Shanti Parva: Chapter 321

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೨೧

ನಾರಾಯಣೀಯಂ

ಬದರಿಕಾಶ್ರಮದಲ್ಲಿ ನಾರದ-ನಾರಾಯಣರ ಸಂವಾದ (1-43).

Sriman Narayaneeyam Online Audio

12321001 ಯುಧಿಷ್ಠಿರ ಉವಾಚ|

12321001a ಗೃಹಸ್ಥೋ ಬ್ರಹ್ಮಚಾರೀ ವಾ ವಾನಪ್ರಸ್ಥೋಽಥ ಭಿಕ್ಷುಕಃ|

12321001c ಯ ಇಚ್ಚೇತ್ಸಿದ್ಧಿಮಾಸ್ಥಾತುಂ ದೇವತಾಂ ಕಾಂ ಯಜೇತ ಸಃ||

ಯುಧಿಷ್ಠಿರನು ಹೇಳಿದನು: “ಗೃಹಸ್ಥನಾಗಿರಲೀ ಬ್ರಹ್ಮಚಾರಿಯಾಗಿರಲೀ ವಾನಪ್ರಸ್ಥನಾಗಿರಲಿ ಅಥವಾ ಭಿಕ್ಷುಕನೇ ಆಗಿರಲಿ, ಸಿದ್ಧಿಯನ್ನು ಪಡೆದುಕೊಳ್ಳಲು ಬಯಸುವವನು ಯಾವ ದೇವತೆಯನ್ನು ಪೂಜಿಸಬೇಕು?

12321002a ಕುತೋ ಹ್ಯಸ್ಯ ಧ್ರುವಃ ಸ್ವರ್ಗಃ ಕುತೋ ನಿಃಶ್ರೇಯಸಂ ಪರಮ್|

12321002c ವಿಧಿನಾ ಕೇನ ಜುಹುಯಾದ್ದೈವಂ ಪಿತ್ರ್ಯಂ ತಥೈವ ಚ||

ಮನುಷ್ಯನಿಗೆ ಅಕ್ಷಯ ಸ್ವರ್ಗವು ಹೇಗೆ ಪ್ರಾಪ್ತವಾಗಬಲ್ಲದು? ಯಾವ ಸಾಧನದಿಂದ ಅವನ ಪರಮ ಕಲ್ಯಾಣವಾಗಬಲ್ಲದು? ಅವನು ಯಾವ ವಿಧದಲ್ಲಿ ದೇವತೆಗಳು ಮತ್ತು ಪಿತೃಗಳನ್ನು ಉದ್ದೇಶಿಸಿ ಹೋಮಮಾಡಬೇಕು?

12321003a ಮುಕ್ತಶ್ಚ ಕಾಂ ಗತಿಂ ಗಚ್ಚೇನ್ಮೋಕ್ಷಶ್ಚೈವ ಕಿಮಾತ್ಮಕಃ|

12321003c ಸ್ವರ್ಗತಶ್ಚೈವ ಕಿಂ ಕುರ್ಯಾದ್ಯೇನ ನ ಚ್ಯವತೇ ದಿವಃ||

ಮುಕ್ತ ಪುರುಷನಿಗೆ ಯಾವ ಗತಿಯು ಪ್ರಾಪ್ತವಾಗುತ್ತದೆ? ಮೋಕ್ಷದ ಸ್ವರೂಪವ್ಯಾವುದು? ಸ್ವರ್ಗವನ್ನು ತಲುಪಿದವರು ಪುನಃ ಅಲ್ಲಿಂದ ಕೇಳಗೆ ಬೀಳದಿರಲು ಏನು ಮಾಡಬೇಕು?

12321004a ದೇವತಾನಾಂ ಚ ಕೋ ದೇವಃ ಪಿತೃಣಾಂ ಚ ತಥಾ ಪಿತಾ|

12321004c ತಸ್ಮಾತ್ಪರತರಂ ಯಚ್ಚ ತನ್ಮೇ ಬ್ರೂಹಿ ಪಿತಾಮಹ||

ದೇವತೆಗಳಿಗೂ ದೇವನಾದವನು ಮತ್ತು ಪಿತೃಗಳಿಗೂ ಪಿತನೆಂದೆನಿಸಿಕೊಂಡವನು ಯಾರು? ಪಿತಾಮಹ! ಅಥವಾ ಅದಕ್ಕೂ ಶ್ರೇಷ್ಠ ತತ್ತ್ವವು ಯಾವುದು? ಇದರ ಕುರಿತು ನನಗೆ ಹೇಳು.”

12321005 ಭೀಷ್ಮ ಉವಾಚ|

12321005a ಗೂಢಂ ಮಾಂ ಪ್ರಶ್ನವಿತ್ಪ್ರಶ್ನಂ ಪೃಚ್ಚಸೇ ತ್ವಮಿಹಾನಘ|

12321005c ನ ಹ್ಯೇಷ ತರ್ಕಯಾ ಶಕ್ಯೋ ವಕ್ತುಂ ವರ್ಷಶತೈರಪಿ||

12321006a ಋತೇ ದೇವಪ್ರಸಾದಾದ್ವಾ ರಾಜನ್ ಜ್ಞಾನಾಗಮೇನ ವಾ|

12321006c ಗಹನಂ ಹ್ಯೇತದಾಖ್ಯಾನಂ ವ್ಯಾಖ್ಯಾತವ್ಯಂ ತವಾರಿಹನ್||

ಭೀಷ್ಮನು ಹೇಳಿದನು: “ಅನಘ! ಪ್ರಶ್ನೆಗಳನ್ನು ಕೇಳಲು ನಿನಗೆ ಚೆನ್ನಾಗಿ ತಿಳಿದಿದೆ! ಈಗ ನೀನು ನನ್ನಲ್ಲಿ ಅತ್ಯಂತ ಗೂಢ ಪ್ರಶ್ನೆಯನ್ನು ಕೇಳಿದ್ದೀಯೆ. ರಾಜನ್! ಭಗವಂತನ ಕೃಪೆ ಮತ್ತು ಜ್ಞಾನವನ್ನು ನೀಡುವ ಶಾಸ್ತ್ರಗಳ ವಿನಾ ಕೇವಲ ತರ್ಕದಿಂದ ಈ ಪ್ರಶ್ನೆಗಳಿಗೆ ಉತ್ತರವನ್ನು ನೂರು ವರ್ಷಗಳಲ್ಲಿಯೂ ನೀಡಲು ಸಾಧ್ಯವಿಲ್ಲ. ಅರಿಹನ್! ಈ ವಿಷಯವನ್ನು ತಿಳಿಯಲು ಅತ್ಯಂತ ಕಠಿನವಾದರೂ ನಿನಗೋಸ್ಕರವಾಗಿ ಇದರ ವ್ಯಾಖ್ಯೆಯನ್ನು ಮಾಡಲೇ ಬೇಕು.

12321007a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12321007c ನಾರದಸ್ಯ ಚ ಸಂವಾದಮೃಷೇರ್ನಾರಾಯಣಸ್ಯ ಚ||

ಈ ವಿಷಯದಲ್ಲಿ ಪುರಾತನ ಇತಿಹಾಸವಾದ ನಾರದ ಮತ್ತು ಋಷಿ ನಾರಾಯಣರ ಸಂವಾದವನ್ನು ಉದಾಹರಿಸುತ್ತಾರೆ.

12321008a ನಾರಾಯಣೋ ಹಿ ವಿಶ್ವಾತ್ಮಾ ಚತುರ್ಮೂರ್ತಿಃ ಸನಾತನಃ|

12321008c ಧರ್ಮಾತ್ಮಜಃ ಸಂಬಭೂವ ಪಿತೈವಂ ಮೇಽಭ್ಯಭಾಷತ||

ನನ್ನ ತಂದೆಯು ನನಗೆ ಒಮ್ಮೆ ಹೇಳಿದ್ದನು: “ನಾರಾಯಣನೇ ಸಂಪೂರ್ಣ ಜಗತ್ತಿನ ಆತ್ಮ, ಚತುರ್ಮೂರ್ತಿ ಮತ್ತು ಸನಾತನ ದೇವತೆ. ಅವನೇ ಒಮ್ಮೆ ಧರ್ಮನ ಪುತ್ರನ ರೂಪದಲ್ಲಿ ಪ್ರಕಟನಾಗಿದ್ದನು.

12321009a ಕೃತೇ ಯುಗೇ ಮಹಾರಾಜ ಪುರಾ ಸ್ವಾಯಂಭುವೇಽಂತರೇ|

12321009c ನರೋ ನಾರಾಯಣಶ್ಚೈವ ಹರಿಃ ಕೃಷ್ಣಸ್ತಥೈವ ಚ[1]||

ಮಹಾರಾಜ! ಹಿಂದಿನ ಸ್ವಾಯಂಭುವ ಮನ್ವಂತರದ ಸತ್ಯಯುಗದಲ್ಲಿ ಆ ಭಗವಂತನ ನಾಲ್ಕು ಅವತಾರಗಳಾಗಿದ್ದವು: ನರ, ನಾರಾಯಣ, ಹರಿ ಮತ್ತು ಕೃಷ್ಣ.

12321010a ತೇಭ್ಯೋ ನಾರಾಯಣನರೌ ತಪಸ್ತೇಪತುರವ್ಯಯೌ|

12321010c ಬದರ್ಯಾಶ್ರಮಮಾಸಾದ್ಯ ಶಕಟೇ ಕನಕಾಮಯೇ||

ಅವರಲ್ಲಿ ಅವ್ಯಯ ನರ-ನಾರಾಯಣರು ಬದರಿಕಾಶ್ರಮಕ್ಕೆ ಹೋಗಿ ಒಂದು ಸುವರ್ಣಮಯ ರಥದ ಮೇಲೆ ನಿಂತು ಘೋರ ತಪಸ್ಸನ್ನಾಚರಿಸತೊಡಗಿದರು.

12321011a ಅಷ್ಟಚಕ್ರಂ ಹಿ ತದ್ಯಾನಂ ಭೂತಯುಕ್ತಂ ಮನೋರಮಮ್|

12321011c ತತ್ರಾದ್ಯೌ ಲೋಕನಾಥೌ ತೌ ಕೃಶೌ ಧಮನಿಸಂತತೌ||

12321012a ತಪಸಾ ತೇಜಸಾ ಚೈವ ದುರ್ನಿರೀಕ್ಷೌ ಸುರೈರಪಿ|

12321012c ಯಸ್ಯ ಪ್ರಸಾದಂ ಕುರ್ವಾತೇ ಸ ದೇವೌ ದ್ರಷ್ಟುಮರ್ಹತಿ||

ಅವರ ಆ ರಥಕ್ಕೆ ಎಂಟು ಚಕ್ರಗಳಿದ್ದವು[2] ಮತ್ತು ಅದಕ್ಕೆ ಮನೋಹರ ಪ್ರಾಣಿಗಳನ್ನು ಕಟ್ಟಲಾಗಿತ್ತು. ಆ ಇಬ್ಬರು ಆದ್ಯರೂ ಲೋಕನಾಥರೂ ತಪಸ್ಸನ್ನಾಚರಿಸಿ ಕೃಶರಾಗಿ ಅವರ ಶರೀರದಲ್ಲಿ ಕೇವಲ ದಮನಿಗಳು ಕಾಣುತ್ತಿದ್ದವು. ತಪಸ್ಸಿನಿಂದ ಅವರ ತೇಜಸ್ಸು ಎಷ್ಟು ಬೆಳೆದಿತ್ತು ಅಂದರೆ ದೇವತೆಗಳಿಗೂ ಅವರನ್ನು ನೋಡಲು ಕಷ್ಟವಾಗುತ್ತಿತ್ತು. ಅವರಿಬ್ಬರ ಕೃಪೆಯು ಯಾರ ಮೇಲಿತ್ತೋ ಅವರೇ ಆ ದೇವರಿಬ್ಬರನ್ನೂ ನೋಡಬಹುದಾಗಿತ್ತು. 

12321013a ನೂನಂ ತಯೋರನುಮತೇ ಹೃದಿ ಹೃಚ್ಚಯಚೋದಿತಃ|

12321013c ಮಹಾಮೇರೋರ್ಗಿರೇಃ ಶೃಂಗಾತ್ಪ್ರಚ್ಯುತೋ ಗಂಧಮಾದನಮ್||

ನಿಶ್ಚಯವಾಗಿಯೂ ಅವರಿಬ್ಬರ ಇಚ್ಛಾನುಸಾರವಾಗಿ ತನ್ನ ಹೃದಯದಲ್ಲಿನ ಅಂತರ್ಯಾಮಿಯ ಪ್ರೇರಣೆಯಿಂದ ನಾರದನು ಮಹಾ ಮೇರುಗಿರಿಯ ಶೃಂಗದಿಂದ ಗಂಧಮಾದನ ಪರ್ವತದ ಮೇಲಿ ಇಳಿದು ಬಂದನು.

12321014a ನಾರದಃ ಸುಮಹದ್ಭೂತಂ ಲೋಕಾನ್ಸರ್ವಾನಚೀಚರತ್|

12321014c ತಂ ದೇಶಮಗಮದ್ರಾಜನ್ಬದರ್ಯಾಶ್ರಮಮಾಶುಗಃ||

ರಾಜನ್! ಶೀಘ್ರವಾಗಿ ಸಂಚರಿಸಬಲ್ಲ ನಾರದನು ಸರ್ವ ಲೋಕಗಳನ್ನೂ ಸಂಚರಿಸುತ್ತಾ ಮಹಾಭೂತಗಳಿಂದ ಆ ಬದರಿಕಾಶ್ರಮ ಪ್ರದೇಶಕ್ಕೆ ಆಗಮಿಸಿದನು.

12321015a ತಯೋರಾಹ್ನಿಕವೇಲಾಯಾಂ ತಸ್ಯ ಕೌತೂಹಲಂ ತ್ವಭೂತ್|

12321015c ಇದಂ ತದಾಸ್ಪದಂ ಕೃತ್ಸ್ನಂ ಯಸ್ಮಿಽಲ್ಲೋಕಾಃ ಪ್ರತಿಷ್ಠಿತಾಃ||

12321016a ಸದೇವಾಸುರಗಂಧರ್ವಾಃ ಸರ್ಷಿಕಿಂನರಲೇಲಿಹಾಃ|

ಅವರ ಆಹ್ನೀಕವೇಳೆಯು ಹೇಗಿರಬಹುದೆಂಬ ಕುತೂಹಲವು ಅವನಲ್ಲಿತ್ತು. “ನಿಜವಾಗಿಯು ಇದು ಭಗವಂತನ ಸ್ಥಾನವೇ ಆಗಿದೆ. ದೇವಾಸುರಗಂಧರ್ವ ಋಷಿ-ಕಿನ್ನರ-ಉರಗಗಳ ಲೋಕಗಳೆಲ್ಲವೂ ಇಲ್ಲಿಯೇ ಪ್ರತಿಷ್ಠಿತಗೊಂಡಿವೆ!

12321016c ಏಕಾ ಮೂರ್ತಿರಿಯಂ ಪೂರ್ವಂ ಜಾತಾ ಭೂಯಶ್ಚತುರ್ವಿಧಾ||

12321017a ಧರ್ಮಸ್ಯ ಕುಲಸಂತಾನೋ ಮಹಾನೇಭಿರ್ವಿವರ್ಧಿತಃ|

12321017c ಅಹೋ ಹ್ಯನುಗೃಹೀತೋಽದ್ಯ ಧರ್ಮ ಏಭಿಃ ಸುರೈರಿಹ|

12321017e ನರನಾರಾಯಣಾಭ್ಯಾಂ ಚ ಕೃಷ್ಣೇನ ಹರಿಣಾ ತಥಾ||

ಇವನು ಮೊದಲು ಒಂದೇ ರೂಪದಲ್ಲಿದ್ದವನು. ಧರ್ಮನ ಕುಲಸಂತಾನವನ್ನು ವಿಸ್ತರಿಸಲು ಅವನೇ ನಾಲ್ಕು ರೂಪಗಳನ್ನು ತಾಳಿದನು. ನಿಜವಾಗಿಯೂ ಇಂದು ಧರ್ಮನು ದೇವತಾಸ್ವರೂಪರಾದ ನರನಾರಾಯಣರಿಂದಲು, ಕೃಷ್ಣನಿಂದಲೂ ಮತ್ತು ಹಾಗೆಯೇ ಹರಿಯಿಂದಲೂ ಅನುಗೃಹೀತನಾಗಿದ್ದಾನೆ!  

12321018a ತತ್ರ ಕೃಷ್ಣೋ ಹರಿಶ್ಚೈವ ಕಸ್ಮಿಂಶ್ಚಿತ್ಕಾರಣಾಂತರೇ|

12321018c ಸ್ಥಿತೌ ಧರ್ಮೋತ್ತರೌ ಹ್ಯೇತೌ ತಥಾ ತಪಸಿ ಧಿಷ್ಠಿತೌ||

ಯಾವುದೋ ಒಂದು ಕಾರಣಾಂತರದಿಂದ ಕೃಷ್ಣ ಮತ್ತು ಹರಿ ಇಬ್ಬರೂ ಧರ್ಮನ ಮಕ್ಕಳಾಗಿ ತಪಸ್ಸಿನಲ್ಲಿ ನಿರತರಾಗಿದ್ದಾರೆ!

12321019a ಏತೌ ಹಿ ಪರಮಂ ಧಾಮ ಕಾನಯೋರಾಹ್ನಿಕಕ್ರಿಯಾ|

12321019c ಪಿತರೌ ಸರ್ವಭೂತಾನಾಂ ದೈವತಂ ಚ ಯಶಸ್ವಿನೌ|

12321019e ಕಾಂ ದೇವತಾಂ ನು ಯಜತಃ ಪಿತೃನ್ವಾ ಕಾನ್ಮಹಾಮತೀ||

ಪರಮಧಾಮಗಲಾಗಿರುವ ಇವರಿಬ್ಬರ ಆಹ್ನಿಕಕ್ರಿಯೆಗಳು ಹೇಗಿರಬಹುದು? ಈ ಯಶಸ್ವಿಗಳು ಇಬ್ಬರು ಸರ್ವಭೂತಗಳ ಪಿತರರು. ದೇವತೆಗಳು. ಇವರು ಯಾವ ದೇವತೆಗಳನ್ನು ಯಜಿಸುತ್ತಾರೆ? ಈ ಮಹಾಮತಿಗಳು ಯಾವ ಪಿತೃಗಳನ್ನು ಯಜಿಸುತ್ತಾರೆ?”

12321020a ಇತಿ ಸಂಚಿಂತ್ಯ ಮನಸಾ ಭಕ್ತ್ಯಾ ನಾರಾಯಣಸ್ಯ ಹ|

12321020c ಸಹಸಾ ಪ್ರಾದುರಭವತ್ಸಮೀಪೇ ದೇವಯೋಸ್ತದಾ||

ಹೀಗೆ ಮನಸ್ಸಿನಲ್ಲಿಯೇ ಭಕ್ತಿಯಿಂದ ನಾರಾಯಣನ ಕುರಿತು ಯೋಚಿಸಿ ಕೂಡಲೇ ಆ ದೇವತೆಗಳ ಸಮೀಪದಲ್ಲಿ ಕಾಣಿಸಿಕೊಂಡನು.  

12321021a ಕೃತೇ ದೈವೇ ಚ ಪಿತ್ರ್ಯೇ ಚ ತತಸ್ತಾಭ್ಯಾಂ ನಿರೀಕ್ಷಿತಃ|

12321021c ಪೂಜಿತಶ್ಚೈವ ವಿಧಿನಾ ಯಥಾಪ್ರೋಕ್ತೇನ ಶಾಸ್ತ್ರತಃ||

ದೇವ-ಪಿತೃಕಾರ್ಯಗಳನ್ನು ಪೂರೈಸುತ್ತಲೇ ಅವರು ಅವನನ್ನು ನೋಡಿದರು. ಅವನನ್ನು ಶಾಸ್ತ್ರಗಳಲ್ಲಿ ಹೇಳಿದ ವಿಧಿಗಳಂತೆ ಪೂಜಿಸಿದರು ಕೂಡ.

12321022a ತಂ ದೃಷ್ಟ್ವಾ ಮಹದಾಶ್ಚರ್ಯಮಪೂರ್ವಂ ವಿಧಿವಿಸ್ತರಮ್|

12321022c ಉಪೋಪವಿಷ್ಟಃ ಸುಪ್ರೀತೋ ನಾರದೋ ಭಗವಾನೃಷಿಃ||

ಹಿಂದೆಂದೂ ಆಗಿರದ ಆ ಆಶ್ಚರ್ಯಕರ ವಿಸ್ತಾರ ವಿಧಿಯನ್ನು ಕಂಡು ಸುಪ್ರೀತನಾದ ನಾರದನು ಅವರ ಬಳಿ ಕುಳಿತುಕೊಂಡನು.

12321023a ನಾರಾಯಣಂ ಸಂನಿರೀಕ್ಷ್ಯ ಪ್ರಸನ್ನೇನಾಂತರಾತ್ಮನಾ|

12321023c ನಮಸ್ಕೃತ್ವಾ ಮಹಾದೇವಮಿದಂ ವಚನಮಬ್ರವೀತ್||

ನಾರಾಯಣನನ್ನು ನೋಡಿ ಅಂತರಾತ್ಮನಲ್ಲಿಯೇ ಪ್ರಸನ್ನನಾಗಿ ನಮಸ್ಕರಿಗೆ ನಾರದನು ಆ ಮಹಾದೇವನಿಗೆ ಇಂತೆಂದನು.

12321024a ವೇದೇಷು ಸಪುರಾಣೇಷು ಸಾಂಗೋಪಾಂಗೇಷು ಗೀಯಸೇ|

12321024c ತ್ವಮಜಃ ಶಾಶ್ವತೋ ಧಾತಾ ಮತೋಽಮೃತಮನುತ್ತಮಮ್|

ನೀನು ಹುಟ್ಟಿಲ್ಲದವನು, ಶಾಶ್ವತ, ಧಾತಾ, ಮತ್ತು ಅನುತ್ತಮ ಅಮೃತನೆಂದು ಸಾಂಗೋಪಾಂಗವಾಗಿ ವೇದಗಳಲ್ಲಿ ಪುರಾಣಗಳಲ್ಲಿ ಹಾಡಲಾಗಿದೆ.  

12321024e ಪ್ರತಿಷ್ಠಿತಂ ಭೂತಭವ್ಯಂ ತ್ವಯಿ ಸರ್ವಮಿದಂ ಜಗತ್||

12321025a ಚತ್ವಾರೋ ಹ್ಯಾಶ್ರಮಾ ದೇವ ಸರ್ವೇ ಗಾರ್ಹಸ್ಥ್ಯಮೂಲಕಾಃ|

12321025c ಯಜಂತೇ ತ್ವಾಮಹರಹರ್ನಾನಾಮೂರ್ತಿಸಮಾಸ್ಥಿತಮ್||

ಹಿಂದಿನ, ಇಂದಿನ ಮತ್ತು ಮುಂದಿನ ಸರ್ವ ಜಗತ್ತುಗಳೂ ನಿನ್ನಲ್ಲಿಯೇ ಪ್ರತಿಷ್ಠಿತಗೊಂಡಿವೆ. ಗ್ರಹಸ್ತಾಶ್ರಮದಿಂದ ಹಿಡಿದು ನಾಲ್ಕೂ ಆಶ್ರಮಗಳೂ ನಾನಾ ರೂಪಗಳಲ್ಲಿರುವ ನಿನ್ನನ್ನೇ ದೇವನೆಂದು ಪೂಜಿಸುತ್ತವೆ.

12321026a ಪಿತಾ ಮಾತಾ ಚ ಸರ್ವಸ್ಯ ಜಗತಃ ಶಾಶ್ವತೋ ಗುರುಃ|

12321026c ಕಂ ತ್ವದ್ಯ ಯಜಸೇ ದೇವಂ ಪಿತರಂ ಕಂ ನ ವಿದ್ಮಹೇ||

ಸರ್ವ ಜಗತ್ತುಗಳ ಮಾತಾಪಿತನಾಗಿರುವ ಮತ್ತು ಶಾಶ್ವತ ಗುರುವಾಗಿರುವ ನೀನು ಇಂದು ಯಾರನ್ನು ದೇವ ಮತ್ತು ಪಿತೃವೆಂದು ಪೂಜಿಸುತ್ತೀಯೋ ನನಗೆ ತಿಳಿಯದಾಗಿದೆ!”

12321027 ಶ್ರೀಭಗವಾನುವಾಚ|

12321027a ಅವಾಚ್ಯಮೇತದ್ವಕ್ತವ್ಯಮಾತ್ಮಗುಹ್ಯಂ ಸನಾತನಮ್|

12321027c ತವ ಭಕ್ತಿಮತೋ ಬ್ರಹ್ಮನ್ವಕ್ಷ್ಯಾಮಿ ತು ಯಥಾತಥಮ್||

ಶ್ರೀಭಗವಾನನು ಹೇಳಿದನು: “ಬ್ರಹ್ಮನ್! ಇದನ್ನು ಹೇಳಬಾರದು. ಆದರೂ ಅತ್ಯಂತ ಭಕ್ತಿಯಿರುವ ನಿನಗೆ ಈ ಸನಾತನ ಆತ್ಮರಹಸ್ಯವನ್ನು ಇದ್ದದ್ದನ್ನು ಇದ್ದಹಾಗೆ ಹೇಳುತ್ತೇನೆ.

12321028a ಯತ್ತತ್ಸೂಕ್ಷ್ಮಮವಿಜ್ಞೇಯಮವ್ಯಕ್ತಮಚಲಂ ಧ್ರುವಮ್|

12321028c ಇಂದ್ರಿಯೈರಿಂದ್ರಿಯಾರ್ಥೈಶ್ಚ ಸರ್ವಭೂತೈಶ್ಚ ವರ್ಜಿತಮ್||

12321029a ಸ ಹ್ಯಂತರಾತ್ಮಾ ಭೂತಾನಾಂ ಕ್ಷೇತ್ರಜ್ಞಶ್ಚೇತಿ ಕಥ್ಯತೇ|

12321029c ತ್ರಿಗುಣವ್ಯತಿರಿಕ್ತೋಽಸೌ ಪುರುಷಶ್ಚೇತಿ ಕಲ್ಪಿತಃ|

12321029e ತಸ್ಮಾದವ್ಯಕ್ತಮುತ್ಪನ್ನಂ ತ್ರಿಗುಣಂ ದ್ವಿಜಸತ್ತಮ||

12321030a ಅವ್ಯಕ್ತಾ ವ್ಯಕ್ತಭಾವಸ್ಥಾ ಯಾ ಸಾ ಪ್ರಕೃತಿರವ್ಯಯಾ|

ದ್ವಿಜಸತ್ತಮ1 ಸೂಕ್ಷ್ಮವಾಗಿರುವ, ಅವಿಜ್ಞೇಯವಾಗಿರುವ, ಅಚಲವೂ, ಧೃವವೂ ಆಗಿರುವ, ಇಂದ್ರಿಯಗಳಿಂದ ಮತ್ತು ಅವುಗಳ ಅರ್ಥಗಳಿಂದಲೂ ಸರ್ವಭೂತಗಳಿಗೂ ವರ್ಜಿತವಾಗಿರುವ ಅದೇ ಎಲ್ಲ ಭೂತಗಳ ಅಂತರಾತ್ಮವು. ಅದನ್ನು ಕ್ಷೇತ್ರಜ್ಞನೆಂದೂ, ತ್ರಿಗುಣಗಳಿಂದ ಅತಿರಿಕ್ತನಾದ ಪುರುಷನೆಂದೂ ಹೇಳುತ್ತಾರೆ. ಆ ಅವ್ಯಕ್ತದಿಂದ ತ್ರಿಗುಣವು ಉತ್ಪತ್ತಿಯಾಯಿತು. ಅವ್ಯಕ್ತವೇ ವ್ಯಕ್ತಭಾವವನ್ನು ಹೊಂದಿದಾಗ ಅವ್ಯಯ ಪ್ರಕೃತಿ ಎನಿಸಿಕೊಳ್ಳುತ್ತದೆ.

12321030c ತಾಂ ಯೋನಿಮಾವಯೋರ್ವಿದ್ಧಿ ಯೋಽಸೌ ಸದಸದಾತ್ಮಕಃ|

12321030e ಆವಾಭ್ಯಾಂ ಪೂಜ್ಯತೇಽಸೌ ಹಿ ದೈವೇ ಪಿತ್ರ್ಯೇ ಚ ಕಲ್ಪಿತೇ||

ಸದಾಸದಾತ್ಮಕನಾದ ಅವನೇ ನಮ್ಮೀರ್ವರ ಯೋನಿಯೆಂದು ತಿಳಿ. ನಾವಿಬ್ಬರೂ ಅವನನ್ನೇ ಪೂಜಿಸುತ್ತೇವೆ. ಅವನನ್ನೇ ನಾವು ನಮ್ಮ ದೇವತೆ ಮತ್ತು ಪಿತೃವೆಂದು ಕಲ್ಪಿಸಿಕೊಳ್ಳುತ್ತೇವೆ.

12321031a ನಾಸ್ತಿ ತಸ್ಮಾತ್ಪರೋಽನ್ಯೋ ಹಿ ಪಿತಾ ದೇವೋಽಥ ವಾ ದ್ವಿಜಃ|

12321031c ಆತ್ಮಾ ಹಿ ನೌ ಸ ವಿಜ್ಞೇಯಸ್ತತಸ್ತಂ ಪೂಜಯಾವಹೇ||

ದ್ವಿಜ! ಅವನಿಗಿಂತಲೂ ಶ್ರೇಷ್ಠನಾದ ದೇವತೆಯಾಗಲೀ ಪಿತೃವಾಗಲೀ ಬೇರೆ ಯಾರೂ ಇಲ್ಲ. ಅವನೇ ನಮ್ಮೆಲ್ಲರ ಆತ್ಮಸ್ವರೂಪನಾಗಿದ್ದಾನೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಆದುದರಿಂದ ಅವನನ್ನೇ ನಾವು ನಿತ್ಯವೂ ಪೂಜಿಸುತ್ತೇವೆ.

12321032a ತೇನೈಷಾ ಪ್ರಥಿತಾ ಬ್ರಹ್ಮನ್ಮರ್ಯಾದಾ ಲೋಕಭಾವಿನೀ|

12321032c ದೈವಂ ಪಿತ್ರ್ಯಂ ಚ ಕರ್ತವ್ಯಮಿತಿ ತಸ್ಯಾನುಶಾಸನಮ್||

ಲೋಕದ ಉನ್ನತಿಯ ಮರ್ಯಾದೆಯನ್ನು ಅವನೇ ಸ್ಥಾಪಿಸಿದ್ದಾನೆ. ದೈವ ಮತ್ತು ಪಿತೃ ಕರ್ಮಗಳನ್ನು ಮಾಡಬೇಕೆಂಬುದು ಅವನ ಅನುಶಾಸನವೇ ಆಗಿದೆ.

12321033a ಬ್ರಹ್ಮಾ ಸ್ಥಾಣುರ್ಮನುರ್ದಕ್ಷೋ ಭೃಗುರ್ಧರ್ಮಸ್ತಪೋ ದಮಃ|

12321033c ಮರೀಚಿರಂಗಿರಾತ್ರಿಶ್ಚ ಪುಲಸ್ತ್ಯಃ ಪುಲಹಃ ಕ್ರತುಃ||

12321034a ವಸಿಷ್ಠಃ ಪರಮೇಷ್ಠೀ ಚ ವಿವಸ್ವಾನ್ಸೋಮ ಏವ ಚ|

12321034c ಕರ್ದಮಶ್ಚಾಪಿ ಯಃ ಪ್ರೋಕ್ತಃ ಕ್ರೋಧೋ ವಿಕ್ರೀತ ಏವ ಚ||

12321035a ಏಕವಿಂಶತಿರುತ್ಪನ್ನಾಸ್ತೇ ಪ್ರಜಾಪತಯಃ ಸ್ಮೃತಾಃ|

12321035c ತಸ್ಯ ದೇವಸ್ಯ ಮರ್ಯಾದಾಂ ಪೂಜಯಂತಿ ಸನಾತನೀಮ್||

ಬ್ರಹ್ಮ, ಸ್ಥಾಣು, ಮನು, ದಕ್ಷ, ಭೃಗು, ಧರ್ಮ, ತಪಸ್ಸು, ದಮ, ಮರೀಚಿ, ಅಂಗಿರಸ, ಅತ್ರಿ, ಪುಲಸ್ತ್ಯ, ಪುಲಹ, ಕ?ರತು, ವಸಿಷ್ಠ, ಪರಮೇಷ್ಠೀ, ವಿವಸ್ವಾನ್, ಸೋಮ, ಕರ್ದಮ, ಕ್ರೋಧ, ವಿಕ್ರೀತ – ಈ ಇಪ್ಪತ್ತೊಂಡು ಪ್ರಜಾಪತಿಗಳು ಅವನಿಂದಲೇ ಹುಟ್ಟಿದರೆಂಬ ಸ್ಮೃತಿಯಿದೆ. ಅವರು ಆ ದೇವನ ಸನಾತನ ಮರ್ಯಾದೆಯನ್ನು ಗೌರವಿಸುತ್ತಾರೆ.

12321036a ದೈವಂ ಪಿತ್ರ್ಯಂ ಚ ಸತತಂ ತಸ್ಯ ವಿಜ್ಞಾಯ ತತ್ತ್ವತಃ|

12321036c ಆತ್ಮಪ್ರಾಪ್ತಾನಿ ಚ ತತೋ ಜಾನಂತಿ[3] ದ್ವಿಜಸತ್ತಮಾಃ||

ದ್ವಿಜಸತ್ತಮರು ದೈವ ಮತ್ತು ಪಿತೃಕಾರ್ಯಗಳನ್ನು ತತ್ತ್ವತಃ ತಿಳಿದುಕೊಂಡು ಆತ್ಮ ಪ್ರಾಪ್ತಿಯನ್ನು ತಿಳಿದಿರುತ್ತಾರೆ.

12321037a ಸ್ವರ್ಗಸ್ಥಾ ಅಪಿ ಯೇ ಕೇ ಚಿತ್ತಂ ನಮಸ್ಯಂತಿ ದೇಹಿನಃ|

12321037c ತೇ ತತ್ಪ್ರಸಾದಾದ್ಗಚ್ಚಂತಿ ತೇನಾದಿಷ್ಟಫಲಾಂ ಗತಿಮ್||

ಸ್ವರ್ಗದಲ್ಲಿರುವ ದೇಹಿಗಳಲ್ಲಿ ಕೆಲವರು ಕೂಡಾ ಅವನನ್ನು ನಮಸ್ಕರಿಸುತ್ತಾರೆ. ಅವನ ಪ್ರಸಾದದಿಂದ ಸ್ವರ್ಗಕ್ಕಿಂತಲೂ ಹೆಚ್ಚು ಇಷ್ಟಫಲವನ್ನು ನೀಡುವ ಗತಿಯನ್ನು ಹೊಂದುತ್ತಾರೆ.

12321038a ಯೇ ಹೀನಾಃ ಸಪ್ತದಶಭಿರ್ಗುಣೈಃ ಕರ್ಮಭಿರೇವ ಚ|

12321038c ಕಲಾಃ ಪಂಚದಶ ತ್ಯಕ್ತ್ವಾ ತೇ ಮುಕ್ತಾ ಇತಿ ನಿಶ್ಚಯಃ||

ಹದಿನೈದು ಕಲೆಗಳನ್ನೂ ಪರಿತ್ಯಜಿಸಿ ಹದಿನೇಳು ಗುಣಗಳಿಂದಲೂ[4] ಕರ್ಮಗಳಿಂದಲೂ ಹೀನರಾಗಿರುವವರು ಮುಕ್ತರೇ ಸರಿ. ಇದು ನಿಶ್ಚಯ.

12321039a ಮುಕ್ತಾನಾಂ ತು ಗತಿರ್ಬ್ರಹ್ಮನ್ ಕ್ಷೇತ್ರಜ್ಞ ಇತಿ ಕಲ್ಪಿತಃ|

12321039c ಸ ಹಿ ಸರ್ವಗತಶ್ಚೈವ[5] ನಿರ್ಗುಣಶ್ಚೈವ ಕಥ್ಯತೇ||

ಬ್ರಹ್ಮನ್! ಮುಕ್ತರಾದವರಿಗೆ ಕ್ಷೇತ್ರಜ್ಞನೇ ಗತಿಯೆಂದು ಕಲ್ಪಿತವಾಗಿದೆ. ಅವನನ್ನು ಸರ್ವರ ಗತಿಯೆಂದೂ ನಿರ್ಗುಣನೆಂದೂ ಕರೆಯುತ್ತಾರೆ.

12321040a ದೃಶ್ಯತೇ ಜ್ಞಾನಯೋಗೇನ ಆವಾಂ ಚ ಪ್ರಸೃತೌ ತತಃ|

12321040c ಏವಂ ಜ್ಞಾತ್ವಾ ತಮಾತ್ಮಾನಂ ಪೂಜಯಾವಃ ಸನಾತನಮ್||

ಜ್ಞಾನಯೋಗದಿಂದ ಅವನನ್ನು ಕಾಣಬಹುದು. ನಾವಿಬ್ಬರೂ ಅವನಿಂದ ಹೊರಬಂದಿದ್ದೇವೆ. ಇದನ್ನು ತಿಳಿದುಕೊಂಡು ನಾವು ಆ ಸನಾತನ ಆತ್ಮನನ್ನು ಪೂಜಿಸುತ್ತೇವೆ.

12321041a ತಂ ವೇದಾಶ್ಚಾಶ್ರಮಾಶ್ಚೈವ ನಾನಾತನುಸಮಾಸ್ಥಿತಾಃ[6]|

12321041c ಭಕ್ತ್ಯಾ ಸಂಪೂಜಯಂತ್ಯಾದ್ಯಂ ಗತಿಂ ಚೈಷಾಂ ದದಾತಿ ಸಃ||

ಅವನನ್ನು ವೇದಗಳು, ಆಶ್ರಮಗಳು, ಮತ್ತು ನಾನಾ ಶರೀರಗಳಲ್ಲಿರುವವರು ಭಕ್ತಿಯಿಂದ ಪೂಜಿಸುತ್ತಾರೆ. ಅವನು ಅವುಗಳಿಗೆ ಸದ್ಯದಲ್ಲಿಯೇ ಉತ್ತಮ ಗತಿಯನ್ನೂ ದಯಪಾಲಿಸುತ್ತಾನೆ.

12321042a ಯೇ ತು ತದ್ಭಾವಿತಾ ಲೋಕೇ ಏಕಾಂತಿತ್ವಂ ಸಮಾಸ್ಥಿತಾಃ|

12321042c ಏತದಭ್ಯಧಿಕಂ ತೇಷಾಂ ಯತ್ತೇ ತಂ ಪ್ರವಿಶಂತ್ಯುತ||

ಲೋಕದಲ್ಲಿ ಯಾರು ಏಕಾಂತಿತ್ತ್ವದಲ್ಲಿ ಇದ್ದುಕೊಂಡು ಅವನ ಸ್ಮರಣೆಯನ್ನು ಮಾಡುವರೋ ಅವರು ಅವನನ್ನು ಪ್ರವೇಶಿಸಿ ಅತ್ಯಧಿಕ ಲಾಭವನ್ನು ಪಡೆದುಕೊಳ್ಳುತ್ತಾರೆ.

12321043a ಇತಿ ಗುಹ್ಯಸಮುದ್ದೇಶಸ್ತವ ನಾರದ ಕೀರ್ತಿತಃ|

12321043c ಭಕ್ತ್ಯಾ ಪ್ರೇಮ್ಣಾ ಚ ವಿಪ್ರರ್ಷೇ ಅಸ್ಮದ್ಭಕ್ತ್ಯಾ ಚ ತೇ ಶ್ರುತಃ||

ನಾರದ! ವಿಪ್ರರ್ಷೇ! ಅವನ ಮೇಲಿರುವ ನಿನ್ನ ಭಕ್ತಿಯಿಂದ ಮತ್ತು ನಮ್ಮನ್ನೂ ಭಕ್ತಿ-ಪ್ರೇಮಗಳಿಂದ ಕೇಳಿದ್ದುದರಿಂದ ಅತ್ಯಂತ ರಹಸ್ಯವಾದ ಈ ವಿಷಯವನ್ನು ಹೇಳಿದ್ದೇನೆ.””

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಏಕವಿಂಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಮುನ್ನೂರಾಇಪ್ಪತ್ತೊಂದನೇ ಅಧ್ಯಾಯವು.

Blooming Beautiful Pink Flower Isolated On White Background Stock ...

[1] ಕೃಷ್ಣಃ ಸ್ವಯಂಭುವಃ ಎಂಬ ಪಾಠಾಂತರವಿದೆ.

[2] ಅಷ್ಟಚಕ್ರಯುಕ್ತ ಈ ರಥವು ಶ್ರೀ ಅಷ್ಟಾಕ್ಷರ ಮಂತ್ರದ ಪ್ರತೀಕವೆಂದು ಹೇಳುತ್ತಾರೆ. ಕಲ್ಯಾಣಮಾವಹತು ಕಾರ್ತಯುಗಂ ಸ್ವಧರ್ಮಂ| ಪ್ರಖ್ಯಾಪಯನ್ ಪ್ರಣಿಹಿತೇಷು ನರಾಧಿಕೇಷು| ಆದ್ಯಂ ಕಮಪ್ಯಧಿಗತೋ ರಥಮಷ್ಟಚಕ್ರಂ| ಬಿಂಧುಸ್ಸತಾಂ ಬದರಿಕಾಶ್ರಮತಾಪಸೋ ನಃ|| - ನಿಗಮಾಂತಮಹಾದೇಶಿಕರ ರಹಸ್ಯತ್ರಯಸಾರ.

[3] ತತಃ ಪ್ರಾಪ್ನುವಂತಿ ಎಂಬ ಪಾಠಾಂತರವಿದೆ (ಭಾರತ ದರ್ಶನ).

[4] ಗುಣಗಳ ಮತ್ತು ಕಲೆಗಳ ವರ್ಣನೆಯು ಹಿಂದೆ ಜನಕ-ಸುಲಭಾ ಸಂವಾದದಲ್ಲಿ ಬಂದಿದೆ.

[5] ಸರ್ವಗುಣಶ್ಚೈವ ಎಂಬ ಪಾಠಾಂತರವಿದೆ (ಭಾರತ ದರ್ಶನ).

[6] ನಾನಾಮತಸಮಾಸ್ಥಿತಾಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

 

Comments are closed.