Virata Parva: Chapter 17

ವಿರಾಟ ಪರ್ವ: ಕೀಚಕವಧ ಪರ್ವ

೧೭

ದ್ರೌಪದಿಯು ಭೀಮನಲ್ಲಿ ತನ್ನ ದುಃಖಕ್ಕೆ ಕಾರಣವನ್ನು ಹೇಳಿಕೊಳ್ಳುವುದು (೧-೨೯).

04017001 ದ್ರೌಪದ್ಯುವಾಚ|

04017001a ಅಶೋಚ್ಯಂ ನು ಕುತಸ್ತಸ್ಯಾ ಯಸ್ಯಾ ಭರ್ತಾ ಯುಧಿಷ್ಠಿರಃ|

04017001c ಜಾನನ್ಸರ್ವಾಣಿ ದುಃಖಾನಿ ಕಿಂ ಮಾಂ ತ್ವಂ ಪರಿಪೃಚ್ಛಸಿ||

ದ್ರೌಪದಿಯು ಹೇಳಿದಳು: “ಯುಧಿಷ್ಠಿರನಿಗೆ ಪತ್ನಿಯಾಗಿರುವವಳಿಗೆ ಯಾವಾಗ ತಾನೇ ಶೋಕವೆನ್ನುವುದಿರುವುದಿಲ್ಲ? ನನ್ನ ದುಃಖದ ಕುರಿತು ಎಲ್ಲವನ್ನು ತಿಳಿದೂ ನನ್ನನ್ನು ಏಕೆ ಪ್ರಶ್ನಿಸುತ್ತಿರುವೆ?

04017002a ಯನ್ಮಾಂ ದಾಸೀಪ್ರವಾದೇನ ಪ್ರಾತಿಕಾಮೀ ತದಾನಯತ್|

04017002c ಸಭಾಯಾಂ ಪಾರ್ಷದೋ ಮಧ್ಯೇ ತನ್ಮಾಂ ದಹತಿ ಭಾರತ||

ಭಾರತ! ಅಂದು ನನ್ನನ್ನು ಸೇವಕ ಪ್ರತಿಕಾಮಿಯು ದಾಸೀ ಎಂದು ಕರೆಯುತ್ತಾ ಸಭೆಯ ಮಧ್ಯೆ ಎಳೆದುಕೊಂಡು ಹೋದನಲ್ಲ ಅದು ನನ್ನನ್ನು ಸುಡುತ್ತಿದೆ.

04017003a ಪಾರ್ಥಿವಸ್ಯ ಸುತಾ ನಾಮ ಕಾ ನು ಜೀವೇತ ಮಾದೃಶೀ|

04017003c ಅನುಭೂಯ ಭೃಶಂ ದುಃಖಮನ್ಯತ್ರ ದ್ರೌಪದೀಂ ಪ್ರಭೋ||

ಪ್ರಭೋ! ಈ ದ್ರೌಪದಿಯಲ್ಲದೇ ಬೇರೆ ಯಾವ ರಾಜಪುತ್ರಿಯು ತಾನೇ ನನ್ನ ಹಾಗೆ ರೋಷವನ್ನು ಅನುಭವಿಸಿ ಜೀವಿಸಿದ್ದಾಳು?

04017004a ವನವಾಸಗತಾಯಾಶ್ಚ ಸೈಂಧವೇನ ದುರಾತ್ಮನಾ|

04017004c ಪರಾಮರ್ಶಂ ದ್ವಿತೀಯಂ ಚ ಸೋಢುಮುತ್ಸಹತೇ ನು ಕಾ||

ಎರಡನೆಯ ಬಾರಿ, ವನವಾಸದಲ್ಲಿದ್ದಾಗ ದುರಾತ್ಮ ಸೈಂಧವನು ಮಾಡಿದ್ದುದನ್ನೂ ಸಹಿಸಿಕೊಂಡು ಯಾರುತಾನೇ ಇದ್ದಾಳು?

04017005a ಮತ್ಸ್ಯರಾಜ್ಞಃ ಸಮಕ್ಷಂ ಚ ತಸ್ಯ ಧೂರ್ತಸ್ಯ ಪಶ್ಯತಃ|

04017005c ಕೀಚಕೇನ ಪದಾ ಸ್ಪೃಷ್ಟಾ ಕಾ ನು ಜೀವೇತ ಮಾದೃಶೀ||

ಮತ್ಸ್ಯರಾಜನ ಸಮಕ್ಷಮದಲ್ಲಿಯೇ, ಆ ದೂರ್ತನು ನೋಡುತ್ತಿದ್ದಂತೆಯೇ, ಕೀಚಕನ ಕಾಲಿನಿಂದ ಒದೆಸಿಕೊಂಡ ಯಾರುತಾನೇ ನನ್ನಹಾಗೆ ಜೀವಿಸಿದ್ದಾಳು?

04017006a ಏವಂ ಬಹುವಿಧೈಃ ಕ್ಲೇಶೈಃ ಕ್ಲಿಶ್ಯಮಾನಾಂ ಚ ಭಾರತ|

04017006c ನ ಮಾಂ ಜಾನಾಸಿ ಕೌಂತೇಯ ಕಿಂ ಫಲಂ ಜೀವಿತೇನ ಮೇ||

ಭಾರತ! ಹೀಗೆ ಬಹುವಿಧದ ದುಃಖಗಳಿಂದ ಬಾಧಿತಳಾದ ನಾನು ನಿನಗೆ ಅರ್ಥವಾಗುತ್ತಿಲ್ಲ. ಕೌಂತೇಯ! ನಾನು ಬದುಕಿದ್ದು ಫಲವೇನು?

04017007a ಯೋಽಯಂ ರಾಜ್ಞೋ ವಿರಾಟಸ್ಯ ಕೀಚಕೋ ನಾಮ ಭಾರತ|

04017007c ಸೇನಾನೀಃ ಪುರುಷವ್ಯಾಘ್ರ ಸ್ಯಾಲಃ ಪರಮದುರ್ಮತಿಃ||

04017008a ಸ ಮಾಂ ಸೈರಂಧ್ರಿವೇಷೇಣ ವಸಂತೀಂ ರಾಜವೇಶ್ಮನಿ|

04017008c ನಿತ್ಯಮೇವಾಹ ದುಷ್ಟಾತ್ಮಾ ಭಾರ್ಯಾ ಮಮ ಭವೇತಿ ವೈ||

ಭಾರತ! ಪುರುಷವ್ಯಾಘ್ರ! ಈ ರಾಜ ವಿರಾಟನ ಸೇನಾನಿಯೂ ಭಾವಮೈದುನನೂ ಆದ ಕೀಚಕ ಎಂಬ ಹೆಸರಿನ ಪರಮ ದುರ್ಮತಿ ದುಷ್ಟನು ರಾಜಭವನದಲ್ಲಿ ಸೈರಂಧ್ರಿಯ ವೇಷದಲ್ಲಿ ವಾಸಿಸುತ್ತಿರುವ ನನ್ನನ್ನು ನಿತ್ಯವೂ ನನಗೆ ಹೆಂಡತಿಯಾಗು ಎಂದು ಕಾಡುತ್ತಿರುತ್ತಾನೆ.

04017009a ತೇನೋಪಮಂತ್ರ್ಯಮಾಣಾಯಾ ವಧಾರ್ಹೇಣ ಸಪತ್ನಹನ್|

04017009c ಕಾಲೇನೇವ ಫಲಂ ಪಕ್ವಂ ಹೃದಯಂ ಮೇ ವಿದೀರ್ಯತೇ||

ಶತ್ರುನಾಶಕನೇ! ವಧಾರ್ಹನಾದ ಅವನಿಂದ ಹೀಗೆ ಒತ್ತಾಯಕ್ಕೊಳಪಟ್ಟ ನನ್ನ ಹೃದಯವು ಬಹುಕಾಲದಿಂದ ಪಕ್ವವಾಗಿರುವ ಫಲದಂತೆ ಬಿರಿದುಹೋಗಿದೆ.

04017010a ಭ್ರಾತರಂ ಚ ವಿಗರ್ಹಸ್ವ ಜ್ಯೇಷ್ಠಂ ದುರ್ದ್ಯೂತದೇವಿನಂ|

04017010c ಯಸ್ಯಾಸ್ಮಿ ಕರ್ಮಣಾ ಪ್ರಾಪ್ತಾ ದುಃಖಮೇತದನಂತಕಂ||

ಮಹಾಜೂಜುಕೋರನಾದ ನಿನ್ನ ಅಣ್ಣನನ್ನು ನಿಂದಿಸು. ಅವನ ಕೆಲಸದಿಂದಲೇ ನಾನು ಈ ಕೊನೆಯಿಲ್ಲದ ದುಃಖವನ್ನು ಅನುಭವಿಸುತ್ತಿದ್ದೇನೆ.

04017011a ಕೋ ಹಿ ರಾಜ್ಯಂ ಪರಿತ್ಯಜ್ಯ ಸರ್ವಸ್ವಂ ಚಾತ್ಮನಾ ಸಹ|

04017011c ಪ್ರವ್ರಜ್ಯಾಯೈವ ದೀವ್ಯೇತ ವಿನಾ ದುರ್ದ್ಯೂತದೇವಿನಂ||

ಆ ಜೂಜಾಳಿಯ ಹೊರತು ಬೇರೆ ಯಾರು ತಾನೇ ತನ್ನನ್ನೂ, ರಾಜ್ಯವನ್ನೂ, ಸರ್ವಸ್ವವನ್ನೂ ತೊರೆದು ವನವಾಸಕ್ಕಾಗಿಯೇ ಜೂಜಾಡುತ್ತಾನೆ?

04017012a ಯದಿ ನಿಷ್ಕಸಹಸ್ರೇಣ ಯಚ್ಚಾನ್ಯತ್ಸಾರವದ್ಧನಂ|

04017012c ಸಾಯಂಪ್ರಾತರದೇವಿಷ್ಯದಪಿ ಸಂವತ್ಸರಾನ್ಬಹೂನ್||

04017013a ರುಕ್ಮಂ ಹಿರಣ್ಯಂ ವಾಸಾಂಸಿ ಯಾನಂ ಯುಗ್ಯಮಜಾವಿಕಂ|

04017013c ಅಶ್ವಾಶ್ವತರಸಂಘಾಂಶ್ಚ ನ ಜಾತು ಕ್ಷಯಮಾವಹೇತ್||

ಸಾವಿರ ನಾಣ್ಯಗಳನ್ನೂ ಮತ್ತು ಇನ್ನೂ ಸಾರವತ್ತಾದ ಧನವನ್ನಿಟ್ಟು ಅನೇಕ ವರ್ಷಗಳ ವರೆಗೆ ಬೆಳಿಗ್ಗೆ-ಸಂಜೆ ಜೂಜಾಡುತ್ತಿದ್ದರೂ ಅವನ ಚಿನ್ನ, ಬೆಳ್ಳಿ, ವಸ್ತ್ರ, ವಾಹನ, ರಥ, ಮೇಕೆ ಹಿಂಡು, ಕುದುರೆ, ಮತ್ತು ಹೇಸರಗತ್ತೆಗಳ ಸಮೂಹಗಳು ಕರಗುತ್ತಿರಲಿಲ್ಲ.

04017014a ಸೋಽಯಂ ದ್ಯೂತಪ್ರವಾದೇನ ಶ್ರಿಯಾ ಪ್ರತ್ಯವರೋಪಿತಃ|

04017014c ತೂಷ್ಣೀಮಾಸ್ತೇ ಯಥಾ ಮೂಢಃ ಸ್ವಾನಿ ಕರ್ಮಾಣಿ ಚಿಂತಯನ್||

ಜೂಜಿನ ಹುಚ್ಚಿನಲ್ಲಿ ಸಂಪತ್ತನ್ನು ಕಳೆದುಕೊಂಡು ತಾನು ಮಾಡಿದ್ದುದರ ಕುರಿತು ಚಿಂತಿಸುತ್ತಾ ಈಗ ಮೂಢನಂತೆ ಸುಮ್ಮನೆ ಕುಳಿತಿದ್ದಾನೆ.

04017015a ದಶ ನಾಗಸಹಸ್ರಾಣಿ ಪದ್ಮಿನಾಂ ಹೇಮಮಾಲಿನಾಂ|

04017015c ಯಂ ಯಾಂತಮನುಯಾಂತೀಹ ಸೋಽಯಂ ದ್ಯೂತೇನ ಜೀವತಿ||

ತಾನು ಹೊರಟಾಗ ಚಿನ್ನದ ಹಾರಗಳಿಂದ ಮತ್ತು ತಾವರೆಗಳಿಂದ ಅಲಂಕೃತವಾದ ಹತ್ತು ಸಾವಿರ ಆನೆಗಳಿಂದ ಹಿಂಬಾಲಿಸಲ್ಪಡುತ್ತಿದ್ದವನು ಇಂದು ಜೂಜಾಡಿಕೊಂಡು ಅದರಿಂದ ಜೀವಿಸುತ್ತಿದ್ದಾನೆ!

04017016a ತಥಾ ಶತಸಹಸ್ರಾಣಿ ನೃಣಾಮಮಿತತೇಜಸಾಂ|

04017016c ಉಪಾಸತೇ ಮಹಾರಾಜಮಿಂದ್ರಪ್ರಸ್ಥೇ ಯುಧಿಷ್ಠಿರಂ||

ಇಂದ್ರಪ್ರಸ್ಥದಲ್ಲಿ ಮಹಾರಾಜ ಯುಧಿಷ್ಠಿರನನ್ನು ನೂರಾರು ಸಾವಿರಾರು ಅಮಿತತೇಜಸ ಜನರು ಪೂಜಿಸುತ್ತಿದ್ದರು.

04017017a ಶತಂ ದಾಸೀಸಹಸ್ರಾಣಿ ಯಸ್ಯ ನಿತ್ಯಂ ಮಹಾನಸೇ|

04017017c ಪಾತ್ರೀಹಸ್ತಂ ದಿವಾರಾತ್ರಮತಿಥೀನ್ಭೋಜಯಂತ್ಯುತ||

ಅವನ ಅಡುಗೆ ಮನೆಯಲ್ಲಿ ನಿತ್ಯವೂ ಸಹಸ್ರ ದಾಸಿಯರು ಕೈಯಲ್ಲಿ ಪಾತ್ರೆಗಳನ್ನು ಹಿಡಿದು ಹಗಲಿರುಳು ಅತಿಥಿಗಳಿಗೆ ಊಟ ಬಡಿಸುತ್ತಿದ್ದರು.

04017018a ಏಷ ನಿಷ್ಕಸಹಸ್ರಾಣಿ ಪ್ರದಾಯ ದದತಾಂ ವರಃ|

04017018c ದ್ಯೂತಜೇನ ಹ್ಯನರ್ಥೇನ ಮಹತಾ ಸಮುಪಾವೃತಃ||

ಸಹಸ್ರನಾಣ್ಯಗಳನ್ನು ದಾನಮಾಡುತ್ತಿದ್ದ ಶ್ರೇಷ್ಠ ದಾನಿಯು ಇಂದು ದ್ಯೂತದಿಂದಾದ ದೊಡ್ಡ ಅನರ್ಥಕ್ಕೆ ಸಿಲುಕಿಕೊಂಡಿದ್ದಾನೆ.

04017019a ಏನಂ ಹಿ ಸ್ವರಸಂಪನ್ನಾ ಬಹವಃ ಸೂತಮಾಗಧಾಃ|

04017019c ಸಾಯಂಪ್ರಾತರುಪಾತಿಷ್ಠನ್ಸುಮೃಷ್ಟಮಣಿಕುಂಡಲಾಃ||

ವಿಮಲ ಮಣಿಕುಂಡಲಗಳನ್ನು ಧರಿಸಿದ್ದ ಸ್ವರಸಂಪನ್ನರಾದ ಬಹುಮಂದಿ ಹೊಗಳು ಭಟರು ಅವನನ್ನು ಸಂಜೆ ಮತ್ತು ಮುಂಜಾನೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು.

04017020a ಸಹಸ್ರಮೃಷಯೋ ಯಸ್ಯ ನಿತ್ಯಮಾಸನ್ಸಭಾಸದಃ|

04017020c ತಪಃಶ್ರುತೋಪಸಂಪನ್ನಾಃ ಸರ್ವಕಾಮೈರುಪಸ್ಥಿತಾಃ||

ತಪಃಸ್ಸಂಪನ್ನರೂ ವೇದಸಂಪನ್ನರೂ ಎಲ್ಲ ಬಯಕೆಗಳ ಸಿದ್ಧಿಸಿದ್ಧರೂ ಆದ ಸಹಸ್ರ ಋಷಿಗಳು ನಿತ್ಯವೂ ಅವನ ಸಭಾಸದರಾಗಿರುತ್ತಿದ್ದರು.

04017021a ಅಂಧಾನ್ವೃದ್ಧಾಂಸ್ತಥಾನಾಥಾನ್ಸರ್ವಾನ್ರಾಷ್ಟ್ರೇಷು ದುರ್ಗತಾನ್|

04017021c ಬಿಭರ್ತ್ಯವಿಮನಾ ನಿತ್ಯಮಾನೃಶಂಸ್ಯಾದ್ಯುಧಿಷ್ಠಿರಃ||

ಯುಧಿಷ್ಠಿರನು ರಾಷ್ಟ್ರದಲ್ಲಿದ್ದ ಎಲ್ಲ ಕುರುಡರನ್ನೂ, ವೃದ್ಧರನ್ನೂ, ಅನಾಥರನ್ನೂ ಮತ್ತು ದುರ್ಗತಿಕರನ್ನು ವಿಮನಸ್ಕನಾಗದೇ ಕರುಣೆಯಿಂದ ನಿತ್ಯವೂ ಪೋಷಿಸುತ್ತಿದ್ದನು.

04017022a ಸ ಏಷ ನಿರಯಂ ಪ್ರಾಪ್ತೋ ಮತ್ಸ್ಯಸ್ಯ ಪರಿಚಾರಕಃ|

04017022c ಸಭಾಯಾಂ ದೇವಿತಾ ರಾಜ್ಞಃ ಕಂಕೋ ಬ್ರೂತೇ ಯುಧಿಷ್ಠಿರಃ||

ಅದೇ ರಾಜ ಯುಧಿಷ್ಠಿರನು ಈಗ ದುರವಸ್ಥೆಗೀಡಾಗಿ ಮತ್ಸ್ಯರಾಜನ ಪರಿಚಾರಕನಾಗಿ ಅವನೊಂದಿಗೆ ಸಭೆಯಲ್ಲಿ ದ್ಯೂತವಾಡುತ್ತಾ ಕಂಕನೆಂದು ಕರೆಯಲ್ಪಡುತ್ತಿದ್ದಾನೆ.

04017023a ಇಂದ್ರಪ್ರಸ್ಥೇ ನಿವಸತಃ ಸಮಯೇ ಯಸ್ಯ ಪಾರ್ಥಿವಾಃ|

04017023c ಆಸನ್ಬಲಿಭೃತಃ ಸರ್ವೇ ಸೋಽದ್ಯಾನ್ಯೈರ್ಭೃತಿಮಿಚ್ಛತಿ||

ಇಂದ್ರಪ್ರಸ್ಥದಲ್ಲಿ ವಾಸಿಸುತ್ತಿದ್ದ ಸಮಯದಲ್ಲಿ ರಾಜರೆಲ್ಲರೂ ಯಾರಿಗೆ ಕಪ್ಪವನ್ನು ಕೊಡುತ್ತಿದ್ದರೋ ಅವನೇ ಇಂದು ಇತರರ ಆಶ್ರಯವನ್ನು ಕೇಳಿಕೊಂಡಿದ್ದಾನೆ.

04017024a ಪಾರ್ಥಿವಾಃ ಪೃಥಿವೀಪಾಲಾ ಯಸ್ಯಾಸನ್ವಶವರ್ತಿನಃ|

04017024c ಸ ವಶೇ ವಿವಶೋ ರಾಜಾ ಪರೇಷಾಮದ್ಯ ವರ್ತತೇ||

ಪೃಥಿವೀಪಾಲರಾದ ದೊರೆಗಳು ಯಾರ ವಶವರ್ತಿಗಳಾಗಿದ್ದರೋ ಆ ರಾಜನೇ ಇಂದು ಅಸ್ವತಂತ್ರನಾಗಿ ಇತರರ ವಶದಲ್ಲಿದ್ದಾನೆ.

04017025a ಪ್ರತಾಪ್ಯ ಪೃಥಿವೀಂ ಸರ್ವಾಂ ರಶ್ಮಿವಾನಿವ ತೇಜಸಾ|

04017025c ಸೋಽಯಂ ರಾಜ್ಞೋ ವಿರಾಟಸ್ಯ ಸಭಾಸ್ತಾರೋ ಯುಧಿಷ್ಠಿರಃ||

ಸಮಸ್ತ ಪೃಥ್ವಿಯನ್ನು ಸೂರ್ಯನಂತೆ ತೇಜಸ್ಸಿನಿಂದ ಬೆಳಗಿದ ಆ ಯುಧಿಷ್ಠಿರನು ಇಂದು ವಿರಾಟರಾಜನ ಸಭಾಸದನಾಗಿದ್ದಾನೆ.

04017026a ಯಮುಪಾಸಂತ ರಾಜಾನಃ ಸಭಾಯಾಮೃಷಿಭಿಃ ಸಹ|

04017026c ತಮುಪಾಸೀನಮದ್ಯಾನ್ಯಂ ಪಶ್ಯ ಪಾಂಡವ ಪಾಂಡವಂ||

ಪಾಂಡವ! ಸಭೆಯಲ್ಲಿ ಯಾರನ್ನು ರಾಜರು ಮತ್ತು ಋಷಿಗಳು ಪೂಜಿಸುತ್ತಿದ್ದರೋ ಆ ಪಾಂಡವನೇ ಈಗ ಇತರರನ್ನು ಪೂಜಿಸುತ್ತಿರುವುದನ್ನು ನೋಡು.

04017027a ಅತದರ್ಹಂ ಮಹಾಪ್ರಾಜ್ಞಂ ಜೀವಿತಾರ್ಥೇಽಭಿಸಂಶ್ರಿತಂ|

04017027c ದೃಷ್ಟ್ವಾ ಕಸ್ಯ ನ ದುಃಖಂ ಸ್ಯಾದ್ಧರ್ಮಾತ್ಮಾನಂ ಯುಧಿಷ್ಠಿರಂ||

ಜೀವಿತಾರ್ಥಕ್ಕಾಗಿ ಇತರರ ಆಶ್ರಯದಲ್ಲಿರುವ ಮಹಾಪ್ರಾಜ್ಞ ಧರ್ಮಾತ್ಮ ಯುಧಿಷ್ಠಿರನನ್ನು ನೋಡಿ ಯಾರಿಗೆ ತಾನೇ ದುಃಖವಾಗಲಾರದು?

04017028a ಉಪಾಸ್ತೇ ಸ್ಮ ಸಭಾಯಾಂ ಯಂ ಕೃತ್ಸ್ನಾ ವೀರ ವಸುಂಧರಾ|

04017028c ತಮುಪಾಸೀನಮದ್ಯಾನ್ಯಂ ಪಶ್ಯ ಭಾರತ ಭಾರತಂ||

ವೀರ! ಭಾರತ! ಸಭೆಯಲ್ಲಿ ಯಾರನ್ನು ಇಡೀ ಭೂಮಿಯೇ ಪೂಜಿಸುತ್ತಿತ್ತೋ ಆ ಭಾರತನೇ ಇತರರನ್ನು ಉಪಾಸಿಸುತ್ತಿರುವುದನ್ನು ನೋಡು.

04017029a ಏವಂ ಬಹುವಿಧೈರ್ದುಃಖೈಃ ಪೀಡ್ಯಮಾನಾಮನಾಥವತ್|

04017029c ಶೋಕಸಾಗರಮಧ್ಯಸ್ಥಾಂ ಕಿಂ ಮಾಂ ಭೀಮ ನ ಪಶ್ಯಸಿ||

ಭೀಮ! ಈ ರೀತಿಯಲ್ಲಿಬಹುವಿಧದ ದುಃಖಗಳಿಂದ ಶೋಕಸಾಗರದ ಮಧ್ಯದಲ್ಲಿ ನಿಂತು ಅನಾಥಳಂತೆ ಪೀಡೆಪಡುತ್ತಿರುವುದು ನಿನಗೆ ಕಾಣುತ್ತಿಲ್ಲವೇ?”

ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ಕೀಚಕವಧಪರ್ವಣಿ ದ್ರೌಪದೀಭೀಮಸಂವಾದೇ ಸಪ್ತದಶೋಽಧ್ಯಾಯಃ |

ಇದು ಶ್ರೀ ಮಹಾಭಾರತದಲ್ಲಿ ವಿರಾಟಪರ್ವದಲ್ಲಿ ಕೀಚಕವಧಪರ್ವದಲ್ಲಿ ದ್ರೌಪದೀಭೀಮಸಂವಾದದಲ್ಲಿ ಹದಿನೇಳನೆಯ ಅಧ್ಯಾಯವು.

Image result for indian motifs lilies

Comments are closed.