ಶಲ್ಯಪರ್ವ: ಸಾರಸ್ವತಪರ್ವ
೫೦
ಮಹರ್ಷಿ ದಧೀಚಿಯಿಂದ ಸರಸ್ವತಿಯಲ್ಲಿ ಋಷಿ ಸಾರಸ್ವತನ ಜನನ (೧-೨೪). ದಧೀಚಿಯ ಅಸ್ಥಿಗಳಿಂದ ಇಂದ್ರನು ಆಯುಧಗಳನ್ನು ತಯಾರಿಸಿ ದೈತ್ಯ-ದಾನವರನ್ನು ಸಂಹರಿಸಿದುದು (೨೫-೩೩). ಸಾರಸ್ವತ ಮುನಿಯು ಹನ್ನೆರಡು ವರ್ಷಗಳ ಬರಗಾಲದಲ್ಲಿ ಇತರ ಮುನಿಗಳಿಗೆ ವೇದಾಧ್ಯಯನಗಳನ್ನು ಮಾಡಿಸಿದುದು (೩೪-೫೧).
09050001 ವೈಶಂಪಾಯನ ಉವಾಚ
09050001a ಯತ್ರೇಜಿವಾನುಡುಪತೀ ರಾಜಸೂಯೇನ ಭಾರತ|
09050001c ತಸ್ಮಿನ್ವೃತ್ತೇ ಮಹಾನಾಸೀತ್ಸಂಗ್ರಾಮಸ್ತಾರಕಾಮಯಃ||
ವೈಶಂಪಾಯನನು ಹೇಳಿದನು: “ಭಾರತ! ಸೋಮತೀರ್ಥದಲ್ಲಿ ಉಡುಪತೀ ಚಂದ್ರನು ರಾಜಸೂಯವನ್ನು ನಡೆಸಿದ್ದನು. ಅಲ್ಲಿಯೇ ತಾರಕಾಮಯ ಮಹಾ ಸಂಗ್ರಾಮವೂ ನಡೆದಿತ್ತು.
09050002a ತತ್ರಾಪ್ಯುಪಸ್ಪೃಶ್ಯ ಬಲೋ ದತ್ತ್ವಾ ದಾನಾನಿ ಚಾತ್ಮವಾನ್|
09050002c ಸಾರಸ್ವತಸ್ಯ ಧರ್ಮಾತ್ಮಾ ಮುನೇಸ್ತೀರ್ಥಂ ಜಗಾಮ ಹ||
ಅಲ್ಲಿ ಕೂಡ ಸ್ನಾನಮಾಡಿ ದಾನಗಳನ್ನಿತ್ತು ಆತ್ಮವಾನ್ ಬಲರಾಮನು ಧರ್ಮಾತ್ಮ ಸಾರಸ್ವತ ಮುನಿಯ ತೀರ್ಥಕ್ಕೆ ಬಂದನು.
09050003a ಯತ್ರ ದ್ವಾದಶವಾರ್ಷಿಕ್ಯಾಮನಾವೃಷ್ಟ್ಯಾಂ ದ್ವಿಜೋತ್ತಮಾನ್|
09050003c ವೇದಾನಧ್ಯಾಪಯಾಮಾಸ ಪುರಾ ಸಾರಸ್ವತೋ ಮುನಿಃ||
ಅಲ್ಲಿ ಹಿಂದೆ ಸಾರಸ್ವತ ಮುನಿಯು ಹನ್ನೆರಡು ವರ್ಷಗಳ ಅನಾವೃಷ್ಟಿಯಿಂದ ಪೀಡಿತರಾಗಿದ್ದ ದ್ವಿಜೋತ್ತಮರಿಗೆ ವೇದಾಧ್ಯಯವನ್ನು ಮಾಡಿಸಿದ್ದನು.”
09050004 ಜನಮೇಜಯ ಉವಾಚ
09050004a ಕಥಂ ದ್ವಾದಶವಾರ್ಷಿಕ್ಯಾಮನಾವೃಷ್ಟ್ಯಾಂ ತಪೋಧನಃ|
09050004c ವೇದಾನಧ್ಯಾಪಯಾಮಾಸ ಪುರಾ ಸಾರಸ್ವತೋ ಮುನಿಃ||
ಜನಮೇಜಯನು ಹೇಳಿದನು: “ಹಿಂದೆ ತಪೋಧನ ಸಾರಸ್ವತ ಮುನಿಯು ಹನ್ನೆರಡು ವರ್ಷಗಳ ಬರಗಾಲವಿದ್ದಾಗ ಹೇಗೆ ವೇದಾಧ್ಯಯನ ಮಾಡಿಸಿದನು?”
09050005 ವೈಶಂಪಾಯನ ಉವಾಚ
09050005a ಆಸೀತ್ಪೂರ್ವಂ ಮಹಾರಾಜ ಮುನಿರ್ಧೀಮಾನ್ಮಹಾತಪಾಃ|
09050005c ದಧೀಚ ಇತಿ ವಿಖ್ಯಾತೋ ಬ್ರಹ್ಮಚಾರೀ ಜಿತೇಂದ್ರಿಯಃ||
ವೈಶಂಪಾಯನನು ಹೇಳಿದನು: “ಮಹಾರಾಜ! ಹಿಂದೆ ದಧೀಚ ಎಂದು ವಿಖ್ಯಾತನಾದ ಬ್ರಹ್ಮಚಾರೀ ಜಿತೇಂದ್ರಿಯ ಮಹಾತಪಸ್ವಿ ಧೀಮಾನ್ ಮುನಿಯಿದ್ದನು.
09050006a ತಸ್ಯಾತಿತಪಸಃ ಶಕ್ರೋ ಬಿಭೇತಿ ಸತತಂ ವಿಭೋ|
09050006c ನ ಸ ಲೋಭಯಿತುಂ ಶಕ್ಯಃ ಫಲೈರ್ಬಹುವಿಧೈರಪಿ||
ವಿಭೋ! ಅವನ ತಪಸ್ಸಿನಿಂದ ಶಕ್ರನು ಸತತವೂ ಭಯಪಡುತ್ತಿದ್ದನು. ಬಹುವಿಧದ ಫಲಗಳಿಂದಲೂ ಅವನನ್ನು ಲೋಭಗೊಳಿಸಲು ಶಕ್ಯವಾಗಲಿಲ್ಲ.
09050007a ಪ್ರಲೋಭನಾರ್ಥಂ ತಸ್ಯಾಥ ಪ್ರಾಹಿಣೋತ್ಪಾಕಶಾಸನಃ|
09050007c ದಿವ್ಯಾಮಪ್ಸರಸಂ ಪುಣ್ಯಾಂ ದರ್ಶನೀಯಾಮಲಂಬುಸಾಂ||
ಅವನನ್ನು ಲೋಭಗೊಳಿಸಲು ಪಾಕಶಾಸನನು ದಿವ್ಯ ಪುಣ್ಯೆ ಸುಂದರಿ ಅಪ್ಸರೆ ಅಲಂಬುಸಳನ್ನು ಕಳುಹಿಸಿದನು.
09050008a ತಸ್ಯ ತರ್ಪಯತೋ ದೇವಾನ್ಸರಸ್ವತ್ಯಾಂ ಮಹಾತ್ಮನಃ|
09050008c ಸಮೀಪತೋ ಮಹಾರಾಜ ಸೋಪಾತಿಷ್ಠತ ಭಾಮಿನೀ||
ಮಹಾರಾಜ! ಆ ಮಹಾತ್ಮನು ಸರಸ್ವತೀ ತೀರದಲ್ಲಿ ದೇವತೆಗಳಿಗೆ ತರ್ಪಣೆಗಳನ್ನು ನೀಡುತ್ತಿರುವಾಗ ಆ ಭಾಮಿನಿಯು ಅವನ ಸಮೀಪ ಹೋದಳು.
09050009a ತಾಂ ದಿವ್ಯವಪುಷಂ ದೃಷ್ಟ್ವಾ ತಸ್ಯರ್ಷೇರ್ಭಾವಿತಾತ್ಮನಃ|
09050009c ರೇತಃ ಸ್ಕನ್ನಂ ಸರಸ್ವತ್ಯಾಂ ತತ್ಸಾ ಜಗ್ರಾಹ ನಿಮ್ನಗಾ||
ಅವಳ ದಿವ್ಯ ದೇಹವನ್ನು ಕಂಡು ಭಾವಿತಾತ್ಮ ಋಷಿಯ ರೇತಸ್ಸು ಸರಸ್ವತಿಯಲ್ಲಿಯೇ ಸ್ಖಲನವಾಯಿತು. ಅದನ್ನು ಆ ನದಿಯು ಸ್ವೀಕರಿಸಿದಳು.
09050010a ಕುಕ್ಷೌ ಚಾಪ್ಯದಧದ್ದೃಷ್ಟ್ವಾ ತದ್ರೇತಃ ಪುರುಷರ್ಷಭ|
09050010c ಸಾ ದಧಾರ ಚ ತಂ ಗರ್ಭಂ ಪುತ್ರಹೇತೋರ್ಮಹಾನದೀ||
ಪುರುಷರ್ಷಭ! ತನ್ನ ಮಡಿಲಲ್ಲಿ ಬಿದ್ದ ಆ ರೇತಸ್ಸನ್ನು ನೋಡಿ ಪುತ್ರನಿಗೋಸ್ಕರ ಆ ಮಹಾನದಿಯು ಅದನ್ನು ಗರ್ಭದಲ್ಲಿ ಧರಿಸಿದಳು.
09050011a ಸುಷುವೇ ಚಾಪಿ ಸಮಯೇ ಪುತ್ರಂ ಸಾ ಸರಿತಾಂ ವರಾ|
09050011c ಜಗಾಮ ಪುತ್ರಮಾದಾಯ ತಂ ಋಷಿಂ ಪ್ರತಿ ಚ ಪ್ರಭೋ||
ಪ್ರಭೋ! ಸಮಯಾನಂತರದಲ್ಲಿ ಆ ಶ್ರೇಷ್ಠ ನದಿಯು ಹೆತ್ತು, ಮಗನನ್ನು ಎತ್ತಿಕೊಂಡು ಋಷಿಯ ಬಳಿ ಹೋದಳು.
09050012a ಋಷಿಸಂಸದಿ ತಂ ದೃಷ್ಟ್ವಾ ಸಾ ನದೀ ಮುನಿಸತ್ತಮಂ|
09050012c ತತಃ ಪ್ರೋವಾಚ ರಾಜೇಂದ್ರ ದದತೀ ಪುತ್ರಮಸ್ಯ ತಂ||
ರಾಜೇಂದ್ರ! ಋಷಿಸಂಸದಿಯಲ್ಲಿದ್ದ ಆ ಮುನಿಸತ್ತಮನನ್ನು ಕಂಡು ಅವನಿಗೆ ಪುತ್ರನನ್ನು ನೀಡುತ್ತಾ ನದಿಯು ಹೇಳಿದಳು:
09050012e ಬ್ರಹ್ಮರ್ಷೇ ತವ ಪುತ್ರೋಽಯಂ ತ್ವದ್ಭಕ್ತ್ಯಾ ಧಾರಿತೋ ಮಯಾ
09050013a ದೃಷ್ಟ್ವಾ ತೇಽಪ್ಸರಸಂ ರೇತೋ ಯತ್ಸ್ಕನ್ನಂ ಪ್ರಾಗಲಂಬುಸಾಂ|
“ಬ್ರಹ್ಮರ್ಷೇ! ಇವನು ನಿನ್ನ ಮಗ. ಹಿಂದೆ ಅಪ್ಸರೆ ಅಲಂಬುಸಳನ್ನು ನೋಡಿ ನಿನ್ನ ರೇತಸ್ಕಲನವಾದಾಗ ನಿನ್ನ ಮೇಲಿನ ಭಕ್ತಿಯಿಂದ ಇವನನ್ನು ನನ್ನ ಗರ್ಭದಲ್ಲಿ ಧರಿಸಿದ್ದೆ.
09050013c ತತ್ಕುಕ್ಷಿಣಾ ವೈ ಬ್ರಹ್ಮರ್ಷೇ ತ್ವದ್ಭಕ್ತ್ಯಾ ಧೃತವತ್ಯಹಂ||
09050014a ನ ವಿನಾಶಮಿದಂ ಗಚ್ಚೇತ್ತ್ವತ್ತೇಜ ಇತಿ ನಿಶ್ಚಯಾತ್|
09050014c ಪ್ರತಿಗೃಹ್ಣೀಷ್ವ ಪುತ್ರಂ ಸ್ವಂ ಮಯಾ ದತ್ತಮನಿಂದಿತಂ||
ಬ್ರಹ್ಮರ್ಷೇ! ನಿನ್ನ ತೇಜಸ್ಸು ನಾಶವಾಗಬಾರದೆಂದು ನಿಶ್ಚಯಿಸಿ ನಿನ್ನ ಮೇಲಿನ ಭಕ್ತಿಯಿಂದ ನಾನು ಅದನ್ನು ನನ್ನ ಉದರದಲ್ಲಿ ಧರಿಸಿದ್ದೆ. ನಾನು ನಿನಗೊಪ್ಪಿಸುತ್ತಿರುವ ನಿನ್ನ ಈ ಅನಿಂದಿತ ಮಗನನ್ನು ಸ್ವೀಕರಿಸು!”
09050015a ಇತ್ಯುಕ್ತಃ ಪ್ರತಿಜಗ್ರಾಹ ಪ್ರೀತಿಂ ಚಾವಾಪ ಉತ್ತಮಾಂ|
09050015c ಮಂತ್ರವಚ್ಚೋಪಜಿಘ್ರತ್ತಂ ಮೂರ್ಧ್ನಿ ಪ್ರೇಮ್ಣಾ ದ್ವಿಜೋತ್ತಮಃ||
ಹೀಗೆ ಹೇಳಲು ಸಂತೋಷದಿಂದ ಆ ದ್ವಿಜೋತ್ತಮನು ಪುತ್ರನನ್ನು ಕೈಗೆತ್ತಿಕೊಂಡು ಪ್ರೀತಿಯಿಂದ ಅವನ ನೆತ್ತಿಯನ್ನು ಆಘ್ರಾಣಿಸಿದನು,
09050016a ಪರಿಷ್ವಜ್ಯ ಚಿರಂ ಕಾಲಂ ತದಾ ಭರತಸತ್ತಮ|
09050016c ಸರಸ್ವತ್ಯೈ ವರಂ ಪ್ರಾದಾತ್ಪ್ರೀಯಮಾಣೋ ಮಹಾಮುನಿಃ||
ಭರತಸತ್ತಮ! ಅವನನ್ನು ಬಹಳ ಹೊತ್ತು ಅಪ್ಪಿಕೊಂಡೇ ಇದ್ದ ಆ ಮಹಾಮುನಿಯು ಪ್ರೀತಿಯಿಂದ ಸರಸ್ವತಿಗೆ ವರವನ್ನಿತ್ತನು.
09050017a ವಿಶ್ವೇ ದೇವಾಃ ಸಪಿತರೋ ಗಂಧರ್ವಾಪ್ಸರಸಾಂ ಗಣಾಃ|
09050017c ತೃಪ್ತಿಂ ಯಾಸ್ಯಂತಿ ಸುಭಗೇ ತರ್ಪ್ಯಮಾಣಾಸ್ತವಾಂಭಸಾ||
“ಸುಭಗೇ! ನಿನ್ನ ನೀರಿನಿಂದ ತರ್ಪಣೆಯನ್ನು ಸ್ವೀಕರಿಸಿದ ವಿಶ್ವೇದೇವರು, ಮತ್ತು ಪಿತೃಗಣಗಳೊಂದಿಗೆ ಗಂಧರ್ವಾಪ್ಸರ ಗಣಗಳು ತೃಪ್ತಿಹೊಂದುತ್ತಾರೆ.”
09050018a ಇತ್ಯುಕ್ತ್ವಾ ಸ ತು ತುಷ್ಟಾವ ವಚೋಭಿರ್ವೈ ಮಹಾನದೀಂ|
09050018c ಪ್ರೀತಃ ಪರಮಹೃಷ್ಟಾತ್ಮಾ ಯಥಾವಚ್ಚೃಣು ಪಾರ್ಥಿವ||
ಪಾರ್ಥಿವ! ಹೀಗೆ ಹೇಳಿ ಪರಮಹೃಷ್ಟನಾದ ಅವನು ಆ ಮಹಾನದಿಯನ್ನು ಸ್ತುತಿಸಿದನು. ಅದನ್ನು ಕೇಳು.
09050019a ಪ್ರಸೃತಾಸಿ ಮಹಾಭಾಗೇ ಸರಸೋ ಬ್ರಹ್ಮಣಃ ಪುರಾ|
09050019c ಜಾನಂತಿ ತ್ವಾಂ ಸರಿಚ್ಚ್ರೇಷ್ಠೇ ಮುನಯಃ ಸಂಶಿತವ್ರತಾಃ||
“ಮಹಾಭಾಗೇ! ಹಿಂದೆ ನೀನು ಬ್ರಹ್ಮಸರಸ್ಸಿನಿಂದ ಹರಿದುಬಂದೆ. ನದಿಶ್ರೇಷ್ಠಳೇ! ಸಂಶಿತವ್ರತ ಮುನಿಗಳು ನಿನ್ನನ್ನು ತಿಳಿದಿದ್ದಾರೆ.
09050020a ಮಮ ಪ್ರಿಯಕರೀ ಚಾಪಿ ಸತತಂ ಪ್ರಿಯದರ್ಶನೇ|
09050020c ತಸ್ಮಾತ್ಸಾರಸ್ವತಃ ಪುತ್ರೋ ಮಹಾಂಸ್ತೇ ವರವರ್ಣಿನಿ||
ಪ್ರಿಯದರ್ಶನೇ! ನನಗೆ ಕೂಡ ನೀನು ಸತತವೂ ಪ್ರಿಯವನ್ನುಂಟುಮಾಡುತ್ತಿರುವೆ. ಆದುದರಿಂದ ವರವರ್ಣಿನೀ! ನಿನ್ನ ಈ ಮಗನು ಮಹಾನ್ ಸಾರಸ್ವತನೆಂದಾಗುತ್ತಾನೆ.
09050021a ತವೈವ ನಾಮ್ನಾ ಪ್ರಥಿತಃ ಪುತ್ರಸ್ತೇ ಲೋಕಭಾವನಃ|
09050021c ಸಾರಸ್ವತ ಇತಿ ಖ್ಯಾತೋ ಭವಿಷ್ಯತಿ ಮಹಾತಪಾಃ||
ನಿನ್ನ ಲೋಕಭಾವನ ಮಗನು ನಿನ್ನದೇ ಹೆಸರಿನಿಂದ ಪ್ರಥಿತನಾಗುವನು. ಸಾರಸ್ವತನೆಂದು ಖ್ಯಾತನಾಗಿ ಮಹಾತಪಸ್ವಿಯಾಗುತ್ತಾನೆ.
09050022a ಏಷ ದ್ವಾದಶವಾರ್ಷಿಕ್ಯಾಮನಾವೃಷ್ಟ್ಯಾಂ ದ್ವಿಜರ್ಷಭಾನ್|
09050022c ಸಾರಸ್ವತೋ ಮಹಾಭಾಗೇ ವೇದಾನಧ್ಯಾಪಯಿಷ್ಯತಿ||
ಮಹಾಭಾಗೇ! ಈ ಸಾರಸ್ವತನು ಹನ್ನೆರಡು ವರ್ಷಗಳ ಅನಾವೃಷ್ಟಿಯಾದಾಗ ದ್ವಿಜರ್ಷಭರಿಗೆ ವೇದಾಧ್ಯಯವನ್ನು ನೀಡುತ್ತಾನೆ.
09050023a ಪುಣ್ಯಾಭ್ಯಶ್ಚ ಸರಿದ್ಭ್ಯಸ್ತ್ವಂ ಸದಾ ಪುಣ್ಯತಮಾ ಶುಭೇ|
09050023c ಭವಿಷ್ಯಸಿ ಮಹಾಭಾಗೇ ಮತ್ಪ್ರಸಾದಾತ್ಸರಸ್ವತಿ||
ಶುಭೇ! ಮಹಾಭಾಗೇ! ಸರಸ್ವತೀ! ನನ್ನ ಪ್ರಸಾದದಿಂದ ನೀನು ಎಲ್ಲ ಪುಣ್ಯ ನದಿಗಳಿಗಿಂತಲೂ ಹೆಚ್ಚಿನ ಪುಣ್ಯೆಯಾಗುತ್ತೀಯೆ.”
09050024a ಏವಂ ಸಾ ಸಂಸ್ತುತಾ ತೇನ ವರಂ ಲಬ್ಧ್ವಾ ಮಹಾನದೀ|
09050024c ಪುತ್ರಮಾದಾಯ ಮುದಿತಾ ಜಗಾಮ ಭರತರ್ಷಭ||
ಭರತರ್ಷಭ! ಹೀಗೆ ಅವನಿಂದ ಸ್ತುತಿಸಲ್ಪಟ್ಟು ಮತ್ತು ವರವನ್ನು ಪಡೆದು ಮಹಾನದಿಯು ಸಂತಸದಿಂದ ಪುತ್ರನನ್ನು ಕರೆದುಕೊಂಡು ಹೋದಳು.
09050025a ಏತಸ್ಮಿನ್ನೇವ ಕಾಲೇ ತು ವಿರೋಧೇ ದೇವದಾನವೈಃ|
09050025c ಶಕ್ರಃ ಪ್ರಹರಣಾನ್ವೇಷೀ ಲೋಕಾಂಸ್ತ್ರೀನ್ವಿಚಚಾರ ಹ||
ಇದೇ ಸಮಯದಲ್ಲಿ ದೇವ-ದಾನವರ ವಿರೋಧವುಂಟಾಗಲು ಶಕ್ರನು ಆಯುಧಗಳನ್ನು ಹುಡುಕುತ್ತಾ ಮೂರು ಲೋಕಗಳಲ್ಲಿಯೂ ಸಂಚರಿಸತೊಡಗಿದನು.
09050026a ನ ಚೋಪಲೇಭೇ ಭಗವಾನ್ ಶಕ್ರಃ ಪ್ರಹರಣಂ ತದಾ|
09050026c ಯದ್ವೈ ತೇಷಾಂ ಭವೇದ್ಯೋಗ್ಯಂ ವಧಾಯ ವಿಬುಧದ್ವಿಷಾಂ||
ಆದರೆ ದೇವದ್ವೇಷಿಗಳನ್ನು ವಧಿಸಲು ಯೋಗ್ಯವಾದ ಆಯುಧಗಳು ಅವನಿಗೆ ದೊರಕಲೇ ಇಲ್ಲ.
09050027a ತತೋಽಬ್ರವೀತ್ಸುರಾನ್ ಶಕ್ರೋ ನ ಮೇ ಶಕ್ಯಾ ಮಹಾಸುರಾಃ|
09050027c ಋತೇಽಸ್ಥಿಭಿರ್ದಧೀಚಸ್ಯ ನಿಹಂತುಂ ತ್ರಿದಶದ್ವಿಷಃ||
ಆಗ ಶಕ್ರನು ಸುರರಿಗೆ ಹೇಳಿದನು: “ದಧೀಚಿಯ ಅಸ್ಥಿಯಲ್ಲದೇ ಬೇರೆ ಯಾವುದರಿಂದಲೂ ದೇವದ್ವೇಷೀ ಮಹಾಸುರರನ್ನು ಸಂಹರಿಸಲು ನನಗೆ ಶಕ್ಯವಿಲ್ಲ.
09050028a ತಸ್ಮಾದ್ಗತ್ವಾ ಋಷಿಶ್ರೇಷ್ಠೋ ಯಾಚ್ಯತಾಂ ಸುರಸತ್ತಮಾಃ|
09050028c ದಧೀಚಾಸ್ಥೀನಿ ದೇಹೀತಿ ತೈರ್ವಧಿಷ್ಯಾಮಹೇ ರಿಪೂನ್||
ಆದುದರಿಂದ ಸುರಸತ್ತಮರೇ! ಋಷಿಶ್ರೇಷ್ಠ ದಧೀಚಿಯಲ್ಲಿಗೆ ಹೋಗಿ ಅಸ್ಥಿಯನ್ನು ನೀಡೆಂದು ಪ್ರಾರ್ಥಿಸಿಕೊಳ್ಳಿ. ಅದರಿಂದ ನಾವು ಶತ್ರುಗಳನ್ನು ವಧಿಸಬಲ್ಲೆವು.”
09050029a ಸ ದೇವೈರ್ಯಾಚಿತೋಽಸ್ಥೀನಿ ಯತ್ನಾದೃಷಿವರಸ್ತದಾ|
09050029c ಪ್ರಾಣತ್ಯಾಗಂ ಕುರುಷ್ವೇತಿ ಚಕಾರೈವಾವಿಚಾರಯನ್|
09050029e ಸ ಲೋಕಾನಕ್ಷಯಾನ್ಪ್ರಾಪ್ತೋ ದೇವಪ್ರಿಯಕರಸ್ತದಾ||
ದೇವತೆಗಳು ಪ್ರಯತ್ನಪಟ್ಟು ಅಸ್ಥಿಗಳನ್ನು ಕೇಳಲು ಆ ಋಷಿವರನು ಏನೂ ವಿಚಾರಮಾಡದೇ ಪ್ರಾಣತ್ಯಾಗಮಾಡುತ್ತೇನೆಂದು ಹೇಳಿ ಹಾಗೆಯೇ ಮಾಡಿದನು. ದೇವತೆಗಳ ಪ್ರಿಯವಾದುದನ್ನು ಮಾಡಿದ ಅವನು ಅಕ್ಷಯಲೋಕಗಳನ್ನು ಪಡೆದನು.
09050030a ತಸ್ಯಾಸ್ಥಿಭಿರಥೋ ಶಕ್ರಃ ಸಂಪ್ರಹೃಷ್ಟಮನಾಸ್ತದಾ|
09050030c ಕಾರಯಾಮಾಸ ದಿವ್ಯಾನಿ ನಾನಾಪ್ರಹರಣಾನ್ಯುತ||
09050030e ವಜ್ರಾಣಿ ಚಕ್ರಾಣಿ ಗದಾ ಗುರುದಂಡಾಂಶ್ಚ ಪುಷ್ಕಲಾನ್||
ಅವನ ಅಸ್ಥಿಗಳಿಂದ ಸಂತೋಷಗೊಂಡ ಶಕ್ರನು ಅದರಿಂದ ನಾನಾರೀತಿಯ ದಿವ್ಯ ಆಯುಧಗಳನ್ನು – ಅನೇಕ ವಜ್ರಗಳನ್ನೂ, ಚಕ್ರಗಳನ್ನೂ, ಗದೆಗಳನ್ನೂ, ಗುರುದಂಡಗಳನ್ನೂ ಮಾಡಿಸಿದನು.
09050031a ಸ ಹಿ ತೀವ್ರೇಣ ತಪಸಾ ಸಂಭೃತಃ ಪರಮರ್ಷಿಣಾ|
09050031c ಪ್ರಜಾಪತಿಸುತೇನಾಥ ಭೃಗುಣಾ ಲೋಕಭಾವನಃ||
ಪ್ರಜಾಪತಿಸುತ ಲೋಕಭಾವನ ಪರಮಋಷಿ ಭೃಗುವು ದಧೀಚಿಯನ್ನು ತೀವ್ರ ತಪಸ್ಸಿನಿಂದ ಪಡೆದುಕೊಂಡಿದ್ದನು.
09050032a ಅತಿಕಾಯಃ ಸ ತೇಜಸ್ವೀ ಲೋಕಸಾರವಿನಿರ್ಮಿತಃ|
09050032c ಜಜ್ಞೇ ಶೈಲಗುರುಃ ಪ್ರಾಂಶುರ್ಮಹಿಂನಾ ಪ್ರಥಿತಃ ಪ್ರಭುಃ||
09050032e ನಿತ್ಯಮುದ್ವಿಜತೇ ಚಾಸ್ಯ ತೇಜಸಾ ಪಾಕಶಾಸನಃ||
ಲೋಕಗಳ ಸಾರಗಳಿಂದ ನಿರ್ಮಿತನಾಗಿದ್ದ ಅವನು ಅತಿಕಾಯನೂ ತೇಜಸ್ವಿಯೂ ಆಗಿದ್ದನು. ಪರ್ವತದಂತೆ ಎತ್ತರವಾಗಿಯೂ ಭಾರವಾಗಿಯೂ ಇದ್ದನು. ಆ ಪ್ರಭುವು ತನ್ನ ಮಹಿಮೆಯಿಂದ ಸರ್ವತ್ರ ವಿಖ್ಯಾತನಾಗಿದ್ದನು. ಪಾಕಶಾಸನ ಇಂದ್ರನು ಅವನ ಮಹಾತೇಜಸ್ಸಿಗೆ ಹೆದರಿ ಸದಾ ಉದ್ವಿಗ್ನನಾಗುತ್ತಿದ್ದನು.
09050033a ತೇನ ವಜ್ರೇಣ ಭಗವಾನ್ಮಂತ್ರಯುಕ್ತೇನ ಭಾರತ|
09050033c ಭೃಶಂ ಕ್ರೋಧವಿಸೃಷ್ಟೇನ ಬ್ರಹ್ಮತೇಜೋಭವೇನ ಚ|
09050033e ದೈತ್ಯದಾನವವೀರಾಣಾಂ ಜಘಾನ ನವತೀರ್ನವ||
ಭಾರತ! ಮಂತ್ರಯುಕ್ತವಾದ ಬ್ರಹ್ಮತೇಜಸ್ಸಿನಿಂದ ಹುಟ್ಟಿದ್ದ ಆ ವಜ್ರವನ್ನು ತುಂಬಾ ಕ್ರೋಧದಿಂದ ಪ್ರಯೋಗಿಸಿ ಬಗವಾನ್ ಇಂದ್ರನು ಎಂಟುನೂರಾಹತ್ತು ದೈತ್ಯ-ದಾನವ ವೀರರನ್ನು ಸಂಹರಿಸಿದನು.
09050034a ಅಥ ಕಾಲೇ ವ್ಯತಿಕ್ರಾಂತೇ ಮಹತ್ಯತಿಭಯಂಕರೇ|
09050034c ಅನಾವೃಷ್ಟಿರನುಪ್ರಾಪ್ತಾ ರಾಜನ್ದ್ವಾದಶವಾರ್ಷಿಕೀ||
ರಾಜನ್! ಅನಂತರ ಕಾಲವು ಕಳೆಯಲು ಮಹಾಭಯಂಕರವಾದ ಹನ್ನೆರಡು ವರ್ಷಗಳ ಅನಾವೃಷ್ಟಿಯು ಬಂದೊದಗಿತು.
09050035a ತಸ್ಯಾಂ ದ್ವಾದಶವಾರ್ಷಿಕ್ಯಾಮನಾವೃಷ್ಟ್ಯಾಂ ಮಹರ್ಷಯಃ|
09050035c ವೃತ್ತ್ಯರ್ಥಂ ಪ್ರಾದ್ರವನ್ರಾಜನ್ ಕ್ಷುಧಾರ್ತಾಃ ಸರ್ವತೋದಿಶಂ||
ಹನ್ನೆರಡು ವರ್ಷಗಳ ಆ ಬರಗಾಲದಲ್ಲಿ ಹಸಿವು ಬಾಯಾರಿಕೆಗಳಿಂದ ಬಳಲಿದ ಮಹರ್ಷಿಗಳು ಜೀವಿಕೆಗಾಗಿ ಎಲ್ಲ ದಿಕ್ಕುಗಳಿಗೂ ಓಡಿ ಹೋದರು.
09050036a ದಿಗ್ಭ್ಯಸ್ತಾನ್ಪ್ರದ್ರುತಾನ್ದೃಷ್ಟ್ವಾ ಮುನಿಃ ಸಾರಸ್ವತಸ್ತದಾ|
09050036c ಗಮನಾಯ ಮತಿಂ ಚಕ್ರೇ ತಂ ಪ್ರೋವಾಚ ಸರಸ್ವತೀ||
ದಿಕ್ಕಾಪಾಲಾಗಿ ಓಡಿ ಹೋಗುತ್ತಿರುವ ಅವರನ್ನು ನೋಡಿ ಸಾರಸ್ವತ ಮುನಿಯು ತಾನೂ ಹೋಗಲು ಮನಸ್ಸುಮಾಡಿದನು. ಆಗ ಸರಸ್ವತಿಯು ಅವನಿಗೆ ಹೇಳಿದಳು:
09050037a ನ ಗಂತವ್ಯಮಿತಃ ಪುತ್ರ ತವಾಹಾರಮಹಂ ಸದಾ|
09050037c ದಾಸ್ಯಾಮಿ ಮತ್ಸ್ಯಪ್ರವರಾನುಷ್ಯತಾಮಿಹ ಭಾರತ||
“ಮಗನೇ! ಇಲ್ಲಿಂದ ಹೋಗಬೇಡ! ನಿನಗೆ ಆಹಾರವಾಗಿ ಸದಾ ಉತ್ತಮ ಮೀನುಗಳನ್ನು ಇಲ್ಲಿಯೇ ನೀಡುತ್ತೇನೆ!” ಎಂದು ಹೇಳಿದಳು.
09050038a ಇತ್ಯುಕ್ತಸ್ತರ್ಪಯಾಮಾಸ ಸ ಪಿತೄನ್ದೇವತಾಸ್ತಥಾ|
09050038c ಆಹಾರಮಕರೋನ್ನಿತ್ಯಂ ಪ್ರಾಣಾನ್ವೇದಾಂಶ್ಚ ಧಾರಯನ್||
ಹೀಗೆ ಹೇಳಲು ಅವನು ನಿತ್ಯವೂ ಆಹಾರವನ್ನು ಸೇವಿಸಿಕೊಂಡು ಪ್ರಾಣಗಳನ್ನೂ ವೇದಗಳನ್ನೂ ಉಳಿಸಿಕೊಂಡು ಪಿತೃ-ದೇವತೆಗಳನ್ನು ತೃಪ್ತಿಪಡಿಸಿದ್ದನು.
09050039a ಅಥ ತಸ್ಯಾಮತೀತಾಯಾಮನಾವೃಷ್ಟ್ಯಾಂ ಮಹರ್ಷಯಃ|
09050039c ಅನ್ಯೋನ್ಯಂ ಪರಿಪಪ್ರಚ್ಚುಃ ಪುನಃ ಸ್ವಾಧ್ಯಾಯಕಾರಣಾತ್||
ಆ ಅನಾವೃಷ್ಟಿಯು ಮುಗಿಯಲು ಮಹರ್ಷಿಗಳು ಪುನಃ ವೇದಾಧ್ಯಯನದ ಕಾರಣದಿಂದ ಅನ್ಯೋನ್ಯರನ್ನು ಪ್ರಶ್ನಿಸತೊಡಗಿದರು.
09050040a ತೇಷಾಂ ಕ್ಷುಧಾಪರೀತಾನಾಂ ನಷ್ಟಾ ವೇದಾ ವಿಧಾವತಾಂ|
09050040c ಸರ್ವೇಷಾಮೇವ ರಾಜೇಂದ್ರ ನ ಕಶ್ಚಿತ್ಪ್ರತಿಭಾನವಾನ್||
ರಾಜೇಂದ್ರ! ಹಸಿವುಬಾಯಾರಿಕೆಗಳಿಂದ ಬಳಲಿದ್ದ ಆ ವಿದ್ವಾಂಸರಲ್ಲಿ ವೇದವು ನಷ್ಟವಾಗಿ ಹೋಗಿತ್ತು. ಅವರೆಲ್ಲರಲ್ಲಿ ವೇದಗಳನ್ನು ತಿಳಿದಿದ್ದ ಒಬ್ಬ ಪ್ರತಿಭಾವಂತನೂ ಇರಲಿಲ್ಲ.
09050041a ಅಥ ಕಶ್ಚಿದೃಷಿಸ್ತೇಷಾಂ ಸಾರಸ್ವತಮುಪೇಯಿವಾನ್|
09050041c ಕುರ್ವಾಣಂ ಸಂಶಿತಾತ್ಮಾನಂ ಸ್ವಾಧ್ಯಾಯಂ ಋಷಿಸತ್ತಮಂ||
ಅವರಲ್ಲಿಯೇ ಒಬ್ಬ ಋಷಿಯು ವೇದಾಧ್ಯಯನ ಮಾಡುತ್ತಿದ್ದ ಸಂಶಿತಾತ್ಮ ಋಷಿಸತ್ತಮ ಸಾರಸ್ವತನ ಬಳಿ ಬಂದನು.
09050042a ಸ ಗತ್ವಾಚಷ್ಟ ತೇಭ್ಯಶ್ಚ ಸಾರಸ್ವತಮತಿಪ್ರಭಂ|
09050042c ಸ್ವಾಧ್ಯಾಯಮಮರಪ್ರಖ್ಯಂ ಕುರ್ವಾಣಂ ವಿಜನೇ ಜನೇ||
ಅವನು ಹೋಗಿ ಇತರರಿಗೆ ನಿರ್ಜನ ವನದಲ್ಲಿ ಸ್ವಾಧ್ಯಾಯಮಾಡುತ್ತಿರುವ ಅತಿಪ್ರಭೆಯುಳ್ಳ, ಅಮರನಂತಿದ್ದ ಸಾರಸ್ವತ ಮುನಿಯ ಕುರಿತು ಹೇಳಿದನು.
09050043a ತತಃ ಸರ್ವೇ ಸಮಾಜಗ್ಮುಸ್ತತ್ರ ರಾಜನ್ಮಹರ್ಷಯಃ|
09050043c ಸಾರಸ್ವತಂ ಮುನಿಶ್ರೇಷ್ಠಮಿದಮೂಚುಃ ಸಮಾಗತಾಃ||
ರಾಜನ್! ಆ ಎಲ್ಲ ಮಹರ್ಷಿಗಳೂ ಅಲ್ಲಿಗೆ ಒಟ್ಟಾಗಿ ಹೋಗಿ ಮುನಿಶ್ರೇಷ್ಠ ಸಾರಸ್ವತನಿಗೆ ಹೇಳಿದರು:
09050044a ಅಸ್ಮಾನಧ್ಯಾಪಯಸ್ವೇತಿ ತಾನುವಾಚ ತತೋ ಮುನಿಃ|
09050044c ಶಿಷ್ಯತ್ವಮುಪಗಚ್ಚಧ್ವಂ ವಿಧಿವದ್ಭೋ ಮಮೇತ್ಯುತ||
“ನಮಗೂ ವೇದಾಧ್ಯಯನ ಮಾಡಿಸು!” ಎಂದು ಅವರು ಹೇಳಲು ಮುನಿಯು “ನೀವುಗಳು ವಿಧಿವತ್ತಾಗಿ ನನ್ನ ಶಿಷ್ಯತ್ವವನ್ನು ಅಂಗೀಕರಿಸಿರಿ!” ಎಂದನು.
09050045a ತತೋಽಬ್ರವೀದೃಷಿಗಣೋ ಬಾಲಸ್ತ್ವಮಸಿ ಪುತ್ರಕ|
09050045c ಸ ತಾನಾಹ ನ ಮೇ ಧರ್ಮೋ ನಶ್ಯೇದಿತಿ ಪುನರ್ಮುನೀನ್||
ಆಗ ಆ ಋಷಿಗಣವು “ಪುತ್ರಕ! ನೀನು ಬಾಲಕನಾಗಿರುವೆ!” ಎಂದು ಹೇಳಿದರು. ಆಗ ಅವನು ಪುನಃ ಮುನಿಗಳಿಗೆ ಹೇಳಿದನು: “ಇದರಿಂದ ಧರ್ಮವು ನಶಿಸುವುದಿಲ್ಲ!
09050046a ಯೋ ಹ್ಯಧರ್ಮೇಣ ವಿಬ್ರೂಯಾದ್ಗೃಹ್ಣೀಯಾದ್ವಾಪ್ಯಧರ್ಮತಃ|
09050046c ಮ್ರಿಯತಾಂ ತಾವುಭೌ ಕ್ಷಿಪ್ರಂ ಸ್ಯಾತಾಂ ವಾ ವೈರಿಣಾವುಭೌ||
ಅಧರ್ಮದಿಂದ ಯಾರು ಹೇಳಿಕೊಡುತ್ತಾರೋ, ಅಧರ್ಮದಿಂದ ಮತ್ತೆ ಯಾರು ಅದನ್ನು ಸ್ವೀಕರಿಸುತ್ತಾರೋ ಅವರಿಬ್ಬರೂ ಬೇಗನೆ ನಾಶಹೊಂದುತ್ತಾರೆ ಅಥವಾ ವೈರಿಗಳಾಗುತ್ತಾರೆ.
09050047a ನ ಹಾಯನೈರ್ನ ಪಲಿತೈರ್ನ ವಿತ್ತೇನ ನ ಬಂಧುಭಿಃ|
09050047c ಋಷಯಶ್ಚಕ್ರಿರೇ ಧರ್ಮಂ ಯೋಽನೂಚಾನಃ ಸ ನೋ ಮಹಾನ್||
ಸಣ್ಣವರು ದೊಡ್ದವರಿಗೆಂದಾಗಲೀ, ಸಂಪತ್ತಿರುವವರಿಗಾಗಲೀ, ಬಂಧುಗಳಿಗಾಗಲೀ ಋಷಿಗಳು ಧರ್ಮವನ್ನು ಮಾಡಿಟ್ಟಿರುವುದಿಲ್ಲ. ಧರ್ಮವನ್ನು ಅನುಸರಿಸುವವನೇ ದೊಡ್ಡವನು!”
09050048a ಏತಚ್ಚ್ರುತ್ವಾ ವಚಸ್ತಸ್ಯ ಮುನಯಸ್ತೇ ವಿಧಾನತಃ|
09050048c ತಸ್ಮಾದ್ವೇದಾನನುಪ್ರಾಪ್ಯ ಪುನರ್ಧರ್ಮಂ ಪ್ರಚಕ್ರಿರೇ||
ಅವನ ಆ ಮಾತನ್ನು ಕೇಳಿ ಮುನಿಗಳು ವಿಧಿಪೂರ್ವಕವಾಗಿ ಅವನಿಂದ ವೇದಗಳನ್ನು ಪಡೆದು ಪುನಃ ಧರ್ಮನಿರತರಾದರು.
09050049a ಷಷ್ಟಿರ್ಮುನಿಸಹಸ್ರಾಣಿ ಶಿಷ್ಯತ್ವಂ ಪ್ರತಿಪೇದಿರೇ|
09050049c ಸಾರಸ್ವತಸ್ಯ ವಿಪ್ರರ್ಷೇರ್ವೇದಸ್ವಾಧ್ಯಾಯಕಾರಣಾತ್||
ಅರವತ್ತು ಸಾವಿರ ಮುನಿಗಳು ವೇದಾಧ್ಯಯನ ಕಾರಣದಿಂದ ವಿಪ್ರರ್ಷಿ ಸಾರಸ್ವತನ ಶಿಷ್ಯತ್ವವನ್ನು ವಹಿಸಿಕೊಂಡರು.
09050050a ಮುಷ್ಟಿಂ ಮುಷ್ಟಿಂ ತತಃ ಸರ್ವೇ ದರ್ಭಾಣಾಂ ತೇಽಭ್ಯುಪಾಹರನ್|
09050050c ತಸ್ಯಾಸನಾರ್ಥಂ ವಿಪ್ರರ್ಷೇರ್ಬಾಲಸ್ಯಾಪಿ ವಶೇ ಸ್ಥಿತಾಃ||
ಬಾಲಕನಾಗಿದ್ದರೂ ಗುರುಸ್ಥಾನದಲ್ಲಿದ್ದ ಆ ವಿಪ್ರರ್ಷಿಯ ಆಸನಾರ್ಥವಾಗಿ ಎಲ್ಲರೂ ಮುಷ್ಟಿ ಮುಷ್ಟಿ ದರ್ಭೆಗಳನ್ನು ಹಿಡಿದುಕೊಂಡು ಬರುತ್ತಿದ್ದರು.
09050051a ತತ್ರಾಪಿ ದತ್ತ್ವಾ ವಸು ರೌಹಿಣೇಯೋ
ಮಹಾಬಲಃ ಕೇಶವಪೂರ್ವಜೋಽಥ|
09050051c ಜಗಾಮ ತೀರ್ಥಂ ಮುದಿತಃ ಕ್ರಮೇಣ
ಖ್ಯಾತಂ ಮಹದ್ ವೃದ್ಧಕನ್ಯಾ ಸ್ಮ ಯತ್ರ||
ಅಲ್ಲಿ ಕೂಡ ಮಹಾಬಲ ಕೇಶವನ ಅಣ್ಣ ರೌಹಿಣೇಯನು ಸಂಪತ್ತನ್ನು ದಾನವನ್ನಾಗಿತ್ತು ಸಂತೋಷದಿಂದ ಕ್ರಮೇಣವಾಗಿ ವೃದ್ಧಕನ್ಯೆಯೆಂದು ಮಹಾಖ್ಯಾತಿಹೊಂದಿದ್ದ ತೀರ್ಥಕ್ಕೆ ಹೋದನು.”
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತೀರ್ಥಯಾತ್ರಾಯಾಂ ಪಂಚಾಶತ್ತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರಾ ಎನ್ನುವ ಐವತ್ತನೇ ಅಧ್ಯಾಯವು.
ಸಾರಸ್ವತ ಪರ್ವದ ಇತರ ಅಧ್ಯಾಯಗಳು:
- ಪಾಂಡವಾನಾಂ ಸರೋವರಾಗಮನ
- ಸುಯೋಧನಯುಧಿಷ್ಠಿರಸಂವಾದ
- ಸುಯೋಧನಯುಧಿಷ್ಠಿರಸಂವಾದ
- ಭೀಮಸೇನದುರ್ಯೋಧನಸಂವಾದ
- ಬಲದೇವಾಗಮನ
- ಬಲದೇವತೀರ್ಥಯಾತ್ರಾಯಾಂ ಪ್ರಭಾಸೋತ್ಪತ್ತಿಕಥನ
- ಬಲದೇವತೀರ್ಥಯಾತ್ರಾಯಾಂ ತ್ರಿತಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಕುಮಾರಾಭಿಷೇಕಕ್ರಮ
- ಬಲದೇವತೀರ್ಥಯಾತ್ರಾಯಾಂ ಸ್ಕಂದಾಭಿಷೇಕ
- ಬಲದೇವತೀರ್ಥಯಾತ್ರಾಯಾಂ ತಾರಕವಧ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾಯಾಂ ಬದರಪಾಚನತೀರ್ಥಕಥನ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾಯಾಂ ಕುರುಕ್ಷೇತ್ರಕಥನ
- ಬಲದೇವತೀರ್ಥಯಾತ್ರಾ