ಶಲ್ಯಪರ್ವ: ಗದಾಯುದ್ಧ ಪರ್ವ
೬೩
ದುರ್ಯೋಧನನ ವಿಲಾಪ (೧-೪೩).
09063001 ಧೃತರಾಷ್ಟ್ರ ಉವಾಚ
09063001a ಅಧಿಷ್ಠಿತಃ ಪದಾ ಮೂರ್ಧ್ನಿ ಭಗ್ನಸಕ್ಥೋ ಮಹೀಂ ಗತಃ|
09063001c ಶೌಟೀರಮಾನೀ ಪುತ್ರೋ ಮೇ ಕಾನ್ಯಭಾಷತ ಸಂಜಯ||
ಧೃತರಾಷ್ಟ್ರನು ಹೇಳಿದನು: “ಸಂಜಯ! ತೊಡೆಗಳನ್ನು ಮುರಿಸಿಕೊಂಡು, ನೆತ್ತಿಯಮೇಲೆ ಕಾಲುಗಳಿಂದ ತುಳಿಸಿಕೊಂಡ ತನ್ನ ಬಲದ ಕುರಿತು ತುಂಬಾ ಅಭಿಮಾನಿಯಾಗಿದ್ದ ನನ್ನ ಮಗನು ಏನು ಹೇಳಿದನು?
09063002a ಅತ್ಯರ್ಥಂ ಕೋಪನೋ ರಾಜಾ ಜಾತವೈರಶ್ಚ ಪಾಂಡುಷು|
09063002c ವ್ಯಸನಂ ಪರಮಂ ಪ್ರಾಪ್ತಃ ಕಿಮಾಹ ಪರಮಾಹವೇ||
ಅತ್ಯಂತ ಕೋಪಿಷ್ಟನಾಗಿದ್ದ, ಪಾಂಡವರ ಬದ್ಧವೈರಿಯಾಗಿದ್ದ ಆ ರಾಜನು ಪರಮಯುದ್ಧದಲ್ಲಿ ಆ ಪರಮ ವ್ಯಸನವನ್ನು ಹೊಂದಿ ಏನು ಹೇಳಿದನು?”
09063003 ಸಂಜಯ ಉವಾಚ
09063003a ಶೃಣು ರಾಜನ್ಪ್ರವಕ್ಷ್ಯಾಮಿ ಯಥಾವೃತ್ತಂ ನರಾಧಿಪ|
09063003c ರಾಜ್ಞಾ ಯದುಕ್ತಂ ಭಗ್ನೇನ ತಸ್ಮಿನ್ವ್ಯಸನ ಆಗತೇ||
ಸಂಜಯನು ಹೇಳಿದನು: “ರಾಜನ್! ನರಾಧಿಪ! ಆ ವ್ಯಸನವು ಪ್ರಾಪ್ತವಾಗಲು ಭಗ್ನೋರುವಾಗಿದ್ದ ರಾಜನು ಏನು ಹೇಳಿದನೆನ್ನುವುದನ್ನು ಯಥಾವತ್ತಾಗಿ ಹೇಳುತ್ತೇನೆ. ಕೇಳು!
09063004a ಭಗ್ನಸಕ್ಥೋ ನೃಪೋ ರಾಜನ್ಪಾಂಸುನಾ ಸೋಽವಗುಂಠಿತಃ|
09063004c ಯಮಯನ್ಮೂರ್ಧಜಾಂಸ್ತತ್ರ ವೀಕ್ಷ್ಯ ಚೈವ ದಿಶೋ ದಶ||
ರಾಜನ್! ಭಗ್ನೋರು ದುರ್ಯೋಧನನು ಕೆಳಗೆ ಬಿದ್ದಕೂಡಲೇ ಧೂಳಿನಿಂದ ಮುಚ್ಚಿಹೋದನು. ಕೆದರಿ ಹೋಗಿದ್ದ ತಲೆಗೂದಲನ್ನು ಕಟ್ಟಿಕೊಳ್ಳುತ್ತಾ ಅವನು ಹತ್ತು ದಿಕ್ಕುಗಳನ್ನೂ ನೋಡಿದನು.
09063005a ಕೇಶಾನ್ನಿಯಮ್ಯ ಯತ್ನೇನ ನಿಃಶ್ವಸನ್ನುರಗೋ ಯಥಾ|
09063005c ಸಂರಂಭಾಶ್ರುಪರೀತಾಭ್ಯಾಂ ನೇತ್ರಾಭ್ಯಾಮಭಿವೀಕ್ಷ್ಯ ಮಾಂ||
ಕಷ್ಟದಿಂದ ತಲೆಗೂದಲನ್ನು ಕಟ್ಟಿಕೊಂಡು ಹಾವಿನಂತೆ ಭುಸುಗುಟ್ಟುತ್ತಾ ಕೋಪದಿಂದ ಕೆಂಪಾದ ಮತ್ತು ಕಂಬನಿದುಂಬಿದ ಕಣ್ಣುಗಳಿಂದ ನನ್ನ ಕಡೆ ನೋಡಿದನು.
09063006a ಬಾಹೂ ಧರಣ್ಯಾಂ ನಿಷ್ಪಿಷ್ಯ ಮುಹುರ್ಮತ್ತ ಇವ ದ್ವಿಪಃ|
09063006c ಪ್ರಕೀರ್ಣಾನ್ಮೂರ್ಧಜಾನ್ಧುನ್ವನ್ದಂತೈರ್ದಂತಾನುಪಸ್ಪೃಶನ್|
09063006e ಗರ್ಹಯನ್ಪಾಂಡವಂ ಜ್ಯೇಷ್ಠಂ ನಿಃಶ್ವಸ್ಯೇದಮಥಾಬ್ರವೀತ್||
ಮದೋನ್ಮತ್ತ ಆನೆಯಂತೆ ತನ್ನೆರಡು ಕೈಗಳನ್ನೂ ನೆಲದ ಮೇಲೆ ಬಡಿಯುತ್ತಾ ಚದುರಿಹೋಗಿದ್ದ ತಲೆಗೂದಲನ್ನು ಅಲ್ಲಾಡಿಸುತ್ತಾ, ಹಲ್ಲುಗಳನ್ನು ಕಟಕಟನೆ ಕಡಿಯುತ್ತಾ, ನಿಟ್ಟುಸಿರು ಬಿಡುತ್ತಾ ಪಾಂಡವ ಜ್ಯೇಷ್ಠನನ್ನು ನಿಂದಿಸುತ್ತಾ ನನಗೆ ಹೇಳಿದನು:
09063007a ಭೀಷ್ಮೇ ಶಾಂತನವೇ ನಾಥೇ ಕರ್ಣೇ ಚಾಸ್ತ್ರಭೃತಾಂ ವರೇ|
09063007c ಗೌತಮೇ ಶಕುನೌ ಚಾಪಿ ದ್ರೋಣೇ ಚಾಸ್ತ್ರಭೃತಾಂ ವರೇ||
09063008a ಅಶ್ವತ್ಥಾಮ್ನಿ ತಥಾ ಶಲ್ಯೇ ಶೂರೇ ಚ ಕೃತವರ್ಮಣಿ|
09063008c ಇಮಾಮವಸ್ಥಾಂ ಪ್ರಾಪ್ತೋಽಸ್ಮಿ ಕಾಲೋ ಹಿ ದುರತಿಕ್ರಮಃ||
ಅಸ್ತ್ರಧಾರಿಗಳಲ್ಲಿ ಶ್ರೇಷ್ಠ ಭೀಷ್ಮ ಶಾಂತನವ, ಗೌತಮ, ಶಕುನಿ, ಅಸ್ತ್ರಭೃತರಲ್ಲಿ ಶ್ರೇಷ್ಠ ದ್ರೋಣ, ಅಶ್ವತ್ಥಾಮ, ಶಲ್ಯ, ಶೂರ ಕೃತವರ್ಮ ಇವರುಗಳ ರಕ್ಷಣೆಯಲ್ಲಿದ್ದ ನಾನೇ ಈ ಅವಸ್ಥೆಯನ್ನು ಹೊಂದಿದ್ದೇನೆ! ಕಾಲವನ್ನು ಅತಿಕ್ರಮಿಸುವುದು ಕಷ್ಟ!
09063009a ಏಕಾದಶಚಮೂಭರ್ತಾ ಸೋಽಹಮೇತಾಂ ದಶಾಂ ಗತಃ|
09063009c ಕಾಲಂ ಪ್ರಾಪ್ಯ ಮಹಾಬಾಹೋ ನ ಕಶ್ಚಿದತಿವರ್ತತೇ||
ಮಹಾಬಾಹೋ! ಹನ್ನೊಂದು ಅಕ್ಷೋಹಿಣೀ ಸೇನೆಗಳ ಒಡೆಯನಾದ ನನಗೇ ಈ ದಶೆಯು ಪ್ರಾಪ್ತವಾಯಿತೆಂದರೆ ಬರುವಂತಹ ಕಾಲವನ್ನು ಹಿಂದೆ ಕಳುಹಿಸಲು ಸಾಧ್ಯವೇ ಇಲ್ಲ!
09063010a ಆಖ್ಯಾತವ್ಯಂ ಮದೀಯಾನಾಂ ಯೇಽಸ್ಮಿಜ್ಜೀವಂತಿ ಸಂಗರೇ|
09063010c ಯಥಾಹಂ ಭೀಮಸೇನೇನ ವ್ಯುತ್ಕ್ರಮ್ಯ ಸಮಯಂ ಹತಃ||
ಸಂಗರದಲ್ಲಿ ನನ್ನವರು ಯಾರಾದರೂ ಜೀವಂತ ಉಳಿದಿದ್ದರೆ ಅವರಿಗೆ ಭೀಮಸೇನನು ನನ್ನನ್ನು ಹೇಗೆ ಗದಾಯುದ್ಧದ ನಿಯಮಗಳನ್ನು ಉಲ್ಲಂಘಿಸಿ ಸಂಹರಿಸಿದನೆನ್ನುವುದನ್ನು ಹೇಳಬೇಕು!
09063011a ಬಹೂನಿ ಸುನೃಶಂಸಾನಿ ಕೃತಾನಿ ಖಲು ಪಾಂಡವೈಃ|
09063011c ಭೂರಿಶ್ರವಸಿ ಕರ್ಣೇ ಚ ಭೀಷ್ಮೇ ದ್ರೋಣೇ ಚ ಶ್ರೀಮತಿ||
ಪಾಂಡವರು ಭೂರಿಶ್ರವ, ಕರ್ಣ, ಭೀಷ್ಮ ಮತ್ತು ವಿಪುಲ ಮತಿ ದ್ರೋಣರ ಕುರಿತು ಅನೇಕ ಕ್ರೂರ ಕರ್ಮಗಳನ್ನೆಸಗಿದ್ದಾರೆ.
09063012a ಇದಂ ಚಾಕೀರ್ತಿಜಂ ಕರ್ಮ ನೃಶಂಸೈಃ ಪಾಂಡವೈಃ ಕೃತಂ|
09063012c ಯೇನ ತೇ ಸತ್ಸು ನಿರ್ವೇದಂ ಗಮಿಷ್ಯಂತೀತಿ ಮೇ ಮತಿಃ||
ಅಕೀರ್ತಿಯನ್ನುಂಟುಮಾಡುವ ಈ ಕ್ರೂರಕರ್ಮಗಳನ್ನು ಮಾಡಿರುವುದರಿಂದ ಪಾಂಡವರು ಸತ್ಪುರುಷರ ನಿಂದನೆಗೆ ಒಳಗಾಗುತ್ತಾರೆ ಎಂದು ನನ್ನ ಅಭಿಪ್ರಾಯ.
09063013a ಕಾ ಪ್ರೀತಿಃ ಸತ್ತ್ವಯುಕ್ತಸ್ಯ ಕೃತ್ವೋಪಧಿಕೃತಂ ಜಯಂ|
09063013c ಕೋ ವಾ ಸಮಯಭೇತ್ತಾರಂ ಬುಧಃ ಸಮ್ಮಂತುಮರ್ಹತಿ||
ವಂಚನೆಯಿಂದ ಪಡೆದುಕೊಂಡ ವಿಜಯದಿಂದ ಸತ್ತ್ವಯುಕ್ತನಾದ ಯಾರು ತಾನೇ ಸಂತೋಷಪಡುತ್ತಾನೆ? ನಿಯಮವನ್ನು ಉಲ್ಲಂಘಿಸುವವನನ್ನು ಯಾವ ವಿದ್ವಾಂಸನು ತಾನೇ ಸಮ್ಮಾನಿಸ ಬಯಸುತ್ತಾನೆ?
09063014a ಅಧರ್ಮೇಣ ಜಯಂ ಲಬ್ಧ್ವಾ ಕೋ ನು ಹೃಷ್ಯೇತ ಪಂಡಿತಃ|
09063014c ಯಥಾ ಸಂಹೃಷ್ಯತೇ ಪಾಪಃ ಪಾಂಡುಪುತ್ರೋ ವೃಕೋದರಃ||
ಪಾಪಿ ಪಾಂಡುಪುತ್ರ ವೃಕೋದರನು ಸಂತೋಷಪಡುವಂತೆ ಅಧರ್ಮದಿಂದ ಜಯವನ್ನು ಪಡೆದ ಯಾವ ಪಂಡಿತನು ತಾನೇ ಸಂತೋಷಪಟ್ಟಾನು?
09063015a ಕಿಂ ನು ಚಿತ್ರಮತಸ್ತ್ವದ್ಯ ಭಗ್ನಸಕ್ಥಸ್ಯ ಯನ್ಮಮ|
09063015c ಕ್ರುದ್ಧೇನ ಭೀಮಸೇನೇನ ಪಾದೇನ ಮೃದಿತಂ ಶಿರಃ||
ಭೀಮಸೇನನು ಕೋಪದಿಂದ ತೊಡೆಮುರಿದಿದ್ದ ನನ್ನ ತಲೆಯನ್ನು ಕಾಲಿನಿಂದ ತುಳಿದನು. ಇದಕ್ಕಿಂತಲೂ ವಿಚಿತ್ರವಾದು ಬೇರಾವುದಿದೆ?
09063016a ಪ್ರತಪಂತಂ ಶ್ರಿಯಾ ಜುಷ್ಟಂ ವರ್ತಮಾನಂ ಚ ಬಂಧುಷು|
09063016c ಏವಂ ಕುರ್ಯಾನ್ನರೋ ಯೋ ಹಿ ಸ ವೈ ಸಂಜಯ ಪೂಜಿತಃ||
ಸಂಜಯ! ತೇಜಸ್ಸಿನಿಂದ ಬೆಳಗುತ್ತಿರುವ, ಸಂಪತ್ತಿನಿಂದ ಕೂಡಿರುವ ಮತ್ತು ಬಂಧುಗಳ ಮಧ್ಯವಿರುವವನಿಗೆ ಹೀಗೆ ಮಾಡುವ ನರನು ಸನ್ಮಾನ್ಯನೇ ಸರಿ!
09063017a ಅಭಿಜ್ಞೌ ಕ್ಷತ್ರಧರ್ಮಸ್ಯ ಮಮ ಮಾತಾ ಪಿತಾ ಚ ಮೇ|
09063017c ತೌ ಹಿ ಸಂಜಯ ದುಃಖಾರ್ತೌ ವಿಜ್ಞಾಪ್ಯೌ ವಚನಾನ್ಮಮ||
ಸಂಜಯ! ನನ್ನ ಮಾತಾಪಿತರಿಬ್ಬರೂ ಕ್ಷತ್ರಧರ್ಮವನ್ನು ತಿಳಿದವರು. ದುಃಖಾರ್ತರಾಗಿರುವ ಅವರಿಗೆ ನನ್ನ ಈ ಮಾತುಗಳನ್ನು ತಿಳಿಸಬೇಕು.
09063018a ಇಷ್ಟಂ ಭೃತ್ಯಾ ಭೃತಾಃ ಸಮ್ಯಗ್ಭೂಃ ಪ್ರಶಾಸ್ತಾ ಸಸಾಗರಾ|
09063018c ಮೂರ್ಧ್ನಿ ಸ್ಥಿತಮಮಿತ್ರಾಣಾಂ ಜೀವತಾಮೇವ ಸಂಜಯ||
ಸಂಜಯ! ನಾನು ಯಜ್ಞಗಳನ್ನು ಮಾಡಿದ್ದೇನೆ. ಭೃತ್ಯರನ್ನು ಸಾಕಿ ಸಲಹಿದ್ದೇನೆ. ಸಾಗರದೊಂದಿಗೆ ಈ ಭೂಮಿಯನ್ನು ಆಳಿದ್ದೇನೆ. ಜೀವಂತವಿರುವಾಗಲೇ ಅಮಿತ್ರರ ತಲೆಗಳನ್ನು ಮೆಟ್ಟಿದ್ದೇನೆ.
09063019a ದತ್ತಾ ದಾಯಾ ಯಥಾಶಕ್ತಿ ಮಿತ್ರಾಣಾಂ ಚ ಪ್ರಿಯಂ ಕೃತಂ|
09063019c ಅಮಿತ್ರಾ ಬಾಧಿತಾಃ ಸರ್ವೇ ಕೋ ನು ಸ್ವಂತತರೋ ಮಯಾ||
ಯಥಾಶಕ್ತಿ ದಾನಮಾಡಿದ್ದೇನೆ. ಮಿತ್ರರಿಗೆ ಪ್ರಿಯವಾದುದನ್ನು ಮಾಡಿದ್ದೇನೆ. ಅಮಿತ್ರರೆಲ್ಲರನ್ನೂ ಬಾಧಿಸಿದ್ದೇನೆ. ನನ್ನ ಹಾಗೆ ಸುಖಾಂತ್ಯವನ್ನು ಪಡೆದಿರುವವರು ಬೇರೆ ಯಾರಿದ್ದಾರೆ?
09063020a ಯಾತಾನಿ ಪರರಾಷ್ಟ್ರಾಣಿ ನೃಪಾ ಭುಕ್ತಾಶ್ಚ ದಾಸವತ್|
09063020c ಪ್ರಿಯೇಭ್ಯಃ ಪ್ರಕೃತಂ ಸಾಧು ಕೋ ನು ಸ್ವಂತತರೋ ಮಯಾ||
ಪರರಾಷ್ಟ್ರಗಳ ರಾಜರನ್ನು ಗೆದ್ದು ದಾಸರನ್ನಾಗಿಸಿ ಭೋಗಿಸಿದ್ದೇನೆ. ಪ್ರಿಯರಾದವರಿಗೆ ಒಳ್ಳೆಯದನ್ನು ಮಾಡಿದ್ದೇನೆ. ನನಗಿಂತಲೂ ಸುಖಾಂತ್ಯವನ್ನು ಹೊಂದಿರುವವರು ಯಾರಿದ್ದಾರೆ?
09063021a ಮಾನಿತಾ ಬಾಂಧವಾಃ ಸರ್ವೇ ಮಾನ್ಯಃ ಸಂಪೂಜಿತೋ ಜನಃ|
09063021c ತ್ರಿತಯಂ ಸೇವಿತಂ ಸರ್ವಂ ಕೋ ನು ಸ್ವಂತತರೋ ಮಯಾ||
ಸರ್ವಬಾಂಧವರನ್ನೂ ಸಮ್ಮಾನಿಸಿದ್ದೇನೆ. ಜನರು ನನ್ನನ್ನು ಮನ್ನಿಸಿ ಸಂಪೂಜಿಸಿದ್ದಾರೆ. ಧರ್ಮಾರ್ಥಕಾಮಗಳನ್ನು ಸೇವಿಸಿದ್ದೇನೆ. ನನಗಿಂತಲೂ ಸುಖಾಂತ್ಯವನ್ನು ಹೊಂದಿರುವವರು ಯಾರಿದ್ದಾರೆ?
09063022a ಆಜ್ಞಪ್ತಂ ನೃಪಮುಖ್ಯೇಷು ಮಾನಃ ಪ್ರಾಪ್ತಃ ಸುದುರ್ಲಭಃ|
09063022c ಆಜಾನೇಯೈಸ್ತಥಾ ಯಾತಂ ಕೋ ನು ಸ್ವಂತತರೋ ಮಯಾ||
ನೃಪಮುಖ್ಯರನ್ನೇ ನನ್ನ ಆಜ್ಞಾಧಾರಕರನ್ನಾಗಿ ಮಾಡಿಕೊಂಡಿದ್ದೇನೆ. ಅವರಿಂದ ಸುದುರ್ಲಭ ಗೌರವವನ್ನೂ ಪಡೆದುಕೊಂಡಿದ್ದೇನೆ. ಹಾಗೆಯೇ ಅನೇಕ ಕುದುರೆಗಳ ಮೇಲೆ ಪ್ರಯಾಣಮಾಡಿದ್ದೇನೆ. ನನಗಿಂತಲೂ ಸುಖಾಂತ್ಯವನ್ನು ಹೊಂದಿರುವವರು ಯಾರಿದ್ದಾರೆ?
09063023a ಅಧೀತಂ ವಿಧಿವದ್ದತ್ತಂ ಪ್ರಾಪ್ತಮಾಯುರ್ನಿರಾಮಯಂ|
09063023c ಸ್ವಧರ್ಮೇಣ ಜಿತಾ ಲೋಕಾಃ ಕೋ ನು ಸ್ವಂತತರೋ ಮಯಾ||
ಸಂಪತ್ತನ್ನು ವಿಧಿವತ್ತಾಗಿ ನನ್ನ ಅಧೀನಗೊಳಿಸಿಕೊಂಡಿದ್ದೇನೆ ಮತ್ತು ದಾನಮಾಡಿದ್ದೇನೆ. ರೋಗರಹಿತ ಆಯುಸ್ಸನ್ನು ಪಡೆದಿದ್ದೇನೆ. ಸ್ವಧರ್ಮದಿಂದ ಲೋಕಗಳನ್ನು ಜಯಿಸಿದ್ದೇನೆ. ನನಗಿಂತಲೂ ಸುಖಾಂತ್ಯವನ್ನು ಹೊಂದಿರುವವರು ಯಾರಿದ್ದಾರೆ?
09063024a ದಿಷ್ಟ್ಯಾ ನಾಹಂ ಜಿತಃ ಸಂಖ್ಯೇ ಪರಾನ್ಪ್ರೇಷ್ಯವದಾಶ್ರಿತಃ|
09063024c ದಿಷ್ಟ್ಯಾ ಮೇ ವಿಪುಲಾ ಲಕ್ಷ್ಮೀರ್ಮೃತೇ ತ್ವನ್ಯಂ ಗತಾ ವಿಭೋ||
ವಿಭೋ! ಅದೃಷ್ಟವಶಾತ್ ನಾನು ಯಾವಾಗಲೂ ಯುದ್ಧದಲ್ಲಿ ಗೆಲ್ಲಲ್ಪಡಲಿಲ್ಲ. ಸೇವಕರಂತೆ ಯಾವಾಗಲೂ ಶತ್ರುಗಳಿಗೆ ಶರಣಾಗಲಿಲ್ಲ. ಅದೃಷ್ಟವಶಾತ್ ನನ್ನಲ್ಲಿದ್ದ ವಿಪುಲ ಸಂಪತ್ತು ನಾನು ತೀರಿಹೋದ ನಂತರವೇ ಅನ್ಯರ ವಶವಾಗುತ್ತದೆ.
09063025a ಯದಿಷ್ಟಂ ಕ್ಷತ್ರಬಂಧೂನಾಂ ಸ್ವಧರ್ಮಮನುತಿಷ್ಠತಾಂ|
09063025c ನಿಧನಂ ತನ್ಮಯಾ ಪ್ರಾಪ್ತಂ ಕೋ ನು ಸ್ವಂತತರೋ ಮಯಾ||
ಸ್ವಧರ್ಮದಲ್ಲಿ ನಿರತರಾಗಿರುವ ಕ್ಷತ್ರಬಂಧುಗಳಿಗೆ ಇಷ್ಟವಾದ ನಿಧನವನ್ನೇ ನಾನು ಪಡೆದಿದ್ದೇನೆ. ನನಗಿಂತಲೂ ಸುಖಾಂತ್ಯವನ್ನು ಹೊಂದಿರುವವರು ಯಾರಿದ್ದಾರೆ?
09063026a ದಿಷ್ಟ್ಯಾ ನಾಹಂ ಪರಾವೃತ್ತೋ ವೈರಾತ್ಪ್ರಾಕೃತವಜ್ಜಿತಃ|
09063026c ದಿಷ್ಟ್ಯಾ ನ ವಿಮತಿಂ ಕಾಂ ಚಿದ್ಭಜಿತ್ವಾ ತು ಪರಾಜಿತಃ||
ಒಳ್ಳೆಯದಾಯಿತು ನಾನು ವೈರತ್ವದಿಂದ ಹಿಂದೆಸರಿಯಲಿಲ್ಲ. ಸಾಮಾನ್ಯನಂತೆ ಜಯಿಸಲ್ಪಡಲಿಲ್ಲ. ಒಳ್ಳೆಯದಾಯಿತು ನನ್ನ ಬುದ್ಧಿಯು ಯಾವುದೇ ರೀತಿಯಲ್ಲಿ ದಾರಿ ತಪ್ಪಿ ಪರಾಜಿತನಾಗಲಿಲ್ಲ.
09063027a ಸುಪ್ತಂ ವಾಥ ಪ್ರಮತ್ತಂ ವಾ ಯಥಾ ಹನ್ಯಾದ್ವಿಷೇಣ ವಾ|
09063027c ಏವಂ ವ್ಯುತ್ಕ್ರಾಂತಧರ್ಮೇಣ ವ್ಯುತ್ಕ್ರಮ್ಯ ಸಮಯಂ ಹತಃ||
ಮಲಗಿದ್ದವನನ್ನು ಕೊಲ್ಲುವಂತೆ, ಮತ್ತೇರಿದವನನ್ನು ಕೊಲ್ಲುವಂತೆ ಅಥವಾ ವಿಷವನ್ನು ಕೊಟ್ಟು ಕೊಲ್ಲುವಂತೆ ಧರ್ಮವನ್ನು ಮೀರಿ ಅಧರ್ಮದಿಂದ ಭೀಮನು ನನ್ನನ್ನು ಸಂಹರಿಸಿದನು.
09063028a ಅಶ್ವತ್ಥಾಮಾ ಮಹಾಭಾಗಃ ಕೃತವರ್ಮಾ ಚ ಸಾತ್ವತಃ|
09063028c ಕೃಪಃ ಶಾರದ್ವತಶ್ಚೈವ ವಕ್ತವ್ಯಾ ವಚನಾನ್ಮಮ||
ಮಹಾಭಾಗ ಅಶ್ವತ್ಥಾಮ, ಸಾತ್ವತ ಕೃತವರ್ಮ ಮತ್ತು ಕೃಪ ಶಾರದ್ವತರಿಗೆ ನನ್ನ ಈ ಮಾತನ್ನು ತಿಳಿಸಬೇಕು.
09063029a ಅಧರ್ಮೇಣ ಪ್ರವೃತ್ತಾನಾಂ ಪಾಂಡವಾನಾಮನೇಕಶಃ|
09063029c ವಿಶ್ವಾಸಂ ಸಮಯಘ್ನಾನಾಂ ನ ಯೂಯಂ ಗಂತುಮರ್ಹಥ||
ಅಧರ್ಮದಿಂದ ನಡೆದುಕೊಂಡಿರುವ ಮತ್ತು ಅನೇಕಬಾರಿ ಒಪ್ಪಂದಗಳನ್ನು ಮುರಿದಿರುವ ಪಾಂಡವರನ್ನು ಯಾವ ಕಾರಣಕ್ಕೂ ನಂಬಬಾರದು.”
09063030a ವಾತಿಕಾಂಶ್ಚಾಬ್ರವೀದ್ರಾಜಾ ಪುತ್ರಸ್ತೇ ಸತ್ಯವಿಕ್ರಮಃ|
09063030c ಅಧರ್ಮಾದ್ಭೀಮಸೇನೇನ ನಿಹತೋಽಹಂ ಯಥಾ ರಣೇ||
09063031a ಸೋಽಹಂ ದ್ರೋಣಂ ಸ್ವರ್ಗಗತಂ ಶಲ್ಯಕರ್ಣಾವುಭೌ ತಥಾ|
09063031c ವೃಷಸೇನಂ ಮಹಾವೀರ್ಯಂ ಶಕುನಿಂ ಚಾಪಿ ಸೌಬಲಂ||
09063032a ಜಲಸಂಧಂ ಮಹಾವೀರ್ಯಂ ಭಗದತ್ತಂ ಚ ಪಾರ್ಥಿವಂ|
09063032c ಸೌಮದತ್ತಿಂ ಮಹೇಷ್ವಾಸಂ ಸೈಂಧವಂ ಚ ಜಯದ್ರಥಂ||
09063033a ದುಃಶಾಸನಪುರೋಗಾಂಶ್ಚ ಭ್ರಾತೄನಾತ್ಮಸಮಾಂಸ್ತಥಾ|
09063033c ದೌಃಶಾಸನಿಂ ಚ ವಿಕ್ರಾಂತಂ ಲಕ್ಷ್ಮಣಂ ಚಾತ್ಮಜಾವುಭೌ||
09063034a ಏತಾಂಶ್ಚಾನ್ಯಾಂಶ್ಚ ಸುಬಹೂನ್ಮದೀಯಾಂಶ್ಚ ಸಹಸ್ರಶಃ|
09063034c ಪೃಷ್ಠತೋಽನುಗಮಿಷ್ಯಾಮಿ ಸಾರ್ಥಹೀನ ಇವಾಧ್ವಗಃ||
ಬಳಿಕ ಸತ್ಯವಿಕ್ರಮಿ ನಿನ್ನ ಮಗನು ವಾರ್ತೆಗಳನ್ನು ಕೊಂಡೊಯ್ಯುವ ದೂತರಿಗೆ ಹೀಗೆ ಹೇಳಿದನು: “ರಣದಲ್ಲಿ ಭೀಮನಿಂದ ಅಧರ್ಮಪೂರ್ವಕವಾಗಿ ಹತನಾದ ನಾನು ಸ್ವರ್ಗಗತರಾಗಿರುವ ದ್ರೋಣ, ಶಲ್ಯ, ಕರ್ಣ, ಮಹಾವೀರ್ಯ ವೃಷಸೇನ, ಸೌಬಲ ಶಕುನಿ, ಮಹಾವೀರ್ಯ ಜಲಸಂಧ, ಪಾರ್ಥಿವ ಭಗದತ್ತ, ಮಹೇಷ್ವಾಸ ಸೌಮದತ್ತಿ, ಸೈಂಧವ ಜಯದ್ರಥ, ದುಃಶಾಸನನೇ ಮೊದಲಾದ ನನ್ನ ಆತ್ಮಸಮಾನ ಸಹೋದರರು, ದುಃಶಾಸನನ ಮತ್ತು ನನ್ನ ಮಗ ವಿಕ್ರಾಂತ ಲಕ್ಷ್ಮಣ ಮತ್ತು ಇನ್ನೂ ಅನೇಕ ಸಹಸ್ರ ನನ್ನವರನ್ನು ಹಿಂಬಾಲಿಸಿ, ಸಂಗಡಿಗರನ್ನು ಕಳೆದುಕೊಂಡ ದಾರಿಹೋಕನಂತೆ ಏಕಾಕಿಯಾಗಿ ಹೋಗುತ್ತಿದ್ದೇನೆ.
09063035a ಕಥಂ ಭ್ರಾತೄನ್ ಹತಾನ್ ಶ್ರುತ್ವಾ ಭರ್ತಾರಂ ಚ ಸ್ವಸಾ ಮಮ|
09063035c ರೋರೂಯಮಾಣಾ ದುಃಖಾರ್ತಾ ದುಃಶಲಾ ಸಾ ಭವಿಷ್ಯತಿ||
ಸಹೋದರರೂ ಪತಿಯೂ ಹತರಾದರೆನ್ನುವುದನ್ನು ಕೇಳಿ ನನ್ನ ತಂಗಿ ದುಃಶಲೆಯು ದುಃಖಾರ್ತಳಾಗಿ ರೋದಿಸುವುದಿಲ್ಲವೇ? ಅವಳ ಭವಿಷ್ಯವೇನು?
09063036a ಸ್ನುಷಾಭಿಃ ಪ್ರಸ್ನುಷಾಭಿಶ್ಚ ವೃದ್ಧೋ ರಾಜಾ ಪಿತಾ ಮಮ|
09063036c ಗಾಂಧಾರೀಸಹಿತಃ ಕ್ರೋಶನ್ಕಾಂ ಗತಿಂ ಪ್ರತಿಪತ್ಸ್ಯತೇ||
ರೋದಿಸುತ್ತಿರುವ ಸೊಸೆಯಂದಿರಿಂದಲೂ ಮೊಮ್ಮಕ್ಕಳ ಪತ್ನಿಯರಿಂದಲೂ ಆವೃತನಾದ ಗಾಂಧಾರೀಸಹಿತನಾದ ನನ್ನ ವೃದ್ಧ ಪಿತನು ಯಾವ ಗತಿಯನ್ನು ಪಡೆಯುತ್ತಾನೆ?
09063037a ನೂನಂ ಲಕ್ಷ್ಮಣಮಾತಾಪಿ ಹತಪುತ್ರಾ ಹತೇಶ್ವರಾ|
09063037c ವಿನಾಶಂ ಯಾಸ್ಯತಿ ಕ್ಷಿಪ್ರಂ ಕಲ್ಯಾಣೀ ಪೃಥುಲೋಚನಾ||
ಪುತ್ರನನ್ನೂ ಪತಿಯನ್ನೂ ಕಳೆದುಕೊಂಡ ಕಲ್ಯಾಣೀ ಪೃಥುಲೋಚನೆ ಲಕ್ಷ್ಮಣನ ತಾಯಿಯೂ ಕೂಡ ಬೇಗನೇ ವಿನಾಶವನ್ನು ಹೊಂದುವುದಿಲ್ಲವೇ?
09063038a ಯದಿ ಜಾನಾತಿ ಚಾರ್ವಾಕಃ ಪರಿವ್ರಾಡ್ವಾಗ್ವಿಶಾರದಃ|
09063038c ಕರಿಷ್ಯತಿ ಮಹಾಭಾಗೋ ಧ್ರುವಂ ಸೋಽಪಚಿತಿಂ ಮಮ||
ಪರಿವ್ರಾಜಕ ವಾಗ್ವಿಶಾರದ ಚಾರ್ವಾಕನೇನಾದರೂ ಇದನ್ನು ತಿಳಿದರೆ ನಿಶ್ಚಯವಾಗಿಯೂ ಆ ಮಹಾಭಾಗನು ಇದಕ್ಕೆ ಪ್ರತೀಕಾರವನ್ನು ಮಾಡುತ್ತಾನೆ.
09063039a ಸಮಂತಪಂಚಕೇ ಪುಣ್ಯೇ ತ್ರಿಷು ಲೋಕೇಷು ವಿಶ್ರುತೇ|
09063039c ಅಹಂ ನಿಧನಮಾಸಾದ್ಯ ಲೋಕಾನ್ಪ್ರಾಪ್ಸ್ಯಾಮಿ ಶಾಶ್ವತಾನ್||
ಮೂರುಲೋಕಗಳಲ್ಲಿಯೂ ಪುಣ್ಯವೆಂದು ವಿಶ್ರುತವಾಗಿರುವ ಈ ಸಮಂತಪಂಚಕದಲ್ಲಿ ಸಾವನ್ನಪ್ಪಿ ನಾನು ಶಾಶ್ವತಲೋಕಗಳನ್ನು ಪಡೆಯುತ್ತೇನೆ.”
09063040a ತತೋ ಜನಸಹಸ್ರಾಣಿ ಬಾಷ್ಪಪೂರ್ಣಾನಿ ಮಾರಿಷ|
09063040c ಪ್ರಲಾಪಂ ನೃಪತೇಃ ಶ್ರುತ್ವಾ ವಿದ್ರವಂತಿ ದಿಶೋ ದಶ||
ಮಾರಿಷ! ನೃಪತಿಯ ಈ ಪ್ರಲಾಪವನ್ನು ಕೇಳಿ ಕಂಬನಿದುಂಬಿದ ಸಹಸ್ರಾರು ಜನರು ಹತ್ತು ದಿಕ್ಕುಗಳಿಗೂ ಓಡಿಹೋದರು.
09063041a ಸಸಾಗರವನಾ ಘೋರಾ ಪೃಥಿವೀ ಸಚರಾಚರಾ|
09063041c ಚಚಾಲಾಥ ಸನಿರ್ಹ್ರಾದಾ ದಿಶಶ್ಚೈವಾವಿಲಾಭವನ್||
ಆಗ ಸಾಗರವನಗಳೊಂದಿಗೆ, ಚರಾಚರಗಳೊಂದಿಗೆ ಪೃಥ್ವಿಯು ಘೋರರೂಪವನ್ನು ತಾಳಿ ಸಿಡಿಲಿನ ಶಬ್ಧದೊಂದಿಗೆ ನಡುಗತೊಡಗಿತು.
09063042a ತೇ ದ್ರೋಣಪುತ್ರಮಾಸಾದ್ಯ ಯಥಾವೃತ್ತಂ ನ್ಯವೇದಯನ್|
09063042c ವ್ಯವಹಾರಂ ಗದಾಯುದ್ಧೇ ಪಾರ್ಥಿವಸ್ಯ ಚ ಘಾತನಂ||
ದೂತರು ದ್ರೋಣಪುತ್ರನ ಬಳಿಹೋಗಿ ಗದಾಯುದ್ಧದಲ್ಲಿ ನಡೆದುದನ್ನೂ ಪಾರ್ಥಿವನ ಸಂಹಾರವನ್ನೂ ನಡೆದಂತೆ ವರದಿಮಾಡಿದರು.
09063043a ತದಾಖ್ಯಾಯ ತತಃ ಸರ್ವೇ ದ್ರೋಣಪುತ್ರಸ್ಯ ಭಾರತ|
09063043c ಧ್ಯಾತ್ವಾ ಚ ಸುಚಿರಂ ಕಾಲಂ ಜಗ್ಮುರಾರ್ತಾ ಯಥಾಗತಂ||
ಭಾರತ! ಆರ್ತರಾಗಿದ್ದ ಆ ದೂತರು ಅವೆಲ್ಲವನ್ನೂ ದ್ರೋಣಪುತ್ರನಿಗೆ ವರದಿಮಾಡಿ, ಬಹಳ ಹೊತ್ತು ಅದರ ಕುರಿತೇ ಚಿಂತಿಸುತ್ತಾ ಎಲ್ಲಿಂದ ಬಂದಿದ್ದರೋ ಅಲ್ಲಿಗೆ ಹೊರಟು ಹೋದರು.”
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಗದಾಯುದ್ಧಪರ್ವಣಿ ದುರ್ಯೋಧನವಿಲಾಪೇ ತ್ರಿಷಷ್ಟಿತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಗದಾಯುದ್ಧಪರ್ವದಲ್ಲಿ ದುರ್ಯೋಧನವಿಲಾಪ ಎನ್ನುವ ಅರವತ್ಮೂರನೇ ಅಧ್ಯಾಯವು.