Shalya Parva: Chapter 59

ಶಲ್ಯಪರ್ವ: ಗದಾಯುದ್ಧ ಪರ್ವ

೫೯

ಅಧರ್ಮಯುಕ್ತವಾಗಿ ದುರ್ಯೋಧನನನ್ನು ಹೊಡೆದುರುಳಿಸಿದುದನ್ನು ಕಂಡು ಬಲರಾಮನು ನೇಗಿಲನ್ನೆತ್ತಿ ಭೀಮಸೇನನನ್ನು ಆಕ್ರಮಣಿಸಲು ಮುಂದಾದುದು (೧-೮). ಕೃಷ್ಣನು ಬಲರಾಮನನ್ನು ಹಿಡಿದು ನಿಲ್ಲಿಸಿ ಶಾಂತನಾಗಲು ಹೇಳಿದುದು (೯-೧೬). ಬಲರಾಮನು “ಭೀಮಸೇನನು ವಂಚನೆಯಿಂದ ಯುದ್ಧಮಾಡುವವನು!” ಎಂದು ರಾಜಸಂಸದಿಯಲ್ಲಿ ಘೋಷಿಸಿ ದ್ವಾರಕೆಗೆ ತೆರಳಿದುದು (೧೭-೨೪). ವಾಸುದೇವ-ಯುಧಿಷ್ಠಿರ ಸಂವಾದ (೨೫-೩೬). ಭೀಮಸೇನ-ಯುಧಿಷ್ಠಿರ ಸಂವಾದ (೩೭-೪೪).

09059001 ಧೃತರಾಷ್ಟ್ರ ಉವಾಚ

09059001a ಅಧರ್ಮೇಣ ಹತಂ ದೃಷ್ಟ್ವಾ ರಾಜಾನಂ ಮಾಧವೋತ್ತಮಃ|

09059001c ಕಿಮಬ್ರವೀತ್ತದಾ ಸೂತ ಬಲದೇವೋ ಮಹಾಬಲಃ||

ಧೃತರಾಷ್ಟ್ರನು ಹೇಳಿದನು: “ಸೂತ! ಅಧರ್ಮದಿಂದ ರಾಜನು ಹತನಾದುದನ್ನು ನೋಡಿ ಮಾಧವೋತ್ತಮ ಮಹಾಬಲ ಬಲದೇವನು ಏನು ಹೇಳಿದನು?

09059002a ಗದಾಯುದ್ಧವಿಶೇಷಜ್ಞೋ ಗದಾಯುದ್ಧವಿಶಾರದಃ|

09059002c ಕೃತವಾನ್ರೌಹಿಣೇಯೋ ಯತ್ತನ್ಮಮಾಚಕ್ಷ್ವ ಸಂಜಯ||

ಸಂಜಯ! ಆಗ ಗದಾಯುದ್ಧ ವಿಶೇಷಜ್ಞ, ಗದಾಯುದ್ಧವಿಶಾರದ ರೌಹಿಣೇಯನು ಏನನ್ನು ಮಾಡಿದನು ಎನ್ನುವುದನ್ನು ನನಗೆ ಹೇಳು!”

09059003 ಸಂಜಯ ಉವಾಚ

09059003a ಶಿರಸ್ಯಭಿಹತಂ ದೃಷ್ಟ್ವಾ ಭೀಮಸೇನೇನ ತೇ ಸುತಂ|

09059003c ರಾಮಃ ಪ್ರಹರತಾಂ ಶ್ರೇಷ್ಠಶ್ಚುಕ್ರೋಧ ಬಲವದ್ ಬಲೀ||

ಸಂಜಯನು ಹೇಳಿದನು: “ಭೀಮಸೇನನು ನಿನ್ನ ಮಗನ ತಲೆಯನ್ನು ಒದೆದುದನ್ನು ಕಂಡು ಪ್ರಹರಿಗಳಲ್ಲಿ ಶ್ರೇಷ್ಠ ಬಲಶಾಲೀ ರಾಮನು ಅತ್ಯಂತ ಕ್ರೋಧಿತನಾದನು.

09059004a ತತೋ ಮಧ್ಯೇ ನರೇಂದ್ರಾಣಾಂ ಊರ್ಧ್ವಬಾಹುರ್ಹಲಾಯುಧಃ|

09059004c ಕುರ್ವನ್ನಾರ್ತಸ್ವರಂ ಘೋರಂ ಧಿಗ್ಧಿಗ್ಭೀಮೇತ್ಯುವಾಚ ಹ||

ಆಗ ನರೇಂದ್ರರ ಮಧ್ಯದಲ್ಲಿ ಹಲಾಯುಧನು ಬಾಹುಗಳನ್ನು ಮೇಲೆತ್ತಿ ಘೋರವಾದ ಆರ್ತಸ್ವರದಲ್ಲಿ “ಭೀಮ! ಧಿಕ್ಕಾರ! ಧಿಕ್ಕಾರ!” ಎಂದು ಕೂಗಿದನು.

09059005a ಅಹೋ ಧಿಗ್ಯದಧೋ ನಾಭೇಃ ಪ್ರಹೃತಂ ಶುದ್ಧವಿಕ್ರಮೇ|

09059005c ನೈತದ್ದೃಷ್ಟಂ ಗದಾಯುದ್ಧೇ ಕೃತವಾನ್ಯದ್ವೃಕೋದರಃ||

“ಧಿಕ್ಕಾರ! ಶುದ್ಧವಿಕ್ರಮನನ್ನು ನಾಭಿಯ ಕೆಳಗೆ ಹೊಡೆದುದಕ್ಕೆ ಧಿಕ್ಕಾರ! ಗದಾಯುದ್ಧದಲ್ಲಿ ವೃಕೋದರನು ಮಾಡಿದುದನ್ನು ಈ ಹಿಂದೆ ಯಾರೂ ಕಂಡಿರಲಿಲ್ಲ!

09059006a ಅಧೋ ನಾಭ್ಯಾ ನ ಹಂತವ್ಯಮಿತಿ ಶಾಸ್ತ್ರಸ್ಯ ನಿಶ್ಚಯಃ|

09059006c ಅಯಂ ತ್ವಶಾಸ್ತ್ರವಿನ್ಮೂಢಃ ಸ್ವಚ್ಚಂದಾತ್ಸಂಪ್ರವರ್ತತೇ||

ನಾಭಿಯ ಕೆಳಗೆ ಹೊಡೆಯಬಾರದೆಂದು ಗದಾಯುದ್ಧ ಶಾಸ್ತ್ರದ ನಿಶ್ಚಯ! ಶಾಸ್ತ್ರಗಳ ಕುರಿತು ಮೂಢನಾದ ಇವನು ಸ್ವಚ್ಚಂದನಾಗಿ ವರ್ತಿಸಿದ್ದಾನೆ!”

09059007a ತಸ್ಯ ತತ್ತದ್ಬ್ರುವಾಣಸ್ಯ ರೋಷಃ ಸಮಭವನ್ಮಹಾನ್|

09059007c ತತೋ ಲಾಂಗಲಮುದ್ಯಮ್ಯ ಭೀಮಮಭ್ಯದ್ರವದ್ಬಲೀ||

ಅವನು ಹೀಗೆ ಹೇಳುತ್ತಿದ್ದಂತೆಯೇ ಅವನಲ್ಲಿ ಮಹಾ ರೋಷವು ಉದ್ಭವಿಸಿತು. ಆಗ ನೇಗಿಲನ್ನೆತ್ತಿಕೊಂಡು ಆ ಬಲಶಾಲಿಯು ಭೀಮನನ್ನು ಆಕ್ರಮಿಸ ಹೊರಟನು.

09059008a ತಸ್ಯೋರ್ಧ್ವಬಾಹೋಃ ಸದೃಶಂ ರೂಪಮಾಸೀನ್ಮಹಾತ್ಮನಃ|

09059008c ಬಹುಧಾತುವಿಚಿತ್ರಸ್ಯ ಶ್ವೇತಸ್ಯೇವ ಮಹಾಗಿರೇಃ||

ಆಗ ಬಾಹುಗಳನ್ನು ಮೇಲಿತ್ತಿದ್ದ ಆ ಮಹಾತ್ಮನ ರೂಪವು ಅನೇಕ ಧಾತುಗಳು ಸುರಿದು ಬಣ್ಣದ ಲೇಪನಗೊಂಡಿದ್ದ ಮಹಾ ಶ್ವೇತಗಿರಿಯಂತೆ ತೋರಿತು.

09059009a ತಮುತ್ಪತಂತಂ ಜಗ್ರಾಹ ಕೇಶವೋ ವಿನಯಾನತಃ|

09059009c ಬಾಹುಭ್ಯಾಂ ಪೀನವೃತ್ತಾಭ್ಯಾಂ ಪ್ರಯತ್ನಾದ್ಬಲವದ್ಬಲೀ||

ಮೇಲೇಳುತ್ತಿದ್ದ ಅವನನ್ನು ವಿನಯಾನತ ಬಲಶಾಲೀ ಕೇಶವನು ಉಬ್ಬಿದ ಉರುಟು ಬಾಹುಗಳಿಂದ ಬಲವನ್ನುಪಯೋಗಿಸಿ ಪ್ರಯತ್ನಪಟ್ಟು ಹಿಡಿದುಕೊಂಡನು.

09059010a ಸಿತಾಸಿತೌ ಯದುವರೌ ಶುಶುಭಾತೇಽಧಿಕಂ ತತಃ|

09059010c ನಭೋಗತೌ ಯಥಾ ರಾಜಂಶ್ಚಂದ್ರಸೂರ್ಯೌ ದಿನಕ್ಷಯೇ||

ಕಪ್ಪು ಮತ್ತು ಶ್ವೇತವರ್ಣಗಳ ಆ ಇಬ್ಬರು ಯದುವರರು ಸಯಾಂಕಾಲ ಆಕಾಶದಲ್ಲಿ ಕಾಣುವ ಚಂದ್ರ-ಸೂರ್ಯರಂತೆ ಶೋಭಿಸಿದರು.

09059011a ಉವಾಚ ಚೈನಂ ಸಂರಬ್ಧಂ ಶಮಯನ್ನಿವ ಕೇಶವಃ|

09059011c ಆತ್ಮವೃದ್ಧಿರ್ಮಿತ್ರವೃದ್ಧಿರ್ಮಿತ್ರಮಿತ್ರೋದಯಸ್ತಥಾ||

09059011e ವಿಪರೀತಂ ದ್ವಿಷತ್ಸ್ವೇತತ್ಷಡ್ವಿಧಾ ವೃದ್ಧಿರಾತ್ಮನಃ||

ಕುಪಿತನಾಗಿರುವವನನ್ನು ಸಂತವಿಸುತ್ತಾ ಕೇಶವನು ಈ ಮಾತುಗಳನ್ನಾಡಿದನು: “ಆತ್ಮವೃದ್ಧಿ, ಮಿತ್ರವೃದ್ಧಿ, ಮಿತ್ರನ ಶತ್ರುವಿನ ನಾಶ, ಮಿತ್ರನ ಮಿತ್ರನ ವೃದ್ಧಿ, ಶತ್ರುವಿನ ಮಿತ್ರನ ನಾಶ ಈ ಆರು ಆತ್ಮವೃದ್ಧಿಗೆ ಸಾಧನಗಳಾಗುತ್ತವೆ.

09059012a ಆತ್ಮನ್ಯಪಿ ಚ ಮಿತ್ರೇಷು ವಿಪರೀತಂ ಯದಾ ಭವೇತ್|

09059012c ತದಾ ವಿದ್ಯಾನ್ಮನೋಜ್ಯಾನಿಮಾಶು ಶಾಂತಿಕರೋ ಭವೇತ್||

ತನ್ನ ವಿಷಯದಲ್ಲಿಯೂ ಮತ್ತು ತನ್ನ ಮಿತ್ರನ ವಿಷಯದಲ್ಲಿಯೂ ಇದಕ್ಕೆ ವಿಪರೀತವಾದರೆ ಮನೋವ್ಯಥೆಯುಂಟಾಗುತ್ತದೆ. ಬೇಗನೇ ಅದನ್ನು ನಿವಾರಿಸಲು ಪ್ರಯತ್ನಿಸಬೇಕು.

09059013a ಅಸ್ಮಾಕಂ ಸಹಜಂ ಮಿತ್ರಂ ಪಾಂಡವಾಃ ಶುದ್ಧಪೌರುಷಾಃ|

09059013c ಸ್ವಕಾಃ ಪಿತೃಷ್ವಸುಃ ಪುತ್ರಾಸ್ತೇ ಪರೈರ್ನಿಕೃತಾ ಭೃಶಂ||

ಶುದ್ಧಪೌರುಷ ಪಾಂಡವರು ನಮ್ಮ ಸಹಜ ಮಿತ್ರರು. ನಮ್ಮ ಸೋದರತ್ತೆಯ ಮಕ್ಕಳಾದುದರಿಂದ ಅವರು ನಮ್ಮವರು. ಶತ್ರುಗಳಿಂದ ಬಹಳವಾಗಿ ಪೀಡಿತರಾಗಿರುವರು.

09059014a ಪ್ರತಿಜ್ಞಾಪಾರಣಂ ಧರ್ಮಃ ಕ್ಷತ್ರಿಯಸ್ಯೇತಿ ವೇತ್ಥ ಹ|

09059014c ಸುಯೋಧನಸ್ಯ ಗದಯಾ ಭಂಕ್ತಾಸ್ಮ್ಯೂರೂ ಮಹಾಹವೇ||

09059014e ಇತಿ ಪೂರ್ವಂ ಪ್ರತಿಜ್ಞಾತಂ ಭೀಮೇನ ಹಿ ಸಭಾತಲೇ||

ಪ್ರತಿಜ್ಞಾಪಾಲನೆಯು ಕ್ಷತ್ರಿಯನ ಧರ್ಮವೆಂದು ನಾನು ತಿಳಿದುಕೊಂಡಿದ್ದೇನೆ. ಹಿಂದೆ ಸಭಾತಲದಲ್ಲಿ ಭೀಮನು “ಮಹಾಯುದ್ಧದಲ್ಲಿ ಗದೆಯಿಂದ ಸುಯೋಧನನ ತೊಡೆಯನ್ನು ಸೀಳುತ್ತೇನೆ!” ಎಂದು ಪ್ರತಿಜ್ಞೆಮಾಡಿದ್ದನು.

09059015a ಮೈತ್ರೇಯೇಣಾಭಿಶಪ್ತಶ್ಚ ಪೂರ್ವಮೇವ ಮಹರ್ಷಿಣಾ|

09059015c ಊರೂ ಭೇತ್ಸ್ಯತಿ ತೇ ಭೀಮೋ ಗದಯೇತಿ ಪರಂತಪ||

09059015e ಅತೋ ದೋಷಂ ನ ಪಶ್ಯಾಮಿ ಮಾ ಕ್ರುಧಸ್ತ್ವಂ ಪ್ರಲಂಬಹನ್||

ಪರಂತಪ! ಹಿಂದೆ ಮಹರ್ಷಿ ಮೈತ್ರೇಯನೂ ಕೂಡ “ಭೀಮನು ಗದೆಯಿಂದ ನಿನ್ನ ತೊಡೆಯನ್ನು ಒಡೆಯುತ್ತಾನೆ!” ಎಂದು ಶಪಿಸಿದ್ದನು. ಆದುದರಿಂದ ಇದರಲ್ಲಿ ದೋಷವನ್ನೇನೂ ನಾನು ಕಾಣುತ್ತಿಲ್ಲ. ಕೋಪಗೊಳ್ಳದಿರು!

09059016a ಯೌನೈರ್ಹಾರ್ದೈಶ್ಚ ಸಂಬಂಧೈಃ ಸಂಬದ್ಧಾಃ ಸ್ಮೇಹ ಪಾಂಡವೈಃ|

09059016c ತೇಷಾಂ ವೃದ್ಧ್ಯಾಭಿವೃದ್ಧಿರ್ನೋ ಮಾ ಕ್ರುಧಃ ಪುರುಷರ್ಷಭ||

ಪಾಂಡವರೊಂದಿಗೆ ಶರೀರಸಂಬಂಧವಿದೆ[1]. ವಿವಾಹದ ಮೂಲಕವೂ ಅವರೊಂದಿಗೆ ನಮ್ಮ ಸಂಬಂಧವಿದೆ[2]. ಅವರ ವೃದ್ಧಿಯೂ ನಮ್ಮ ವೃದ್ಧಿಯೂ ಒಂದೇ. ಪುರುಷರ್ಷಭ! ಕ್ರೋಧಿತನಾಗಬೇಡ!”

09059017 ರಾಮ ಉವಾಚ

09059017a ಧರ್ಮಃ ಸುಚರಿತಃ ಸದ್ಭಿಃ ಸಹ ದ್ವಾಭ್ಯಾಂ ನಿಯಚ್ಚತಿ|

09059017c ಅರ್ಥಶ್ಚಾತ್ಯರ್ಥಲುಬ್ಧಸ್ಯ ಕಾಮಶ್ಚಾತಿಪ್ರಸಂಗಿನಃ||

ರಾಮನು ಹೇಳಿದನು: “ಸಂಪತ್ತನ್ನು ಅತಿಯಾಗಿ ಆಸೆಪಡುವುದರಿಂದ ಮತ್ತು ಅತಿಯಾದ ದೇಹಕಾಮವನ್ನು ಬಯಸುವುದರಿಂದ ಸತ್ಪುರುಷರು ಆಚರಿಸುವ ಧರ್ಮವು ಸಂಕುಚಿತವಾಗುತ್ತದೆ.

09059018a ಧರ್ಮಾರ್ಥೌ ಧರ್ಮಕಾಮೌ ಚ ಕಾಮಾರ್ಥೌ ಚಾಪ್ಯಪೀಡಯನ್|

09059018c ಧರ್ಮಾರ್ಥಕಾಮಾನ್ಯೋಽಭ್ಯೇತಿ ಸೋಽತ್ಯಂತಂ ಸುಖಮಶ್ನುತೇ||

ಯಾರು ಧರ್ಮ-ಅರ್ಥಗಳನ್ನೂ, ಧರ್ಮ-ಕಾಮಗಳನ್ನೂ, ಕಾಮ-ಅರ್ಥಗಳನ್ನೂ ಪರಸ್ಪರ ಕುಂಠಿತವಾಗದಂತೆ ಧರ್ಮ-ಅರ್ಥ-ಕಾಮ ಈ ಮೂರನ್ನೂ ಯಥೋಚಿತವಾಗಿ ಅನುಸರಿಸುತ್ತಾನೋ ಅವನು ಅತ್ಯಂತ ಸುಖವನ್ನು ಹೊಂದುತ್ತಾನೆ.

09059019a ತದಿದಂ ವ್ಯಾಕುಲಂ ಸರ್ವಂ ಕೃತಂ ಧರ್ಮಸ್ಯ ಪೀಡನಾತ್|

09059019c ಭೀಮಸೇನೇನ ಗೋವಿಂದ ಕಾಮಂ ತ್ವಂ ತು ಯಥಾತ್ಥ ಮಾಂ||

ಗೋವಿಂದ! ಭೀಮಸೇನನು ಬೇಕಂತಲೇ ಧರ್ಮವನ್ನು ಅವಹೇಳಿಸಿ ಎಲ್ಲವನ್ನೂ ವ್ಯಾಕುಲಗೊಳಿಸಿದ್ದಾನೆ. ಈ ವಿಷಯದಲ್ಲಿ ನೀನು ನಿನಗೆ ತೋರಿದ ಧರ್ಮವನ್ನು ನನಗೆ ಹೇಳುತ್ತಿರುವೆ!”

09059020 ವಾಸುದೇವ ಉವಾಚ

09059020a ಅರೋಷಣೋ ಹಿ ಧರ್ಮಾತ್ಮಾ ಸತತಂ ಧರ್ಮವತ್ಸಲಃ|

09059020c ಭವಾನ್ಪ್ರಖ್ಯಾಯತೇ ಲೋಕೇ ತಸ್ಮಾತ್ಸಂಶಾಮ್ಯ ಮಾ ಕ್ರುಧಃ||

ವಾಸುದೇವನು ಹೇಳಿದನು: “ನೀನು ಧರ್ಮಾತ್ಮ. ಸತತವೂ ಧರ್ಮವತ್ಸಲ. ಕ್ರೋಧರಹಿತನೆಂದು ಲೋಕದಲ್ಲಿ ಪ್ರಖ್ಯಾತನಾಗಿರುವೆ! ಆದುದರಿಂದ ಶಾಂತನಾಗು. ಕ್ರೋಧಿಸಬೇಡ!

09059021a ಪ್ರಾಪ್ತಂ ಕಲಿಯುಗಂ ವಿದ್ಧಿ ಪ್ರತಿಜ್ಞಾಂ ಪಾಂಡವಸ್ಯ ಚ|

09059021c ಆನೃಣ್ಯಂ ಯಾತು ವೈರಸ್ಯ ಪ್ರತಿಜ್ಞಾಯಾಶ್ಚ ಪಾಂಡವಃ||

ಕಲಿಯುಗವು ಪ್ರಾಪ್ತವಾದುದನ್ನೂ ಪಾಂಡವ ಭೀಮಸೇನನ ಪ್ರತಿಜ್ಞೆಯನ್ನೂ ಗಮನಿಸು. ಪಾಂಡವ ಭೀಮನು ವೈರ ಮತ್ತು ಪ್ರತಿಜ್ಞೆಗಳ ಋಣಗಳಿಂದ ಮುಕ್ತನಾಗಲಿ!””

09059022 ಸಂಜಯ ಉವಾಚ

09059022a ಧರ್ಮಚ್ಚಲಮಪಿ ಶ್ರುತ್ವಾ ಕೇಶವಾತ್ಸ ವಿಶಾಂ ಪತೇ|

09059022c ನೈವ ಪ್ರೀತಮನಾ ರಾಮೋ ವಚನಂ ಪ್ರಾಹ ಸಂಸದಿ||

ಸಂಜಯನು ಹೇಳಿದನು: “ವಿಶಾಂಪತೇ! ಕೇಶವನಿಂದ ವ್ಯಾಜರೂಪವಾದ ಧರ್ಮದ ವಿವರಣೆಯನ್ನು ಕೇಳಿ ರಾಮನಿಗೆ ಸಮಾಧಾನವಾಗಲಿಲ್ಲ. ರಾಜಸಂಸದಿಯಲ್ಲಿ ಅವನು ಈ ಮಾತುಗಳನ್ನಾಡಿದನು:

09059023a ಹತ್ವಾಧರ್ಮೇಣ ರಾಜಾನಂ ಧರ್ಮಾತ್ಮಾನಂ ಸುಯೋಧನಂ|

09059023c ಜಿಹ್ಮಯೋಧೀತಿ ಲೋಕೇಽಸ್ಮಿನ್ಖ್ಯಾತಿಂ ಯಾಸ್ಯತಿ ಪಾಂಡವಃ||

“ಧರ್ಮಾತ್ಮ ರಾಜಾ ಸುಯೋಧನನನ್ನು ಅಧರ್ಮದಿಂದ ಕೊಂದು ಪಾಂಡವ ಭೀಮನು ಈ ಲೋಕದಲ್ಲಿ ವಂಚನೆಯ ಯುದ್ಧಮಾಡುವವನು ಎಂದು ಪ್ರಖ್ಯಾತನಾಗುತ್ತಾನೆ!

09059024a ದುರ್ಯೋಧನೋಽಪಿ ಧರ್ಮಾತ್ಮಾ ಗತಿಂ ಯಾಸ್ಯತಿ ಶಾಶ್ವತೀಂ|

09059024c ಋಜುಯೋಧೀ ಹತೋ ರಾಜಾ ಧಾರ್ತರಾಷ್ಟ್ರೋ ನರಾಧಿಪಃ||

ಹತನಾದ ಧರ್ಮಾತ್ಮ ನ್ಯಾಯಯೋಧೀ ನರಾಧಿಪ ರಾಜಾ ಧಾರ್ತರಾಷ್ಟ್ರ ದುರ್ಯೋಧನನಾದರೋ ಶಾಶ್ವತ ಗತಿಯನ್ನು ಹೊಂದುತ್ತಾನೆ.

09059025a ಯುದ್ಧದೀಕ್ಷಾಂ ಪ್ರವಿಶ್ಯಾಜೌ ರಣಯಜ್ಞಂ ವಿತತ್ಯ ಚ|

09059025c ಹುತ್ವಾತ್ಮಾನಮಮಿತ್ರಾಗ್ನೌ ಪ್ರಾಪ ಚಾವಭೃಥಂ ಯಶಃ||

ಯುದ್ಧದೀಕ್ಷೆಯನ್ನು ಕೈಗೊಂಡು ಪ್ರವೇಶಿಸಿ ರಣಯಜ್ಞವನ್ನು ಪಸರಿಸಿ ಶತ್ರುಗಳೆಂಬ ಅಗ್ನಿಯಲ್ಲಿ ಆತ್ಮಾಹುತಿಯನ್ನಿತ್ತು ಇವನು ಯಶಸ್ಸೆಂಬ ಅವಭೃತವನ್ನು ಹೊಂದಿದನು.”

09059026a ಇತ್ಯುಕ್ತ್ವಾ ರಥಮಾಸ್ಥಾಯ ರೌಹಿಣೇಯಃ ಪ್ರತಾಪವಾನ್|

09059026c ಶ್ವೇತಾಭ್ರಶಿಖರಾಕಾರಃ ಪ್ರಯಯೌ ದ್ವಾರಕಾಂ ಪ್ರತಿ||

ಹೀಗೆ ಹೇಳಿ ರಥವನ್ನೇರಿ ಶ್ವೇತಗಿರಿಯ ಶಿಖರಪ್ರಾಯನಾದ ಪ್ರತಾಪವಾನ್ ರೌಹಿಣೇಯನು ದ್ವಾರಕೆಯ ಕಡೆ ಪ್ರಯಾಣಿಸಿದನು.

09059027a ಪಾಂಚಾಲಾಶ್ಚ ಸವಾರ್ಷ್ಣೇಯಾಃ ಪಾಂಡವಾಶ್ಚ ವಿಶಾಂ ಪತೇ|

09059027c ರಾಮೇ ದ್ವಾರವತೀಂ ಯಾತೇ ನಾತಿಪ್ರಮನಸೋಽಭವನ್||

ವಿಶಾಂಪತೇ! ರಾಮನು ದ್ವಾರವತಿಗೆ ತೆರಳುತ್ತಿರುವುವನ್ನು ನೋಡಿ ಪಾಂಚಾಲರು, ಸರ್ವ ವಾರ್ಷ್ಣೇಯರು ಮತ್ತು ಪಾಂಡವರು ಅತಿ ಪ್ರಸನ್ನರಾಗಲಿಲ್ಲ.

09059028a ತತೋ ಯುಧಿಷ್ಠಿರಂ ದೀನಂ ಚಿಂತಾಪರಮಧೋಮುಖಂ|

09059028c ಶೋಕೋಪಹತಸಂಕಲ್ಪಂ ವಾಸುದೇವೋಽಬ್ರವೀದಿದಂ||

ಆಗ ದೀನನಾಗಿ ಚಿಂತಾಪರನಾಗಿ ಶೋಕದಿಂದ ಭಗ್ನ ಸಂಕಲ್ಪನಾಗಿ ಮುಖವನ್ನು ಕೆಳಗೆಮಾಡಿಕೊಂಡಿದ್ದ ಯುಧಿಷ್ಠಿರನಿಗೆ ವಾಸುದೇವನು ಹೇಳಿದನು:

09059029a ಧರ್ಮರಾಜ ಕಿಮರ್ಥಂ ತ್ವಮಧರ್ಮಮನುಮನ್ಯಸೇ|

09059029c ಹತಬಂಧೋರ್ಯದೇತಸ್ಯ ಪತಿತಸ್ಯ ವಿಚೇತಸಃ||

“ಧರ್ಮರಾಜ! ಏಕೆ ಹೀಗೆ ನೀನು ಅಧರ್ಮಕಾರ್ಯಕ್ಕೆ ಒಪ್ಪಿಗೆಯನ್ನಿತ್ತೆ? ಬಂಧುಗಳನ್ನು ಕಳೆದುಕೊಂಡು ಪ್ರಜ್ಞಾಹೀನನಾಗಿ ಅವನು ಕೆಳಗೆ ಬಿದ್ದಿದ್ದನು.

09059030a ದುರ್ಯೋಧನಸ್ಯ ಭೀಮೇನ ಮೃದ್ಯಮಾನಂ ಶಿರಃ ಪದಾ|

09059030c ಉಪಪ್ರೇಕ್ಷಸಿ ಕಸ್ಮಾತ್ತ್ವಂ ಧರ್ಮಜ್ಞಃ ಸನ್ನರಾಧಿಪ||

ನರಾಧಿಪ! ಧರ್ಮಜ್ಞನಾದ ನೀನು ದುರ್ಯೋಧನನ ಶಿರವನ್ನು ಭೀಮಸೇನನು ಪಾದಗಳಿಂದ ತುಳಿಯುವುದನ್ನು ಏಕೆ ಉಪೇಕ್ಷಿಸಲಿಲ್ಲ?”

09059031 ಯುಧಿಷ್ಠಿರ ಉವಾಚ

09059031a ನ ಮಮೈತತ್ಪ್ರಿಯಂ ಕೃಷ್ಣ ಯದ್ರಾಜಾನಂ ವೃಕೋದರಃ|

09059031c ಪದಾ ಮೂರ್ಧ್ನ್ಯಸ್ಪೃಶತ್ಕ್ರೋಧಾನ್ನ ಚ ಹೃಷ್ಯೇ ಕುಲಕ್ಷಯೇ||

ಯುಧಿಷ್ಠಿರನು ಹೇಳಿದನು: “ಕೃಷ್ಣ! ವೃಕೋದರನು ಕ್ರೋಧದಿಂದ ಕಾಲಿನಿಂದ ರಾಜನನ್ನು ಮೆಟ್ಟಿದಿದು ನನಗೂ ಇಷ್ಟವಾಗಲಿಲ್ಲ. ಕುಲಕ್ಷಯದಲ್ಲಿ ಯಾವ ಸಂತೋಷವೂ ಇಲ್ಲ!

09059032a ನಿಕೃತ್ಯಾ ನಿಕೃತಾ ನಿತ್ಯಂ ಧೃತರಾಷ್ಟ್ರಸುತೈರ್ವಯಂ|

09059032c ಬಹೂನಿ ಪರುಷಾಣ್ಯುಕ್ತ್ವಾ ವನಂ ಪ್ರಸ್ಥಾಪಿತಾಃ ಸ್ಮ ಹ||

ಧೃತರಾಷ್ಟ್ರನ ಮಕ್ಕಳು ನಮ್ಮನ್ನು ನಿತ್ಯವೂ ವಂಚನೆಗಳಿಂದ ಮೋಸಗೊಳಿಸುತ್ತಿದ್ದರು. ಅನೇಕ ಕಠೋರಮಾತುಗಳನ್ನಾಡಿ ನಮ್ಮನ್ನು ವನಕ್ಕೆ ಕೂಡ ಕಳುಹಿಸಿದರು.

09059033a ಭೀಮಸೇನಸ್ಯ ತದ್ದುಃಖಮತೀವ ಹೃದಿ ವರ್ತತೇ|

09059033c ಇತಿ ಸಂಚಿಂತ್ಯ ವಾರ್ಷ್ಣೇಯ ಮಯೈತತ್ಸಮುಪೇಕ್ಷಿತಂ||

ಭೀಮಸೇನನ ಹೃದಯದಲ್ಲಿದ್ದ ಆ ಅತೀವ ದುಃಖವು ಅವನನ್ನು ಈ ರೀತಿ ನಡೆಸಿಕೊಂಡಿತು. ವಾರ್ಷ್ಣೇಯ! ಹೀಗೆ ಯೋಚಿಸಿ ನಾನು ಅವನ ಈ ಕೆಲಸವನ್ನು ಉಪೇಕ್ಷಿಸಲಿಲ್ಲ.

09059034a ತಸ್ಮಾದ್ಧತ್ವಾಕೃತಪ್ರಜ್ಞಂ ಲುಬ್ಧಂ ಕಾಮವಶಾನುಗಂ|

09059034c ಲಭತಾಂ ಪಾಂಡವಃ ಕಾಮಂ ಧರ್ಮೇಽಧರ್ಮೇಽಪಿ ವಾ ಕೃತೇ||

ಆದುದರಿಂದ ಪ್ರಜ್ಞೆಗಳಿಲ್ಲದ ಲುಬ್ಧನಾದ ಕಾಮವಶಾನುಗನಾದ ದುರ್ಯೋಧನನಿಗೆ ಧರ್ಮ ಅಥವಾ ಅಧರ್ಮ ಕಾರ್ಯವನ್ನೆಸಗಿ ಪಾಂಡವ ಭೀಮನು ತನ್ನ ಆಸೆಯನ್ನು ಪೂರೈಸಿಕೊಂಡಿದ್ದಾನೆ!””

09059035 ಸಂಜಯ ಉವಾಚ

09059035a ಇತ್ಯುಕ್ತೇ ಧರ್ಮರಾಜೇನ ವಾಸುದೇವೋಽಬ್ರವೀದಿದಂ|

09059035c ಕಾಮಮಸ್ತ್ವೇವಮಿತಿ ವೈ ಕೃಚ್ಚ್ರಾದ್ಯದುಕುಲೋದ್ವಹಃ||

ಸಂಜಯನು ಹೇಳಿದನು: “ಧರ್ಮರಾಜನು ಹೀಗೆ ಹೇಳಲು ಯದುಕುಲೋದ್ವಹ ವಾಸುದೇವನು ಬಹಳ ಕಷ್ಟದಿಂದ “ನಿನಗಿಷ್ಟವಾದಂತಾಗಲಿ!” ಎಂದು ಹೇಳಿದನು.

09059036a ಇತ್ಯುಕ್ತೋ ವಾಸುದೇವೇನ ಭೀಮಪ್ರಿಯಹಿತೈಷಿಣಾ|

09059036c ಅನ್ವಮೋದತ ತತ್ಸರ್ವಂ ಯದ್ಭೀಮೇನ ಕೃತಂ ಯುಧಿ||

ಭೀಮಪ್ರಿಯನಾದ ಅವನ ಹಿತೈಷಿಣಿಯಾದ ವಾಸುದೇವನು ಹೀಗೆ ಹೇಳಲು ಭೀಮನು ಯುದ್ಧದಲ್ಲಿ ಮಾಡಿದುದೆಲ್ಲವನ್ನೂ ಅನುಮೋದಿಸಿದನು.

09059037a ಭೀಮಸೇನೋಽಪಿ ಹತ್ವಾಜೌ ತವ ಪುತ್ರಮಮರ್ಷಣಃ|

09059037c ಅಭಿವಾದ್ಯಾಗ್ರತಃ ಸ್ಥಿತ್ವಾ ಸಂಪ್ರಹೃಷ್ಟಃ ಕೃತಾಂಜಲಿಃ||

ಅಸಹನಶೀಲ ಭೀಮಸೇನನಾದರೋ ನಿನ್ನ ಪುತ್ರನನ್ನು ಸಂಹರಿಸಿ ಸಂತೋಷದಿಂದ ಅಂಜಲೀಬದ್ಧನಾಗಿ ಅಣ್ಣನ ಎದಿರು ನಮಸ್ಕರಿಸಿ ನಿಂತುಕೊಂಡನು.

09059038a ಪ್ರೋವಾಚ ಸುಮಹಾತೇಜಾ ಧರ್ಮರಾಜಂ ಯುಧಿಷ್ಠಿರಂ|

09059038c ಹರ್ಷಾದುತ್ಫುಲ್ಲನಯನೋ ಜಿತಕಾಶೀ ವಿಶಾಂ ಪತೇ||

ವಿಶಾಂಪತೇ! ಆ ಮಹಾತೇಜಸ್ವಿಯು ವಿಜಯದ ಹರ್ಷದಿಂದ ಕಣ್ಣುಗಳನ್ನರಳಿಸಿಕೊಂಡು ಧರ್ಮರಾಜ ಯುಧಿಷ್ಠಿರನಿಗೆ ಹೇಳಿದನು:

09059039a ತವಾದ್ಯ ಪೃಥಿವೀ ರಾಜನ್ ಕ್ಷೇಮಾ ನಿಹತಕಂಟಕಾ|

09059039c ತಾಂ ಪ್ರಶಾಧಿ ಮಹಾರಾಜ ಸ್ವಧರ್ಮಮನುಪಾಲಯನ್||

“ರಾಜನ್! ಇಂದು ನಿನಗಾಗಿ ಈ ಪೃಥ್ವಿಯು ಕಂಟಕರನ್ನು ಕಳೆದುಕೊಂಡು ಕ್ಷೇಮವಾಗಿದೆ. ಮಹಾರಾಜ! ಸ್ವಧರ್ಮವನ್ನು ಪಾಲಿಸಿಕೊಂಡು ಇದರ ಮೇಲೆ ಪ್ರಶಾಸನ ಮಾಡು!

09059040a ಯಸ್ತು ಕರ್ತಾಸ್ಯ ವೈರಸ್ಯ ನಿಕೃತ್ಯಾ ನಿಕೃತಿಪ್ರಿಯಃ|

09059040c ಸೋಽಯಂ ವಿನಿಹತಃ ಶೇತೇ ಪೃಥಿವ್ಯಾಂ ಪೃಥಿವೀಪತೇ||

ಪೃಥಿವೀಪತೇ! ಯಾವ ಮೋಸಪ್ರಿಯನು ನಿನಗೆ ಮೋಸಗೈದನೋ ಆ ವೈರಿಯು ಇಗೋ ಹತನಾಗಿ ಭೂಮಿಯ ಮೇಲೆ ಮಲಗಿದ್ದಾನೆ.

09059041a ದುಃಶಾಸನಪ್ರಭೃತಯಃ ಸರ್ವೇ ತೇ ಚೋಗ್ರವಾದಿನಃ|

09059041c ರಾಧೇಯಃ ಶಕುನಿಶ್ಚಾಪಿ ನಿಹತಾಸ್ತವ ಶತ್ರವಃ||

ಕಠೋರಮಾತುಗಳನ್ನಾಡುತ್ತಿದ್ದ ನಿನ್ನ ಶತ್ರುಗಳಾದ ದುಃಶಾಸನನೇ ಮೊದಲಾಗಿ ರಾಧೇಯ, ಶಕುನಿ ಎಲ್ಲರೂ ಹತರಾಗಿದ್ದಾರೆ.

09059042a ಸೇಯಂ ರತ್ನಸಮಾಕೀರ್ಣಾ ಮಹೀ ಸವನಪರ್ವತಾ|

09059042c ಉಪಾವೃತ್ತಾ ಮಹಾರಾಜ ತ್ವಾಮದ್ಯ ನಿಹತದ್ವಿಷಂ||

ಮಹಾರಾಜ! ರತ್ನಸಮಾಕೀರ್ಣಳಾದ ಮಹಿಯು ವನಪರ್ವತಗಳೊಂದಿಗೆ ಹತಶತ್ರುವಾದ ನಿನ್ನನ್ನು ಉಪಾಸಿಸುತ್ತಾಳೆ!”

09059043 ಯುಧಿಷ್ಠಿರ ಉವಾಚ

09059043a ಗತಂ ವೈರಸ್ಯ ನಿಧನಂ ಹತೋ ರಾಜಾ ಸುಯೋಧನಃ|

09059043c ಕೃಷ್ಣಸ್ಯ ಮತಮಾಸ್ಥಾಯ ವಿಜಿತೇಯಂ ವಸುಂಧರಾ||

ಯುಧಿಷ್ಠಿರನು ಹೇಳಿದನು: “ನಿನ್ನ ವೈರವು ಕೊನೆಗೊಂಡಿತು. ರಾಜಾ ಸುಯೋಧನನು ಹತನಾದನು. ಕೃಷ್ಣನ ಸಲಹೆಗಳನ್ನು ಅನುಸರಿಸಿ ನಾವು ಈ ವಸುಂಧರೆಯನ್ನು ಗೆದ್ದೆವು!

09059044a ದಿಷ್ಟ್ಯಾ ಗತಸ್ತ್ವಮಾನೃಣ್ಯಂ ಮಾತುಃ ಕೋಪಸ್ಯ ಚೋಭಯೋಃ|

09059044c ದಿಷ್ಟ್ಯಾ ಜಯಸಿ ದುರ್ಧರ್ಷ ದಿಷ್ಟ್ಯಾ ಶತ್ರುರ್ನಿಪಾತಿತಃ||

ಒಳ್ಳೆಯದಾಯಿತು! ನೀನು ಮಾತೃ ಋಣ ಮತ್ತು ಕ್ರೋಧ ಋಣ ಇವೆರಡರಿಂದಲೂ ಮುಕ್ತನಾಗಿರುವೆ! ಒಳ್ಳೆಯದಾಯಿತು! ದುರ್ಧರ್ಷನನ್ನು ಗೆದ್ದಿರುವೆ! ಒಳ್ಳೆಯದಾಯಿತು! ಶತ್ರುವನ್ನು ಕೆಳಗುರುಳಿಸಿರುವೆ!””

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಗದಾಯುದ್ಧಪರ್ವಣಿ ಬಲದೇವಸಾಂತ್ವನೇ ಏಕೋನಷಷ್ಟಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಗದಾಯುದ್ಧಪರ್ವದಲ್ಲಿ ಬಲದೇವಸಾಂತ್ವನ ಎನ್ನುವ ಐವತ್ತೊಂಭತ್ತನೇ ಅಧ್ಯಾಯವು.

[1] ನಮ್ಮ ಪಿತಾಮಹ ಮತ್ತು ಅವರ ಮಾತಾಮಹ ಇಬ್ಬರೂ ಒಬ್ಬನೇ ಆಗಿದ್ದಾನೆ.

[2] ಅರ್ಜುನನಿಗೆ ತಂಗಿ ಸುಭದ್ರೆಯನ್ನು ಕೊಟ್ಟು ಸಂಬಂಧವನ್ನೂ ಬೆಳೆಸಿದ್ದೇವೆ.

Comments are closed.