ಉದ್ಯೋಗ ಪರ್ವ: ಯಾನಸಂಧಿ ಪರ್ವ
೬೮
ಸಂಜಯನು ಧೃತರಾಷ್ಟ್ರನಿಗೆ ಕೃಷ್ಣನ ನಾಮಾರ್ಥಗಳನ್ನು ತಿಳಿಸಿದುದು (೧-೧೪).
05068001 ಧೃತರಾಷ್ಟ್ರ ಉವಾಚ|
05068001a ಭೂಯೋ ಮೇ ಪುಂಡರೀಕಾಕ್ಷಂ ಸಂಜಯಾಚಕ್ಷ್ವ ಪೃಚ್ಚತೇ|
05068001c ನಾಮಕರ್ಮಾರ್ಥವಿತ್ತಾತ ಪ್ರಾಪ್ನುಯಾಂ ಪುರುಷೋತ್ತಮಂ||
ಧೃತರಾಷ್ಟ್ರನು ಹೇಳಿದನು: “ಸಂಜಯ! ಪುಂಡರೀಕಾಕ್ಷನ ಕುರಿತು ನಾನು ಕೇಳಿದುದಕ್ಕೆ ಇನ್ನೂ ಹೆಚ್ಚು ಹೇಳು. ಅಯ್ಯಾ! ಅವನ ಹೆಸರು ಮತ್ತು ಕಾರ್ಯಗಳ ಅರ್ಥವನ್ನು ಮಾಡಿಕೊಂಡರೆ ಆ ಪುರುಷೋತ್ತಮನನ್ನು ತಲುಪಬಹುದು.”
05068002 ಸಂಜಯ ಉವಾಚ|
05068002a ಶ್ರುತಂ ಮೇ ತಸ್ಯ ದೇವಸ್ಯ ನಾಮನಿರ್ವಚನಂ ಶುಭಂ|
05068002c ಯಾವತ್ತತ್ರಾಭಿಜಾನೇಽಹಮಪ್ರಮೇಯೋ ಹಿ ಕೇಶವಃ||
ಸಂಜಯನು ಹೇಳಿದನು: “ನಾನು ಆ ದೇವನ ಶುಭನಾಮಗಳ ವಿವರಣೆಗಳನ್ನು ಕೇಳಿದ್ದೇನೆ. ನನಗೆ ತಿಳಿದಂತೆ ಕೇಶವನು ಅಪ್ರಮೇಯನು.
05068003a ವಸನಾತ್ಸರ್ವಭೂತಾನಾಂ ವಸುತ್ವಾದ್ದೇವಯೋನಿತಃ|
05068003c ವಾಸುದೇವಸ್ತತೋ ವೇದ್ಯೋ ವೃಷತ್ವಾದ್ವೃಷ್ಣಿರುಚ್ಯತೇ||
ಸರ್ವಭೂತಗಳಿಗೆ ವಸನವನ್ನೀಯುವುದರಿಂದ, ವಸುವಾಗಿರುವುದರಿಂದ, ಮತ್ತು ದೇವಯೋನಿಯಾಗಿರುವುದರಿಂದ ಅವನನ್ನು ವಾಸುದೇವನೆಂದು ತಿಳಿಯುತ್ತಾರೆ. ವೃಷತ್ವದಿಂದಾಗಿ ವೃಷ್ಣಿಯೆಂದು ಕರೆಯುತ್ತಾರೆ.
05068004a ಮೌನಾದ್ಧ್ಯಾನಾಚ್ಚ ಯೋಗಾಚ್ಚ ವಿದ್ಧಿ ಭಾರತ ಮಾಧವಂ|
05068004c ಸರ್ವತತ್ತ್ವಲಯಾಚ್ಚೈವ ಮಧುಹಾ ಮಧುಸೂದನಃ||
ಭಾರತ! ಮುನಿಯಾಗಿದ್ದುದರಿಂದ, ಯೋಗಿಯಾಗಿರುವುದರಿಂದ ಅವನನ್ನು ಮಾಧವನೆಂದು ತಿಳಿ. ಸರ್ವತತ್ವಗಳನ್ನೂ ಲಯಗೊಳಿಸುವುದರಿಂದ ಮತ್ತು ಮಧುವಿನ ಸಂಹಾರಕನಾಗಿದುದರಿಂದ ಅವನು ಮಧುಸೂದನ.
05068005a ಕೃಷಿರ್ಭೂವಾಚಕಃ ಶಬ್ದೋ ಣಶ್ಚ ನಿರ್ವೃತಿವಾಚಕಃ|
05068005c ಕೃಷ್ಣಸ್ತದ್ಭಾವಯೋಗಾಚ್ಚ ಕೃಷ್ಣೋ ಭವತಿ ಶಾಶ್ವತಃ||
‘ಕೃಷಿ’ ಶಬ್ಧವು ಭೂಮಿಯನ್ನು ಸೂಚಿಸುತ್ತದೆ ಮತ್ತು ‘ಣ’ ವು ನಿವೃತ್ತಿಯನ್ನು ಸೂಚಿಸುತ್ತದೆ. ಕೃಷ್ಣನಲ್ಲಿ ಇವೆರಡೂ ಸೇರಿರುವುದರಿಂದ ಕೃಷ್ಣನು ಶಾಶ್ವತನೆಂದಾಗುತ್ತಾನೆ.
05068006a ಪುಂಡರೀಕಂ ಪರಂ ಧಾಮ ನಿತ್ಯಮಕ್ಷಯಮಕ್ಷರಂ|
05068006c ತದ್ಭಾವಾತ್ಪುಂಡರೀಕಾಕ್ಷೋ ದಸ್ಯುತ್ರಾಸಾಜ್ಜನಾರ್ದನಃ||
ಪುಂಡರೀಕವು ನಿತ್ಯವೂ, ಅಕ್ಷಯವೂ, ಅಕ್ಷರವೂ ಆದ ಪರಮ ಧಾಮ. ಆದುದರಿಂದ ಅವನು ಪುಂಡರೀಕಾಕ್ಷ. ದಸ್ಯುಗಳನ್ನು ಕಾಡುವುದರಿಂದ ಅವನು ಜನಾರ್ದನ.
05068007a ಯತಃ ಸತ್ತ್ವಂ ನ ಚ್ಯವತೇ ಯಚ್ಚ ಸತ್ತ್ವಾನ್ನ ಹೀಯತೇ|
05068007c ಸತ್ತ್ವತಃ ಸಾತ್ವತಸ್ತಸ್ಮಾದಾರ್ಷಭಾದ್ವೃಷಭೇಕ್ಷಣಃ||
ಯಾರಲ್ಲಿ ಸತ್ತ್ವವು ತೋರಿಸಿಕೊಳ್ಳುವುದಿಲ್ಲವೋ, ಯಾರಲ್ಲಿ ಸತ್ತ್ವವು ಕಡಿಮೆಯಾಗುವುದಿಲ್ಲವೋ, ಅಂಥಹ ಸತ್ತ್ವಕ್ಕಾಗಿ ಅವನು ಸಾತ್ವತ. ವೃಷಭನಂತಿರುವುದರಿಂದ ಅವನು ವೃಷಭೇಕ್ಷಣ.
05068008a ನ ಜಾಯತೇ ಜನಿತ್ರ್ಯಾಂ ಯದಜಸ್ತಸ್ಮಾದನೀಕಜಿತ್|
05068008c ದೇವಾನಾಂ ಸ್ವಪ್ರಕಾಶತ್ವಾದ್ದಮಾದ್ದಾಮೋದರಂ ವಿದುಃ||
ಜನನಿಯಲ್ಲಿ ಜನಿಸದೇ ಇರುವುದರಿಂದ, ಜಯಿಸಲಸಾಧ್ಯನಾಗಿರುವುದರಿಂದ ಅವನು ಅಜ (ಜನ್ಮವಿಲ್ಲದವನು). ದೇವತೆಗಳ ಸ್ವಪ್ರಕಾಶವಿರುವುದರಿಂದ ಅವನನ್ನು ದಾಮೋದರನೆಂದು ತಿಳಿಯುತ್ತಾರೆ.
05068009a ಹರ್ಷಾತ್ಸೌಖ್ಯಾತ್ಸುಖೈಶ್ವರ್ಯಾದ್ಧೃಷೀಕೇಶತ್ವಮಶ್ನುತೇ|
05068009c ಬಾಹುಭ್ಯಾಂ ರೋದಸೀ ಬಿಭ್ರನ್ಮಹಾಬಾಹುರಿತಿ ಸ್ಮೃತಃ||
ಹರ್ಷ, ಸುಖ ಮತ್ತು ಐಶ್ವರ್ಯಗಳಿಂದ ಅವನು ಹೃಷೀಕೇಶನಾಗಿದ್ದಾನೆ. ಭೂಮಿ-ಆಕಾಶಗಳನ್ನು ಎರಡು ಬಾಹುಗಳಲ್ಲಿ ಹೊತ್ತಿರುವುದರಿಂದ ಅವನು ಮಹಾಬಾಹುವೆಂದು ವಿಶ್ರುತನಾಗಿದ್ದಾನೆ.
05068010a ಅಧೋ ನ ಕ್ಷೀಯತೇ ಜಾತು ಯಸ್ಮಾತ್ತಸ್ಮಾದಧೋಕ್ಷಜಃ|
05068010c ನರಾಣಾಮಯನಾಚ್ಚಾಪಿ ತೇನ ನಾರಾಯಣಃ ಸ್ಮೃತಃ|
ಕೆಳಮುಖವಾಗಿ ಕ್ಷೀಣವಾಗದೇ ಇರುವುದರಿಂದ ಅವನು ಅಧೋಕ್ಷಜ. ನರರ ಪ್ರಯಾಣನಾಗಿದ್ದುದರಿಂದ ಅವನು ನಾರಾಯಣನೆಂದೂ ಕರೆಯಲ್ಪಡುತ್ತಾನೆ.
05068010e ಪೂರಣಾತ್ಸದನಾಚ್ಚೈವ ತತೋಽಸೌ ಪುರುಷೋತ್ತಮಃ||
05068011a ಅಸತಶ್ಚ ಸತಶ್ಚೈವ ಸರ್ವಸ್ಯ ಪ್ರಭವಾಪ್ಯಯಾತ್|
05068011c ಸರ್ವಸ್ಯ ಚ ಸದಾ ಜ್ಞಾನಾತ್ಸರ್ವಮೇನಂ ಪ್ರಚಕ್ಷತೇ||
ಪೂರ್ಣಗೊಳಿಸುವವನು ಮತ್ತು ಕಡಿಮೆಮಾಡುವವನಾಗಿರುವುದರಿಂದ ಅವನು ಪುರುಷೋತ್ತಮ. ಇರುವ ಮತ್ತು ಇಲ್ಲದಿರುವ ಎಲ್ಲವುಗಳ ಪ್ರಭುವಾದುದರಿಂದ ಮತ್ತು ಜ್ಞಾನದ ಮೂಲಕ ಎಲ್ಲವನ್ನೂ ಕಾಣುವುದರಿಂದ ಅವನು ಸರ್ವ.
05068012a ಸತ್ಯೇ ಪ್ರತಿಷ್ಠಿತಃ ಕೃಷ್ಣಃ ಸತ್ಯಮತ್ರ ಪ್ರತಿಷ್ಠಿತಂ|
05068012c ಸತ್ಯಾತ್ಸತ್ಯಂ ಚ ಗೋವಿಂದಸ್ತಸ್ಮಾತ್ಸತ್ಯೋಽಪಿ ನಾಮತಃ||
ಕೃಷ್ಣನು ಸತ್ಯದಲ್ಲಿ ನೆಲೆಸಿದ್ದಾನೆ ಮತ್ತು ಸತ್ಯವು ಅವನಲ್ಲಿ ನೆಲೆಸಿದೆ. ಗೋವಿಂದನು ಸತ್ಯ ಅಸತ್ಯಗಳೆರಡೂ. ಆದುದರಿಂದ ಅವನಿಗೆ ಸತ್ಯ ಎಂಬ ಹೆಸರೂ ಇದೆ.
05068013a ವಿಷ್ಣುರ್ವಿಕ್ರಮಣಾದೇವ ಜಯನಾಜ್ಜಿಷ್ಣುರುಚ್ಯತೇ|
05068013c ಶಾಶ್ವತತ್ವಾದನಂತಶ್ಚ ಗೋವಿಂದೋ ವೇದನಾದ್ಗವಾಂ||
ವಿಕ್ರಮದಿಂದಾಗಿ ಅವನು ವಿಷ್ಣು. ಜಯದಿಂದಾಗಿ ಜಿಷ್ಣು ಎನ್ನುತ್ತಾರೆ. ಶಾಶ್ವತನಾಗಿರುವುದರಿಂದ ಅನಂತನೆಂದೂ ಗೋವುಗಳನ್ನು ತಿಳಿದುಕೊಂಡಿದುದಕ್ಕೆ ಗೋವಿಂದನೆಂದೂ ಕರೆಯುತ್ತಾರೆ.
05068014a ಅತತ್ತ್ವಂ ಕುರುತೇ ತತ್ತ್ವಂ ತೇನ ಮೋಹಯತೇ ಪ್ರಜಾಃ|
05068014c ಏವಂವಿಧೋ ಧರ್ಮನಿತ್ಯೋ ಭಗವಾನ್ಮುನಿಭಿಃ ಸಹ|
05068014e ಆಗಂತಾ ಹಿ ಮಹಾಬಾಹುರಾನೃಶಂಸ್ಯಾರ್ಥಮಚ್ಯುತಃ||
ತತ್ತ್ವವಲ್ಲದವುಗಳನ್ನು ತತ್ತ್ವವುಳ್ಳವುಗಳನ್ನಾಗಿ ಮಾಡಿ ಪ್ರಜೆಗಳನ್ನು ಮೋಹಗೊಳಿಸುತ್ತಾನೆ. ಈ ರೀತಿಯಾಗಿ ಧರ್ಮನಿತ್ಯನಾದ ಭಗವಾನ್ ಮಹಾಬಾಹು ಅಚ್ಯುತನು ಹಿಂಸೆಯನ್ನು ತಡೆಯಲು ಮುನಿಗಳೊಂದಿಗೆ ಇಲ್ಲಿಗೆ ಬರುತ್ತಾನೆ.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಸಂಜಯವಾಕ್ಯೇ ಅಷ್ಟಷಷ್ಟಿತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಸಂಜಯವಾಕ್ಯದಲ್ಲಿ ಅರವತ್ತೆಂಟನೆಯ ಅಧ್ಯಾಯವು.