ವಿರಾಟ ಪರ್ವ: ಕೀಚಕವಧ ಪರ್ವ
೨೦
ಭೀಮನು ದ್ರೌಪದಿಯನ್ನು ಸಂತವಿಸುವುದು (೧-೧೩). ದ್ರೌಪದಿಯು ಕೀಚಕನನ್ನು ಕೊಲ್ಲು ಎಂದು ಭೀಮನಲ್ಲಿ ಕೇಳಿಕೊಳ್ಳುವುದು (೧೪-೩೪).
04020001 ಭೀಮಸೇನ ಉವಾಚ|
04020001a ಧಿಗಸ್ತು ಮೇ ಬಾಹುಬಲಂ ಗಾಂಡೀವಂ ಫಲ್ಗುನಸ್ಯ ಚ|
04020001c ಯತ್ತೇ ರಕ್ತೌ ಪುರಾ ಭೂತ್ವಾ ಪಾಣೀ ಕೃತಕಿಣಾವುಭೌ||
ಭೀಮಸೇನನು ಹೇಳಿದನು: “ನನ್ನ ಬಾಹುಬಲಕ್ಕೂ ಫಲ್ಗುನನ ಗಾಂಡೀವಕ್ಕೂ ಧಿಕ್ಕಾರ! ಹಿಂದೆ ಕೆಂಪಾಗಿದ್ದ ನಿನ್ನ ಕೈಗಳೆರಡೂ ಈಗ ದಡ್ಡುಗಟ್ಟಿವೆ.
04020002a ಸಭಾಯಾಂ ಸ್ಮ ವಿರಾಟಸ್ಯ ಕರೋಮಿ ಕದನಂ ಮಹತ್|
04020002c ತತ್ರ ಮಾಂ ಧರ್ಮರಾಜಸ್ತು ಕಟಾಕ್ಷೇಣ ನ್ಯವಾರಯತ್||
04020002E ತದಹಂ ತಸ್ಯ ವಿಜ್ಞಾಯ ಸ್ಥಿತ ಏವಾಸ್ಮಿ ಭಾಮಿನಿ||
ವಿರಾಟನ ಸಭೆಯಲ್ಲಿ ನಾನು ದೊಡ್ಡ ಕದನವನ್ನೇ ಮಾಡುತ್ತಿದ್ದೆ. ಆದರೆ ಅಲ್ಲಿ ಧರ್ಮರಾಜನು ನನ್ನನ್ನು ಕಡೆಗಣ್ಣಿನ ನೋಟದಿಂದ ತಡೆದನು. ಭಾಮಿನಿ! ಅವನ ಆಶಯವನ್ನು ತಿಳಿದು ನಾನು ಸುಮ್ಮನಿದ್ದುಬಿಟ್ಟೆ.
04020003a ಯಚ್ಚ ರಾಷ್ಟ್ರಾತ್ಪ್ರಚ್ಯವನಂ ಕುರೂಣಾಮವಧಶ್ಚ ಯಃ|
04020003c ಸುಯೋಧನಸ್ಯ ಕರ್ಣಸ್ಯ ಶಕುನೇಃ ಸೌಬಲಸ್ಯ ಚ||
04020004a ದುಃಶಾಸನಸ್ಯ ಪಾಪಸ್ಯ ಯನ್ಮಯಾ ನ ಹೃತಂ ಶಿರಃ|
04020004c ತನ್ಮೇ ದಹತಿ ಕಲ್ಯಾಣಿ ಹೃದಿ ಶಲ್ಯಮಿವಾರ್ಪಿತಂ||
04020004e ಮಾ ಧರ್ಮಂ ಜಹಿ ಸುಶ್ರೋಣಿ ಕ್ರೋಧಂ ಜಹಿ ಮಹಾಮತೇ||
ಕಲ್ಯಾಣಿ! ನಾಡಿನಿಂದ ಹೊರದೂಡಿರುವುದು, ಇನ್ನೂ ನಾವು ಕೌರವರನ್ನು ಕೊಲ್ಲದಿರುವುದು, ಸುಯೋಧನ, ಕರ್ಣ, ಸೌಬಲ ಶಕುನಿ ಮತ್ತು ಪಾಪಿ ದುಃಶಾಸನನ ಶಿರಗಳನ್ನು ನಾನು ಕತ್ತರಿಸದೇ ಇರುವುದು ಇವೆಲ್ಲವೂ ನನ್ನ ಹೃದಯವನ್ನು ಶಲ್ಯದಂತೆ ಸುಡುತ್ತಿವೆ. ಸುಶ್ರೋಣಿ! ಧರ್ಮವನ್ನು ತೊರೆಯಬೇಡ. ಮಹಾಮತೇ! ಕ್ರೋಧವನ್ನು ಬಿಡು.
04020005a ಇಮಂ ಚ ಸಮುಪಾಲಂಭಂ ತ್ವತ್ತೋ ರಾಜಾ ಯುಧಿಷ್ಠಿರಃ|
04020005c ಶೃಣುಯಾದ್ಯದಿ ಕಲ್ಯಾಣಿ ಕೃತ್ಸ್ನಂ ಜಹ್ಯಾತ್ಸ ಜೀವಿತಂ||
ಕಲ್ಯಾಣಿ! ನಿನ್ನಿಂದ ಈ ನಿಂದೆಯನ್ನೆಲ್ಲ ರಾಜ ಯುಧಿಷ್ಠಿರನು ಕೇಳಿದರೆ ನಿಶ್ಚಯವಾಗಿಯೂ ಅವನು ಪ್ರಾಣ ಬಿಡುತ್ತಾನೆ.
04020006a ಧನಂಜಯೋ ವಾ ಸುಶ್ರೋಣಿ ಯಮೌ ವಾ ತನುಮಧ್ಯಮೇ|
04020006c ಲೋಕಾಂತರಗತೇಷ್ವೇಷು ನಾಹಂ ಶಕ್ಷ್ಯಾಮಿ ಜೀವಿತುಂ||
ತನುಮಧ್ಯಮೇ! ಸುಶ್ರೋಣಿ! ಧನಂಜಯನಾಗಲೀ ಯಮಳರಾಗಲೀ ಮರಣಹೊಂದಿದರೆ ನಾನು ಜೀವಿಸಿರಲಾರೆ.
04020007a ಸುಕನ್ಯಾ ನಾಮ ಶಾರ್ಯಾತೀ ಭಾರ್ಗವಂ ಚ್ಯವನಂ ವನೇ|
04020007c ವಲ್ಮೀಕಭೂತಂ ಶಾಮ್ಯಂತಮನ್ವಪದ್ಯತ ಭಾಮಿನೀ||
ಭಾಮಿನೀ! ಹಿಂದೆ ಸುಕನ್ಯಾ ಎಂಬ ಹೆಸರಿನ ಶರ್ಯಾತಿಯ ಮಗಳು ವನದಲ್ಲಿ ತಪಸ್ಸುಮಾಡುತ್ತಾ ಹುತ್ತವಾಗಿದ್ದ ಭೃಗುವಂಶಜ ಚ್ಯವನನನ್ನು ಅರಣ್ಯದಲ್ಲಿ ಅನುಸರಿಸಿದಳು.
04020008a ನಾಡಾಯನೀ ಚೇಂದ್ರಸೇನಾ ರೂಪೇಣ ಯದಿ ತೇ ಶ್ರುತಾ|
04020008c ಪತಿಮನ್ವಚರದ್ವೃದ್ಧಂ ಪುರಾ ವರ್ಷಸಹಸ್ರಿಣಂ||
ಹಿಂದೆ ರೂಪದಲ್ಲಿ ಪ್ರಸಿದ್ಧಳಾದ ನಾಡಾಯಣ ವಂಶದ ಇಂದ್ರಸೇನೆಯು ಸಾವಿರ ವರ್ಷದ ವೃದ್ಧ ಪತಿಯನ್ನು ಅನುಸರಿಸಿದುದನ್ನು ನೀನು ಕೇಳಿಲ್ಲವೇ?
04020009a ದುಹಿತಾ ಜನಕಸ್ಯಾಪಿ ವೈದೇಹೀ ಯದಿ ತೇ ಶ್ರುತಾ|
04020009c ಪತಿಮನ್ವಚರತ್ಸೀತಾ ಮಹಾರಣ್ಯನಿವಾಸಿನಂ||
ಜನಕನ ಮಗಳಾದ ವೈದೇಹಿಯೂ ಕೂಡ ಮಹಾರಣ್ಯನಿವಾಸಿ ಪತಿಯನ್ನು ಹಿಂಬಾಲಿಸಿದುದನ್ನು ಕೇಳಿಲ್ಲವೇ?
04020010a ರಕ್ಷಸಾ ನಿಗ್ರಹಂ ಪ್ರಾಪ್ಯ ರಾಮಸ್ಯ ಮಹಿಷೀ ಪ್ರಿಯಾ|
04020010c ಕ್ಲಿಶ್ಯಮಾನಾಪಿ ಸುಶ್ರೋಣೀ ರಾಮಮೇವಾನ್ವಪದ್ಯತ||
ರಾಮನ ಪ್ರಿಯ ಪತ್ನಿಯಾದ ಆ ಸುಂದರಿಯು ರಾಕ್ಷಸರ ನಿಗ್ರಹಕ್ಕೊಳಗಾಗಿ ಕ್ಲೇಶಗೊಂಡರೂ ರಾಮನನ್ನೇ ಅನುಸರಿಸಿದಳು.
04020011a ಲೋಪಾಮುದ್ರಾ ತಥಾ ಭೀರು ವಯೋರೂಪಸಮನ್ವಿತಾ|
04020011c ಅಗಸ್ತ್ಯಮನ್ವಯಾದ್ಧಿತ್ವಾ ಕಾಮಾನ್ಸರ್ವಾನಮಾನುಷಾನ್||
ಭೀರು! ಹಾಗೆಯೇ ರೂಪ ಯೌವನಸಂಪನ್ನೆಯಾದ ಲೋಪಾಮುದ್ರೆಯು ಎಲ್ಲ ದಿವ್ಯ ಸುಖಗಳನ್ನೂ ತೊರೆದು ಅಗಸ್ತ್ಯನನ್ನು ಹಿಂಬಾಲಿಸಿದಳು.
04020012a ಯಥೈತಾಃ ಕೀರ್ತಿತಾ ನಾರ್ಯೋ ರೂಪವತ್ಯಃ ಪತಿವ್ರತಾಃ|
04020012c ತಥಾ ತ್ವಮಪಿ ಕಲ್ಯಾಣಿ ಸರ್ವೈಃ ಸಮುದಿತಾ ಗುಣೈಃ||
ಕಲ್ಯಾಣೀ! ನಾನು ಹೇಳಿದ ಈ ರೂಪವತಿಯರೂ ಪತಿವ್ರತೆಯರೂ ಆದ ನಾರಿಯರಂತೆ ನೀನೂ ಕೂಡ ಸರ್ವಗುಣಸಂಪನ್ನೆಯಾಗಿರುವೆ.
04020013a ಮಾದೀರ್ಘಂ ಕ್ಷಮ ಕಾಲಂ ತ್ವಂ ಮಾಸಮಧ್ಯರ್ಧಸಮ್ಮಿತಂ|
04020013c ಪೂರ್ಣೇ ತ್ರಯೋದಶೇ ವರ್ಷೇ ರಾಜ್ಞೋ ರಾಜ್ಞೀ ಭವಿಷ್ಯಸಿ||
ವ್ಯಥೆಪಡಬೇಡ! ಇನ್ನು ಉಳಿದಿರುವ ಒಂದೂವರೆ ತಿಂಗಳ ಅಲ್ಪಕಾಲವನ್ನು ತಾಳಿಕೋ. ಹದಿಮೂರನೆಯ ವರ್ಷವು ತುಂಬಿದಾಗ ನೀನು ಮತ್ತೆ ರಾಜನ ರಾಣಿಯಾಗುವೆ.”
04020014 ದ್ರೌಪದ್ಯುವಾಚ|
04020014a ಆರ್ತಯೈತನ್ಮಯಾ ಭೀಮ ಕೃತಂ ಬಾಷ್ಪವಿಮೋಕ್ಷಣಂ|
04020014c ಅಪಾರಯಂತ್ಯಾ ದುಃಖಾನಿ ನ ರಾಜಾನಮುಪಾಲಭೇ||
ದ್ರೌಪದಿಯು ಹೇಳಿದಳು: “ಭೀಮ! ದುಃಖವನ್ನು ತಡೆದುಕೊಳ್ಳಲಾಗದೇ ಆರ್ತಳಾಗಿ ನಾನು ನಿನ್ನ ಮುಂದೆ ಹೀಗೆ ಕಂಬನಿಗರೆದೆ. ರಾಜನನ್ನು ನಾನು ನಿಂದಿಸುವುದಿಲ್ಲ.
04020015a ವಿಮುಕ್ತೇನ ವ್ಯತೀತೇನ ಭೀಮಸೇನ ಮಹಾಬಲ|
04020015c ಪ್ರತ್ಯುಪಸ್ಥಿತಕಾಲಸ್ಯ ಕಾರ್ಯಸ್ಯಾನಂತರೋ ಭವ||
ಮಹಾಬಲ ಭೀಮಸೇನ! ಹಿಂದೆ ಆದುದ್ದನ್ನು ಬಿಟ್ಟುಬಿಡು. ಈಗ ಒದಗಿಬಂದಿರುವ ಕಷ್ಟದ ಪರಿಹಾರಕ್ಕೆ ಸಿದ್ಧನಾಗು.
04020016a ಮಮೇಹ ಭೀಮ ಕೈಕೇಯೀ ರೂಪಾಭಿಭವಶಮ್ಕಯಾ|
04020016c ನಿತ್ಯಮುದ್ವಿಜತೇ ರಾಜಾ ಕಥಂ ನೇಯಾದಿಮಾಮಿತಿ||
ಭೀಮ! ರೂಪದಲ್ಲಿ ನಾನು ಅವಳನ್ನು ಸೋಲಿಸುವೆನೆಂಬ ಶಂಕೆಯಿಂದ ರಾಜನೆಲ್ಲಿ ನನ್ನನ್ನು ಲಪಟಾಯಿಸಿಬಿಡುತ್ತಾನೋ ಎಂದು ಸುದೇಷ್ಣೆಯು ನಿತ್ಯವೂ ಉದ್ವಿಗ್ನಳಾಗಿದ್ದಾಳೆ.
04020017a ತಸ್ಯಾ ವಿದಿತ್ವಾ ತಂ ಭಾವಂ ಸ್ವಯಂ ಚಾನೃತದರ್ಶನಃ|
04020017c ಕೀಚಕೋಽಯಂ ಸುದುಷ್ಟಾತ್ಮಾ ಸದಾ ಪ್ರಾರ್ಥಯತೇ ಹಿ ಮಾಂ||
ಅವಳ ಆ ಭಾವವನ್ನರಿತು ಸ್ವತಃ ಕೆಟ್ಟದ್ದನ್ನೇ ಕಾಣುವ ದುಷ್ಟಾತ್ಮ ಆ ಕೀಚಕನು ನನ್ನನ್ನು ಯಾವಾಗಲೂ ಬೇಡುತ್ತಾನೆ.
04020018a ತಮಹಂ ಕುಪಿತಾ ಭೀಮ ಪುನಃ ಕೋಪಂ ನಿಯಮ್ಯ ಚ|
04020018c ಅಬ್ರುವಂ ಕಾಮಸಮ್ಮೂಢಮಾತ್ಮಾನಂ ರಕ್ಷ ಕೀಚಕ||
ಭೀಮ! ನಾನು ಕೋಪಗೊಂಡರೂ ಮತ್ತೆ ಕೋಪವನ್ನು ನಿಯಂತ್ರಿಸಿಕೊಂಡು ಕಾಮದಿಂದ ಮೂಢನಾದ ಅವನಿಗೆ ನಾನು “ಕೀಚಕ! ನಿನ್ನನ್ನು ನೀನು ರಕ್ಷಿಸಿಕೋ!” ಎಂದು ಹೇಳಿದೆ.
04020019a ಗಂಧರ್ವಾಣಾಮಹಂ ಭಾರ್ಯಾ ಪಂಚಾನಾಂ ಮಹಿಷೀ ಪ್ರಿಯಾ|
04020019c ತೇ ತ್ವಾಂ ನಿಹನ್ಯುರ್ದುರ್ಧರ್ಷಾಃ ಶೂರಾಃ ಸಾಹಸಕಾರಿಣಃ||
“ನಾನು ಐವರು ಗಂಧರ್ವರ ಭಾರ್ಯೆ. ಪ್ರಿಯಪತ್ನಿ. ತಡೆಯಲು ಅಸಾಧ್ಯರೂ, ಶೂರರೂ, ಸಾಹಸಿಗಳೂ ಆದ ಅವರು ನಿನ್ನನ್ನು ಕೊಲ್ಲುತ್ತಾರೆ.”
04020020a ಏವಮುಕ್ತಃ ಸ ದುಷ್ಟಾತ್ಮಾ ಕೀಚಕಃ ಪ್ರತ್ಯುವಾಚ ಹ|
04020020c ನಾಹಂ ಬಿಭೇಮಿ ಸೈರಂಧ್ರಿ ಗಂಧರ್ವಾಣಾಂ ಶುಚಿಸ್ಮಿತೇ||
ಹೀಗೆ ಹೇಳಿದಾಗ ಆ ದುಷ್ಟಾತ್ಮ ಕೀಚಕನು ಮರುನುಡಿದನು: “ಶುಚಿಸ್ಮಿತೇ! ಸೈರಂಧ್ರಿ! ನಾನು ಗಂಧರ್ವರಿಗೆ ಹೆದರುವುದಿಲ್ಲ.
04020021a ಶತಂ ಸಹಸ್ರಮಪಿ ವಾ ಗಂಧರ್ವಾಣಾಮಹಂ ರಣೇ|
04020021c ಸಮಾಗತಂ ಹನಿಷ್ಯಾಮಿ ತ್ವಂ ಭೀರು ಕುರು ಮೇ ಕ್ಷಣಂ||
ಒಟ್ಟಿಗೆ ಬರುವ ನೂರು ಅಥವಾ ಸಾವಿರ ಗಂಧರ್ವರನ್ನೂ ನಾನು ರಣದಲ್ಲಿ ಕೊಲ್ಲುವೆನು. ಆದುದರಿಂದ ಭೀರು! ನನಗೆ ನೀನು ಸಂತಸವನ್ನುಂಟುಮಾಡು!”
04020022a ಇತ್ಯುಕ್ತೇ ಚಾಬ್ರುವಂ ಸೂತಂ ಕಾಮಾತುರಮಹಂ ಪುನಃ|
04020022c ನ ತ್ವಂ ಪ್ರತಿಬಲಸ್ತೇಷಾಂ ಗಂಧರ್ವಾಣಾಂ ಯಶಸ್ವಿನಾಂ||
ಹೀಗೆ ಅವನು ಹೇಳಿದಾಗ ನಾನು ಕಾಮಾತುರನಾದ ಆ ಸೂತನಿಗೆ ಮತ್ತೆ ನುಡಿದೆ: “ಕೀರ್ತಿಶಾಲಿಗಳಾದ ಆ ಗಂಧರ್ವರಿಗೆ ಬಲದಲ್ಲಿ ನೀನು ಸಾಟಿಯಲ್ಲ.
04020023a ಧರ್ಮೇ ಸ್ಥಿತಾಸ್ಮಿ ಸತತಂ ಕುಲಶೀಲಸಮನ್ವಿತಾ|
04020023c ನೇಚ್ಛಾಮಿ ಕಂ ಚಿದ್ವಧ್ಯಂತಂ ತೇನ ಜೀವಸಿ ಕೀಚಕ||
ಕುಲಶೀಲಸಂಪನ್ನೆಯಾದ ನಾನು ಯಾವಾಗಲೂ ಧರ್ಮಸ್ಥಿತಳಾಗಿದ್ದೇನೆ. ಯಾರ ವಧೆಯನ್ನೂ ನಾನು ಬಯಸುವುದಿಲ್ಲ. ಆದುದರಿಂದಲೇ ಕೀಚಕ! ನೀನು ಇನ್ನೂ ಬದುಕಿದ್ದೀಯೆ!”
04020024a ಏವಮುಕ್ತಃ ಸ ದುಷ್ಟಾತ್ಮಾ ಪ್ರಹಸ್ಯ ಸ್ವನವತ್ತದಾ|
04020024c ನ ತಿಷ್ಠತಿ ಸ್ಮ ಸನ್ಮಾರ್ಗೇ ನ ಚ ಧರ್ಮಂ ಬುಭೂಷತಿ||
ಹೀಗೆ ಹೇಳಲು ಆ ದುಷ್ಟಾತ್ಮನು ಗಟ್ಟಿಯಾಗಿ ನಕ್ಕನು. ಅವನು ಸನ್ಮಾರ್ಗದಲ್ಲಿ ನೆಲೆಗೊಳ್ಳುವುದಿಲ್ಲ ಮತ್ತು ಧರ್ಮಕ್ಕಾಗಿ ಯತ್ನಿಸುವುದಿಲ್ಲ.
04020025a ಪಾಪಾತ್ಮಾ ಪಾಪಭಾವಶ್ಚ ಕಾಮರಾಗವಶಾನುಗಃ|
04020025c ಅವಿನೀತಶ್ಚ ದುಷ್ಟಾತ್ಮಾ ಪ್ರತ್ಯಾಖ್ಯಾತಃ ಪುನಃ ಪುನಃ|
04020025e ದರ್ಶನೇ ದರ್ಶನೇ ಹನ್ಯಾತ್ತಥಾ ಜಃಯಾಂ ಚ ಜೀವಿತಂ||
ಆ ಪಾಪಾತ್ಮ, ಪಾಪಭಾವಿ, ಕಾಮರಾಗವಶ, ಅವಿನೀತ, ದುಷ್ಟಾತ್ಮನು ಮತ್ತೆ ಮತ್ತೆ ಪ್ರತಿಭಟಿಸಿದರೂ ನನ್ನನ್ನು ಕಂಡಾಗಲೆಲ್ಲಾ ಹಿಂಸಿಸುತ್ತಾನೆ. ಆದ್ದರಿಂದ ನಾನು ಪ್ರಾಣ ಬಿಡುತ್ತೇನೆ.
04020026a ತದ್ಧರ್ಮೇ ಯತಮಾನಾನಾಂ ಮಹಾನ್ಧರ್ಮೋ ನಶಿಷ್ಯತಿ|
04020026c ಸಮಯಂ ರಕ್ಷಮಾಣಾನಾಂ ಭಾರ್ಯಾ ವೋ ನ ಭವಿಷ್ಯತಿ||
ಧರ್ಮದಲ್ಲಿ ಪ್ರಯತ್ನಪರರಾಗಿರುವವರ ಮಹಾಧರ್ಮವೇ ಹಾಳಾಗುತ್ತದೆ. ಪ್ರತಿಜ್ಞೆಯನ್ನು ಪರಿಪಾಲಿಸುತ್ತಿರುವ ನಿಮಗೆ ಪತ್ನಿಯೇ ಇಲ್ಲವಾಗುತ್ತಾಳೆ.
04020027a ಭಾರ್ಯಾಯಾಂ ರಕ್ಷ್ಯಮಾಣಾಯಾಂ ಪ್ರಜಾ ಭವತಿ ರಕ್ಷಿತಾ|
04020027c ಪ್ರಜಾಯಾಂ ರಕ್ಷ್ಯಮಾಣಾಯಾಮಾತ್ಮಾ ಭವತಿ ರಕ್ಷಿತಃ||
ಹೆಂಡತಿಯನ್ನು ರಕ್ಷಿಸಿದರೆ ಮಕ್ಕಳು ರಕ್ಷಿತರಾಗಿರುತ್ತಾರೆ. ಮಕ್ಕಳು ರಕ್ಷಣೆಯಲ್ಲಿದ್ದರೆ ಆತ್ಮರಕ್ಷಣೆಯಾಗುತ್ತದೆ.
04020028a ವದತಾಂ ವರ್ಣಧರ್ಮಾಂಶ್ಚ ಬ್ರಾಹ್ಮಣಾನಾಂ ಹಿ ಮೇ ಶ್ರುತಂ|
04020028c ಕ್ಷತ್ರಿಯಸ್ಯ ಸದಾ ಧರ್ಮೋ ನಾನ್ಯಃ ಶತ್ರುನಿಬರ್ಹಣಾತ್||
ಬ್ರಾಹ್ಮಣರು ವರ್ಣಧರ್ಮದ ಕುರಿತು ಹೇಳಿದುದನ್ನು ನಾನು ಕೇಳಿದ್ದೇನೆ. ಶತ್ರುಗಳ ನಾಶದ ಹೊರತು ಬೇರೆ ಯಾವುದೂ ಎಂದೂ ಕ್ಷತ್ರಿಯನಿಗೆ ಧರ್ಮವಲ್ಲ.
04020029a ಪಶ್ಯತೋ ಧರ್ಮರಾಜಸ್ಯ ಕೀಚಕೋ ಮಾಂ ಪದಾವಧೀತ್|
04020029c ತವ ಚೈವ ಸಮಕ್ಷಂ ವೈ ಭೀಮಸೇನ ಮಹಾಬಲ||
ಮಹಾಬಲ ಭೀಮಸೇನ! ಧರ್ಮರಾಜನು ನೋಡುತ್ತಿರುವಂತೆಯೇ ನಿನ್ನ ಎದುರಿನಲ್ಲಿ ಕೀಚಕನು ನನ್ನನ್ನು ಕಾಲಿನಿಂದ ಒದೆದನು.
04020030a ತ್ವಯಾ ಹ್ಯಹಂ ಪರಿತ್ರಾತಾ ತಸ್ಮಾದ್ಘೋರಾಜ್ಜಟಾಸುರಾತ್|
04020030c ಜಯದ್ರಥಂ ತಥೈವ ತ್ವಮಜೈಷೀರ್ಭ್ರಾತೃಭಿಃ ಸಹ||
ಆ ಘೋರ ಜಟಾಸುರನಿಂದ ನೀನೇ ನನ್ನನ್ನು ಪಾರುಗೊಳಿಸಿದೆ. ಹಾಗೆಯೇ ಸೋದರರೊಡನೆ ಜಯದ್ರಥನನ್ನೂ ನೀನೇ ಗೆದ್ದೆ.
04020031a ಜಹೀಮಮಪಿ ಪಾಪಂ ತ್ವಂ ಯೋಽಯಂ ಮಾಮವಮನ್ಯತೇ|
04020031c ಕೀಚಕೋ ರಾಜವಾಲ್ಲಭ್ಯಾಚ್ಚೋಕಕೃನ್ಮಮ ಭಾರತ||
ಭಾರತ! ಈಗ ನನ್ನನ್ನು ಅಪಮಾನಿಸಿದ ಪಾಪಿಯನ್ನೂ ನೀನೇ ಕೊಲ್ಲು. ರಾಜನಿಗೆ ಬೇಕಾದವನಾಗಿರುವ ಕೀಚಕನು ನನ್ನನ್ನು ಕಾಡುತ್ತಿದ್ದಾನೆ.
04020032a ತಮೇವಂ ಕಾಮಸಮ್ಮತ್ತಂ ಭಿಂಧಿ ಕುಂಭಮಿವಾಶ್ಮನಿ|
04020032c ಯೋ ನಿಮಿತ್ತಮನರ್ಥಾನಾಂ ಬಹೂನಾಂ ಮಮ ಭಾರತ||
ಭಾರತ! ನನಗೆ ಬಹಳಷ್ಟು ಕಷ್ಟಗಳನ್ನು ತಂದೊಡ್ಡಿದ ಆ ಕಾಮದಿಂದ ಹುಚ್ಚನಾದವನನ್ನು ಮಡಕೆಯನ್ನು ಕಲ್ಲಿನ ಮೇಲೆ ಚಪ್ಪಳಿಸಿ ಒಡೆಯುವಂತೆ ನಾಶಮಾಡು.
04020033a ತಂ ಚೇಜ್ಜೀವಂತಮಾದಿತ್ಯಃ ಪ್ರಾತರಭ್ಯುದಯಿಷ್ಯತಿ|
04020033c ವಿಷಮಾಲೋಡ್ಯ ಪಾಸ್ಯಾಮಿ ಮಾ ಕೀಚಕವಶಂ ಗಮಂ||
04020033e ಶ್ರೇಯೋ ಹಿ ಮರಣಂ ಮಹ್ಯಂ ಭೀಮಸೇನ ತವಾಗ್ರತಃ||
ಭೀಮಸೇನ! ಬೆಳಿಗ್ಗೆ ಸೂರ್ಯೋದಯದ ವರೆಗೆ ಅವನು ಜೀವಂತನಾಗಿದ್ದರೆ ವಿಷವನ್ನು ಬೆರೆಸಿ ಕುಡಿಯುತ್ತೇನೆ. ಕೀಚಕನ ವಶಳಾಗುವುದಿಲ್ಲ. ನಿನ್ನನ್ನು ಬಿಟ್ಟರೆ ಮರಣವೇ ನನಗೆ ಶ್ರೇಯಸ್ಕರ.””
04020034 ವೈಶಂಪಾಯನ ಉವಾಚ|
04020034a ಇತ್ಯುಕ್ತ್ವಾ ಪ್ರಾರುದತ್ಕೃಷ್ಣಾ ಭೀಮಸ್ಯೋರಃ ಸಮಾಶ್ರಿತಾ|
04020034c ಭೀಮಶ್ಚ ತಾಂ ಪರಿಷ್ವಜ್ಯ ಮಹತ್ಸಾಂತ್ವಂ ಪ್ರಯುಜ್ಯ ಚ||
04020034e ಕೀಚಕಂ ಮನಸಾಗಚ್ಛತ್ಸೃಕ್ಕಿಣೀ ಪರಿಸಂಲಿಹನ್||
ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಕೃಷ್ಣೆಯು ಭೀಮನ ಎದೆಯ ಮೇಲೊರಗಿ ರೋಧಿಸಿದಳು. ಭೀಮನು ಅವಳನ್ನು ಅಪ್ಪಿಕೊಂಡು ವಿಶೇಷವಾಗಿ ಸಾಂತ್ವನಗೊಳಿಸಿ ಕಟವಾಯಿಗಳನ್ನು ನೆಕ್ಕುತ್ತಾ ಕೀಚಕನ ಕುರಿತು ಯೋಚಿಸತೊಡಗಿದನು.
ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ಕೀಚಕವಧಪರ್ವಣಿ ದ್ರೌಪದೀಸಾಂತ್ವನೇ ವಿಂಶೋಽಧ್ಯಾಯಃ |
ಇದು ಶ್ರೀ ಮಹಾಭಾರತದಲ್ಲಿ ವಿರಾಟಪರ್ವದಲ್ಲಿ ಕೀಚಕವಧಪರ್ವದಲ್ಲಿ ದ್ರೌಪದೀಸಾಂತ್ವನದಲ್ಲಿ ಇಪ್ಪತ್ತನೆಯ ಅಧ್ಯಾಯವು.