ಉದ್ಯೋಗ ಪರ್ವ: ಕರ್ಣಉಪನಿವಾದ ಪರ್ವ
೧೪೩
ಕುಂತಿಯು ಕರ್ಣನಿಗೆ ಅವನು ತನ್ನ ಮತ್ತು ಸೂರ್ಯನ ಮಗನೆಂದೂ ಪಾಂಡವರೊಂದಿಗೆ ಸೇರೆಂದೂ, “ಸೂತಪುತ್ರ ಎನ್ನುವ ಶಬ್ಧವು ನಿನಗೆ ಬೇಡ. ಪಾರ್ಥನೆಂದೆನಿಸಿಕೋ!” ಎನ್ನುವುದು (೧-೧೨).
05143001 ಕರ್ಣ ಉವಾಚ|
05143001a ರಾಧೇಯೋಽಹಮಾಧಿರಥಿಃ ಕರ್ಣಸ್ತ್ವಾಮಭಿವಾದಯೇ|
05143001c ಪ್ರಾಪ್ತಾ ಕಿಮರ್ಥಂ ಭವತೀ ಬ್ರೂಹಿ ಕಿಂ ಕರವಾಣಿ ತೇ||
ಕರ್ಣನು ಹೇಳಿದನು: “ರಾಧೇಯ, ಆದಿರಥಿ, ನಾನು ಕರ್ಣನು ನಿನಗೆ ನಮಸ್ಕರಿಸುತ್ತೇನೆ. ಇಲ್ಲಿಗೆ ನೀನು ಏಕೆ ಬಂದಿದ್ದೀಯೆ ಮತ್ತು ನಾನು ಏನು ಮಾಡಲಿ?”
05143002 ಕುಂತ್ಯುವಾಚ|
05143002a ಕೌಂತೇಯಸ್ತ್ವಂ ನ ರಾಧೇಯೋ ನ ತವಾಧಿರಥಃ ಪಿತಾ|
05143002c ನಾಸಿ ಸೂತಕುಲೇ ಜಾತಃ ಕರ್ಣ ತದ್ವಿದ್ಧಿ ಮೇ ವಚಃ||
ಕುಂತಿಯು ಹೇಳಿದಳು: “ನೀನು ಕೌಂತೇಯ! ರಾಧೇಯನಲ್ಲ. ಅಧಿರಥನು ನಿನ್ನ ಪಿತನಲ್ಲ. ಕರ್ಣ! ನೀನು ಸೂತಕುಲದಲ್ಲಿ ಜನಿಸಿದವನಲ್ಲ. ನನ್ನ ಮಾತನ್ನು ತಿಳಿದುಕೋ.
05143003a ಕಾನೀನಸ್ತ್ವಂ ಮಯಾ ಜಾತಃ ಪೂರ್ವಜಃ ಕುಕ್ಷಿಣಾ ಧೃತಃ|
05143003c ಕುಂತಿಭೋಜಸ್ಯ ಭವನೇ ಪಾರ್ಥಸ್ತ್ವಮಸಿ ಪುತ್ರಕ||
ಕನ್ಯೆಯಾಗಿದ್ದಾಗ ನನಗೆ ನೀನು ಜ್ಯೇಷ್ಠನಾಗಿ ಹುಟ್ಟಿದೆ. ಕುಂತೀಭೋಜನ ಭವನದಲ್ಲಿ ಹೊಟ್ಟೆಯಲ್ಲಿ ನಿನ್ನನ್ನು ಹೊತ್ತಿದ್ದೆ. ಪುತ್ರಕ! ನೀನು ಪಾರ್ಥನಾಗಿದ್ದೀಯೆ.
05143004a ಪ್ರಕಾಶಕರ್ಮಾ ತಪನೋ ಯೋಽಯಂ ದೇವೋ ವಿರೋಚನಃ|
05143004c ಅಜೀಜನತ್ತ್ವಾಂ ಮಯ್ಯೇಷ ಕರ್ಣ ಶಸ್ತ್ರಭೃತಾಂ ವರಂ||
ಕರ್ಣ! ದೇವ ವಿರೋಚನ, ಎಲ್ಲವನ್ನೂ ಪ್ರಕಾಶಗೊಳಿಸುವ ಶಸ್ತ್ರಭೃತರಲ್ಲಿ ಶೇಷ್ಠ ತಪನನು ನನ್ನಲ್ಲಿ ನಿನ್ನನ್ನು ಹುಟ್ಟಿಸಿದನು.
05143005a ಕುಂಡಲೀ ಬದ್ಧಕವಚೋ ದೇವಗರ್ಭಃ ಶ್ರಿಯಾ ವೃತಃ|
05143005c ಜಾತಸ್ತ್ವಮಸಿ ದುರ್ಧರ್ಷ ಮಯಾ ಪುತ್ರ ಪಿತುರ್ಗೃಹೇ||
ಪುತ್ರ! ಕುಂಡಲ-ಕವಚಗಳಿಂದೊಡಗೂಡಿ, ದುರ್ಧರ್ಷ ದೇವಗರ್ಭನಾದ ನೀನು ಶ್ರೀಯಿಂದ ಆವೃತನಾಗಿ ತಂದೆಯ ಮನೆಯಲ್ಲಿ ನನ್ನ ಮಗನಾಗಿ ಹುಟ್ಟಿದ್ದೆ.
05143006a ಸ ತ್ವಂ ಭ್ರಾತೄನಸಂಬುದ್ಧ್ವಾ ಮೋಹಾದ್ಯದುಪಸೇವಸೇ|
05143006c ಧಾರ್ತರಾಷ್ಟ್ರಾನ್ನ ತದ್ಯುಕ್ತಂ ತ್ವಯಿ ಪುತ್ರ ವಿಶೇಷತಃ||
ಪುತ್ರ! ನಿನ್ನ ಸಹೋದರರನ್ನು ತಿಳಿಯದೇ ಅಜ್ಞಾನದಿಂದ ಈ ರೀತಿ ಧಾರ್ತರಾಷ್ಟ್ರನ ಸೇವೆ ಮಾಡುವುದು ನಿನಗೆ ಸರಿಯಲ್ಲ.
05143007a ಏತದ್ಧರ್ಮಫಲಂ ಪುತ್ರ ನರಾಣಾಂ ಧರ್ಮನಿಶ್ಚಯೇ|
05143007c ಯತ್ತುಷ್ಯಂತ್ಯಸ್ಯ ಪಿತರೋ ಮಾತಾ ಚಾಪ್ಯೇಕದರ್ಶಿನೀ||
ಪುತ್ರ! ತಂದೆ-ತಾಯಿಯರ ಉದ್ದೇಶಗಳನ್ನು ಪೂರೈಸುವುದು ನರರ ಧರ್ಮಫಲವೆಂದು ಧರ್ಮನಿಶ್ಚಯವಾಗಿದೆ.
05143008a ಅರ್ಜುನೇನಾರ್ಜಿತಾಂ ಪೂರ್ವಂ ಹೃತಾಂ ಲೋಭಾದಸಾಧುಭಿಃ|
05143008c ಆಚ್ಚಿದ್ಯ ಧಾರ್ತರಾಷ್ಟ್ರೇಭ್ಯೋ ಭುಂಕ್ಷ್ವ ಯೌಧಿಷ್ಠಿರೀಂ ಶ್ರಿಯಂ||
ಹಿಂದೆ ಅರ್ಜುನನು ಸಂಪಾದಿಸಿದ, ನಂತರ ಕೆಟ್ಟ ಧಾರ್ತರಾಷ್ಟ್ರರಿಂದ ಮೋಸದಿಂದ ಅಪಹರಿಸಲ್ಪಟ್ಟ ಯುಧಿಷ್ಠಿರನ ಸಂಪತ್ತನ್ನು ಭೋಗಿಸು.
05143009a ಅದ್ಯ ಪಶ್ಯಂತು ಕುರವಃ ಕರ್ಣಾರ್ಜುನಸಮಾಗಮಂ|
05143009c ಸೌಭ್ರಾತ್ರೇಣ ತದಾಲಕ್ಷ್ಯ ಸಮ್ನಮಂತಾಮಸಾಧವಃ||
ಇಂದು ಕುರುಗಳು ಕರ್ಣಾರ್ಜುನರು ಒಂದಾಗುವುದನ್ನು ನೋಡಲಿ. ನಿಮ್ಮಿಬ್ಬರ ಸೌಭ್ರಾತೃತ್ವವನ್ನು ನೋಡಿ ಕೆಟ್ಟ ಜನರು ತಲೆಬಾಗಲಿ.
05143010a ಕರ್ಣಾರ್ಜುನೌ ವೈ ಭವತಾಂ ಯಥಾ ರಾಮಜನಾರ್ದನೌ|
05143010c ಅಸಾಧ್ಯಂ ಕಿಂ ನು ಲೋಕೇ ಸ್ಯಾದ್ಯುವಯೋಃ ಸಹಿತಾತ್ಮನೋಃ||
ರಾಮ-ಜನಾರ್ದನರಂತೆ ನೀವಿಬ್ಬರೂ ಕರ್ಣಾರ್ಜುನರಾಗಿರಿ. ನೀವಿಬ್ಬರೂ ಒಂದಾದರೆ ನಿಮಗೆ ಈ ಲೋಕದಲ್ಲಿ ಯಾವುದು ತಾನೇ ಅಸಾಧ್ಯ?
05143011a ಕರ್ಣ ಶೋಭಿಷ್ಯಸೇ ನೂನಂ ಪಂಚಭಿರ್ಭ್ರಾತೃಭಿರ್ವೃತಃ|
05143011c ವೇದೈಃ ಪರಿವೃತೋ ಬ್ರಹ್ಮಾ ಯಥಾ ವೇದಾಂಗಪಂಚಮೈಃ||
ಕರ್ಣ! ವೇದ ಮತ್ತು ವೇದಾಂಗ ಈ ಐದರಿಂದ ಪರಿವೃತನಾದ ಬ್ರಹ್ಮನಂತೆ ನೀನು ಐವರು ಸಹೋದರರಿಂದ ಪರಿವೃತನಾಗಿ ಕಂಗೊಳಿಸುವೆ.
05143012a ಉಪಪನ್ನೋ ಗುಣೈಃ ಶ್ರೇಷ್ಠೋ ಜ್ಯೇಷ್ಠಃ ಶ್ರೇಷ್ಠೇಷು ಬಂಧುಷು|
05143012c ಸೂತಪುತ್ರೇತಿ ಮಾ ಶಬ್ದಃ ಪಾರ್ಥಸ್ತ್ವಮಸಿ ವೀರ್ಯವಾನ್||
ಶ್ರೇಷ್ಠ ಗುಣಗಳಿಂದ ಕೂಡಿದ ನೀನು ನನ್ನ ಜ್ಯೇಷ್ಠ. ಬಂಧುಗಳಲ್ಲಿ ಶ್ರೇಷ್ಠ! ಸೂತಪುತ್ರ ಎನ್ನುವ ಶಬ್ಧವು ನಿನಗೆ ಬೇಡ. ವೀರ್ಯವಾನ್! ಪಾರ್ಥನೆಂದೆನಿಸಿಕೋ!””
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಕರ್ಣಉಪನಿವಾದ ಪರ್ವಣಿ ಕುಂತೀಕರ್ಣಸಮಾಗಮೇ ತ್ರಿಚತ್ವಾರಿಂಶದಧಿಕಶತತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಕರ್ಣಉಪನಿವಾದ ಪರ್ವದಲ್ಲಿ ಕುಂತೀಕರ್ಣಸಮಾಗಮದಲ್ಲಿ ನೂರಾನಲ್ವತ್ಮೂರನೆಯ ಅಧ್ಯಾಯವು.