ಸ್ವರ್ಗಾರೋಹಣ ಪರ್ವ
೨
ದೇವದೂತ ವಿಸರ್ಜನ
ಕರ್ಣ, ತಮ್ಮಂದಿರು ಮತ್ತು ದ್ರೌಪದಿಯು ಇರುವಲ್ಲಿಗೆ ತಾನು ಹೋಗಲು ಬಯಸುತ್ತೇನೆಂದು ಯುಧಿಷ್ಠಿರನು ಹೇಳಿದುದು (೧-೧೩). ದೇವದೂತನು ಯುಧಿಷ್ಠಿರನನ್ನು ನರಕಕ್ಕೆ ಕರೆದುಕೊಂಡು ಹೋದುದು (೧೪-೨೯). ಅಲ್ಲಿಂದ ಹಿಂದಿರುಗಲು ಹೊರಟ ಯುಧಿಷ್ಠಿರನು ಕರ್ಣನೇ ಮೊದಲಾದ ತನ್ನ ಸಹೋದರರ ಮತ್ತು ಸುಹೃದಯರ ಆರ್ತ ಕೂಗುಗಳನ್ನು ಕೇಳಿದುದು (೩೦-೪೧). ವಿಸ್ಮಿತನಾಗಿ ತಾನು ನರಕದಲ್ಲಿ ತನ್ನ ಸಹೋದರ-ಸುಹೃದರೊಂದಿಗೇ ಇರುತ್ತೇನೆಂದು ಯುಧಿಷ್ಠಿರನು ದೇವದೂತನನ್ನು ಹಿಂದೆ ಕಳುಹಿಸಿದುದು (೪೨-೫೪).
18002001a ನೇಹ ಪಶ್ಯಾಮಿ ವಿಬುಧಾ ರಾಧೇಯಮಮಿತೌಜಸಮ್|
18002001c ಭ್ರಾತರೌ ಚ ಮಹಾತ್ಮಾನೌ ಯುಧಾಮನ್ಯೂತ್ತಮೌಜಸೌ||
ಯುಧಿಷ್ಠಿರನು ಹೇಳಿದನು: “ವಿಬುಧರೇ! ನಾನು ಇಲ್ಲಿ ಅಮಿತೌಜಸ ರಾಧೇಯ ಮತ್ತು ಮಹಾತ್ಮ ಯುಧಾಮನ್ಯು-ಉತ್ತಮೌಜಸ ಸಹೋದರರನ್ನೂ ಕಾಣುತ್ತಿಲ್ಲ!
18002002a ಜುಹುವುರ್ಯೇ ಶರೀರಾಣಿ ರಣವಹ್ನೌ ಮಹಾರಥಾಃ|
18002002c ರಾಜಾನೋ ರಾಜಪುತ್ರಾಶ್ಚ ಯೇ ಮದರ್ಥೇ ಹತಾ ರಣೇ||
18002003a ಕ್ವ ತೇ ಮಹಾರಥಾಃ ಸರ್ವೇ ಶಾರ್ದೂಲಸಮವಿಕ್ರಮಾಃ|
18002003c ತೈರಪ್ಯಯಂ ಜಿತೋ ಲೋಕಃ ಕಚ್ಚಿತ್ಪುರುಷಸತ್ತಮೈಃ||
ನನಗೋಸ್ಕರವಾಗಿ ರಣವೆಂಬ ಅಗ್ನಿಯಲ್ಲಿ ತಮ್ಮ ಶರೀರಗಳನ್ನು ಆಹುತಿಯನ್ನಾಗಿತ್ತು ರಣದಲ್ಲಿ ಹತರಾದ, ವಿಕ್ರಮದಲ್ಲಿ ಶಾರ್ದೂಲಸಮರಾಗಿದ್ದ ಆ ಎಲ್ಲ ಮಹಾರಥ ರಾಜರು ಮತ್ತು ರಾಜಪುತ್ರರು ಎಲ್ಲಿದ್ದಾರೆ? ಆ ಪುರುಷಸತ್ತಮರೂ ಈ ಲೋಕವನ್ನು ಗೆದ್ದಿರಬೇಕಲ್ಲವೇ?
18002004a ಯದಿ ಲೋಕಾನಿಮಾನ್ಪ್ರಾಪ್ತಾಸ್ತೇ ಚ ಸರ್ವೇ ಮಹಾರಥಾಃ|
18002004c ಸ್ಥಿತಂ ವಿತ್ತ ಹಿ ಮಾಂ ದೇವಾಃ ಸಹಿತಂ ತೈರ್ಮಹಾತ್ಮಭಿಃ||
ದೇವತೆಗಳೇ! ಒಂದುವೇಳೆ ಆ ಎಲ್ಲ ಮಹಾರಥರೂ ಈ ಲೋಕವನ್ನೇ ಪಡೆದಿದ್ದಾರೆ ಎಂದರೆ ಆ ಮಹಾತ್ಮರೊಂದಿಗೆ ನಾನೂ ಕೂಡ ಇಲ್ಲಿಯೇ ಇರುತ್ತೇನೆಂದು ತಿಳಿಯಿರಿ.
18002005a ಕಚ್ಚಿನ್ನ ತೈರವಾಪ್ತೋಽಯಂ ನೃಪೈರ್ಲೋಕೋಽಕ್ಷಯಃ ಶುಭಃ|
18002005c ನ ತೈರಹಂ ವಿನಾ ವತ್ಸ್ಯೇ ಜ್ಞಾತಿಭಿರ್ಭ್ರಾತೃಭಿಸ್ತಥಾ||
ಆದರೆ ಆ ನೃಪರು ಈ ಅಕ್ಷಯ ಶುಭ ಲೋಕವನ್ನು ಪಡೆಯಲಿಲ್ಲವೆಂದಾದರೆ ನನ್ನ ಬಂಧು-ಬಾಂಧವರಿಲ್ಲದ ಈ ಲೋಕದಲ್ಲಿ ನಾನು ವಾಸಿಸುವುದಿಲ್ಲ.
18002006a ಮಾತುರ್ಹಿ ವಚನಂ ಶ್ರುತ್ವಾ ತದಾ ಸಲಿಲಕರ್ಮಣಿ|
18002006c ಕರ್ಣಸ್ಯ ಕ್ರಿಯತಾಂ ತೋಯಮಿತಿ ತಪ್ಯಾಮಿ ತೇನ ವೈ||
ತರ್ಪಣವನ್ನು ಕೊಡುವ ಸಮಯದಲ್ಲಿ “ಕರ್ಣನಿಗೂ ತರ್ಪಣವನ್ನು ಕೊಡು!” ಎಂಬ ನನ್ನ ತಾಯಿಯ ಮಾತನ್ನು ಕೇಳಿದಾಗಲಿಂದ ನಾನು ಪರಿತಪಿಸುತ್ತಿದ್ದೇನೆ.
18002007a ಇದಂ ಚ ಪರಿತಪ್ಯಾಮಿ ಪುನಃ ಪುನರಹಂ ಸುರಾಃ|
18002007c ಯನ್ಮಾತುಃ ಸದೃಶೌ ಪಾದೌ ತಸ್ಯಾಹಮಮಿತೌಜಸಃ||
18002008a ದೃಷ್ಟ್ವೈವ ತಂ ನಾನುಗತಃ ಕರ್ಣಂ ಪರಬಲಾರ್ದನಮ್|
18002008c ನ ಹ್ಯಸ್ಮಾನ್ಕರ್ಣಸಹಿತಾನ್ಜಯೇಚ್ಚಕ್ರೋಽಪಿ ಸಂಯುಗೇ||
ಸುರರೇ! ಆ ಅಮಿತೌಜಸನ ಪಾದಗಳು ಮಾತೆಯ ಪಾದಗಳಂತಿದ್ದುದನ್ನು ನೋಡಿಯೂ ಕೂಡ ನಾನು ಆ ಪರಬಲಾರ್ದನ ಕರ್ಣನನ್ನು ಅನುಸರಿಸಲಿಲ್ಲ ಎಂದು ಪುನಃ ಪುನಃ ಪರಿತಪಿಸುತ್ತಿದ್ದೇನೆ. ಕರ್ಣನು ನಮ್ಮ ಜೊತೆಗಿದ್ದಿದ್ದರೆ ಯುದ್ಧದಲ್ಲಿ ಶಕ್ರನೂ ಕೂಡ ನಮ್ಮನ್ನು ಜಯಿಸಲಾಗುತ್ತಿರಲಿಲ್ಲ!
18002009a ತಮಹಂ ಯತ್ರತತ್ರಸ್ಥಂ ದ್ರಷ್ಟುಮಿಚ್ಚಾಮಿ ಸೂರ್ಯಜಮ್|
18002009c ಅವಿಜ್ಞಾತೋ ಮಯಾ ಯೋಽಸೌ ಘಾತಿತಃ ಸವ್ಯಸಾಚಿನಾ||
ಯಾರೆಂದು ತಿಳಿಯದೇ ನಾನು ಸವ್ಯಸಾಚಿಯಿಂದ ಕೊಲ್ಲಿಸಿದ ಆ ಸೂರ್ಯಜನು ಎಲ್ಲಿಯೇ ಇರಲಿ ಅವನನ್ನು ನೋಡಲು ಬಯಸುತ್ತೇನೆ.
18002010a ಭೀಮಂ ಚ ಭೀಮವಿಕ್ರಾಂತಂ ಪ್ರಾಣೇಭ್ಯೋಽಪಿ ಪ್ರಿಯಂ ಮಮ|
18002010c ಅರ್ಜುನಂ ಚೇಂದ್ರಸಂಕಾಶಂ ಯಮೌ ತೌ ಚ ಯಮೋಪಮೌ||
18002011a ದ್ರಷ್ಟುಮಿಚ್ಚಾಮಿ ತಾಂ ಚಾಹಂ ಪಾಂಚಾಲೀಂ ಧರ್ಮಚಾರಿಣೀಮ್|
18002011c ನ ಚೇಹ ಸ್ಥಾತುಮಿಚ್ಚಾಮಿ ಸತ್ಯಮೇತದ್ಬ್ರವೀಮಿ ವಃ||
ನನ್ನ ಪ್ರಾಣಕ್ಕಿಂತಲೂ ಪ್ರಿಯನಾದ ಆ ಭೀಮವಿಕ್ರಾಂತ ಭೀಮನನ್ನು, ಇಂದ್ರನಂತಿದ್ದ ಅರ್ಜುನನನ್ನೂ, ಯಮರಂತಿದ್ದ ಯಮಳರನ್ನೂ, ಮತ್ತು ಧರ್ಮಚಾರಿಣೀ ಪಾಂಚಾಲಿಯನ್ನೂ ನೋಡಲು ಬಯಸುತ್ತೇನೆ. ನಾನು ಇಲ್ಲಿ ಉಳಿಯಲು ಇಚ್ಛಿಸುವುದಿಲ್ಲ; ನಾನು ನಿಮಗೆ ಸತ್ಯವನ್ನೇ ಹೇಳುತ್ತಿದ್ದೇನೆ.
18002012a ಕಿಂ ಮೇ ಭ್ರಾತೃವಿಹೀನಸ್ಯ ಸ್ವರ್ಗೇಣ ಸುರಸತ್ತಮಾಃ|
18002012c ಯತ್ರ ತೇ ಸ ಮಮ ಸ್ವರ್ಗೋ ನಾಯಂ ಸ್ವರ್ಗೋ ಮತೋ ಮಮ||
ಸುರಸತ್ತಮರೇ! ನಾನೇನು ಭ್ರಾತೃವಿಹೀನನಾಗಿದ್ದೇನೆಯೇ? ಅವರಿರುವುದೇ ನನಗೆ ಸ್ವರ್ಗ; ಇದು ನನ್ನ ಸ್ವರ್ಗವೆಂದು ಅನ್ನಿಸುವುದಿಲ್ಲ!”
18002013 ದೇವಾ ಊಚುಃ|
18002013a ಯದಿ ವೈ ತತ್ರ ತೇ ಶ್ರದ್ಧಾ ಗಮ್ಯತಾಂ ಪುತ್ರ ಮಾಚಿರಮ್|
18002013c ಪ್ರಿಯೇ ಹಿ ತವ ವರ್ತಾಮೋ ದೇವರಾಜಸ್ಯ ಶಾಸನಾತ್||
ದೇವತೆಗಳು ಹೇಳಿದರು: “ಪುತ್ರ! ಅಲ್ಲಿಗೇ ಹೋಗಲು ನಿನಗೆ ಶ್ರದ್ಧೆಯಿದ್ದರೆ ಹೋಗು! ದೇವರಾಜನ ಶಾಸನದಂತೆ ನಾವು ನಿನಗೆ ಪ್ರಿಯವಾಗುವ ರೀತಿಯಲ್ಲಿಯೇ ವರ್ತಿಸುತ್ತೇವೆ.””
18002014 ವೈಶಂಪಾಯನ ಉವಾಚ|
18002014a ಇತ್ಯುಕ್ತ್ವಾ ತಂ ತತೋ ದೇವಾ ದೇವದೂತಮುಪಾದಿಶನ್|
18002014c ಯುಧಿಷ್ಠಿರಸ್ಯ ಸುಹೃದೋ ದರ್ಶಯೇತಿ ಪರಂತಪ||
ವೈಶಂಪಾಯನನು ಹೇಳಿದನು: “ಪರಂತಪ! ಹೀಗೆ ಹೇಳಿ ದೇವತೆಗಳು “ಯುಧಿಷ್ಠಿರನಿಗೆ ಅವನ ಸುಹೃದಯರನ್ನು ತೋರಿಸು!” ಎಂದು ದೇವದೂತನಿಗೆ ಆದೇಶವನ್ನಿತ್ತರು.
18002015a ತತಃ ಕುಂತೀಸುತೋ ರಾಜಾ ದೇವದೂತಶ್ಚ ಜಗ್ಮತುಃ|
18002015c ಸಹಿತೌ ರಾಜಶಾರ್ದೂಲ ಯತ್ರ ತೇ ಪುರುಷರ್ಷಭಾಃ||
ರಾಜಶಾರ್ದೂಲ! ಅನಂತರ ರಾಜಾ ಕುಂತೀಸುತನು ದೇವದೂತನೊಂದಿಗೆ ಆ ಪುರುಷರ್ಷಭರಿರುವಲ್ಲಿಗೆ ಹೋದನು.
18002016a ಅಗ್ರತೋ ದೇವದೂತಸ್ತು ಯಯೌ ರಾಜಾ ಚ ಪೃಷ್ಠತಃ|
18002016c ಪಂಥಾನಮಶುಭಂ ದುರ್ಗಂ ಸೇವಿತಂ ಪಾಪಕರ್ಮಭಿಃ||
ಪಾಪಕರ್ಮಿಗಳು ಹೋಗುವ ಆ ದುರ್ಗಮ ಅಶುಭ ಮಾರ್ಗದಲ್ಲಿ ಮುಂದೆ ದೇವದೂತನೂ ಹಿಂದಿನಿಂದ ರಾಜ ಯುಧಿಷ್ಠಿರನೂ ಹೋದರು.
18002017a ತಮಸಾ ಸಂವೃತಂ ಘೋರಂ ಕೇಶಶೈವಲಶಾದ್ವಲಮ್|
18002017c ಯುಕ್ತಂ ಪಾಪಕೃತಾಂ ಗಂಧೈರ್ಮಾಂಸಶೋಣಿತಕರ್ದಮಮ್||
ಪಾಪಕೃತರಿಂದ ತುಂಬಿ ದುರ್ಗಂಧವನ್ನು ಸೂಸುತ್ತಿದ್ದ ಆ ಪ್ರದೇಶವನ್ನು ಘೋರ ಕತ್ತಲೆಯು ಆವರಿಸಿತ್ತು. ಪಾಚಿ-ಕಳೆಗಳಿರುವಲ್ಲಿ ಕೂದಲುಗಳಿದ್ದವು; ಕೆಸರಿರುವಲ್ಲಿ ರಕ್ತ-ಮಾಂಸಗಳಿದ್ದವು.
18002018a ದಂಶೋತ್ಥಾನಂ ಸಝಿಲ್ಲೀಕಂ ಮಕ್ಷಿಕಾಮಶಕಾವೃತಮ್|
18002018c ಇತಶ್ಚೇತಶ್ಚ ಕುಣಪೈಃ ಸಮಂತಾತ್ಪರಿವಾರಿತಮ್||
ಝೊಯ್ಯೆಂದು ಕಡಿಯಲು ಬರುತ್ತಿದ್ದ ನೊಣ-ಸೊಳ್ಳೆ ಮತ್ತು ಇತರ ಕೀಟಗಳು ಎಲ್ಲಕಡೆಗಳಿಂದಲೂ ಬಂದು ಮುತ್ತಿಗೆ ಹಾಕುತ್ತಿದ್ದವು.
18002019a ಅಸ್ಥಿಕೇಶಸಮಾಕೀರ್ಣಂ ಕೃಮಿಕೀಟಸಮಾಕುಲಮ್|
18002019c ಜ್ವಲನೇನ ಪ್ರದೀಪ್ತೇನ ಸಮಂತಾತ್ಪರಿವೇಷ್ಟಿತಮ್||
ಎಲುಬು ಮತ್ತು ಕೂದಲುಗಳ ರಾಶಿಗಳ ಮೇಲೆ ಕೃಮಿ-ಕೀಟಗಳು ತುಂಬಿಹೋಗಿದ್ದವು. ಉರಿಯುತ್ತಿರುವ ಬೆಂಕಿಯು ಎಲ್ಲ ಕಡೆಗಳಿಂದ ಬೇಲಿಯ ರೂಪದಂತೆ ಸುತ್ತುವರೆದಿತ್ತು.
18002020a ಅಯೋಮುಖೈಶ್ಚ ಕಾಕೋಲೈರ್ಗೃಧ್ರೈಶ್ಚ ಸಮಭಿದ್ರುತಮ್|
18002020c ಸೂಚೀಮುಖೈಸ್ತಥಾ ಪ್ರೇತೈರ್ವಿಂಧ್ಯಶೈಲೋಪಮೈರ್ವೃತಮ್||
ಕಾಗೆಗಳು ಮತ್ತು ಹದ್ದುಗಳು ಅಲ್ಲಿ ತುಂಬಿಹೋಗಿದ್ದವು. ಕೆಲವಕ್ಕೆ ಉಕ್ಕಿನಂತಹ ಕೊಕ್ಕುಗಳಿದ್ದವು. ಕೆಲವೊಕ್ಕೆ ಸೂಜಿಯಂತಹ ತೀಕ್ಷ್ಣ ಕೊಕ್ಕುಗಳಿದ್ದವು. ವಿಂದ್ಯಪರ್ವತದಷ್ಟು ದೊಡ್ಡದಾಗಿದ್ದ ಪ್ರೇತಗಳಿದ್ದವು.
18002021a ಮೇದೋರುಧಿರಯುಕ್ತೈಶ್ಚ ಚಿನ್ನಬಾಹೂರುಪಾಣಿಭಿಃ|
18002021c ನಿಕೃತ್ತೋದರಪಾದೈಶ್ಚ ತತ್ರ ತತ್ರ ಪ್ರವೇರಿತೈಃ||
ಕೊಬ್ಬು ಮತ್ತು ರಕ್ತಗಳಿಂದ ಲೇಪಿತ ತುಂಡಾದ ಬಾಹುಗಳು, ತೊಡೆಗಳು, ಕೈಗಳು, ಕತ್ತರಿಸಲ್ಪಟ್ಟ ಹೊಟ್ಟೆಗಳು ಮತ್ತು ಕಾಲುಗಳು ಅಲ್ಲಲ್ಲಿ ಚೆಲ್ಲಿ ಬಿದ್ದಿದ್ದವು.
18002022a ಸ ತತ್ಕುಣಪದುರ್ಗಂಧಮಶಿವಂ ರೋಮಹರ್ಷಣಮ್|
18002022c ಜಗಾಮ ರಾಜಾ ಧರ್ಮಾತ್ಮಾ ಮಧ್ಯೇ ಬಹು ವಿಚಿಂತಯನ್||
ರೋಮಗಳನ್ನು ನಿಮಿರಿಸುವಂಥಹ ಕೀಟ-ದುರ್ಗಂಧಗಳಿಂದ ಕೂಡಿದ್ದ ಆ ಅಮಂಗಳಕರ ದಾರಿಯ ಮಧ್ಯೆ ಧರ್ಮಾತ್ಮ ರಾಜನು ಯೋಚಿಸುತ್ತಾ ಮುಂದುವರೆದನು.
18002023a ದದರ್ಶೋಷ್ಣೋದಕೈಃ ಪೂರ್ಣಾಂ ನದೀಂ ಚಾಪಿ ಸುದುರ್ಗಮಾಮ್|
18002023c ಅಸಿಪತ್ರವನಂ ಚೈವ ನಿಶಿತಕ್ಷುರಸಂವೃತಮ್||
ಅಲ್ಲಿ ಅವನು ಕುದಿಯುತ್ತಿರುವ ನೀರಿನಿಂದ ತುಂಬಿದ ದಾಟಲಸಾಧ್ಯ ನದಿಯನ್ನೂ, ತೀಕ್ಷ್ಣ ಖಡ್ಗಗಳಂತಿರುವ ಎಲೆಗಳುಳ್ಳ ವೃಕ್ಷಗಳ ವನವನ್ನೂ ನೋಡಿದನು.
18002024a ಕರಂಭವಾಲುಕಾಸ್ತಪ್ತಾ ಆಯಸೀಶ್ಚ ಶಿಲಾಃ ಪೃಥಕ್|
18002024c ಲೋಹಕುಂಭೀಶ್ಚ ತೈಲಸ್ಯ ಕ್ವಾಥ್ಯಮಾನಾಃ ಸಮಂತತಃ||
18002025a ಕೂಟಶಾಲ್ಮಲಿಕಂ ಚಾಪಿ ದುಸ್ಪರ್ಶಂ ತೀಕ್ಷ್ಣಕಂಟಕಮ್|
18002025c ದದರ್ಶ ಚಾಪಿ ಕೌಂತೇಯೋ ಯಾತನಾಃ ಪಾಪಕರ್ಮಿಣಾಮ್||
ಎಲ್ಲ ಕಡೆಗಳಲ್ಲಿ ಸುಡುತ್ತಿರುವ ಮರಳುರಾಶಿಯನ್ನೂ, ಕಬ್ಬಿಣದ ಬಂಡೆಗಳನ್ನೂ, ಕುದಿಯುತ್ತಿರುವ ಎಣ್ಣೆಯಿಂದ ತುಂಬಿದ್ದ ಲೋಹದ ಕೊಪ್ಪರಿಗೆಗಳನ್ನೂ, ಮುಟ್ಟಲು ಅಸಾಧ್ಯವಾದ ತೀಕ್ಷ್ಣ ಮುಳ್ಳುಗಳಿದ್ದ ಶಾಲ್ಮಲೀವನವನ್ನೂ, ಪಾಪಕರ್ಮಿಗಳ ಯಾತನೆಯನ್ನೂ ಕೌಂತೇಯನು ನೋಡಿದನು.
18002026a ಸ ತಂ ದುರ್ಗಂಧಮಾಲಕ್ಷ್ಯ ದೇವದೂತಮುವಾಚ ಹ|
18002026c ಕಿಯದಧ್ವಾನಮಸ್ಮಾಭಿರ್ಗಂತವ್ಯಮಿದಮೀದೃಶಮ್||
ಆ ದುರ್ಗಂಧವನ್ನು ನೋಡಿ ಅವನು ದೇವದೂತನಿಗೆ ಹೇಳಿದನು: “ಈ ರೀತಿಯ ಮಾರ್ಗದಲ್ಲಿ ನಾವು ಇನ್ನೂ ಎಷ್ಟು ದೂರ ಹೋಗಬೇಕು?
18002027a ಕ್ವ ಚ ತೇ ಭ್ರಾತರೋ ಮಹ್ಯಂ ತನ್ಮಮಾಖ್ಯಾತುಮರ್ಹಸಿ|
18002027c ದೇಶೋಽಯಂ ಕಶ್ಚ ದೇವಾನಾಮೇತದಿಚ್ಚಾಮಿ ವೇದಿತುಮ್||
ನನ್ನ ಆ ಸಹೋದರರು ಎಲ್ಲಿದ್ದಾರೆ ಎಂದು ನನಗೆ ಹೇಳಬೇಕು. ದೇವತೆಗಳ ಈ ಪ್ರದೇಶವು ಯಾವುದು ಎನ್ನುವುದನ್ನೂ ತಿಳಿಯಲು ಬಯಸುತ್ತೇನೆ!”
18002028a ಸ ಸಂನಿವವೃತೇ ಶ್ರುತ್ವಾ ಧರ್ಮರಾಜಸ್ಯ ಭಾಷಿತಮ್|
18002028c ದೇವದೂತೋಽಬ್ರವೀಚ್ಚೈನಮೇತಾವದ್ಗಮನಂ ತವ||
ಧರ್ಮರಾಜನಾಡಿದ ಮಾತನ್ನು ಕೇಳಿ ದೇವದೂತನು ಹಿಂದೆ ತಿರುಗಿ ಹೇಳಿದನು: “ಇಲ್ಲಿಗೇ ನೀನು ಬರಬೇಕಾಗಿದ್ದುದು!
18002029a ನಿವರ್ತಿತವ್ಯಂ ಹಿ ಮಯಾ ತಥಾಸ್ಮ್ಯುಕ್ತೋ ದಿವೌಕಸೈಃ|
18002029c ಯದಿ ಶ್ರಾಂತೋಽಸಿ ರಾಜೇಂದ್ರ ತ್ವಮಥಾಗಂತುಮರ್ಹಸಿ||
ನಾನೀಗ ಹಿಂದಿರುಗಬೇಕು. ದಿವೌಕಸರು ನನಗೆ ಹೀಗೆಂದೇ ಹೇಳಿದ್ದರು. ರಾಜೇಂದ್ರ! ಒಂದು ವೇಳೆ ನೀನು ಬಳಲಿದ್ದರೆ ನನ್ನೊಡನೆ ನೀನೂ ಬರಬಹುದು!”
18002030a ಯುಧಿಷ್ಠಿರಸ್ತು ನಿರ್ವಿಣ್ಣಸ್ತೇನ ಗಂಧೇನ ಮೂರ್ಚಿತಃ|
18002030c ನಿವರ್ತನೇ ಧೃತಮನಾಃ ಪರ್ಯಾವರ್ತತ ಭಾರತ||
ಭಾರತ! ವಾಸನೆಯಿಂದ ಮೂರ್ಛಿತನಾಗಿ ನಿರ್ವಿಣ್ಣನಾಗಿದ್ದ ಯುಧಿಷ್ಠಿರನು ಹಿಂದಿರುಗಲು ನಿರ್ಧರಿಸಿ ಹಿಂದಕ್ಕೆ ತಿರುಗಿದನು.
18002031a ಸ ಸಂನಿವೃತ್ತೋ ಧರ್ಮಾತ್ಮಾ ದುಃಖಶೋಕಸಮನ್ವಿತಃ|
18002031c ಶುಶ್ರಾವ ತತ್ರ ವದತಾಂ ದೀನಾ ವಾಚಃ ಸಮಂತತಃ||
ದುಃಖಶೋಕಸಮನ್ವಿತನಾದ ಆ ಧರ್ಮಾತ್ಮನು ಹಿಂದೆ ತಿರುಗುತ್ತಲೇ ಎಲ್ಲ ಕಡೆಗಳಿಂದ ದೀನಧ್ವನಿಯಲ್ಲಿ ತನ್ನನ್ನು ಉದ್ದೇಶಿಸಿ ಕೂಗಿ ಕರೆಯುವುದನ್ನು ಕೇಳಿದನು.
18002032a ಭೋ ಭೋ ಧರ್ಮಜ ರಾಜರ್ಷೇ ಪುಣ್ಯಾಭಿಜನ ಪಾಂಡವ|
18002032c ಅನುಗ್ರಹಾರ್ಥಮಸ್ಮಾಕಂ ತಿಷ್ಠ ತಾವನ್ಮುಹೂರ್ತಕಮ್||
“ಭೋ! ಭೋ! ಧರ್ಮಜ! ರಾಜರ್ಷೇ! ಪುಣ್ಯವಂತ ಪಾಂಡವ! ನಮ್ಮ ಅನುಗ್ರಹಾರ್ಥವಾಗಿ ಒಂದು ಕ್ಷಣಕಾಲ ನಿಲ್ಲು!
18002033a ಆಯಾತಿ ತ್ವಯಿ ದುರ್ಧರ್ಷೇ ವಾತಿ ಪುಣ್ಯಃ ಸಮೀರಣಃ|
18002033c ತವ ಗಂಧಾನುಗಸ್ತಾತ ಯೇನಾಸ್ಮಾನ್ಸುಖಮಾಗಮತ್||
ದುರ್ಧರ್ಷೇ! ನಿನ್ನೊಂದಿಗೆ ಪುಣ್ಯಗಂಧವುಳ್ಳ ಗಾಳಿಯು ಇಲ್ಲಿ ಬೀಸತೊಡಗಿದೆ. ನಿನ್ನ ಆ ಸುವಾಸನೆಯಿಂದ ನಮಗೆ ಸುಖವೆನಿಸುತ್ತಿದೆ!
18002034a ತೇ ವಯಂ ಪಾರ್ಥ ದೀರ್ಘಸ್ಯ ಕಾಲಸ್ಯ ಪುರುಷರ್ಷಭ|
18002034c ಸುಖಮಾಸಾದಯಿಷ್ಯಾಮಸ್ತ್ವಾಂ ದೃಷ್ಟ್ವಾ ರಾಜಸತ್ತಮ||
ಪಾರ್ಥ! ಪುರುಷರ್ಷಭ! ರಾಜಸತ್ತಮ! ಇನ್ನೂ ಸ್ವಲ್ಪಸಮಯ ಇಲ್ಲಿ ನಿಲ್ಲು. ಅಷ್ಟು ಸಮಯ ನಿನ್ನನ್ನು ನೋಡಿ ನಾವು ಸುಖವನ್ನು ಅನುಭವಿಸುತ್ತೇವೆ.
18002035a ಸಂತಿಷ್ಠಸ್ವ ಮಹಾಬಾಹೋ ಮುಹೂರ್ತಮಪಿ ಭಾರತ|
18002035c ತ್ವಯಿ ತಿಷ್ಠತಿ ಕೌರವ್ಯ ಯಾತನಾಸ್ಮಾನ್ನ ಬಾಧತೇ||
ಭಾರತ! ಮಹಾಬಾಹೋ! ಸ್ವಲ್ಪಹೊತ್ತು ಇಲ್ಲಿಯೇ ಇರು. ಕೌರವ್ಯ! ನೀನಿಲ್ಲಿದ್ದರೆ ಈ ಯಾತನೆಗಳು ನಮ್ಮನ್ನು ಬಾಧಿಸುವುದಿಲ್ಲ!”
18002036a ಏವಂ ಬಹುವಿಧಾ ವಾಚಃ ಕೃಪಣಾ ವೇದನಾವತಾಮ್|
18002036c ತಸ್ಮಿನ್ದೇಶೇ ಸ ಶುಶ್ರಾವ ಸಮಂತಾದ್ವದತಾಂ ನೃಪ||
ನೃಪ! ಆ ಸ್ಥಳದ ಎಲ್ಲ ಕಡೆಗಳಿಂದ ಈ ರೀತಿಯ ದೈನ್ಯ-ವೇದನೆಗಳಿಂದ ತುಂಬಿದ ಬಹುವಿಧದ ಮಾತುಗಳನ್ನು ಅವನು ಕೇಳಿದನು.
18002037a ತೇಷಾಂ ತದ್ವಚನಂ ಶ್ರುತ್ವಾ ದಯಾವಾನ್ದೀನಭಾಷಿಣಾಮ್|
18002037c ಅಹೋ ಕೃಚ್ಚ್ರಮಿತಿ ಪ್ರಾಹ ತಸ್ಥೌ ಸ ಚ ಯುಧಿಷ್ಠಿರಃ||
ದೀನರಾಗಿ ಕೂಗುತ್ತಿದ್ದ ಅವರ ಆ ಮಾತುಗಳನ್ನು ಕೇಳಿ ದಯಾವಂತ ಯುಧಿಷ್ಠಿರನು “ಅಯ್ಯೋ ಕಷ್ಟವೇ!” ಎಂದು ಹೇಳಿ ಅಲ್ಲಿಯೇ ನಿಂತುಕೊಂಡನು.
18002038a ಸ ತಾ ಗಿರಃ ಪುರಸ್ತಾದ್ವೈ ಶ್ರುತಪೂರ್ವಾಃ ಪುನಃ ಪುನಃ|
18002038c ಗ್ಲಾನಾನಾಂ ದುಃಖಿತಾನಾಂ ಚ ನಾಭ್ಯಜಾನತ ಪಾಂಡವಃ||
ಆ ಸ್ವರಗಳನ್ನು ಹಿಂದೆ ಕೂಡ ಪುನಃ ಪುನಃ ಕೇಳಿದ್ದರೂ ದುಃಖದಿಂದ ಬಳಲಿದ್ದವರ ಆ ಧ್ವನಿಗಳು ಯಾರದ್ದೆಂದು ಪಾಂಡವನಿಗೆ ಗುರುತಿಸಲಾಗಲಿಲ್ಲ.
18002039a ಅಬುಧ್ಯಮಾನಸ್ತಾ ವಾಚೋ ಧರ್ಮಪುತ್ರೋ ಯುಧಿಷ್ಠಿರಃ|
18002039c ಉವಾಚ ಕೇ ಭವಂತೋ ವೈ ಕಿಮರ್ಥಮಿಹ ತಿಷ್ಠಥ||
ಹಾಗೆ ಯಾರು ಮಾತನಾಡುತ್ತಿದ್ದಾರೆಂದು ತಿಳಿಯದ ಧರ್ಮಪುತ್ರ ಯುಧಿಷ್ಠಿರನು “ನೀವು ಯಾರು ಮತ್ತು ಇಲ್ಲಿ ಏಕೆ ಇದ್ದೀರಿ?” ಎಂದು ಕೇಳಿದನು.
18002040a ಇತ್ಯುಕ್ತಾಸ್ತೇ ತತಃ ಸರ್ವೇ ಸಮಂತಾದವಭಾಷಿರೇ|
18002040c ಕರ್ಣೋಽಹಂ ಭೀಮಸೇನೋಽಹಮರ್ಜುನೋಽಹಮಿತಿ ಪ್ರಭೋ||
18002041a ನಕುಲಃ ಸಹದೇವೋಽಹಂ ಧೃಷ್ಟದ್ಯುಮ್ನೋಽಹಮಿತ್ಯುತ|
18002041c ದ್ರೌಪದೀ ದ್ರೌಪದೇಯಾಶ್ಚ ಇತ್ಯೇವಂ ತೇ ವಿಚುಕ್ರುಶುಃ||
ಅನಂತರ ಎಲ್ಲ ಕಡೆಗಳಿಂದ ಎಲ್ಲರೂ “ನಾನು ಕರ್ಣ!” “ನಾನು ಭೀಮಸೇನ!” “ನಾನು ಅರ್ಜುನ ಪ್ರಭೋ!” “ನಾನು ನಕುಲ, ಸಹದೇವ!” “ನಾನು ಧೃಷ್ಟದ್ಯುಮ್ನ, ದ್ರೌಪದೀ, ದ್ರೌಪದೇಯರು!” ಇವೇ ಮುಂತಾಗಿ ಕೂಗುತ್ತಿರುವುದನ್ನು ಅವನು ಕೇಳಿದನು.
18002042a ತಾ ವಾಚಃ ಸಾ ತದಾ ಶ್ರುತ್ವಾ ತದ್ದೇಶಸದೃಶೀರ್ನೃಪ|
18002042c ತತೋ ವಿಮಮೃಶೇ ರಾಜಾ ಕಿಂ ನ್ವಿದಂ ದೈವಕಾರಿತಮ್||
ನೃಪ! ಅಂತಹ ಪ್ರದೇಶದಲ್ಲಿ ಅವರ ಆ ಮಾತುಗಳನ್ನು ಕೇಳಿ ರಾಜನು ತನ್ನಲ್ಲಿಯೇ ವಿಮರ್ಶಿಸಿದನು: “ದೈವವು ಹೀಗೇಕೆ ಮಾಡಿತು?
18002043a ಕಿಂ ನು ತತ್ಕಲುಷಂ ಕರ್ಮ ಕೃತಮೇಭಿರ್ಮಹಾತ್ಮಭಿಃ|
18002043c ಕರ್ಣೇನ ದ್ರೌಪದೇಯೈರ್ವಾ ಪಾಂಚಾಲ್ಯಾ ವಾ ಸುಮಧ್ಯಯಾ||
18002044a ಯ ಇಮೇ ಪಾಪಗಂಧೇಽಸ್ಮಿನ್ದೇಶೇ ಸಂತಿ ಸುದಾರುಣೇ|
18002044c ನ ಹಿ ಜಾನಾಮಿ ಸರ್ವೇಷಾಂ ದುಷ್ಕೃತಂ ಪುಣ್ಯಕರ್ಮಣಾಮ್||
ಮಹಾತ್ಮರಾದ ಈ ಕರ್ಣನಾಗಲೀ, ಸುಮದ್ಯಮೆ ಪಾಂಚಾಲೀ ದ್ರೌಪದಿಯಾಗಲೀ ಯಾವ ಕಲುಷ ಕರ್ಮಗಳನ್ನು ಮಾಡಿದ್ದಾರೆಂದು ಪಾಪಗಂಧದಿಂದ ಕೂಡಿರುವ ಈ ದಾರುಣ ಸ್ಥಳದಲ್ಲಿದ್ದಾರೆ? ಈ ಎಲ್ಲ ಪುಣ್ಯಕರ್ಮಿಗಳೂ ಮಾಡಿದ ಪಾಪಕರ್ಮಗಳ್ಯಾವುವೂ ನನಗೆ ಗೊತ್ತಿಲ್ಲ!
18002045a ಕಿಂ ಕೃತ್ವಾ ಧೃತರಾಷ್ಟ್ರಸ್ಯ ಪುತ್ರೋ ರಾಜಾ ಸುಯೋಧನಃ|
18002045c ತಥಾ ಶ್ರಿಯಾ ಯುತಃ ಪಾಪಃ ಸಹ ಸರ್ವೈಃ ಪದಾನುಗೈಃ||
ಧೃತರಾಷ್ಟ್ರ ಪುತ್ರ ಪಾಪಿ ರಾಜಾ ಸುಯೋಧನನು ಏನು ಮಾಡಿದನೆಂದು ತನ್ನ ಅನುಯಾಯಿಗಳೆಲ್ಲರೊಂದಿಗೆ ಸಂಪತ್ತು-ಸಂತೋಷಗಳಿಂದ ಮೆರೆಯುತ್ತಿದ್ದಾನೆ?
18002046a ಮಹೇಂದ್ರ ಇವ ಲಕ್ಷ್ಮೀವಾನಾಸ್ತೇ ಪರಮಪೂಜಿತಃ|
18002046c ಕಸ್ಯೇದಾನೀಂ ವಿಕಾರೋಽಯಂ ಯದಿಮೇ ನರಕಂ ಗತಾಃ||
18002047a ಸರ್ವಧರ್ಮವಿದಃ ಶೂರಾಃ ಸತ್ಯಾಗಮಪರಾಯಣಾಃ|
18002047c ಕ್ಷಾತ್ರಧರ್ಮಪರಾಃ ಪ್ರಾಜ್ಞಾ ಯಜ್ವಾನೋ ಭೂರಿದಕ್ಷಿಣಾಃ||
ಇಂದ್ರನೋ ಎನ್ನುವಂತೆ ಲಕ್ಷ್ಮೀವಂತನಾಗಿ ಅವನು ಅಲ್ಲಿ ಪರಮಪೂಜಿತನಾಗಿದ್ದಾನೆ. ಸರ್ವಧರ್ಮವಿದ, ಶೂರ, ಸತ್ಯ, ಆಗಮಪರಾಯಣ, ಕ್ಷಾತ್ರಧರ್ಮಪರಾಯಣ, ಪ್ರಾಜ್ಞ, ಭೂರಿದಕ್ಷಿಣೆಗಳನ್ನಿತ್ತು ಯಾಗನಡೆಸಿದ ನಾವು ಈ ನರಕದಲ್ಲಿದ್ದೇವೆಂದರೆ ಇದೆಂತಹ ವಿಕಾರ?
18002048a ಕಿಂ ನು ಸುಪ್ತೋಽಸ್ಮಿ ಜಾಗರ್ಮಿ ಚೇತಯಾನೋ ನ ಚೇತಯೇ|
18002048c ಅಹೋ ಚಿತ್ತವಿಕಾರೋಽಯಂ ಸ್ಯಾದ್ವಾ ಮೇ ಚಿತ್ತವಿಭ್ರಮಃ||
ನಾನೇನು ಸ್ವಪ್ನವನ್ನು ಕಾಣುತ್ತಿದ್ದೇನೆಯೇ ಅಥವಾ ಎಚ್ಚರವಾಗಿಯೇ ಇದ್ದೇನೆಯೇ? ಎಚ್ಚರದಿಂದಿರುವೆನೆಂದು ಅನಿಸಿದರೂ ಚೇತನವು ಉಡುಗಿಹೋದಂತಾಗಿದೆ. ಇಂದು ನಾನು ಹುಚ್ಚನಾಗಿಬಿಟ್ಟಿದ್ದೇನೆಯೇ? ಅಯ್ಯೋ! ಈ ಚಿತ್ತವಿಕಾರವೇ!”
18002049a ಏವಂ ಬಹುವಿಧಂ ರಾಜಾ ವಿಮಮರ್ಶ ಯುಧಿಷ್ಠಿರಃ|
18002049c ದುಃಖಶೋಕಸಮಾವಿಷ್ಟಶ್ಚಿಂತಾವ್ಯಾಕುಲಿತೇಂದ್ರಿಯಃ||
ದುಃಖಶೋಕಸಮಾವಿಷ್ಟನಾದ, ಚಿಂತೆಯಿಂದ ವ್ಯಾಕುಲಿತನಾಗಿದ್ದ ರಾಜಾ ಯುಧಿಷ್ಠಿರನು ಈ ರೀತಿ ಬಹುವಿಧಗಳಲ್ಲಿ ವಿಮರ್ಶಿಸಿದನು.
18002050a ಕ್ರೋಧಮಾಹಾರಯಚ್ಚೈವ ತೀವ್ರಂ ಧರ್ಮಸುತೋ ನೃಪಃ|
18002050c ದೇವಾಂಶ್ಚ ಗರ್ಹಯಾಮಾಸ ಧರ್ಮಂ ಚೈವ ಯುಧಿಷ್ಠಿರಃ||
ಕೂಡಲೇ ತೀವ್ರ ಕ್ರೋಧಿತನಾಗಿ ನೃಪ ಧರ್ಮಸುತ ಯುಧಿಷ್ಠಿರನು ದೇವತೆಗಳನ್ನೂ, ಧರ್ಮನನ್ನೂ ಹಳಿದನು.
18002051a ಸ ತೀವ್ರಗಂಧಸಂತಪ್ತೋ ದೇವದೂತಮುವಾಚ ಹ|
18002051c ಗಮ್ಯತಾಂ ಭದ್ರ ಯೇಷಾಂ ತ್ವಂ ದೂತಸ್ತೇಷಾಮುಪಾಂತಿಕಮ್||
ತೀವ್ರ ದುರ್ಗಂಧದಿಂದ ಸಂತಪ್ತನಾದ ಅವನು ದೇವದೂತನಿಗೆ ಹೇಳಿದನು: “ಭದ್ರ! ದೂತ! ನಿನ್ನನ್ನು ಕಳುಹಿಸಿದವರ ಬಳಿ ನೀನು ಹೋಗು!
18002052a ನ ಹ್ಯಹಂ ತತ್ರ ಯಾಸ್ಮ್ಯಾಮಿ ಸ್ಥಿತೋಽಸ್ಮೀತಿ ನಿವೇದ್ಯತಾಮ್|
18002052c ಮತ್ಸಂಶ್ರಯಾದಿಮೇ ದೂತ ಸುಖಿನೋ ಭ್ರಾತರೋ ಹಿ ಮೇ||
ನಾನು ಅಲ್ಲಿಗೆ ಬರುವುದಿಲ್ಲ. ಇಲ್ಲಿಯೇ ಉಳಿದುಕೊಂಡಿದ್ದೇನೆಂದು ಅವರಿಗೆ ಹೇಳು. ದೂತ! ನಾನು ಇಲ್ಲಿ ಇರುವುದರಿಂದ ನನ್ನ ಸಹೋದರರು ಸುಖವನ್ನನುಭವಿಸುತ್ತಿದ್ದಾರೆ!”
18002053a ಇತ್ಯುಕ್ತಃ ಸ ತದಾ ದೂತಃ ಪಾಂಡುಪುತ್ರೇಣ ಧೀಮತಾ|
18002053c ಜಗಾಮ ತತ್ರ ಯತ್ರಾಸ್ತೇ ದೇವರಾಜಃ ಶತಕ್ರತುಃ||
ಧೀಮಂತ ಪಾಂಡುಪುತ್ರನು ಹೀಗೆ ಹೇಳಲು ದೂತನು ದೇವರಾಜ ಶತ್ರಕ್ರತುವಿರುವಲ್ಲಿಗೆ ಹೋದನು.
18002054a ನಿವೇದಯಾಮಾಸ ಚ ತದ್ಧರ್ಮರಾಜಚಿಕೀರ್ಷಿತಮ್|
18002054c ಯಥೋಕ್ತಂ ಧರ್ಮಪುತ್ರೇಣ ಸರ್ವಮೇವ ಜನಾಧಿಪ||
ಜನಾಧಿಪ! ಧರ್ಮಪುತ್ರನು ಹೇಳಿದ್ದಂತೆ ಧರ್ಮರಾಜನ ಇಂಗಿತವೆಲ್ಲವನ್ನೂ ಅವನಿಗೆ ನಿವೇದಿಸಿದನು.”
ಇತಿ ಶ್ರೀಮಹಾಭಾರತೇ ಸ್ವರ್ಗಾರೋಹಣಪರ್ವಣಿ ಯುಧಿಷ್ಠಿರನರಕದರ್ಶನೇ ದ್ವಿತೀಯೋಽಧ್ಯಾಯಃ ||
ಇದು ಶ್ರೀಮಹಾಭಾರತದಲ್ಲಿ ಸ್ವರ್ಗಾರೋಹಣಪರ್ವದಲ್ಲಿ ಯುಧಿಷ್ಠಿರನರಕದರ್ಶನ ಎನ್ನುವ ಎರಡನೇ ಅಧ್ಯಾಯವು.