ವಿರಾಟ ಪರ್ವ: ಗೋಹರಣ ಪರ್ವ
೨೭
ಭೀಷ್ಮನ ಸಲಹೆ
ಯುಧಿಷ್ಠಿರನಿರುವ ರಾಜ್ಯವು ಹೆಚ್ಚು ಅಭಿವೃದ್ಧಿಯನ್ನು ಹೊಂದಿರುತ್ತದೆಯೆಂದೂ (೧-೨೪), ಆದರೆ ಆ ಧರ್ಮಾತ್ಮನು ಬ್ರಾಹ್ಮಣರಿಗೂ ಕಾಣದಂತಾಗಿದ್ದಾನೆಂದು ಭೀಷ್ಮನು ಸೂಚಿಸಿದುದು (೨೫-೨೮).
04027001 ವೈಶಂಪಾಯನ ಉವಾಚ|
04027001a ತತಃ ಶಾಂತನವೋ ಭೀಷ್ಮೋ ಭರತಾನಾಂ ಪಿತಾಮಹಃ|
04027001c ಶ್ರುತವಾನ್ದೇಶಕಾಲಜ್ಞಸ್ತತ್ತ್ವಜ್ಞಃ ಸರ್ವಧರ್ಮವಿತ್||
04027002a ಆಚಾರ್ಯವಾಕ್ಯೋಪರಮೇ ತದ್ವಾಕ್ಯಮಭಿಸಂದಧತ್|
04027002c ಹಿತಾರ್ಥಂ ಸ ಉವಾಚೇಮಾಂ ಭಾರತೀಂ ಭಾರತಾನ್ಪ್ರತಿ||
ವೈಶಂಪಾಯನನು ಹೇಳಿದನು: “ಆಚಾರ್ಯನ ಮಾತು ನಿಂತ ಬಳಿಕ ಭರತರ ಪಿತಾಮಹ, ವೇದಪಾರಂಗತ, ದೇಶಕಾಲಜ್ಞ, ತತ್ತ್ವಜ್ಞ, ಸರ್ವಧರ್ಮಜ್ಞ, ಶಂತನುಪುತ್ರ ಭೀಷ್ಮನು ಅದಕ್ಕೆ ಒಪ್ಪಿಗೆ ಕೊಡುತ್ತ ಅವರ ಹಿತಾರ್ಥವಾಗಿ ಭಾರತರನ್ನು ಕುರಿತು ಈ ಮಾತುಗಳನ್ನಾಡಿದನು.
04027003a ಯುಧಿಷ್ಠಿರೇ ಸಮಾಸಕ್ತಾಂ ಧರ್ಮಜ್ಞೇ ಧರ್ಮಸಂಶ್ರಿತಾಂ|
04027003c ಅಸತ್ಸು ದುರ್ಲಭಾಂ ನಿತ್ಯಂ ಸತಾಂ ಚಾಭಿಮತಾಂ ಸದಾ|
04027003e ಭೀಷ್ಮಃ ಸಮವದತ್ತತ್ರ ಗಿರಂ ಸಾಧುಭಿರರ್ಚಿತಾಂ||
ಧರ್ಮವನ್ನು ಆಶ್ರಯಿಸಿದ ಧರ್ಮಜ್ಞ ಯುಧಿಷ್ಠಿರನಲ್ಲಿ ಆಸಕ್ತಿ ತೋರುವ ದುರ್ಜನರಿಗೆ ದುರ್ಲಭವೂ ಸತ್ಪುರುಷರಿಗೆ ಸದಾ ಸಮ್ಮತವೂ ಸಾಧುಪೂಜಿತವೂ ಆದ ಮಾತನ್ನು ಭೀಷ್ಮನು ಅಲ್ಲಿ ಆಡಿದನು:
04027004a ಯಥೈಷ ಬ್ರಾಹ್ಮಣಃ ಪ್ರಾಹ ದ್ರೋಣಃ ಸರ್ವಾರ್ಥತತ್ತ್ವವಿತ್|
04027004c ಸರ್ವಲಕ್ಷಣಸಂಪನ್ನಾ ನಾಶಂ ನಾರ್ಹಂತಿ ಪಾಂಡವಾಃ||
“ಸರ್ವಾರ್ಥತತ್ತ್ವವನ್ನೂ ಬಲ್ಲ ಈ ಬ್ರಾಹ್ಮಣ ದ್ರೋಣನು ಹೇಳಿದ್ದುದು ಸರಿ. ಸರ್ವಲಕ್ಷಣಸಂಪನ್ನರಾದ ಪಾಂಡವರು ನಾಶಹೊಂದುವವರಲ್ಲ.
04027005a ಶ್ರುತವೃತ್ತೋಪಸಂಪನ್ನಾಃ ಸಾಧುವ್ರತಸಮನ್ವಿತಾಃ|
04027005c ವೃದ್ಧಾನುಶಾಸನೇ ಮಗ್ನಾಃ ಸತ್ಯವ್ರತಪರಾಯಣಾಃ||
04027006a ಸಮಯಂ ಸಮಯಜ್ಞಾಸ್ತೇ ಪಾಲಯಂತಃ ಶುಚಿವ್ರತಾಃ|
04027006c ನಾವಸೀದಿತುಮರ್ಹಂತಿ ಉದ್ವಹಂತಃ ಸತಾಂ ಧುರಂ||
ವೇದಜ್ಞರೂ, ಶೀಲಸಂಪನ್ನರೂ, ಒಳ್ಳೆಯ ವ್ರತಗಳನ್ನುಳ್ಳವರೂ, ಹಿರಿಯರ ಅನುಶಾಸನಕ್ಕೆ ನಿಷ್ಠರೂ, ಸತ್ಯವ್ರತಪರಾಯಣರೂ, ಸಮಯಜ್ಞರೂ, ಕಟ್ಟುಪಾಡನ್ನು ಪಾಲಿಸುವವರೂ, ಶುಚಿವ್ರತರೂ, ಸತ್ಪುರುಷರ ಕರ್ತವ್ಯವನ್ನು ನಿರ್ವಹಿಸುವವರೂ ಆದ ಅವರು ನಾಶಗೊಳ್ಳತಕ್ಕವರಲ್ಲ.
04027007a ಧರ್ಮತಶ್ಚೈವ ಗುಪ್ತಾಸ್ತೇ ಸ್ವವೀರ್ಯೇಣ ಚ ಪಾಂಡವಾಃ|
04027007c ನ ನಾಶಮಧಿಗಚ್ಛೇಯುರಿತಿ ಮೇ ಧೀಯತೇ ಮತಿಃ||
ಧರ್ಮದಿಂದಲೂ ಸ್ವಪರಾಕ್ರಮದಿಂದಲೂ ರಕ್ಷಿತರಾದ ಆ ಪಾಂಡವರು ನಾಶಗೊಳ್ಳುವುದಿಲ್ಲ ಎಂದು ನನ್ನ ಬುದ್ಧಿಗೆ ತೋರುತ್ತದೆ.
04027008a ತತ್ರ ಬುದ್ಧಿಂ ಪ್ರಣೇಷ್ಯಾಮಿ ಪಾಂಡವಾನ್ಪ್ರತಿ ಭಾರತ|
04027008c ನ ತು ನೀತಿಃ ಸುನೀತಸ್ಯ ಶಕ್ಯತೇಽನ್ವೇಷಿತುಂ ಪರೈಃ||
ಆದ್ದರಿಂದ ಭಾರತ! ಪಾಂಡವರನ್ನು ಕುರಿತ ನನ್ನ ಆಲೋಚನೆಗಳನ್ನು ಮುಂದಿಡುತ್ತೇನೆ. ನೀತಿಜ್ಞನ ನೀತಿಯನ್ನು ಕಂಡುಹಿಡಿಯುವುದು ಶತ್ರುಗಳಿಗೆ ಸಾಧ್ಯವಿಲ್ಲ.
04027009a ಯತ್ತು ಶಕ್ಯಮಿಹಾಸ್ಮಾಭಿಸ್ತಾನ್ವೈ ಸಂಚಿಂತ್ಯ ಪಾಂಡವಾನ್|
04027009c ಬುದ್ಧ್ಯಾ ಪ್ರವಕ್ತುಂ ನ ದ್ರೋಹಾತ್ಪ್ರವಕ್ಷ್ಯಾಮಿ ನಿಬೋಧ ತತ್||
ಆ ಪಾಂಡವರಿಗೆ ಈಗ ನಾವೇನು ಮಾಡಲು ಸಾಧ್ಯವೆಂಬುದನ್ನು ಬುದ್ಧಿಯಿಂದ ಚಿಂತಿಸಿ ಹೇಳುತ್ತೇನೆ. ದ್ರೋಹದಿಂದ ಹೇಳುವುದಿಲ್ಲ. ಇದನ್ನು ತಿಳಿದುಕೋ.
04027010a ಸಾ ತ್ವಿಯಂ ಸಾಧು ವಕ್ತವ್ಯಾ ನ ತ್ವನೀತಿಃ ಕಥಂ ಚನ|
04027010c ವೃದ್ಧಾನುಶಾಸನೇ ತಾತ ತಿಷ್ಠತಃ ಸತ್ಯಶೀಲಿನಃ||
ಮಗು! ಹಿರಿಯರ ಅನುಶಾಸನವನ್ನು ಪಾಲಿಸುವ ಸತ್ಯಶೀಲನಿಗೆ ಎಂದೂ ಒಳ್ಳೆಯ ನೀತಿಯನ್ನು ಹೇಳಬೇಕೇ ಹೊರತು ಅನೀತಿಯನ್ನಲ್ಲ.
04027011a ಅವಶ್ಯಂ ತ್ವಿಹ ಧೀರೇಣ ಸತಾಂ ಮಧ್ಯೇ ವಿವಕ್ಷತಾ|
04027011c ಯಥಾಮತಿ ವಿವಕ್ತವ್ಯಂ ಸರ್ವಶೋ ಧರ್ಮಲಿಪ್ಸಯಾ||
ಸಜ್ಜನರ ನಡುವೆ ಮಾತನಾಡುವ ಧೀರನು ಎಲ್ಲ ಸಂದರ್ಭಗಳಲ್ಲಿಯೂ ಅವಶ್ಯವಾಗಿ ತನ್ನ ಬುದ್ಧಿಗೆ ತೋಚಿದಂತೆ ಧರ್ಮಾರ್ಜನೆಯ ಆಸೆಯಿಂದ ಮಾತನಾಡಬೇಕು.
04027012a ತತ್ರ ನಾಹಂ ತಥಾ ಮನ್ಯೇ ಯಥಾಯಮಿತರೋ ಜನಃ|
04027012c ಪುರೇ ಜನಪದೇ ವಾಪಿ ಯತ್ರ ರಾಜಾ ಯುಧಿಷ್ಠಿರಃ||
04027013a ನಾಸೂಯಕೋ ನ ಚಾಪೀರ್ಷುರ್ನಾತಿವಾದೀ ನ ಮತ್ಸರೀ|
04027013c ಭವಿಷ್ಯತಿ ಜನಸ್ತತ್ರ ಸ್ವಂ ಸ್ವಂ ಧರ್ಮಮನುವ್ರತಃ||
ನಾನು ಈಗ ಈ ಇತರೆ ಜನರಂತೆ ಭಾವಿಸುವುದಿಲ್ಲ. ಪುರದಲ್ಲಾಗಲೀ ಜನಪದದಲ್ಲಾಗಲೀ ದೊರೆ ಯುಧಿಷ್ಠಿರನಿರುವಲ್ಲಿ ಅಸೂಯೆ ಉಳ್ಳವನಾಗಲೀ, ಈರ್ಷ್ಯೆ ಉಳ್ಳವನಾಗಲೀ, ಅತಿಮಾತಿನವನಾಗಲೀ, ಹೊಟ್ಟೆಕಿಚ್ಚಿನವನಾಗಲೀ ಇರುವುದಿಲ್ಲ. ಅಲ್ಲಿ ಪ್ರತಿಯೊಬ್ಬನೂ ಧರ್ಮವನ್ನು ಆಚರಿಸುತ್ತಿರುತ್ತಾನೆ.
04027014a ಬ್ರಹ್ಮಘೋಷಾಶ್ಚ ಭೂಯಾಂಸಃ ಪೂರ್ಣಾಹುತ್ಯಸ್ತಥೈವ ಚ|
04027014c ಕ್ರತವಶ್ಚ ಭವಿಷ್ಯಂತಿ ಭೂಯಾಂಸೋ ಭೂರಿದಕ್ಷಿಣಾಃ||
ಅಲ್ಲಿ ವೇದಘೋಷಗಳೂ, ಅಂತೆಯೇ ವಿಪುಲ ಪೂರ್ಣಾಹುತಿಗಳೂ, ಯಾಗಗಳೂ, ಭೂರಿದಕ್ಷಿಣೆಗಳು ಇರುತ್ತವೆ.
04027015a ಸದಾ ಚ ತತ್ರ ಪರ್ಜನ್ಯಃ ಸಮ್ಯಗ್ವರ್ಷೀ ನ ಸಂಶಯಃ|
04027015c ಸಂಪನ್ನಸಸ್ಯಾ ಚ ಮಹೀ ನಿರೀತೀಕಾ ಭವಿಷ್ಯತಿ||
ಅಲ್ಲಿ ಯಾವಾಗಲೂ ಮೋಡಗಳು ನಿಸ್ಸಂದೇಹವಾಗಿ ಸಮೃದ್ಧ ಮಳೆ ಸುರಿಸುತ್ತವೆ. ಭೂಮಿ ಸಸ್ಯಸಂಪನ್ನವಾಗಿ ಈತಿಬಾಧೆಗಳಿಲ್ಲದೆ ಇರುತ್ತದೆ.
04027016a ರಸವಂತಿ ಚ ಧಾನ್ಯಾನಿ ಗುಣವಂತಿ ಫಲಾನಿ ಚ|
04027016c ಗಂಧವಂತಿ ಚ ಮಾಲ್ಯಾನಿ ಶುಭಶಬ್ದಾ ಚ ಭಾರತೀ||
ಧಾನ್ಯಗಳು ರಸದಿಂದಲೂ, ಫಲಗಳು ಗುಣಗಳಿಂದಲೂ, ಮಾಲೆಗಳು ಗಂಧದಿಂದಲೂ, ಮಾತುಗಳು ಶುಭಶಬ್ಧಗಳಿಂದಲೂ ಕೂಡಿರುತ್ತವೆ.
04027017a ವಾಯುಶ್ಚ ಸುಖಸಂಸ್ಪರ್ಶೋ ನಿಷ್ಪ್ರತೀಪಂ ಚ ದರ್ಶನಂ|
04027017c ಭಯಂ ನಾಭ್ಯಾವಿಶೇತ್ತತ್ರ ಯತ್ರ ರಾಜಾ ಯುಧಿಷ್ಠಿರಃ||
ರಾಜ ಯುಧಿಷ್ಠಿರನಿರುವಲ್ಲಿ ಗಾಳಿಯು ಸುಖಸ್ಪರ್ಶ ಹಿತಕರವಾಗಿರುತ್ತದೆ. ಜನರ ಸಮಾಗಮಗಳು ನಿರಾತಂಕವಾಗಿರುತ್ತವೆ. ಭಯವು ಅಲ್ಲಿಗೆ ಪ್ರವೇಶಿಸುವುದಿಲ್ಲ.
04027018a ಗಾವಶ್ಚ ಬಹುಲಾಸ್ತತ್ರ ನ ಕೃಶಾ ನ ಚ ದುರ್ದುಹಾಃ|
04027018c ಪಯಾಂಸಿ ದಧಿಸರ್ಪೀಂಷಿ ರಸವಂತಿ ಹಿತಾನಿ ಚ||
ಅಲ್ಲಿ ಬೇಕಾದಷ್ಟು ಹಸುಗಳು ಇರುತ್ತವೆ. ಅವು ಬಡಕಲಾಗಿರುವುದಿಲ್ಲ. ಹಾಲು ಕೊಡದಿರುವುದಿಲ್ಲ. ಹಾಲು, ಮೊಸರು, ತುಪ್ಪಗಳು ಸವಿಯಾಗಿಯೂ ಹಿತವಾಗಿಯೂ ಇರುತ್ತವೆ.
04027019a ಗುಣವಂತಿ ಚ ಪಾನಾನಿ ಭೋಜ್ಯಾನಿ ರಸವಂತಿ ಚ|
04027019c ತತ್ರ ದೇಶೇ ಭವಿಷ್ಯಂತಿ ಯತ್ರ ರಾಜಾ ಯುಧಿಷ್ಠಿರಃ||
ಯುಧಿಷ್ಠಿರನಿರುವ ದೇಶದಲ್ಲಿ ಪಾನೀಯಗಳು ಗುಣಯುಕ್ತವಾಗಿಯೂ ಭೋಜ್ಯಗಳು ರಸವತ್ತಾಗಿಯೂ ಇರುತ್ತವೆ.
04027020a ರಸಾಃ ಸ್ಪರ್ಶಾಶ್ಚ ಗಂಧಾಶ್ಚ ಶಬ್ದಾಶ್ಚಾಪಿ ಗುಣಾನ್ವಿತಾಃ|
04027020c ದೃಶ್ಯಾನಿ ಚ ಪ್ರಸನ್ನಾನಿ ಯತ್ರ ರಾಜಾ ಯುಧಿಷ್ಠಿರಃ||
ಯುಧಿಷ್ಠಿರನಿರುವಲ್ಲಿ ರಸ, ಸ್ಪರ್ಶ, ಗಂಧ, ಶಬ್ಧಗಳು ಗುಣಾನ್ವಿತವಾಗಿಯೂ ದೃಶ್ಯಗಳು ಪ್ರಸನ್ನವಾಗಿಯೂ ಇರುತ್ತವೆ.
04027021a ಸ್ವೈಃ ಸ್ವೈರ್ಗುಣೈಃ ಸುಸಮ್ಯುಕ್ತಾಸ್ತಸ್ಮಿನ್ವರ್ಷೇ ತ್ರಯೋದಶೇ|
04027021c ದೇಶೇ ತಸ್ಮಿನ್ಭವಿಷ್ಯಂತಿ ತಾತ ಪಾಂಡವಸಮ್ಯುತೇ||
ಅಯ್ಯಾ! ಈ ಹದಿಮೂರನೆಯ ವರ್ಷದಲ್ಲಿ ಪಾಂಡವರಿರುವ ದೇಶದಲ್ಲಿ ಜನರು ತಮ್ಮ ತಮ್ಮ ಗುಣಧರ್ಮಗಳಿಂದ ಕೂಡಿರುತ್ತಾರೆ.
04027022a ಸಂಪ್ರೀತಿಮಾಂ ಜನಸ್ತತ್ರ ಸಂತುಷ್ಟಃ ಶುಚಿರವ್ಯಯಃ|
04027022c ದೇವತಾತಿಥಿಪೂಜಾಸು ಸರ್ವಭೂತಾನುರಾಗವಾನ್||
ಅಲ್ಲಿ ಜನರು ಸಂಪ್ರೀತರೂ, ಸಂತುಷ್ಟರೂ, ಶುಚಿಗಳೂ, ಕ್ಷೀಣಸ್ಥಿತಿ ಇಲ್ಲದವರೂ, ದೇವತೆಗಳ ಮತ್ತು ಅತಿಥಿಗಳ ಪೂಜೆಗಳಲ್ಲಿ ತೊಡಗಿದವರೂ, ಸರ್ವಜೀವಿಗಳಲ್ಲಿ ಅನುರಾಗವುಳ್ಳವರೂ ಆಗಿರುತ್ತಾರೆ.
04027023a ಇಷ್ಟದಾನೋ ಮಹೋತ್ಸಾಹಃ ಶಶ್ವದ್ಧರ್ಮಪರಾಯಣಃ|
04027023c ಅಶುಭದ್ವಿಟ್ ಶುಭಪ್ರೇಪ್ಸುರ್ನಿತ್ಯಯಜ್ಞಃ ಶುಭವ್ರತಃ|
04027023e ಭವಿಷ್ಯತಿ ಜನಸ್ತತ್ರ ಯತ್ರ ರಾಜಾ ಯುಧಿಷ್ಠಿರಃ||
ರಾಜ ಯುಧಿಷ್ಠಿರನಿರುವಲ್ಲಿ ಜನರು ದಾನ ಕೊಡುವುದರಲ್ಲಿ ಆಸಕ್ತರೂ, ಮಹೋತ್ಸಾಹವುಳ್ಳವರೂ, ಸದಾ ಧರ್ಮ ಪರಾಯಣರೂ, ಅಶುಭವನ್ನು ದ್ವೇಷಿಸುವವರೂ, ಶುಭಾಕಾಂಕ್ಷಿಗಳೂ, ನಿತ್ಯ ಯಜ್ಞಮಾಡುವವರೂ, ಶುಭವ್ರತವುಳ್ಳವರೂ ಆಗಿರುತ್ತಾರೆ.
04027024a ತ್ಯಕ್ತವಾಕ್ಯಾನೃತಸ್ತಾತ ಶುಭಕಲ್ಯಾಣಮಂಗಲಃ|
04027024c ಶುಭಾರ್ಥೇಪ್ಸುಃ ಶುಭಮತಿರ್ಯತ್ರ ರಾಜಾ ಯುಧಿಷ್ಠಿರಃ|
04027024e ಭವಿಷ್ಯತಿ ಜನಸ್ತತ್ರ ನಿತ್ಯಂ ಚೇಷ್ಟಪ್ರಿಯವ್ರತಃ||
ಅಯ್ಯಾ! ರಾಜ ಯುಧಿಷ್ಠಿರನಿರುವಲ್ಲಿ ಜನರು ಸುಳ್ಳುಹೇಳುವುದನ್ನು ತೊರೆದವರೂ, ಶುಭ ಕಲ್ಯಾಣ ಮಂಗಳ ಕಾರ್ಯಪರರೂ, ಶುಭಾರ್ಥವನ್ನು ಬಯಸುವವರೂ, ಶುಭಮತಿಗಳೂ, ಸದಾ ಪ್ರಿಯವ್ರತರ ಆಸಕ್ತರಾಗಿರುವವರೂ ಆಗಿರುತ್ತಾರೆ.
04027025a ಧರ್ಮಾತ್ಮಾ ಸ ತದಾದೃಶ್ಯಃ ಸೋಽಪಿ ತಾತ ದ್ವಿಜಾತಿಭಿಃ|
04027025c ಕಿಂ ಪುನಃ ಪ್ರಾಕೃತೈಃ ಪಾರ್ಥಃ ಶಕ್ಯೋ ವಿಜ್ಞಾತುಮಂತತಃ||
04027026a ಯಸ್ಮಿನ್ಸತ್ಯಂ ಧೃತಿರ್ದಾನಂ ಪರಾ ಶಾಂತಿರ್ಧ್ರುವಾ ಕ್ಷಮಾ|
04027026c ಹ್ರೀಃ ಶ್ರೀಃ ಕೀರ್ತಿಃ ಪರಂ ತೇಜ ಆನೃಶಂಸ್ಯಮಥಾರ್ಜವಂ||
ಅಯ್ಯಾ! ಸತ್ಯ, ಧೃತಿ, ದಾನ, ಪರಮಶಾಂತಿ, ಕ್ಷಮೆ, ಸ್ಥಿರವಾದ ಬುದ್ಧಿ, ವಿನಯ, ಸಂಪತ್ತು, ಕೀರ್ತಿ, ಪರಮ ತೇಜಸ್ಸು, ಕರುಣೆ, ಸರಳತೆಗಳು ನೆಲೆಗೊಂಡಿರುವ ಆ ಧರ್ಮಾತ್ಮನು ಕೊನೆಯದಾಗಿ ಬ್ರಾಹ್ಮಣರಿಗೂ ಕಾಣದಂತಿದ್ದಾನೆ. ಇನ್ನು ಆ ಯುಧಿಷ್ಠಿರನನ್ನು ಕಂಡುಹಿಡಿಯುವುದು ಸಾಮಾನ್ಯ ಜನರಿಗೆ ಸಾಧ್ಯವೇ?
04027027a ತಸ್ಮಾತ್ತತ್ರ ನಿವಾಸಂ ತು ಚನ್ನಂ ಸತ್ರೇಣ ಧೀಮತಃ|
04027027c ಗತಿಂ ವಾ ಪರಮಾಂ ತಸ್ಯ ನೋತ್ಸಹೇ ವಕ್ತುಮನ್ಯಥಾ||
ಆದ್ದರಿಂದ ಆ ಧೀಮಂತನು ವೇಷ ಮರೆಸಿಕೊಂಡು ವಾಸಿಸುತ್ತಿದ್ದಾನೆ. ಇದಕ್ಕಿಂತ ಶ್ರೇಷ್ಠವಾದ ಅವನ ಮಾರ್ಗದ ಕುರಿತು ನಾನು ಮತ್ತೇನನ್ನೂ ಹೇಳಲಾರೆ.
04027028a ಏವಮೇತತ್ತು ಸಂಚಿಂತ್ಯ ಯತ್ಕೃತಂ ಮನ್ಯಸೇ ಹಿತಂ|
04027028c ತತ್ಕ್ಷಿಪ್ರಂ ಕುರು ಕೌರವ್ಯ ಯದ್ಯೇವಂ ಶ್ರದ್ದಧಾಸಿ ಮೇ||
ಕೌರವ್ಯ! ನಿನಗೆ ನನ್ನಲ್ಲಿ ನಂಬಿಕೆಯಿದ್ದರೆ ಇದರ ಕುರಿತು ಹೀಗೆ ಆಲೋಚಿಸಿ, ನಿನಗೆ ಹಿತವೆನಿಸುವ ಕಾರ್ಯವನ್ನು ಬೇಗ ಮಾಡು.””
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಭೀಷ್ಮವಾಕ್ಯೇ ಸಪ್ತವಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಭೀಷ್ಮವಾಕ್ಯದಲ್ಲಿ ಇಪ್ಪತ್ತೇಳನೆಯ ಅಧ್ಯಾಯವು.