಥಹ ತೋಳುಗಳನ್ನುಳ್ಳ ಆ ಶೂರರು ಯುದ್ಧದಲ್ಲಿ ಕುಪಿತರಾಗಿ ಪರಸ್ಪರ ಹೊಡೆದಾಡುತ್ತಿದ್ದರೂ ಒಂದು ಪಕ್ಷದ ಶೂರರು ಮತ್ತೊಂದು ಪಕ್ಷದ ಶೂರರನ್ನು ವಿಮುಖರಾಗುವಂತೆ ಮಾಡಲು ಸಮರ್ಥರಾಗಲಿಲ್ಲ.

04031011a ಕ್ಲೋಪ್ತರೋಷ್ಠಂ ಸುನಸಂ ಕ್ಲಪ್ತಕೇಶಮಲಂಕೃತಂ|

04031011c ಅದೃಶ್ಯತ ಶಿರಶ್ಚಿನ್ನಂ ರಜೋಧ್ವಸ್ತಂ ಸಕುಂಡಲಂ||

ಮೇಲ್ದುಟಿ ಹರಿದುಹೋದ, ಸುಸ್ಥಿತವಾದ ಮೂಗಿನ, ಅಲಂಕೃತವಾದ ಕೂದಲು ಕತ್ತರಿಸಿಹೋದ, ಕುಂಡಲ ಸಹಿತವಾಗಿ ಧೂಳು ಮುಚ್ಚಿದ ರುಂಡಗಳು ಅಲ್ಲಿ ಕಂಡು ಬರುತ್ತಿದ್ದವು.

04031012a ಅದೃಶ್ಯಂಸ್ತತ್ರ ಗಾತ್ರಾಣಿ ಶರೈಶ್ಚಿನ್ನಾನಿ ಭಾಗಶಃ|

04031012c ಶಾಲಸ್ಕಂಧನಿಕಾಶಾನಿ ಕ್ಷತ್ರಿಯಾಣಾಂ ಮಹಾಮೃಧೇ||

ಆ ಮಹಾಯುದ್ಧದಲ್ಲಿ ಬಾಣಗಳಿಂದ ತುಂಡುತುಂಡಾಗಿ ಕತ್ತರಿಸಿಹೋದ ಕ್ಷತ್ರಿಯರ ದೇಹಗಳು ಶಾಲವೃಕ್ಷದ ಕಾಂಡಗಳಂತೆ ಕಾಣುತ್ತಿದ್ದವು.

04031013a ನಾಗಭೋಗನಿಕಾಶೈಶ್ಚ ಬಾಹುಭಿಶ್ಚಂದನೋಕ್ಷಿತೈಃ|

04031013c ಆಕೀರ್ಣಾ ವಸುಧಾ ತತ್ರ ಶಿರೋಭಿಶ್ಚ ಸಕುಂಡಲೈಃ||

ಹಾವಿನ ಹೆಡೆಗಳಿಗೆ ಸಮಾನ ಚಂದನ ಲೇಪಿತ ಬಾಹುಗಳಿಂದಲೂ, ಕುಂಡಲಸಹಿತ ತಲೆಗಳಿಂದಲೂ ಆ ರಣಭೂಮಿಯು ತುಂಬಿಹೋಗಿತ್ತು.

04031014a ಉಪಶಾಮ್ಯದ್ರಜೋ ಭೌಮಂ ರುಧಿರೇಣ ಪ್ರಸರ್ಪತಾ|

04031014c ಕಶ್ಮಲಂ ಪ್ರಾವಿಶದ್ಘೋರಂ ನಿರ್ಮರ್ಯಾದಮವರ್ತತ||

ಹರಿಯುತ್ತಿದ್ದ ರಕ್ತದಲ್ಲಿ ನೆಲದ ಧೂಳು ಅಡಗಿಹೋಯಿತು. ಅದರಿಂದ ಘೋರವೂ ಅಪರಿಮಿತವೂ ಆದ ಕೆಸರುಂಟಾಯಿತು.

04031015a ಶತಾನೀಕಃ ಶತಂ ಹತ್ವಾ ವಿಶಾಲಾಕ್ಷಶ್ಚತುಃಶತಂ|

04031015c ಪ್ರವಿಷ್ಟೌ ಮಹತೀಂ ಸೇನಾಂ ತ್ರಿಗರ್ತಾನಾಂ ಮಹಾರಥೌ|

04031015e ಆರ್ಚ್ಛೇತಾಂ ಬಹುಸಂರಬ್ಧೌ ಕೇಶಾಕೇಶಿ ನಖಾನಖಿ||

ಶತಾನೀಕನು ನೂರುಮಂದಿ ಶತ್ರುಗಳನ್ನೂ, ವಿಶಾಲಾಕ್ಷನು ನಾನೂರುಮಂದಿಯನ್ನೂ ಕೊಂದು ಆ ಇಬ್ಬರು ಮಹಾರಥರು ತ್ರಿಗರ್ತರ ಮಹಾಸೇನೆಯನ್ನು ಹೊಕ್ಕರು. ಬಹು ರೋಷಾವೇಶದಿಂದ ಕೇಶಾಕೇಶಿಯಾಗಿ ನಖಾನಖಿಯಾಗಿ ಶತ್ರುಗಳೊಡನೆ ಕಾದಾಡಿದರು.

04031016a ಲಕ್ಷಯಿತ್ವಾ ತ್ರಿಗರ್ತಾನಾಂ ತೌ ಪ್ರವಿಷ್ಟೌ ರಥವ್ರಜಂ|

04031016c ಜಗ್ಮತುಃ ಸೂರ್ಯದತ್ತಶ್ಚ ಮದಿರಾಶ್ವಶ್ಚ ಪೃಷ್ಠತಃ||

ಅವರು ತ್ರಿಗರ್ತರ ರಥಸಮೂಹವನ್ನು ಲಕ್ಷಿಸಿ ನುಗ್ಗಿದರು; ಅವರ ಹಿಂದೆ ಸೂರ್ಯದತ್ತನೂ ಮದಿರಾಶ್ವನೂ ಹೋದರು.

04031017a ವಿರಾಟಸ್ತತ್ರ ಸಂಗ್ರಾಮೇ ಹತ್ವಾ ಪಂಚಶತಾನ್ರಥಾನ್|

04031017c ಹಯಾನಾಂ ಚ ಶತಾನ್ಯತ್ರ ಹತ್ವಾ ಪಂಚ ಮಹಾರಥಾನ್||

04031018a ಚರನ್ಸ ವಿವಿಧಾನ್ಮಾರ್ಗಾನ್ರಥೇಷು ರಥಯೂಥಪಃ|

04031018c ತ್ರಿಗರ್ತಾನಾಂ ಸುಶರ್ಮಾಣಮಾಚ್ಛ್ಭದ್ರುಕ್ಮರಥಂ ರಣೇ||

ರಥ ಸೇನಾನಿ ವಿರಾಟನು ರಥದಲ್ಲಿ ಕುಳಿತು ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತ ಆ ರಣದಲ್ಲಿ ಐನೂರು ರಥಗಳನ್ನು ನಾಶಮಾಡಿ, ನೂರು ಕುದರೆಗಳನ್ನೂ, ಐವರು ಮಹಾರಥರನ್ನೂ ಕೊಂದು, ತ್ರಿಗರ್ತರ ರಾಜ ಸುಶರ್ಮನ ಸುವರ್ಣರಥವನ್ನು ಎದುರಿಸಿದನು.

04031019a ತೌ ವ್ಯಾವಹರತಾಂ ತತ್ರ ಮಹಾತ್ಮಾನೌ ಮಹಾಬಲೌ|

04031019c ಅನ್ಯೋನ್ಯಮಭಿಗರ್ಜಂತೌ ಗೋಷ್ಠೇ ಗೋವೃಷಭಾವಿವ||

ಅಲ್ಲಿ ಮಹಾತ್ಮರೂ, ಮಹಾಬಲರೂ ಆದ ಅವರಿಬ್ಬರೂ ಹೋರಾಡುತ್ತಾ, ಕೊಟ್ಟಿಗೆಯಲ್ಲಿ ಎರಡು ಗೂಳಿಗಳು ಗರ್ಜಿಸುವಂತೆ ಪರಸ್ಪರ ಗರ್ಜನೆ ಮಾಡುತ್ತಿದ್ದರು.

04031020a ತತೋ ರಥಾಭ್ಯಾಂ ರಥಿನೌ ವ್ಯತಿಯಾಯ ಸಮಂತತಃ|

04031020c ಶರಾನ್ವ್ಯಸೃಜತಾಂ ಶೀಘ್ರಂ ತೋಯಧಾರಾ ಘನಾವಿವ||

ಬಳಿಕ ಆ ರಥಿಕರು ರಥಗಳಲ್ಲಿ ಕುಳಿತು ಸುತ್ತಲೂ ತಿರುಗುತ್ತ, ಮೋಡಗಳು ಮಳೆಯ ಧಾರೆಯನ್ನು ಕರೆಯುವಂತೆ ಶೀಘ್ರ ಬಾಣಗಳನ್ನು ಸುರಿಸಿದರು.

04031021a ಅನ್ಯೋನ್ಯಂ ಚಾತಿಸಂರಬ್ಧೌ ವಿಚೇರತುರಮರ್ಷಣೌ|

04031021c ಕೃತಾಸ್ತ್ರೌ ನಿಶಿತೈರ್ಬಾಣೈರಸಿಶಕ್ತಿಗದಾಭೃತೌ||

ಪರಸ್ಪರ ಅತಿ ಕೋಪಾವಿಷ್ಟರೂ ಅಸಹನೆಯುಳ್ಳವರೂ ಆದ, ಖಡ್ಗ, ಶಕ್ತಿ, ಗದೆಗಳನ್ನು ಧರಿಸಿದ ಅ ಅಸ್ತ್ರ ವಿಶಾರದರು ಹರಿತ ಬಾಣಗಳನ್ನು ಪ್ರಯೋಗಿಸುತ್ತಾ ಚಲಿಸುತ್ತಿದ್ದರು.

04031022a ತತೋ ರಾಜಾ ಸುಶರ್ಮಾಣಂ ವಿವ್ಯಾಧ ದಶಭಿಃ ಶರೈಃ|

04031022c ಪಂಚಭಿಃ ಪಂಚಭಿಶ್ಚಾಸ್ಯ ವಿವ್ಯಾಧ ಚತುರೋ ಹಯಾನ್||

ಅನಂತರ ವಿರಾಟರಾಜನು ಸುಶರ್ಮನನ್ನು ಹತ್ತು ಬಾಣಗಳಿಂದ ಘಾತಿಸಿದನು; ಅವನ ನಾಲ್ಕು ಕುದುರೆಗಳನ್ನು ಐದೈದು ಬಾಣಗಳಿಂದ ಭೇದಿಸಿದನು.

04031023a ತಥೈವ ಮತ್ಸ್ಯರಾಜಾನಂ ಸುಶರ್ಮಾ ಯುದ್ಧದುರ್ಮದಃ|

04031023c ಪಂಚಾಶತಾ ಶಿತೈರ್ಬಾಣೈರ್ವಿವ್ಯಾಧ ಪರಮಾಸ್ತ್ರವಿತ್||

ಹಾಗೆಯೇ, ಯುದ್ಧೋನ್ಮತ್ತನೂ, ಪರಮಾಸ್ತ್ರವಿದನೂ ಆದ ಸುಶರ್ಮನು ಮತ್ಸ್ಯರಾಜನನ್ನು ಐವತ್ತು ನಿಶಿತ ಬಾಣಗಳಿಂದ ಹೊಡೆದನು.

04031024a ತತಃ ಸೈನ್ಯಂ ಸಮಾವೃತ್ಯ ಮತ್ಸ್ಯರಾಜಸುಶರ್ಮಣೋಃ|

04031024c ನಾಭ್ಯಜಾನಂಸ್ತದಾನ್ಯೋನ್ಯಂ ಪ್ರದೋಷೇ ರಜಸಾವೃತೇ||

ಆಗ ಧೂಳು ಮುಸುಕಿದ ಸಂಜೆಯಲ್ಲಿ ಮತ್ಸ್ಯರಾಜ ಸುಶರ್ಮರ ಸೇನೆಗಳು ಒಂದನ್ನೊಂದು ಆವರಿಸಿಕೊಂಡು ಪರಸ್ಪರ ಗುರುತಿಸಲಾಗುತ್ತಿರಲಿಲ್ಲ.”

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ದಕ್ಷಿಣಗೋಗ್ರಹೇ ವಿರಾಟಸುಶರ್ಮಯುದ್ಧೇ ಏಕತ್ರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ದಕ್ಷಿಣಗೋಗ್ರಹದಲ್ಲಿ ವಿರಾಟಸುಶರ್ಮಯುದ್ಧದಲ್ಲಿ ಮೂವತ್ತೊಂದನೆಯ ಅಧ್ಯಾಯವು.

Related image

Comments are closed.