ಉದ್ಯೋಗ ಪರ್ವ: ಭಗವದ್ಯಾನ ಪರ್ವ
೧೦೪
ಗಾಲವ ಚರಿತೆ
ಸುಹೃದಯರ ಮಾತನ್ನು ಕೇಳಬೇಕು, ಹಠ ಮಾಡಬಾರದೆಂದು ಉಪದೇಶಿಸುತ್ತಾ ನಾರದನು ದುರ್ಯೋಧನನಿಗೆ ಹಠ ಹಿಡಿದು ಪರಾಜಿತನಾದ ಗಾಲವನ ಚರಿತೆಯನ್ನು ಹೇಳಲು ಪ್ರಾರಂಭಿಸಿದುದು (೧-೭). ವಿಶ್ವಾಮಿತ್ರನನ್ನು ಪರೀಕ್ಷಿಸಲು ವಸಿಷ್ಠನ ವೇಷತಾಳಿ ಬಂದಿದ್ದ ಧರ್ಮನು ತಡವಾಗಿ ಬಿಸಿ ಬಿಸಿ ಅನ್ನವನ್ನು ಹಿಡಿದುಕೊಂಡು ಬಂದ ವಿಶ್ವಾಮಿತ್ರನಿಗೆ “ಊಟಮಾಡಿಯಾಯಿತು! ನಿಲ್ಲು!” ಎಂದು ಹೇಳಿ ಹೋಗಲು, ನೂರು ವರ್ಷಗಳು ಅನ್ನವನ್ನು ಎರಡೂ ಕೈಗಳಿಂದ ಮೇಲೆತ್ತಿ ಹಿಡಿದು ಅಲುಗಾಡದೇ ನಿಂತಿದ್ದ ವಿಶ್ವಾಮಿತ್ರನನ್ನು ಅವನ ಶಿಷ್ಯ ಗಾಲವನು ಶುಶ್ರೂಷೆಗೈದುದು (೮-೧೪). ವಿಶ್ವಾಮಿತ್ರನು ಸಂತೋಷದಿಂದ ಗಾಲವನನ್ನು ಬೀಳ್ಕೊಡುವಾಗ ಗಾಲವನು ನಿನಗೆ ಗುರುದಕ್ಷಿಣೆಯಾಗಿ ಏನನ್ನು ಕೊಡಲೆಂದು, ಏನೂ ಬೇಡವೆಂದರೂ ಕೇಳದೇ, ಹಠಮಾಡಿ ಗುರುವಲ್ಲಿ ಕೇಳಲು ಬೇಸತ್ತ ವಿಶ್ವಾಮಿತ್ರನು “ಒಂದೇ ಕಿವಿಯು ಕಪ್ಪಾಗಿರುವ ಎಂಟುನೂರು ಚಂದ್ರನಂತೆ ಬಿಳಿಯಾಗಿರುವ ಕುದುರೆಗಳನ್ನು ನನಗೆ ತಂದು ಕೊಡು” ಎನ್ನುವುದು (೧೫-೨೬).
05104001 ಜನಮೇಜಯ ಉವಾಚ|
05104001a ಅನರ್ಥೇ ಜಾತನಿರ್ಬಂಧಂ ಪರಾರ್ಥೇ ಲೋಭಮೋಹಿತಂ|
05104001c ಅನಾರ್ಯಕೇಷ್ವಭಿರತಂ ಮರಣೇ ಕೃತನಿಶ್ಚಯಂ||
05104002a ಜ್ಞಾತೀನಾಂ ದುಃಖಕರ್ತಾರಂ ಬಂಧೂನಾಂ ಶೋಕವರ್ಧನಂ|
05104002c ಸುಹೃದಾಂ ಕ್ಲೇಶದಾತಾರಂ ದ್ವಿಷತಾಂ ಹರ್ಷವರ್ಧನಂ||
05104003a ಕಥಂ ನೈನಂ ವಿಮಾರ್ಗಸ್ಥಂ ವಾರಯಂತೀಹ ಬಾಂಧವಾಃ|
05104003c ಸೌಹೃದಾದ್ವಾ ಸುಹೃತ್ಸ್ನಿಗ್ಧೋ ಭಗವಾನ್ವಾ ಪಿತಾಮಹಃ||
ಜನಮೇಜಯನು ಹೇಳಿದನು: “ಹುಟ್ಟಿನಿಂದಲೇ ಅನರ್ಥವನ್ನು ಕಟ್ಟಿಕೊಂಡುಬಂದಿರುವ, ಪರರ ಸಂಪತ್ತಿನ ಲೋಭದಿಂದ ಮೋಹಿತನಾಗಿರುವ, ಅನಾರ್ಯ ಕೆಲಸಗಳಲ್ಲಿಯೇ ನಿರತನಾಗಿರುವ, ಮರಣದ ಕುರಿತು ನಿಶ್ಚಯವನ್ನೇ ಮಾಡಿರುವ, ಬಾಂಧವರಿಗೆ ದುಃಖವನ್ನುಂಟುಮಾಡುವ, ಬಂಧುಗಳ ಶೋಕವನ್ನು ಹೆಚ್ಚಿಸುವ, ಸುಹೃದಯರಿಗೆ ಕ್ಲೇಶವನ್ನು ನೀಡುವ, ದ್ವೇಷಿಗಳ ಹರ್ಷವನ್ನು ಹೆಚ್ಚಿಸುವ, ಕೆಟ್ಟ ದಾರಿಯಲ್ಲಿ ಹೋಗಲು ನಿಂತಿರುವ ಅವನನ್ನು ಯಾರೂ - ಬಾಂಧವರು, ಸ್ನೇಹಿತರು, ಅಥವಾ ಒಳ್ಳೆಯ ಭಾವನೆಯಿರುವ ಭಗವಾನ್ ಪಿತಾಮಹ – ಏಕೆ ತಡೆಯಲಿಲ್ಲ?”
05104004 ವೈಶಂಪಾಯನ ಉವಾಚ|
05104004a ಉಕ್ತಂ ಭಗವತಾ ವಾಕ್ಯಮುಕ್ತಂ ಭೀಷ್ಮೇಣ ಯತ್ಕ್ಷಮಂ|
05104004c ಉಕ್ತಂ ಬಹುವಿಧಂ ಚೈವ ನಾರದೇನಾಪಿ ತಚ್ಚೃಣು||
ವೈಶಂಪಾಯನನು ಹೇಳಿದನು: “ಹೌದು! ಭಗವಾನ್ ಭೀಷ್ಮನೂ ಹಿತ ಮಾತುಗಳನ್ನು ಹೇಳಿದನು. ನಾರದನೂ ಕೂಡ ಬಹುವಿಧದಲ್ಲಿ ಹೇಳಿದನು. ಅದನ್ನು ಕೇಳು.
05104005 ನಾರದ ಉವಾಚ|
05104005a ದುರ್ಲಭೋ ವೈ ಸುಹೃಚ್ಚ್ರೋತಾ ದುರ್ಲಭಶ್ಚ ಹಿತಃ ಸುಹೃತ್|
05104005c ತಿಷ್ಠತೇ ಹಿ ಸುಹೃದ್ಯತ್ರ ನ ಬಂಧುಸ್ತತ್ರ ತಿಷ್ಠತಿ||
ನಾರದನು ಹೇಳಿದನು: “ಸುಹೃದಯರನ್ನು ಕೇಳುವವರು ದುರ್ಲಭ. ಸುಹೃದಯರೇ ದುರ್ಲಭ. ಎಲ್ಲಿ ಬಂಧುಗಳು ಸಿಗುವುದಿಲ್ಲವೋ ಅಲ್ಲಿ ಸುಹೃದಯರು ದೊರಕುತ್ತಾರೆ.
05104006a ಶ್ರೋತವ್ಯಮಪಿ ಪಶ್ಯಾಮಿ ಸುಹೃದಾಂ ಕುರುನಂದನ|
05104006c ನ ಕರ್ತವ್ಯಶ್ಚ ನಿರ್ಬಂಧೋ ನಿರ್ಬಂಧೋ ಹಿ ಸುದಾರುಣಃ||
ಕುರುನಂದನ! ಸುಹೃದಯರ ಮಾತನ್ನು ಕೇಳಬೇಕೆಂದು ನನಗನ್ನಿಸುತ್ತದೆ. ನಿರ್ಬಂಧಗಳು (ಹಠ) ಮಾಡುವಂಥವುಗಳಲ್ಲ. ನಿರ್ಬಂಧಗಳು ದಾರುಣವಾದವುಗಳು.
05104007a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಂ|
05104007c ಯಥಾ ನಿರ್ಬಂಧತಃ ಪ್ರಾಪ್ತೋ ಗಾಲವೇನ ಪರಾಜಯಃ||
ಇದನ್ನು ಉದಾಹರಿಸಿ ಒಂದು ಪುರಾತನ ಇತಿಹಾಸವಿದೆ. ಅದರಲ್ಲಿ ಹಠ ಹಿಡಿದ ಗಾಲವನು ಪರಾಜಯವನ್ನು ಹೊಂದಿದನು.
05104008a ವಿಶ್ವಾಮಿತ್ರಂ ತಪಸ್ಯಂತಂ ಧರ್ಮೋ ಜಿಜ್ಞಾಸಯಾ ಪುರಾ|
05104008c ಅಭ್ಯಗಚ್ಚತ್ಸ್ವಯಂ ಭೂತ್ವಾ ವಸಿಷ್ಠೋ ಭಗವಾನೃಷಿಃ||
ಹಿಂದೆ ತಪಸ್ಸಿನಲ್ಲಿದ್ದ ವಿಶ್ವಾಮಿತ್ರನನ್ನು ಪರೀಕ್ಷಿಸಲೋಸುಗ ಸ್ವಯಂ ಧರ್ಮನು ಭಗವಾನ್ ಋಷಿ ವಸಿಷ್ಠನಾಗಿ ಬಂದನು.
05104009a ಸಪ್ತರ್ಷೀಣಾಮನ್ಯತಮಂ ವೇಷಮಾಸ್ಥಾಯ ಭಾರತ|
05104009c ಬುಭುಕ್ಷುಃ ಕ್ಷುಧಿತೋ ರಾಜನ್ನಾಶ್ರಮಂ ಕೌಶಿಕಸ್ಯ ಹ||
ರಾಜನ್! ಭಾರತ! ಸಪ್ತರ್ಷಿಗಳಲ್ಲೊಬ್ಬನ ವೇಷವನ್ನು ತಾಳಿ ಹಸಿದು ಊಟಮಾಡಲು ಕೌಶಿಕನ ಆಶ್ರಮಕ್ಕೆ ಬಂದನು.
05104010a ವಿಶ್ವಾಮಿತ್ರೋಽಥ ಸಂಭ್ರಾಂತಃ ಶ್ರಪಯಾಮಾಸ ವೈ ಚರುಂ|
05104010c ಪರಮಾನ್ನಸ್ಯ ಯತ್ನೇನ ನ ಚ ಸ ಪ್ರತ್ಯಪಾಲಯತ್||
ಆಗ ವಿಶ್ವಾಮಿತ್ರನು ಸಂಭ್ರಾಂತನಾಗಿ ಚರುವನ್ನು ತಯಾರಿಸಲು ಪ್ರಾರಂಭಿಸಿದನು. ಉತ್ತಮ ಅನ್ನವನ್ನು ತಯಾರಿಸುವ ಪ್ರಯತ್ನದಲ್ಲಿ ಅವನನ್ನು ನೋಡಿಕೊಳ್ಳಲಿಕ್ಕಾಗಲಿಲ್ಲ.
05104011a ಅನ್ನಂ ತೇನ ಯದಾ ಭುಕ್ತಮನ್ಯೈರ್ದತ್ತಂ ತಪಸ್ವಿಭಿಃ|
05104011c ಅಥ ಗೃಹ್ಯಾನ್ನಮತ್ಯುಷ್ಣಂ ವಿಶ್ವಾಮಿತ್ರೋಽಭ್ಯುಪಾಗಮತ್||
ಅನ್ಯ ತಪಸ್ವಿಗಳು ನೀಡಿದ ಅನ್ನವನ್ನು ತಿಂದ ನಂತರವೇ ವಿಶ್ವಾಮಿತ್ರನು ಬಿಸಿ ಬಿಸಿಯಾದ ಅನ್ನವನ್ನು ಹಿಡಿದುಕೊಂಡು ಬಂದನು.
05104012a ಭುಕ್ತಂ ಮೇ ತಿಷ್ಠ ತಾವತ್ತ್ವಮಿತ್ಯುಕ್ತ್ವಾ ಭಗವಾನ್ಯಯೌ|
05104012c ವಿಶ್ವಾಮಿತ್ರಸ್ತತೋ ರಾಜನ್ ಸ್ಥಿತ ಏವ ಮಹಾದ್ಯುತಿಃ||
“ಊಟಮಾಡಿಯಾಯಿತು! ನಿಲ್ಲು!” ಎಂದು ಹೇಳಿ ಭಗವಾನನು ಹೊರಟುಹೋದನು. ರಾಜನ್! ಮಹಾದ್ಯುತಿ ವಿಶ್ವಾಮಿತ್ರನು ನಿಂತುಕೊಂಡೇ ಇದ್ದನು.
05104013a ಭಕ್ತಂ ಪ್ರಗೃಹ್ಯ ಮೂರ್ಧ್ನಾ ತದ್ಬಾಹುಭ್ಯಾಂ ಪಾರ್ಶ್ವತೋಽಗಮತ್|
05104013c ಸ್ಥಿತಃ ಸ್ಥಾಣುರಿವಾಭ್ಯಾಶೇ ನಿಶ್ಚೇಷ್ಟೋ ಮಾರುತಾಶನಃ||
ಪಾತ್ರೆಯನ್ನು ನೆತ್ತಿಯಮೇಲಿರಿಸಿ, ಎರಡೂ ಕೈಗಳಿಂದ ಹಿಡಿದುಕೊಂಡು ಅಲ್ಲಿಯೇ ಸ್ಥಾಣುವಿನಂತೆ ಅಲುಗಾಡದೇ ಗಾಳಿಯನ್ನು ಸೇವಿಸುತ್ತಾ ನಿಂತುಕೊಂಡನು.
05104014a ತಸ್ಯ ಶುಶ್ರೂಷಣೇ ಯತ್ನಮಕರೋದ್ಗಾಲವೋ ಮುನಿಃ|
05104014c ಗೌರವಾದ್ಬಹುಮಾನಾಚ್ಚ ಹಾರ್ದೇನ ಪ್ರಿಯಕಾಮ್ಯಯಾ||
ಮುನಿ ಗಾಲವ[1]ನು ಗೌರವದಿಂದ, ಪ್ರಿಯವಾದುದನ್ನು ಮಾಡಲೋಸುಗ, ಸೌಹಾರ್ದದಿಂದ, ಮಾನವನ್ನಿತ್ತು ಅವನ ಶುಶ್ರೂಷಣೆಯ ಪ್ರಯತ್ನದಲ್ಲಿ ತೊಡಗಿದನು.
05104015a ಅಥ ವರ್ಷಶತೇ ಪೂರ್ಣೇ ಧರ್ಮಃ ಪುನರುಪಾಗಮತ್|
05104015c ವಾಸಿಷ್ಠಂ ವೇಷಮಾಸ್ಥಾಯ ಕೌಶಿಕಂ ಭೋಜನೇಪ್ಸಯಾ||
ನೂರು ವರ್ಷಗಳು ಪೂರ್ಣವಾದ ನಂತರ ಧರ್ಮನು ವಸಿಷ್ಠನ ವೇಶವನ್ನು ತಳೆದು ಊಟವನ್ನು ಬಯಸಿ ಕೌಶಿಕನಲ್ಲಿಗೆ ಪುನಃ ಬಂದನು.
05104016a ಸ ದೃಷ್ಟ್ವಾ ಶಿರಸಾ ಭಕ್ತಂ ಧ್ರಿಯಮಾಣಂ ಮಹರ್ಷಿಣಾ|
05104016c ತಿಷ್ಠತಾ ವಾಯುಭಕ್ಷೇಣ ವಿಶ್ವಾಮಿತ್ರೇಣ ಧೀಮತಾ||
ತಲೆಯ ಮೇಲೆ ಪಾತ್ರೆಯನ್ನು ಹೊತ್ತು ವಾಯುವನ್ನೇ ಸೇವಿಸುತ್ತಾ ನಿಂತಿರುವ ಧೀಮತ ಮಹರ್ಷಿ ವಿಶ್ವಾಮಿತ್ರನನ್ನು ಅವನು ನೋಡಿದನು.
05104017a ಪ್ರತಿಗೃಹ್ಯ ತತೋ ಧರ್ಮಸ್ತಥೈವೋಷ್ಣಂ ತಥಾ ನವಂ|
05104017c ಭುಕ್ತ್ವಾ ಪ್ರೀತೋಽಸ್ಮಿ ವಿಪ್ರರ್ಷೇ ತಮುಕ್ತ್ವಾ ಸ ಮುನಿರ್ಗತಃ||
ಆಗ ಆ ಮುನಿ ಧರ್ಮನು ಆಗತಾನೇ ತಯಾರಿಸಿದ ಹಾಗೆ ಬಿಸಿಬಿಸಿಯಾಗಿರುವ ಆ ಅನ್ನವನ್ನು ಸ್ವೀಕರಿಸಿ, ಉಂಡು, “ವಿಪ್ರರ್ಷೇ! ನಿನ್ನಿಂದ ಪ್ರೀತನಾಗಿದ್ದೇನೆ!” ಎಂದು ಹೇಳಿ ಹೊರಟುಹೋದನು.
05104018a ಕ್ಷತ್ರಭಾವಾದಪಗತೋ ಬ್ರಾಹ್ಮಣತ್ವಮುಪಾಗತಃ|
05104018c ಧರ್ಮಸ್ಯ ವಚನಾತ್ಪ್ರೀತೋ ವಿಶ್ವಾಮಿತ್ರಸ್ತದಾಭವತ್||
ಧರ್ಮನ ವಚನದಂತೆ ಆಗ ವಿಶ್ವಾಮಿತ್ರನು ಕ್ಷತ್ರಭಾವವನ್ನು ಕಳೆದುಕೊಂಡು ಬ್ರಾಹ್ಮಣತ್ವವನ್ನು ಪಡೆದು ಸಂತೋಷಗೊಂಡನು.
05104019a ವಿಶ್ವಾಮಿತ್ರಸ್ತು ಶಿಷ್ಯಸ್ಯ ಗಾಲವಸ್ಯ ತಪಸ್ವಿನಃ|
05104019c ಶುಶ್ರೂಷಯಾ ಚ ಭಕ್ತ್ಯಾ ಚ ಪ್ರೀತಿಮಾನಿತ್ಯುವಾಚ ತಂ|
05104019e ಅನುಜ್ಞಾತೋ ಮಯಾ ವತ್ಸ ಯಥೇಷ್ಟಂ ಗಚ್ಚ ಗಾಲವ||
ತಪಸ್ವಿ ವಿಶ್ವಾಮಿತ್ರನಾದರೋ ಶಿಷ್ಯ ಗಾಲವನ ಶುಶ್ರೂಷೆ, ಭಕ್ತಿ, ಪ್ರೀತಿಯನ್ನು ಮನ್ನಿಸಿ ಅವನಿಗೆ ಹೇಳಿದನು: “ವತ್ಸ! ಗಾಲವ! ನನ್ನಿಂದ ಅಪ್ಪಣೆಯಿದೆ. ನಿನಗಿಷ್ಟಬಂದಂತೆ ಹೋಗು!”
05104020a ಇತ್ಯುಕ್ತಃ ಪ್ರತ್ಯುವಾಚೇದಂ ಗಾಲವೋ ಮುನಿಸತ್ತಮಂ|
05104020c ಪ್ರೀತೋ ಮಧುರಯಾ ವಾಚಾ ವಿಶ್ವಾಮಿತ್ರಂ ಮಹಾದ್ಯುತಿಂ||
ಹೀಗೆ ಹೇಳಲು ಪ್ರೀತನಾಗಿ ಗಾಲವನು ಮಹಾದ್ಯುತಿ, ಮುನಿಸತ್ತಮ, ವಿಶ್ವಾಮಿತ್ರನಿಗೆ ಈ ಮಧುರ ಮಾತನ್ನಾಡಿದನು.
05104021a ದಕ್ಷಿಣಾಂ ಕಾಂ ಪ್ರಯಚ್ಚಾಮಿ ಭವತೇ ಗುರುಕರ್ಮಣಿ|
05104021c ದಕ್ಷಿಣಾಭಿರುಪೇತಂ ಹಿ ಕರ್ಮ ಸಿಧ್ಯತಿ ಮಾನವಂ||
“ಗುರುವಿನ ಕಾರ್ಯಮಾಡಿದ ನಿಮಗೆ ದಕ್ಷಿಣೆಯನ್ನಾಗಿ ಏನನ್ನು ಕೊಡಲಿ? ದಕ್ಷಿಣೆಯನ್ನಿತ್ತರೇ ಮಾನವನ ಕರ್ಮವು ಸಿದ್ಧಿಯಾಗುತ್ತದೆ.
05104022a ದಕ್ಷಿಣಾನಾಂ ಹಿ ಸೃಷ್ಟಾನಾಮಪವರ್ಗೇಣ ಭುಜ್ಯತೇ|
05104022c ಸ್ವರ್ಗೇ ಕ್ರತುಫಲಂ ಸದ್ಭಿರ್ದಕ್ಷಿಣಾ ಶಾಂತಿರುಚ್ಯತೇ|
05104022e ಕಿಮಾಹರಾಮಿ ಗುರ್ವರ್ಥಂ ಬ್ರವೀತು ಭಗವಾನಿತಿ||
ದಕ್ಷಿಣೆಗಳಿಂದಲೇ ಸೃಷ್ಟಿಯಾದವರು ಅಪವರ್ಗದಲ್ಲಿ ಭೋಗಿಸುತ್ತಾರೆ. ಸ್ವರ್ಗದಲ್ಲಿ ಕ್ರತುಗಳ ಫಲ, ಸದ್ಭಾವಿಗಳ ಶಾಂತಿ ದಕ್ಷಿಣೆಯೆಂದು ಹೇಳುತ್ತಾರೆ. ಗುರು ದಕ್ಷಿಣೆಯಾಗಿ ನಿಮಗೆ ಏನನ್ನು ತರಲೆನ್ನುವುದನ್ನು ನೀವು ಹೇಳಬೇಕು.”
05104023a ಜಾನಮಾನಸ್ತು ಭಗವಾನ್ಜಿತಃ ಶುಶ್ರೂಷಣೇನ ಚ|
05104023c ವಿಶ್ವಾಮಿತ್ರಸ್ತಮಸಕೃದ್ಗಚ್ಚ ಗಚ್ಚೇತ್ಯಚೋದಯತ್||
ಭಗವಾನ್ ವಿಶ್ವಾಮಿತ್ರನು ತನ್ನ ಶುಶ್ರೂಷಣೆಯಿಂದಲೇ ಎಲ್ಲವನ್ನು ಗಳಿಸಿದ್ದಾನೆ ಎಂದು ತಿಳಿದು ಪುನಃ ಪುನಃ “ಹೋಗು! ಹೋಗು!” ಎಂದು ಪ್ರಚೋದಿಸಿದನು.
05104024a ಅಸಕೃದ್ಗಚ್ಚ ಗಚ್ಚೇತಿ ವಿಶ್ವಾಮಿತ್ರೇಣ ಭಾಷಿತಃ|
05104024c ಕಿಂ ದದಾನೀತಿ ಬಹುಶೋ ಗಾಲವಃ ಪ್ರತ್ಯಭಾಷತ||
“ಈಗಾಗಲೇ ಮಾಡಿದ್ದೀಯೆ. ಹೋಗು ಹೋಗು!” ಎಂದು ವಿಶ್ವಾಮಿತ್ರನು ಹೇಳಲು ಗಾಲವನು “ಏನನ್ನು ಕೊಡಲಿ?” ಎಂದು ಬಹಳ ಬಾರಿ ಕೇಳಿದನು.
05104025a ನಿರ್ಬಂಧತಸ್ತು ಬಹುಶೋ ಗಾಲವಸ್ಯ ತಪಸ್ವಿನಃ|
05104025c ಕಿಂ ಚಿದಾಗತಸಂರಂಭೋ ವಿಶ್ವಾಮಿತ್ರೋಽಬ್ರವೀದಿದಂ||
ತಪಸ್ವಿ ಗಾಲವನು ಹೀಗೆ ಬಹುಬಾರಿ ಹಠವನ್ನು ಮಾಡಲು ಯಾವುದೋ ಯೋಚನೆಯಲ್ಲಿ ಮಗ್ನನಾಗಿದ್ದ ವಿಶ್ವಾಮಿತ್ರನು ಇದನ್ನು ಹೇಳಿದನು:
05104026a ಏಕತಃಶ್ಯಾಮಕರ್ಣಾನಾಂ ಶತಾನ್ಯಷ್ಟೌ ದದಸ್ವ ಮೇ|
05104026c ಹಯಾನಾಂ ಚಂದ್ರಶುಭ್ರಾಣಾಂ ಗಚ್ಚ ಗಾಲವ ಮಾಚಿರಂ||
“ಗಾಲವ! ಹೋಗು! ಒಂದೇ ಕಿವಿಯು ಕಪ್ಪಾಗಿರುವ ಎಂಟುನೂರು ಚಂದ್ರನಂತೆ ಬಿಳಿಯಾಗಿರುವ ಕುದುರೆಗಳನ್ನು ನನಗೆ ತಂದು ಕೊಡು! ತಡಮಾಡಬೇಡ!””
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಚತುರಧಿಕಶತತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾನಾಲ್ಕನೆಯ ಅಧ್ಯಾಯವು.
[1] ವಿಶ್ವಾಮಿತ್ರನ ಮಗ. ವಿಶ್ವಾಮಿತ್ರನ ಇತರ ಮಕ್ಕಳ ಕುರಿತು ಅನುಶಾಸನ ಪರ್ವದ ನಾಲ್ಕನೇ ಅಧ್ಯಾಯದಲ್ಲಿ ಬರುತ್ತದೆ.