Virata Parva: Chapter 30

ವಿರಾಟ ಪರ್ವ: ಗೋಹರಣ ಪರ್ವ

೩೦

ವಿರಾಟನ ಸೇನೆಯು ತ್ರಿಗರ್ತರೊಡನೆ ಯುದ್ಧಕ್ಕೆ ಸಜ್ಜಾಗಿದುದು

ಸುಶರ್ಮನನ್ನು ಎದುರಿಸಲು ಮತ್ಸ್ಯಸೇನೆಯು ಸಿದ್ಧವಾದುದು (೧-೧೮). ವೇಷ ಮರೆಸಿಕೊಂಡಿದ್ದ ಪಾಂಡವರೂ ಸೇನೆಯನ್ನು ಸೇರಬೇಕೆಂದು ವಿರಾಟನು ಆಜ್ಞಾಪಿಸಿದುದು (೧೯-೨೫). ಮತ್ಸ್ಯಸೇನೆಯು ತ್ರಿಗರ್ತಸೇನೆಯನ್ನು ಬೆನ್ನಟ್ಟಿ ಹೋದುದು (೨೬-೩೦).

04030001 ವೈಶಂಪಾಯನ ಉವಾಚ|

04030001a ತತಸ್ತೇಷಾಂ ಮಹಾರಾಜ ತತ್ರೈವಾಮಿತತೇಜಸಾಂ|

04030001c ಚದ್ಮಲಿಂಗಪ್ರವಿಷ್ಟಾನಾಂ ಪಾಂಡವಾನಾಂ ಮಹಾತ್ಮನಾಂ||

04030002a ವ್ಯತೀತಃ ಸಮಯಃ ಸಮ್ಯಗ್ವಸತಾಂ ವೈ ಪುರೋತ್ತಮೇ|

04030002c ಕುರ್ವತಾಂ ತಸ್ಯ ಕರ್ಮಾಣಿ ವಿರಾಟಸ್ಯ ಮಹೀಪತೇಃ||

ವೈಶಂಪಾಯನನು ಹೇಳಿದನು: “ಮಹಾರಾಜ! ಬಳಿಕ ವೇಷಮರೆಸಿಕೊಂಡು ವಿರಾಟನಗರವನ್ನು ಪ್ರವೇಶಿಸಿ ಆ ಶ್ರೇಷ್ಠ ನಗರದಲ್ಲಿ ವಿರಾಟರಾಜನ ಕೆಲಸಗಳನ್ನು ಮಾಡುತ್ತ ವಾಸಿಸುತ್ತಿದ್ದ ಅಮಿತತೇಜಸ್ವಿ ಮಹಾತ್ಮ ಪಾಂಡವರ ಅಜ್ಞಾತವಾಸದ ಅವಧಿಯು ಕಳೆಯಿತು.

04030003a ತತಸ್ತ್ರಯೋದಶಸ್ಯಾಂತೇ ತಸ್ಯ ವರ್ಷಸ್ಯ ಭಾರತ|

04030003c ಸುಶರ್ಮಣಾ ಗೃಹೀತಂ ತು ಗೋಧನಂ ತರಸಾ ಬಹು||

ಭಾರತ! ಆಗ ಆ ಹದಿಮೂರನೆಯ ವರ್ಷದ ಕೊನೆಯಲ್ಲಿ ಸುಶರ್ಮನು ವಿರಾಟನ ಗೋಧನವನ್ನು ವಿಪುಲ ಸಂಖ್ಯೆಯಲ್ಲಿ ಶೀಘ್ರವಾಗಿ ಹಿಡಿದನು.

04030004a ತತೋ ಜವೇನ ಮಹತಾ ಗೋಪಾಃ ಪುರಮಥಾವ್ರಜತ್|

04030004c ಅಪಶ್ಯನ್ಮತ್ಸ್ಯರಾಜಂ ಚ ರಥಾತ್ಪ್ರಸ್ಕಂದ್ಯ ಕುಂಡಲೀ||

04030005a ಶೂರೈಃ ಪರಿವೃತಂ ಯೋಧೈಃ ಕುಂಡಲಾಂಗದಧಾರಿಭಿಃ|

04030005c ಸದ್ಭಿಶ್ಚ ಮಂತ್ರಿಭಿಃ ಸಾರ್ಧಂ ಪಾಂಡವೈಶ್ಚ ನರರ್ಷಭೈಃ||

ಆಗ ಗೋಪಾಲಕರು ಮಹಾವೇಗದಿಂದ ನಗರಕ್ಕೆ ಬಂದರು. ಕುಂಡಲಧಾರಿಯಾದ ಒಬ್ಬನು ರಥದಿಂದ ಕೆಳಕ್ಕೆ ನೆಗೆದು ಅಂಗದ ಕುಂಡಲಗಳನ್ನು ಧರಿಸಿದ ಶೂರ ಯೋಧರಿಂದಲೂ, ಸಜ್ಜನ ಮಂತ್ರಿಗಳಿಂದಲೂ, ನರಶ್ರೇಷ್ಠ ಪಾಂಡವರಿಂದಲೂ ಪರಿವೃತನಾಗಿದ್ದ ಮತ್ಸ್ಯರಾಜನನ್ನು ಕಂಡನು.

04030006a ತಂ ಸಭಾಯಾಂ ಮಹಾರಾಜಮಾಸೀನಂ ರಾಷ್ಟ್ರವರ್ಧನಂ|

04030006c ಸೋಽಬ್ರವೀದುಪಸಂಗಮ್ಯ ವಿರಾಟಂ ಪ್ರಣತಸ್ತದಾ||

ಆ ಬಳಿಕ ಅವನು ಸಭೆಯಲ್ಲಿ ಕುಳಿತಿದ್ದ ರಾಷ್ಟ್ರವರ್ಧನ ಆ ವಿರಾಟ ಮಹಾರಾಜನ ಬಳಿಗೆ ಬಂದು ನಮಸ್ಕರಿಸಿ ಹೀಗೆ ಹೇಳಿದನು:

04030007a ಅಸ್ಮಾನ್ಯುಧಿ ವಿನಿರ್ಜಿತ್ಯ ಪರಿಭೂಯ ಸಬಾಂಧವಾನ್|

04030007c ಗವಾಂ ಶತಸಹಸ್ರಾಣಿ ತ್ರಿಗರ್ತಾಃ ಕಾಲಯಂತಿ ತೇ|

04030007e ತಾನ್ಪರೀಪ್ಸ ಮನುಷ್ಯೇಂದ್ರ ಮಾ ನೇಶುಃ ಪಶವಸ್ತವ||

“ರಾಜ! ತ್ರಿಗರ್ತರು ನಮ್ಮ ಬಾಂಧವರೊಡನೆ ನಮ್ಮನ್ನು ಯುದ್ಧದಲ್ಲಿ ಸೋಲಿಸಿ ಅವಮಾನಿಸಿ ನಿನ್ನ ನೂರಾರು ಸಾವಿರಾರು ಗೋವುಗಳನ್ನು ಹಿಡಿಯುತ್ತಿದ್ದಾರೆ. ಅವುಗಳನ್ನು ರಕ್ಷಿಸು. ನಿನ್ನ ಗೋವುಗಳು ನಷ್ಟವಾಗದಿರಲಿ.”

04030008a ತಚ್ಚ್ರುತ್ವಾ ನೃಪತಿಃ ಸೇನಾಂ ಮತ್ಸ್ಯಾನಾಂ ಸಮಯೋಜಯತ್|

04030008c ರಥನಾಗಾಶ್ವಕಲಿಲಾಂ ಪತ್ತಿಧ್ವಜಸಮಾಕುಲಾಂ||

ಅದನ್ನು ಕೇಳಿ ದೊರೆಯು ರಥ, ಆನೆ, ಕುದುರೆಗಳಿಂದಲೂ ಪದಾತಿ ಧ್ವಜಗಳಿಂದಲೂ ತುಂಬಿದ ಮತ್ಸ್ಯಸೇನೆಯನ್ನು ಸಜ್ಜುಗೊಳಿಸಿದನು.

04030009a ರಾಜಾನೋ ರಾಜಪುತ್ರಾಶ್ಚ ತನುತ್ರಾಣ್ಯತ್ರ ಭೇಜಿರೇ|

04030009c ಭಾನುಮಂತಿ ವಿಚಿತ್ರಾಣಿ ಸೂಪಸೇವ್ಯಾನಿ ಭಾಗಶಃ||

ರಾಜರು ಮತ್ತು ರಾಜಪುತ್ರರು ಪ್ರಕಾಶಮಾನವೂ ಸುಂದರವೂ ಧರಿಸಲು ಯೋಗ್ಯವೂ ಆದ ಕವಚಗಳನ್ನು ಸ್ಥಾನೋಚಿತವಾಗಿ ಧರಿಸಿದರು.

04030010a ಸವಜ್ರಾಯಸಗರ್ಭಂ ತು ಕವಚಂ ತಪ್ತಕಾಂಚನಂ|

04030010c ವಿರಾಟಸ್ಯ ಪ್ರಿಯೋ ಭ್ರಾತಾ ಶತಾನೀಕೋಽಭ್ಯಹಾರಯತ್||

ವಿರಾಟನ ಪ್ರಿಯ ಸೋದರ ಶತಾನೀಕನು ವಜ್ರಸಹಿತವಾದ ಉಕ್ಕಿನ ಒಳಭಾಗವನ್ನುಳ್ಳ ಪುಟವಿಟ್ಟ ಚಿನ್ನದ ಕವಚವನ್ನು ಧರಿಸಿದನು.

04030011a ಸರ್ವಪಾರಸವಂ ವರ್ಮ ಕಲ್ಯಾಣಪಟಲಂ ದೃಢಂ|

04030011c ಶತಾನೀಕಾದವರಜೋ ಮದಿರಾಶ್ವೋಽಭ್ಯಹಾರಯತ್||

ಶತಾನೀಕನ ತಮ್ಮ ಮದಿರಾಶ್ವನು ಸುಂದರ ಹೊದಿಕೆಯನ್ನುಳ್ಳ, ಪೂರ್ತಿಯಾಗಿ ಉಕ್ಕಿನಿಂದ ಮಾಡಿದ್ದ ಗಟ್ಟಿ ಕವಚವನ್ನು ಧರಿಸಿದನು.

04030012a ಶತಸೂರ್ಯಂ ಶತಾವರ್ತಂ ಶತಬಿಂದು ಶತಾಕ್ಷಿಮತ್|

04030012c ಅಭೇದ್ಯಕಲ್ಪಂ ಮತ್ಸ್ಯಾನಾಂ ರಾಜಾ ಕವಚಮಾಹರತ್||

ಮತ್ಸ್ಯರಾಜನು ನೂರು ಸೂರ್ಯ, ನೂರು ಸುಳಿ, ನೂರು ಚುಕ್ಕಿ, ಮತ್ತು ನೂರು ಕಣ್ಣಿನ ಆಕೃತಿಗಳಿಂದ ಕೂಡಿದ ಅಭೇದ್ಯ ಕವಚವನ್ನು ಧರಿಸಿದನು.

04030013a ಉತ್ಸೇಧೇ ಯಸ್ಯ ಪದ್ಮಾನಿ ಶತಂ ಸೌಗಂಧಿಕಾನಿ ಚ|

04030013c ಸುವರ್ಣಪೃಷ್ಠಂ ಸೂರ್ಯಾಭಂ ಸೂರ್ಯದತ್ತೋಽಭ್ಯಹಾರಯತ್||

ಉಬ್ಬಿದ ಭಾಗದಲ್ಲಿ ನೂರು ಸೌಗಂಧಿಕ ಕಮಲಪುಷ್ಪಗಳನ್ನು ಹೊಂದಿದ್ದ, ಸುವರ್ಣ ಖಚಿತವೂ ಸೂರ್ಯಸಮಾನವೂ ಆದ ಕವಚವನ್ನು ಸೂರ್ಯದತ್ತನು ತೊಟ್ಟನು.

04030014a ದೃಢಮಾಯಸಗರ್ಭಂ ತು ಶ್ವೇತಂ ವರ್ಮ ಶತಾಕ್ಷಿಮತ್|

04030014c ವಿರಾಟಸ್ಯ ಸುತೋ ಜ್ಯೇಷ್ಠೋ ವೀರಃ ಶಂಖೋಽಭ್ಯಹಾರಯತ್||

ವಿರಾಟನ ಹಿರಿಯ ಮಗ ವೀರ ಶಂಖನು ದೃಢವೂ, ಉಕ್ಕಿನಿಂದ ನಿರ್ಮಿತವೂ, ನೂರು ಕಣ್ಣುಗಳುಳ್ಳದ್ದೂ ಆದ ಬಿಳಿಯ ಕವಚವನ್ನು ತೊಟ್ಟನು.

04030015a ಶತಶಶ್ಚ ತನುತ್ರಾಣಿ ಯಥಾಸ್ವಾನಿ ಮಹಾರಥಾಃ|

04030015c ಯೋತ್ಸ್ಯಮಾನಾಭ್ಯನಹ್ಯಂತ ದೇವರೂಪಾಃ ಪ್ರಹಾರಿಣಃ||

ಹೀಗೆ ಆ ನೂರಾರು ದೇವಸದೃಶ ಮಹಾರಥಿ ಯೋಧರು ಯುದ್ಧೋತ್ಸಾಹವುಳ್ಳವರಾಗಿ ತಮತಮಗೆ ತಕ್ಕ ಕವಚಗಳನ್ನು ತೊಟ್ಟರು.

04030016a ಸೂಪಸ್ಕರೇಷು ಶುಭ್ರೇಷು ಮಹತ್ಸು ಚ ಮಹಾರಥಾಃ|

04030016c ಪೃಥಕ್ಕಾಂಚನಸಂನಾಹಾನ್ರಥೇಷ್ವಶ್ವಾನಯೋಜಯನ್||

ಆ ಮಹಾರಥರು ಯುದ್ಧ ಸಾಮಗ್ರಿಗಳಿಂದ ತುಂಬಿದ ಶುಭ್ರ, ಶ್ರೇಷ್ಠ ರಥಗಳಿಗೆ ಚಿನ್ನದ ಕವಚಗಳ ಕುದುರೆಗಳನ್ನು ಹೂಡಿದರು.

04030017a ಸೂರ್ಯಚಂದ್ರಪ್ರತೀಕಾಶೋ ರಥೇ ದಿವ್ಯೇ ಹಿರಣ್ಮಯಃ|

04030017c ಮಹಾನುಭಾವೋ ಮತ್ಸ್ಯಸ್ಯ ಧ್ವಜ ಉಚ್ಛಿಶ್ರಿಯೇ ತದಾ||

ಆಗ ವಿರಾಟನ ದಿವ್ಯ ರಥದ ಮೇಲೆ ಸೂರ್ಯ-ಚಂದ್ರ ಸಮಾನ ಶ್ರೇಷ್ಠ ಚಿನ್ನದ ಬಾವುಟವನ್ನು ಹಾರಿಸಲಾಯಿತು.

04030018a ಅಥಾನ್ಯಾನ್ವಿವಿಧಾಕಾರಾನ್ಧ್ವಜಾನ್ ಹೇಮವಿಭೂಷಿತಾನ್|

04030018c ಯಥಾಸ್ವಂ ಕ್ಷತ್ರಿಯಾಃ ಶೂರಾ ರಥೇಷು ಸಮಯೋಜಯನ್||

ಬಳಿಕ ಆ ಕ್ಷತ್ರಿಯ ಶೂರರು ಚಿನ್ನದಿಂದ ಅಲಂಕೃತವಾದ ವಿವಿಧಾಕಾರಗಳ ಇತರ ತಮ್ಮ ತಮ್ಮ ಬಾವುಟಗಳನ್ನು ರಥಗಳ ಮೇಲೆ ಕಟ್ಟಿದರು.

04030019a ಅಥ ಮತ್ಸ್ಯೋಽಬ್ರವೀದ್ರಾಜಾ ಶತಾನೀಕಂ ಜಘನ್ಯಜಂ|

04030019c ಕಂಕಬಲ್ಲವಗೋಪಾಲಾ ದಾಮಗ್ರನ್ಥಿಶ್ಚ ವೀರ್ಯವಾನ್|

04030019e ಯುಧ್ಯೇಯುರಿತಿ ಮೇ ಬುದ್ಧಿರ್ವರ್ತತೇ ನಾತ್ರ ಸಂಶಯಃ||

ಅನಂತರ ಮತ್ಸ್ಯರಾಜನು ತಮ್ಮ ಶತಾನೀಕನಿಗೆ ಹೇಳಿದನು: “ಕಂಕ, ವಲ್ಲವ, ಗೋಪಾಲ, ವೀರ್ಯವಂತ ದಾಮಗ್ರಂಥಿ ಇವರೂ ಕೂಡ ಯುದ್ಧಮಾಡುವವರೆಂದು ನನ್ನ ಬುದ್ಧಿಗೆ ತೋರುತ್ತದೆ. ಇದರಲ್ಲಿ ಸಂಶಯವಿಲ್ಲ.

04030020a ಏತೇಷಾಮಪಿ ದೀಯಂತಾಂ ರಥಾ ಧ್ವಜಪತಾಕಿನಃ|

04030020c ಕವಚಾನಿ ವಿಚಿತ್ರಾಣಿ ದೃಢಾನಿ ಚ ಮೃದೂನಿ ಚ|

04030020e ಪ್ರತಿಮುಂಚಂತು ಗಾತ್ರೇಷು ದೀಯಂತಾಮಾಯುಧಾನಿ ಚ||

ಧ್ವಜಪತಾಕೆಗಳಿಂದ ಕೂಡಿದ ರಥಗಳನ್ನು ಅವರಿಗೂ ಕೊಡು. ಸುಂದರವೂ ದೃಢವೂ ಮೃದುವೂ ಆದ ಕವಚಗಳನ್ನು ಅವರು ಶರೀರಗಳಲ್ಲಿ ಧರಿಸಿಕೊಳ್ಳಲಿ. ಅವರಿಗೆ ಆಯುಧಗಳನ್ನೂ ಕೊಡು.

04030021a ವೀರಾಂಗರೂಪಾಃ ಪುರುಷಾ ನಾಗರಾಜಕರೋಪಮಾಃ|

04030021c ನೇಮೇ ಜಾತು ನ ಯುಧ್ಯೇರನ್ನಿತಿ ಮೇ ಧೀಯತೇ ಮತಿಃ||

ವೀರೋಚಿತವಾದ ಅಂಗ ಮತ್ತು ರೂಪವುಳ್ಳವರೂ, ಗಜರಾಜನ ಸೊಂಡಿಲಿನಂತಹ ತೋಳುಗಳುಳ್ಳವರೂ ಆದ ಆ ಪುರುಷರು ಯುದ್ಧಮಾಡಲಾರರೆಂದು ನನ್ನ ಬುದ್ಧಿಗೆ ತೋರುವುದಿಲ್ಲ.”

04030022a ಏತಚ್ಚ್ರುತ್ವಾ ತು ನೃಪತೇರ್ವಾಕ್ಯಂ ತ್ವರಿತಮಾನಸಃ|

04030022c ಶತಾನೀಕಸ್ತು ಪಾರ್ಥೇಭ್ಯೋ ರಥಾನ್ರಾಜನ್ಸಮಾದಿಶತ್|

04030022e ಸಹದೇವಾಯ ರಾಜ್ಞೇ ಚ ಭೀಮಾಯ ನಕುಲಾಯ ಚ|||

ರಾಜ! ದೊರೆಯ ಆ ಮಾತನ್ನು ಕೇಳಿದ ಶೀಘ್ರಬುದ್ಧಿ ಶತಾನೀಕನು ಪಾಂಡವರಿಗೆ - ಸಹದೇವ, ರಾಜ ಯುಧಿಷ್ಠಿರ, ಭೀಮ ಮತ್ತು ನಕುಲರಿಗೆ ರಥಗಳನ್ನು ಕೊಡುವಂತೆ ಆಜ್ಞಾಪಿಸಿದನು.

04030023a ತಾನ್ಪ್ರಹೃಷ್ಟಾಸ್ತತಃ ಸೂತಾ ರಾಜಭಕ್ತಿಪುರಸ್ಕೃತಾಃ|

04030023c ನಿರ್ದಿಷ್ಟಾನ್ನರದೇವೇನ ರಥಾಂ ಶೀಘ್ರಮಯೋಜಯನ್||

ಬಳಿಕ ಸೂತರು ಹರ್ಷಿತರಾಗಿ, ರಾಜಭಕ್ತಿಪುರಸ್ಸರವಾಗಿ, ದೊರೆಯು ನಿರ್ದಿಷ್ಟಪಡಿಸಿದ ರಥಗಳನ್ನು ಬೇಗ ಸಜ್ಜುಗೊಳಿಸಿದರು.

04030024a ಕವಚಾನಿ ವಿಚಿತ್ರಾಣಿ ದೃಢಾನಿ ಚ ಮೃದೂನಿ ಚ|

04030024c ವಿರಾಟಃ ಪ್ರಾದಿಶದ್ಯಾನಿ ತೇಷಾಮಕ್ಲಿಷ್ಟಕರ್ಮಣಾಂ|

04030024e ತಾನ್ಯಾಮುಚ್ಯ ಶರೀರೇಷು ದಂಶಿತಾಸ್ತೇ ಪರಂತಪಾಃ||

ಸುಂದರವೂ ದೃಢವೂ ಮೃದುವೂ ಆದ ಕವಚಗಳನ್ನು ಅನಾಯಾಸವಾಗಿ ಕೆಲಸಮಾಡಬಲ್ಲಂಥ ಆ ಪಾಂಡವರಿಗೆ ಕೊಡುವಂತೆ ವಿರಾಟನು ಅಪ್ಪಣೆ ಮಾಡಿದನು. ಅವುಗಳನ್ನು ಬಿಚ್ಚಿ ಆ ಶತ್ರುನಾಶಕರ ಮೈಗಳಿಗೆ ತೊಡಿಸಲಾಯಿತು.

04030025a ತರಸ್ವಿನಶ್ಚನ್ನರೂಪಾಃ ಸರ್ವೇ ಯುದ್ಧವಿಶಾರದಾಃ|

04030025c ವಿರಾಟಮನ್ವಯುಃ ಪಶ್ಚಾತ್ಸಹಿತಾಃ ಕುರುಪುಂಗವಾಃ|

04030025e ಚತ್ವಾರೋ ಭ್ರಾತರಃ ಶೂರಾಃ ಪಾಂಡವಾಃ ಸತ್ಯವಿಕ್ರಮಾಃ||

ವೇಷ ಮರೆಸಿಕೊಂಡವರೂ, ಶಕ್ತರೂ, ಯುದ್ಧವಿಶಾರದರೂ, ಕುರುಶ್ರೇಷ್ಠರೂ, ಶೂರರೂ, ಸತ್ಯವಿಕ್ರಮರೂ ಆದ ಆ ಎಲ್ಲ ನಾಲ್ವರು ಪಾಂಡವ ಸಹೋದರರು ಒಟ್ಟಿಗೆ ವಿರಾಟನನ್ನು ಹಿಂಬಾಲಿಸಿದರು.

04030026a ಭೀಮಾಶ್ಚ ಮತ್ತಮಾತಂಗಾಃ ಪ್ರಭಿನ್ನಕರಟಾಮುಖಾಃ|

04030026c ಕ್ಷರಂತ ಇವ ಜೀಮೂತಾಃ ಸುದಂತಾಃ ಷಷ್ಟಿಹಾಯನಾಃ||

04030027a ಸ್ವಾರೂಢಾ ಯುದ್ಧಕುಶಲೈಃ ಶಿಕ್ಷಿತೈರ್ಹಸ್ತಿಸಾದಿಭಿಃ|

04030027c ರಾಜಾನಮನ್ವಯುಃ ಪಶ್ಚಾಚ್ಚಲಂತ ಇವ ಪರ್ವತಾಃ||

ಆಮೇಲೆ, ಭಯಂಕರವಾದ, ಒಳ್ಳೆಯ ದಂತಗಳನ್ನುಳ್ಳ, ಅರುವತ್ತು ವರ್ಷ ತುಂಬಿದ, ಒಡೆದ ಕಪೋಲಗಳ ಮದ್ದಾನೆಗಳು ಮೋಡಗಳಂತೆ ಮದೋದಕವನ್ನು ಸುರಿಸುತ್ತ ತಮ್ಮ ಮೇಲೇರಿದ ಯುದ್ಧಕುಶಲರಿಂದಲೂ ಸುಶಿಕ್ಷಿತರಾದ ಮಾವಟಿಗರಿಂದಲೂ ಕೂಡಿ ಚಲಿಸುವ ಪರ್ವತಗಳಂತೆ ರಾಜನನ್ನು ಅನುಸರಿಸಿದವು.

04030028a ವಿಶಾರದಾನಾಂ ವಶ್ಯಾನಾಂ ಹೃಷ್ಟಾನಾಂ ಚಾನುಯಾಯಿನಾಂ|

04030028c ಅಷ್ಟೌ ರಥಸಹಸ್ರಾಣಿ ದಶ ನಾಗಶತಾನಿ ಚ|

04030028e ಷಷ್ಟಿಶ್ಚಾಶ್ವಸಹಸ್ರಾಣಿ ಮತ್ಸ್ಯಾನಾಮಭಿನಿರ್ಯಯುಃ||

ವಿಶಾರದರೂ, ವಿಧೇಯರೂ, ಸಂತುಷ್ಟರೂ ಆದ ಮತ್ಸ್ಯನ ಅನುಯಾಯಿಗಳಿಗೆ ಸೇರಿದ ಎಂಟುಸಾವಿರ ರಥಗಳೂ, ಒಂದು ಸಾವಿರ ಆನೆಗಳೂ, ಅರವತ್ತು ಸಾವಿರ ಕುದುರೆಗಳೂ ಹಿಂದೆ ಸಾಗಿದವು.

04030029a ತದನೀಕಂ ವಿರಾಟಸ್ಯ ಶುಶುಭೇ ಭರತರ್ಷಭ|

04030029c ಸಂಪ್ರಯಾತಂ ಮಹಾರಾಜ ನಿನೀಷಂತಂ ಗವಾಂ ಪದಂ||

ಭರತರ್ಷಭ! ಮಹಾರಾಜ! ಗೋವುಗಳ ಹೆಜ್ಜೆಗಳನ್ನು ಅನುಸರಿಸುತ್ತಾ ಸಾಗುತ್ತಿದ್ದ ವಿರಾಟನ ಆ ಸೈನ್ಯವು ಶೋಭಿಸುತ್ತಿತ್ತು.

04030030a ತದ್ಬಲಾಗ್ರ್ಯಂ ವಿರಾಟಸ್ಯ ಸಂಪ್ರಸ್ಥಿತಮಶೋಭತ|

04030030c ದೃಢಾಯುಧಜನಾಕೀರ್ಣಂ ಗಜಾಶ್ವರಥಸಂಕುಲಂ||

ಮುಂದೆ ಸಾಗುತ್ತಿದ್ದ ವಿರಾಟನ ಆ ಶ್ರೇಷ್ಠ ಸೈನ್ಯವು ದೃಢ ಆಯುಧಗಳನ್ನು ಹಿಡಿದ ಜನರಿಂದಲೂ ಆನೆ ಕುದುರೆ ರಥಗಳಿಂದಲೂ ತುಂಬಿ ಕಂಗೊಳಿಸುತ್ತಿತ್ತು.”

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ದಕ್ಷಿಣಗೋಗ್ರಹೇ ಮತ್ಸ್ಯರಾಜರಣೋದ್ಯೋಗೇ ತ್ರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ದಕ್ಷಿಣಗೋಗ್ರಹದಲ್ಲಿ ಮತ್ಸ್ಯರಾಜರಣೋದ್ಯೋಗದಲ್ಲಿ ಮೂವತ್ತನೆಯ ಅಧ್ಯಾಯವು.

Related image

Comments are closed.