ಸ್ತ್ರೀಪರ್ವ: ವಿಶೋಕ ಪರ್ವ
೬
ವಿದುರನು ಸಂಸಾರದ ಅರ್ಥವನ್ನು ತಿಳಿಸುತ್ತಾ ಧೃತರಾಷ್ಟ್ರನನ್ನು ಸಂತವಿಸಿದುದು (೧-೧೭).
11006001 ಧೃತರಾಷ್ಟ್ರ ಉವಾಚ
11006001a ಅಹೋ ಖಲು ಮಹದ್ದುಃಖಂ ಕೃಚ್ಚ್ರವಾಸಂ ವಸತ್ಯಸೌ|
11006001c ಕಥಂ ತಸ್ಯ ರತಿಸ್ತತ್ರ ತುಷ್ಟಿರ್ವಾ ವದತಾಂ ವರ||
ಧೃತರಾಷ್ಟ್ರನು ಹೇಳಿದನು: “ಶ್ರೇಷ್ಠ ಮಾತುಗಾರನೇ! ಅಯ್ಯೋ! ಅಂಥಹ ಮಹಾದುಃಖ ಮತ್ತು ಕಷ್ಟದಲ್ಲಿ ಬದುಕಿದ್ದ ಅವನು ಹೇಗೆ ತಾನೇ ಅಲ್ಲಿ ಆನಂದಿಸುತ್ತಿದ್ದನು ಅಥವಾ ತೃಪ್ತಿಹೊಂದುತ್ತಿದ್ದನು?
11006002a ಸ ದೇಶಃ ಕ್ವ ನು ಯತ್ರಾಸೌ ವಸತೇ ಧರ್ಮಸಂಕಟೇ|
11006002c ಕಥಂ ವಾ ಸ ವಿಮುಚ್ಯೇತ ನರಸ್ತಸ್ಮಾನ್ಮಹಾಭಯಾತ್||
ಅವನು ಧರ್ಮಸಂಕಟದಲ್ಲಿ ಬದುಕಿದ್ದ ಅದು ಯಾವ ಪ್ರದೇಶವಾಗಿತ್ತು? ಅಂಥಹ ಮಹಾಭಯಗಳಿಂದ ಮನುಷ್ಯನು ಹೇಗೆ ಬಿಡುಗಡೆಹೊಂದಬಲ್ಲನು?
11006003a ಏತನ್ಮೇ ಸರ್ವಮಾಚಕ್ಷ್ವ ಸಾಧು ಚೇಷ್ಟಾಮಹೇ ತಥಾ|
11006003c ಕೃಪಾ ಮೇ ಮಹತೀ ಜಾತಾ ತಸ್ಯಾಭ್ಯುದ್ಧರಣೇನ ಹಿ||
ಏನು ಮಾಡಿದರೆ ಅವನಿಗೆ ಒಳ್ಳೆಯದಾಗುತ್ತದೆ? ಇವೆಲ್ಲವನ್ನೂ ನನಗೆ ಹೇಳು. ಅವನ ಮೇಲೆ ನನಗೆ ತುಂಬಾ ಮರುಕವುಂಟಾಗುತ್ತಿದೆ. ಅವನ ಉದ್ಧಾರಕ್ಕೆ ಪ್ರಯತ್ನಿಸಬೇಕೆನಿಸುತ್ತದೆ!”
11006004 ವಿದುರ ಉವಾಚ
11006004a ಉಪಮಾನಮಿದಂ ರಾಜನ್ಮೋಕ್ಷವಿದ್ಭಿರುದಾಹೃತಮ್|
11006004c ಸುಗತಿಂ ವಿಂದತೇ ಯೇನ ಪರಲೋಕೇಷು ಮಾನವಃ||
ವಿದುರನು ಹೇಳಿದನು: “ರಾಜನ್! ಮೋಕ್ಷವನ್ನು ತಿಳಿದಿರುವವರು ಸಂಸಾರವನ್ನು ಉದಾಹರಿಸಿ ಕೊಟ್ಟಿರುವ ಉಪಮಾನವಿದು. ಇದನ್ನು ತಿಳಿದುಕೊಂಡ ಮನುಷ್ಯನು ಪರಲೋಕದಲ್ಲಿ ಉತ್ತಮ ಗತಿಯನ್ನು ಹೊಂದುತ್ತಾನೆ.
11006005a ಯತ್ತದುಚ್ಯತಿ ಕಾಂತಾರಂ ಮಹತ್ಸಂಸಾರ ಏವ ಸಃ|
11006005c ವನಂ ದುರ್ಗಂ ಹಿ ಯತ್ತ್ವೇತತ್ಸಂಸಾರಗಹನಂ ಹಿ ತತ್||
ಸಂಸಾರವನ್ನೇ ಇಲ್ಲಿ ಮಹಾವನವೆಂದು ಹೇಳಿದ್ದಾರೆ. ಆ ವನವು ಎಷ್ಟು ದುರ್ಗಮವಾಗಿತ್ತೋ ಸಂಸಾರವೂ ಅಷ್ಟೇ ಗಹನವಾದುದು ಎಂದರ್ಥ.
11006006a ಯೇ ಚ ತೇ ಕಥಿತಾ ವ್ಯಾಲಾ ವ್ಯಾಧಯಸ್ತೇ ಪ್ರಕೀರ್ತಿತಾಃ|
11006006c ಯಾ ಸಾ ನಾರೀ ಬೃಹತ್ಕಾಯಾ ಅಧಿತಿಷ್ಠತಿ ತತ್ರ ವೈ||
11006006e ತಾಮಾಹುಸ್ತು ಜರಾಂ ಪ್ರಾಜ್ಞಾ ವರ್ಣರೂಪವಿನಾಶಿನೀಮ್||
ಅಲ್ಲಿ ಹೇಳಿರುವ ಕ್ರೂರ ಮೃಗಗಳೇ ವ್ಯಾಧಿಗಳು. ಬಲೆಯನ್ನು ಬೀಸುತ್ತಿದ್ದ ಆ ದೊಡ್ಡದೇಹದ ನಾರಿಯನ್ನು ಪ್ರಾಜ್ಞರು ವರ್ಣ-ರೂಪಗಳನ್ನು ನಾಶಗೊಳಿಸುವ ಮುಪ್ಪು ಎಂದು ಕರೆಯುತ್ತಾರೆ.
11006007a ಯಸ್ತತ್ರ ಕೂಪೋ ನೃಪತೇ ಸ ತು ದೇಹಃ ಶರೀರಿಣಾಮ್|
11006007c ಯಸ್ತತ್ರ ವಸತೇಽಧಸ್ತಾನ್ಮಹಾಹಿಃ ಕಾಲ ಏವ ಸಃ|
11006007e ಅಂತಕಃ ಸರ್ವಭೂತಾನಾಂ ದೇಹಿನಾಂ ಸರ್ವಹಾರ್ಯಸೌ||
ನೃಪತೇ! ಅಲ್ಲಿದ್ದ ಬಾವಿಯೇ ಶರೀರಿಗಳ ದೇಹ. ಅದರೊಳಗೆ ವಾಸಿಸುತ್ತಿದ್ದ ಸರ್ಪವೇ ಇರುವ ಎಲ್ಲವುಗಳ ದೇಹಗಳಲ್ಲಿ ವಾಸಿಸುತ್ತಿರುವ, ಸರ್ವವನ್ನೂ ಅಪಹರಿಸುವ, ಅಂತಕ ಮಹಾಕಾಲ.
11006008a ಕೂಪಮಧ್ಯೇ ಚ ಯಾ ಜಾತಾ ವಲ್ಲೀ ಯತ್ರ ಸ ಮಾನವಃ|
11006008c ಪ್ರತಾನೇ ಲಂಬತೇ ಸಾ ತು ಜೀವಿತಾಶಾ ಶರೀರಿಣಾಮ್||
ಆ ಬಾವಿಯ ಮಧ್ಯದಲ್ಲಿ ಬೆಳೆದಿದ್ದ ಮತ್ತು ಆ ಮನುಷ್ಯನು ಸಿಲುಕಿ ನೇತಾಡುತ್ತಿದ್ದ ಬಳ್ಳಿಯೇ ಶರೀರಿಗಳ ಜೀವದ ಆಶೆ.
11006009a ಸ ಯಸ್ತು ಕೂಪವೀನಾಹೇ ತಂ ವೃಕ್ಷಂ ಪರಿಸರ್ಪತಿ|
11006009c ಷಡ್ವಕ್ತ್ರಃ ಕುಂಜರೋ ರಾಜನ್ಸ ತು ಸಂವತ್ಸರಃ ಸ್ಮೃತಃ|
11006009e ಮುಖಾನಿ ಋತವೋ ಮಾಸಾಃ ಪಾದಾ ದ್ವಾದಶ ಕೀರ್ತಿತಾಃ||
ರಾಜನ್! ಬಾವಿಯ ಸಮೀಪದಲ್ಲಿ ಒಂದು ಮರದ ಕಡೆ ಹೋಗುತ್ತಿದ್ದ ಆನೆಯೇ ಸಂವತ್ಸರವು. ಅದರ ಆರು ಮುಖಗಳು ಋತುಗಳು ಮತ್ತು ಪಾದಗಳೇ ಹನ್ನೆರಡು ಮಾಸಗಳು.
11006010a ಯೇ ತು ವೃಕ್ಷಂ ನಿಕೃಂತಂತಿ ಮೂಷಕಾಃ ಸತತೋತ್ಥಿತಾಃ|
11006010c ರಾತ್ರ್ಯಹಾನಿ ತು ತಾನ್ಯಾಹುರ್ಭೂತಾನಾಂ ಪರಿಚಿಂತಕಾಃ|
ಎಚ್ಚರದಿಂದಿದ್ದು ಆ ಮರವನ್ನು ಕಡಿಯುತ್ತಿದ್ದ ಬಿಳಿ ಮತ್ತು ಕಪ್ಪುಬಣ್ಣದ ಇಲಿಗಳು ಹಗಲು-ರಾತ್ರಿಗಳೆಂದು ಹೇಳುತ್ತಾರೆ.
11006010e ಯೇ ತೇ ಮಧುಕರಾಸ್ತತ್ರ ಕಾಮಾಸ್ತೇ ಪರಿಕೀರ್ತಿತಾಃ||
11006011a ಯಾಸ್ತು ತಾ ಬಹುಶೋ ಧಾರಾಃ ಸ್ರವಂತಿ ಮಧುನಿಸ್ರವಮ್|
11006011c ತಾಂಸ್ತು ಕಾಮರಸಾನ್ವಿದ್ಯಾದ್ಯತ್ರ ಮಜ್ಜಂತಿ ಮಾನವಾಃ||
ಅಲ್ಲಿದ್ದ ಜೇನುಹುಳುಗಳೇ ಕಾಮಗಳು. ಅನೇಕ ಧಾರೆಗಳಾಗಿ ಸುರಿಯುತ್ತಿದ್ದ ಜೇನುತುಪ್ಪವೇ ಮಾನವರನ್ನು ಮುಳುಗಿಸುವ ಕಾಮರಸಗಳೆಂದು ತಿಳಿಯಬೇಕು.
11006012a ಏವಂ ಸಂಸಾರಚಕ್ರಸ್ಯ ಪರಿವೃತ್ತಿಂ ಸ್ಮ ಯೇ ವಿದುಃ|
11006012c ತೇ ವೈ ಸಂಸಾರಚಕ್ರಸ್ಯ ಪಾಶಾಂಶ್ಚಿಂದಂತಿ ವೈ ಬುಧಾಃ||
ಈ ರೀತಿ ಸಂಸಾರಚಕ್ರವು ತಿರುಗುತ್ತಿರುತ್ತದೆಯೆಂದು ತಿಳಿದವರು ಹೇಳುತ್ತಾರೆ. ತಿಳಿದವರು ಅದೇ ಸಂಸಾರಚಕ್ರದ ಪಾಶಗಳನ್ನು ಕಡಿದುಹಾಕುತ್ತಾರೆ.”
ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ವಿಶೋಕಪರ್ವಣಿ ಧೃತರಾಷ್ಟ್ರಶೋಕಕರಣೇ ಷಷ್ಟೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ವಿಶೋಕಪರ್ವದಲ್ಲಿ ಧೃತರಾಷ್ಟ್ರಶೋಕಕರಣ ಎನ್ನುವ ಆರನೇ ಅಧ್ಯಾಯವು.