Virata Parva: Chapter 16

ವಿರಾಟ ಪರ್ವ: ಕೀಚಕವಧ ಪರ್ವ

೧೬

ರಾತ್ರಿ ದ್ರೌಪದಿಯು ಭೀಮಸೇನನಲ್ಲಿಗೆ ಹೋಗಿ ಎಬ್ಬಿಸಿ ಮಾತನಾಡಿದುದು

ರಾತ್ರಿ ದ್ರೌಪದಿಯು ಭೀಮಸೇನನನ್ನು ನಿದ್ದೆಯಿಂದ ಎಬ್ಬಿಸಿದುದು (೧-೧೦). ಏಕೆ ದುಃಖಿಸುತ್ತಿರುವೆಯೆಂದು ಭೀಮನು ಕೇಳುವುದು (೧೧-೧೬).

04016001 ವೈಶಂಪಾಯನ ಉವಾಚ|

04016001a ಸಾ ಹತಾ ಸೂತಪುತ್ರೇಣ ರಾಜಪುತ್ರೀ ಸಮಜ್ವಲತ್|

04016001c ವಧಂ ಕೃಷ್ಣಾ ಪರೀಪ್ಸಂತೀ ಸೇನಾವಾಹಸ್ಯ ಭಾಮಿನೀ|

04016001e ಜಗಾಮಾವಾಸಮೇವಾಥ ತದಾ ಸಾ ದ್ರುಪದಾತ್ಮಜಾ||

ವೈಶಂಪಾಯನನು ಹೇಳಿದನು: “ಸೂತಪುತ್ರನಿಂದ ಪೆಟ್ಟುತಿಂದ ಆ ದ್ರುಪದಾತ್ಮಜೆ, ಭಾಮಿನೀ ರಾಜಪುತ್ರಿ ಕೃಷ್ಣೆಯು ಕೋಪದಿಂದ ಉರಿಯುತ್ತಾ, ಆ ಸೇನಾಪತಿಯ ವಧೆಯನ್ನು ಬಯಸುತ್ತಾ ತನ್ನ ನಿವಾಸಕ್ಕೆ ಹೋದಳು.

04016002a ಕೃತ್ವಾ ಶೌಚಂ ಯಥಾನ್ಯಾಯಂ ಕೃಷ್ಣಾ ವೈ ತನುಮಧ್ಯಮಾ|

04016002c ಗಾತ್ರಾಣಿ ವಾಸಸೀ ಚೈವ ಪ್ರಕ್ಷಾಲ್ಯ ಸಲಿಲೇನ ಸಾ||

04016003a ಚಿಂತಯಾಮಾಸ ರುದತೀ ತಸ್ಯ ದುಃಖಸ್ಯ ನಿರ್ಣಯಂ|

04016003c ಕಿಂ ಕರೋಮಿ ಕ್ವ ಗಚ್ಛಾಮಿ ಕಥಂ ಕಾರ್ಯಂ ಭವೇನ್ಮಮ||

ಆ ತನುಮಧ್ಯಮೆ ಕೃಷ್ಣೆಯು ಯಥೋಚಿತವಾಗಿ ನೀರಿನಿಂದ ಸ್ನಾನಮಾಡಿ ಬಟ್ಟೆಯನ್ನು ತೊಳೆದು, ಅಳುತ್ತಲೇ - “ಈ ದುಃಖವನ್ನು ಹೋಗಲಾಡಿಸಲು ನಾನು ಏನು ಮಾಡಲಿ? ಎಲ್ಲಿಗೆ ಹೋಗಲಿ? ನನ್ನ ಈ ಕಾರ್ಯವನ್ನು ಹೇಗೆ ನೆರವೇರಿಸಲಿ?” ಎಂದು ಚಿಂತಿಸಿದಳು.

04016004a ಇತ್ಯೇವಂ ಚಿಂತಯಿತ್ವಾ ಸಾ ಭೀಮಂ ವೈ ಮನಸಾಗಮತ್|

04016004c ನಾನ್ಯಃ ಕರ್ತಾ ಋತೇ ಭೀಮಾನ್ಮಮಾದ್ಯ ಮನಸಃ ಪ್ರಿಯಂ||

ಹೀಗೆ ಚಿಂತಿಸುತ್ತಿರುವಾಗ ಅವಳಿಗೆ ಭೀಮನ ನೆನಪಾಯಿತು. “ಈಗ ಭೀಮನನ್ನು ಬಿಟ್ಟರೆ ಬೇರೆ ಯಾರೂ ನನ್ನ ಮನಸ್ಸಿಗೆ ಬೇಕಾಗಿರುವುದನ್ನು ಮಾಡುವವರಿಲ್ಲ.”

04016005a ತತ ಉತ್ಥಾಯ ರಾತ್ರೌ ಸಾ ವಿಹಾಯ ಶಯನಂ ಸ್ವಕಂ|

04016005c ಪ್ರಾದ್ರವನ್ನಾಥಮಿಚ್ಛಂತೀ ಕೃಷ್ಣಾ ನಾಥವತೀ ಸತೀ||

04016005e ದುಃಖೇನ ಮಹತಾ ಯುಕ್ತಾ ಮಾನಸೇನ ಮನಸ್ವಿನೀ||

ಆಗ ರಾತ್ರಿಯಲ್ಲಿ ಬಹುದುಃಖದಿಂದ ಕೂಡಿದ ಮನಸ್ಸುಳ್ಳವಳಾದ ಆ ಮನಸ್ವಿನೀ ನಾಥವತೀ ಸತೀ ಕೃಷ್ಣೆಯು ತನ್ನ ಹಾಸಿಗೆಯನ್ನು ಬಿಟ್ಟು ಮೇಲೆದ್ದು ರಕ್ಷಣೆಯನ್ನರಸಿ ಓಡಿದಳು.

04016006a ಸಾ ವೈ ಮಹಾನಸೇ ಪ್ರಾಪ್ಯ ಭೀಮಸೇನಂ ಶುಚಿಸ್ಮಿತಾ|

04016006c ಸರ್ವಶ್ವೇತೇವ ಮಾಹೇಯೀ ವನೇ ಜಾತಾ ತ್ರಿಹಾಯನೀ|

04016006e ಉಪಾತಿಷ್ಠತ ಪಾಂಚಾಲೀ ವಾಶಿತೇವ ಮಹಾಗಜಂ||

ವನದಲ್ಲಿ ಹುಟ್ಟಿದ ಮೂರು ವರ್ಷ ವಯಸ್ಸಿನ ಸರ್ವಶ್ವೇತವರ್ಣದ ಹಸುವಿನಂತಿದ್ದ ಆ ಬೆಳ್ನಗೆಯ ಪಾಂಚಾಲಿಯು ಹೆಣ್ಣಾನೆಯು ಮಹಾಗಜವನ್ನು ಸಮೀಪಿಸುವಂತೆ ಅಡುಗೆಯ ಮನೆಯಲ್ಲಿದ್ದ ಭೀಮಸೇನನ ಹತ್ತಿರ ಬಂದಳು.

04016007a ಸಾ ಲತೇವ ಮಹಾಶಾಲಂ ಫುಲ್ಲಂ ಗೋಮತಿತೀರಜಂ|

04016007c ಬಾಹುಭ್ಯಾಂ ಪರಿರಭ್ಯೈನಂ ಪ್ರಾಬೋಧಯದನಿಂದಿತಾ|

04016007e ಸಿಂಹಂ ಸುಪ್ತಂ ವನೇ ದುರ್ಗೇ ಮೃಗರಾಜವಧೂರಿವ||

ಗೋಮತೀ ತೀರದಲ್ಲಿ ಹೂಬಿಟ್ಟು ನಿಂತ ಮಹಾಶಾಲವನ್ನು ಲತೆಯು ಅಪ್ಪಿಕೊಳ್ಳುವಂತೆ ಅವನನ್ನು ಆ ಸುಂದರಿಯು ಅಪ್ಪಿಕೊಂಡು, ದುರ್ಗಮ ವನದಲ್ಲಿ ಹೆಣ್ಣುಸಿಂಹವೊಂದು ಮಲಗಿದ ಸಿಂಹವನ್ನು ಎಚ್ಚರಿಸುವಂತೆ ಎಚ್ಚರಿಸಿದಳು.

04016008a ವೀಣೇವ ಮಧುರಾಭಾಷಾ ಗಾಂಧಾರಂ ಸಾಧು ಮೂರ್ಚ್ಛಿತಾ|

04016008c ಅಭ್ಯಭಾಷತ ಪಾಂಚಾಲೀ ಭೀಮಸೇನಮನಿಂದಿತಾ||

ಆ ಅನಿಂದಿತೆ ಪಾಂಚಾಲಿಯು ಒಳ್ಳೆಯ ಮೂರ್ಛನೆಯುಳ್ಳ ವೀಣೆಯ ಗಾಂಧಾರಸ್ವರದಂತೆ ಸವಿಯಾದ ಧ್ವನಿಯಿಂದ ಭೀಮಸೇನನನ್ನು ಮಾತನಾಡಿಸಿದಳು.

04016009a ಉತ್ತಿಷ್ಠೋತ್ತಿಷ್ಠ ಕಿಂ ಶೇಷೇ ಭೀಮಸೇನ ಯಥಾ ಮೃತಃ|

04016009c ನಾಮೃತಸ್ಯ ಹಿ ಪಾಪೀಯಾನ್ಭಾರ್ಯಾಮಾಲಭ್ಯ ಜೀವತಿ||

“ಏಳು! ಎದ್ದೇಳು! ಸತ್ತವನಂತೆ ಏಕೆ ಮಲಗಿರುವೆ ಭೀಮಸೇನ? ಬದುಕಿರುವವನ ಹೆಂಡತಿಯನ್ನು ಅಪಮಾನಿಸಿದ ಪಾಪಿಯು ಜೀವಿಸಿರಬಾರದು.

04016010a ತಸ್ಮಿಂ ಜೀವತಿ ಪಾಪಿಷ್ಠೇ ಸೇನಾವಾಹೇ ಮಮ ದ್ವಿಷಿ|

04016010c ತತ್ಕರ್ಮ ಕೃತವತ್ಯದ್ಯ ಕಥಂ ನಿದ್ರಾಂ ನಿಷೇವಸೇ||

ನನ್ನ ವೈರಿ ಆ ಪಾಪಿಷ್ಟ ಸೇನಾಪತಿಯು ಈ ಕೆಲಸವನ್ನು ಮಾಡಿಯೂ ಜೀವಿಸಿರುವಾಗ ನೀನು ಇಂದು ಹೇಗೆ ತಾನೇ ನಿದ್ದೆ ಮಾಡುತ್ತಿರುವೆ?”

04016011a ಸ ಸಂಪ್ರಹಾಯ ಶಯನಂ ರಾಜಪುತ್ರ್ಯಾ ಪ್ರಬೋಧಿತಃ|

04016011c ಉಪಾತಿಷ್ಠತ ಮೇಘಾಭಃ ಪರ್ಯಂಕೇ ಸೋಪಸಂಗ್ರಹೇ||

ರಾಜಪುತ್ರಿಯಿಂದ ಎಬ್ಬಿಸಲ್ಪಟ್ಟ ಮೇಘಸಮಾನನಾದ ಅವನು ಸುಪ್ಪತ್ತಿಗೆಯ ಪರ್ಯಂಕದ ಮೇಲೆ ನಿದ್ದೆಯಿಂದ ಎದ್ದು ಕುಳಿತನು.

04016012a ಅಥಾಬ್ರವೀದ್ರಾಜಪುತ್ರೀಂ ಕೌರವ್ಯೋ ಮಹಿಷೀಂ ಪ್ರಿಯಾಂ|

04016012c ಕೇನಾಸ್ಯರ್ಥೇನ ಸಂಪ್ರಾಪ್ತಾ ತ್ವರಿತೇವ ಮಮಾಂತಿಕಂ||

ನಂತರ ಆ ಕೌರವ್ಯನು ರಾಜಪುತ್ರಿ ಪ್ರಿಯ ರಾಣಿಗೆ ಕೇಳಿದನು: “ಹೀಗೆ ಅವಸರದಲ್ಲಿ ನನ್ನ ಬಳಿ ಬರಲು ಕಾರಣವೇನು?

04016013a ನ ತೇ ಪ್ರಕೃತಿಮಾನ್ವರ್ಣಃ ಕೃಶಾ ಪಾಂಡುಶ್ಚ ಲಕ್ಷ್ಯಸೇ|

04016013c ಆಚಕ್ಷ್ವ ಪರಿಶೇಷೇಣ ಸರ್ವಂ ವಿದ್ಯಾಮಹಂ ಯಥಾ||

ನಿನ್ನ ಬಣ್ಣವು ಸ್ವಾಭಾವಿಕವಾಗಿಲ್ಲ. ಕೃಶಳಾಗಿಯೂ ಬಿಳಿಚಿಕೊಂಡವಳಾಗಿಯೂ ಕಾಣುತ್ತಿರುವೆ. ಎಲ್ಲವನ್ನು ವಿವರವಾಗಿ ತಿಳಿಸಿ ಹೇಳು.

04016014a ಸುಖಂ ವಾ ಯದಿ ವಾ ದುಃಖಂ ದ್ವೇಷ್ಯಂ ವಾ ಯದಿ ವಾ ಪ್ರಿಯಂ|

04016014c ಯಥಾವತ್ಸರ್ವಮಾಚಕ್ಷ್ವ ಶ್ರುತ್ವಾ ಜ್ಞಾಸ್ಯಾಮಿ ಯತ್ಪರಂ||

ಸುಖಕರವಾಗಿರಲಿ ದುಃಖಕರವಾಗಿರಲಿ, ಪ್ರೀತಿಯಿಂದ ಮಾಡಿದ್ದಾಗಿರಲಿ ಅಥವಾ ದ್ವೇಷದಿಂದ ಮಾಡಿದ್ದಾಗಿರಲಿ ಯಥಾವತ್ತಾಗಿ ಎಲ್ಲವನ್ನೂ ನನಗೆ ಹೇಳು. ಕೇಳಿದ ನಂತರ ಮುಂದಿನದ್ದರ ಕುರಿತು ಯೋಚಿಸುತ್ತೇನೆ.

04016015a ಅಹಮೇವ ಹಿ ತೇ ಕೃಷ್ಣೇ ವಿಶ್ವಾಸ್ಯಃ ಸರ್ವಕರ್ಮಸು|

04016015c ಅಹಮಾಪತ್ಸು ಚಾಪಿ ತ್ವಾಂ ಮೋಕ್ಷಯಾಮಿ ಪುನಃ ಪುನಃ||

ಕೃಷ್ಣೇ! ನಾನೇ ನಿನ್ನ ಎಲ್ಲ ಕಾರ್ಯಗಳಲ್ಲಿ ವಿಶ್ವಾಸದಲ್ಲಿರುವವನು. ನಾನಾದರೋ ಪುನಃ ಪುನಃ ನಿನ್ನನ್ನು ಆಪತ್ತುಗಳಿಂದ ಪಾರುಮಾಡುತ್ತೇನೆ.

04016016a ಶೀಘ್ರಮುಕ್ತ್ವಾ ಯಥಾಕಾಮಂ ಯತ್ತೇ ಕಾರ್ಯಂ ವಿವಕ್ಷಿತಂ|

04016016c ಗಚ್ಛ ವೈ ಶಯನಾಯೈವ ಪುರಾ ನಾನ್ಯೋಽವಬುಧ್ಯತೇ||

ನೀನು ಯಾವ ಕೆಲಸದ ಕುರಿತು ಹೇಳಬೇಕೆಂದಿರುವೆಯೋ ಅದನ್ನು ಬೇಗನೇ ಹೇಳಿ ಇತರರು ಯಾರೂ ಏಳುವುದರ ಮೊದಲೇ ನಿನ್ನ ಮಲಗುವ ಕೋಣೆಗೆ ಹೋಗು.”

ಇತಿ ಶ್ರೀ ಮಹಾಭಾರತೇ ವಿರಾಟಪರ್ವಣಿ ಕೀಚಕವಧಪರ್ವಣಿ ದ್ರೌಪದೀಭೀಮಸಂವಾದೇ ಷಷ್ಠದಶೋಽಧ್ಯಾಯಃ |

ಇದು ಶ್ರೀ ಮಹಾಭಾರತದಲ್ಲಿ ವಿರಾಟಪರ್ವದಲ್ಲಿ ಕೀಚಕವಧಪರ್ವದಲ್ಲಿ ದ್ರೌಪದೀಭೀಮಸಂವಾದದಲ್ಲಿ ಹದಿನಾರನೆಯ ಅಧ್ಯಾಯವು.

Related image

Comments are closed.