Shalya Parva: Chapter 53

ಶಲ್ಯಪರ್ವ: ಸಾರಸ್ವತಪರ್ವ

೫೩

ಬಲರಾಮನು ತೀರ್ಥಯಾತ್ರೆಯನ್ನು ಮುಂದುವರಿಸಿ  ಸರಸ್ವತಿಯ ಉಗಮ ಸ್ಥಾನ ಪ್ಲಕ್ಷಪ್ರಸ್ರವಣಕ್ಕೆ ಬಂದುದು (೧-೧೪). ಅಲ್ಲಿಯೇ ನಾರದನಿಂದ ಮಹಾಭಾರತ ಯುದ್ಧದ ಕುರಿತು ಕೇಳಿದ ಬಲರಾಮನು ತನ್ನ ಶಿಷ್ಯರ ಗದಾಯುದ್ಧವನ್ನು ನೋಡಲು ಹೊರಟಿದುದು (೧೫-೩೭).

09053001 ವೈಶಂಪಾಯನ ಉವಾಚ

09053001a ಕುರುಕ್ಷೇತ್ರಂ ತತೋ ದೃಷ್ಟ್ವಾ ದತ್ತ್ವಾ ದಾಯಾಂಶ್ಚ ಸಾತ್ವತಃ|

09053001c ಆಶ್ರಮಂ ಸುಮಹದ್ದಿವ್ಯಮಗಮಜ್ಜನಮೇಜಯ||

ವೈಶಂಪಾಯನನು ಹೇಳಿದನು: “ಜನಮೇಜಯ! ಅನಂತರ ಸಾತ್ವತನು ಕುರುಕ್ಷೇತ್ರವನ್ನು ನೋಡಿ ಅಲ್ಲಿ ದಾನಗಳನ್ನಿತ್ತು ಅಲ್ಲಿಯೇ ಇದ್ದ ದಿವ್ಯ ಮಹಾ ಆಶ್ರಮವೊಂದಕ್ಕೆ ಹೋದನು.

09053002a ಮಧೂಕಾಂರವನೋಪೇತಂ ಪ್ಲಕ್ಷನ್ಯಗ್ರೋಧಸಂಕುಲಂ|

09053002c ಚಿರಿಬಿಲ್ವಯುತಂ ಪುಣ್ಯಂ ಪನಸಾರ್ಜುನಸಂಕುಲಂ||

ಆ ಪುಣ್ಯಾಶ್ರಮದಲ್ಲಿ ಹಿಪ್ಪೆ, ಮಾವು, ಅಶ್ವತ್ಥ, ಆಲ, ಚಿರಬಿಲ್ವ, ಹಲಸು, ಮತ್ತಿ ಮೊದಲಾದ ವೃಕ್ಷಸಂಕುಲಗಳಿದ್ದವು.

09053003a ತಂ ದೃಷ್ಟ್ವಾ ಯಾದವಶ್ರೇಷ್ಠಃ ಪ್ರವರಂ ಪುಣ್ಯಲಕ್ಷಣಂ|

09053003c ಪಪ್ರಚ್ಚ ತಾನೃಷೀನ್ಸರ್ವಾನ್ಕಸ್ಯಾಶ್ರಮವರಸ್ತ್ವಯಂ||

ಪುಣ್ಯಲಕ್ಷಣಗಳಿಂದ ಕೂಡಿದ್ದ ಆ ಮುಖ್ಯ ಆಶ್ರಮವನ್ನು ಕಂಡು ಯಾದವಶ್ರೇಷ್ಠನು ಅಲ್ಲಿದ್ದ ಋಷಿಗಳೆಲ್ಲರನ್ನೂ “ನಿಮ್ಮ ಈ ಆಶ್ರಮವು ಯಾರದ್ದು?” ಎಂದು ಪ್ರಶ್ನಿಸಿದನು.

09053004a ತೇ ತು ಸರ್ವೇ ಮಹಾತ್ಮಾನಮೂಚೂ ರಾಜನ್ ಹಲಾಯುಧಂ|

09053004c ಶೃಣು ವಿಸ್ತರತೋ ರಾಮ ಯಸ್ಯಾಯಂ ಪೂರ್ವಮಾಶ್ರಮಃ||

ರಾಜನ್! ಅವರೆಲ್ಲ ಮಹಾತ್ಮರು ಹಲಾಯುಧನಿಗೆ ಹೇಳಿದರು: “ರಾಮ! ಹಿಂದೆ ಈ ಆಶ್ರಮವು ಯಾರದ್ದಾಗಿತ್ತೆಂದು ನಾವು ವಿಸ್ತರಿಸಿ ಹೇಳುತ್ತೇವೆ. ಕೇಳು.

09053005a ಅತ್ರ ವಿಷ್ಣುಃ ಪುರಾ ದೇವಸ್ತಪ್ತವಾಂಸ್ತಪ ಉತ್ತಮಂ|

09053005c ಅತ್ರಾಸ್ಯ ವಿಧಿವದ್ಯಜ್ಞಾಃ ಸರ್ವೇ ವೃತ್ತಾಃ ಸನಾತನಾಃ||

ಹಿಂದೆ ಇಲ್ಲಿ ದೇವ ವಿಷ್ಣುವು ಉತ್ತಮ ತಪಸ್ಸನ್ನು ತಪಿಸಿದನು. ಇಲ್ಲಿಯೇ ಅವನು ವಿವಿಧ ಸನಾತನ ಯಜ್ಞಗಳನ್ನು ನೆರವೇರಿಸಿದನು.

09053006a ಅತ್ರೈವ ಬ್ರಾಹ್ಮಣೀ ಸಿದ್ಧಾ ಕೌಮಾರಬ್ರಹ್ಮಚಾರಿಣೀ|

09053006c ಯೋಗಯುಕ್ತಾ ದಿವಂ ಯಾತಾ ತಪಃಸಿದ್ಧಾ ತಪಸ್ವಿನೀ||

ಇಲ್ಲಿಯೇ ಕೌಮಾರ್ಯದಿಂದಲೇ ಬ್ರಹ್ಮಚಾರಿಣಿಯಾಗಿದ್ದ ಯೋಗಯುಕ್ತಳಾಗಿ ತಪಃಸಿದ್ಧಿಯನ್ನು ಪಡೆದು ಸ್ವರ್ಗವನ್ನು ಸೇರಿದ ಸಿದ್ಧೆ ತಪಸ್ವಿನೀ ಬ್ರಾಹ್ಮಣಿಯು ಇರುತ್ತಿದ್ದಳು.

09053007a ಬಭೂವ ಶ್ರೀಮತೀ ರಾಜನ್ ಶಾಂಡಿಲ್ಯಸ್ಯ ಮಹಾತ್ಮನಃ|

09053007c ಸುತಾ ಧೃತವ್ರತಾ ಸಾಧ್ವೀ ನಿಯತಾ ಬ್ರಹ್ಮಚಾರಿಣೀ||

ರಾಜನ್! ಅವಳು ಮಹಾತ್ಮ ಶಾಂಡಿಲ್ಯನ ಮಗಳು. ಧೃತವ್ರತೆ, ಸಾಧ್ವೀ, ಬ್ರಹ್ಮಚಾರಿಣೀ ಮತ್ತು ನಿಯತೆಯಾಗಿದ್ದಳು.

09053008a ಸಾ ತು ಪ್ರಾಪ್ಯ ಪರಂ ಯೋಗಂ ಗತಾ ಸ್ವರ್ಗಮನುತ್ತಮಂ|

09053008c ಭುಕ್ತ್ವಾಶ್ರಮೇಽಶ್ವಮೇಧಸ್ಯ ಫಲಂ ಫಲವತಾಂ ಶುಭಾ||

09053008e ಗತಾ ಸ್ವರ್ಗಂ ಮಹಾಭಾಗಾ ಪೂಜಿತಾ ನಿಯತಾತ್ಮಭಿಃ||

ಅವಳು ಪರಮಯೋಗವನ್ನು ಪಡೆದು ಅನುತ್ತಮ ಸ್ವರ್ಗಕ್ಕೆ ಹೋದಳು. ಈ ಆಶ್ರಮದಲ್ಲಿ ಅಶ್ವಮೇಧದ ಶುಭ ಫಲವನ್ನು ಪಡೆದು ಸ್ವರ್ಗಕ್ಕೆ ಹೋದ ಆ ಮಹಾಭಾಗೆಯನ್ನು ನಿಯತಾತ್ಮರು ಪೂಜಿಸುತ್ತಾರೆ.”

09053009a ಅಭಿಗಮ್ಯಾಶ್ರಮಂ ಪುಣ್ಯಂ ದೃಷ್ಟ್ವಾ ಚ ಯದುಪುಂಗವಃ|

09053009c ಋಷೀಂಸ್ತಾನಭಿವಾದ್ಯಾಥ ಪಾರ್ಶ್ವೇ ಹಿಮವತೋಽಚ್ಯುತಃ||

09053009e ಸ್ಕಂಧಾವಾರಾಣಿ ಸರ್ವಾಣಿ ನಿವರ್ತ್ಯಾರುರುಹೇಽಚಲಂ||

ಹಿಮಾಲಯದ ಪಾರ್ಶ್ವದಲ್ಲಿದ್ದ ಅ ಪುಣ್ಯಾಶ್ರಮಕ್ಕೆ ಹೋಗಿ ನೋಡಿ ಅಚ್ಯುತ ಯದುಪುಂಗವನು ಅಲ್ಲಿದ್ದ ಋಷಿಗಳನ್ನು ಅಭಿವಂದಿಸಿದನು. ನಂತರ ಎಲ್ಲವನ್ನೂ ಭುಜಗಳ ಮೇಲೆ ಹೊತ್ತು ಪರ್ವತವನ್ನು ಏರಲು ಉಪಕ್ರಮಿಸಿದನು.

09053010a ನಾತಿದೂರಂ ತತೋ ಗತ್ವಾ ನಗಂ ತಾಲಧ್ವಜೋ ಬಲೀ|

09053010c ಪುಣ್ಯಂ ತೀರ್ಥವರಂ ದೃಷ್ಟ್ವಾ ವಿಸ್ಮಯಂ ಪರಮಂ ಗತಃ||

09053011a ಪ್ರಭವಂ ಚ ಸರಸ್ವತ್ಯಾಃ ಪ್ಲಕ್ಷಪ್ರಸ್ರವಣಂ ಬಲಃ|

09053011c ಸಂಪ್ರಾಪ್ತಃ ಕಾರಪಚನಂ ತೀರ್ಥಪ್ರವರಮುತ್ತಮಂ||

ಆ ಪರ್ವತದಮೇಲೆ ಸ್ವಲ್ಪ ದೂರ ಹೋಗುತ್ತಲೇ ಬಲಶಾಲಿ ತಾಲಧ್ವಜನು ಪುಣ್ಯವಾದ ಶ್ರೇಷ್ಠ ತೀರ್ಥ, ಸರಸ್ವತಿಯ ಉಗಮಸ್ಥಾನ, ಪ್ಲಕ್ಷಪ್ರಸ್ರವಣವನ್ನು ನೋಡಿ ಪರಮ ವಿಸ್ಮಿತನಾದನು. ನಂತರ ಅವನು ತೀರ್ಥಪ್ರವರ ಉತ್ತಮ ಕಾರಪಚನವನ್ನು ತಲುಪಿದನು.

09053012a ಹಲಾಯುಧಸ್ತತ್ರ ಚಾಪಿ ದತ್ತ್ವಾ ದಾನಂ ಮಹಾಬಲಃ|

09053012c ಆಪ್ಲುತಃ ಸಲಿಲೇ ಶೀತೇ ತಸ್ಮಾಚ್ಚಾಪಿ ಜಗಾಮ ಹ||

09053012e ಆಶ್ರಮಂ ಪರಮಪ್ರೀತೋ ಮಿತ್ರಸ್ಯ ವರುಣಸ್ಯ ಚ

09053013a ಇಂದ್ರೋಽಗ್ನಿರಾರ್ಯಮಾ ಚೈವ ಯತ್ರ ಪ್ರಾಕ್ಪ್ರೀತಿಮಾಪ್ನುವನ್|

09053013c ತಂ ದೇಶಂ ಕಾರಪಚನಾದ್ಯಮುನಾಯಾಂ ಜಗಾಮ ಹ||

ಅಲ್ಲಿ ಕೂಡ ಬಹಾಬಲ ಹಲಾಯುಧನು ದಾನವನ್ನು ನೀಡಿ ಶೀತಲ ನೀರಿನಲ್ಲಿ ಸ್ನಾನಮಾಡಿ ಅಲ್ಲಿಂದ ಮುಂದುವರೆದನು. ಕಾರಪಚನದಿಂದ ಅವನು ಯಮುನೆಯ ತೀರದಲ್ಲಿದ್ದ ಮಿತ್ರಾವರುಣರ ಆಶ್ರಮವನ್ನು ತಲುಪಿ ಪರಮಪ್ರೀತನಾದನು. ಅಲ್ಲಿ ಹಿಂದೆ ಇಂದ್ರ, ಅಗ್ನಿ ಮತ್ತು ಯಮರು ಪ್ರಸನ್ನತೆಯನ್ನು ಪಡೆದುಕೊಂಡಿದ್ದರು.

09053014a ಸ್ನಾತ್ವಾ ತತ್ರಾಪಿ ಧರ್ಮಾತ್ಮಾ ಪರಾಂ ತುಷ್ಟಿಮವಾಪ್ಯ ಚ|

09053014c ಋಷಿಭಿಶ್ಚೈವ ಸಿದ್ಧೈಶ್ಚ ಸಹಿತೋ ವೈ ಮಹಾಬಲಃ|

09053014e ಉಪವಿಷ್ಟಃ ಕಥಾಃ ಶುಭ್ರಾಃ ಶುಶ್ರಾವ ಯದುಪುಂಗವಃ||

ಅಲ್ಲಿ ಕೂಡ ಆ ಧರ್ಮಾತ್ಮ ಮಹಾಬಲ ಯದುಪುಂಗವನು ಸ್ನಾನಮಾಡಿ, ಋಷಿಗಳು ಮತ್ತು ಸಿದ್ಧರ ಸಹಿತ ಕುಳಿತು ಶುಭ್ರ ಕಥೆಗಳನ್ನು ಕೇಳಿದನು.

09053015a ತಥಾ ತು ತಿಷ್ಠತಾಂ ತೇಷಾಂ ನಾರದೋ ಭಗವಾನೃಷಿಃ|

09053015c ಆಜಗಾಮಾಥ ತಂ ದೇಶಂ ಯತ್ರ ರಾಮೋ ವ್ಯವಸ್ಥಿತಃ||

ಹಾಗೆ ಅವರೊಡನೆ ಉಳಿದುಕೊಂಡಿರಲು, ರಾಮನಿದ್ದ ಪ್ರದೇಶಕ್ಕೆ ಭಗವಾನ್ ಋಷಿ ನಾರದನು ಆಗಮಿಸಿದನು.

09053016a ಜಟಾಮಂಡಲಸಂವೀತಃ ಸ್ವರ್ಣಚೀರೀ ಮಹಾತಪಾಃ|

09053016c ಹೇಮದಂಡಧರೋ ರಾಜನ್ಕಮಂಡಲುಧರಸ್ತಥಾ||

ರಾಜನ್! ಆ ಮಹಾತಪಸ್ವಿಯು ಜಟಾಮಂಡಲವನ್ನು ಧರಿಸಿದ್ದನು. ಸ್ವರ್ಣವರ್ಣದ ನಾರುಮಡಿಯನ್ನುಟ್ಟಿದ್ದನು. ಹೇಮದಂಡವನ್ನೂ ಕಮಂಡಲುವನ್ನೂ ಹಿಡಿದಿದ್ದನು.

09053017a ಕಚ್ಚಪೀಂ ಸುಖಶಬ್ದಾಂ ತಾಂ ಗೃಹ್ಯ ವೀಣಾಂ ಮನೋರಮಾಂ|

09053017c ನೃತ್ಯೇ ಗೀತೇ ಚ ಕುಶಲೋ ದೇವಬ್ರಾಹ್ಮಣಪೂಜಿತಃ||

ನೃತ್ಯಗೀತೆಗಳಲ್ಲಿ ಕುಶಲನಾಗಿದ್ದ ದೇವಬ್ರಾಹ್ಮಣಪೂಜಿತನಾಗಿದ್ದ ಅವನು ಸುಖಶಬ್ಧವುಳ್ಳ ಕಚ್ಚಪೀ ಎಂಬ ಮನೋರಮ ವೀಣೆಯನ್ನು ಹಿಡಿದಿದ್ದನು.

09053018a ಪ್ರಕರ್ತಾ ಕಲಹಾನಾಂ ಚ ನಿತ್ಯಂ ಚ ಕಲಹಪ್ರಿಯಃ|

09053018c ತಂ ದೇಶಮಗಮದ್ಯತ್ರ ಶ್ರೀಮಾನ್ರಾಮೋ ವ್ಯವಸ್ಥಿತಃ||

ನಿತ್ಯವೂ ಕಲಹಗಳನ್ನುಂಟುಮಾಡುವ ಆ ಕಲಹಪ್ರಿಯನು ಶ್ರೀಮಾನ್ ರಾಮನು ಇದ್ದ ಪ್ರದೇಶಕ್ಕೆ ಆಗಮಿಸಿದನು.

09053019a ಪ್ರತ್ಯುತ್ಥಾಯ ತು ತೇ ಸರ್ವೇ ಪೂಜಯಿತ್ವಾ ಯತವ್ರತಂ|

09053019c ದೇವರ್ಷಿಂ ಪರ್ಯಪೃಚ್ಚಂತ ಯಥಾವೃತ್ತಂ ಕುರೂನ್ಪ್ರತಿ||

ಅವರೆಲ್ಲರೂ ಮೇಲೆದ್ದು ಯತವ್ರತನನ್ನು ಪೂಜಿಸಿದರು. ನಂತರ ಅವನು ಕುರುಗಳ ಸಮಾಚಾರವೇನೆಂದು ದೇವರ್ಷಿಯನ್ನು ಪ್ರಶ್ನಿಸಿದನು.

09053020a ತತೋಽಸ್ಯಾಕಥಯದ್ರಾಜನ್ನಾರದಃ ಸರ್ವಧರ್ಮವಿತ್|

09053020c ಸರ್ವಮೇವ ಯಥಾವೃತ್ತಮತೀತಂ ಕುರುಸಂಕ್ಷಯಂ||

ರಾಜನ್! ಸರ್ವಧರ್ಮಗಳನ್ನು ತಿಳಿದಿರುವ ನಾರದನು ಕುರುಸಂಕ್ಷಯದ ಕುರಿತು ನಡೆದಂತೆ ಎಲ್ಲವನ್ನೂ ಹೇಳಿದನು.

09053021a ತತೋಽಬ್ರವೀದ್ರೌಹಿಣೇಯೋ ನಾರದಂ ದೀನಯಾ ಗಿರಾ|

09053021c ಕಿಮವಸ್ಥಂ ತು ತತ್ ಕ್ಷತ್ರಂ ಯೇ ಚ ತತ್ರಾಭವನ್ನೃಪಾಃ||

09053022a ಶ್ರುತಮೇತನ್ಮಯಾ ಪೂರ್ವಂ ಸರ್ವಮೇವ ತಪೋಧನ|

09053022c ವಿಸ್ತರಶ್ರವಣೇ ಜಾತಂ ಕೌತೂಹಲಮತೀವ ಮೇ||

ಆಗ ರೌಹಿಣೇಯನು ದೀನಸ್ವರದಲ್ಲಿ ನಾರದನಿಗೆ ಹೇಳಿದನು: “ತಪೋಧನ! ಕ್ಷತ್ರಿಯರಿಗೆ ಎಂಥಹ ದುರವಸ್ಥೆಯುಂಟಾಯಿತು! ಅಲ್ಲಿದ್ದ ನೃಪರಿಗೇನಾಯಿತು? ಈ ಹಿಂದೆ ನಾನು ಇದರ ಕುರಿತು ಅಲ್ಲಲ್ಲಿ ಕೇಳುತ್ತಿದ್ದೆನು. ಆದರೆ ವಿಸ್ತಾರವಾಗಿ ನಿನ್ನಿಂದ ಕೇಳಲು ನನ್ನಲ್ಲಿ ಕುತೂಹಲವುಂಟಾಗಿದೆ.”

09053023 ನಾರದ ಉವಾಚ

09053023a ಪೂರ್ವಮೇವ ಹತೋ ಭೀಷ್ಮೋ ದ್ರೋಣಃ ಸಿಂಧುಪತಿಸ್ತಥಾ|

09053023c ಹತೋ ವೈಕರ್ತನಃ ಕರ್ಣಃ ಪುತ್ರಾಶ್ಚಾಸ್ಯ ಮಹಾರಥಾಃ||

09053024a ಭೂರಿಶ್ರವಾ ರೌಹಿಣೇಯ ಮದ್ರರಾಜಶ್ಚ ವೀರ್ಯವಾನ್|

09053024c ಏತೇ ಚಾನ್ಯೇ ಚ ಬಹವಸ್ತತ್ರ ತತ್ರ ಮಹಾಬಲಾಃ||

09053025a ಪ್ರಿಯಾನ್ಪ್ರಾಣಾನ್ಪರಿತ್ಯಜ್ಯ ಪ್ರಿಯಾರ್ಥಂ ಕೌರವಸ್ಯ ವೈ|

09053025c ರಾಜಾನೋ ರಾಜಪುತ್ರಾಶ್ಚ ಸಮರೇಷ್ವನಿವರ್ತಿನಃ||

ನಾರದನು ಹೇಳಿದನು: “ಎಲ್ಲರಿಗಿಂತ ಮೊದಲು ಭೀಷ್ಮನು ಹತನಾದನು. ಅನಂತರ ದ್ರೋಣ, ಸಿಂಧುಪತಿ, ವೈಕರ್ತನ ಕರ್ಣ ಮತ್ತು ಅವನ ಮಹಾರಥ ಪುತ್ರರು ಹತರಾದರು. ರೌಹಿಣೇಯ! ಭೂರಿಶ್ರವ, ವೀರ್ಯವಾನ್ ಮದ್ರರಾಜ, ಮತ್ತು ಇನ್ನೂ ಇತರ ಅನೇಕ ಮಹಾಬಲ, ಸಮರದಿಂದ ಹಿಂದಿರುಗದೇ ಇದ್ದ, ರಾಜರು ಮತ್ತು ರಾಜಪುತ್ರರು ಕೌರವನ ಪ್ರೀತಿಗಾಗಿ ಪ್ರಿಯ ಪ್ರಾಣಗಳನ್ನು ತೊರೆದರು.

09053026a ಅಹತಾಂಸ್ತು ಮಹಾಬಾಹೋ ಶೃಣು ಮೇ ತತ್ರ ಮಾಧವ|

09053026c ಧಾರ್ತರಾಷ್ಟ್ರಬಲೇ ಶೇಷಾಃ ಕೃಪೋ ಭೋಜಶ್ಚ ವೀರ್ಯವಾನ್||

09053026e ಅಶ್ವತ್ಥಾಮಾ ಚ ವಿಕ್ರಾಂತೋ ಭಗ್ನಸೈನ್ಯಾ ದಿಶೋ ಗತಾಃ||

ಮಹಾಬಾಹೋ! ಮಾಧವ! ನಾನು ನಿನಗೆ ಹೇಳುವುದನ್ನು ಕೇಳು. ಅಲ್ಲಿ ಧಾರ್ತರಾಷ್ಟ್ರನ ಬಲದಲ್ಲಿ ಉಳಿದಿರುವವರು ಕೃಪ, ವೀರ್ಯವಾನ್ ಭೋಜ ಮತ್ತು ವಿಕ್ರಾಂತ ಅಶ್ವತ್ಥಾಮ. ಸೇನೆಗಳು ಭಗ್ನವಾಗಿ ದಿಕ್ಕಾಪಾಲಾಗಿ ಹೋಗಿವೆ.

09053027a ದುರ್ಯೋಧನೋ ಹತೇ ಸೈನ್ಯೇ ಪ್ರದ್ರುತೇಷು ಕೃಪಾದಿಷು|

09053027c ಹ್ರದಂ ದ್ವೈಪಾಯನಂ ನಾಮ ವಿವೇಶ ಭೃಶದುಃಖಿತಃ||

ಸೇನೆಯು ಹತವಾಗಲು ಮತ್ತು ಕೃಪಾದಿಗಳು ಪಲಾಯನಗೈಯಲು ತುಂಬಾ ದುಃಖಿತನಾದ ದುರ್ಯೋಧನನು ದ್ವೈಪಾಯನವೆಂಬ ಹೆಸರಿನ ಸರೋವರವನ್ನು ಹೊಕ್ಕನು.

09053028a ಶಯಾನಂ ಧಾರ್ತರಾಷ್ಟ್ರಂ ತು ಸ್ತಂಭಿತೇ ಸಲಿಲೇ ತದಾ|

09053028c ಪಾಂಡವಾಃ ಸಹ ಕೃಷ್ಣೇನ ವಾಗ್ಭಿರುಗ್ರಾಭಿರಾರ್ದಯನ್||

ನೀರನ್ನು ಸ್ತಂಭಿಸಿ ಮಲಗಿದ್ದ ಧಾರ್ತರಾಷ್ಟ್ರನನ್ನು ಕೃಷ್ಣನೊಂದಿಗೆ ಪಾಂಡವರು ಉಗ್ರ ಮಾತುಗಳಿಂದ ನಿಂದಿಸಿದರು.

09053029a ಸ ತುದ್ಯಮಾನೋ ಬಲವಾನ್ವಾಗ್ಭೀ ರಾಮ ಸಮಂತತಃ|

09053029c ಉತ್ಥಿತಃ ಪ್ರಾಗ್ಘ್ರದಾದ್ವೀರಃ ಪ್ರಗೃಹ್ಯ ಮಹತೀಂ ಗದಾಂ||

ರಾಮ! ಎಲ್ಲ ಕಡೆಗಳಿಂದ ಮಾತಿನ ಬಾಣಗಳಿಂದ ಚುಚ್ಚಲ್ಪಟ್ಟ ಬಲವಾನ್ ವೀರ ದುರ್ಯೋಧನನು ಮಹಾ ಗದೆಯನ್ನು ಹಿಡಿದು ಮೇಲೆದ್ದು ಬಂದನು.

09053030a ಸ ಚಾಪ್ಯುಪಗತೋ ಯುದ್ಧಂ ಭೀಮೇನ ಸಹ ಸಾಂಪ್ರತಂ|

09053030c ಭವಿಷ್ಯತಿ ಚ ತತ್ಸದ್ಯಸ್ತಯೋ ರಾಮ ಸುದಾರುಣಂ||

ಈಗ ಅವನು ಭೀಮನೊಡನೆ ಯುದ್ಧಮಾಡಲು ಹೋಗುತ್ತಿದ್ದಾನೆ. ರಾಮ! ಅವರಿಬ್ಬರ ನಡುವೆ ಸುದಾರುಣ ಯುದ್ಧವು ನಡೆಯಲಿಕ್ಕಿದೆ.

09053031a ಯದಿ ಕೌತೂಹಲಂ ತೇಽಸ್ತಿ ವ್ರಜ ಮಾಧವ ಮಾ ಚಿರಂ|

09053031c ಪಶ್ಯ ಯುದ್ಧಂ ಮಹಾಘೋರಂ ಶಿಷ್ಯಯೋರ್ಯದಿ ಮನ್ಯಸೇ||

ಮಾಧವ! ನಿನ್ನಲ್ಲಿ ಕುತೂಹಲವಿದ್ದರೆ ಈಗಲೇ ಹೊರಡು! ತಡಮಾಡಬೇಡ! ನಿನಗೆ ಇಷ್ಟವಾದರೆ ನಿನ್ನ ಶಿಷ್ಯರ ನಡುವೆ ನಡೆಯುವ ಮಹಾಘೋರ ಯುದ್ಧವನ್ನು ನೋಡು!””

09053032 ವೈಶಂಪಾಯನ ಉವಾಚ

09053032a ನಾರದಸ್ಯ ವಚಃ ಶ್ರುತ್ವಾ ತಾನಭ್ಯರ್ಚ್ಯ ದ್ವಿಜರ್ಷಭಾನ್|

09053032c ಸರ್ವಾನ್ವಿಸರ್ಜಯಾಮಾಸ ಯೇ ತೇನಾಭ್ಯಾಗತಾಃ ಸಹ|

09053032e ಗಮ್ಯತಾಂ ದ್ವಾರಕಾಂ ಚೇತಿ ಸೋಽನ್ವಶಾದನುಯಾಯಿನಃ||

ವೈಶಂಪಾಯನನು ಹೇಳಿದನು: “ನಾರದನ ಮಾತನ್ನು ಕೇಳಿ ಅವನು ತನ್ನೊಂದಿಗೆ ಬಂದಿದ್ದ ದ್ವಿಜರ್ಷಭರೆಲ್ಲರನ್ನು ಪೂಜಿಸಿ, ಕಳುಹಿಸಿಕೊಟ್ಟನು. ತನ್ನ ಅನುಯಾಯಿಗಳಿಗೆ ದ್ವಾರಕೆಗೆ ತೆರಳಿ ಎಂದು ಆದೇಶವನ್ನಿತ್ತನು.

09053033a ಸೋಽವತೀರ್ಯಾಚಲಶ್ರೇಷ್ಠಾತ್ ಪ್ಲಕ್ಷಪ್ರಸ್ರವಣಾಚ್ಚುಭಾತ್|

09053033c ತತಃ ಪ್ರೀತಮನಾ ರಾಮಃ ಶ್ರುತ್ವಾ ತೀರ್ಥಫಲಂ ಮಹತ್||

09053033e ವಿಪ್ರಾಣಾಂ ಸಂನಿಧೌ ಶ್ಲೋಕಮಗಾಯದಿದಮಚ್ಯುತಃ||

ಶ್ರೇಷ್ಠ ಪರ್ವತ ಶುಭ ಪ್ಲಕ್ಷಪ್ರಸ್ರವಣದಿಂದ ಕೆಳಗಿಳಿದು, ತೀರ್ಥಗಳ ಮಹಾಫಲಗಳ ಕುರಿತು ಕೇಳಿ ಪ್ರೀತಮನಸ್ಕನಾದ ಅಚ್ಯುತ ರಾಮನು ವಿಪ್ರರ ಸನ್ನಿಧಿಯಲ್ಲಿ ಈ ಗೀತೆಯನ್ನು ಹಾಡಿದನು:

09053034a ಸರಸ್ವತೀವಾಸಸಮಾ ಕುತೋ ರತಿಃ

        ಸರಸ್ವತೀವಾಸಸಮಾಃ ಕುತೋ ಗುಣಾಃ|

09053034c ಸರಸ್ವತೀಂ ಪ್ರಾಪ್ಯ ದಿವಂ ಗತಾ ಜನಾಃ

        ಸದಾ ಸ್ಮರಿಷ್ಯಂತಿ ನದೀಂ ಸರಸ್ವತೀಂ||

“ಸರಸ್ವತೀ ತೀರದಲ್ಲಿ ವಾಸಿಸುವುದರಿಂದ ಮನಸ್ಸಿಗೆ ಉಂಟಾಗುವ ಆಹ್ಲಾದವು ಮತ್ತೆಲ್ಲಿ ಲಭಿಸುತ್ತದೆ? ಸರಸ್ವತೀ ತೀರದಲ್ಲಿ ವಾಸಿಸುವುದರಿಂದ ಲಭಿಸುವ ಗುಣವು ಮತ್ತೆಲ್ಲಿ ದೊರೆಯುತ್ತದೆ? ಸರಸ್ವತೀ ತೀರದಲ್ಲಿದ್ದುಕೊಂಡು ಸ್ವರ್ಗಕ್ಕೆ ಹೋದ ಜನರು ಅಲ್ಲಿಯೂ ಕೂಡ ಸದಾ ಸರಸ್ವತೀ ನದಿಯನ್ನು ಸ್ಮರಿಸಿಕೊಂಡಿರುತ್ತಾರೆ!

09053035a ಸರಸ್ವತೀ ಸರ್ವನದೀಷು ಪುಣ್ಯಾ

        ಸರಸ್ವತೀ ಲೋಕಸುಖಾವಹಾ ಸದಾ|

09053035c ಸರಸ್ವತೀಂ ಪ್ರಾಪ್ಯ ಜನಾಃ ಸುದುಷ್ಕೃತಾಃ

        ದಾ ನ ಶೋಚಂತಿ ಪರತ್ರ ಚೇಹ ಚ||

ಸರ್ವನದಿಗಳಲ್ಲಿ ಸರಸ್ವತಿಯು ಪುಣ್ಯೆಯು. ಸರಸ್ವತಿಯು ಸದಾ ಲೋಕಸುಖಕ್ಕಾಗಿ ಹರಿಯುವಳು. ಸರಸ್ವತಿಯನ್ನು ಸೇರಿದ ದುಷ್ಕೃತ ಜನರು ಇಲ್ಲಿಯಾಗಲೀ ಅಲ್ಲಿಯಾಗಲೀ ಸದಾ ಶೋಕಿಸುವುದಿಲ್ಲ.”

09053036a ತತೋ ಮುಹುರ್ಮುಹುಃ ಪ್ರೀತ್ಯಾ ಪ್ರೇಕ್ಷಮಾಣಃ ಸರಸ್ವತೀಂ|

09053036c ಹಯೈರ್ಯುಕ್ತಂ ರಥಂ ಶುಭ್ರಮಾತಿಷ್ಠತ ಪರಂತಪಃ||

09053037a ಸ ಶೀಘ್ರಗಾಮಿನಾ ತೇನ ರಥೇನ ಯದುಪುಂಗವಃ|

09053037c ದಿದೃಕ್ಷುರಭಿಸಂಪ್ರಾಪ್ತಃ ಶಿಷ್ಯಯುದ್ಧಮುಪಸ್ಥಿತಂ||

ಅನಂತರ ಪ್ರೀತಿಯಿಂದ ಮತ್ತೆ ಮತ್ತೆ ಸರಸ್ವತಿಯನ್ನು ನೋಡುತ್ತಾ ಆ ಪರಂತಪನು ಕುದುರೆಗಳನ್ನು ಹೂಡಿದ್ದ ಶುಭ್ರ ರಥವನ್ನೇರಿದನು. ಶೀಘ್ರಗಾಮಿ ಆ ರಥದಲ್ಲಿ ಕುಳಿತು ಯದುಪುಂಗವನು ಶಿಷ್ಯರ ಯುದ್ಧವನ್ನು ನೋಡುವ ಸಲುವಾಗಿ ಅವರ ಸಮೀಪಕ್ಕೆ ಆಗಮಿಸಿದನು.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತೀರ್ಥಯಾತ್ರಾಯಾಂ ತ್ರಿಪಂಚಾಶತ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರೆ ಎನ್ನುವ ಐವತ್ಮೂರನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೮/೧೮, ಉಪಪರ್ವಗಳು-೭೬/೧೦೦, ಅಧ್ಯಾಯಗಳು-೧೨೭೨/೧೯೯೫, ಶ್ಲೋಕಗಳು-೪೭೯೬೨/೭೩೭೮೪

Comments are closed.