ಉದ್ಯೋಗ ಪರ್ವ: ಭಗವದ್ಯಾನ ಪರ್ವ
೧೦೭
ಗರುಡನು ಗಾಲವನಿಗೆ ದಕ್ಷಿಣ ದಿಕ್ಕನ್ನು ವರ್ಣಿಸಿದುದು (೧-೨೧).
05107001 ಸುಪರ್ಣ ಉವಾಚ|
05107001a ಇಯಂ ವಿವಸ್ವತಾ ಪೂರ್ವಂ ಶ್ರೌತೇನ ವಿಧಿನಾ ಕಿಲ|
05107001c ಗುರವೇ ದಕ್ಷಿಣಾ ದತ್ತಾ ದಕ್ಷಿಣೇತ್ಯುಚ್ಯತೇಽಥ ದಿಕ್||
ಸುಪರ್ಣನು ಹೇಳಿದನು: “ಪೂರ್ವದಲ್ಲಿ ಶ್ರೌತಿ ವಿವಸ್ವತನು ಇದನ್ನು ಗುರುವಿಗೆ ದಕ್ಷಿಣೆಯನ್ನಾಗಿತ್ತನಲ್ಲವೇ? ಅದರಿಂದಲೇ ಈ ದಿಕ್ಕಿಗೆ ದಕ್ಷಿಣ ಎಂಬ ಹೆಸರು ಬಂದಿತು.
05107002a ಅತ್ರ ಲೋಕತ್ರಯಸ್ಯಾಸ್ಯ ಪಿತೃಪಕ್ಷಃ ಪ್ರತಿಷ್ಠಿತಃ|
05107002c ಅತ್ರೋಷ್ಮಪಾನಾಂ ದೇವಾನಾಂ ನಿವಾಸಃ ಶ್ರೂಯತೇ ದ್ವಿಜ||
ಅಲ್ಲಿ ಮೂರೂ ಲೋಕಗಳ ಪಿತೃಗಳು ನೆಲೆಸಿರುತ್ತಾರೆ. ದ್ವಿಜ! ಧೂಮವನ್ನು ಕುಡಿಯುವ ದೇವತೆಗಳೂ ಅಲ್ಲಿ ನಿವಾಸಿಸುತ್ತಾರೆ ಎಂದು ಕೇಳಿದ್ದೇವೆ.
05107003a ಅತ್ರ ವಿಶ್ವೇ ಸದಾ ದೇವಾಃ ಪಿತೃಭಿಃ ಸಾರ್ಧಮಾಸತೇ|
05107003c ಇಜ್ಯಮಾನಾಃ ಸ್ಮ ಲೋಕೇಷು ಸಂಪ್ರಾಪ್ತಾಸ್ತುಲ್ಯಭಾಗತಾಂ||
ಅಲ್ಲಿ ವಿಶ್ವೇದೇವರೂ ಕೂಡ ಪಿತೃಗಳೊಂದಿಗೆ ವಾಸಿಸುತ್ತಾರೆ. ಲೋಕಗಳಲ್ಲಿಯ ಯಜ್ಞಗಳಲ್ಲಿ ಅವರೂ ಕೂಡ ಹವಿಸ್ಸುಗಳ ಸಮಭಾಗಿಗಳು.
05107004a ಏತದ್ದ್ವಿತೀಯಂ ಧರ್ಮಸ್ಯ ದ್ವಾರಮಾಚಕ್ಷತೇ ದ್ವಿಜ|
05107004c ತ್ರುಟಿಶೋ ಲವಶಶ್ಚಾತ್ರ ಗಣ್ಯತೇ ಕಾಲನಿಶ್ಚಯಃ||
ದ್ವಿಜ! ಇದನ್ನು ಧರ್ಮನ ಎರಡನೆಯ ದ್ವಾರವೆಂದು ಕರೆಯುತ್ತಾರೆ. ಇಲ್ಲಿರುವವರ ಕಾಲವನ್ನು ತ್ರುಟಿಶ ಮತ್ತು ಲವಶಗಳಂತೆ ಲೆಖ್ಕಮಾಡಿ ನಿಶ್ಚಯಿಸುತ್ತಾರೆ.
05107005a ಅತ್ರ ದೇವರ್ಷಯೋ ನಿತ್ಯಂ ಪಿತೃಲೋಕರ್ಷಯಸ್ತಥಾ|
05107005c ತಥಾ ರಾಜರ್ಷಯಃ ಸರ್ವೇ ನಿವಸಂತಿ ಗತವ್ಯಥಾಃ||
ಇಲ್ಲಿ ನಿತ್ಯವೂ ದೇವಋಷಿಗಳು, ಪಿತೃಲೋಕದ ಋಷಿಗಳು ಮತ್ತು ರಾಜರ್ಷಿಗಳು ಎಲ್ಲರೂ ಗತವ್ಯಥರಾಗಿ ವಾಸಿಸುತ್ತಾರೆ.
05107006a ಅತ್ರ ಧರ್ಮಶ್ಚ ಸತ್ಯಂ ಚ ಕರ್ಮ ಚಾತ್ರ ನಿಶಾಮ್ಯತೇ|
05107006c ಗತಿರೇಷಾ ದ್ವಿಜಶ್ರೇಷ್ಠ ಕರ್ಮಣಾತ್ಮಾವಸಾದಿನಃ||
ದ್ವಿಜಶ್ರೇಷ್ಠ! ಅಲ್ಲಿ ದರ್ಮ ಮತ್ತು ಸತ್ಯಗಳಿವೆ. ಅಲ್ಲಿ ಕರ್ಮಗಳು ಫಲವನ್ನೀಯುತ್ತವೆ. ತೀರಿಕೊಂಡವರ ಕರ್ಮಗಳ ದಾರಿಯೇ ಇದು.
05107007a ಏಷಾ ದಿಕ್ಸಾ ದ್ವಿಜಶ್ರೇಷ್ಠ ಯಾಂ ಸರ್ವಃ ಪ್ರತಿಪದ್ಯತೇ|
05107007c ವೃತಾ ತ್ವನವಬೋಧೇನ ಸುಖಂ ತೇನ ನ ಗಮ್ಯತೇ||
ದ್ವಿಜಶ್ರೇಷ್ಠ! ಎಲ್ಲರೂ ದುಸ್ತರರಾಗುವ (ವಿಶ್ರಾಂತಿ ಪಡೆದು ಪುನಃ ಚೇತನಗೊಳ್ಳುವ) ಸ್ಥಳವೆಂದರೆ ಈ ದಿಕ್ಕು. ಕತ್ತಲೆಯಿಂದ ಆವರಿಸಲ್ಪಡುವುದರಿಂದ ಅವರು ಸುಖವನ್ನು ಹೊಂದುವುದಿಲ್ಲ.
05107008a ನೈರೃತಾನಾಂ ಸಹಸ್ರಾಣಿ ಬಹೂನ್ಯತ್ರ ದ್ವಿಜರ್ಷಭ|
05107008c ಸೃಷ್ಟಾನಿ ಪ್ರತಿಕೂಲಾನಿ ದ್ರಷ್ಟವ್ಯಾನ್ಯಕೃತಾತ್ಮಭಿಃ||
ದ್ವಿಜರ್ಷಭ! ಅಲ್ಲಿ ಅಕೃತಾತ್ಮರು ನೋಡಲೆಂದು ಸೃಷ್ಟಿಸಲ್ಪಟ್ಟ ಬಹು ಸಹಸ್ರಾರು ನೈರೃತರು ವಾಸಿಸುತ್ತಾರೆ.
05107009a ಅತ್ರ ಮಂದರಕುಂಜೇಷು ವಿಪ್ರರ್ಷಿಸದನೇಷು ಚ|
05107009c ಗಂಧರ್ವಾ ಗಾಂತಿ ಗಾಥಾ ವೈ ಚಿತ್ತಬುದ್ಧಿಹರಾ ದ್ವಿಜ||
ದ್ವಿಜ! ಅಲ್ಲಿ ಮಂದರದ ಕಣಿವೆಗಳಲ್ಲಿ ವಿಪ್ರರ್ಷಿಸದನಗಳಲ್ಲಿ ಗಂಧರ್ವರು ಚಿತ್ತ-ಬುದ್ಧಿಗಳನ್ನು ಅಪಹರಿಸುವ ಗೀತೆಗಳನ್ನು ಹಾಡುತ್ತಾರೆ.
05107010a ಅತ್ರ ಸಾಮಾನಿ ಗಾಥಾಭಿಃ ಶ್ರುತ್ವಾ ಗೀತಾನಿ ರೈವತಃ|
05107010c ಗತದಾರೋ ಗತಾಮಾತ್ಯೋ ಗತರಾಜ್ಯೋ ವನಂ ಗತಃ||
ಅಲ್ಲಿಯೇ ಸಾಮದ ಹಾಡು-ಗೀತೆಗಳನ್ನು ಕೇಳಿ ರೈವತನು ಪತ್ನಿಯನ್ನು, ಅಮಾತ್ಯರನ್ನು, ಮತ್ತು ರಾಜ್ಯವನ್ನು ತೊರೆದು ವನಕ್ಕೆ ತೆರಳಿದನು.
05107011a ಅತ್ರ ಸಾವರ್ಣಿನಾ ಚೈವ ಯವಕ್ರೀತಾತ್ಮಜೇನ ಚ|
05107011c ಮರ್ಯಾದಾ ಸ್ಥಾಪಿತಾ ಬ್ರಹ್ಮನ್ಯಾಂ ಸೂರ್ಯೋ ನಾತಿವರ್ತತೇ||
ಬ್ರಹ್ಮನ್! ಅಲ್ಲಿ ಸಾವರ್ಣಿ ಮತ್ತು ಯವಕ್ರೀತನ ಮಗನು ಸೂರ್ಯನಿಗೆ ಗಡಿಹಾಕಿ, ಅವನು ಅದನ್ನು ದಾಟದೇ ಹಿಂದಿರುಗುತ್ತಾನೆ.
05107012a ಅತ್ರ ರಾಕ್ಷಸರಾಜೇನ ಪೌಲಸ್ತ್ಯೇನ ಮಹಾತ್ಮನಾ|
05107012c ರಾವಣೇನ ತಪಶ್ಚೀರ್ತ್ವಾ ಸುರೇಭ್ಯೋಽಮರತಾ ವೃತಾ||
ಅಲ್ಲಿ ಮಹಾತ್ಮ, ರಾಕ್ಷಸರಾಜ, ಪೌಲಸ್ತ್ಯ, ರಾವಣನು ತಪಸ್ಸನ್ನು ತಪಿಸಿ ಸುರರಿಂದ ಅಮರತ್ವವನ್ನು ಕೇಳಿದನು.
05107013a ಅತ್ರ ವೃತ್ತೇನ ವೃತ್ರೋಽಪಿ ಶಕ್ರಶತ್ರುತ್ವಮೀಯಿವಾನ್|
05107013c ಅತ್ರ ಸರ್ವಾಸವಃ ಪ್ರಾಪ್ತಾಃ ಪುನರ್ಗಚ್ಚಂತಿ ಪಂಚಧಾ||
ಅಲ್ಲಿ ತನ್ನ ಪಾಪವರ್ತನೆಯಿಂದ ವೃತ್ರನು ಶಕ್ರನೊಂದಿಗೆ ಶತ್ರುತ್ವವನ್ನು ಬೆಳೆಸಿದನು. ಎಲ್ಲ ಜೀವಿಗಳು ಇಲ್ಲಿ ಬಂದು ಪುನಃ ಪಂಚಭೂತಗಳಲ್ಲಿ ಸೇರುತ್ತವೆ.
05107014a ಅತ್ರ ದುಷ್ಕೃತಕರ್ಮಾಣೋ ನರಾಃ ಪಚ್ಯಂತಿ ಗಾಲವ|
05107014c ಅತ್ರ ವೈತರಣೀ ನಾಮ ನದೀ ವಿತರಣೈರ್ವೃತಾ|
05107014e ಅತ್ರ ಗತ್ವಾ ಸುಖಸ್ಯಾಂತಂ ದುಃಖಸ್ಯಾಂತಂ ಪ್ರಪದ್ಯತೇ||
ಗಾಲವ! ಇಲ್ಲಿ ದುಷ್ಕೃತಕರ್ಮಗಳನ್ನು ಮಾಡಿದ ನರರು ಪಚನವಾಗುತ್ತಾರೆ. ಇಲ್ಲಿಯೇ ವಿತರಣಗಳಿಂದ ಕೂಡಿದ ವೈತರಣೀ ಎಂಬ ನದಿಯು ಹರಿಯುತ್ತದೆ. ಇಲ್ಲಿಗೆ ಬಂದು ಜೀವಿಗಳು ಅತ್ಯಂತ ಸುಖವನ್ನೂ ಅತ್ಯಂತ ದುಃಖವನ್ನೂ ಅನುಭವಿಸುತ್ತಾರೆ.
05107015a ಅತ್ರಾವೃತ್ತೋ ದಿನಕರಃ ಕ್ಷರತೇ ಸುರಸಂ ಪಯಃ|
05107015c ಕಾಷ್ಠಾಂ ಚಾಸಾದ್ಯ ಧಾನಿಷ್ಠಾಂ ಹಿಮಮುತ್ಸೃಜತೇ ಪುನಃ||
ಇಲ್ಲಿಗೆ ತಲುಪಿದ ದಿವಾಕರನು ಸುರಸ ನೀರನ್ನು ಸುರಿಸುತ್ತಾನೆ. ಧನಿಷ್ಠಾ ದಿಕ್ಕಿಗೆ ಹೋಗಿ ಪುನಃ ಹಿಮವನ್ನು ಸುರಿಸುತ್ತಾನೆ.
05107016a ಅತ್ರಾಹಂ ಗಾಲವ ಪುರಾ ಕ್ಷುಧಾರ್ತಃ ಪರಿಚಿಂತಯನ್|
05107016c ಲಬ್ಧವಾನ್ಯುಧ್ಯಮಾನೌ ದ್ವೌ ಬೃಹಂತೌ ಗಜಕಚ್ಚಪೌ||
ಗಾಲವ! ಹಿಂದೆ ನಾನು ಹಸಿದು ಚಿಂತೆಯಲ್ಲಿದ್ದಾಗ ಅಲ್ಲಿಯೇ ಯುದ್ಧಮಾಡುತ್ತಿರುವ ಬೃಹದಾಕಾರದ ಗಜ-ಕಚ್ಛಪರೀರ್ವರನ್ನು ಪಡೆದಿದ್ದೆನು.
05107017a ಅತ್ರ ಶಕ್ರಧನುರ್ನಾಮ ಸೂರ್ಯಾಜ್ಜಾತೋ ಮಹಾನೃಷಿಃ|
05107017c ವಿದುರ್ಯಂ ಕಪಿಲಂ ದೇವಂ ಯೇನಾತ್ತಾಃ ಸಗರಾತ್ಮಜಾಃ||
ಅಲ್ಲಿ ಸೂರ್ಯನಿಂದ ಶಕ್ರಧನುವೆಂಬ ಹೆಸರಿನ ಮಹಾನೃಷಿಯು ಹುಟ್ಟಿದನು. ಅವನು ನಂತರ ಕಪಿಲದೇವನೆಂದಾದನು. ಅವನಿಂದಲೇ ಸಗರಾತ್ಮಜರು ನಾಶಗೊಂಡರು.
05107018a ಅತ್ರ ಸಿದ್ಧಾಃ ಶಿವಾ ನಾಮ ಬ್ರಾಹ್ಮಣಾ ವೇದಪಾರಗಾಃ|
05107018c ಅಧೀತ್ಯ ಸಖಿಲಾನ್ವೇದಾನಾಲಭಂತೇ ಯಮಕ್ಷಯಂ||
ಅಲ್ಲಿಯೇ ಶಿವಾ ಎಂಬ ಹೆಸರಿನ ವೇದಪಾರಂಗತರು ಸಿದ್ಧಿಯನ್ನು ಪಡೆದರು. ಅಖಿಲ ವೇದಗಳನ್ನೂ ಗೆದ್ದು ಕೊನೆಯಲ್ಲಿ ಯಮಕ್ಷಯವನ್ನು ಹೊಂದಿದರು.
05107019a ಅತ್ರ ಭೋಗವತೀ ನಾಮ ಪುರೀ ವಾಸುಕಿಪಾಲಿತಾ|
05107019c ತಕ್ಷಕೇಣ ಚ ನಾಗೇನ ತಥೈವೈರಾವತೇನ ಚ||
ಅಲ್ಲಿ ವಾಸುಕಿ, ತಕ್ಷಕ, ನಾಗ ಐರಾವತನಿಂದ ಪಾಲಿತವಾದ ಭೋಗವತೀ ಎಂಬ ಹೆಸರಿನ ಪುರಿಯಿದೆ.
05107020a ಅತ್ರ ನಿರ್ಯಾಣಕಾಲೇಷು ತಮಃ ಸಂಪ್ರಾಪ್ಯತೇ ಮಹತ್|
05107020c ಅಭೇದ್ಯಂ ಭಾಸ್ಕರೇಣಾಪಿ ಸ್ವಯಂ ವಾ ಕೃಷ್ಣವರ್ತ್ಮನಾ||
ನಿರ್ಯಾಣಕಾಲದಲ್ಲಿ ಅಲ್ಲಿ ಸ್ವಯಂ ಭಾಸ್ಕರನಿಂದ ಅಥವಾ ಅಗ್ನಿಯಿಂದ ಭೇದಿಸಲಸಾಧ್ಯವಾದ ಮಹಾ ಕತ್ತಲೆಯು ಸಿಗುತ್ತದೆ.
05107021a ಏಷ ತಸ್ಯಾಪಿ ತೇ ಮಾರ್ಗಃ ಪರಿತಾಪಸ್ಯ ಗಾಲವ|
05107021c ಬ್ರೂಹಿ ಮೇ ಯದಿ ಗಂತವ್ಯಂ ಪ್ರತೀಚೀಂ ಶೃಣು ವಾ ಮಮ||
ಗಾಲವ! ತಪಸ್ಸನ್ನು ತಪಿಸಿರುವ ನೀನು ಕೂಡ ಈ ಮಾರ್ಗದಲ್ಲಿ ಪ್ರಯಾಣಿಸಬೇಕಾಗುತ್ತದೆ. ಈ ದಿಕ್ಕಿಗೆ ಹೋಗಬೇಕಾ ಹೇಳು. ಇಲ್ಲದಿದ್ದರೆ ಪಶ್ಚಿಮದ ಕುರಿತು ನನ್ನಿಂದ ಕೇಳು.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಸಪ್ತಾಧಿಕಶತತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಏಳನೆಯ ಅಧ್ಯಾಯವು.