|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ: ಸನತ್ಸುಜಾತ ಪರ್ವ
೪೨
ಪ್ರಮಾದವೇ ಮೃತ್ಯುವೆಂದೂ ಅಪ್ರಮಾದವೇ ಅಮೃತತ್ವವೆಂದೂ ಸನತ್ಸುಜಾತನು ಪ್ರತಿಪಾದಿಸಿ (೧-೧೪), ಧರ್ಮ ಮತ್ತು ಪಾಪಗಳ ಸಂಬಂಧವನ್ನೂ (೧೫-೧೬), ಕರ್ಮಫಲಗಳ ಕುರಿತೂ (೧೭-೩೨) ಧೃತರಾಷ್ಟ್ರನಿಗೆ ಬೋಧಿಸುವುದು.
05042001 ವೈಶಂಪಾಯನ ಉವಾಚ|
05042001a ತತೋ ರಾಜಾ ಧೃತರಾಷ್ಟ್ರೋ ಮನೀಷೀ
ಸಂಪೂಜ್ಯ ವಾಕ್ಯಂ ವಿದುರೇರಿತಂ ತತ್|
05042001c ಸನತ್ಸುಜಾತಂ ರಹಿತೇ ಮಹಾತ್ಮಾ
ಪಪ್ರಚ್ಚ ಬುದ್ಧಿಂ ಪರಮಾಂ ಬುಭೂಷನ್||
ವೈಶಂಪಾಯನನು ಹೇಳಿದನು: “ಆಗ ಮನೀಷೀ ರಾಜಾ ಧೃತರಾಷ್ಟ್ರನು ವಿದುರನ ಮಾತನ್ನು ಗೌರವಿಸಿ, ಪರಮ ಬುದ್ಧಿಯನ್ನು ಪಡೆಯಲೋಸುಗ, ಮಹಾತ್ಮ ಸನತ್ಸುಜಾತನಿಗೆ ರಹಸ್ಯದಲ್ಲಿ ಕೇಳಿದನು.
05042002 ಧೃತರಾಷ್ಟ್ರ ಉವಾಚ|
05042002a ಸನತ್ಸುಜಾತ ಯದೀದಂ ಶೃಣೋಮಿ
ಮೃತ್ಯುರ್ಹಿ ನಾಸ್ತೀತಿ ತವೋಪದೇಶಂ|
05042002c ದೇವಾಸುರಾ ಹ್ಯಾಚರನ್ಬ್ರಹ್ಮಚರ್ಯಂ
ಅಮೃತ್ಯವೇ ತತ್ಕತರನ್ನು ಸತ್ಯಂ||
ಧೃತರಾಷ್ಟ್ರನು ಹೇಳಿದನು: “ಸನತ್ಸುಜಾತ! ಮೃತ್ಯುವೇ ಇಲ್ಲವೆಂದು ನಿನ್ನ ಉಪದೇಶವೆಂದು ನಾನು ಕೇಳಿದ್ದೇನೆ. ಆದರೂ ದೇವಾಸುರರು ಬ್ರಹ್ಮಚರ್ಯವನ್ನು ಆಚರಿಸಿ ಅಮೃತತ್ವವನ್ನು ಪಡೆದರು[1]. ಇವುಗಳಲ್ಲಿ ಯಾವುದು ಸತ್ಯ?”
05042003 ಸನತ್ಸುಜಾತ ಉವಾಚ|
05042003a ಅಮೃತ್ಯುಃ ಕರ್ಮಣಾ ಕೇ ಚಿನ್ಮೃತ್ಯುರ್ನಾಸ್ತೀತಿ ಚಾಪರೇ|
05042003c ಶೃಣು ಮೇ ಬ್ರುವತೋ ರಾಜನ್ಯಥೈತನ್ಮಾ ವಿಶಂಕಿಥಾಃ||
ಸನತ್ಸುಜಾತನು ಹೇಳಿದನು: “ಅಮೃತ್ಯುವು ಕರ್ಮಗಳಿಂದಾಗುತ್ತದೆಯೆಂದು ಕೆಲವರು ಹೇಳಿದರೆ ಮೃತ್ಯುವೇ ಇಲ್ಲವೆಂದು ಇತರರು ಹೇಳುತ್ತಾರೆ. ರಾಜನ್! ಈಗ ನಾನು ಹೇಳುವುದನ್ನು ಕೇಳು. ಇದರಿಂದ ನಿನ್ನಲ್ಲಿ ಶಂಕೆಗಳು ಉಳಿಯುವುದಿಲ್ಲ.
05042004a ಉಭೇ ಸತ್ಯೇ ಕ್ಷತ್ರಿಯಾದ್ಯಪ್ರವೃತ್ತೇ
ಮೋಹೋ ಮೃತ್ಯುಃ ಸಮ್ಮತೋ ಯಃ ಕವೀನಾಂ|
05042004c ಪ್ರಮಾದಂ ವೈ ಮೃತ್ಯುಮಹಂ ಬ್ರವೀಮಿ
ಸದಾಪ್ರಮಾದಮಮೃತತ್ವಂ ಬ್ರವೀಮಿ||
ಕ್ಷತ್ರಿಯ! ಇವೆರಡು ಸತ್ಯಗಳೂ ಪೂರ್ವಪೀಡಿತವಾದವುಗಳು. ಕವಿಗಳು ಮೃತ್ಯುವೆಂದು ಯಾವುದಕ್ಕೆ ಸಮ್ಮತಿಸುತ್ತಾರೋ ಅದು ಮೋಹ. ನಾನು ಪ್ರಮಾದವೇ[2] ಮೃತ್ಯುವೆಂದು ಹೇಳುತ್ತೇನೆ. ಸದಾ ಅಪ್ರಮಾದನಾಗಿರುವುದೇ ಅಮೃತತ್ವವೆಂದು ಹೇಳುತ್ತೇನೆ.
05042005a ಪ್ರಮಾದಾದ್ವೈ ಅಸುರಾಃ ಪರಾಭವನ್ನ್
ಅಪ್ರಮಾದಾದ್ಬ್ರಹ್ಮಭೂತಾ ಭವಂತಿ|
05042005c ನ ವೈ ಮೃತ್ಯುರ್ವ್ಯಾಘ್ರ ಇವಾತ್ತಿ ಜಂತೂನ್
ನ ಹ್ಯಸ್ಯ ರೂಪಮುಪಲಭ್ಯತೇ ಹ||
ಪ್ರಮಾದದಿಂದಲೇ ಅಸುರರು ಸೋತರು. ಅಪ್ರಮಾದರಾಗಿದ್ದವರು ಬ್ರಹ್ಮಭೂತರಾಗಿರುತ್ತಾರೆ[3]. ಆದರೂ ಮೃತ್ಯುವು ಜೀವಿಗಳನ್ನು ತಿನ್ನುವ ಹುಲಿಯಲ್ಲ. ಇದಕ್ಕೆ ಯಾವ ರೂಪವನ್ನೂ ದೊರಕಿಸಿ ಕೊಟ್ಟಿಲ್ಲ.
05042006a ಯಮಂ ತ್ವೇಕೇ ಮೃತ್ಯುಮತೋಽನ್ಯಮಾಹು-
ರಾತ್ಮಾವಸನ್ನಮಮೃತಂ ಬ್ರಹ್ಮಚರ್ಯಂ|
05042006c ಪಿತೃಲೋಕೇ ರಾಜ್ಯಮನುಶಾಸ್ತಿ ದೇವಃ
ಶಿವಃ ಶಿವಾನಾಮಶಿವೋಽಶಿವಾನಾಂ||
ಕೆಲವರು ಬ್ರಹ್ಮಚಾರಿ, ಆತ್ಮವಾಸಿ, ಮರಣವಿಲ್ಲದ ಯಮನೇ ಮೃತ್ಯುವೆಂದು ಹೇಳುತ್ತಾರೆ. ಆ ದೇವನು ಪುಣ್ಯವಂತರಿಗೆ ಸುಖಪ್ರದನೂ ಪಾಪಿಗಳಿಗೆ ದುಃಖಪ್ರದನೂ ಆಗಿ ಪಿತೃಲೋಕದ ರಾಜ್ಯವನ್ನಾಳುತ್ತಾನೆ[4].
05042007a ಆಸ್ಯಾದೇಷ ನಿಃಸರತೇ ನರಾಣಾಂ
ಕ್ರೋಧಃ ಪ್ರಮಾದೋ ಮೋಹರೂಪಶ್ಚ ಮೃತ್ಯುಃ|
05042007c ತೇ ಮೋಹಿತಾಸ್ತದ್ವಶೇ ವರ್ತಮಾನಾ
ಇತಃ ಪ್ರೇತಾಸ್ತತ್ರ ಪುನಃ ಪತಂತಿ||
ಅಲ್ಲಿಂದ ಅವನು ನರರಿಗೆ ಕ್ರೋಧ, ಪ್ರಮಾದ, ಮತ್ತು ಮೋಹರೂಪದ ಮೃತ್ಯುವನ್ನು ಕಳುಹಿಸುತ್ತಾನೆ. ಅವರು ಮೋಹಿತರಾಗಿ ಇವುಗಳ ವಶಕ್ಕೆ ಬಂದು ಅದರಂತೆ ನಡೆದು ಪ್ರೇತಗಳಾಗಿ ಅಲ್ಲಿಗೆ ಪುನಃ ಬೀಳುತ್ತಾರೆ[5].
05042008a ತತಸ್ತಂ ದೇವಾ ಅನು ವಿಪ್ಲವಂತೇ
ಅತೋ ಮೃತ್ಯುರ್ಮರಣಾಖ್ಯಾಮುಪೈತಿ|
05042008c ಕರ್ಮೋದಯೇ ಕರ್ಮಫಲಾನುರಾಗಾ-
ಸ್ತತ್ರಾನು ಯಾಂತಿ ನ ತರಂತಿ ಮೃತ್ಯುಂ||
ವಿಷಯಾಸಕ್ತವಾದ ಇಂದ್ರಿಯಗಣಗಳೂ[6] ಜೀವವನ್ನು ಹಿಂಬಾಲಿಸಿ ಹೋಗುತ್ತವೆ. ಆದುದರಿಂದ ಮೃತ್ಯುವನ್ನು ಮರಣವೆಂದೂ ಕರೆಯುತ್ತಾರೆ[7]. ಯಾರು ಕರ್ಮಫಲಗಳನ್ನು ಬಯಸಿ ಕರ್ಮಗಳ ಹಿಂದೆ ಹೋಗುತ್ತಾರೋ ಅವರು ಮೃತ್ಯುವನ್ನು ದಾಟುವುದಿಲ್ಲ[8].
05042009a ಯೋಽಭಿಧ್ಯಾಯನ್ನುತ್ಪತಿಷ್ಣೂನ್ನಿಹನ್ಯಾದ್
ಅನಾದರೇಣಾಪ್ರತಿಬುಧ್ಯಮಾನಃ|
05042009c ಸ ವೈ ಮೃತ್ಯುರ್ಮೃತ್ಯುರಿವಾತ್ತಿ ಭೂತ್ವಾ
ಏವಂ ವಿದ್ವಾನ್ಯೋ ವಿನಿಹಂತಿ ಕಾಮಾನ್||
ಯಾರು ತಿಳಿದು ಮೇಲಿಂದ ಮೇಲೆ ಹುಟ್ಟಿಬರುವ ಇಂದ್ರಿಯಭೋಗಗಳ ಬಯಕೆಗಳನ್ನು ಅನಾದರಿಸಿ ಎದುರಿಸಿ ನಾಶಪಡಿಸುತ್ತಾನೋ ಅವನೇ ಮೃತ್ಯುವಿಗೆ ಮೃತ್ಯುವಿನಂತಾಗುತ್ತಾನೆ. ಯಾರು ಕಾಮಗಳನ್ನು ಸಂಹರಿಸುತ್ತಾನೋ ಅವನೇ ವಿಧ್ವಾಂಸನೆನಿಸಿಕೊಳ್ಳುತ್ತಾನೆ.
05042010a ಕಾಮಾನುಸಾರೀ ಪುರುಷಃ ಕಾಮಾನನು ವಿನಶ್ಯತಿ|
05042010c ಕಾಮಾನ್ವ್ಯುದಸ್ಯ ಧುನುತೇ ಯತ್ಕಿಂ ಚಿತ್ಪುರುಷೋ ರಜಃ||
ಕಾಮವನ್ನೇ ಅನುಸರಿಸಿ ಹೋಗುವ ಪುರುಷನು ಕಾಮಗಳೊಂದಿಗೇ ವಿನಾಶಹೊಂದುತ್ತಾನೆ. ಕಾಮಗಳನ್ನು ದೂರವಿಟ್ಟರೆ ಪುರುಷನು ತನ್ನಲ್ಲಿರುವ ಏನನ್ನೂ ಕೊಡವಿ ಹಾಕಬಹುದು.
05042011a ತಮೋಽಪ್ರಕಾಶೋ ಭೂತಾನಾಂ ನರಕೋಽಯಂ ಪ್ರದೃಶ್ಯತೇ|
05042011c ಗೃಹ್ಯಂತ ಇವ ಧಾವಂತಿ ಗಚ್ಚಂತಃ ಶ್ವಭ್ರಮುನ್ಮುಖಾಃ||
ಪ್ರಕಾಶವೇ ಇಲ್ಲದ ಈ ಕತ್ತಲೆಯು ಭೂತಗಳಿಗೆ ನರಕವೆಂದೇ ತೋರುತ್ತದೆ. ಭೂತಹಿಡಿದವರಂತೆ ಅದರ ಕಡೆಗೇ ಓಡಿ ಹೋಗಿ ಪ್ರಪಾತದಲ್ಲಿ ಬೀಳುತ್ತವೆ.
05042012a ಅಭಿಧ್ಯಾ ವೈ ಪ್ರಥಮಂ ಹಂತಿ ಚೈನಂ
ಕಾಮಕ್ರೋಧೌ ಗೃಹ್ಯ ಚೈನಂ ತು ಪಶ್ಚಾತ್|
05042012c ಏತೇ ಬಾಲಾನ್ಮೃತ್ಯವೇ ಪ್ರಾಪಯಂತಿ
ಧೀರಾಸ್ತು ಧೈರ್ಯೇಣ ತರಂತಿ ಮೃತ್ಯುಂ||
‘ನಾನು’ ಎಂಬ ಅವಿದ್ಯೆಯು ಮೊದಲು ಕೊಲ್ಲುತ್ತದೆ[9]. ನಂತರ ಕಾಮಕ್ರೋಧಗಳೆರಡೂ ಹಿಡಿದು ಕೊಲ್ಲುತ್ತವೆ. ಇವು ಬಾಲಕ ಮುಗ್ಧನಿಗೆ ಮೃತ್ಯುವನ್ನು ತರುತ್ತವೆ. ಆದರೆ ಧೀರರು ಧೈರ್ಯದಿಂದ ಮೃತ್ಯುವನ್ನು ದಾಟುತ್ತಾರೆ.
05042013a ಅಮನ್ಯಮಾನಃ ಕ್ಷತ್ರಿಯ ಕಿಂ ಚಿದನ್ಯನ್
ನಾಧೀಯತೇ ತಾರ್ಣ ಇವಾಸ್ಯ ವ್ಯಾಘ್ರಃ|
05042013c ಕ್ರೋಧಾಲ್ಲೋಭಾನ್ಮೋಹಮಯಾಂತರಾತ್ಮಾ
ಸ ವೈ ಮೃತ್ಯುಸ್ತ್ವಚ್ಚರೀರೇ ಯ ಏಷಃ||
ಕ್ಷತ್ರಿಯ! ಇತರ ಯಾವುದನ್ನೂ ಅನಾದರಿಸಿದವನನ್ನು ಹುಲ್ಲಿನಿಂದ ಮಾಡಲ್ಪಟ್ಟ ಹುಲಿಯಂತೆ ಅದು ಮೇಲೆರಗುವುದಿಲ್ಲ. ಕ್ರೋಧ ಲೋಭಗಳ ಮೋಹಕ್ಕೊಳಗಾದ ಅಂತರಾತ್ಮವು ಶರೀರದ ಒಳಗೇ ಇರುವ ಮೃತ್ಯು.
05042014a ಏವಂ ಮೃತ್ಯುಂ ಜಾಯಮಾನಂ ವಿದಿತ್ವಾ
ಜ್ಞಾನೇ ತಿಷ್ಠನ್ನ ಬಿಭೇತೀಹ ಮೃತ್ಯೋಃ|
05042014c ವಿನಶ್ಯತೇ ವಿಷಯೇ ತಸ್ಯ ಮೃತ್ಯುಃ
ಮೃತ್ಯೋರ್ಯಥಾ ವಿಷಯಂ ಪ್ರಾಪ್ಯ ಮರ್ತ್ಯಃ||
ಈ ರೀತಿ ಮೃತ್ಯುವಿನ ಹುಟ್ಟನ್ನು ತಿಳಿದು, ಜ್ಞಾನದಲ್ಲಿಯೇ ಇರುವವನು ಮೃತ್ಯುವಿಗೆ ಹೆದರುವುದಿಲ್ಲ. ವಿಷಯಗಳನ್ನು ಹೊಂದಿ ಮರ್ತ್ಯನು ಹೇಗೆ ಮೃತ್ಯುವನ್ನೂ ಪಡೆಯುತ್ತಾನೋ ಹಾಗೆ ವಿಷಯಗಳು ವಿನಾಶವಾದಾಗ ಅವನ ಮೃತ್ಯುವೂ ವಿನಾಶವಾಗುತ್ತದೆ.”
05042015 ಧೃತರಾಷ್ಟ್ರ ಉವಾಚ|
05042015a ಯೇಽಸ್ಮಿನ್ಧರ್ಮಾನ್ನಾಚರಂತೀಹ ಕೇ ಚಿತ್
ತಥಾ ಧರ್ಮಾನ್ಕೇ ಚಿದಿಹಾಚರಂತಿ|
05042015c ಧರ್ಮಃ ಪಾಪೇನ ಪ್ರತಿಹನ್ಯತೇ ಸ್ಮ
ಉತಾಹೋ ಧರ್ಮಃ ಪ್ರತಿಹಂತಿ ಪಾಪಂ||
ಧೃತರಾಷ್ಟ್ರನು ಹೇಳಿದನು: “ಇಲ್ಲಿರುವ ಕೆಲವರು ಧರ್ಮವನ್ನು ಆಚರಿಸುವುದಿಲ್ಲ. ಹಾಗೆಯೇ ಕೆಲವರು ಧರ್ಮವನ್ನು ಆಚರಿಸುತ್ತಾರೆ. ಪಾಪವು ಧರ್ಮವನ್ನು ಕೊಲ್ಲುತ್ತದೆಯೋ ಅಥವಾ ಧರ್ಮವು ಪಾಪವನ್ನು ಕೊಲ್ಲುತ್ತದೆಯೋ ಹೇಳು!”
05042016 ಸನತ್ಸುಜಾತ ಉವಾಚ|
05042016a ಉಭಯಮೇವ ತತ್ರೋಪಭುಜ್ಯತೇ ಫಲಂ
ಧರ್ಮಸ್ಯೈವೇತರಸ್ಯ ಚ|
05042016c ಧರ್ಮೇಣಾಧರ್ಮಂ ಪ್ರಣುದತೀಹ ವಿದ್ವಾನ್
ಧರ್ಮೋ ಬಲೀಯಾನಿತಿ ತಸ್ಯ ವಿದ್ಧಿ||
ಸನತ್ಸುಜಾತನು ಹೇಳಿದನು: “ಎರಡೂ ಆಗಬಹುದು - ಧರ್ಮದ ಫಲ ಮತ್ತು ಅಧರ್ಮದ ಫಲ. ವಿದ್ವಾನನು ಧರ್ಮದಿಂದ ಅಧರ್ಮವನ್ನು ನಾಶಗೊಳಿಸುತ್ತಾನೆ. ಧರ್ಮವೇ ಬಲವಾದುದೆಂದು ಅವನಿಗೆ ತಿಳಿದಿರುತ್ತದೆ.”
05042017 ಧೃತರಾಷ್ಟ್ರ ಉವಾಚ|
05042017a ಯಾನಿಮಾನಾಹುಃ ಸ್ವಸ್ಯ ಧರ್ಮಸ್ಯ ಲೋಕಾನ್
ದ್ವಿಜಾತೀನಾಂ ಪುಣ್ಯಕೃತಾಂ ಸನಾತನಾನ್|
05042017c ತೇಷಾಂ ಪರಿಕ್ರಮಾನ್ಕಥಯಂತಸ್ತತೋಽನ್ಯಾನ್
ನೈತದ್ವಿದ್ವನ್ನೈವ ಕೃತಂ ಚ ಕರ್ಮ||
ಧೃತರಾಷ್ಟ್ರನು ಹೇಳಿದನು: “ದ್ವಿಜಾತಿಯ ಪುಣ್ಯಕರ್ಮಿಗಳು ತಮ್ಮ ಧರ್ಮಗಳಿಂದ ಪಡೆಯುವ ಸನಾತನ ಲೋಕಗಳ ಪರಿಕ್ರಮಗಳು ಬೇರೆ ಬೇರೆಯೆಂದು ಹೇಳುತ್ತಾರೆ. ಅವು ಮಾಡಿದ ಕರ್ಮಕ್ಕೆ ತಕ್ಕಂತೆ ಇರುತ್ತವೆಯಲ್ಲವೇ?”
05042018 ಸನತ್ಸುಜಾತ ಉವಾಚ|
05042018a ಯೇಷಾಂ ಬಲೇ ನ ವಿಸ್ಪರ್ಧಾ ಬಲೇ ಬಲವತಾಮಿವ|
05042018c ತೇ ಬ್ರಾಹ್ಮಣಾ ಇತಃ ಪ್ರೇತ್ಯ ಸ್ವರ್ಗಲೋಕೇ ಪ್ರಕಾಶತೇ||
ಸನತ್ಸುಜಾತನು ಹೇಳಿದನು: “ಬಲಶಾಲಿಗಳಲ್ಲಿ ಹೇಗೆ ಬಲದ ಕುರಿತು ಸ್ಪರ್ಧಾಭಾವವಿರುತ್ತದೆಯೋ ಹಾಗೆ ಸ್ಪರ್ಧಿಸದ ಬ್ರಾಹ್ಮಣರು ಮರಣದ ನಂತರ ಸ್ವರ್ಗಲೋಕದಲ್ಲಿ ಪ್ರಕಾಶಿಸುತ್ತಾರೆ.
05042019a ಯತ್ರ ಮನ್ಯೇತ ಭೂಯಿಷ್ಠಂ ಪ್ರಾವೃಷೀವ ತೃಣೋಲಪಂ|
05042019c ಅನ್ನಂ ಪಾನಂ ಚ ಬ್ರಾಹ್ಮಣಸ್ತಜ್ಜೀವನ್ನಾನುಸಂಜ್ವರೇತ್||
ಮಳೆಗಾಲದಲ್ಲಿ ಹುಲ್ಲು ಹೇರಳವಾಗಿರುವಂತೆ ಎಲ್ಲಿ ಸಾಕಷ್ಟು ಅನ್ನ ಪಾನಗಳು ದೊರೆಯುತ್ತವೆಯೋ ಅಲ್ಲಿ ಬ್ರಾಹ್ಮಣನು ಜೀವನಯಾತ್ರೆಯನ್ನು ನಡೆಸಬೇಕು.
05042020a ಯತ್ರಾಕಥಯಮಾನಸ್ಯ ಪ್ರಯಚ್ಚತ್ಯಶಿವಂ ಭಯಂ|
05042020c ಅತಿರಿಕ್ತಮಿವಾಕುರ್ವನ್ಸ ಶ್ರೇಯಾನ್ನೇತರೋ ಜನಃ||
ಎಲ್ಲಿ ಅವನು ಮಾತನಾಡದೇ ಇರುವಾಗ ಇತರ ಜನರು ಅವನಿಗೆ ಅಮಂಗಳಕರವಾದುದನ್ನು, ಭಯವನ್ನೂ ನೀಡಿ ಅತಿಕ್ರಮಿಸುವುದಿಲ್ಲವೋ ಅಲ್ಲಿ ಅವನು ಶ್ರೇಯಸ್ಸನ್ನು ಪಡೆಯುತ್ತಾನೆ.
05042021a ಯೋ ವಾಕಥಯಮಾನಸ್ಯ ಆತ್ಮಾನಂ ನಾನುಸಂಜ್ವರೇತ್|
05042021c ಬ್ರಹ್ಮಸ್ವಂ ನೋಪಭುಂಜೇದ್ವಾ ತದನ್ನಂ ಸಮ್ಮತಂ ಸತಾಂ||
ಮೌನಿಯಾಗಿರುವ ಆತ್ಮನಿಗೆ ಯಾರು ಸಂತಾಪವನ್ನುಂಟುಮಾಡುವುದಿಲ್ಲವೋ, ಅವನ ಬ್ರಹ್ಮತ್ವ ಸಾಧನೆಗೆ ಸಾಧಕವಾದವುಗಳನ್ನು ಅಪಹರಿಸುವುದಿಲ್ಲವೋ ಅವನ ಅನ್ನವು ಸಂತರಿಗೆ ಸಮ್ಮತವಾದುದು.
05042022a ಯಥಾ ಸ್ವಂ ವಾಂತಮಶ್ನಾತಿ ಶ್ವಾ ವೈ ನಿತ್ಯಮಭೂತಯೇ|
05042022c ಏವಂ ತೇ ವಾಂತಮಶ್ನಂತಿ ಸ್ವವೀರ್ಯಸ್ಯೋಪಜೀವನಾತ್||
ಯಾರು ಸ್ವವೀರ್ಯದಿಂದ ಉಪಜೀವನವನ್ನು ಮಾಡುತ್ತಾರೋ ಅವರು ನಿತ್ಯವೂ ತನ್ನ ವಾಂತಿಯನ್ನು ತಿನ್ನುವ ನಾಯಿಯಂತೆ ತಾವೇ ಕಕ್ಕಿದ್ದುದನ್ನು ಉಂಡು ಅನರ್ಥಕ್ಕೆ ಕಾರಣರಾಗುತ್ತಾರೆ.
05042023a ನಿತ್ಯಮಜ್ಞಾತಚರ್ಯಾ ಮೇ ಇತಿ ಮನ್ಯೇತ ಬ್ರಾಹ್ಮಣಃ|
05042023c ಜ್ಞಾತೀನಾಂ ತು ವಸನ್ಮಧ್ಯೇ ನೈವ ವಿದ್ಯೇತ ಕಿಂ ಚನ||
ಬ್ರಾಹ್ಮಣನು ‘ನನ್ನ ಆಚರಣೆಗಳು ಅಜ್ಞಾತವಾಗಿರಲಿ (ಯಾರಿಗೂ ತಿಳಿಯದಿರಲಿ)!’ ಎಂದು ಯೋಚಿಸುತ್ತಾನೆ. ಇದರಿಂದ ಬಂಧು-ಬಾಂಧವರ ಮಧ್ಯದಲ್ಲಿ ಅವನು ವಾಸಿಸುತ್ತಿದ್ದರೂ ಅವನ ಕುರಿತು ಯಾರಿಗೂ ಏನೂ ತಿಳಿದಿರುವುದಿಲ್ಲ.
05042024a ಕೋ ಹ್ಯೇವಮಂತರಾತ್ಮಾನಂ ಬ್ರಾಹ್ಮಣೋ ಹಂತುಮರ್ಹತಿ|
05042024c ತಸ್ಮಾದ್ಧಿ ಕಿಂ ಚಿತ್ಕ್ಷತ್ರಿಯ ಬ್ರಹ್ಮಾವಸತಿ ಪಶ್ಯತಿ||
ಯಾವ ಬ್ರಾಹ್ಮಣನೂ ಅಂತರಾತ್ಮನನ್ನು ಘಾತಿಗೊಳಿಸಬಾರದು. ಕ್ಷತ್ರಿಯ! ಅದರಿಂದ ಬ್ರಹ್ಮನು ಇರುವುದನ್ನು ಸ್ವಲ್ಪವಾದರೂ ಕಂಡುಕೊಳ್ಳುತ್ತಾನೆ.
05042025a ಅಶ್ರಾಂತಃ ಸ್ಯಾದನಾದಾನಾತ್ಸಮ್ಮತೋ ನಿರುಪದ್ರವಃ|
05042025c ಶಿಷ್ಟೋ ನ ಶಿಷ್ಟವತ್ಸ ಸ್ಯಾದ್ಬ್ರಾಹ್ಮಣೋ ಬ್ರಹ್ಮವಿತ್ಕವಿಃ||
ಶ್ರಮಯುಕ್ತನಾಗಿರದ, ದಾನಗಳನ್ನು ಸ್ವೀಕರಿಸದ, ನಿರುಪದ್ರವಿಯಾದ, ಶಿಷ್ಟನೆಂದು ಸಮ್ಮಾನಿತನಾದರೂ ಶಿಷ್ಟನೆಂದು ತೋರಿಸಿಕೊಳ್ಳದ ಬ್ರಾಹ್ಮಣನೇ ಬ್ರಹ್ಮನನ್ನು ತಿಳಿದ ಕವಿ[10].
05042026a ಅನಾಢ್ಯಾ ಮಾನುಷೇ ವಿತ್ತೇ ಆಢ್ಯಾ ವೇದೇಷು ಯೇ ದ್ವಿಜಾಃ|
05042026c ತೇ ದುರ್ಧರ್ಷಾ ದುಷ್ಪ್ರಕಂಪ್ಯಾ ವಿದ್ಯಾತ್ತಾನ್ಬ್ರಹ್ಮಣಸ್ತನುಂ||
ಮಾನುಷ ಸಂಪತ್ತಿನಲ್ಲಿ ಬಡವರಾಗಿರುವ ಆದರೆ ವೇದಗಳಲ್ಲಿ ಶ್ರೀಮಂತರಾಗಿರುವ ದ್ವಿಜರು ಗೆಲ್ಲಲಸಾಧ್ಯರು, ಅಲುಗಾಡಿಸಲಸಾಧ್ಯರು. ಅವು ಬ್ರಾಹ್ಮಣನ ತನುವೆಂದು ತಿಳಿದುಕೋ.
05042027a ಸರ್ವಾನ್ ಸ್ವಿಷ್ಟಕೃತೋ ದೇವಾನ್ವಿದ್ಯಾದ್ಯ ಇಹ ಕಶ್ಚನ|
05042027c ನ ಸಮಾನೋ ಬ್ರಾಹ್ಮಣಸ್ಯ ಯಸ್ಮಿನ್ಪ್ರಯತತೇ ಸ್ವಯಂ||
ಇಷ್ಟಾರ್ಥಸಿದ್ಧಿಗಳನ್ನು ಮಾಡುವ ಎಲ್ಲ ದೇವತೆಗಳನ್ನೂ ಅರಿತಿರುವವನೂ, ಯಾರಕುರಿತು ಪ್ರಯತ್ನಿಸುತ್ತಿರುತ್ತಾನೋ ಸ್ವಯಂ ಆ ದೇವತೆಗಳೂ ಕೂಡ ಇಂತಹ ಬ್ರಾಹ್ಮಣನಿಗೆ ಸಮಾನರಾಗುವುದಿಲ್ಲ.
05042028a ಯಮಪ್ರಯತಮಾನಂ ತು ಮಾನಯಂತಿ ಸ ಮಾನಿತಃ|
05042028c ನ ಮಾನ್ಯಮಾನೋ ಮನ್ಯೇತ ನಾಮಾನಾದಭಿಸಂಜ್ವರೇತ್||
ತಟಸ್ಥನಾಗಿರುವವನು ಗೌರವಿಸಿದರೆ ಹಿಗ್ಗುವುದಿಲ್ಲ. ಒಂದುವೇಳೆ ಜನರು ಅಪಮಾನ ಮಾಡಿದರೂ ಕುಗ್ಗುವುದಿಲ್ಲ.
05042029a ವಿದ್ವಾಂಸೋ ಮಾನಯಂತೀಹ ಇತಿ ಮನ್ಯೇತ ಮಾನಿತಃ|
05042029c ಅಧರ್ಮವಿದುಷೋ ಮೂಢಾ ಲೋಕಶಾಸ್ತ್ರವಿಶಾರದಾಃ|
05042029e ನ ಮಾನ್ಯಂ ಮಾನಯಿಷ್ಯಂತಿ ಇತಿ ಮನ್ಯೇದಮಾನಿತಃ||
ವಿದ್ವಾಂಸರು ಗೌರವಿಸುತ್ತಿದ್ದಾರೆ ಎಂದು ಗೌರವಿಸಿಕೊಂಡವನು ತಿಳಿದುಕೊಳ್ಳುತ್ತಾನೆ. ಅಪಮಾನಿತನಾದವನು ಧರ್ಮವನ್ನು ತಿಳಿಯದ ಮೂಢರು, ಲೋಕಶಾಸ್ತ್ರಗಳನ್ನು ತಿಳಿಯದವರು ಗೌರವಿಸಬೇಕಾದವರನ್ನು ಗೌರವಿಸುವುದಿಲ್ಲ ಎಂದು ತಿಳಿದುಕೊಳ್ಳುತ್ತಾನೆ.
05042030a ನ ವೈ ಮಾನಂ ಚ ಮೌನಂ ಚ ಸಹಿತೌ ಚರತಃ ಸದಾ|
05042030c ಅಯಂ ಹಿ ಲೋಕೋ ಮಾನಸ್ಯ ಅಸೌ ಮಾನಸ್ಯ ತದ್ವಿದುಃ||
ಮಾನ ಮತ್ತು ಮೌನಗಳು ಸದಾ ಒಟ್ಟಿಗೇ ಇರುವುದಿಲ್ಲ. ಈ ಲೋಕವು ಮಾನಕ್ಕೆ ಸೇರಿದ್ದುದು. ನಂತರದ್ದು ಮೌನಕ್ಕೆ ಸೇರಿದ್ದುದು ಎಂದು ತಿಳಿ.
05042031a ಶ್ರೀಃ ಸುಖಸ್ಯೇಹ ಸಂವಾಸಃ ಸಾ ಚಾಪಿ ಪರಿಪಂಥಿನೀ|
05042031c ಬ್ರಾಹ್ಮೀ ಸುದುರ್ಲಭಾ ಶ್ರೀರ್ಹಿ ಪ್ರಜ್ಞಾಹೀನೇನ ಕ್ಷತ್ರಿಯ||
ಕ್ಷತ್ರಿಯ! ಈ ಲೋಕದಲ್ಲಿ ಸಂಪತ್ತು ಸುಖಕರವಾದುದು. ಆದರೆ ಅದು ಮಾರ್ಗದಲ್ಲಿರುವ ಅಡಚಣೆ. ಪ್ರಜ್ಞಾಹೀನನಿಗೆ ಬ್ರಹ್ಮ ಸಂಪತ್ತು ದೊರಕುವುದು ಕಷ್ಟ.
05042032a ದ್ವಾರಾಣಿ ತಸ್ಯಾ ಹಿ ವದಂತಿ ಸಂತೋ
ಬಹುಪ್ರಕಾರಾಣಿ ದುರಾವರಾಣಿ|
05042032c ಸತ್ಯಾರ್ಜವೇ ಹ್ರೀರ್ದಮಶೌಚವಿದ್ಯಾಃ
ಷಣ್ಮಾನಮೋಹಪ್ರತಿಬಾಧನಾನಿ||
ಅದಕ್ಕೆ (ಬ್ರಾಹ್ಮೀ ಸಂಪತ್ತಿಗೆ) ಬಹುಪ್ರಕಾರದ, ಮುಚ್ಚಲು ಕಷ್ಟಕರವಾದ, ದ್ವಾರಗಳಿವೆಯೆಂದು ಸಂತರು ಹೇಳುತ್ತಾರೆ. ಸತ್ಯ (ಪ್ರಾಣಿಗಳಿಗೆ ಹಿತಕರವೂ ಯಥಾರ್ಥವೂ ಆದ ಮಾತು), ಆರ್ಜವ (ಕುಟಿಲತೆ ಇಲ್ಲದೇ ಇರುವುದು), ಹ್ರೀ (ಅಕೃತ್ಯವನ್ನು ಮಾಡಲು ನಾಚಿಕೆ), ದಮ (ಮನಸ್ಸಿನ ನಿಗ್ರಹ), ಶೌಚ (ಪಾಪವನ್ನು ತೊಳೆದುಕೊಳ್ಳುವುದು), ವಿದ್ಯೆ (ಬ್ರಹ್ಮವಿದ್ಯೆ) ಈ ಆರು ಮೋಹವನ್ನು ನಾಶಗೊಳಿಸುತ್ತವೆ.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸನತ್ಸುಜಾತ ಪರ್ವಣಿ ದ್ವಿಚತ್ವಾರಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸನತ್ಸುಜಾತ ಪರ್ವದಲ್ಲಿ ನಲ್ವತ್ತೆರಡನೆಯ ಅಧ್ಯಾಯವು.
[1] ಛಾಂದೋಗ್ಯ ಉಪನಿಷತ್ತಿನ ಪ್ರಕಾರ ತದೋಭಯೇ ದೇವಾ ಅನುಬುಬುಧಿರೇ.. ತೌ ಹ ದ್ವಾತ್ರಿಂಶತಂ ವರ್ಷಾಣಿ ಬ್ರಹ್ಮಚರ್ಯಮೂಷತುಃ|| ಏಕಶತಂ ಹ ವೈ ವರ್ಷಾಣಿ ಮಘವಾ ಪ್ರಜಾಪತೌ ಬ್ರಹ್ಮಚರ್ಯಮುವಾಸ|| ಅರ್ಥಾತ್ ಪ್ರಜಾಪತಿಬ್ರಹ್ಮನ ಬಳಿ ಇಂದ್ರ-ವಿರೋಚನರಿಬ್ಬರೂ ಬ್ರಹ್ಮಚರ್ಯಾನುಷ್ಠಾನದಿಂದಿದ್ದು ಮೃತ್ಯುವನ್ನು ಗೆಲ್ಲುವ ಸಲುವಾಗಿ ತಪಸ್ಸು ಮಾಡಿದರು. ವಿರೋಚನನು ಮೂವತ್ತೆರಡು ವರ್ಷಗಳು ಸಾಲಂಕೃತವಾದ ತನ್ನ ನೆರಳನ್ನು ನೀರಿನಲ್ಲಿ ನೋಡಿ ದೇಹವೇ ಆತ್ಮವೆಂಬ ಸಿದ್ಧಾಂತಕ್ಕೆ ಬಂದು ತಪಸ್ಸಿನಿಂದ ವಿಮುಖನಾದನು. ಆದರೆ ಇಂದ್ರನು ನೀರಿನಲ್ಲಿ ಕಂಡ ತನ್ನ ಪ್ರತಿಕೃತಿಯು ಕಾಲಾಂತರದಲ್ಲಿ ವ್ಯಾತ್ಯಾಸಹೊಂದುವುದೆಂದು, ಆದುದರಿಂದ ದೇಹವು ಆತ್ಮವಾಗಲು ಸಾಧ್ಯವಿಲ್ಲವೆಂದೂ ಮನಗೊಂಡು ನೂರಾ ಒಂದು ವರ್ಷಗಳ ಪರ್ಯಂತ ಬ್ರಹ್ಮಚರ್ಯವ್ರತಾನುಷ್ಠಾನದಿಂದಿದ್ದು, ಆತ್ಮಜ್ಞಾನವನ್ನು ಪಡೆದು ಮೃತ್ಯುವನ್ನು ಗೆದ್ದನು. [ಭಾರತ ದರ್ಶನ, ಪುಟ ೫೦೯೮]
[2] ಪ್ರಮಾದವೆಂದರೆ - ಸ್ವಾಭಾವಿಕಬ್ರಹ್ಮಭಾವಾತ್ ಪ್ರಚ್ಯುತಿಃ - ಸ್ವಾಭಾವಿಕ ಬ್ರಹ್ಮಭಾವದಿಂದ ಚ್ಯುತನಾಗುವುದು. [ಭಾರತ ದರ್ಶನ, ಪುಟ ೫೦೯೯]
[3] ಇಲ್ಲಿ ಅಸುರ ಮತ್ತು ಸುರರ ವ್ಯತ್ಯಾಸಗಳನ್ನು ಹೇಳಲಾಗಿದೆ. ಅಸುಷು ರಮಂತೇ ಇತ್ಯಸುರಾಃ - ಇಂದ್ರಿಯಸುಖಗಳಲ್ಲಿ ಆಸಕ್ತರಾದ ವಿಷಯಿಗಳೇ ಅಸುರರು. ಸ್ವಸ್ಮಿನ್ ರಮಂತೇ ಇತಿ ಸುರಾಃ - ಆತ್ಮದರ್ಶನ ಸುಖದಲ್ಲಿಯೇ ಸದಾ ಇರುವವರು ಸುರರು. [ಭಾರತ ದರ್ಶನ, ಪುಟ ೫೦೯೯]
[4] ಯಮನು ಪಾಶವನ್ನು ಧರಿಸಿ ಅಂಗುಷ್ಠಮಾತ್ರವಿರುವ ಸೂಕ್ಷ್ಮ ಶರೀರವನ್ನು ಶರೀರದಿಂದ ಸೆಳೆಯುತ್ತಾನೆ. ಅವನು ದೇಹದಿಂದ ಜೀವವನ್ನು ಪ್ರತ್ಯೇಕಿಸುತ್ತಾನೆಯೇ ಹೊರತು ಜೀವವನ್ನು ನಾಶಗೊಳಿಸುವುಲ್ಲ. ಹೀಗೆ ಶರೀರದಿಂದ ಜೀವವನ್ನು ಪ್ರತ್ಯೇಕಿಸಿದ ಮಾತ್ರಕ್ಕೆ ಯಮನು ಮೃತ್ಯುವಾಗಲಾರನು. ಬೃಹದಾರಣ್ಯಕೋಪನಿಷತ್ತಿನಲ್ಲಿ ಹೇಳಿರುವಂತೆ ಮೃತ್ಯುರ್ವೈ ತಮಃ| ಜ್ಯೋತಿರಮೃತಂ|| ಅರ್ಥಾತ್ ತಮಸ್ಸೇ ಮೃತ್ಯು. ಆತ್ಮಸ್ವರೂಪ ಬೆಳಕೇ ಅಮೃತ. [ಭಾರತ ದರ್ಶನ, ಪುಟ ೫೧೦೦]
[5] ಅರ್ಥಾತ್ - ಜೀವಿಗಳು ಮರಣವೆಂಬ ಹೆಸರಿನಿಂದ ಒಂದು ಶರೀರವನ್ನು ತ್ಯಾಗಮಾಡಿದರೂ ವಿನಾಶಹೊಂದುವುದಿಲ್ಲ. ಭೂಲೋಕ, ಪಿತೃಲೋಕ ಹೀಗೆ ಸುತ್ತಾಡುತ್ತಲೇ ಇರುತ್ತಾರೆ. [ಭಾರತ ದರ್ಶನ, ಪುಟ ೫೧೦೨]
[6] ‘ದೇವಾಃ’ ಅಂದರೆ ಇಂದ್ರಿಯಗಳು. ದೇವಾ ವೈಕಾರಿಕಾ ದಶ ಎಂದು ವಿಷ್ಣುಪುರಾಣದಲ್ಲಿ ‘ದೇವ’ ಶಬ್ಧಕ್ಕೆ ಹತ್ತು ಇಂದ್ರಿಯಗಳೆಂದು ಹೇಳಿದ್ದಾರೆ. ಪುರುಷಸೂಕ್ತದಲ್ಲಿರುವ ‘ತಸ್ಯ ದೇಹಾ ಅಸನ್ವಶೇ’ ಎನ್ನುವುದರಲ್ಲಿಯೂ ಕೂಡ ‘ದೇವ’ ಶಬ್ಧಕ್ಕೆ ಇಂದ್ರಿಯಗಳೆಂದೇ ವ್ಯಾಖ್ಯಾನ ಮಾಡಿರುತ್ತಾರೆ. [ಭಾರತ ದರ್ಶನ, ಪುಟ ೫೧೦೩]
[7] ಜೀವವನ್ನು ವಿಷಯಾಸಕ್ತ ಇಂದ್ರಿಯಗಳು ಹಿಂಬಾಲಿಸಿ ಹೋಗುವುದರಿಂದ ಮರಣ (ದೇಹ ಪರಿತ್ಯಾಗ) ಮತ್ತು ಮೃತ್ಯು (ಅಜ್ಞಾನ, ಪ್ರಮಾದ) ಎರಡೂ ಒಂದೇ ಎನಿಸಿಕೊಳ್ಳುತ್ತವೆ. ವಾಸ್ತವದಲ್ಲಿ ಅವೆರಡೂ ಬೇರೆ ಬೇರೆ.
[8] ಜೀವವು ಕರ್ಮವನ್ನು ಮಾಡಿದರೆ ಫಲವನ್ನಪೇಕ್ಷಿಸುವುದು ಸ್ವಾಭಾವಿಕ. ಕರ್ಮದ ಫಲವನ್ನು ಅಪೇಕ್ಷಿಸಿದೊಡನೆಯೇ ಜೀವನು ಅದರಿಂದ ಬಂಧಿತನಾಗುತ್ತಾನೆ. ಜೀವವು ಕರ್ಮಫಲವನ್ನು ಅನುಸರಿಸಿಯೇ ನಡೆದುಕೊಳ್ಳಬೇಕಾಗುತ್ತದೆ. ಕರ್ಮಫಲವು ಜೀವವನ್ನು ನಿಯುಂತ್ರಿಸುತ್ತದೆ. ಈ ಕಾರಣದಿಂದ ಅವನು ಮೃತ್ಯುವನ್ನು ದಾಟಲಾರನು. [ಭಾರತ ದರ್ಶನ, ಪುಟ ೫೧೦೩]
[9] ‘ಅಭಿಧ್ಯಾ ತು ಪರಸ್ವೇಹಾ’ ಎಂದರೆ ಇತರರ ಸ್ವತ್ತನ್ನು ಅಪಹರಿಸುವ ಆಸೆ ಎಂದೂ ಅರ್ಥವಿದೆ. [ಭಾರತ ದರ್ಶನ, ಪುಟ ೫೧೦೫]
[10] ಬ್ರಹ್ಮಜ್ಞಾನಿಯೂ, ವ್ಯಾಪಕ ದೃಷ್ಟಿಯುಳ್ಳವನೂ ಆದ ಬ್ರಾಹ್ಮಣನು ದೇಹೇಂದ್ರಿಯಗಳನ್ನಾಗಲೀ ಅವುಗಳ ಧರ್ಮಗಳನ್ನಾಗಲೀ ಆತ್ಮವೆಂದು ಭಾವಿಸದೇ ಇರುವುದರಿಂದ ಸಂಸಾರದಲ್ಲಿ ಶ್ರಮುಯುಕ್ತನಾಗಿರುವುದಿಲ್ಲ. ಯಾವಾಗಲೂ ಆತ್ಮನಲ್ಲಿ ವಿಶ್ರಾಂತಿ ಪಡೆಯುವುದರಿಂದ ಅವನಿಗೆ ಶ್ರಮವೆಂಬುದೇ ಇರುವುದಿಲ್ಲ. [ಭಾರತ ದರ್ಶನ, ಪುಟ ೫೧೨೨]. ಕ್ರೋಧ-ಹರ್ಷ ಮೊದಲಾದ ಉಪದ್ರವಗಳು ಅವನಿಗಿರುವುದಿಲ್ಲ. [ಭಾರತ ದರ್ಶನ, ಪುಟ ೫೧೨೨].