ವಿರಾಟ ಪರ್ವ: ಕೀಚಕವಧ ಪರ್ವ
೨೨
ಉಪಕೀಚಕರ ವಧೆ
ಉಪಕೀಚಕರು ಬಂದು ಕೀಚಕನ ಕೊಲೆಯಾದುದನ್ನು ನೋಡಿ, ಅಲ್ಲಿಯೇ ಇದ್ದ ದ್ರೌಪದಿಯನ್ನೂ ಅವನೊಂದಿಗೆ ಸುಡಲು ವಿರಾಟನಿಂದ ಅಪ್ಪಣೆಯನ್ನು ಪಡೆದು ಅವಳನ್ನು ಕಟ್ಟಿ ಶ್ಮಶಾನದ ಕಡೆ ಹೊರಟಿದುದು (೧-೧೦). ದ್ರೌಪದಿಯ ಕೂಗನ್ನು ಕೇಳಿ ಭೀಮನು ವೇಷ ಮರೆಸಿಕೊಂಡು ಬಂದು ಉಪಕೀಚಕರನ್ನು ಸಂಹರಿಸಿ ದ್ರೌಪದಿಯನ್ನು ಬಿಡುಗಡೆಗೊಳಿಸಿದುದು (೧೧-೩೦).
04022001 ವೈಶಂಪಾಯನ ಉವಾಚ|
04022001a ತಸ್ಮಿನ್ಕಾಲೇ ಸಮಾಗಮ್ಯ ಸರ್ವೇ ತತ್ರಾಸ್ಯ ಬಾಂಧವಾಃ|
04022001c ರುರುದುಃ ಕೀಚಕಂ ದೃಷ್ಟ್ವಾ ಪರಿವಾರ್ಯ ಸಮಂತತಃ||
ವೈಶಂಪಾಯನನು ಹೇಳಿದನು: “ಆ ಹೊತ್ತಿನಲ್ಲಿ ಅವನ ಬಾಂಧವರೆಲ್ಲ ಅಲ್ಲಿಗೆ ಬಂದು ಸುತ್ತಲೂ ನಿಂತು ಕೀಚಕನನ್ನು ನೋಡಿ ಅಳತೊಡಗಿದರು.
04022002a ಸರ್ವೇ ಸಂಹೃಷ್ಟರೋಮಾಣಃ ಸಂತ್ರಸ್ತಾಃ ಪ್ರೇಕ್ಷ್ಯ ಕೀಚಕಂ|
04022002c ತಥಾ ಸರ್ವಾಂಗಸಂಭುಗ್ನಂ ಕೂರ್ಮಂ ಸ್ಥಲ ಇವೋದ್ಧೃತಂ||
ನೆಲಕ್ಕೆತ್ತಿ ಹಾಕಿದ್ದ ಆಮೆಯಂತೆ ಎಲ್ಲ ಅಂಗಗಳೂ ಸೇರಿಹೋಗಿದ್ದ ಕೀಚಕನನ್ನು ಕಂಡು ಎಲ್ಲರೂ ರೋಮಾಂಚನಗೊಂಡು ಭೀತಿಗ್ರಸ್ತರಾದರು.
04022003a ಪೋಥಿತಂ ಭೀಮಸೇನೇನ ತಮಿಂದ್ರೇಣೇವ ದಾನವಂ|
04022003c ಸಂಸ್ಕಾರಯಿತುಮಿಚ್ಛಂತೋ ಬಹಿರ್ನೇತುಂ ಪ್ರಚಕ್ರಮುಃ||
ಇಂದ್ರನು ದಾನವನನ್ನು ಜಜ್ಜಿಹಾಕಿದಂತೆ ಭೀಮಸೇನನು ಜಜ್ಜಿಹಾಕಿದ್ದ ಅವನ ಶವವನ್ನು ಕಂಡು ಸಂಸ್ಕಾರಮಾಡಬಯಸಿ ಅವನನ್ನು ಹೊರಕ್ಕೆ ಒಯ್ಯತೊಡಗಿದರು.
04022004a ದದೃಶುಸ್ತೇ ತತಃ ಕೃಷ್ಣಾಂ ಸೂತಪುತ್ರಾಃ ಸಮಾಗತಾಃ|
04022004c ಅದೂರಾದನವದ್ಯಾಂಗೀಂ ಸ್ತಂಭಮಾಲಿಂಗ್ಯ ತಿಷ್ಠತೀಂ||
ಬಂದು ನೆರೆದಿದ್ದ ಆ ಸೂತಪುತ್ರರು ಹತ್ತಿರದಲ್ಲಿ ಕಂಬವೊಂದನ್ನು ಹಿಡಿದು ನಿಂತಿದ್ದ ಸುಂದರಾಂಗಿ ಕೃಷ್ಣೆಯನ್ನು ನೋಡಿದರು.
04022005a ಸಮವೇತೇಷು ಸೂತೇಷು ತಾನುವಾಚೋಪಕೀಚಕಃ|
04022005c ಹನ್ಯತಾಂ ಶೀಘ್ರಮಸತೀ ಯತ್ಕೃತೇ ಕೀಚಕೋ ಹತಃ||
ಸೇರಿದ್ದ ಸೂತರಲ್ಲಿ ಒಬ್ಬ ಉಪಕೀಚಕನು ಅವರಿಗೆ ಹೇಳಿದನು: “ಯಾವ ಕುಲಟೆಗಾಗಿ ಕೀಚಕನು ಹತನಾದನೋ ಅವಳನ್ನು ಶೀಘ್ರವೇ ಕೊಲ್ಲಿ.
04022006a ಅಥ ವಾ ನೇಹ ಹಂತವ್ಯಾ ದಹ್ಯತಾಂ ಕಾಮಿನಾ ಸಹ|
04022006c ಮೃತಸ್ಯಾಪಿ ಪ್ರಿಯಂ ಕಾರ್ಯಂ ಸೂತಪುತ್ರಸ್ಯ ಸರ್ವಥಾ||
ಅಥವಾ ಅವಳನ್ನು ಇಲ್ಲಿ ಕೊಲ್ಲುವುದು ಬೇಡ. ಅವಳ ಕಾಮಿಯೊಡನೆ ಸುಡೋಣ. ಮೃತನಾದ ಸೂತಪುತ್ರನಿಗೆ ಇದು ಸರ್ವಥಾ ಪ್ರಿಯವಾಗುತ್ತದೆ.”
04022007a ತತೋ ವಿರಾಟಮೂಚುಸ್ತೇ ಕೀಚಕೋಽಸ್ಯಾಃ ಕೃತೇ ಹತಃ|
04022007c ಸಹಾದ್ಯಾನೇನ ದಹ್ಯೇತ ತದನುಜ್ಞಾತುಮರ್ಹಸಿ||
ಅನಂತರ ಅವರು ವಿರಾಟನಿಗೆ ಹೇಳಿದರು: “ಇವಳಿಗಾಗಿ ಕೀಚಕನು ಹತನಾದನು. ಆದ್ದರಿಂದ ಅವನೊಡನೆ ಇವಳನ್ನೂ ಇಂದು ಸುಡಬೇಕು. ನೀನು ಅಪ್ಪಣೆ ಕೊಡತಕ್ಕದ್ದು.”
04022008a ಪರಾಕ್ರಮಂ ತು ಸೂತಾನಾಂ ಮತ್ವಾ ರಾಜಾನ್ವಮೋದತ|
04022008c ಸೈರಂಧ್ರ್ಯಾಃ ಸೂತಪುತ್ರೇಣ ಸಹ ದಾಹಂ ವಿಶಾಂ ಪತೇ||
ವಿಶಾಂಪತೇ! ಆ ಸೂತರ ಪರಾಕ್ರಮವನ್ನು ತಿಳಿದಿದ್ದ ರಾಜನು ಸೂತಪುತ್ರನೊಡನೆ ಸೈರಂಧ್ರಿಯನ್ನು ಸುಡಲು ಅನುಮತಿಯನ್ನಿತ್ತನು.
04022009a ತಾಂ ಸಮಾಸಾದ್ಯ ವಿತ್ರಸ್ತಾಂ ಕೃಷ್ಣಾಂ ಕಮಲಲೋಚನಾಂ|
04022009c ಮೋಮುಹ್ಯಮಾನಾಂ ತೇ ತತ್ರ ಜಗೃಹುಃ ಕೀಚಕಾ ಭೃಶಂ||
ಹೆದರಿ ಮೂರ್ಛೆಹೋಗುವಂತಿದ್ದ ಆ ಕಮಲೋಚನೆ ಕೃಷ್ಣೆಯನ್ನು ಆ ಕೀಚಕರು ಸಮೀಪಿಸಿ ಗಟ್ಟಿಯಾಗಿ ಹಿಡಿದುಕೊಂಡರು.
04022010a ತತಸ್ತು ತಾಂ ಸಮಾರೋಪ್ಯ ನಿಬಧ್ಯ ಚ ಸುಮಧ್ಯಮಾಂ|
04022010c ಜಗ್ಮುರುದ್ಯಮ್ಯ ತೇ ಸರ್ವೇ ಶ್ಮಶಾನಮಭಿತಸ್ತದಾ||
ಆಗ ಅವರೆಲ್ಲರೂ ಆ ಸುಮಧ್ಯಮೆಯನ್ನು ಬಿಗಿಯಾಗಿ ಕಟ್ಟಿ ಎತ್ತಿಕೊಂಡು ಶ್ಮಶಾನಾಭಿಮುಖವಾಗಿ ಹೊರಟರು.
04022011a ಹ್ರಿಯಮಾಣಾ ತು ಸಾ ರಾಜನ್ಸೂತಪುತ್ರೈರನಿಂದಿತಾ|
04022011c ಪ್ರಾಕ್ರೋಶನ್ನಾಥಮಿಚ್ಛಂತೀ ಕೃಷ್ಣಾ ನಾಥವತೀ ಸತೀ||
ರಾಜನ್! ಆ ಸೂತಪುತ್ರರು ಹೊತ್ತೊಯ್ಯುತ್ತಿದ್ದ ನಾಥವತಿ ಸತೀ ಅನಿಂದಿತೆ ಕೃಷ್ಣೇಯು ರಕ್ಷಕನನ್ನು ಬಯಸುತ್ತಾ ಗಟ್ಟಿಯಾಗಿ ಕೂಗಿದಳು.
04022012 ದ್ರೌಪದ್ಯುವಾಚ|
04022012a ಜಯೋ ಜಯಂತೋ ವಿಜಯೋ ಜಯತ್ಸೇನೋ ಜಯದ್ಬಲಃ|
04022012c ತೇ ಮೇ ವಾಚಂ ವಿಜಾನಂತು ಸೂತಪುತ್ರಾ ನಯಂತಿ ಮಾಂ||
ದ್ರೌಪದಿಯು ಹೇಳಿದಳು: “ಜಯ, ಜಯಂತ, ವಿಜಯ, ಜಯತ್ಸೇನ ಜಯದ್ಬಲರೇ! ನನ್ನ ಮಾತನ್ನು ಕೇಳಿ! ಸೂತಪುತ್ರರು ನನ್ನನ್ನು ಒಯ್ಯುತ್ತಿದ್ದಾರೆ.
04022013a ಯೇಷಾಂ ಜ್ಯಾತಲನಿರ್ಘೋಷೋ ವಿಸ್ಫೂರ್ಜಿತಮಿವಾಶನೇಃ|
04022013c ವ್ಯಶ್ರೂಯತ ಮಹಾಯುದ್ಧೇ ಭೀಮಘೋಷಸ್ತರಸ್ವಿನಾಂ||
04022014a ರಥಘೋಷಶ್ಚ ಬಲವಾನ್ಗಂಧರ್ವಾಣಾಂ ಯಶಸ್ವಿನಾಂ|
04022014c ತೇ ಮೇ ವಾಚಂ ವಿಜಾನಂತು ಸೂತಪುತ್ರಾ ನಯಂತಿ ಮಾಂ||
ವೇಗಗಾಮಿಗಳೂ ಕೀರ್ತಿಶಾಲಿಗಳೂ ಆದ ಯಾವ ಗಂಧರ್ವರ ಸಿಡಿಲ ಗರ್ಜನೆಯಂಥ ಬಿಲ್ಲಿನ ಹೆದೆಯ ಠೇಂಕಾರ, ಭಯಂಕರ ಗರ್ಜನೆ ಮತ್ತು ಪ್ರಬಲ ರಥಘೋಷವು ಮಹಾಯುದ್ಧದಲ್ಲಿ ಕೇಳಿ ಬರುತ್ತದೆಯೋ ಅವರು ನನ್ನ ಕೂಗನ್ನು ಕೇಳಿಸಿಕೊಳ್ಳಲಿ. ಸೂತಪುತ್ರರು ನನ್ನನ್ನು ಒಯ್ಯುತ್ತಿದ್ದಾರೆ.””
04022015 ವೈಶಂಪಾಯನ ಉವಾಚ|
04022015a ತಸ್ಯಾಸ್ತಾಃ ಕೃಪಣಾ ವಾಚಃ ಕೃಷ್ಣಾಯಾಃ ಪರಿದೇವಿತಾಃ|
04022015c ಶ್ರುತ್ವೈವಾಭ್ಯಪತದ್ಭೀಮಃ ಶಯನಾದವಿಚಾರಯನ್||
ವೈಶಂಪಾಯನನು ಹೇಳಿದನು: “ಕೃಷ್ಣೆಯ ಆ ದೀನ ಮಾತುಗಳನ್ನೂ ಗೋಳನ್ನೂ ಕೇಳಿದ ಭೀಮನು ಸ್ವಲ್ಪವೂ ವಿಚಾರಮಾಡದೇ ಹಾಸಿಗೆಯಿಂದ ಜಿಗಿದೆದ್ದನು.
04022016 ಭೀಮಸೇನ ಉವಾಚ|
04022016a ಅಹಂ ಶೃಣೋಮಿ ತೇ ವಾಚಂ ತ್ವಯಾ ಸೈರಂಧ್ರಿ ಭಾಷಿತಾಂ|
04022016c ತಸ್ಮಾತ್ತೇ ಸೂತಪುತ್ರೇಭ್ಯೋ ನ ಭಯಂ ಭೀರು ವಿದ್ಯತೇ||
ಭೀಮಸೇನನು ಹೇಳಿದನು: “ಸೈರಂಧ್ರಿ! ಭೀರು! ನಿನ್ನ ಕೂಗನ್ನು ನಾನು ಕೇಳುತ್ತಿದ್ದೇನೆ. ಆದ್ದರಿಂದ ಸೂತಪುತ್ರರಿಂದ ನಿನಗೆ ಭಯವಿಲ್ಲ.””
04022017 ವೈಶಂಪಾಯನ ಉವಾಚ|
04022017a ಇತ್ಯುಕ್ತ್ವಾ ಸ ಮಹಾಬಾಹುರ್ವಿಜಜೃಂಭೇ ಜಿಘಾಂಸಯಾ|
04022017c ತತಃ ಸ ವ್ಯಾಯತಂ ಕೃತ್ವಾ ವೇಷಂ ವಿಪರಿವರ್ತ್ಯ ಚ|
04022017e ಅದ್ವಾರೇಣಾಭ್ಯವಸ್ಕಂದ್ಯ ನಿರ್ಜಗಾಮ ಬಹಿಸ್ತದಾ||
ವೈಶಂಪಾಯನನು ಹೇಳಿದನು: “ಆ ಮಹಾಬಾಹುವು ಹೀಗೆ ಹೇಳಿ ಅವರನ್ನು ಕೊಲ್ಲುವ ಅಪೇಕ್ಷೆಯಿಂದ ವಿಜೃಂಭಿಸಿದನು. ಬಳಿಕ ಅವನು ಮೈಯುಬ್ಬಿಸಿ ವೇಷ ಬದಲಿಸಿಕೊಂಡು ರಹಸ್ಯ ಮಾರ್ಗದಿಂದ ನುಸುಳಿ ಹೊರಹೊರಟನು.
04022018a ಸ ಭೀಮಸೇನಃ ಪ್ರಾಕಾರಾದಾರುಜ್ಯ ತರಸಾ ದ್ರುಮಂ|
04022018c ಶ್ಮಶಾನಾಭಿಮುಖಃ ಪ್ರಾಯಾದ್ಯತ್ರ ತೇ ಕೀಚಕಾ ಗತಾಃ||
ಆ ಭೀಮಸೇನನು ಪ್ರಾಕಾರದಲ್ಲಿದ್ದ ಮರವೊಂದನ್ನು ಬೇಗ ಕಿತ್ತುಕೊಂಡು ಆ ಕೀಚಕರು ಹೋದ ಶ್ಮಶಾನದತ್ತ ಓಡಿದನು.
04022019a ಸ ತಂ ವೃಕ್ಷಂ ದಶವ್ಯಾಮಂ ಸಸ್ಕಂಧವಿಟಪಂ ಬಲೀ|
04022019c ಪ್ರಗೃಹ್ಯಾಭ್ಯದ್ರವತ್ಸೂತಾನ್ದಂಡಪಾಣಿರಿವಾಂತಕಃ||
ಕಾಂಡಗಳಿಂದಲೂ ಕೊಂಬೆಗಳಿಂದಲೂ ಕೂಡಿದ ಬಲಿಷ್ಠವಾದ ಹತ್ತು ಮಾರುದ್ದದ ಆ ಮರವನ್ನು ಹಿಡಿದುಕೊಂಡು ಅವನು ದಂಡಪಾಣಿ ಯಮನಂತೆ ಸೂತರ ಬೆನ್ನಟ್ಟಿದನು.
04022020a ಊರುವೇಗೇನ ತಸ್ಯಾಥ ನ್ಯಗ್ರೋಧಾಶ್ವತ್ಥಕಿಂಶುಕಾಃ|
04022020c ಭೂಮೌ ನಿಪತಿತಾ ವೃಕ್ಷಾಃ ಸಂಘಶಸ್ತತ್ರ ಶೇರತೇ||
ಅವನ ತೊಡೆಗಳ ವೇಗಕ್ಕೆ ಸಿಲುಕಿದ ಆಲ, ಅರಳಿ ಮತ್ತು ಮುತ್ತುಗದ ಮರಗಳು ಗುಂಪು ಗುಂಪಾಗಿ ಉರುಳಿ ನೆಲದ ಮೇಲೆ ಬಿದ್ದವು.
04022021a ತಂ ಸಿಂಹಮಿವ ಸಂಕ್ರುದ್ಧಂ ದೃಷ್ಟ್ವಾ ಗಂಧರ್ವಮಾಗತಂ|
04022021c ವಿತ್ರೇಸುಃ ಸರ್ವತಃ ಸೂತಾ ವಿಷಾದಭಯಕಂಪಿತಾಃ||
ಸಿಂಹದಂತೆ ಕೃದ್ಧನಾಗಿ ಬಂದ ಆ ಗಂಧರ್ವನನ್ನು ಕಂಡು ಸೂತರೆಲ್ಲರೂ ವಿಷಾದಭಯಕಂಪಿತರಾಗಿ ತಲ್ಲಣಿಸಿದರು.
04022022a ತಮಂತಕಮಿವಾಯಾಂತಂ ಗಂಧರ್ವಂ ಪ್ರೇಕ್ಷ್ಯ ತೇ ತದಾ|
04022022c ದಿಧಕ್ಷಂತಸ್ತದಾ ಜ್ಯೇಷ್ಠಂ ಭ್ರಾತರಂ ಹ್ಯುಪಕೀಚಕಾಃ|
04022022e ಪರಸ್ಪರಮಥೋಚುಸ್ತೇ ವಿಷಾದಭಯಕಂಪಿತಾಃ||
ಯಮನಂತೆ ಬಂದ ಗಂಧರ್ವನನ್ನು ನೋಡಿ ಅಣ್ಣನನ್ನು ಸುಡಲು ಬಂದಿದ್ದ ಉಪಕೀಚಕರು ವಿಷಾದ-ಭಯಕಂಪಿತರಾಗಿ ಪರಸ್ಪರರಲ್ಲಿ ಮತನಾಡಿಕೊಂಡರು.
04022023a ಗಂಧರ್ವೋ ಬಲವಾನೇತಿ ಕ್ರುದ್ಧ ಉದ್ಯಮ್ಯ ಪಾದಪಂ|
04022023c ಸೈರಂಧ್ರೀ ಮುಚ್ಯತಾಂ ಶೀಘ್ರಂ ಮಹನ್ನೋ ಭಯಮಾಗತಂ||
“ಬಲಶಾಲಿ ಗಂಧರ್ವನು ಮರವನ್ನು ಎತ್ತಿ ಹಿಡಿದು ಕೃದ್ಧನಾಗಿ ಬರುತ್ತಿದ್ದಾನೆ. ಸೈರಂಧ್ರಿಯನ್ನು ಬೇಗ ಬಿಟ್ಟುಬಿಡಿ. ನಮಗೆ ಮಹಾಭಯವು ಬಂದೊದಗಿದೆ.”
04022024a ತೇ ತು ದೃಷ್ಟ್ವಾ ತಮಾವಿದ್ಧಂ ಭೀಮಸೇನೇನ ಪಾದಪಂ|
04022024c ವಿಮುಚ್ಯ ದ್ರೌಪದೀಂ ತತ್ರ ಪ್ರಾದ್ರವನ್ನಗರಂ ಪ್ರತಿ||
ಭೀಮಸೇನನು ಕಿತ್ತು ತಂದಿದ್ದ ಆ ಮರವನ್ನು ಕಂಡು ಅವರು ದ್ರೌಪದಿಯನ್ನು ಅಲ್ಲಿಯೇ ಬಿಟ್ಟು ನಗರದತ್ತ ಓಡಿದರು.
04022025a ದ್ರವತಸ್ತಾಂಸ್ತು ಸಂಪ್ರೇಕ್ಷ್ಯ ಸ ವಜ್ರೀ ದಾನವಾನಿವ|
04022025c ಶತಂ ಪಂಚಾಧಿಕಂ ಭೀಮಃ ಪ್ರಾಹಿಣೋದ್ಯಮಸಾದನಂ||
ಓಡಿಹೋಗುತ್ತಿದ್ದ ಅವರನ್ನು ಕಂಡು ಭೀಮನು ಇಂದ್ರನು ದಾನವರನ್ನು ಕೊಂದಂತೆ ಆ ನೂರೈದು ಮಂದಿಯನ್ನು ಯಮಾಲಯಕ್ಕಟ್ಟಿದನು.
04022026a ತತ ಆಶ್ವಾಸಯತ್ಕೃಷ್ಣಾಂ ಪ್ರವಿಮುಚ್ಯ ವಿಶಾಂ ಪತೇ|
04022026c ಉವಾಚ ಚ ಮಹಾಬಾಹುಃ ಪಾಂಚಾಲೀಂ ತತ್ರ ದ್ರೌಪದೀಂ||
04022026e ಅಶ್ರುಪೂರ್ಣಮುಖೀಂ ದೀನಾಂ ದುರ್ಧರ್ಷಃ ಸ ವೃಕೋದರಃ||
ವಿಶಾಂಪತೇ! ಅನಂತರ ಆ ಮಹಾಬಾಹುವು ಕೃಷ್ಣೆಯನ್ನು ಬಿಡಿಸಿ ಸಮಾಧಾನಗೊಳಿಸಿದನು. ಅಸಾಧ್ಯನಾದ ಆ ವೃಕೋದರನು ಅಶ್ರುಪೂರ್ಣಮುಖಿಯೂ ದೀನೆಯೂ ಆದ ದ್ರೌಪದಿಗೆ ಹೇಳಿದನು:
04022027a ಏವಂ ತೇ ಭೀರು ವಧ್ಯಂತೇ ಯೇ ತ್ವಾಂ ಕ್ಲಿಶ್ಯಂತ್ಯನಾಗಸಂ|
04022027c ಪ್ರೈಹಿ ತ್ವಂ ನಗರಂ ಕೃಷ್ಣೇ ನ ಭಯಂ ವಿದ್ಯತೇ ತವ|
04022027e ಅನ್ಯೇನಾಹಂ ಗಮಿಷ್ಯಾಮಿ ವಿರಾಟಸ್ಯ ಮಹಾನಸಂ||
“ಭೀರು! ತಪ್ಪಿಲ್ಲದ ನಿನ್ನನ್ನು ಕ್ಲೇಶಗೊಳಿಸುವವರು ಹೀಗೆ ಹತರಾಗುತ್ತಾರೆ. ಕೃಷ್ಣೆ! ನೀನು ನಗರಕ್ಕೆ ಹೋಗು. ನಿನಗೆ ಇನ್ನು ಭಯವಿಲ್ಲ. ನಾನು ಬೇರೆದಾರಿಯಿಂದ ವಿರಾಟನ ಅಡುಗೆಮನೆಗೆ ಹೋಗುತ್ತೇನೆ.”
04022028a ಪಂಚಾಧಿಕಂ ಶತಂ ತಚ್ಚ ನಿಹತಂ ತತ್ರ ಭಾರತ|
04022028c ಮಹಾವನಮಿವ ಚಿನ್ನಂ ಶಿಶ್ಯೇ ವಿಗಲಿತದ್ರುಮಂ||
ಭಾರತ! ಅಲ್ಲಿ ನೂರೈದುಮಂದಿ ಹತರಾದರು. ಕತ್ತರಿಸಿ ಉರುಳಿದ ಮರಗಳ ಮಹಾವನದಂತೆ ಅವರು ಬಿದ್ದಿದ್ದರು.
04022029a ಏವಂ ತೇ ನಿಹತಾ ರಾಜಂ ಶತಂ ಪಂಚ ಚ ಕೀಚಕಾಃ|
04022029c ಸ ಚ ಸೇನಾಪತಿಃ ಪೂರ್ವಮಿತ್ಯೇತತ್ಸೂತಷಟ್ಶತಂ||
ರಾಜನ್! ಹೀಗೆ ಆ ನೂರೈದುಮಂದಿ ಕೀಚಕರು ಹತರಾದರು. ಮೊದಲೇ ಹತನಾದ ಸೇನಾಪತಿಯೂ ಸೇರಿ ಆ ಸೂತರು ನೂರಾ ಆರು ಮಂದಿ.
04022030a ತದ್ದೃಷ್ಟ್ವಾ ಮಹದಾಶ್ಚರ್ಯಂ ನರಾ ನಾರ್ಯಶ್ಚ ಸಂಗತಾಃ|
04022030c ವಿಸ್ಮಯಂ ಪರಮಂ ಗತ್ವಾ ನೋಚುಃ ಕಿಂ ಚನ ಭಾರತ||
ಭಾರತ! ಅಲ್ಲಿ ನೆರೆದಿದ್ದ ನರನಾರಿಯರು ಆ ಮಹದಾಶ್ಚರ್ಯವನ್ನು ನೋಡಿ ಪರಮ ವಿಸ್ಮಯಗೊಂಡು ಏನೂ ಮಾತನಾಡಲಿಲ್ಲ.”
ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ಕೀಚಕವಧಪರ್ವಣಿ ದ್ವಾವಿಂಶೋಽಧ್ಯಾಯಃ |
ಇದು ಶ್ರೀ ಮಹಾಭಾರತದಲ್ಲಿ ವಿರಾಟಪರ್ವದಲ್ಲಿ ಕೀಚಕವಧಪರ್ವದಲ್ಲಿ ಇಪ್ಪತ್ತೆರಡನೆಯ ಅಧ್ಯಾಯವು.