|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ವಿರಾಟ ಪರ್ವ: ವೈರಾಟ ಪರ್ವ
೧
ಅಜ್ಞಾತವಾಸಕ್ಕೆ ವಿರಾಟ ನಗರದ ಆಯ್ಕೆ
ಅಜ್ಞಾತವರ್ಷವನ್ನು ಎಲ್ಲಿ ಕಳೆಯಬಹುದೆಂದು ಕೇಳಲು ಅರ್ಜುನನು ಯುಧಿಷ್ಠಿರನಿಗೆ ವಿರಾಟನಗರಿಯನ್ನು ಸೂಚಿಸುವುದು (೧-೧೦). ತಾನು ಪಗಡೆಯಾಟದಲ್ಲಿ ನಿಪುಣನೂ ವಿನೋದಪ್ರಿಯನೂ ಆದ ಕಂಕ ಎಂಬ ಹೆಸರಿನ ದ್ವಿಜನಾಗಿ ವಿರಾಟನಲ್ಲಿರುತ್ತೇನೆಂದು ಯುಧಿಷ್ಠಿರನು ಹೇಳುವುದು (೧೧-೨೩)
04001001 ಜನಮೇಜಯ ಉವಾಚ|
04001001a ಕಥಂ ವಿರಾಟನಗರೇ ಮಮ ಪೂರ್ವಪಿತಾಮಹಾಃ|
04001001c ಅಜ್ಞಾತವಾಸಮುಷಿತಾ ದುರ್ಯೋಧನಭಯಾರ್ದಿತಾಃ||
ಜನಮೇಜಯನು ಹೇಳಿದನು: “ದುರ್ಯೋಧನನ ಭಯದಿಂದ ಭಾದಿತ ನನ್ನ ಪೂರ್ವಪಿತಾಮಹರು ವಿರಾಟನಗರದಲ್ಲಿ ಹೇಗೆ ಅಜ್ಞಾತವಾಸವನ್ನು ಕಳೆದರು?”
04001002 ವೈಶಂಪಾಯನ ಉವಾಚ|
04001002a ತಥಾ ತು ಸ ವರಾನ್ಲಬ್ಧ್ವಾ ಧರ್ಮಾದ್ಧರ್ಮಭೃತಾಂ ವರಃ|
04001002c ಗತ್ವಾಶ್ರಮಂ ಬ್ರಾಹ್ಮಣೇಭ್ಯ ಆಚಖ್ಯೌ ಸರ್ವಮೇವ ತತ್||
ವೈಶಂಪಾಯನನು ಹೇಳಿದನು: “ಧರ್ಮಭೃತರಲ್ಲಿ ಶ್ರೇಷ್ಠ ಯುಧಿಷ್ಠಿರನು ಹೀಗೆ ಧರ್ಮನಿಂದ ವರಗಳನ್ನು ಪಡೆದು ಆಶ್ರಮಕ್ಕೆ ತೆರಳಿ ಬ್ರಾಹ್ಮಣರಿಗೆ ನಡೆದುದೆಲ್ಲವನ್ನೂ ವರದಿಮಾಡಿದನು.
04001003a ಕಥಯಿತ್ವಾ ತು ತತ್ಸರ್ವಂ ಬ್ರಾಹ್ಮಣೇಭ್ಯೋ ಯುಧಿಷ್ಠಿರಃ|
04001003c ಅರಣೀಸಹಿತಂ ತಸ್ಮೈ ಬ್ರಾಹ್ಮಣಾಯ ನ್ಯವೇದಯತ್||
ಅದೆಲ್ಲವನ್ನೂ ಬ್ರಾಹ್ಮಣರಿಗೆ ಹೇಳಿದ ಯುಧಿಷ್ಠಿರನು ಅರಣೀಸಹಿತ ಕಾಷ್ಠವನ್ನು ಬ್ರಾಹ್ಮಣನಿಗೆ ಒಪ್ಪಿಸಿದನು.
04001004a ತತೋ ಯುಧಿಷ್ಠಿರೋ ರಾಜಾ ಧರ್ಮಪುತ್ರೋ ಮಹಾಮನಾಃ|
04001004c ಸಂನಿವರ್ತ್ಯಾನುಜಾನ್ಸರ್ವಾನಿತಿ ಹೋವಾಚ ಭಾರತ||
ಭಾರತ! ನಂತರ ಮಹಾಮನ ಧರ್ಮಪುತ್ರ ರಾಜ ಯುಧಿಷ್ಠಿರನು ತನ್ನ ಅನುಜರೆಲ್ಲರನ್ನೂ ಕರೆದು ಹೇಳಿದನು:
04001005a ದ್ವಾದಶೇಮಾನಿ ವರ್ಷಾಣಿ ರಾಷ್ಟ್ರಾದ್ವಿಪ್ರೋಷಿತಾ ವಯಂ|
04001005c ತ್ರಯೋದಶೋಽಯಂ ಸಂಪ್ರಾಪ್ತಃ ಕೃಚ್ಛ್ರಃ ಪರಮದುರ್ವಸಃ||
“ರಾಷ್ಟ್ರದಿಂದ ಹೊರಹಾಕಲ್ಪಟ್ಟು ಹನ್ನೆರಡು ವರ್ಷಗಳು ಕಳೆದವು. ಈಗ ಪರಮದುರ್ವಸ ಕಷ್ಟಕರ ಹದಿಮೂರನೆಯ ವರ್ಷವು ಬಂದಿದೆ.
04001006a ಸ ಸಾಧು ಕೌಂತೇಯ ಇತೋ ವಾಸಮರ್ಜುನ ರೋಚಯ|
04001006c ಯತ್ರೇಮಾ ವಸತೀಃ ಸರ್ವಾ ವಸೇಮಾವಿದಿತಾಃ ಪರೈಃ||
ಕೌಂತೇಯ ಅರ್ಜುನ! ಶತ್ರುಗಳಿಗೆ ತಿಳಿಯದಂತೆ ನಾವೆಲ್ಲರೂ ವಾಸಿಸಬಹುದಾದಂಥ ವಾಸಸ್ಥಳವೊಂದನ್ನು ಆರಿಸು.”
04001007 ಅರ್ಜುನ ಉವಾಚ|
04001007a ತಸ್ಯೈವ ವರದಾನೇನ ಧರ್ಮಸ್ಯ ಮನುಜಾಧಿಪ|
04001007c ಅಜ್ಞಾತಾ ವಿಚರಿಷ್ಯಾಮೋ ನರಾಣಾಂ ಭರತರ್ಷಭ||
ಅರ್ಜುನನು ಹೇಳಿದನು: “ಮನುಜಾಧಿಪ! ಭರತರ್ಷಭ! ಧರ್ಮನ ವರದಾನದಿಂದಲೇ ನಾವು ನರರಿಗೆ ತಿಳಿಯದಂತೆ ಸಂಚರಿಸಬಲ್ಲೆವು.
04001008a ಕಿಂ ತು ವಾಸಾಯ ರಾಷ್ಟ್ರಾಣಿ ಕೀರ್ತಯಿಷ್ಯಾಮಿ ಕಾನಿ ಚಿತ್|
04001008c ರಮಣೀಯಾನಿ ಗುಪ್ತಾನಿ ತೇಷಾಂ ಕಿಂ ಚಿತ್ಸ್ಮ ರೋಚಯ||
ಆದರೆ, ರಮಣಿಯವೂ ಗೌಪ್ಯವಾಗಿರಬಲ್ಲವೂ ಆದ ಕೆಲವು ರಾಷ್ಟ್ರಗಳನ್ನು ಹೇಳುತ್ತೇನೆ. ಅವುಗಳಲ್ಲಿ ನಿನಗಿಷ್ಟವಾದುದನ್ನು ಆರಿಸಿಕೊಳ್ಳಬಹುದು.
04001009a ಸಂತಿ ರಮ್ಯಾ ಜನಪದಾ ಬಹ್ವನ್ನಾಃ ಪರಿತಃ ಕುರೂನ್|
04001009c ಪಾಂಚಾಲಾಶ್ಚೇದಿಮತ್ಸ್ಯಾಶ್ಚ ಶೂರಸೇನಾಃ ಪಟಚ್ಚರಾಃ||
04001009e ದಶಾರ್ಣಾ ನವರಾಷ್ಟ್ರಂ ಚ ಮಲ್ಲಾಃ ಶಾಲ್ವಾ ಯುಗಂಧರಾಃ||
ಕುರುದೇಶವನ್ನು ಸುತ್ತುವರೆದ ಒಂಭತ್ತು ಶ್ರೀಮಂತ, ರಮ್ಯ ರಾಷ್ಟ್ರ-ಜನಪದಗಳಿವೆ: ಪಾಂಚಾಲ, ಚೇದಿ, ಮತ್ಸ್ಯ, ಶೂರಸೇನ, ಪಟಚ್ಚರ, ದಶಾರ್ಹ, ಮಲ್ಲ, ಶಾಲ್ವ, ಮತ್ತು ಯುಗಂಧರ. [Map of India in the Age of Mahabharata]
04001010a ಏತೇಷಾಂ ಕತಮೋ ರಾಜನ್ನಿವಾಸಸ್ತವ ರೋಚತೇ|
04001010c ವತ್ಸ್ಯಾಮೋ ಯತ್ರ ರಾಜೇಂದ್ರ ಸಂವತ್ಸರಮಿಮಂ ವಯಂ||
ರಾಜನ್! ರಾಜೇಂದ್ರ! ಇವುಗಳಲ್ಲಿ ನಿನಗೆ ಯಾವುದು ಇಷ್ಟವಾಗುತ್ತದೆಯೋ ಅಲ್ಲಿಯೇ ನಾವು ಈ ಸಂವತ್ಸರವನ್ನು ಕಳೆಯೋಣ.”
04001011 ಯುಧಿಷ್ಠಿರ ಉವಾಚ|
04001011a ಏವಮೇತನ್ಮಹಾಬಾಹೋ ಯಥಾ ಸ ಭಗವಾನ್ಪ್ರಭುಃ|
04001011c ಅಬ್ರವೀತ್ಸರ್ವಭೂತೇಶಸ್ತತ್ತಥಾ ನ ತದನ್ಯಥಾ||
ಯುಧಿಷ್ಠಿರನು ಹೇಳಿದನು: “ಮಹಾಬಾಹೋ! ಇದು ಸರಿ. ಆ ಸರ್ವಭೂತೇಶ ಭಗವಾನ್ ಪ್ರಭುವು ಹೇಳಿದುದಕ್ಕಿಂತ ಬೇರೆಯದಾಗಿ ಆಗುವುದಿಲ್ಲ.
04001012a ಅವಶ್ಯಂ ತ್ವೇವ ವಾಸಾರ್ಥಂ ರಮಣೀಯಂ ಶಿವಂ ಸುಖಂ|
04001012c ಸಮ್ಮಂತ್ರ್ಯ ಸಹಿತೈಃ ಸರ್ವೈರ್ದ್ರಷ್ಟವ್ಯಮಕುತೋಭಯಂ||
ನಾವೆಲ್ಲರೂ ಒಟ್ಟಾಗಿ ಆಲೋಚಿಸಿ ವಾಸಕ್ಕಾಗಿ ರಮಣೀಯವೂ, ಮಂಗಲಕರವೂ, ಸುಖಕರವೂ, ಎಲ್ಲ ಕಡೆಗಳಿಂದ ನಿರ್ಭಯವೂ ಆಗಿರುವ ಸ್ಥಳವನ್ನು ಆರಿಸುವುದು ಅವಶ್ಯಕ.
04001013a ಮತ್ಸ್ಯೋ ವಿರಾಟೋ ಬಲವಾನಭಿರಕ್ಷೇತ್ಸ ಪಾಂಡವಾನ್|
04001013c ಧರ್ಮಶೀಲೋ ವದಾನ್ಯಶ್ಚ ವೃದ್ಧಶ್ಚ ಸುಮಹಾಧನಃ||
ಧರ್ಮಶೀಲನೂ, ಬಲವಂತನೂ, ಉದಾರನೂ, ಮಹಾಧನವಂತನೂ ಆದ ವೃದ್ಧ ಮತ್ಸ್ಯ ವಿರಾಟನು ಪಾಂಡವರನ್ನು ರಕ್ಷಿಸಬಲ್ಲನು.
04001014a ವಿರಾಟನಗರೇ ತಾತ ಸಂವತ್ಸರಮಿಮಂ ವಯಂ|
04001014c ಕುರ್ವಂತಸ್ತಸ್ಯ ಕರ್ಮಾಣಿ ವಿಹರಿಷ್ಯಾಮ ಭಾರತ||
ಮಗು ಭಾರತ! ಅವನ ಕೆಲಸಗಳನ್ನು ಮಾಡುತ್ತಾ ನಾವು ವಿರಾಟನಗರದಲ್ಲಿ ಈ ಸಂವತ್ಸರವನ್ನು ಕಳೆಯೋಣ.
04001015a ಯಾನಿ ಯಾನಿ ಚ ಕರ್ಮಾಣಿ ತಸ್ಯ ಶಕ್ಷ್ಯಾಮಹೇ ವಯಂ|
04001015c ಕರ್ತುಂ ಯೋ ಯತ್ಸ ತತ್ಕರ್ಮ ಬ್ರವೀತು ಕುರುನಂದನಾಃ||
ಕುರುನಂದನರೇ! ನಾವು ಯಾವ ಯಾವ ಕೆಲಸಗಳನ್ನು ಮಾಡಬಲ್ಲೆವು ಮತ್ತು ಏನೇನು ಕೆಲಸಗಳನ್ನು ಮಾಡಬೇಕು ಎನ್ನುವುದನ್ನು ಹೇಳಿ.”
04001016 ಅರ್ಜುನ ಉವಾಚ|
04001016a ನರದೇವ ಕಥಂ ಕರ್ಮ ರಾಷ್ಟ್ರೇ ತಸ್ಯ ಕರಿಷ್ಯಸಿ|
04001016c ವಿರಾಟನೃಪತೇಃ ಸಾಧೋ ರಂಸ್ಯಸೇ ಕೇನ ಕರ್ಮಣಾ||
ಅರ್ಜುನನು ಹೇಳಿದನು: “ನರದೇವ! ಸಾಧುವೇ! ವಿರಾಟನೃಪತಿಯ ರಾಷ್ಟ್ರದಲ್ಲಿ ನೀನು ಯಾವ ಕೆಲಸವನ್ನು ಮಾಡುತ್ತೀಯೆ? ಯಾವ ಕೆಲಸದಲ್ಲಿ ನಿನಗೆ ಆಸಕ್ತಿಯಿದೆ?
04001017a ಮೃದುರ್ವದಾನ್ಯೋ ಹ್ರೀಮಾಂಶ್ಚ ಧಾರ್ಮಿಕಃ ಸತ್ಯವಿಕ್ರಮಃ|
04001017c ರಾಜನ್ ಸ್ತ್ವಮಾಪದಾ ಕ್ಲಿಷ್ಟಃ ಕಿಂ ಕರಿಷ್ಯಸಿ ಪಾಂಡವ||
ಕಷ್ಟದ ಸ್ಥಿತಿಯಲ್ಲಿರುವ ಮೃದು, ಉದಾರ, ಲಜ್ಜಾನ್ವಿತ, ಧಾರ್ಮಿಕ, ಸತ್ಯವಿಕ್ರಮ ಪಾಂಡವ ರಾಜ! ನೀನು ಏನು ಮಾಡುವೆ?
04001018a ನ ದುಃಖಮುಚಿತಂ ಕಿಂ ಚಿದ್ರಾಜನ್ವೇದ ಯಥಾ ಜನಃ|
04001018c ಸ ಇಮಾಮಾಪದಂ ಪ್ರಾಪ್ಯ ಕಥಂ ಘೋರಾಂ ತರಿಷ್ಯಸಿ||
ರಾಜನ್! ಇತರ ಜನರಂತೆ ನೀನು ಇಂಥಹ ಕಷ್ಟವನ್ನು ಸ್ವಲ್ಪವೂ ಅರಿತವನಲ್ಲ. ಒದಗಿರುವ ಈ ಘೋರ ಆಪತ್ತನ್ನು ಹೇಗೆ ದಾಟುವೆ?”
04001019 ಯುಧಿಷ್ಠಿರ ಉವಾಚ|
04001019a ಶೃಣುಧ್ವಂ ಯತ್ಕರಿಷ್ಯಾಮಿ ಕರ್ಮ ವೈ ಕುರುನಂದನಾಃ|
04001019c ವಿರಾಟಮನುಸಂಪ್ರಾಪ್ಯ ರಾಜಾನಂ ಪುರುಷರ್ಷಭಂ||
ಯುಧಿಷ್ಠಿರನು ಹೇಳಿದನು: “ಕುರುನಂದನರೇ! ಪುರುಷರ್ಷಭ ರಾಜ ವಿರಾಟನ ಬಳಿ ಸೇರಿ ಏನು ಕೆಲಸವನ್ನು ಮಾಡುತ್ತೇನೆ ಎನ್ನುವುದನ್ನು ಕೇಳಿ.
04001020a ಸಭಾಸ್ತಾರೋ ಭವಿಷ್ಯಾಮಿ ತಸ್ಯ ರಾಜ್ಞೋ ಮಹಾತ್ಮನಃ|
04001020c ಕಂಕೋ ನಾಮ ದ್ವಿಜೋ ಭೂತ್ವಾ ಮತಾಕ್ಷಃ ಪ್ರಿಯದೇವಿತಾ||
ಪಗಡೆಯಾಟದಲ್ಲಿ ನಿಪುಣನೂ ವಿನೋದಪ್ರಿಯನೂ ಆದ ಕಂಕ ಎಂಬ ಹೆಸರಿನ ದ್ವಿಜನಾಗಿ ಆ ಮಹಾತ್ಮ ರಾಜನ ಸಭಾಸದನಾಗಿರುತ್ತೇನೆ.
04001021a ವೈಡೂರ್ಯಾನ್ಕಾಂಚನಾನ್ದಾಂತಾನ್ಫಲೈರ್ಜ್ಯೋತೀರಸೈಃ ಸಹ|
04001021c ಕೃಷ್ಣಾಕ್ಷಾಽಲ್ಲೋಹಿತಾಕ್ಷಾಂಶ್ಚ ನಿರ್ವರ್ತ್ಸ್ಯಾಮಿ ಮನೋರಮಾನ್||
ವೈಡೂರ್ಯ, ಕಾಂಚನ ಮತ್ತು ದಂತಗಳಿಂದ ಮಾಡಿದ ಹೊಳೆಯುವ ಕಪ್ಪು, ಕೆಂಪು, ಹಳದಿ, ಮತ್ತು ಹಸಿರು ಬಣ್ಣದ ಪಗಡೆ ಕಾಯಿಗಳನ್ನು ನಡೆಸುತ್ತೇನೆ.
04001022a ಆಸಂ ಯುಧಿಷ್ಠಿರಸ್ಯಾಹಂ ಪುರಾ ಪ್ರಾಣಸಮಃ ಸಖಾ|
04001022c ಇತಿ ವಕ್ಷ್ಯಾಮಿ ರಾಜಾನಂ ಯದಿ ಮಾಮನುಯೋಕ್ಷ್ಯತೇ||
ರಾಜನು ಕೇಳಿದರೆ, ಹಿಂದೆ ನಾನು ಯುಧಿಷ್ಠಿರನ ಪ್ರಾಣಸಖನಂತಿದ್ದೆ ಎಂದು ಹೇಳುತ್ತೇನೆ.
04001023a ಇತ್ಯೇತದ್ವೋ ಮಯಾಖ್ಯಾತಂ ವಿಹರಿಷ್ಯಾಮ್ಯಹಂ ಯಥಾ|
04001023c ವೃಕೋದರ ವಿರಾಟೇ ತ್ವಂ ರಂಸ್ಯಸೇ ಕೇನ ಕರ್ಮಣಾ||
ನಾನು ಹೇಗೆ ವಾಸಿಸುವೆನು ಎಂದು ಹೇಳಿದೆ. ವೃಕೋದರ! ವಿರಾಟನಲ್ಲಿ ನೀನು ಯಾವ ಕೆಲಸ ಮಾಡಲು ಇಚ್ಛಿಸುವೆ?”
ಇತಿ ಶ್ರೀಮಹಾಭಾರತೇ ವಿರಾಟಪರ್ವಣಿ ವೈರಾಟಪರ್ವಣಿ ಯುಧಿಷ್ಠಿರಾದಿಮಂತ್ರಣೇ ಪ್ರಥಮೋಽಧ್ಯಾಯಃ||
ಇದು ಶ್ರೀ ಮಹಾಭಾರತದ ವಿರಾಟಪರ್ವದಲ್ಲಿ ವೈರಾಟಪರ್ವದಲ್ಲಿ ಯುಧಿಷ್ಠಿರ ಮೊದಲಾದವರ ಸಮಾಲೋಚನೆಯಲ್ಲಿ ಮೊದಲನೆಯ ಅಧ್ಯಾಯವು.