ಶಲ್ಯಪರ್ವ: ಸಾರಸ್ವತಪರ್ವ
೪೭
ಬದರಿಪಾಚನ ತೀರ್ಥಕ್ಷೇತ್ರ ಮಹಾತ್ಮೆ (೧-೬೧).
09047001 ವೈಶಂಪಾಯನ ಉವಾಚ
09047001a ತತಸ್ತೀರ್ಥವರಂ ರಾಮೋ ಯಯೌ ಬದರಪಾಚನಂ|
09047001c ತಪಸ್ವಿಸಿದ್ಧಚರಿತಂ ಯತ್ರ ಕನ್ಯಾ ಧೃತವ್ರತಾ||
ವೈಶಂಪಾಯನನು ಹೇಳಿದನು: “ಅನಂತರ ರಾಮನು ಕನ್ಯೆ ಧೃತವ್ರತೆ ತಪಸ್ವಿನಿಯು ಸಿದ್ಧಿಯನ್ನು ಪಡೆದ ಶ್ರೇಷ್ಠ ಬದರಪಾಚನ ತೀರ್ಥಕ್ಕೆ ಹೋದನು.
09047002a ಭರದ್ವಾಜಸ್ಯ ದುಹಿತಾ ರೂಪೇಣಾಪ್ರತಿಮಾ ಭುವಿ|
09047002c ಸ್ರುಚಾವತೀ ನಾಮ ವಿಭೋ ಕುಮಾರೀ ಬ್ರಹ್ಮಚಾರಿಣೀ||
ವಿಭೋ! ಭುವಿಯಲ್ಲಿಯೇ ಅಪ್ರತಿಮ ರೂಪವತಿಯಾದ ಸ್ರುಚಾವತೀ ಎಂಬ ಹೆಸರಿನ ಭಾರದ್ವಾಜನ ಮಗಳೊಬ್ಬಳಿದ್ದಳು. ಆ ಕುಮಾರಿಯು ಬ್ರಹ್ಮಚಾರಿಣಿಯಾಗಿದ್ದಳು.
09047003a ತಪಶ್ಚಚಾರ ಸಾತ್ಯುಗ್ರಂ ನಿಯಮೈರ್ಬಹುಭಿರ್ನೃಪ|
09047003c ಭರ್ತಾ ಮೇ ದೇವರಾಜಃ ಸ್ಯಾದಿತಿ ನಿಶ್ಚಿತ್ಯ ಭಾಮಿನೀ||
ನೃಪ! ದೇವರಾಜನೇ ತನ್ನ ಪತಿಯೆಂದು ನಿಶ್ಚಯಿಸಿದ ಆ ಭಾಮಿನಿಯು ಅನೇಕ ನಿಯಮಯುಕ್ತ ಉಗ್ರ ತಪಸ್ಸನ್ನು ತಪಿಸಿದಳು.
09047004a ಸಮಾಸ್ತಸ್ಯಾ ವ್ಯತಿಕ್ರಾಂತಾ ಬಹ್ವ್ಯಃ ಕುರುಕುಲೋದ್ವಹ|
09047004c ಚರಂತ್ಯಾ ನಿಯಮಾಂಸ್ತಾಂಸ್ತಾನ್ ಸ್ತ್ರೀಭಿಸ್ತೀವ್ರಾನ್ಸುದುಶ್ಚರಾನ್||
ಕುರುಕುಲೋದ್ವಹ! ಸ್ತ್ರೀಯರಿಗೆ ಅನುಷ್ಠಾನ ಮಾಡಲು ದುಷ್ಕರವಾದ ಅನೇಕ ನಿಯಮಗಳನ್ನು ಪಾಲಿಸುತ್ತಾ ಅವಳು ಅನೇಕ ವರ್ಷಗಳನ್ನು ಅಲ್ಲಿಯೇ ಕಳೆದಳು.
09047005a ತಸ್ಯಾಸ್ತು ತೇನ ವೃತ್ತೇನ ತಪಸಾ ಚ ವಿಶಾಂ ಪತೇ|
09047005c ಭಕ್ತ್ಯಾ ಚ ಭಗವಾನ್ಪ್ರೀತಃ ಪರಯಾ ಪಾಕಶಾಸನಃ||
ವಿಶಾಂಪತೇ! ಅವಳ ತಪಸ್ಸು, ನಡತೆ ಮತ್ತು ಪರಮ ಭಕ್ತಿಗಳಿಗೆ ಭಗವಾನ್ ಪಾಕಶಾಸನನು ಪ್ರೀತನಾದನು.
09047006a ಆಜಗಾಮಾಶ್ರಮಂ ತಸ್ಯಾಸ್ತ್ರಿದಶಾಧಿಪತಿಃ ಪ್ರಭುಃ|
09047006c ಆಸ್ಥಾಯ ರೂಪಂ ವಿಪ್ರರ್ಷೇರ್ವಸಿಷ್ಠಸ್ಯ ಮಹಾತ್ಮನಃ||
ಪ್ರಭು ತ್ರಿದಶಾಧಿಪತಿಯು ಮಹಾತ್ಮ ವಿಪ್ರರ್ಷಿ ವಸಿಷ್ಠನ ರೂಪವನ್ನು ಧರಿಸಿ ಅವಳ ಆಶ್ರಮಕ್ಕೆ ಹೋದನು.
09047007a ಸಾ ತಂ ದೃಷ್ಟ್ವೋಗ್ರತಪಸಂ ವಸಿಷ್ಠಂ ತಪತಾಂ ವರಂ|
09047007c ಆಚಾರೈರ್ಮುನಿಭಿರ್ದೃಷ್ಟೈಃ ಪೂಜಯಾಮಾಸ ಭಾರತ||
ಭಾರತ! ಆ ಉಗ್ರತಪಸ್ವಿ ತಪಸ್ವಿಗಳಲ್ಲಿ ಶ್ರೇಷ್ಠ ವಸಿಷ್ಠನನ್ನು ನೋಡಿ ಅವಳು ಮುನಿಗಳಿಗೆ ಉಚಿತವಾದ ವಿಧಿಗಳಿಂದ ಸತ್ಕರಿಸಿದಳು.
09047008a ಉವಾಚ ನಿಯಮಜ್ಞಾ ಚ ಕಲ್ಯಾಣೀ ಸಾ ಪ್ರಿಯಂವದಾ|
09047008c ಭಗವನ್ಮುನಿಶಾರ್ದೂಲ ಕಿಮಾಜ್ಞಾಪಯಸಿ ಪ್ರಭೋ||
ನಿಯಮಗಳನ್ನು ತಿಳಿದಿದ್ದ ಆ ಪ್ರಿಯಂವದೆ ಕಲ್ಯಾಣಿಯು “ಭಗವನ್! ಮುನಿಶಾರ್ದೂಲ! ಅಪ್ಪಣೆಯೇನು ಪ್ರಭೋ!” ಎಂದಳು.
09047009a ಸರ್ವಮದ್ಯ ಯಥಾಶಕ್ತಿ ತವ ದಾಸ್ಯಾಮಿ ಸುವ್ರತ|
09047009c ಶಕ್ರಭಕ್ತ್ಯಾ ತು ತೇ ಪಾಣಿಂ ನ ದಾಸ್ಯಾಮಿ ಕಥಂ ಚನ||
“ಸುವ್ರತ! ಇಂದು ನಿನಗೆ ಯಥಾಶಕ್ತಿಯಾಗಿ ಎಲ್ಲವನ್ನೂ ಕೊಡುತ್ತೇನೆ. ಶಕ್ರನ ಮೇಲಿನ ಭಕ್ತಿಯಿಂದ ನಿನಗೆ ನನ್ನ ಕೈಯನ್ನು ಮಾತ್ರ ಎಂದೂ ಕೊಡುವುದಿಲ್ಲ.
09047010a ವ್ರತೈಶ್ಚ ನಿಯಮೈಶ್ಚೈವ ತಪಸಾ ಚ ತಪೋಧನ|
09047010c ಶಕ್ರಸ್ತೋಷಯಿತವ್ಯೋ ವೈ ಮಯಾ ತ್ರಿಭುವನೇಶ್ವರಃ||
ತಪೋಧನ! ವ್ರತ-ನಿಯಮ-ತಪಸ್ಸುಗಳಿಂದ ಆ ತ್ರಿಭುವನೇಶ್ವರ ಶಕ್ರನನ್ನು ತೃಪ್ತಗೊಳಿಸಬೇಕಾಗಿದೆ.”
09047011a ಇತ್ಯುಕ್ತೋ ಭಗವಾನ್ದೇವಃ ಸ್ಮಯನ್ನಿವ ನಿರೀಕ್ಷ್ಯ ತಾಂ|
09047011c ಉವಾಚ ನಿಯಮಜ್ಞಾಂ ತಾಂ ಸಾಂತ್ವಯನ್ನಿವ ಭಾರತ||
ಭಾರತ! ಅವಳು ಹೀಗೆ ಹೇಳಲು ಭಗವಾನ್ ದೇವನು ನಸುನಗುತ್ತಾ ಅವಳನ್ನು ನೋಡಿ ನಿಯಮಜ್ಞೆಯಾದ ಅವಳನ್ನು ಸಂತವಿಸುವಂತೆ ಹೇಳಿದನು:
09047012a ಉಗ್ರಂ ತಪಶ್ಚರಸಿ ವೈ ವಿದಿತಾ ಮೇಽಸಿ ಸುವ್ರತೇ|
09047012c ಯದರ್ಥಮಯಮಾರಂಭಸ್ತವ ಕಲ್ಯಾಣಿ ಹೃದ್ಗತಃ||
“ಸುವ್ರತೇ! ನೀನು ಉಗ್ರ ತಪಸ್ಸನ್ನು ಮಾಡುತ್ತಿರುವೆಯೆಂದು ನನಗೆ ತಿಳಿದಿದೆ. ಕಲ್ಯಾಣೀ! ನೀನು ಅದನ್ನು ಯಾವ ಕಾರಣದಿಂದ ಆರಂಭಿಸಿರುವೆಯೆನ್ನುವುದೂ ನನಗೆ ಹೃದ್ಗತವಾಗಿದೆ.
09047013a ತಚ್ಚ ಸರ್ವಂ ಯಥಾಭೂತಂ ಭವಿಷ್ಯತಿ ವರಾನನೇ|
09047013c ತಪಸಾ ಲಭ್ಯತೇ ಸರ್ವಂ ಸರ್ವಂ ತಪಸಿ ತಿಷ್ಠತಿ||
ವರಾನನೇ! ಅವೆಲ್ಲವೂ ಹೇಗಾಗಬೇಕೋ ಹಾಗೆಯೇ ಆಗುತ್ತದೆ. ತಪಸ್ಸಿನಿಂದ ಎಲ್ಲವೂ ದೊರೆಯುತ್ತವೆ. ಎಲ್ಲವೂ ತಪಸ್ಸಿನ ಮೇಲೆಯೇ ನಿಂತಿವೆ.
09047014a ಯಾನಿ ಸ್ಥಾನಾನಿ ದಿವ್ಯಾನಿ ವಿಬುಧಾನಾಂ ಶುಭಾನನೇ|
09047014c ತಪಸಾ ತಾನಿ ಪ್ರಾಪ್ಯಾನಿ ತಪೋಮೂಲಂ ಮಹತ್ಸುಖಂ||
ಶುಭಾನನೇ! ದೇವತೆಗಳ ದಿವ್ಯ ಸ್ಥಾನಗಳೂ ಕೂಡ ತಪಸ್ಸಿನಿಂದಲೇ ಪ್ರಾಪ್ತವಾಗುತ್ತವೆ. ಮಹಾ ಸುಖಕ್ಕೆ ತಪಸ್ಸೇ ಮೂಲ.
09047015a ಇಹ ಕೃತ್ವಾ ತಪೋ ಘೋರಂ ದೇಹಂ ಸಂನ್ಯಸ್ಯ ಮಾನವಾಃ|
09047015c ದೇವತ್ವಂ ಯಾಂತಿ ಕಲ್ಯಾಣಿ ಶೃಣು ಚೇದಂ ವಚೋ ಮಮ||
ಕಲ್ಯಾಣೀ! ಇಲ್ಲಿ ಘೋರ ತಪಸ್ಸನ್ನಾಚರಿಸಿ ದೇಹವನ್ನು ತೊರೆದು ಮಾನವರು ದೇವತ್ವವನ್ನು ಪಡೆಯುತ್ತಾರೆ. ನನ್ನ ಈ ಮಾತನ್ನು ಕೇಳು.
09047016a ಪಚಸ್ವೈತಾನಿ ಸುಭಗೇ ಬದರಾಣಿ ಶುಭವ್ರತೇ|
09047016c ಪಚೇತ್ಯುಕ್ತ್ವಾ ಸ ಭಗವಾನ್ಜಗಾಮ ಬಲಸೂದನಃ||
ಶುಭವ್ರತೇ! ಸುಭಗೇ! ಇಗೋ ಈ ಐದು ಬದರೀ (ಎಲಚೀ) ಹಣ್ಣುಗಳನ್ನು ಬೇಯಿಸು!” ಹೀಗೆ ಹೇಳಿ ಭಗವಾನ್ ಬಲಸೂದನನು ಹೊರಟು ಹೋದನು.
09047017a ಆಮಂತ್ರ್ಯ ತಾಂ ತು ಕಲ್ಯಾಣೀಂ ತತೋ ಜಪ್ಯಂ ಜಜಾಪ ಸಃ|
09047017c ಅವಿದೂರೇ ತತಸ್ತಸ್ಮಾದಾಶ್ರಮಾತ್ತೀರ್ಥ ಉತ್ತಮೇ||
09047017e ಇಂದ್ರತೀರ್ಥೇ ಮಹಾರಾಜ ತ್ರಿಷು ಲೋಕೇಷು ವಿಶ್ರುತೇ||
ಹಾಗೆ ಆ ಕಲ್ಯಾಣಿಗೆ ಸಲಹೆಯನ್ನಿತ್ತು, ಅಲ್ಲಿಯೇ ಸ್ವಲ್ಪ ದೂರದಲ್ಲಿದ್ದ ಶ್ರೇಷ್ಠ ತೀರ್ಥದಲ್ಲಿ ಮಿಂದು ಜಪವನ್ನು ಜಪಿಸಿದನು. ಮಹಾರಾಜ! ಆ ತೀರ್ಥವು ಮೂರು ಲೋಕಗಳಲ್ಲಿ ಇಂದ್ರತೀರ್ಥವೆಂದು ಪ್ರಖ್ಯಾತವಾಯಿತು.
09047018a ತಸ್ಯಾ ಜಿಜ್ಞಾಸನಾರ್ಥಂ ಸ ಭಗವಾನ್ಪಾಕಶಾಸನಃ|
09047018c ಬದರಾಣಾಮಪಚನಂ ಚಕಾರ ವಿಬುಧಾಧಿಪಃ||
ಅವಳನ್ನು ಪರೀಕ್ಷಿಸಲೋಸುಗ ವಿಭುಧಾಧಿಪ ಭಗವಾನ್ ಪಾಕಶಾಸನನು ಆ ಎಲಚೀಹಣ್ಣುಗಳು ಬೇಯದಂತೆ ಮಾಡಿದನು.
09047019a ತತಃ ಸ ಪ್ರಯತಾ ರಾಜನ್ವಾಗ್ಯತಾ ವಿಗತಕ್ಲಮಾ|
09047019c ತತ್ಪರಾ ಶುಚಿಸಂವೀತಾ ಪಾವಕೇ ಸಮಧಿಶ್ರಯತ್||
09047019e ಅಪಚದ್ರಾಜಶಾರ್ದೂಲ ಬದರಾಣಿ ಮಹಾವ್ರತಾ||
ರಾಜನ್! ರಾಜಶರ್ದೂಲ! ಆಗ ಆ ಶುಚಿಸಂವೀತೆ-ಬಳಲಿಕೆಯಿಲ್ಲದ-ಮಹಾವ್ರತೆಯು ಮೌನವನ್ನು ಧರಿಸಿ ಬೆಂಕಿಯ ಮೇಲಿಟ್ಟು ಆ ಎಲಚೀಹಣ್ಣುಗಳನ್ನು ಬೇಯಿಸುವುದರಲ್ಲಿ ತತ್ಪರಳಾದಳು.
09047020a ತಸ್ಯಾಃ ಪಚಂತ್ಯಾಃ ಸುಮಹಾನ್ಕಾಲೋಽಗಾತ್ಪುರುಷರ್ಷಭ|
09047020c ನ ಚ ಸ್ಮ ತಾನ್ಯಪಚ್ಯಂತ ದಿನಂ ಚ ಕ್ಷಯಮಭ್ಯಗಾತ್||
ಪುರುಷರ್ಷಭ! ಅವುಗಳನ್ನು ಬೇಯಿಸುತ್ತಾ ಬಹಳ ಸಮಯ ಕಳೆಯಿತು. ಆದರೂ ಅವುಗಳು ಬೇಯಲಿಲ್ಲ. ಒಂದು ದಿನವೇ ಕಳೆದುಹೋಯಿತು.
09047021a ಹುತಾಶನೇನ ದಗ್ಧಶ್ಚ ಯಸ್ತಸ್ಯಾಃ ಕಾಷ್ಠಸಂಚಯಃ|
09047021c ಅಕಾಷ್ಠಮಗ್ನಿಂ ಸಾ ದೃಷ್ಟ್ವಾ ಸ್ವಶರೀರಮಥಾದಹತ್||
ಅವಳಲ್ಲಿದ್ದ ಕಟ್ಟಿಗೆಗಳೆಲ್ಲವೂ ಬೆಂಕಿಯಲ್ಲಿ ಸುಟ್ಟುಹೋದವು. ಕಟ್ಟಿಗೆಗಳಿಲ್ಲವೆನ್ನುವುದನ್ನು ನೋಡಿದ ಅವಳು ತನ್ನ ಶರೀರವನ್ನೇ ಸುಡಲು ತೊಡಗಿದಳು.
09047022a ಪಾದೌ ಪ್ರಕ್ಷಿಪ್ಯ ಸಾ ಪೂರ್ವಂ ಪಾವಕೇ ಚಾರುದರ್ಶನಾ|
09047022c ದಗ್ಧೌ ದಗ್ಧೌ ಪುನಃ ಪಾದಾವುಪಾವರ್ತಯತಾನಘಾ||
ಆ ಚಾರುದರ್ಶನೆ ಅನಘೆಯು ತನ್ನ ಪಾದಗಳನ್ನೇ ಮುಂದೆಚಾಚಿ ಬೆಂಕಿಯಲ್ಲಿಟ್ಟು ಉರಿಸಿ ಹಣ್ಣುಗಳನ್ನು ಬೇಯಿಸತೊಡಗಿದಳು. ಕಾಲುಗಳು ಸುಟ್ಟುಹೋಗಲು, ಮೊಣಕಾಲುಗಳನ್ನು ಚಾಚಿದಳು.
09047023a ಚರಣೌ ದಹ್ಯಮಾನೌ ಚ ನಾಚಿಂತಯದನಿಂದಿತಾ|
09047023c ದುಃಖಂ ಕಮಲಪತ್ರಾಕ್ಷೀ ಮಹರ್ಷೇಃ ಪ್ರಿಯಕಾಮ್ಯಯಾ||
ಮಹರ್ಷಿ ವಸಿಷ್ಠನಿಗೆ ಪ್ರಿಯವನ್ನುಂಟುಮಾಡಲೋಸುಗ ಆ ಅನಿಂದಿತೆಯು ಚರಣಗಳು ಸುಟ್ಟುಹೋಗುವ ದುಃಖದ ಕುರಿತು ಸ್ವಲ್ಪವೂ ಚಿಂತಿಸಲಿಲ್ಲ.
09047024a ಅಥ ತತ್ಕರ್ಮ ದೃಷ್ಟ್ವಾಸ್ಯಾಃ ಪ್ರೀತಸ್ತ್ರಿಭುವನೇಶ್ವರಃ|
09047024c ತತಃ ಸಂದರ್ಶಯಾಮಾಸ ಕನ್ಯಾಯೈ ರೂಪಮಾತ್ಮನಃ||
ಅವಳ ಆ ಕೃತ್ಯವನ್ನು ನೋಡಿ ಪ್ರೀತನಾದ ತ್ರಿಭುವನೇಶ್ವರನು ತನ್ನ ನಿಜಸ್ವರೂಪದಲ್ಲಿ ಆ ಕನ್ಯೆಗೆ ಸಂದರ್ಶನವನ್ನಿತ್ತನು.
09047025a ಉವಾಚ ಚ ಸುರಶ್ರೇಷ್ಠಸ್ತಾಂ ಕನ್ಯಾಂ ಸುದೃಢವ್ರತಾಂ|
09047025c ಪ್ರೀತೋಽಸ್ಮಿ ತೇ ಶುಭೇ ಭಕ್ತ್ಯಾ ತಪಸಾ ನಿಯಮೇನ ಚ||
ಸುರಶ್ರೇಷ್ಠನು ಆ ದೃಢವ್ರತೆ ಕನ್ಯೆಗೆ ಹೇಳಿದನು: “ಶುಭೇ! ನಿನ್ನ ಭಕ್ತಿ-ತಪಸ್ಸು-ನಿಯಮಗಳಿಂದ ನಾನು ಪ್ರೀತನಾಗಿದ್ದೇನೆ.
09047026a ತಸ್ಮಾದ್ಯೋಽಭಿಮತಃ ಕಾಮಃ ಸ ತೇ ಸಂಪತ್ಸ್ಯತೇ ಶುಭೇ|
09047026c ದೇಹಂ ತ್ಯಕ್ತ್ವಾ ಮಹಾಭಾಗೇ ತ್ರಿದಿವೇ ಮಯಿ ವತ್ಸ್ಯಸಿ||
ಆದುದರಿಂದ ಶುಭೇ! ನೀನು ಬಯಸಿದುದೆಲ್ಲವೂ ಕೈಗೂಡುತ್ತವೆ. ಮಹಾಭಾಗೆ! ದೇಹವನ್ನು ತೊರೆದು ನೀನು ತ್ರಿದಿವದಲ್ಲಿ ನನ್ನೊಡನೆ ವಾಸಿಸುತ್ತೀಯೆ.
09047027a ಇದಂ ಚ ತೇ ತೀರ್ಥವರಂ ಸ್ಥಿರಂ ಲೋಕೇ ಭವಿಷ್ಯತಿ|
09047027c ಸರ್ವಪಾಪಾಪಹಂ ಸುಭ್ರು ನಾಮ್ನಾ ಬದರಪಾಚನಂ|
09047027e ವಿಖ್ಯಾತಂ ತ್ರಿಷು ಲೋಕೇಷು ಬ್ರಹ್ಮರ್ಷಿಭಿರಭಿಪ್ಲುತಂ||
ಸುಭ್ರು! ಈ ಶ್ರೇಷ್ಠ ತೀರ್ಥವು ಸರ್ವಪಾಪಗಳನ್ನೂ ಕಳೆಯುವ ಬದರಪಾಚನವೆಂಬ ಹೆಸರಿನಿಂದ ಲೋಕದಲ್ಲಿ ಸ್ಥಿರವಾಗಿರುತ್ತದೆ. ಮೂರು ಲೋಕಗಳಲ್ಲಿಯೂ ವಿಖ್ಯಾತ ಈ ತೀರ್ಥದಲ್ಲಿ ಬ್ರಹ್ಮರ್ಷಿಗಳೂ ಸ್ನಾನಮಾಡಿದ್ದಾರೆ.
09047028a ಅಸ್ಮಿನ್ಖಲು ಮಹಾಭಾಗೇ ಶುಭೇ ತೀರ್ಥವರೇ ಪುರಾ|
09047028c ತ್ಯಕ್ತ್ವಾ ಸಪ್ತರ್ಷಯೋ ಜಗ್ಮುರ್ಹಿಮವಂತಮರುಂಧತೀಂ||
ಮಹಾಭಾಗೇ! ಹಿಂದೆ ಈ ಶುಭ ಶ್ರೇಷ್ಠ ತೀರ್ಥದಲ್ಲಿಯೇ ಸಪ್ತರ್ಷಿಗಳು ಅರುಂಧತಿಯನ್ನು ಬಿಟ್ಟು ಹಿಮಾಲಯಕ್ಕೆ ಹೋಗಿದ್ದರಲ್ಲವೇ?
09047029a ತತಸ್ತೇ ವೈ ಮಹಾಭಾಗಾ ಗತ್ವಾ ತತ್ರ ಸುಸಂಶಿತಾಃ|
09047029c ವೃತ್ತ್ಯರ್ಥಂ ಫಲಮೂಲಾನಿ ಸಮಾಹರ್ತುಂ ಯಯುಃ ಕಿಲ||
ಆ ಮಹಾಭಾಗ ಸಂಶಿತವ್ರತರು ಜೀವನವನ್ನು ನಡೆಸಲು ಫಲ-ಮೂಲಗಳನ್ನು ಒಟ್ಟುಗೂಡಿಸಿ ತರಲು ಅಲ್ಲಿಗೆ ಹೋಗಿದ್ದರು.
09047030a ತೇಷಾಂ ವೃತ್ತ್ಯರ್ಥಿನಾಂ ತತ್ರ ವಸತಾಂ ಹಿಮವದ್ವನೇ|
09047030c ಅನಾವೃಷ್ಟಿರನುಪ್ರಾಪ್ತಾ ತದಾ ದ್ವಾದಶವಾರ್ಷಿಕೀ||
ಅವರು ಜೀವನಾರ್ಥವಾಗಿ ಹಿಮವದ್ವನದಲ್ಲಿ ವಾಸಿಸುತ್ತಿರುವಾಗ ಹನ್ನೆರಡು ವರ್ಷಗಳ ಅನಾವೃಷ್ಟಿಯು ಉಂಟಾಯಿತು.
09047031a ತೇ ಕೃತ್ವಾ ಚಾಶ್ರಮಂ ತತ್ರ ನ್ಯವಸಂತ ತಪಸ್ವಿನಃ|
09047031c ಅರುಂಧತ್ಯಪಿ ಕಲ್ಯಾಣೀ ತಪೋನಿತ್ಯಾಭವತ್ತದಾ||
ಆ ತಪಸ್ವಿಗಳು ಅಲ್ಲಿ ಆಶ್ರಮವನ್ನು ಮಾಡಿಕೊಂಡು ವಾಸಿಸುತ್ತಿರಲು ಇತ್ತ ಕಲ್ಯಾಣೀ ಅರುಂಧತಿಯು ನಿತ್ಯವೂ ತಪೋನಿರತಳಾದಳು.
09047032a ಅರುಂಧತೀಂ ತತೋ ದೃಷ್ಟ್ವಾ ತೀವ್ರಂ ನಿಯಮಮಾಸ್ಥಿತಾಂ|
09047032c ಅಥಾಗಮತ್ತ್ರಿನಯನಃ ಸುಪ್ರೀತೋ ವರದಸ್ತದಾ||
ತೀವ್ರ ನಿಯಮಸ್ಥಳಾಗಿದ್ದ ಅರುಂಧತಿಯನ್ನು ನೋಡಿ ತ್ರಿನಯನ ವರದನು ಸುಪ್ರೀತನಾಗಿ ಅಲ್ಲಿಗೆ ಬಂದನು.
09047033a ಬ್ರಾಹ್ಮಂ ರೂಪಂ ತತಃ ಕೃತ್ವಾ ಮಹಾದೇವೋ ಮಹಾಯಶಾಃ|
09047033c ತಾಮಭ್ಯೇತ್ಯಾಬ್ರವೀದ್ದೇವೋ ಭಿಕ್ಷಾಮಿಚ್ಚಾಮ್ಯಹಂ ಶುಭೇ||
ಮಹಾಯಶಸ್ವಿ ದೇವ ಮಹಾದೇವನು ಬ್ರಾಹ್ಮಣನ ರೂಪಧರಿಸಿ ಅವಳ ಬಳಿಬಂದು “ಶುಭೇ! ಭಿಕ್ಷೆಯನ್ನು ಬಯಸುತ್ತೇನೆ!” ಎಂದನು.
09047034a ಪ್ರತ್ಯುವಾಚ ತತಃ ಸಾ ತಂ ಬ್ರಾಹ್ಮಣಂ ಚಾರುದರ್ಶನಾ|
09047034c ಕ್ಷೀಣೋಽನ್ನಸಂಚಯೋ ವಿಪ್ರ ಬದರಾಣೀಹ ಭಕ್ಷಯ||
09047034e ತತೋಽಬ್ರವೀನ್ಮಹಾದೇವಃ ಪಚಸ್ವೈತಾನಿ ಸುವ್ರತೇ
ಆ ಚಾರುದರ್ಶನೆಯು ಬ್ರಾಹ್ಮಣನಿಗೆ ಹೇಳಿದಳು: “ವಿಪ್ರ! ನಾನು ಕೂಡಿಟ್ಟಿದ್ದ ಅಕ್ಕಿಯೆಲ್ಲವೂ ಮುಗಿದುಹೋಗಿದೆ. ಇಗೋ! ಈ ಬದರೀ ಹಣ್ಣುಗಳನ್ನೇ ತಿನ್ನು!” ಆಗ ಮಹಾದೇವನು “ಸುವ್ರತೇ! ಇವುಗಳನ್ನು ಬೇಯಿಸಿ ಕೊಡು!” ಎಂದನು.
09047035a ಇತ್ಯುಕ್ತಾ ಸಾಪಚತ್ತಾನಿ ಬ್ರಾಹ್ಮಣಪ್ರಿಯಕಾಮ್ಯಯಾ|
09047035c ಅಧಿಶ್ರಿತ್ಯ ಸಮಿದ್ಧೇಽಗ್ನೌ ಬದರಾಣಿ ಯಶಸ್ವಿನೀ||
ಇದನ್ನು ಕೇಳಿ ಬ್ರಾಹ್ಮಣನಿಗೆ ಪ್ರಿಯವಾದುದನ್ನು ಮಾಡಲು ಬಯಸಿ ಆ ಯಶಸ್ವಿನಿಯು ಅಗ್ನಿಯನ್ನು ಪ್ರಜ್ವಲಿಸಿ ಅದರಲ್ಲಿ ಬದರೀ ಹಣ್ಣುಗಳನ್ನು ಬೇಯಿಸತೊಡಗಿದಳು.
09047036a ದಿವ್ಯಾ ಮನೋರಮಾಃ ಪುಣ್ಯಾಃ ಕಥಾಃ ಶುಶ್ರಾವ ಸಾ ತದಾ|
09047036c ಅತೀತಾ ಸಾ ತ್ವನಾವೃಷ್ಟಿರ್ಘೋರಾ ದ್ವಾದಶವಾರ್ಷಿಕೀ||
ಆಗ ಅವಳು ದಿವ್ಯ ಮನೋರಮ ಪುಣ್ಯ ಕಥೆಗಳನ್ನು ಕೇಳುತ್ತಿದ್ದಳು. ಹಾಗೆಯೇ ಆ ಹನ್ನೆರಡು ವರ್ಷಗಳ ಘೋರ ಅನಾವೃಷ್ಟಿಯೂ ಕಳೆದುಹೋಯಿತು.
09047037a ಅನಶ್ನಂತ್ಯಾಃ ಪಚಂತ್ಯಾಶ್ಚ ಶೃಣ್ವಂತ್ಯಾಶ್ಚ ಕಥಾಃ ಶುಭಾಃ|
09047037c ಅಹಃಸಮಃ ಸ ತಸ್ಯಾಸ್ತು ಕಾಲೋಽತೀತಃ ಸುದಾರುಣಃ||
ಊಟಮಾಡದೇ ಶುಭ ಕಥೆಗಳನ್ನು ಕೇಳುತ್ತಾ ಹಣ್ಣುಗಳನ್ನು ಬೇಯಿಸುತ್ತಿದ್ದ ಅವಳಿಗೆ ಆ ಸುದಾರಣ ಸಮಯವು ಒಂದೇ ದಿನದಂತೆ ಕಳೆದುಹೋಯಿತು.
09047038a ತತಸ್ತೇ ಮುನಯಃ ಪ್ರಾಪ್ತಾಃ ಫಲಾನ್ಯಾದಾಯ ಪರ್ವತಾತ್|
09047038c ತತಃ ಸ ಭಗವಾನ್ಪ್ರೀತಃ ಪ್ರೋವಾಚಾರುಂಧತೀಂ ತದಾ||
ಆಗ ಪರ್ವತದಿಂದ ಫಲಗಳನ್ನು ತೆಗೆದುಕೊಂಡು ಮುನಿಗಳು ಹಿಂದಿರುಗಲು ಪ್ರೀತನಾದ ಭಗವಾನನು ಅರುಂಧತಿಗೆ ಹೇಳಿದನು:
09047039a ಉಪಸರ್ಪಸ್ವ ಧರ್ಮಜ್ಞೇ ಯಥಾಪೂರ್ವಮಿಮಾನೃಷೀನ್|
09047039c ಪ್ರೀತೋಽಸ್ಮಿ ತವ ಧರ್ಮಜ್ಞೇ ತಪಸಾ ನಿಯಮೇನ ಚ||
“ಧರ್ಮಜ್ಞೇ! ಹಿಂದಿನಂತೆಯೇ ಈ ಋಷಿಗಳನ್ನು ಸೇರು. ಧರ್ಮಜ್ಞೇ! ನಿನ್ನ ತಪಸ್ಸು-ನಿಯಮಗಳಿಂದ ಪ್ರೀತನಾಗಿದ್ದೇನೆ.”
09047040a ತತಃ ಸಂದರ್ಶಯಾಮಾಸ ಸ್ವರೂಪಂ ಭಗವಾನ್ ಹರಃ|
09047040c ತತೋಽಬ್ರವೀತ್ತದಾ ತೇಭ್ಯಸ್ತಸ್ಯಾಸ್ತಚ್ಚರಿತಂ ಮಹತ್||
ಆಗ ಭಗವಾನ್ ಹರನು ತನ್ನ ಸ್ವರೂಪವನ್ನು ತೋರಿಸಿ ಅವಳ ಮಹಾ ನಡತೆಯ ಕುರಿತು ಋಷಿಗಳಿಗೆ ಹೇಳಿದನು.
09047041a ಭವದ್ಭಿರ್ಹಿಮವತ್ಪೃಷ್ಠೇ ಯತ್ತಪಃ ಸಮುಪಾರ್ಜಿತಂ|
09047041c ಅಸ್ಯಾಶ್ಚ ಯತ್ತಪೋ ವಿಪ್ರಾ ನ ಸಮಂ ತನ್ಮತಂ ಮಮ||
“ವಿಪ್ರರೇ! ಹಿಮವತ್ಪರ್ವತದಲ್ಲಿ ನೀವು ಏನು ತಪಸ್ಸನ್ನು ತಪಿಸಿದರೋ ಅದು ಇಲ್ಲಿ ಇವಳು ಮಾಡಿದ ತಪಸ್ಸಿಗೆ ಸಮನಲ್ಲ ಎಂದು ನನ್ನ ಅಭಿಪ್ರಾಯ.
09047042a ಅನಯಾ ಹಿ ತಪಸ್ವಿನ್ಯಾ ತಪಸ್ತಪ್ತಂ ಸುದುಶ್ಚರಂ|
09047042c ಅನಶ್ನಂತ್ಯಾ ಪಚಂತ್ಯಾ ಚ ಸಮಾ ದ್ವಾದಶ ಪಾರಿತಾಃ||
ಈ ತಪಸ್ವಿನಿಯು ಅತಿಕಷ್ಟಕರ ತಪಸ್ಸನ್ನು ತಪಿಸಿದ್ದಾಳೆ. ಆಹಾರವನ್ನು ಸೇವಿಸಿದೇ ಹಣ್ಣುಗಳನ್ನು ಬೇಯಿಸುತ್ತಾ ಹನ್ನೆರಡು ವರ್ಷಗಳನ್ನು ಕಳೆದಳು.”
09047043a ತತಃ ಪ್ರೋವಾಚ ಭಗವಾಂಸ್ತಾಮೇವಾರುಂಧತೀಂ ಪುನಃ|
09047043c ವರಂ ವೃಣೀಷ್ವ ಕಲ್ಯಾಣಿ ಯತ್ತೇಽಭಿಲಷಿತಂ ಹೃದಿ||
ಆಗ ಭಗವಾನನು ಪುನಃ ಅರುಂಧತಿಗೆ ಹೇಳಿದನು: “ಕಲ್ಯಾಣೀ! ನಿನ್ನ ಹೃದಯದಲ್ಲಿ ಬಯಸಿದ ವರವನ್ನು ಕೇಳು!”
09047044a ಸಾಬ್ರವೀತ್ಪೃಥುತಾಮ್ರಾಕ್ಷೀ ದೇವಂ ಸಪ್ತರ್ಷಿಸಂಸದಿ|
09047044c ಭಗವಾನ್ಯದಿ ಮೇ ಪ್ರೀತಸ್ತೀರ್ಥಂ ಸ್ಯಾದಿದಮುತ್ತಮಂ|
09047044e ಸಿದ್ಧದೇವರ್ಷಿದಯಿತಂ ನಾಮ್ನಾ ಬದರಪಾಚನಂ||
ಆ ವಿಶಾಲಾಕ್ಷೀ ಅರುಣನೇತ್ರೆಯು ಸಪ್ತರ್ಷಿಗಳ ಮಧ್ಯೆ ದೇವನಿಗೆ ಹೇಳಿದಳು: “ಭಗವಾನ್! ನನ್ನ ಮೇಲೆ ಪ್ರೀತನಾಗಿರುವೆಯಾದರೆ ಈ ಉತ್ತಮ ತೀರ್ಥವು ಬದರಪಾಚನವೆಂಬ ಹೆಸರಿನಿಂದ ಸಿದ್ಧದೇವರ್ಷಿಗಳಿಗೆ ಪ್ರಿಯವಾದ ಉತ್ತಮ ತೀರ್ಥವಾಗಲಿ.
09047045a ತಥಾಸ್ಮಿನ್ದೇವದೇವೇಶ ತ್ರಿರಾತ್ರಮುಷಿತಃ ಶುಚಿಃ|
09047045c ಪ್ರಾಪ್ನುಯಾದುಪವಾಸೇನ ಫಲಂ ದ್ವಾದಶವಾರ್ಷಿಕಂ||
09047045e ಏವಮಸ್ತ್ವಿತಿ ತಾಂ ಚೋಕ್ತ್ವಾ ಹರೋ ಯಾತಸ್ತದಾ ದಿವಂ
ದೇವದೇವೇಶ! ಹಾಗೆಯೇ ಇಲ್ಲಿ ಶುಚಿಯಾಗಿ ಉಪವಾಸಮಾಡಿಕೊಂಡು ಮೂರು ರಾತ್ರಿ ಕಳೆದವರಿಗೆ ಹನ್ನೆರಡು ವರ್ಷ ಹಾಗೆ ಮಾಡಿದುದರ ಫಲವು ದೊರೆಯಲಿ!” “ಅದು ಹಾಗೆಯೇ ಆಗುತ್ತದೆ!” ಎಂದು ಅವಳಿಗೆ ಹೇಳಿ ಹರನು ದಿವಕ್ಕೆ ತೆರಳಿದನು.
09047046a ಋಷಯೋ ವಿಸ್ಮಯಂ ಜಗ್ಮುಸ್ತಾಂ ದೃಷ್ಟ್ವಾ ಚಾಪ್ಯರುಂಧತೀಂ|
09047046c ಅಶ್ರಾಂತಾಂ ಚಾವಿವರ್ಣಾಂ ಚ ಕ್ಷುತ್ಪಿಪಾಸಾಸಹಾಂ ಸತೀಂ||
ಹಸಿವು-ಬಾಯಾರಿಕೆಗಳಿದ್ದರೂ ಅರುಂಧತಿಯು ಬಳಲದೇ ಮುಖಕಾಂತಿಯನ್ನು ಕಳೆದುಕೊಳ್ಳದೇ ಇದ್ದುದನ್ನು ನೋಡಿ ಋಷಿಗಳು ವಿಸ್ಮಿತರಾದರು.
09047047a ಏವಂ ಸಿದ್ಧಿಃ ಪರಾ ಪ್ರಾಪ್ತಾ ಅರುಂಧತ್ಯಾ ವಿಶುದ್ಧಯಾ|
09047047c ಯಥಾ ತ್ವಯಾ ಮಹಾಭಾಗೇ ಮದರ್ಥಂ ಸಂಶಿತವ್ರತೇ||
ಮಹಾಭಾಗೇ! ಸಂಶಿತವ್ರತೇ! ನನಗಾಗಿ ನೀನು ಹೇಗೋ ಹಾಗೆ ಹಿಂದೆ ವಿಶುದ್ಧಾತ್ಮೆ ಅರುಂಧತಿಯು ಸಿದ್ಧಿಯನ್ನು ಪಡೆದಳು.
09047048a ವಿಶೇಷೋ ಹಿ ತ್ವಯಾ ಭದ್ರೇ ವ್ರತೇ ಹ್ಯಸ್ಮಿನ್ ಸಮರ್ಪಿತಃ|
09047048c ತಥಾ ಚೇದಂ ದದಾಮ್ಯದ್ಯ ನಿಯಮೇನ ಸುತೋಷಿತಃ||
ಭದ್ರೇ! ಈ ವ್ರತದಲ್ಲಿ ನಿನ್ನನ್ನೇ ನೀನು ಸಮರ್ಪಿಸಿರುವೆ! ನಿನ್ನ ನಿಯಮಗಳಿಂದ ಸಂತುಷ್ಟನಾದ ನಾನು ನಿನಗೆ ಇಂದು ಈ ವರವನ್ನು ನೀಡುತ್ತೇನೆ.
09047049a ವಿಶೇಷಂ ತವ ಕಲ್ಯಾಣಿ ಪ್ರಯಚ್ಚಾಮಿ ವರಂ ವರೇ|
09047049c ಅರುಂಧತ್ಯಾ ವರಸ್ತಸ್ಯಾ ಯೋ ದತ್ತೋ ವೈ ಮಹಾತ್ಮನಾ||
ಕಲ್ಯಾಣೀ! ಮಹಾತ್ಮನು ಅರುಂಧತಿಗೆ ನೀಡಿದ ವರಕ್ಕಿಂತಲೂ ವಿಶೇಷ ವರವನ್ನು ಕೇಳು. ನಿನಗೆ ಕೊಡುತ್ತೇನೆ.
09047050a ತಸ್ಯ ಚಾಹಂ ಪ್ರಸಾದೇನ ತವ ಕಲ್ಯಾಣಿ ತೇಜಸಾ|
09047050c ಪ್ರವಕ್ಷ್ಯಾಮ್ಯಪರಂ ಭೂಯೋ ವರಮತ್ರ ಯಥಾವಿಧಿ||
ಕಲ್ಯಾಣೀ! ನಿನ್ನ ತೇಜಸ್ಸಿಗೆ ಮೆಚ್ಚಿದ ನಾನು ಅದಕ್ಕಿಂತಲೂ ಹೆಚ್ಚಿನ ವರವನ್ನು ಕೊಡುತ್ತೇನೆ.
09047051a ಯಸ್ತ್ವೇಕಾಂ ರಜನೀಂ ತೀರ್ಥೇ ವತ್ಸ್ಯತೇ ಸುಸಮಾಹಿತಃ|
09047051c ಸ ಸ್ನಾತ್ವಾ ಪ್ರಾಪ್ಸ್ಯತೇ ಲೋಕಾನ್ದೇಹನ್ಯಾಸಾಚ್ಚ ದುರ್ಲಭಾನ್||
ಯಥಾವಿಧಿಯಾಗಿ ಸಮಾಹಿತನಾಗಿ ಒಂದು ರಾತ್ರಿ ಈ ತೀರ್ಥದಲ್ಲಿದ್ದು ಸ್ನಾನಮಾಡಿದವನಿಗೆ ದೇಹತ್ಯಾಗದ ನಂತರ ದುರ್ಲಭ ಲೋಕಗಳು ದೊರೆಯುತ್ತವೆ.”
09047052a ಇತ್ಯುಕ್ತ್ವಾ ಭಗವಾನ್ದೇವಃ ಸಹಸ್ರಾಕ್ಷಃ ಪ್ರತಾಪವಾನ್|
09047052c ಸ್ರುಚಾವತೀಂ ತತಃ ಪುಣ್ಯಾಂ ಜಗಾಮ ತ್ರಿದಿವಂ ಪುನಃ||
ಪುಣ್ಯೆ ಸ್ರುಚಾವತಿಗೆ ಹೀಗೆ ಹೇಳಿ ಭಗವಾನ್ ದೇವ ಪ್ರತಾಪವಾನ್ ಸಹಸ್ರಾಕ್ಷನು ಪುನಃ ತ್ರಿದಿವಕ್ಕೆ ತೆರಳಿದನು.
09047053a ಗತೇ ವಜ್ರಧರೇ ರಾಜಂಸ್ತತ್ರ ವರ್ಷಂ ಪಪಾತ ಹ|
09047053c ಪುಷ್ಪಾಣಾಂ ಭರತಶ್ರೇಷ್ಠ ದಿವ್ಯಾನಾಂ ದಿವ್ಯಗಂಧಿನಾಂ||
ಭರತಶ್ರೇಷ್ಠ! ರಾಜನ್! ವಜ್ರಧರನು ಹೊರಟುಹೋಗಲು ಅಲ್ಲಿ ದಿವ್ಯಸುವಾಸನೆಯುಳ್ಳ ದಿವ್ಯ ಪುಷ್ಪಗಳ ಮಳೆಯು ಸುರಿಯಿತು.
09047054a ನೇದುರ್ದುಂದುಭಯಶ್ಚಾಪಿ ಸಮಂತಾತ್ಸುಮಹಾಸ್ವನಾಃ|
09047054c ಮಾರುತಶ್ಚ ವವೌ ಯುಕ್ತ್ಯಾ ಪುಣ್ಯಗಂಧೋ ವಿಶಾಂ ಪತೇ||
ವಿಶಾಂಪತೇ! ಎಲ್ಲಕಡೆಗಳಲ್ಲಿ ಮಹಾಸ್ವನದ ದುಂಧುಭಿಗಳು ಮೊಳಗಿದವು. ಪುಣ್ಯಸುವಾಸನೆಯುಕ್ತ ಗಾಳಿಯೂ ಬೀಸಿತು.
09047055a ಉತ್ಸೃಜ್ಯ ತು ಶುಭಂ ದೇಹಂ ಜಗಾಮೇಂದ್ರಸ್ಯ ಭಾರ್ಯತಾಂ|
09047055c ತಪಸೋಗ್ರೇಣ ಸಾ ಲಬ್ಧ್ವಾ ತೇನ ರೇಮೇ ಸಹಾಚ್ಯುತ||
ಅಚ್ಯುತ! ಉಗ್ರ ತಪಸ್ಸಿನಿಂದ ಅವಳು ಆ ಶುಭದೇಹವನ್ನು ತ್ಯಜಿಸಿ ಇಂದ್ರನ ಭಾರ್ಯೆಯಾಗಿ ಅವನೊಂದಿಗೆ ರಮಿಸಿದಳು.”
09047056 ಜನಮೇಜಯ ಉವಾಚ
09047056a ಕಾ ತಸ್ಯಾ ಭಗವನ್ಮಾತಾ ಕ್ವ ಸಂವೃದ್ಧಾ ಚ ಶೋಭನಾ|
09047056c ಶ್ರೋತುಮಿಚ್ಚಾಮ್ಯಹಂ ಬ್ರಹ್ಮನ್ಪರಂ ಕೌತೂಹಲಂ ಹಿ ಮೇ||
ಜನಮೇಜಯನು ಹೇಳಿದನು: “ಭಗವನ್! ಅವಳ ತಾಯಿಯು ಯಾರು? ಅವಳು ಎಲ್ಲಿ ಬೆಳೆದಳು? ಬ್ರಹ್ಮನ್! ಇದರ ಕುರಿತು ನನಗೆ ಅತ್ಯಂತ ಕುತೂಹಲವಾಗಿದೆ. ಇದರ ಕುರಿತು ಕೇಳಬಯಸುತ್ತೇನೆ.”
09047057 ವೈಶಂಪಾಯನ ಉವಾಚ
09047057a ಭಾರದ್ವಾಜಸ್ಯ ವಿಪ್ರರ್ಷೇಃ ಸ್ಕನ್ನಂ ರೇತೋ ಮಹಾತ್ಮನಃ|
09047057c ದೃಷ್ಟ್ವಾಪ್ಸರಸಮಾಯಾಂತೀಂ ಘೃತಾಚೀಂ ಪೃಥುಲೋಚನಾಂ||
ವೈಶಂಪಾಯನನು ಹೇಳಿದನು: “ವಿಶಾಲಾಕ್ಷೀ ಅಪ್ಸರೆ ಘೃತಾಚಿಯು ಬರುತ್ತಿರುವುದನ್ನು ನೋಡಿದ ಮಹಾತ್ಮ ವಿಪ್ರರ್ಷಿ ಭಾರದ್ವಾಜನ ವೀರ್ಯ ಸ್ಖಲನವಾಯಿತು.
09047058a ಸ ತು ಜಗ್ರಾಹ ತದ್ರೇತಃ ಕರೇಣ ಜಪತಾಂ ವರಃ|
09047058c ತದಾವಪತ್ಪರ್ಣಪುಟೇ ತತ್ರ ಸಾ ಸಂಭವಚ್ಚುಭಾ||
ಜಪಿಗಳಲ್ಲಿ ಶ್ರೇಷ್ಠನು ಆ ರೇತಸ್ಸನ್ನು ತನ್ನ ಕರಗಳಲ್ಲಿ ಹಿಡಿದನು. ಆದರೆ ಅದು ಎಲೆಯ ದೊನ್ನೆಯಲ್ಲಿ ಬಿದ್ದಿತು. ಅಲ್ಲಿಯೇ ಆ ಶುಭೆಯು ಹುಟ್ಟಿದಳು.
09047059a ತಸ್ಯಾಸ್ತು ಜಾತಕರ್ಮಾದಿ ಕೃತ್ವಾ ಸರ್ವಂ ತಪೋಧನಃ|
09047059c ನಾಮ ಚಾಸ್ಯಾಃ ಸ ಕೃತವಾನ್ಭಾರದ್ವಾಜೋ ಮಹಾಮುನಿಃ||
ತಪೋಧನನು ಜಾತಕರ್ಮಾದಿ ಎಲ್ಲ ಕರ್ಮಗಳನ್ನೂ ಅವಳಿಗೆ ಮಾಡಿಸಿದನು. ಮಹಾಮುನಿ ಭಾರದ್ವಾಜನು ಅವಳಿಗೆ ಹೆಸರನ್ನೂ ಇಟ್ಟನು.
09047060a ಸ್ರುಚಾವತೀತಿ ಧರ್ಮಾತ್ಮಾ ತದರ್ಷಿಗಣಸಂಸದಿ|
09047060c ಸ ಚ ತಾಮಾಶ್ರಮೇ ನ್ಯಸ್ಯ ಜಗಾಮ ಹಿಮವದ್ವನಂ||
ದೇವರ್ಷಗಣ ಸಂಸದಿಯಲ್ಲಿ ಆ ಧರ್ಮಾತ್ಮನು ಅವಳಿಗೆ ಸ್ರುಚಾವತೀ ಎಂಬ ಹೆಸರನ್ನಿಟ್ಟು, ಅವಳನ್ನು ಆ ಆಶ್ರಮದಲ್ಲಿಯೇ ಇರಿಸಿ ಹಿಮವದ್ವನಕ್ಕೆ ತೆರಳಿದನು.
09047061a ತತ್ರಾಪ್ಯುಪಸ್ಪೃಶ್ಯ ಮಹಾನುಭಾವೋ
ವಸೂನಿ ದತ್ತ್ವಾ ಚ ಮಹಾದ್ವಿಜೇಭ್ಯಃ|
09047061c ಜಗಾಮ ತೀರ್ಥಂ ಸುಸಮಾಹಿತಾತ್ಮಾ
ಶಕ್ರಸ್ಯ ವೃಷ್ಣಿಪ್ರವರಸ್ತದಾನೀಂ||
ಮಹಾನುಭಾವ ವೃಷ್ಣಿಪ್ರವರ ಬಲರಾಮನು ಅಲ್ಲಿಕೂಡ ಸ್ನಾನಮಾಡಿ ಮಹಾದ್ವಿಜರಿಗೆ ಸಂಪತ್ತುಗಳನ್ನಿತ್ತು ಆತ್ಮಸಮಾಹಿತನಾಗಿ ಶಕ್ರತೀರ್ಥಕ್ಕೆ ಹೋದನು.”
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತೀರ್ಥಯಾತ್ರಾಯಾಂ ಬದರಪಾಚನತೀರ್ಥಕಥನೇ ಸಪ್ತಚತ್ವಾರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರಾಯಾಂ ಬದರಪಾಚನತೀರ್ಥಕಥನ ಎನ್ನುವ ನಲ್ವತ್ತೇಳನೇ ಅಧ್ಯಾಯವು.
ಸಾರಸ್ವತ ಪರ್ವದ ಇತರ ಅಧ್ಯಾಯಗಳು:
- ಪಾಂಡವಾನಾಂ ಸರೋವರಾಗಮನ
- ಸುಯೋಧನಯುಧಿಷ್ಠಿರಸಂವಾದ
- ಸುಯೋಧನಯುಧಿಷ್ಠಿರಸಂವಾದ
- ಭೀಮಸೇನದುರ್ಯೋಧನಸಂವಾದ
- ಬಲದೇವಾಗಮನ
- ಬಲದೇವತೀರ್ಥಯಾತ್ರಾಯಾಂ ಪ್ರಭಾಸೋತ್ಪತ್ತಿಕಥನ
- ಬಲದೇವತೀರ್ಥಯಾತ್ರಾಯಾಂ ತ್ರಿತಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಕುಮಾರಾಭಿಷೇಕಕ್ರಮ
- ಬಲದೇವತೀರ್ಥಯಾತ್ರಾಯಾಂ ಸ್ಕಂದಾಭಿಷೇಕ
- ಬಲದೇವತೀರ್ಥಯಾತ್ರಾಯಾಂ ತಾರಕವಧ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾಯಾಂ ಬದರಪಾಚನತೀರ್ಥಕಥನ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾಯಾಂ ಕುರುಕ್ಷೇತ್ರಕಥನ
- ಬಲದೇವತೀರ್ಥಯಾತ್ರಾ