ಸ್ತ್ರೀಪರ್ವ: ವಿಶೋಕ ಪರ್ವ
೫
ವಿದುರನು ಬುದ್ಧಿಮಾರ್ಗದ ಕುರಿತು ಹೇಳುತ್ತಾ ಸಂಸಾರವನ್ನು ಗಹನ ವನಕ್ಕೆ ಹೋಲಿಸಿ ಧೃತರಾಷ್ಟ್ರನನ್ನು ಸಂತವಿಸಿದುದು (೧-೨೨).
11005001 ಧೃತರಾಷ್ಟ್ರ ಉವಾಚ
11005001a ಯದಿದಂ ಧರ್ಮಗಹನಂ ಬುದ್ಧ್ಯಾ ಸಮನುಗಮ್ಯತೇ|
11005001c ಏತದ್ವಿಸ್ತರಶಃ ಸರ್ವಂ ಬುದ್ಧಿಮಾರ್ಗಂ ಪ್ರಶಂಸ ಮೇ||
ಧೃತರಾಷ್ಟ್ರನು ಹೇಳಿದನು: “ಗಹನವಾದ ಈ ಧರ್ಮವನ್ನು ಬುದ್ಧಿಯಿಂದಲೇ ಅರ್ಥಮಾಡಿಕೊಳ್ಳಬಹುದಾದರೆ ಬುದ್ಧಿಮಾರ್ಗವನ್ನು ನನಗೆ ವಿಸ್ತಾರವಾಗಿ ಎಲ್ಲವನ್ನೂ ಹೇಳು!”
11005002 ವಿದುರ ಉವಾಚ
11005002a ಅತ್ರ ತೇ ವರ್ತಯಿಷ್ಯಾಮಿ ನಮಸ್ಕೃತ್ವಾ ಸ್ವಯಂಭುವೇ|
11005002c ಯಥಾ ಸಂಸಾರಗಹನಂ ವದಂತಿ ಪರಮರ್ಷಯಃ||
ವಿದುರನು ಹೇಳಿದನು: “ಸ್ವಯಂಭುವಿಗೆ ನಮಸ್ಕರಿಸಿ ಪರಮ ಋಷಿಗಳು ಸಂಸಾರವನ್ನು ಗಹನ ಅರಣ್ಯವೆಂದು ವರ್ಣಿಸಿರುವುದನ್ನು ನಿನಗೆ ಹೇಳುತ್ತೇನೆ.
11005003a ಕಶ್ಚಿನ್ಮಹತಿ ಸಂಸಾರೇ ವರ್ತಮಾನೋ ದ್ವಿಜಃ ಕಿಲ|
11005003c ವನಂ ದುರ್ಗಮನುಪ್ರಾಪ್ತೋ ಮಹತ್ಕ್ರವ್ಯಾದಸಂಕುಲಮ್||
ಈ ಮಹಾಸಂಸಾರದಲ್ಲಿ ವಾಸಿಸುತ್ತಿದ್ದ ಓರ್ವ ದ್ವಿಜನು ಮಾಂಸಾಹಾರೀ ಮೃಗಗಳಿಂದ ತುಂಬಿದ್ದ ದುರ್ಗಮ ವನವೊಂದನ್ನು ಸೇರಿದನು.
11005004a ಸಿಂಹವ್ಯಾಘ್ರಗಜಾಕಾರೈರತಿಘೋರೈರ್ಮಹಾಶನೈಃ|
11005004c ಸಮಂತಾತ್ಸಂಪರಿಕ್ಷಿಪ್ತಂ ಮೃತ್ಯೋರಪಿ ಭಯಪ್ರದಮ್||
ಎಲ್ಲಕಡೆಗಳಿಂದ ಅತಿ ಘೋರ ಸಿಂಹ, ಹುಲಿ, ಆನೆ ಮತ್ತು ಕರಡಿಗಳ ಮಹಾ ಗರ್ಜನೆಗಳಿಂದ ಕೂಡಿದ್ದ ಆ ವನವು ಮೃತ್ಯುವಿಗೂ ಭಯವನ್ನುಂಟುಮಾಡುವಂತಿತ್ತು.
11005005a ತದಸ್ಯ ದೃಷ್ಟ್ವಾ ಹೃದಯಮುದ್ವೇಗಮಗಮತ್ಪರಮ್|
11005005c ಅಭ್ಯುಚ್ಚ್ರಯಶ್ಚ ರೋಮ್ಣಾಂ ವೈ ವಿಕ್ರಿಯಾಶ್ಚ ಪರಂತಪ||
ಪರಂತಪ! ಅದನ್ನು ನೋಡಿ ಪರಮ ಉದ್ವೇಗವು ಅವನ ಹೃದಯವನ್ನು ಆವರಿಸಿತು. ರೋಮಗಳು ನಿಮಿರಿ ನಿಂತು ಅನೇಕ ವಿಕಾರಗಳನ್ನು ಅವನು ಅನುಭವಿಸಿದನು.
11005006a ಸ ತದ್ವನಂ ವ್ಯನುಸರನ್ವಿಪ್ರಧಾವನಿತಸ್ತತಃ|
11005006c ವೀಕ್ಷಮಾಣೋ ದಿಶಃ ಸರ್ವಾಃ ಶರಣಂ ಕ್ವ ಭವೇದಿತಿ||
ಆ ವನದಲ್ಲಿ ಅಲ್ಲಿಂದಿಲ್ಲಿಗೆ ಧಾವಿಸುತ್ತಾ ಆ ವಿಪ್ರನು ಎಲ್ಲಿಯಾದರೂ ರಕ್ಷಣೆಯು ಸಿಕ್ಕೀತೇ ಎಂದು ಎಲ್ಲ ದಿಕ್ಕುಗಳಲ್ಲಿಯೂ ನೋಡತೊಡಗಿದನು.
11005007a ಸ ತೇಷಾಂ ಚಿದ್ರಮನ್ವಿಚ್ಚನ್ಪ್ರದ್ರುತೋ ಭಯಪೀಡಿತಃ|
11005007c ನ ಚ ನಿರ್ಯಾತಿ ವೈ ದೂರಂ ನ ಚ ತೈರ್ವಿಪ್ರಯುಜ್ಯತೇ||
ಭಯಪೀಡಿತನಾದ ಅವನು ಭಯಗಳಿಲ್ಲದ ಒಂದು ದಾರಿಯನ್ನೇ ಹಿಡಿದು ಓಡತೊಡಗಿದನು. ಆದರೆ ಆ ವಿಪ್ರನಿಗೆ ಬಹಳ ದೂರ ಓಡಲಿಕ್ಕಾಗಲಿಲ್ಲ.
11005008a ಅಥಾಪಶ್ಯದ್ವನಂ ಘೋರಂ ಸಮಂತಾದ್ವಾಗುರಾವೃತಮ್|
11005008c ಬಾಹುಭ್ಯಾಂ ಸಂಪರಿಷ್ವಕ್ತಂ ಸ್ತ್ರಿಯಾ ಪರಮಘೋರಯಾ||
ಕೂಡಲೇ ಆ ಘೋರ ವನವು ಸುತ್ತಲೂ ಬಲೆಯಿಂದ ಆವೃತವಾಗಿರುವುದನ್ನೂ, ಪರಮ ಘೋರ ಸ್ತ್ರೀಯೊಬ್ಬಳು ತನ್ನೆರಡು ಕೈಗಳಿಂದ ಬಲೆಯನ್ನು ಎಳೆದು ವನವನ್ನು ಮುಚ್ಚುತ್ತಿರುವುದನ್ನು ಅವನು ನೋಡಿದನು.
11005009a ಪಂಚಶೀರ್ಷಧರೈರ್ನಾಗೈಃ ಶೈಲೈರಿವ ಸಮುನ್ನತೈಃ|
11005009c ನಭಃಸ್ಪೃಶೈರ್ಮಹಾವೃಕ್ಷೈಃ ಪರಿಕ್ಷಿಪ್ತಂ ಮಹಾವನಮ್||
ಆ ಮಹಾವನವು ಪರ್ವತಗಳಷ್ಟು ಎತ್ತರವಾಗಿರುವ ಐದು ಹೆಡೆಗಳ ನಾಗಗಳಿಂದಲೂ ಆಕಾಶವನ್ನು ಮುಟ್ಟುವ ಮಹಾ ವೃಕ್ಷಗಳಿಂದಲೂ ವ್ಯಾಪ್ತವಾಗಿತ್ತು.
11005010a ವನಮಧ್ಯೇ ಚ ತತ್ರಾಭೂದುದಪಾನಃ ಸಮಾವೃತಃ|
11005010c ವಲ್ಲೀಭಿಸ್ತೃಣಚನ್ನಾಭಿರ್ಗೂಢಾಭಿರಭಿಸಂವೃತಃ||
ಆ ವನದ ಮಧ್ಯದಲ್ಲಿ ಹುಲ್ಲು ಮತ್ತು ಬಳ್ಳಿಗಳಿಂದ ಮುಚ್ಚಿ ಕಾಣದಂತಿದ್ದ ಬಾವಿಯೊಂದಿದ್ದಿತು.
11005011a ಪಪಾತ ಸ ದ್ವಿಜಸ್ತತ್ರ ನಿಗೂಢೇ ಸಲಿಲಾಶಯೇ|
11005011c ವಿಲಗ್ನಶ್ಚಾಭವತ್ತಸ್ಮಿಽಲ್ಲತಾಸಂತಾನಸಂಕಟೇ||
ನಿಗೂಢವಾಗಿದ್ದ ಆ ಬಾವಿಯಲ್ಲಿ ದ್ವಿಜನು ಬಿದ್ದನು. ಆದರೆ ಗಟ್ಟಿಯಾದ ಬಳ್ಳಿಗಳ ಬಲೆಯಲ್ಲಿ ಸಿಕ್ಕಿಹಾಕಿಕೊಂಡನು.
11005012a ಪನಸಸ್ಯ ಯಥಾ ಜಾತಂ ವೃಂತಬದ್ಧಂ ಮಹಾಫಲಮ್|
11005012c ಸ ತಥಾ ಲಂಬತೇ ತತ್ರ ಊರ್ಧ್ವಪಾದೋ ಹ್ಯಧಃಶಿರಾಃ||
ದೊಡ್ಡ ಹಲಸಿನ ಹಣ್ಣು ತನ್ನ ತೊಟ್ಟಿನಿಂದ ಹಿಡಿಯಲ್ಪಟ್ಟು ಮರದಲ್ಲಿ ನೇತಾಡುವಂತೆ ಅವನು ಕಾಲು ಮೇಲೆ ಮತ್ತು ತಲೆ ಕೆಳಗಾಗಿ ನೇತಾಡುತ್ತಿದ್ದನು.
11005013a ಅಥ ತತ್ರಾಪಿ ಚಾನ್ಯೋಽಸ್ಯ ಭೂಯೋ ಜಾತ ಉಪದ್ರವಃ|
11005013c ಕೂಪವೀನಾಹವೇಲಾಯಾಮಪಶ್ಯತ ಮಹಾಗಜಮ್||
ಆ ಪರಿಸ್ಥಿತಿಯಲ್ಲಿ ಕೂಡ ಅವನಿಗೆ ಇನ್ನೊಂದು ಉಪದ್ರವವು ಒದಗಿ ಬಂದಿತು. ಬಾವಿಯ ದಡದ ಮೇಲೆ ದೊಡ್ಡ ಆನೆಯೊಂದನ್ನು ನೋಡಿದನು.
11005014a ಷಡ್ವಕ್ತ್ರಂ ಕೃಷ್ಣಶಬಲಂ ದ್ವಿಷಟ್ಕಪದಚಾರಿಣಮ್|
11005014c ಕ್ರಮೇಣ ಪರಿಸರ್ಪಂತಂ ವಲ್ಲೀವೃಕ್ಷಸಮಾವೃತಮ್||
ಅದಕ್ಕೆ ಆರು ಮುಖಗಳಿದ್ದವು. ಕಪ್ಪಾಗಿಯೂ ಬಿಳುಪಾಗಿಯೂ ಇತ್ತು. ಅದಕ್ಕೆ ಹನ್ನೆರಡು ಕಾಲುಗಳಿದ್ದವು. ಅದು ಬಳ್ಳಿ-ಮರಗಳಿಂದ ತುಂಬಿದ್ದ ಆ ಬಾವಿಯ ಕಡೆ ಕ್ರಮೇಣ ಬರುತ್ತಿತ್ತು.
11005015a ತಸ್ಯ ಚಾಪಿ ಪ್ರಶಾಖಾಸು ವೃಕ್ಷಶಾಖಾವಲಂಬಿನಃ|
11005015c ನಾನಾರೂಪಾ ಮಧುಕರಾ ಘೋರರೂಪಾ ಭಯಾವಹಾಃ|
11005015e ಆಸತೇ ಮಧು ಸಂಭೃತ್ಯ ಪೂರ್ವಮೇವ ನಿಕೇತಜಾಃ||
ಅವನು ನೇತುಬಿದ್ದಿದ್ದ ಮರದ ರೆಂಬೆಗಳ ಶಾಪೋಪಶಾಖೆಗಳಲ್ಲಿ ನಾನಾರೂಪದ, ಘೋರರೂಪದ, ಭಯವನ್ನುಂಟುಮಾಡುವ ಜೇನುಹುಳುಗಳು ಗೂಡುಕಟ್ಟಿದ್ದವು. ಮೊದಲೇ ಸಂಗ್ರಹಿಸಿದ್ದ ಜೇನುತುಪ್ಪವನ್ನು ಅವುಗಳು ಸವಿಯುತ್ತಿದ್ದವು.
11005016a ಭೂಯೋ ಭೂಯಃ ಸಮೀಹಂತೇ ಮಧೂನಿ ಭರತರ್ಷಭ|
11005016c ಸ್ವಾದನೀಯಾನಿ ಭೂತಾನಾಂ ನ ಯೈರ್ಬಾಲೋಽಪಿ ತೃಪ್ಯತೇ||
ಭರತರ್ಷಭ! ಜೀವಿಗಳಿಗೆ ಸ್ವಾದನೀಯವಾದ ಮತ್ತು ಬಾಲಕರಿಗೆ ತೃಪ್ತಿಯನ್ನೀಡುವ ಆ ಜೇನುತುಪ್ಪವನ್ನು ಅವುಗಳು ಪುನಃ ಪುನಃ ಹೀರುತ್ತಿದ್ದವು.
11005017a ತೇಷಾಂ ಮಧೂನಾಂ ಬಹುಧಾ ಧಾರಾ ಪ್ರಸ್ರವತೇ ಸದಾ|
11005017c ತಾಂ ಲಂಬಮಾನಃ ಸ ಪುಮಾನ್ಧಾರಾಂ ಪಿಬತಿ ಸರ್ವದಾ|
11005017e ನ ಚಾಸ್ಯ ತೃಷ್ಣಾ ವಿರತಾ ಪಿಬಮಾನಸ್ಯ ಸಂಕಟೇ||
ಆ ಜೇನುಗೂಡುಗಳಿಂದ ಧಾರಾಕಾರವಾಗಿ ಬಹಳಷ್ಟು ಜೇನುತುಪ್ಪವು ಸುರಿಯುತ್ತಿದ್ದು. ಅಲ್ಲಿ ನೇತಾಡುತ್ತಿದ್ದ ಆ ಬ್ರಾಹ್ಮಣನು ಜೇನುತುಪ್ಪಿನ ಧಾರೆಯನ್ನು ಕುಡಿಯುತ್ತಿದ್ದನು. ಸಂಕಟದಲ್ಲಿದ್ದರೂ ಜೇನುತುಪ್ಪವನ್ನು ಕುಡಿಯುತ್ತಿದ್ದ ಅವನಿಗೆ ತೃಪ್ತಿಯೇ ಆಗಲಿಲ್ಲ.
11005018a ಅಭೀಪ್ಸತಿ ಚ ತಾಂ ನಿತ್ಯಮತೃಪ್ತಃ ಸ ಪುನಃ ಪುನಃ|
11005018c ನ ಚಾಸ್ಯ ಜೀವಿತೇ ರಾಜನ್ನಿರ್ವೇದಃ ಸಮಜಾಯತ||
ರಾಜನ್! ಆಗಲೂ ಕೂಡ ಅವನು ನಿತ್ಯವೂ ಅತೃಪ್ತನಾಗಿ ಪುನಃ ಪುನಃ ಜೇನುತುಪ್ಪವನ್ನು ಬಯಸುತ್ತಿದ್ದನು. ಆಗಲೂ ಕೂಡ ಅವನಿಗೆ ಜೀವನದಲ್ಲಿ ವೈರಾಗ್ಯವುಂಟಾಗಲಿಲ್ಲ.
11005019a ತತ್ರೈವ ಚ ಮನುಷ್ಯಸ್ಯ ಜೀವಿತಾಶಾ ಪ್ರತಿಷ್ಠಿತಾ|
11005019c ಕೃಷ್ಣಾಃ ಶ್ವೇತಾಶ್ಚ ತಂ ವೃಕ್ಷಂ ಕುಟ್ಟಯಂತಿ ಸ್ಮ ಮೂಷಕಾಃ||
ಅಲ್ಲಿ ಕೂಡ ಮನುಷ್ಯನ ಜೀವಿತದ ಆಸೆಯು ದೃಢವಾಗಿತ್ತು. ಬಿಳಿ ಮತ್ತು ಕಪ್ಪು ಬಣ್ಣದ ಇಲಿಗಳು ಆ ಮರವನ್ನು ಕಡಿಯುತ್ತಿದ್ದವು.
11005020a ವ್ಯಾಲೈಶ್ಚ ವನದುರ್ಗಾಂತೇ ಸ್ತ್ರಿಯಾ ಚ ಪರಮೋಗ್ರಯಾ|
11005020c ಕೂಪಾಧಸ್ತಾಚ್ಚ ನಾಗೇನ ವೀನಾಹೇ ಕುಂಜರೇಣ ಚ||
11005021a ವೃಕ್ಷಪ್ರಪಾತಾಚ್ಚ ಭಯಂ ಮೂಷಕೇಭ್ಯಶ್ಚ ಪಂಚಮಮ್|
11005021c ಮಧುಲೋಭಾನ್ಮಧುಕರೈಃ ಷಷ್ಠಮಾಹುರ್ಮಹದ್ಭಯಮ್||
ದುರ್ಗಮ ವನದಲ್ಲಿದ್ದ ಕ್ರೂರ ಮೃಗಗಳು, ಪರಮ ಉಗ್ರರೂಪದ ಸ್ತ್ರೀ, ಬಾವಿಯೊಳಗಿದ್ದ ನಾಗ ಮತ್ತು ಬಾವಿಯ ಮೇಲಿದ್ದ ಆನೆ, ಐದನೆಯದು ಇಲಿಗಳಿಂದ ಕಡಿಯಲ್ಪಡುತ್ತಿದ್ದ ಮರವು ಬೀಳುವ ಭಯ, ಮತ್ತು ಆರನೆಯದಾಗಿ ಜೇನುತುಪ್ಪವನ್ನು ಸವಿಯುತ್ತಿದ್ದ ತನ್ನನ್ನು ಜೇನುಹುಳುಗಳು ಕಡಿಯುವ ಮಹಾಭಯ!
11005022a ಏವಂ ಸ ವಸತೇ ತತ್ರ ಕ್ಷಿಪ್ತಃ ಸಂಸಾರಸಾಗರೇ|
11005022c ನ ಚೈವ ಜೀವಿತಾಶಾಯಾಂ ನಿರ್ವೇದಮುಪಗಚ್ಚತಿ||
ಈ ರೀತಿ ಸಂಸಾರವೆಂಬ ಮಹಾಸಾಗರದಲ್ಲಿ ಮುಳುಗಿದವನು ಜೀವಿಸಿರುತ್ತಾನೆ. ಜೀವದ ಆಸೆಯಿಂದ ಅವನು ಖಂಡಿತವಾಗಿಯೂ ವೈರಾಗ್ಯವನ್ನು ಹೊಂದುವುದಿಲ್ಲ.”
ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ವಿಶೋಕಪರ್ವಣಿ ಧೃತರಾಷ್ಟ್ರಶೋಕಕರಣೇ ಪಂಚಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ವಿಶೋಕಪರ್ವದಲ್ಲಿ ಧೃತರಾಷ್ಟ್ರಶೋಕಕರಣ ಎನ್ನುವ ಐದನೇ ಅಧ್ಯಾಯವು.