|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸ್ವರ್ಗಾರೋಹಣ ಪರ್ವ
೧
ಸ್ವರ್ಗದಲ್ಲಿ ನಾರದವಾಕ್ಯ
ಸ್ವರ್ಗದಲ್ಲಿ ದುರ್ಯೋಧನನನ್ನು ಕಂಡು ಸಿಟ್ಟಾದ ಯುಧಿಷ್ಠಿರನೊಡನೆ ನಾರದನ ಸಂವಾದ (೧-೨೬).
18001001 ಜನಮೇಜಯ ಉವಾಚ|
18001001a ಸ್ವರ್ಗಂ ತ್ರಿವಿಷ್ಟಪಂ ಪ್ರಾಪ್ಯ ಮಮ ಪೂರ್ವಪಿತಾಮಹಾಃ|
18001001c ಪಾಂಡವಾ ಧಾರ್ತರಾಷ್ಟ್ರಾಶ್ಚ ಕಾನಿ ಸ್ಥಾನಾನಿ ಭೇಜಿರೇ||
ಜನಮೇಜಯನು ಹೇಳಿದನು: “ತ್ರಿವಿಷ್ಟಪ ಸ್ವರ್ಗವನ್ನು ತಲುಪಿ ನನ್ನ ಪೂರ್ವಪಿತಾಮಹ ಪಾಂಡವರು ಮತ್ತು ಧಾರ್ತರಾಷ್ಟ್ರರು ಯಾವ ಯಾವ ಸ್ಥಾನಗಳನ್ನು ಪಡೆದರು?
18001002a ಏತದಿಚ್ಚಾಮ್ಯಹಂ ಶ್ರೋತುಂ ಸರ್ವವಿಚ್ಚಾಸಿ ಮೇ ಮತಃ|
18001002c ಮಹರ್ಷಿಣಾಭ್ಯನುಜ್ಞಾತೋ ವ್ಯಾಸೇನಾದ್ಭುತಕರ್ಮಣಾ||
ಇದನ್ನು ಕೇಳಲು ಬಯಸುತ್ತೇನೆ. ಅದ್ಭುತಕರ್ಮಿ ವ್ಯಾಸ ಮಹರ್ಷಿಯ ಪ್ರಸಾದದಿಂದ ನೀನು ಎಲ್ಲವನ್ನೂ ತಿಳಿದಿದ್ದೀಯೆ ಎಂದು ನನಗನ್ನಿಸುತ್ತದೆ.”
18001003 ವೈಶಂಪಾಯನ ಉವಾಚ|
18001003a ಸ್ವರ್ಗಂ ತ್ರಿವಿಷ್ಟಪಂ ಪ್ರಾಪ್ಯ ತವ ಪೂರ್ವಪಿತಾಮಹಾಃ|
18001003c ಯುಧಿಷ್ಠಿರಪ್ರಭೃತಯೋ ಯದಕುರ್ವತ ತಚ್ಚೃಣು||
ವೈಶಂಪಾಯನನು ಹೇಳಿದನು: “ತ್ರಿವಿಷ್ಟಪ ಸ್ವರ್ಗವನ್ನು ತಲುಪಿ ನಿನ್ನ ಪೂರ್ವಪಿತಾಮಹ ಯುಧಿಷ್ಠಿರನೇ ಮೊದಲಾದವರು ಏನು ಮಾಡಿದರೆನ್ನುವುದನ್ನು ಕೇಳು.
18001004a ಸ್ವರ್ಗಂ ತ್ರಿವಿಷ್ಟಪಂ ಪ್ರಾಪ್ಯ ಧರ್ಮರಾಜೋ ಯುಧಿಷ್ಠಿರಃ|
18001004c ದುರ್ಯೋಧನಂ ಶ್ರಿಯಾ ಜುಷ್ಟಂ ದದರ್ಶಾಸೀನಮಾಸನೇ||
18001005a ಭ್ರಾಜಮಾನಮಿವಾದಿತ್ಯಂ ವೀರಲಕ್ಷ್ಮ್ಯಾಭಿಸಂವೃತಮ್|
18001005c ದೇವೈರ್ಭ್ರಾಜಿಷ್ಣುಭಿಃ ಸಾಧ್ಯೈಃ ಸಹಿತಂ ಪುಣ್ಯಕರ್ಮಭಿಃ||
ಧರ್ಮರಾಜ ಯುಧಿಷ್ಠಿರನು ತ್ರಿವಿಷ್ಟಪ ಸ್ವರ್ಗವನ್ನು ತಲುಪಿ ಅಲ್ಲಿ ದುರ್ಯೋಧನನು ರಾಜಕಳೆಯಿಂದ, ಆದಿತ್ಯನಂತೆ ಪ್ರಕಾಶಿಸುತ್ತಾ ವೀರನ ವಿಜೃಂಭಣೆಯಿಂದ, ಪುಣ್ಯಕರ್ಮಿ ಸಾಧ್ಯರು ಮತ್ತು ದೇವತೆಗಳೊಂದಿಗೆ ಆಸನದಲ್ಲಿ ಕುಳಿತಿರುವುದನ್ನು ನೋಡಿದನು.
18001006a ತತೋ ಯುಧಿಷ್ಠಿರೋ ದೃಷ್ಟ್ವಾ ದುರ್ಯೋಧನಮಮರ್ಷಿತಃ|
18001006c ಸಹಸಾ ಸಂನಿವೃತ್ತೋಽಭೂಚ್ಚ್ರಿಯಂ ದೃಷ್ಟ್ವಾ ಸುಯೋಧನೇ||
18001007a ಬ್ರುವನ್ನುಚ್ಚೈರ್ವಚಸ್ತಾನ್ವೈ ನಾಹಂ ದುರ್ಯೋಧನೇನ ವೈ|
18001007c ಸಹಿತಃ ಕಾಮಯೇ ಲೋಕಾಽಲ್ಲುಬ್ಧೇನಾದೀರ್ಘದರ್ಶಿನಾ||
18001008a ಯತ್ಕೃತೇ ಪೃಥಿವೀ ಸರ್ವಾ ಸುಹೃದೋ ಬಾಂಧವಾಸ್ತಥಾ|
18001008c ಹತಾಸ್ಮಾಭಿಃ ಪ್ರಸಹ್ಯಾಜೌ ಕ್ಲಿಷ್ಟೈಃ ಪೂರ್ವಂ ಮಹಾವನೇ||
18001009a ದ್ರೌಪದೀ ಚ ಸಭಾಮಧ್ಯೇ ಪಾಂಚಾಲೀ ಧರ್ಮಚಾರಿಣೀ|
18001009c ಪರಿಕ್ಲಿಷ್ಟಾನವದ್ಯಾಂಗೀ ಪತ್ನೀ ನೋ ಗುರುಸಂನಿಧೌ||
ಅಲ್ಲಿ ದುರ್ಯೋಧನನನ್ನು ನೋಡಿ ಸಹಿಸಿಕೊಳ್ಳಲಾರದೇ ಯುಧಿಷ್ಠಿರನು ಸುಯೋಧನನು ಕಂಡೊಡನೆಯೇ ತಿರುಗಿ ಜೋರಾದ ಧ್ವನಿಯಲ್ಲಿ ಕೂಗಿ ಹೇಳಿದನು: “ನಾನು ದುರ್ಯೋಧನನೊಂದಿಗೆ ಈ ಲೋಕಗಳನ್ನು ಅನುಭವಿಸಲು ಬಯಸುವುದಿಲ್ಲ. ಮುಂದಾಲೋಚನೆಯಿಲ್ಲದ ಈ ಲುಬ್ಧನು ಮಾಡಿದ ಕರ್ಮಗಳಿಂದಾಗಿ ಭೂಮಿಯ ಸರ್ವ ಸುಹೃದಯರೂ ಬಾಂಧವರೂ ನಮ್ಮಿಂದ ಹಿಂಸೆಗೊಳಪಟ್ಟು ಹತರಾದರು. ಇವನಿಂದಾಗಿಯೇ ಹಿಂದೆ ನಾವು ಮಹಾವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿದೆವು. ಇವನಿಂದಾಗಿ ನಮ್ಮ ಸುಂದರ ಪತ್ನಿ ಧರ್ಮಚಾರಿಣೀ ಪಾಂಚಾಲಿ ದ್ರೌಪದಿಯೂ ಕೂಡ ಸಭಾಮಧ್ಯದಲ್ಲಿ ಗುರುಸನ್ನಿಧಿಯಲ್ಲಿ ಕಷ್ಟಗಳಿಗೀಡಾದಳು.
18001010a ಸ್ವಸ್ತಿ ದೇವಾ ನ ಮೇ ಕಾಮಃ ಸುಯೋಧನಮುದೀಕ್ಷಿತುಮ್|
18001010c ತತ್ರಾಹಂ ಗಂತುಮಿಚ್ಚಾಮಿ ಯತ್ರ ತೇ ಭ್ರಾತರೋ ಮಮ||
ದೇವತೆಗಳೇ! ನಿಮಗೆ ಮಂಗಳವಾಗಲಿ! ನಾನು ಸುಯೋಧನನನ್ನು ನೋಡಲು ಬಯಸುವುದಿಲ್ಲ. ನನ್ನ ಸಹೋದರರಿರುವಲ್ಲಿಗೆ ಹೋಗಲು ಬಯಸುತ್ತೇನೆ.”
18001011a ಮೈವಮಿತ್ಯಬ್ರವೀತ್ತಂ ತು ನಾರದಃ ಪ್ರಹಸನ್ನಿವ|
18001011c ಸ್ವರ್ಗೇ ನಿವಾಸೋ ರಾಜೇಂದ್ರ ವಿರುದ್ಧಂ ಚಾಪಿ ನಶ್ಯತಿ||
“ಹಾಗೆ ಹೇಳಬೇಡ!” ಎಂದು ನಾರದನು ನಗುತ್ತಾ ಹೇಳಿದನು. “ರಾಜೇಂದ್ರ! ಈಗ ನಿನ್ನ ನಿವಾಸಸ್ಥಾನವಾದ ಈ ಸ್ವರ್ಗದಲ್ಲಿ ವಿರುದ್ಧವು ನಾಶವಾಗುತ್ತದೆ.
18001012a ಯುಧಿಷ್ಠಿರ ಮಹಾಬಾಹೋ ಮೈವಂ ವೋಚಃ ಕಥಂ ಚನ|
18001012c ದುರ್ಯೋಧನಂ ಪ್ರತಿ ನೃಪಂ ಶೃಣು ಚೇದಂ ವಚೋ ಮಮ||
ಮಹಾಬಾಹೋ! ಯುಧಿಷ್ಠಿರ! ನೀನು ದುರ್ಯೋಧನನ ಕುರಿತು ಅಂಥಹ ಮಾತುಗಳನ್ನಾಡಬಾರದು. ನನ್ನ ಮಾತನ್ನು ಕೇಳು.
18001013a ಏಷ ದುರ್ಯೋಧನೋ ರಾಜಾ ಪೂಜ್ಯತೇ ತ್ರಿದಶೈಃ ಸಹ|
18001013c ಸದ್ಭಿಶ್ಚ ರಾಜಪ್ರವರೈರ್ಯ ಇಮೇ ಸ್ವರ್ಗವಾಸಿನಃ||
ಇಲ್ಲಿ ರಾಜಾ ದುರ್ಯೋಧನನು ತ್ರಿದಶರೊಂದಿಗೆ ಮತ್ತು ಸ್ವರ್ಗವಾಸೀ ಇತರ ಸಾಧು ರಾಜಪ್ರವರರೊಂದಿಗೆ ಗೌರವಿಸಲ್ಪಡುತ್ತಾನೆ.
18001014a ವೀರಲೋಕಗತಿಂ ಪ್ರಾಪ್ತೋ ಯುದ್ಧೇ ಹುತ್ವಾತ್ಮನಸ್ತನುಮ್|
18001014c ಯೂಯಂ ಸರ್ವೇ ಸುರಸಮಾ ಯೇನ ಯುದ್ಧೇ ಸಮಾಸಿತಾಃ||
ಯುದ್ಧದಲ್ಲಿ ತನ್ನ ದೇಹವನ್ನು ಆಹುತಿಯನ್ನಾಗಿತ್ತು ಅವನು ವೀರಲೋಕಗತಿಯನ್ನು ಪಡೆದನು. ಹಾಗೆಯೇ ಯುದ್ಧದಲ್ಲಿ ಸಮಾಹಿತರಾಗಿದ್ದ ಎಲ್ಲರೂ ಸುರಸಮರಾಗಿದ್ದಾರೆ.
18001015a ಸ ಏಷ ಕ್ಷತ್ರಧರ್ಮೇಣ ಸ್ಥಾನಮೇತದವಾಪ್ತವಾನ್|
18001015c ಭಯೇ ಮಹತಿ ಯೋಽಭೀತೋ ಬಭೂವ ಪೃಥಿವೀಪತಿಃ||
ಮಹಾಭಯವೊದಗಿದಾಗಲೂ ನಿರ್ಭಯನಾಗಿ ಕ್ಷತ್ರಧರ್ಮವನ್ನು ಪಾಲಿಸಿದ ಆ ಪೃಥಿವೀಪತಿಯು ಈ ಸ್ಥಾನವನ್ನು ಪಡೆದಿದ್ದಾನೆ.
18001016a ನ ತನ್ಮನಸಿ ಕರ್ತವ್ಯಂ ಪುತ್ರ ಯದ್ದ್ಯೂತಕಾರಿತಮ್|
18001016c ದ್ರೌಪದ್ಯಾಶ್ಚ ಪರಿಕ್ಲೇಶಂ ನ ಚಿಂತಯತುಮರ್ಹಸಿ||
18001017a ಯೇ ಚಾನ್ಯೇಽಪಿ ಪರಿಕ್ಲೇಶಾ ಯುಷ್ಮಾಕಂ ದ್ಯೂತಕಾರಿತಾಃ|
18001017c ಸಂಗ್ರಾಮೇಷ್ವಥ ವಾನ್ಯತ್ರ ನ ತಾನ್ಸಂಸ್ಮರ್ತುಮರ್ಹಸಿ||
ಮಗನೇ! ದ್ಯೂತದಿಂದುಂಟಾದವುಗಳನ್ನು ನಿನ್ನ ಮನಸ್ಸಿಗೆ ತೆಗೆದುಕೊಳ್ಳಬಾರದು. ದ್ರೌಪದಿಗುಂಟಾದ ಪರಿಕ್ಲೇಶಗಳ ಕುರಿತೂ ನೀನು ಚಿಂತಿಸಬಾರದು. ದ್ಯೂತದ ಕಾರಣದಿಂದಾಗಿ ಸಂಗ್ರಾಮದಲ್ಲಿ ಮತ್ತು ಇತರ ಸಂದರ್ಭಗಳಲ್ಲಿ ಆದ ಪರಿಕ್ಲೇಶಗಳನ್ನು ಇಲ್ಲಿ ನೀನು ಮರೆತುಬಿಡಬೇಕು.
18001018a ಸಮಾಗಚ್ಚ ಯಥಾನ್ಯಾಯಂ ರಾಜ್ಞಾ ದುರ್ಯೋಧನೇನ ವೈ|
18001018c ಸ್ವರ್ಗೋಽಯಂ ನೇಹ ವೈರಾಣಿ ಭವಂತಿ ಮನುಜಾಧಿಪ||
ಮನುಜಾಧಿಪ! ಯಥಾನ್ಯಾಯವಾಗಿ ರಾಜಾ ದುರ್ಯೋಧನನನ್ನು ಭೇಟಿಮಾಡು. ಇದು ಸ್ವರ್ಗ; ಇಲ್ಲಿ ವೈರಿಗಳ್ಯಾರೂ ಇಲ್ಲ.”
18001019a ನಾರದೇನೈವಮುಕ್ತಸ್ತು ಕುರುರಾಜೋ ಯುಧಿಷ್ಠಿರಃ|
18001019c ಭ್ರಾತೄನ್ಪಪ್ರಚ್ಚ ಮೇಧಾವೀ ವಾಕ್ಯಮೇತದುವಾಚ ಹ||
ನಾರದನು ಹೀಗೆ ಹೇಳಲು ಮೇಧಾವೀ ಕುರುರಾಜ ಯುಧಿಷ್ಠಿರನು ತನ್ನ ತಮ್ಮಂದಿರ ಕುರಿತು ಪ್ರಶ್ನಿಸುತ್ತಾ ಇಂತೆಂದನು:
18001020a ಯದಿ ದುರ್ಯೋಧನಸ್ಯೈತೇ ವೀರಲೋಕಾಃ ಸನಾತನಾಃ|
18001020c ಅಧರ್ಮಜ್ಞಸ್ಯ ಪಾಪಸ್ಯ ಪೃಥಿವೀಸುಹೃದದ್ರುಹಃ||
18001021a ಯತ್ಕೃತೇ ಪೃಥಿವೀ ನಷ್ಟಾ ಸಹಯಾ ಸರಥದ್ವಿಪಾ|
18001021c ವಯಂ ಚ ಮನ್ಯುನಾ ದಗ್ಧಾ ವೈರಂ ಪ್ರತಿಚಿಕೀರ್ಷವಃ||
18001022a ಯೇ ತೇ ವೀರಾ ಮಹಾತ್ಮಾನೋ ಭ್ರಾತರೋ ಮೇ ಮಹಾವ್ರತಾಃ|
18001022c ಸತ್ಯಪ್ರತಿಜ್ಞಾ ಲೋಕಸ್ಯ ಶೂರಾ ವೈ ಸತ್ಯವಾದಿನಃ||
“ಯಾರ ಕೃತ್ಯದಿಂದಾಗಿ ಭೂಮಿಯ ರಾಜರೆಲ್ಲರೂ ತಮ್ಮ ಆನೆ-ರಥಗಳೊಂದಿಗೆ ನಷ್ಟರಾಗಿ ಹೋದರೋ ಮತ್ತು ನಾವು ವೈರ-ಸೇಡುಗಳ ಸಿಟ್ಟಿನಿಂದ ಸುಡುತ್ತಿದ್ದೆವೋ ಆ ಅಧರ್ಮಿ, ಪಾಪಿ ಮತ್ತು ತನ್ನ ಸುಹೃದಯರನ್ನು ನೋಯಿಸಿದ ದುರ್ಯೋಧನನೇ ಸನಾತನ ವೀರಲೋಕಗಳಿಗೆ ಬಂದಿದ್ದಾನೆಂದರೆ ವೀರ-ಮಹಾತ್ಮ-ಮಹಾವ್ರತ-ಸತ್ಯಪ್ರತಿಜ್ಞ-ಸತ್ಯವಾದಿ-ಲೋಕಶೂರರಾದ ನನ್ನ ತಮ್ಮಂದಿರು ಎಲ್ಲಿದ್ದಾರೆ?
18001023a ತೇಷಾಮಿದಾನೀಂ ಕೇ ಲೋಕಾ ದ್ರಷ್ಟುಮಿಚ್ಚಾಮಿ ತಾನಹಮ್|
18001023c ಕರ್ಣಂ ಚೈವ ಮಹಾತ್ಮಾನಂ ಕೌಂತೇಯಂ ಸತ್ಯಸಂಗರಮ್||
18001024a ಧೃಷ್ಟದ್ಯುಮ್ನಂ ಸಾತ್ಯಕಿಂ ಚ ಧೃಷ್ಟದ್ಯುಮ್ನಸ್ಯ ಚಾತ್ಮಜಾನ್|
18001024c ಯೇ ಚ ಶಸ್ತ್ರೈರ್ವಧಂ ಪ್ರಾಪ್ತಾಃ ಕ್ಷತ್ರಧರ್ಮೇಣ ಪಾರ್ಥಿವಾಃ||
ಈಗ ಅವರಿಗೆ ಯಾವ ಲೋಕಗಳು ದೊರಕಿವೆ? ಅವುಗಳನ್ನು ನೋಡಲು ಬಯಸುತ್ತೇನೆ. ಕ್ಷತ್ರಧರ್ಮದಂತೆ ಶಸ್ತ್ರಗಳಿಂದ ಮೃತ್ಯುವನ್ನು ಪಡೆದ ಮಹಾತ್ಮ ಕೌಂತೇಯ ಸತ್ಯಸಂಗರ ಕರ್ಣ, ಧೃಷ್ಟದ್ಯುಮ್ನ, ಸಾತ್ಯಕಿ ಮತ್ತು ಧೃಷ್ಟದ್ಯುಮ್ನನ ಮಕ್ಕಳನ್ನು ನೋಡಲು ಬಯಸುತ್ತೇನೆ.
18001025a ಕ್ವ ನು ತೇ ಪಾರ್ಥಿವಾ ಬ್ರಹ್ಮನ್ನೈತಾನ್ಪಶ್ಯಾಮಿ ನಾರದ|
18001025c ವಿರಾಟದ್ರುಪದೌ ಚೈವ ಧೃಷ್ಟಕೇತುಮುಖಾಂಶ್ಚ ತಾನ್||
18001026a ಶಿಖಂಡಿನಂ ಚ ಪಾಂಚಾಲ್ಯಂ ದ್ರೌಪದೇಯಾಂಶ್ಚ ಸರ್ವಶಃ|
18001026c ಅಭಿಮನ್ಯುಂ ಚ ದುರ್ಧರ್ಷಂ ದ್ರಷ್ಟುಮಿಚ್ಚಾಮಿ ನಾರದ||
ಬ್ರಹ್ಮನ್! ನಾರದ! ಅವರು ಎಲ್ಲಿದ್ದಾರೆ? ಇಲ್ಲಿ ಕಾಣುತ್ತಿಲ್ಲವಲ್ಲ! ನಾರದ! ವಿರಾಟ, ದ್ರುಪದ, ಧೃಷ್ಟಕೇತು, ಪಾಂಚಲ್ಯ ಶಿಖಂಡಿ, ಎಲ್ಲ ದ್ರೌಪದೇಯರು, ಮತ್ತು ದುರ್ಧರ್ಷ ಅಭಿಮನ್ಯು ಇವರನ್ನು ನೋಡಲು ಬಯಸುತ್ತೇನೆ.”
ಇತಿ ಶ್ರೀಮಹಾಭಾರತೇ ಸ್ವರ್ಗಾರೋಹಣಪರ್ವಣಿ ಸ್ವರ್ಗೇ ನಾರದಯುಧಿಷ್ಠಿರಸಂವಾದೇ ಪ್ರಥಮೋಽಧ್ಯಾಯಃ ||
ಇದು ಶ್ರೀಮಹಾಭಾರತದಲ್ಲಿ ಸ್ವರ್ಗಾರೋಹಣಪರ್ವದಲ್ಲಿ ಸ್ವರ್ಗೇ ನಾರದಯುಧಿಷ್ಠಿರಸಂವಾದ ಎನ್ನುವ ಮೊದಲನೇ ಅಧ್ಯಾಯವು.