Virata Parva: Chapter 11

ವಿರಾಟ ಪರ್ವ: ವೈರಾಟ ಪರ್ವ 

೧೧

ವಿರಾಟನಲ್ಲಿ ನಕುಲನು ಅಶ್ವಪಾಲಕನಾಗಿ ನೇಮಕಗೊಂಡಿದ್ದುದು

ತನ್ನ ಆಸ್ಥಾನವನ್ನು ಪ್ರವೇಶಿಸಿದ ನಕುಲನನ್ನು ಯಾರೆಂದು ರಾಜಾ ವಿರಾಟನು ಪ್ರಶ್ನಿಸಿದುದು (೧-೫). ನಕುಲ-ವಿರಾಟರ ಸಂಭಾಷಣೆ ಮತ್ತು ನಕುಲನು ವಿರಾಟನ ಕುದುರೆಲಾಯದಲ್ಲಿ ನೇಮಕಗೊಳ್ಳುವುದು (೬-೧೩).

04011001 ವೈಶಂಪಾಯನ ಉವಾಚ|

04011001a ಅಥಾಪರೋಽದೃಶ್ಯತ ಪಾಂಡವಃ ಪ್ರಭುಃ|

         ವಿರಾಟರಾಜ್ಞಸ್ತುರಗಾನ್ಸಮೀಕ್ಷತಃ|

04011001c ತಮಾಪತಂತಂ ದದೃಶೇ ಪೃಥಗ್ಜನೋ|

         ವಿಮುಕ್ತಮಭ್ರಾದಿವ ಸೂರ್ಯಮಂಡಲಂ||

ವೈಶಂಪಾಯನನು ಹೇಳಿದನು: “ಅನಂತರ ತನ್ನ ಕುದುರೆಗಳನ್ನು ನೋಡುತ್ತಿದ್ದ ವಿರಾಟರಾಜನಿಗೆ ಇನ್ನೊಬ್ಬ ಪಾಂಡವ ಪ್ರಭು ಕಾಣಿಸಿಕೊಂಡನು. ಮೋಡದಿಂದ ಮುಕ್ತನಾಗಿ ಮೇಲೇರಿ ಬರುತ್ತಿರುವ ಸೂರ್ಯಮಂಡಲದಂತಿದ್ದ ಅವನನ್ನು ಪ್ರತಿಯೊಬ್ಬರೂ ನೋಡಿದನು.

04011002a ಸ ವೈ ಹಯಾನೈಕ್ಷತ ತಾಂಸ್ತತಸ್ತತಃ|

         ಸಮೀಕ್ಷಮಾಣಂ ಚ ದದರ್ಶ ಮತ್ಸ್ಯರಾಟ್|

04011002c ತತೋಽಬ್ರವೀತ್ತಾನನುಗಾನಮಿತ್ರಹಾ|

         ಕುತೋಽಯಮಾಯಾತಿ ನರೋಽಮರಪ್ರಭಃ||

ಅವನು ಕೂಡ ಕುದುರೆಗಳನ್ನು ನೋಡುತ್ತಿದ್ದನು. ಹಾಗೆ ನೋಡುತ್ತಿದ್ದ ಅವನನ್ನು ಮತ್ಸ್ಯರಾಜನು ಕಂಡನು. ಬಳಿಕ ಆ ಶತ್ರುನಾಶಕ ತನ್ನ ಅನುಚರರಲ್ಲಿ ಕೇಳಿದನು: “ದೇವತೆಗಳಂತೆ ಹೊಳೆಯುತ್ತಿರುವ ಈ ವ್ಯಕ್ತಿ ಎಲ್ಲಿಂದ ಬರುತ್ತಿದ್ದಾನೆ?

04011003a ಅಯಂ ಹಯಾನ್ವೀಕ್ಷತಿ ಮಾಮಕಾನ್ದೃಢಂ|

         ಧ್ರುವಂ ಹಯಜ್ಞೋ ಭವಿತಾ ವಿಚಕ್ಷಣಃ|

04011003c ಪ್ರವೇಶ್ಯತಾಮೇಷ ಸಮೀಪಮಾಶು ಮೇ|

         ವಿಭಾತಿ ವೀರೋ ಹಿ ಯಥಾಮರಸ್ತಥಾ||

ನನ್ನ ಕುದುರೆಗಳನ್ನು ಚೆನ್ನಾಗಿ ನೋಡುತ್ತಿರುವ ಇವನು ವಿಚಕ್ಷಣನಾದ ಹಯಜ್ಞನಾಗಿರಲೇ ಬೇಕು. ದೇವತೆಯಂತೆ ಹೊಳೆಯುತ್ತಿರುವ ಆ ವೀರನನ್ನು ನನ್ನ ಬಳಿ ಬೇಗ ಬರಮಾಡಿ.”

04011004a ಅಭ್ಯೇತ್ಯ ರಾಜಾನಮಮಿತ್ರಹಾಬ್ರವೀಜ್|

         ಜಯೋಽಸ್ತು ತೇ ಪಾರ್ಥಿವ ಭದ್ರಮಸ್ತು ಚ|

04011004c ಹಯೇಷು ಯುಕ್ತೋ ನೃಪ ಸಮ್ಮತಃ ಸದಾ|

         ತವಾಶ್ವಸೂತೋ ನಿಪುಣೋ ಭವಾಮ್ಯಹಂ||

ಆ ಶತ್ರುನಾಶಕನು ರಾಜನ ಬಳಿ ಹೋಗಿ ಹೇಳಿದನು: “ಅರಸ ! ನಿನಗೆ ಜಯವಾಗಲಿ! ಮಂಗಳವಾಗಲಿ! ದೊರೆಯೇ! ಕುದುರೆಗಳ ವಿಷಯದಲ್ಲಿ ಚೆನ್ನಾಗಿ ತಿಳಿದಿರುವ ನಾನು ಸದಾ ಸಮ್ಮತನಾಗಿದ್ದೇನೆ. ನಾನು ನಿನ್ನ ಕುದುರೆಗಳಿಗೆ ನಿಪುಣನಾದ ಸೂತನಾಗುವೆ.”

04011005 ವಿರಾಟ ಉವಾಚ|

04011005a ದದಾಮಿ ಯಾನಾನಿ ಧನಂ ನಿವೇಶನಂ|

         ಮಮಾಶ್ವಸೂತೋ ಭವಿತುಂ ತ್ವಮರ್ಹಸಿ|

04011005c ಕುತೋಽಸಿ ಕಸ್ಯಾಸಿ ಕಥಂ ತ್ವಮಾಗತಃ|

         ಪ್ರಬ್ರೂಹಿ ಶಿಲ್ಪಂ ತವ ವಿದ್ಯತೇ ಚ ಯತ್||

ವಿರಾಟನು ಹೇಳಿದನು: “ನಿನಗೆ ವಾಹನಗಳನ್ನೂ, ಹಣವನ್ನೂ, ಮನೆಯನ್ನೂ ಕೊಡುತ್ತೇನೆ. ನನ್ನ ಕುದುರೆಗಳಿಗೆ ಸೂತನಾಗಲು ಅರ್ಹನಾಗಿದ್ದೀಯೆ. ನೀನು ಎಲ್ಲಿಂದ ಬಂದೆ, ಯಾರ ಮಗ, ಹೇಗೆ ಬಂದೆ ಎನ್ನುವುದನ್ನೂ ನೀನು ಬಲ್ಲ ಕುಶಲತೆಯನ್ನೂ ತಿಳಿಸು.”

04011006 ನಕುಲ ಉವಾಚ|

04011006a ಪಂಚಾನಾಂ ಪಾಂಡುಪುತ್ರಾಣಾಂ ಜ್ಯೇಷ್ಠೋ ರಾಜಾ ಯುಧಿಷ್ಠಿರಃ|

04011006c ತೇನಾಹಮಶ್ವೇಷು ಪುರಾ ಪ್ರಕೃತಃ ಶತ್ರುಕರ್ಶನ||

ನಕುಲನು ಹೇಳಿದನು: “ಶತ್ರುಕರ್ಶನ! ಐವರು ಪಾಂಡುಪುತ್ರರಲ್ಲಿ ಹಿರಿಯನಾದವನು ರಾಜಾ ಯುಧಿಷ್ಠಿರ. ಅವನು ತನ್ನ ಕುದುರೆಗಳನ್ನು ನೋಡಿಕೊಳ್ಳಲು ನನ್ನನ್ನು ಹಿಂದೆ ನೇಮಿಸಿಕೊಂಡಿದ್ದನು.

04011007a ಅಶ್ವಾನಾಂ ಪ್ರಕೃತಿಂ ವೇದ್ಮಿ ವಿನಯಂ ಚಾಪಿ ಸರ್ವಶಃ|

04011007c ದುಷ್ಟಾನಾಂ ಪ್ರತಿಪತ್ತಿಂ ಚ ಕೃತ್ಸ್ನಂ ಚೈವ ಚಿಕಿತ್ಸಿತಂ||

ಕುದುರೆಗಳ ಪ್ರಕೃತಿ, ಅವುಗಳಿಗೆ ಶಿಕ್ಷಣವನ್ನು ಕಲಿಸುವುದನ್ನೂ, ದುಷ್ಟ ಕುದುರೆಗಳನ್ನು ಪಳಗಿಸುವುದನ್ನೂ ಮತ್ತು ಅವುಗಳಿಗೆ ಎಲ್ಲ ರೀತಿಯ ಚಿಕಿತ್ಸೆಗಳನ್ನೂ ನಾನು ತಿಳಿದಿದ್ದೇನೆ.

04011008a ನ ಕಾತರಂ ಸ್ಯಾನ್ಮಮ ಜಾತು ವಾಹನಂ|

         ನ ಮೇಽಸ್ತಿ ದುಷ್ಟಾ ವಡವಾ ಕುತೋ ಹಯಾಃ|

04011008c ಜನಸ್ತು ಮಾಮಾಹ ಸ ಚಾಪಿ ಪಾಂಡವೋ|

         ಯುಧಿಷ್ಠಿರೋ ಗ್ರಂಥಿಕಮೇವ ನಾಮತಃ||

ನನ್ನ ಕೈಯಲ್ಲಿ ಯಾವ ಕುದುರೆಯೂ ಬೆದರುವುದಿಲ್ಲ. ನಾನು ಪಳಗಿಸಿದ ಹೆಣ್ಣು ಕುದುರೆಗಳು ತಂಟೆ ಮಾಡುವುದಿಲ್ಲ. ಇನ್ನು ಗಂಡುಕುದುರುಗಳು ಹೇಗಿದ್ದಾವು! ಜನರು ಮತ್ತು ಪಾಂಡವ ಯುಧಿಷ್ಠಿರನೂ ನನ್ನನ್ನು ಗ್ರಂಥಿಕನೆಂಬ ಹೆಸರಿನಿಂದ ಕರೆಯುತ್ತಿದ್ದರು.”

04011009 ವಿರಾಟ ಉವಾಚ|

04011009a ಯದಸ್ತಿ ಕಿಂ ಚಿನ್ಮಮ ವಾಜಿವಾಹನಂ|

         ತದಸ್ತು ಸರ್ವಂ ತ್ವದಧೀನಮದ್ಯ ವೈ|

04011009c ಯೇ ಚಾಪಿ ಕೇ ಚಿನ್ಮಮ ವಾಜಿಯೋಜಕಾಸ್|

         ತ್ವದಾಶ್ರಯಾಃ ಸಾರಥಯಶ್ಚ ಸಂತು ಮೇ||

ವಿರಾಟನು ಹೇಳಿದನು: “ಇಂದಿನಿಂದ ನನ್ನ ಕುದುರೆಗಳು ಮತ್ತು ರಥಗಳೆಲ್ಲವೂ ನಿನ್ನ ಅಧೀನದಲ್ಲಿರಲಿ. ನನ್ನ ಅಶ್ವಯೋಜಕರೂ ಸಾರಥಿಗಳೂ ನಿನ್ನ ಆಶ್ರಯದಲ್ಲಿರಲಿ.

04011010a ಇದಂ ತವೇಷ್ಟಂ ಯದಿ ವೈ ಸುರೋಪಮ|

         ಬ್ರವೀಹಿ ಯತ್ತೇ ಪ್ರಸಮೀಕ್ಷಿತಂ ವಸು|

04011010c ನ ತೇಽನುರೂಪಂ ಹಯಕರ್ಮ ವಿದ್ಯತೇ|

         ಪ್ರಭಾಸಿ ರಾಜೇವ ಹಿ ಸಮ್ಮತೋ ಮಮ||

ಸುರೋಪಮ! ನಿನಗೆ ಇದು ಇಷ್ಟವಾದರೆ ನೀನು ಬಯಸುವ ವೇತನವನ್ನು ತಿಳಿಸು. ಹಯಕರ್ಮ ನಿನಗೆ ಅನುರೂಪವಾದದ್ದಲ್ಲ ಎಂದು ನನಗನ್ನಿಸುತ್ತದೆ. ರಾಜನಂತೆ ಹೊಳೆಯುತ್ತಿರುವ ನೀನು ನನ್ನ ಸಮ್ಮತನಾಗಿರುವೆ.

04011011a ಯುಧಿಷ್ಠಿರಸ್ಯೇವ ಹಿ ದರ್ಶನೇನ ಮೇ|

         ಸಮಂ ತವೇದಂ ಪ್ರಿಯದರ್ಶ ದರ್ಶನಂ|

04011011c ಕಥಂ ತು ಭೃತ್ಯೈಃ ಸ ವಿನಾಕೃತೋ ವನೇ|

         ವಸತ್ಯನಿಂದ್ಯೋ ರಮತೇ ಚ ಪಾಂಡವಃ||

ಸುಂದರಾಂಗ! ನಿನ್ನ ಈ ದರ್ಶನವು ನನಗೆ ಯುಧಿಷ್ಠಿರನ ದರ್ಶನಕ್ಕೆ ಸಮನಾಗಿದೆ. ದೋಷರಹಿತನಾದ ಆ ಪಾಂಡವನು ಸೇವಕರಿಲ್ಲದೇ ವನದಲ್ಲಿ ಹೇಗೆ ವಾಸಿಸುತ್ತಿದ್ದಾನೆ? ಹೇಗೆ ಸಂತೋಷಪಡುತ್ತಿದ್ದಾನೆ?””

04011012 ವೈಶಂಪಾಯನ ಉವಾಚ|

04011012a ತಥಾ ಸ ಗಂಧರ್ವವರೋಪಮೋ ಯುವಾ|

         ವಿರಾಟರಾಜ್ಞಾ ಮುದಿತೇನ ಪೂಜಿತಃ|

04011012c ನ ಚೈನಮನ್ಯೇಽಪಿ ವಿದುಃ ಕಥಂ ಚನ|

         ಪ್ರಿಯಾಭಿರಾಮಂ ವಿಚರಂತಮಂತರಾ||

ವೈಶಂಪಾಯನನು ಹೇಳಿದನು: “ಹಾಗೆ ಆ ಗಂಧರ್ವರಾಜಸಮನಾದ ಯುವಕನು ಹರ್ಷಿತ ವಿರಾಟರಾಜನಿಂದ ಸತ್ಕೃತನಾದನು. ನಗರದಲ್ಲಿ ಪ್ರಿಯನೂ ಸಂತೋಷದಾಯಕನೂ ಆಗಿ ಓಡಾಡುತ್ತಿದ್ದ ಅವನನ್ನು ಬೇರೆ ಯಾರೂ ಗುರುತಿಸಲಿಲ್ಲ.

04011013a ಏವಂ ಹಿ ಮತ್ಸ್ಯೇ ನ್ಯವಸಂತ ಪಾಂಡವಾ|

         ಯಥಾಪ್ರತಿಜ್ಞಾಭಿರಮೋಘದರ್ಶನಾಃ|

04011013c ಅಜ್ಞಾತಚರ್ಯಾಂ ವ್ಯಚರನ್ಸಮಾಹಿತಾಃ|

         ಸಮುದ್ರನೇಮೀಪತಯೋಽತಿದುಃಖಿತಾಃ|

ಈ ರೀತಿಯಲ್ಲಿ ಆ ಅಮೋಘದರ್ಶನ ಪಾಂಡವರು ಮತ್ಸ್ಯರಾಜನ ಬಳಿಯಲ್ಲಿ ವಾಸಿಸುತ್ತಿದ್ದರು. ಸಮುದ್ರಪರ್ಯಂತವಾದ ಭೂಮಿಯ ಒಡೆಯರು ತಮ್ಮ ಪ್ರತಿಜ್ಞೆಗನುಸಾರವಾಗಿ ತುಂಬ ದುಃಖಿತರಾಗಿ ಆದರೂ ಸಮಾಧಾನಚಿತ್ತರಾಗಿ ಅಜ್ಞಾತವಾಸವನ್ನು ಮಾಡುತ್ತಿದ್ದರು.”

ಇತಿ ಶ್ರೀಮಹಾಭಾರತೇ ವಿರಾಟಪರ್ವಣಿ ವೈರಾಟಪರ್ವಣಿ ಪುರಪ್ರವೇಶೇ ನಕುಲಪ್ರವೇಶೋ ನಾಮ ಏಕಾದಶೋಽಧ್ಯಾಯಃ||

ಇದು ಶ್ರೀ ಮಹಾಭಾರತದ ವಿರಾಟಪರ್ವದಲ್ಲಿ ವೈರಾಟಪರ್ವದಲ್ಲಿ ಪುರಪ್ರವೇಶದಲ್ಲಿ ನಕುಲಪ್ರವೇಶವೆನ್ನುವ ಹನ್ನೊಂದನೆಯ ಅಧ್ಯಾಯವು.

Related image

Comments are closed.