ವಿರಾಟ ಪರ್ವ: ಕೀಚಕವಧ ಪರ್ವ
೧೮
ದ್ರೌಪದಿಯು ಭೀಮನಲ್ಲಿ ತನ್ನ ದುಃಖಕ್ಕೆ ಕಾರಣವನ್ನು ಹೇಳಿಕೊಳ್ಳುವುದು (೧-೩೬).
04018001 ದ್ರೌಪದ್ಯುವಾಚ|
04018001a ಇದಂ ತು ಮೇ ಮಹದ್ದುಃಖಂ ಯತ್ಪ್ರವಕ್ಷ್ಯಾಮಿ ಭಾರತ|
04018001c ನ ಮೇಽಭ್ಯಸೂಯಾ ಕರ್ತವ್ಯಾ ದುಃಖಾದೇತದ್ಬ್ರವೀಮ್ಯಹಂ||
ದ್ರೌಪದಿಯು ಹೇಳಿದಳು: “ಭಾರತ! ನನ್ನ ಈ ಮಹಾದುಃಖವನ್ನು ನಿನಗೆ ಹೇಳುತ್ತಿದ್ದೇನೆಂದು ನನ್ನನ್ನು ಅಪೇಕ್ಷಿಸಬೇಡ. ದುಃಖದಿಂದ ಇದನ್ನು ಹೇಳುತ್ತಿದ್ದೇನೆ.
04018002a ಶಾರ್ದೂಲೈರ್ಮಹಿಷೈಃ ಸಿಂಹೈರಾಗಾರೇ ಯುಧ್ಯಸೇ ಯದಾ|
04018002c ಕೈಕೇಯ್ಯಾಃ ಪ್ರೇಕ್ಷಮಾಣಾಯಾಸ್ತದಾ ಮೇ ಕಶ್ಮಲೋ ಭವೇತ್||
ಕೈಕೇಯಿ ಸುದೇಷ್ಣೆಯು ನೋಡಿ ಆನಂದಿಸಲೆಂದು ನೀನು ಅರಮನೆಯಲ್ಲಿ ಹುಲಿ, ಕಾಡು ಕೋಣ ಮತ್ತು ಸಿಂಹಗಳೊಡನೆ ಕಾದಾಡುವಾಗ ನನ್ನ ಮನಸ್ಸು ಕುಗ್ಗುತ್ತದೆ.
04018003a ಪ್ರೇಕ್ಷಾಸಮುತ್ಥಿತಾ ಚಾಪಿ ಕೈಕೇಯೀ ತಾಃ ಸ್ತ್ರಿಯೋ ವದೇತ್|
04018003c ಪ್ರೇಕ್ಷ್ಯ ಮಾಮನವದ್ಯಾಂಗೀ ಕಶ್ಮಲೋಪಹತಾಮಿವ||
ಅದನ್ನು ನೋಡಿ ಮೇಲೆದ್ದ ಸುಂದರಿ ಕೈಕೇಯಿಯು ದುಃಖದಿಂದ ಹತಳಾಗಿರುವಂತೆ ತೋರುತ್ತಿದ್ದ ನನ್ನನ್ನು ನೋಡಿ ಆ ಸ್ತ್ರೀಯರಿಗೆ ಹೇಳುತ್ತಾಳೆ:
04018004a ಸ್ನೇಹಾತ್ಸಂವಾಸಜಾನ್ಮನ್ಯೇ ಸೂದಮೇಷಾ ಶುಚಿಸ್ಮಿತಾ|
04018004c ಯೋಧ್ಯಮಾನಂ ಮಹಾವೀರ್ಯೈರಿಮಂ ಸಮನುಶೋಚತಿ||
“ಈ ಅಡುಗೆಯವನ ಮೇಲೆ ಇರುವ ಸ್ನೇಹದಿಂದಾಗಿ ಈ ಶುಚಿಸ್ಮಿತೆಯು ಮಹಾವೀರ್ಯರೊಂದಿಗೆ ಹೋರಾಡುತ್ತಿರುವ ಇವನ ಕುರಿತು ಶೋಚಿಸುತ್ತಿದ್ದಾಳೆ!
04018005a ಕಲ್ಯಾಣರೂಪಾ ಸೈರಂಧ್ರೀ ಬಲ್ಲವಶ್ಚಾತಿಸುಂದರಃ|
04018005c ಸ್ತ್ರೀಣಾಂ ಚ ಚಿತ್ತಂ ದುರ್ಜ್ಞೇಯಂ ಯುಕ್ತರೂಪೌ ಚ ಮೇ ಮತೌ||
ಸೈರಂಧ್ರಿಯು ಸುಂದರಿ ಮತ್ತು ಬಲ್ಲವನೂ ಅತಿ ಸುಂದರ. ಸ್ತ್ರೀಯರ ಮನಸ್ಸನ್ನು ತಿಳಿಯಲು ಅಸಾಧ್ಯ. ಆದರೂ ಇವರಿಬ್ಬರೂ ಅನುರೂಪರು ಎಂದು ನನ್ನ ಅಭಿಪ್ರಾಯ.
04018006a ಸೈರಂಧ್ರೀ ಪ್ರಿಯಸಂವಾಸಾನ್ನಿತ್ಯಂ ಕರುಣವೇದಿನೀ|
04018006c ಅಸ್ಮಿನ್ರಾಜಕುಲೇ ಚೇಮೌ ತುಲ್ಯಕಾಲನಿವಾಸಿನೌ||
ಇವನೊಂದಿಗಿನ ಪ್ರಿಯಸಹವಾಸದಿಂದ ಸೈರಂಧ್ರಿಯು ನಿತ್ಯವೂ ಇವನ ಮೇಲೆ ಕರುಣೆ ತೋರಿಸುತ್ತಾಳೆ. ಈ ರಾಜಕುಲದಲ್ಲಿ ಇವರಿಬ್ಬರೂ ಒಂದೇ ಸಮಯದಿಂದ ವಾಸಿಸುತ್ತಿದ್ದಾರೆ.”
04018007a ಇತಿ ಬ್ರುವಾಣಾ ವಾಕ್ಯಾನಿ ಸಾ ಮಾಂ ನಿತ್ಯಮವೇದಯತ್|
04018007c ಕ್ರುಧ್ಯಂತೀಂ ಮಾಂ ಚ ಸಂಪ್ರೇಕ್ಷ್ಯ ಸಮಶಂಕತ ಮಾಂ ತ್ವಯಿ||
ಹೀಗಿನ ಮಾತುಗಳನ್ನಾಡಿ ಅವಳು ಯಾವಾಗಲೂ ನನ್ನನ್ನು ನೋಯಿಸುತ್ತಿರುತ್ತಾಳೆ. ನಾನು ಸಿಟ್ಟಾಗಿರುವುದನ್ನು ನೋಡಿ ನನ್ನನ್ನು ಮತ್ತು ನಿನ್ನನ್ನು ಶಂಕಿಸುತ್ತಾಳೆ.
04018008a ತಸ್ಯಾಂ ತಥಾ ಬ್ರುವತ್ಯಾಂ ತು ದುಃಖಂ ಮಾಂ ಮಹದಾವಿಶತ್|
04018008c ಶೋಕೇ ಯೌಧಿಷ್ಠಿರೇ ಮಗ್ನಾ ನಾಹಂ ಜೀವಿತುಮುತ್ಸಹೇ||
ಅವಳು ನನ್ನಲ್ಲಿ ಹೀಗೆ ಹೇಳುವಾಗ ನನಗೆ ಮಹಾ ದುಃಖವಾಗುತ್ತದೆ. ಯುಧಿಷ್ಠಿರನ ಶೋಕದಲ್ಲಿ ಮುಳುಗಿರುವ ನನಗೆ ಬದುಕುವ ಆಸೆಯಿಲ್ಲ.
04018009a ಯಃ ಸದೇವಾನ್ಮನುಷ್ಯಾಂಶ್ಚ ಸರ್ಪಾಂಶ್ಚೈಕರಥೋಽಜಯತ್|
04018009c ಸೋಽಯಂ ರಾಜ್ಞೋ ವಿರಾಟಸ್ಯ ಕನ್ಯಾನಾಂ ನರ್ತಕೋ ಯುವಾ||
ದೇವಮಾನವರನ್ನೂ ಸರ್ಪರನ್ನೂ ಏಕರಥನಾಗಿ ಗೆದ್ದ ಯುವಕನು ಇಂದು ವಿರಾಟ ರಾಜನ ಕನ್ಯೆಯರಿಗೆ ನರ್ತಕನಾಗಿದ್ದಾನೆ.
04018010a ಯೋಽತರ್ಪಯದಮೇಯಾತ್ಮಾ ಖಾಂಡವೇ ಜಾತವೇದಸಂ|
04018010c ಸೋಽಅಂತಃಪುರಗತಃ ಪಾರ್ಥಃ ಕೂಪೇಽಗ್ನಿರಿವ ಸಂವೃತಃ||
ಖಾಂಡವದಲ್ಲಿ ಜಾತವೇದಸನನ್ನು ತೃಪ್ತಿಗೊಳಿಸಿದ ಅಮೇಯಾತ್ಮ ಪಾರ್ಥನು ಇಂದು ಬಾವಿಯಲ್ಲಿ ಅಡಗಿಕೊಂಡ ಅಗ್ನಿಯಂತೆ ಅಂತಃಪುರವನ್ನು ಸೇರಿದ್ದಾನೆ.
04018011a ಯಸ್ಮಾದ್ಭಯಮಮಿತ್ರಾಣಾಂ ಸದೈವ ಪುರುಷರ್ಷಭಾತ್|
04018011c ಸ ಲೋಕಪರಿಭೂತೇನ ವೇಷೇಣಾಸ್ತೇ ಧನಂಜಯಃ||
ಯಾವ ಪುರುಷರ್ಷಭನಿಂದ ಯಾವಾಗಲೂ ಶತ್ರುಗಳು ಭಯಪಡುತ್ತಿದ್ದರೋ ಆ ಧನಂಜಯನು ಇಂದು ಲೋಕನಿಂದ್ಯವಾದ ವೇಷದಲ್ಲಿದ್ದಾನೆ.
04018012a ಯಸ್ಯ ಜ್ಯಾತಲನಿರ್ಘೋಷಾತ್ಸಮಕಂಪಂತ ಶತ್ರವಃ|
04018012c ಸ್ತ್ರಿಯೋ ಗೀತಸ್ವನಂ ತಸ್ಯ ಮುದಿತಾಃ ಪರ್ಯುಪಾಸತೇ||
ಯಾರ ಬಿಲ್ಲಿನ ಹೆದೆಯ ಘೋಷದಿಂದ ಶತ್ರುಗಳು ನಡುಗುತ್ತಿದ್ದರೋ ಅವನ ಗೀತಸ್ವನವನ್ನು ಸ್ತ್ರೀಯರು ಇಂದು ಸಂತೋಷದಿಂದ ಆಲಿಸುತ್ತಿದ್ದಾರೆ.
04018013a ಕಿರೀಟಂ ಸೂರ್ಯಸಂಕಾಶಂ ಯಸ್ಯ ಮೂರ್ಧನಿ ಶೋಭತೇ|
04018013c ವೇಣೀವಿಕೃತಕೇಶಾಂತಃ ಸೋಽಯಮದ್ಯ ಧನಂಜಯಃ||
ಯಾರ ತಲೆಯ ಮೇಲೆ ಸೂರ್ಯನಂತೆ ಬಿರುಗುತ್ತಿದ್ದ ಕಿರೀಟವು ಶೋಭಿಸುತ್ತಿತ್ತೋ ಆ ಧನಂಜಯನ ತಲೆಗೂದಲು ಇಂದು ಜಡೆಯಿಂದ ವಿಕೃತವಾಗಿದೆ.
04018014a ಯಸ್ಮಿನ್ನಸ್ತ್ರಾಣಿ ದಿವ್ಯಾನಿ ಸಮಸ್ತಾನಿ ಮಹಾತ್ಮನಿ|
04018014c ಆಧಾರಃ ಸರ್ವವಿದ್ಯಾನಾಂ ಸ ಧಾರಯತಿ ಕುಂಡಲೇ||
ಸಮಸ್ತ ದಿವ್ಯಾಸ್ತ್ರಗಳನ್ನುಳ್ಳ ಸರ್ವವಿದ್ಯೆಗಳಿಗೂ ಆಧಾರನಾಗಿರುವ ಮಹಾತ್ಮನು ಇಂದು ಕುಂಡಲಗಳನ್ನು ಧರಿಸಿದ್ದಾನೆ.
04018015a ಯಂ ಸ್ಮ ರಾಜಸಹಸ್ರಾಣಿ ತೇಜಸಾಪ್ರತಿಮಾನಿ ವೈ|
04018015c ಸಮರೇ ನಾತಿವರ್ತಂತೇ ವೇಲಾಮಿವ ಮಹಾರ್ಣವಃ||
ದಾಟಲಾಗದ ಮಹಾಸಾಗರದಂತಿರುವ ಇವನನ್ನು ಅಪ್ರತಿಮ ತೇಜಸರಾದ ಸಹಸ್ರಾರು ರಾಜರುಗಳಿಂದಲೂ ಸಮರದಲ್ಲಿ ಜಯಿಸಲಾಗುತ್ತಿರಲಿಲ್ಲ.
04018016a ಸೋಽಯಂ ರಾಜ್ಞೋ ವಿರಾಟಸ್ಯ ಕನ್ಯಾನಾಂ ನರ್ತಕೋ ಯುವಾ|
04018016c ಆಸ್ತೇ ವೇಷಪ್ರತಿಚ್ಛನ್ನಃ ಕನ್ಯಾನಾಂ ಪರಿಚಾರಕಃ||
ಆ ಯುವಕನೇ ಇಂದು ರಾಜ ವಿರಾಟನ ಕನ್ಯೆಯರ ನರ್ತಕನಾಗಿದ್ದಾನೆ. ವೇಷ ಮರೆಸಿಕೊಂಡು ಆ ಕನ್ಯೆಯರ ಪರಿಚಾರಕನಾಗಿದ್ದಾನೆ.
04018017a ಯಸ್ಯ ಸ್ಮ ರಥಘೋಷೇಣ ಸಮಕಂಪತ ಮೇದಿನೀ|
04018017c ಸಪರ್ವತವನಾ ಭೀಮ ಸಹಸ್ಥಾವರಜಂಗಮಾ||
ಭೀಮ! ಇವನ ರಥಘೋಷದಿಂದ ಪರ್ವತ ವನಗಳೊಂದಿಗೆ, ಸ್ಥಾವರಜಂಗಮಗಳೊಂದಿಗೆ ಇಡೀ ಮೇದಿನಿಯು ಕಂಪಿಸುತ್ತಿತ್ತು.
04018018a ಯಸ್ಮಿಂ ಜಾತೇ ಮಹಾಭಾಗೇ ಕುಂತ್ಯಾಃ ಶೋಕೋ ವ್ಯನಶ್ಯತ|
04018018c ಸ ಶೋಚಯತಿ ಮಾಮದ್ಯ ಭೀಮಸೇನ ತವಾನುಜಃ||
ಭೀಮಸೇನ! ಯಾರ ಹುಟ್ಟಿನಿಂದ ಕುಂತಿಯ ಶೋಕವು ಅಳಿಯಿತೋ ಆ ಮಹಾಭಾಗ, ನಿನ್ನ ತಮ್ಮನ ಕುರಿತು ನನಗೆ ದುಃಖವಾಗುತ್ತದೆ.
04018019a ಭೂಷಿತಂ ತಮಲಂಕಾರೈಃ ಕುಂಡಲೈಃ ಪರಿಹಾಟಕೈಃ|
04018019c ಕಂಬುಪಾಣಿನಮಾಯಾಂತಂ ದೃಷ್ಟ್ವಾ ಸೀದತಿ ಮೇ ಮನಃ||
ಚಿನ್ನದ ಕುಂಡಲಗಳಿಂದ ಅಲಂಕೃತನಾಗಿ ಕೈಯಲ್ಲಿ ಚಿಪ್ಪಿನ ಬಳೆಗಳನ್ನು ತೊಟ್ಟು ಬರುವ ಅವನನ್ನು ನೋಡಿ ನನ್ನ ಮನಸ್ಸು ನೋಯುತ್ತದೆ.
04018020a ತಂ ವೇಣೀಕೃತಕೇಶಾಂತಂ ಭೀಮಧನ್ವಾನಮರ್ಜುನಂ|
04018020c ಕನ್ಯಾಪರಿವೃತಂ ದೃಷ್ಟ್ವಾ ಭೀಮ ಸೀದತಿ ಮೇ ಮನಃ||
ಭಯಂಕರ ಬಿಲ್ಗಾರನಾದ ಅರ್ಜುನನು ತಲೆಗೂದಲನ್ನು ಜಡೆ ಹೆಣೆದುಕೊಂಡು ಕನ್ಯೆಯರಿಂದ ಸುತ್ತುವರೆದಿರುವುದನ್ನು ಕಂಡು ನನ್ನ ಮನಸ್ಸು ನೋಯುತ್ತದೆ.
04018021a ಯದಾ ಹ್ಯೇನಂ ಪರಿವೃತಂ ಕನ್ಯಾಭಿರ್ದೇವರೂಪಿಣಂ|
04018021c ಪ್ರಭಿನ್ನಮಿವ ಮಾತಂಗಂ ಪರಿಕೀರ್ಣಂ ಕರೇಣುಭಿಃ||
04018022a ಮತ್ಸ್ಯಮರ್ಥಪತಿಂ ಪಾರ್ಥಂ ವಿರಾಟಂ ಸಮುಪಸ್ಥಿತಂ|
04018022c ಪಶ್ಯಾಮಿ ತೂರ್ಯಮಧ್ಯಸ್ಥಂ ದಿಶೋ ನಶ್ಯಂತಿ ಮೇ ತದಾ||
ಮತ್ಸ್ಯರಾಜ ವಿರಾಟನ ಸಮುಪಸ್ಥಿತಿಯಲ್ಲಿ ಹೆಣ್ಣಾನೆಗಳಿಂದ ಸುತ್ತುವರೆಯಲ್ಪಟ್ಟ ಮದ್ದಾನೆಯಂತೆ ಈ ಕನ್ಯೆಯರಿಂದ ಸುತ್ತುವರೆಯಲ್ಪಟ್ಟು ವಾದ್ಯಗಳಿಗೆ ನರ್ತಿಸುವ ಆ ದೇವರೂಪಿಯನ್ನು ನೋಡಿ ನನಗೆ ದಿಕ್ಕೇ ತೋಚದಂತಾಗುತ್ತದೆ.
04018023a ನೂನಮಾರ್ಯಾ ನ ಜಾನಾತಿ ಕೃಚ್ಛ್ರಂ ಪ್ರಾಪ್ತಂ ಧನಂಜಯಂ|
04018023c ಅಜಾತಶತ್ರುಂ ಕೌರವ್ಯಂ ಮಗ್ನಂ ದುರ್ದ್ಯೂತದೇವಿನಂ||
ಜೂಜಿನ ಹುಚ್ಚುಹಿಡಿದಿರುವ ಅಜಾತಶತ್ರು ಕೌರವ್ಯ ಯುಧಿಷ್ಠಿರನಿಗೂ ಮತ್ತು ಧನಂಜಯನಿಗೂ ಬಂದೊದಗಿರುವ ಕಷ್ಟಗಳನ್ನು ಖಂಡಿತವಾಗಿಯೂ ಆರ್ಯೆ ಕುಂತಿಯು ತಿಳಿದಿರಲಾರಳು.
04018024a ತಥಾ ದೃಷ್ಟ್ವಾ ಯವೀಯಾಂಸಂ ಸಹದೇವಂ ಯುಧಾಂ ಪತಿಂ|
04018024c ಗೋಷು ಗೋವೇಷಮಾಯಾಂತಂ ಪಾಂಡುಭೂತಾಸ್ಮಿ ಭಾರತ||
ಹಾಗೆಯೇ ಭಾರತ! ಯುದ್ಧದಲ್ಲಿ ನಾಯಕನಾದ ನಿಮ್ಮ ಕಿರಿಯವನಾದ ಸಹದೇವನು ಗೋಪಾಲನ ವೇಷದಲ್ಲಿ ಗೋವುಗಳ ಮಧ್ಯೆ ಇರುವುದನ್ನು ನೋಡಿ ನಾನು ಬಿಳಿಚಿಕೊಳ್ಳುತ್ತೇನೆ.
04018025a ಸಹದೇವಸ್ಯ ವೃತ್ತಾನಿ ಚಿಂತಯಂತೀ ಪುನಃ ಪುನಃ|
04018025c ನ ವಿಂದಾಮಿ ಮಹಾಬಾಹೋ ಸಹದೇವಸ್ಯ ದುಷ್ಕೃತಂ|
04018025e ಯಸ್ಮಿನ್ನೇವಂವಿಧಂ ದುಃಖಂ ಪ್ರಾಪ್ನುಯಾತ್ಸತ್ಯವಿಕ್ರಮಃ||
ಮಹಾಬಾಹೋ! ಸಹದೇವನ ಕುರಿತು ಮತ್ತೆ ಮತ್ತೆ ಚಿಂತಿಸುವ ನನಗೆ ಸಹದೇವನು ಯಾವ ಕೆಟ್ಟ ಕೆಲಸವನ್ನು ಮಾಡಿದನೆಂದು ಆ ಸತ್ಯವಿಕ್ರಮನಿಗೆ ಈ ರೀತಿಯ ದುಃಖವು ಪ್ರಾಪ್ತವಾಯಿತು ಎಂದು ನನಗೆ ತಿಳಿಯದಾಗಿದೆ.
04018026a ದೂಯಾಮಿ ಭರತಶ್ರೇಷ್ಠ ದೃಷ್ಟ್ವಾ ತೇ ಭ್ರಾತರಂ ಪ್ರಿಯಂ|
04018026c ಗೋಷು ಗೋವೃಷಸಂಕಾಶಂ ಮತ್ಸ್ಯೇನಾಭಿನಿವೇಶಿತಂ||
ಭರತಶ್ರೇಷ್ಠ! ಮತ್ಸ್ಯರಾಜನಿಂದ ಗೋವುಗಳ ಮೇಲ್ವಿಚಾರಣೆಗೆ ನೇಮಕಗೊಂಡಿರುವ ಗೂಳಿಯಂತಿರುವ ನಿನ್ನ ಪ್ರಿಯ ತಮ್ಮನನ್ನು ನೋಡಿ ನನಗೆ ನೋವಾಗುತ್ತದೆ.
04018027a ಸಂರಬ್ಧಂ ರಕ್ತನೇಪಥ್ಯಂ ಗೋಪಾಲಾನಾಂ ಪುರೋಗಮಂ|
04018027c ವಿರಾಟಮಭಿನಂದಂತಮಥ ಮೇ ಭವತಿ ಜ್ವರಃ||
ಸ್ವಾಭಿಮಾನಿಯಾದ ಅವನು ಹೀಗೆ ಕೆಂಪು ಉಡುಗೆಯನ್ನುಟ್ಟು ಗೋಪಾಲ ಪ್ರಮುಖನಾಗಿ ವಿರಾಟನನ್ನು ಸಂತಸಪಡಿಸುತ್ತಿರುವುದನ್ನು ನೋಡಿ ನನಗೆ ಸಂತಾಪವಾಗುತ್ತದೆ.
04018028a ಸಹದೇವಂ ಹಿ ಮೇ ವೀರಂ ನಿತ್ಯಮಾರ್ಯಾ ಪ್ರಶಂಸತಿ|
04018028c ಮಹಾಭಿಜನಸಂಪನ್ನೋ ವೃತ್ತವಾಂ ಶೀಲವಾನಿತಿ||
04018029a ಹ್ರೀನಿಷೇಧೋ ಮಧುರವಾಗ್ಧಾರ್ಮಿಕಶ್ಚ ಪ್ರಿಯಶ್ಚ ಮೇ|
04018029c ಸ ತೇಽರಣ್ಯೇಷು ಬೋದ್ಧವ್ಯೋ ಯಾಜ್ಞಸೇನಿ ಕ್ಷಪಾಸ್ವಪಿ||
ವೀರ ಸಹದೇವನನನ್ನು ನಿತ್ಯವೂ ಆರ್ಯೆ ಕುಂತಿಯು ನನಗೆ ಈ ರೀತಿ ಹೇಳಿ ಪ್ರಶಂಸಿಸುತ್ತಿದ್ದಳು: “ಅವನು ಸತ್ಕುಲ ಸಂಪನ್ನ. ಒಳ್ಳೆಯ ವರ್ತನೆಯುಳ್ಳವನು. ಶೀಲವಂತ. ಲಜ್ಜಾಪ್ರವೃತ್ತಿಯುಳ್ಳವನು. ಸವಿಯಾಗಿ ಮಾತನಾಡುವವನು. ಧಾರ್ಮಿಕ. ನನಗೆ ಪ್ರಿಯನಾದವನು. ದ್ರೌಪದಿ! ಅವನನ್ನು ನೀನು ಇರುಳಿನಲ್ಲಿಯೂ ಎಚ್ಚರದಿಂದ ನೋಡಿಕೊಳ್ಳಬೇಕು.”
04018030a ತಂ ದೃಷ್ಟ್ವಾ ವ್ಯಾಪೃತಂ ಗೋಷು ವತ್ಸಚರ್ಮಕ್ಷಪಾಶಯಂ|
04018030c ಸಹದೇವಂ ಯುಧಾಂ ಶ್ರೇಷ್ಠಂ ಕಿಂ ನು ಜೀವಾಮಿ ಪಾಂಡವ||
ಗೋವುಗಳ ಆರೈಕೆಯಲ್ಲಿ ನಿರತನಾದ, ರಾತ್ರಿಯಲ್ಲಿ ಕರುವಿನ ಚರ್ಮದ ಮೇಲೆ ಮಲಗುವ ಆ ಯೋಧಶ್ರೇಷ್ಠ ಸಹದೇವನನ್ನು ನೋಡಿಯೂ ನಾನು ಬದುಕಬೇಕೆ ಪಾಂಡವ!
04018031a ಯಸ್ತ್ರಿಭಿರ್ನಿತ್ಯಸಂಪನ್ನೋ ರೂಪೇಣಾಸ್ತ್ರೇಣ ಮೇಧಯಾ|
04018031c ಸೋಽಶ್ವಬಂಧೋ ವಿರಾಟಸ್ಯ ಪಶ್ಯ ಕಾಲಸ್ಯ ಪರ್ಯಯಂ||
ರೂಪ, ಅಸ್ತ್ರ, ಬುದ್ಧಿ ಮೂರರಲ್ಲೂ ಸದಾ ಸಂಪನ್ನನಾಗಿರುವ ಆ ನಕುಲನು ವಿರಾಟನ ಅಶ್ವಪಾಲಕನಾಗಿದ್ದಾನೆ. ಕಾಲದ ವೈಪರೀತ್ಯವನ್ನು ನೋಡು.
04018032a ಅಭ್ಯಕೀರ್ಯಂತ ವೃಂದಾನಿ ದಾಮಗ್ರಂಥಿಮುದೀಕ್ಷತಾಂ|
04018032c ವಿನಯಂತಂ ಜವೇನಾಶ್ವಾನ್ಮಹಾರಾಜಸ್ಯ ಪಶ್ಯತಃ||
ಮಹಾರಾಜನು ನೋಡಲೆಂದು ಕುದುರೆಗಳನ್ನು ವೇಗವಾಗಿ ಓಡಿಸುವ ದಾಮಗ್ರಂಥಿಯನ್ನು ನೋಡಲು ಜನಸಮೂಹ ಕಿಕ್ಕಿರಿಯುತ್ತದೆ.
04018033a ಅಪಶ್ಯಮೇನಂ ಶ್ರೀಮಂತಂ ಮತ್ಸ್ಯಂ ಭ್ರಾಜಿಷ್ಣುಮುತ್ತಮಂ|
04018033c ವಿರಾಟಮುಪತಿಷ್ಠಂತಂ ದರ್ಶಯಂತಂ ಚ ವಾಜಿನಃ||
ಶ್ರೀಮಂತನೂ, ತೇಜಸ್ವಿಯೂ ಉತ್ತಮನೂ ಆದ ಮತ್ಸ್ಯರಾಜ ವಿರಾಟನ ಎದಿರು ಅವನು ಕುದುರೆಗಳನ್ನು ಪ್ರದರ್ಶಿಸುವುದನ್ನು ನಾನು ನೋಡಿದ್ದೇನೆ.
04018034a ಕಿಂ ನು ಮಾಂ ಮನ್ಯಸೇ ಪಾರ್ಥ ಸುಖಿತೇತಿ ಪರಂತಪ|
04018034c ಏವಂ ದುಃಖಶತಾವಿಷ್ಟಾ ಯುಧಿಷ್ಠಿರನಿಮಿತ್ತತಃ||
ಪರಂತಪ! ಪಾರ್ಥ! ಯುಧಿಷ್ಠಿರನಿಂದ ಹೀಗೆ ನೂರಾರು ದುಃಖಗಳಿಗೆ ಒಳಗಾಗಿರುವ ನಾನು ಸುಖಿಯೆಂದು ಹೇಗೆ ತಾನೆ ಭಾವಿಸುವೆ?
04018035a ಅತಃ ಪ್ರತಿವಿಶಿಷ್ಟಾನಿ ದುಃಖಾನ್ಯನ್ಯಾನಿ ಭಾರತ|
04018035c ವರ್ತಂತೇ ಮಯಿ ಕೌಂತೇಯ ವಕ್ಷ್ಯಾಮಿ ಶೃಣು ತಾನ್ಯಪಿ||
ಭಾರತ! ಕೌಂತೇಯ! ಇವುಗಳಿಗೂ ವಿಶೇಷವಾದ ಬೇರೆ ದುಃಖಗಳು ನನಗಿವೆ. ಅವುಗಳನ್ನೂ ಹೇಳುತ್ತೇನೆ. ಕೇಳು.
04018036a ಯುಷ್ಮಾಸು ಧ್ರಿಯಮಾಣೇಷು ದುಃಖಾನಿ ವಿವಿಧಾನ್ಯುತ|
04018036c ಶೋಷಯಂತಿ ಶರೀರಂ ಮೇ ಕಿಂ ನು ದುಃಖಮತಃ ಪರಂ||
ನೀನು ಬದುಕಿರುವಾಗಲೇ ವಿವಿಧ ದುಃಖಗಳು ನನ್ನ ಶರೀರವನ್ನು ಬತ್ತಿಸುತ್ತಿವೆ. ಇದಕ್ಕಿಂತಲೂ ಮಿಗಿಲಾದ ದುಃಖ ಯಾವುದಿದೆ?”
ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ಕೀಚಕವಧಪರ್ವಣಿ ದ್ರೌಪದೀಭೀಮಸಂವಾದೇ ಅಷ್ಟಾದಶೋಽಧ್ಯಾಯಃ |
ಇದು ಶ್ರೀ ಮಹಾಭಾರತದಲ್ಲಿ ವಿರಾಟಪರ್ವದಲ್ಲಿ ಕೀಚಕವಧಪರ್ವದಲ್ಲಿ ದ್ರೌಪದೀಭೀಮಸಂವಾದದಲ್ಲಿ ಹದಿನೆಂಟನೆಯ ಅಧ್ಯಾಯವು.