Virata Parva: Chapter 10

ವಿರಾಟ ಪರ್ವ: ವೈರಾಟ ಪರ್ವ 

೧೦

ವಿರಾಟನ ಆಸ್ಥಾನದಲ್ಲಿ ಅರ್ಜುನನ ಆಗಮನ

ನಪುಂಸಕನ ವೇಷದಲ್ಲಿ ತನ್ನ ಆಸ್ಥಾನವನ್ನು ಪ್ರವೇಶಿಸಿದ ಅರ್ಜುನನ್ನು ಯಾರೆಂದು ರಾಜಾ ವಿರಾಟನು ಪ್ರಶ್ನಿಸಿದುದು (೧-೭). ಅರ್ಜುನ-ವಿರಾಟರ ಸಂಭಾಷಣೆ ಮತ್ತು ಅರ್ಜುನನು ಬೃಹನ್ನಡಾ ಎಂಬ ಹೆಸರಿನಲ್ಲಿ ವಿರಾಟನ ಅಂತಃಪುರದಲ್ಲಿ ಅವನ ಮಗಳು ಉತ್ತರೆಗೆ ಗೀತ-ನಾಟ್ಯಗಳ ಗುರುವಾಗಿ ನೇಮಕಗೊಳ್ಳುವುದು (೮-೧೩).

Image result for sahadev in virata04010001 ವೈಶಂಪಾಯನ ಉವಾಚ|

04010001a ಅಥಾಪರೋಽದೃಶ್ಯತ ರೂಪಸಂಪದಾ|

         ಸ್ತ್ರೀಣಾಮಲಂಕಾರಧರೋ ಬೃಹತ್ಪುಮಾನ್|

04010001c ಪ್ರಾಕಾರವಪ್ರೇ ಪ್ರತಿಮುಚ್ಯ ಕುಂಡಲೇ|

         ದೀರ್ಘೇ ಚ ಕಂಬೂ ಪರಿಹಾಟಕೇ ಶುಭೇ||

ವೈಶಂಪಾಯನನು ಹೇಳಿದನು: “ಬಳಿಕ ರೂಪಸಂಪದದಿಂದ ಕೂಡಿ ಸ್ತ್ರೀಯರ ಅಲಂಕಾರವನ್ನು ಧರಿಸಿದ್ದ, ದೀರ್ಘ ಕುಂಡಲಗಳನ್ನೂ, ಸುಂದರವಾದ ಶಂಖದ ತೋಳ್ಬಳೆಗಳನ್ನೂ ತೊಟ್ಟಿದ್ದ ಮತ್ತೊಬ್ಬ ಬೃಹತ್ ಪುರುಷನು ಪ್ರಾಕಾರದ್ವಾರದಲ್ಲಿ ಕಾಣಿಸಿಕೊಂಡನು.

04010002a ಬಹೂಂಶ್ಚ ದೀರ್ಘಾಂಶ್ಚ ವಿಕೀರ್ಯ ಮೂರ್ಧಜಾನ್|

         ಮಹಾಭುಜೋ ವಾರಣಮತ್ತವಿಕ್ರಮಃ|

04010002c ಗತೇನ ಭೂಮಿಮಭಿಕಂಪಯಂಸ್ತದಾ|

         ವಿರಾಟಮಾಸಾದ್ಯ ಸಭಾಸಮೀಪತಃ||

ಮದಿಸಿದ ಆನೆಯ ನಡುಗೆಯ ಆ ಮಹಾಭುಜನು ದಟ್ಟವಾದ ನೀಳ ಕೂದಲನ್ನು ಇಳಿಬಿಟ್ಟುಕೊಂಡು, ನಡುಗೆಯಿಂದ ಭೂಮಿಯನ್ನೇ ನಡುಗಿಸುತ್ತ, ಸಭೆಯನ್ನು ಪ್ರವೇಶಿಸಿ ವಿರಾಟನ ಬಳಿ ಬಂದನು.

04010003a ತಂ ಪ್ರೇಕ್ಷ್ಯ ರಾಜೋಪಗತಂ ಸಭಾತಲೇ|

         ಸತ್ರಪ್ರತಿಚ್ಛನ್ನಮರಿಪ್ರಮಾಥಿನಂ|

04010003c ವಿರಾಜಮಾನಂ ಪರಮೇಣ ವರ್ಚಸಾ|

         ಸುತಂ ಮಹೇಂದ್ರಸ್ಯ ಗಜೇಂದ್ರವಿಕ್ರಮಂ||

04010004a ಸರ್ವಾನಪೃಚ್ಛಚ್ಚ ಸಮೀಪಚಾರಿಣಃ|

         ಕುತೋಽಯಮಾಯಾತಿ ನ ಮೇ ಪುರಾ ಶ್ರುತಃ|

04010004c ನ ಚೈನಮೂಚುರ್ವಿದಿತಂ ತದಾ ನರಾಃ|

         ಸವಿಸ್ಮಿತಂ ವಾಕ್ಯಮಿದಂ ನೃಪೋಽಬ್ರವೀತ್||

ವೇಷಮರೆಸಿಕೊಂಡು ಸಭೆಗೆ ಬಂದ ಆ ಶತ್ರುನಾಶಕ, ಪರಮವರ್ಚಸ್ಸಿನಿಂದ ವಿರಾಜಮಾನನಾಗಿದ್ದ, ಗಜೇಂದ್ರವಿಕ್ರಮಿ, ಮಹೇಂದ್ರ ಸುತ ಅರ್ಜುನನನ್ನು ನೋಡಿ ರಾಜನು “ಇವನು ಎಲ್ಲಿಂದ ಬರುತ್ತಿದ್ದಾನೆ? ಇದಕ್ಕೂ ಮೊದಲು ನಾನು ಇವನ ಬಗ್ಗೆ ಕೇಳಿರಲಿಲ್ಲ” ಎಂದು ಸಮೀಪದಲ್ಲಿದ್ದವರೆಲ್ಲರನ್ನು ಪ್ರಶ್ನಿಸಿದನು. ನಮಗೂ ಇವನು ಗೊತ್ತಿಲ್ಲ ಎಂದು ಜನರಾಡಲು, ವಿಸ್ಮಿತನಾಗಿ ದೊರೆಯು ಈ ಮಾತನ್ನಾಡಿದನು:

04010005a ಸರ್ವೋಪಪನ್ನಃ ಪುರುಷೋ ಮನೋರಮಃ|

         ಶ್ಯಾಮೋ ಯುವಾ ವಾರಣಯೂಥಪೋಪಮಃ|

04010005c ವಿಮುಚ್ಯ ಕಂಬೂ ಪರಿಹಾಟಕೇ ಶುಭೇ|

         ವಿಮುಚ್ಯ ವೇಣೀಮಪಿನಹ್ಯ ಕುಂಡಲೇ||

04010006a ಶಿಖೀ ಸುಕೇಶಃ ಪರಿಧಾಯ ಚಾನ್ಯಥಾ|

         ಭವಸ್ವ ಧನ್ವೀ ಕವಚೀ ಶರೀ ತಥಾ|

04010006c ಆರುಹ್ಯ ಯಾನಂ ಪರಿಧಾವತಾಂ ಭವಾನ್|

         ಸುತೈಃ ಸಮೋ ಮೇ ಭವ ವಾ ಮಯಾ ಸಮಃ||

“ಸರ್ವಲಕ್ಷಣ ಸಂಪನ್ನನಾದ ಮನೋರಮ ಪುರುಷ! ಶ್ಯಾಮವರ್ಣದ ಯುವಕ! ಆನೆಯ ಹಿಂಡಿನ ಒಡೆಯನಂತಿರುವೆ. ಸುಂದರ ಸ್ವರ್ಣಖಚಿತ ತೋಳ್ಬಳೆಗಳನ್ನೂ, ಜಡೆಯನ್ನೂ, ಕುಂಡಲಗಳನ್ನೂ ತೊಟ್ಟು, ಜುಟ್ಟು ಮತ್ತು ಉತ್ತಮ ಕೇಶವುಳ್ಳವನಾಗಿರುವೆ. ಧನುಸ್ಸು, ಕವಚ ಮತ್ತು ಬಾಣಗಳ ಸಹಿತ ವಾಹನವನ್ನೇರಿ ಸಂಚರಿಸುವವನಾಗಿರು. ನನ್ನ ಮಕ್ಕಳಿಗೆ ಅಥವಾ ನನಗೆ ನೀನು ಸಮಾನನಾಗಿರು.

04010007a ವೃದ್ಧೋ ಹ್ಯಹಂ ವೈ ಪರಿಹಾರಕಾಮಃ|

         ಸರ್ವಾನ್ಮತ್ಸ್ಯಾಂಸ್ತರಸಾ ಪಾಲಯಸ್ವ|

04010007c ನೈವಂವಿಧಾಃ ಕ್ಲೀಬರೂಪಾ ಭವಂತಿ|

         ಕಥಂ ಚನೇತಿ ಪ್ರತಿಭಾತಿ ಮೇ ಮನಃ||

ವೃದ್ಧನಾದ ನಾನು ಪರಿಹಾರವನ್ನು ಬಯಸುತ್ತಿದ್ದೇನೆ. ನಿನ್ನ ಶಕ್ತಿಯಿಂದ ಮತ್ಸ್ಯರೆಲ್ಲರನ್ನೂ ಪಾಲಿಸು. ಇಂಥವರು ಯಾವರೀತಿಯಲ್ಲಿಯೂ ನಪುಂಸಕರಾಗಿರುವುದಿಲ್ಲ ಎಂದು ನನ್ನ ಮನಸ್ಸಿಗೆ ತೋರುತ್ತಿದೆ.

04010008 ಅರ್ಜುನ ಉವಾಚ|

04010008a ಗಾಯಾಮಿ ನೃತ್ಯಾಮ್ಯಥ ವಾದಯಾಮಿ|

         ಭದ್ರೋಽಸ್ಮಿ ನೃತ್ತೇ ಕುಶಲೋಽಸ್ಮಿ ಗೀತೇ|

04010008c ತ್ವಮುತ್ತರಾಯಾಃ ಪರಿದತ್ಸ್ವ ಮಾಂ ಸ್ವಯಂ|

         ಭವಾಮಿ ದೇವ್ಯಾ ನರದೇವ ನರ್ತಕಃ||

ಅರ್ಜುನನು ಹೇಳಿದನು: “ಹಾಡುತ್ತೇನೆ, ನರ್ತಿಸುತ್ತೇನೆ ಮತ್ತು ವಾದ್ಯಗಳನ್ನು ನುಡಿಸುತ್ತೇನೆ. ನೃತ್ಯದಲ್ಲಿ ನಿಪುಣ, ಗಾಯದಲ್ಲಿ ಕುಶಲ. ನರದೇವ! ಸ್ವಯಂ ನನ್ನನ್ನು ಉತ್ತರೆಗೆ ಕೊಡು. ಆ ದೇವಿಗೆ ನಾನು ನಾಟ್ಯವನ್ನು ಕಲಿಸುವೆ.

04010009a ಇದಂ ತು ರೂಪಂ ಮಮ ಯೇನ ಕಿಂ ನು ತತ್|

         ಪ್ರಕೀರ್ತಯಿತ್ವಾ ಭೃಶಶೋಕವರ್ಧನಂ|

04010009c ಬೃಹನ್ನಡಾಂ ವೈ ನರದೇವ ವಿದ್ಧಿ ಮಾಂ|

         ಸುತಂ ಸುತಾಂ ವಾ ಪಿತೃಮಾತೃವರ್ಜಿತಾಂ||

ನನ್ನ ಈ ರೂಪವು ಹೇಗೆ ಬಂದಿತೆಂದು ಯಾತಕ್ಕೆ? ಅದನ್ನು ವಿವರಿಸುವುದರಿಂದ ನನ್ನ ಶೋಕವು ಅತಿಯಾಗುತ್ತದೆ. ನರದೇವ! ನನ್ನನ್ನು ಬೃಹನ್ನಡೆಯೆಂದು, ತಾಯಿತಂದೆಗಳಿಂದ ದೂರನಾದ ಮಗ ಅಥವಾ ಮಗಳೆಂದು ತಿಳಿ.”

04010010 ವಿರಾಟ ಉವಾಚ|

04010010a ದದಾಮಿ ತೇ ಹಂತ ವರಂ ಬೃಹನ್ನಡೇ|

         ಸುತಾಂ ಚ ಮೇ ನರ್ತಯ ಯಾಶ್ಚ ತಾದೃಶೀಃ|

04010010c ಇದಂ ತು ತೇ ಕರ್ಮ ಸಮಂ ನ ಮೇ ಮತಂ|

         ಸಮುದ್ರನೇಮಿಂ ಪೃಥಿವೀಂ ತ್ವಮರ್ಹಸಿ||

ವಿರಾಟನು ಹೇಳಿದನು: “”ಬೃಹನ್ನಡೇ! ನಿನಗೆ ವರವನ್ನು ಕೊಡುತ್ತೇನೆ. ಮಗಳಿಗೂ ಮತ್ತು ಅವಳಂಥವರಿಗೂ ನರ್ತನವನ್ನು ಕಲಿಸು. ಈ ಕೆಲಸವು ನಿನಗೆ ಸಮನಾದುದಲ್ಲವೆಂದು ನನ್ನ ಅಭಿಪ್ರಾಯ. ಸಮುದ್ರವೇ ಗಡಿಯಾಗಿರುವ ಇಡೀ ಭೂಮಿಗೆ ನೀನು ಅರ್ಹನಾಗಿದ್ದೀಯೆ.”

04010011 ವೈಶಂಪಾಯನ ಉವಾಚ|

04010011a ಬೃಹನ್ನಡಾಂ ತಾಮಭಿವೀಕ್ಷ್ಯ ಮತ್ಸ್ಯರಾಟ್|

         ಕಲಾಸು ನೃತ್ತೇ ಚ ತಥೈವ ವಾದಿತೇ|

04010011c ಅಪುಂಸ್ತ್ವಮಪ್ಯಸ್ಯ ನಿಶಮ್ಯ ಚ ಸ್ಥಿರಂ|

         ತತಃ ಕುಮಾರೀಪುರಮುತ್ಸಸರ್ಜ ತಂ||

ವೈಶಂಪಾಯನನು ಹೇಳಿದನು: “ಮತ್ಸ್ಯರಾಜನು ಆ ಬೃಹನ್ನಡೆಯನ್ನು ಕಲೆಗಳಲ್ಲಿ, ನೃತ್ಯದಲ್ಲಿ, ಮತ್ತು ವಾದನದಲ್ಲಿ ಪರೀಕ್ಷಿಸಿ. ಮತ್ತು ಅವನ ನಪುಂಸಕತ್ವವೂ ಸ್ಥಿರವಾದುದೆಂದು ನಿಶ್ಚಯಿಸಿದ ನಂತರ ಅವನನ್ನು ಕುಮಾರಿಯರ ಅಂತಃಪುರಕ್ಕೆ ಕಳುಹಿಸಿದನು.

04010012a ಸ ಶಿಕ್ಷಯಾಮಾಸ ಚ ಗೀತವಾದಿತಂ|

         ಸುತಾಂ ವಿರಾಟಸ್ಯ ಧನಂಜಯಃ ಪ್ರಭುಃ|

04010012c ಸಖೀಶ್ಚ ತಸ್ಯಾಃ ಪರಿಚಾರಿಕಾಸ್ತಥಾ|

         ಪ್ರಿಯಶ್ಚ ತಾಸಾಂ ಸ ಬಭೂವ ಪಾಂಡವಃ||

ಆ ಪ್ರಭು ಧನಂಜಯನು ವಿರಾಟನ ಮಗಳಿಗೆ ಗಾಯನ ವಾದನಗಳನ್ನು ಕಲಿಸತೊಡಗಿದನು. ಆ ಪಾಂಡವನು ಅವಳ ಸಖಿಯರಿಗೂ ಪರಿಚಾರಿಕೆಯರಿಗೂ ಪ್ರಿಯನಾಗಿ ಅವಳಲ್ಲಿ ಇದ್ದನು.

04010013a ತಥಾ ಸ ಸತ್ರೇಣ ಧನಂಜಯೋಽವಸತ್|

         ಪ್ರಿಯಾಣಿ ಕುರ್ವನ್ಸಹ ತಾಭಿರಾತ್ಮವಾನ್|

04010013c ತಥಾಗತಂ ತತ್ರ ನ ಜಜ್ಞಿರೇ ಜನಾ|

         ಬಹಿಶ್ಚರಾ ವಾಪ್ಯಥವಾಂತರೇಚರಾಃ||

ಆ ಅತ್ಮವಂತ ಧನಂಜಯನು ಹಾಗೆ ಅವರಿಗೆ ಪ್ರಿಯವಾದುದನ್ನು ಮಾಡುತ್ತಾ ಅವರೊಡನೆ ಮಾರುವೇಷದಲ್ಲಿ ವಾಸಮಾಡುತ್ತಿದ್ದನು. ಹಾಗೆ ಇದ್ದ ಅವನನ್ನು ಅಲ್ಲಿ ಹೊರಗಿನವರಾಗಲೀ ಒಳಗಿನವರಾಗಲೀ ಗುರುತಿಸಲಿಲ್ಲ.”

ಇತಿ ಶ್ರೀಮಹಾಭಾರತೇ ವಿರಾಟಪರ್ವಣಿ ವೈರಾಟಪರ್ವಣಿ ಪುರಪ್ರವೇಶೇ ಅರ್ಜುನಪ್ರವೇಶೋ ನಾಮ ದಶಮೋಽಧ್ಯಾಯಃ||

ಇದು ಶ್ರೀ ಮಹಾಭಾರತದ ವಿರಾಟಪರ್ವದಲ್ಲಿ ವೈರಾಟಪರ್ವದಲ್ಲಿ ಪುರಪ್ರವೇಶದಲ್ಲಿ ಅರ್ಜುನಪ್ರವೇಶವೆನ್ನುವ ಹತ್ತನೆಯ ಅಧ್ಯಾಯವು.

Related image

Comments are closed.