Shalya Parva: Chapter 38

ಶಲ್ಯಪರ್ವ: ಸಾರಸ್ವತಪರ್ವ

೩೮

ಬಲರಾಮನ ತೀರ್ಥಯಾತ್ರೆಯು ಮುಂದುವರೆದುದು (೧-೭). ಕಪಾಲಮೋಚನ ತೀರ್ಥ ಮಹಾತ್ಮೆ (೮-೨೦). ರುಷಂಗು ಚರಿತೆ (೨೧-೩೩).

09038001 ವೈಶಂಪಾಯನ ಉವಾಚ

09038001a ಉಷಿತ್ವಾ ತತ್ರ ರಾಮಸ್ತು ಸಂಪೂಜ್ಯಾಶ್ರಮವಾಸಿನಃ|

09038001c ತಥಾ ಮಂಕಣಕೇ ಪ್ರೀತಿಂ ಶುಭಾಂ ಚಕ್ರೇ ಹಲಾಯುಧಃ||

ವೈಶಂಪಾಯನನು ಹೇಳಿದನು: “ಹಲಾಯುಧರಾಮನು ಅಲ್ಲಿ ತಂಗಿ ಆಶ್ರಮವಾಸಿಗಳನ್ನು ಪೂಜಿಸಿ ಮಂಕಣಕನಿಗೆ ಪ್ರೀತಿಯಿಂದ ಶುಭಕರ್ಮಗಳನ್ನು ಮಾಡಿದನು.

09038002a ದತ್ತ್ವಾ ದಾನಂ ದ್ವಿಜಾತಿಭ್ಯೋ ರಜನೀಂ ತಾಮುಪೋಷ್ಯ ಚ|

09038002c ಪೂಜಿತೋ ಮುನಿಸಂಘೈಶ್ಚ ಪ್ರಾತರುತ್ಥಾಯ ಲಾಂಗಲೀ||

ದ್ವಿಜಾತಿಯವರಿಗೆ ದಾನಗಳನ್ನು ನೀಡಿ ರಾತ್ರಿಯನ್ನು ಅಲ್ಲಿಯೇ ಕಳೆದು ಲಾಂಗಲಿಯು ಬೆಳಿಗ್ಗೆ ಎದ್ದು ಮುನಿಸಂಘಗಳನ್ನು ಪೂಜಿಸಿದನು.

09038003a ಅನುಜ್ಞಾಪ್ಯ ಮುನೀನ್ಸರ್ವಾನ್ಸ್ಪೃಷ್ಟ್ವಾ ತೋಯಂ ಚ ಭಾರತ|

09038003c ಪ್ರಯಯೌ ತ್ವರಿತೋ ರಾಮಸ್ತೀರ್ಥಹೇತೋರ್ಮಹಾಬಲಃ||

ಭಾರತ! ಸರ್ವ ಮುನಿಗಳ ಅನುಜ್ಞೆಯನ್ನು ಪಡೆದು, ನೀರಿನಲ್ಲಿ ಸ್ನಾನಾಚಮಗಳನ್ನು ಪೂರೈಸಿ ಮಹಾಬಲ ರಾಮನು ತೀರ್ಥಗಳ ಸಲುವಾಗಿ ತ್ವರೆಮಾಡಿ ಮುಂದುವರೆದನು.

09038004a ತತ ಔಶನಸಂ ತೀರ್ಥಮಾಜಗಾಮ ಹಲಾಯುಧಃ|

09038004c ಕಪಾಲಮೋಚನಂ ನಾಮ ಯತ್ರ ಮುಕ್ತೋ ಮಹಾಮುನಿಃ||

ಅನಂತರ ಹಲಾಯುಧನು ಮಹಾಮುನಿಯು ಮುಕ್ತನಾಗಿದ್ದ ಕಪಾಲಮೋಚನ ಎಂಬ ಹೆಸರಿನ ಔಶನಸ ತೀರ್ಥಕ್ಕೆ ಹೋದನು.

09038005a ಮಹತಾ ಶಿರಸಾ ರಾಜನ್ಗ್ರಸ್ತಜಂಘೋ ಮಹೋದರಃ|

09038005c ರಾಕ್ಷಸಸ್ಯ ಮಹಾರಾಜ ರಾಮಕ್ಷಿಪ್ತಸ್ಯ ವೈ ಪುರಾ||

ರಾಜನ್! ಮಹಾರಾಜ! ಹಿಂದೆ ರಾಮನು ಎಸೆಯಲ್ಪಟ್ಟ ರಾಕ್ಷಸನ ಮಹಾಶಿರಸ್ಸು ಮಹೋದರನೆಂಬ ಮುನಿಯ ಮೊಣಕಾಲಿಗೆ ಅಂಟಿಕೊಂಡುಬಿಟ್ಟಿತ್ತು.

09038006a ತತ್ರ ಪೂರ್ವಂ ತಪಸ್ತಪ್ತಂ ಕಾವ್ಯೇನ ಸುಮಹಾತ್ಮನಾ|

09038006c ಯತ್ರಾಸ್ಯ ನೀತಿರಖಿಲಾ ಪ್ರಾದುರ್ಭೂತಾ ಮಹಾತ್ಮನಃ||

09038006e ತತ್ರಸ್ಥಶ್ಚಿಂತಯಾಮಾಸ ದೈತ್ಯದಾನವವಿಗ್ರಹಂ||

ಅಲ್ಲಿಯೇ ಹಿಂದೆ ಮಹಾತ್ಮ ಕಾವ್ಯನು ತಪಸ್ಸನ್ನು ತಪಿಸುತ್ತಿದ್ದಾಗ ಆ ಮಹಾತ್ಮನಿಗೆ ಅಖಿಲ ನೀತಿಗಳೂ ಕಾಣಿಸಿಕೊಂಡವು. ಅಲ್ಲಿಯೇ ಅವನು ದೈತ್ಯ-ದಾನವರ ಯುದ್ಧದ ಕುರಿತು ಯೋಚಿಸುತ್ತಿದ್ದನು.

09038007a ತತ್ಪ್ರಾಪ್ಯ ಚ ಬಲೋ ರಾಜಂಸ್ತೀರ್ಥಪ್ರವರಮುತ್ತಮಂ|

09038007c ವಿಧಿವದ್ಧಿ ದದೌ ವಿತ್ತಂ ಬ್ರಾಹ್ಮಣಾನಾಂ ಮಹಾತ್ಮನಾಂ||

ರಾಜನ್! ಬಲರಾಮನು ಆ ಉತ್ತಮ ತೀರ್ಥಪ್ರವರವನ್ನು ತಲುಪಿ ವಿಧಿವತ್ತಾಗಿ ಮಹಾತ್ಮ ಬ್ರಾಹ್ಮಣರಿಗೆ ಸಂಪತ್ತನ್ನು ದಾನವಾಗಿತ್ತನು.”

09038008 ಜನಮೇಜಯ ಉವಾಚ

09038008a ಕಪಾಲಮೋಚನಂ ಬ್ರಹ್ಮನ್ಕಥಂ ಯತ್ರ ಮಹಾಮುನಿಃ|

09038008c ಮುಕ್ತಃ ಕಥಂ ಚಾಸ್ಯ ಶಿರೋ ಲಗ್ನಂ ಕೇನ ಚ ಹೇತುನಾ||

ಜನಮೇಜಯನು ಹೇಳಿದನು: “ಬ್ರಹ್ಮನ್! ಕಪಾಲಮೋಚನವೆಂಬ ಹೆಸರು ಹೇಗೆ ಬಂದಿತು? ಅಲ್ಲಿ ಮಹಾಮುನಿಯು ಹೇಗೆ ಮುಕ್ತನಾದನು? ಶಿರಸ್ಸು ಯಾವ ಕಾರಣದಿಂದಾಗಿ ಅವನಲ್ಲಿ ಅಂಟಿಕೊಂಡಿತ್ತು?”

09038009 ವೈಶಂಪಾಯನ ಉವಾಚ

09038009a ಪುರಾ ವೈ ದಂಡಕಾರಣ್ಯೇ ರಾಘವೇಣ ಮಹಾತ್ಮನಾ|

09038009c ವಸತಾ ರಾಜಶಾರ್ದೂಲ ರಾಕ್ಷಸಾಸ್ತತ್ರ ಹಿಂಸಿತಾಃ||

ವೈಶಂಪಾಯನನು ಹೇಳಿದನು: “ರಾಜಶಾರ್ದೂಲ! ಹಿಂದೆ ಮಹಾತ್ಮ ರಾಘವನು ದಂಡಕಾರಣ್ಯದಲ್ಲಿ ವಾಸಿಸುತ್ತಿದ್ದಾಗ ಅಲ್ಲಿ ರಾಕ್ಷಸರನ್ನು ಸಂಹರಿಸಿದನು.

09038010a ಜನಸ್ಥಾನೇ ಶಿರಶ್ಚಿನ್ನಂ ರಾಕ್ಷಸಸ್ಯ ದುರಾತ್ಮನಃ|

09038010c ಕ್ಷುರೇಣ ಶಿತಧಾರೇಣ ತತ್ಪಪಾತ ಮಹಾವನೇ||

ಜನಸ್ಥಾನದಲ್ಲಿ ದುರಾತ್ಮ ರಾಕ್ಷಸನ ಶಿರವನ್ನು ಕ್ಷುರದ ಶಿತಧಾರೆಯಿಂದ ಕತ್ತರಿಸಲ್ಪಡಲು ಅದು ಮಹಾವನದಲ್ಲಿ ಬಿದ್ದಿತು.

09038011a ಮಹೋದರಸ್ಯ ತಲ್ಲಗ್ನಂ ಜಂಘಾಯಾಂ ವೈ ಯದೃಚ್ಚಯಾ|

09038011c ವನೇ ವಿಚರತೋ ರಾಜನ್ನಸ್ಥಿ ಭಿತ್ತ್ವಾಸ್ಫುರತ್ತದಾ||

ರಾಜನ್! ದೈವಯೋಗದಿಂದ ಅದು ಅಲ್ಲಿ ಸಂಚರಿಸುತ್ತಿದ್ದ ಮಹೋದರನ ಮೊಣಕಾಲನ್ನು ಸೀಳಿ ಅಲ್ಲಿಯೇ ಅಂಟಿಕೊಂಡಿತು.

09038012a ಸ ತೇನ ಲಗ್ನೇನ ತದಾ ದ್ವಿಜಾತಿರ್ನ ಶಶಾಕ ಹ|

09038012c ಅಭಿಗಂತುಂ ಮಹಾಪ್ರಾಜ್ಞಸ್ತೀರ್ಥಾನ್ಯಾಯತನಾನಿ ಚ||

ಅದು ಅವನಿಗೆ ಅಂಟಿಕೊಂಡಿದ್ದುದರಿಂದ ಆ ಬ್ರಾಹ್ಮಣ ಮಹಾಪ್ರಾಜ್ಞನು ತೀರ್ಥ-ದೇವಾಲಯಗಳಿಗೆ ಹೋಗಲು ಅಸಮರ್ಥನಾದನು.

09038013a ಸ ಪೂತಿನಾ ವಿಸ್ರವತಾ ವೇದನಾರ್ತೋ ಮಹಾಮುನಿಃ|

09038013c ಜಗಾಮ ಸರ್ವತೀರ್ಥಾನಿ ಪೃಥಿವ್ಯಾಮಿತಿ ನಃ ಶ್ರುತಂ||

ಕೀವು ಹರಿದು ವೇದನೆಯಿಂದ ಆರ್ತನಾಗಿದ್ದ ಆ ಮಹಾಮುನಿಯು ಭೂಮಿಯ ಸರ್ವತೀರ್ಥಗಳಿಗೆ ಹೋದನೆಂದು ನಾವು ಕೇಳಿದ್ದೇವೆ.

09038014a ಸ ಗತ್ವಾ ಸರಿತಃ ಸರ್ವಾಃ ಸಮುದ್ರಾಂಶ್ಚ ಮಹಾತಪಾಃ|

09038014c ಕಥಯಾಮಾಸ ತತ್ಸರ್ವಂ ಋಷೀಣಾಂ ಭಾವಿತಾತ್ಮನಾಂ||

ಆ ಮಹಾತಪಸ್ವಿಯು ಸರ್ವ ನದಿ-ಸಮುದ್ರಗಳಿಗೆ ಹೋಗಿ ಅಲ್ಲಿ ಸರ್ವ ಭಾವಿತಾತ್ಮ ಋಷಿಗಳಿಗೆ ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದನು.

09038015a ಆಪ್ಲುತಃ ಸರ್ವತೀರ್ಥೇಷು ನ ಚ ಮೋಕ್ಷಮವಾಪ್ತವಾನ್|

09038015c ಸ ತು ಶುಶ್ರಾವ ವಿಪ್ರೇಂದ್ರೋ ಮುನೀನಾಂ ವಚನಂ ಮಹತ್||

ಸರ್ವತೀರ್ಥಗಳಲ್ಲಿ ಮುಳುಗಿದರೂ ಅವನಿಗೆ ಆ ಶಿರದಿಂದ ಮೋಕ್ಷವು ದೊರಕಲಿಲ್ಲ. ಆಗ ಆ ವಿಪ್ರೇಂದ್ರನು ಮುನಿಗಳ ಈ ಮಹಾ ವಚನವನ್ನು ಕೇಳಿದನು:

09038016a ಸರಸ್ವತ್ಯಾಸ್ತೀರ್ಥವರಂ ಖ್ಯಾತಮೌಶನಸಂ ತದಾ|

09038016c ಸರ್ವಪಾಪಪ್ರಶಮನಂ ಸಿದ್ಧಕ್ಷೇತ್ರಮನುತ್ತಮಂ||

“ಸರಸ್ವತೀ ತೀರದಲ್ಲಿ ಔಶನಸವೆಂಬ ಪ್ರಖ್ಯಾತ ಶ್ರೇಷ್ಠ ತೀರ್ಥವಿದೆ. ಆ ಅನುತ್ತಮ ಸಿದ್ಧಕ್ಷೇತ್ರದಲ್ಲಿ ಎಲ್ಲ ಪಾಪಗಳೂ ಪ್ರಶಮನಗೊಳ್ಳುತ್ತವೆ.”

09038017a ಸ ತು ಗತ್ವಾ ತತಸ್ತತ್ರ ತೀರ್ಥಮೌಶನಸಂ ದ್ವಿಜಃ|

09038017c ತತ ಔಶನಸೇ ತೀರ್ಥೇ ತಸ್ಯೋಪಸ್ಪೃಶತಸ್ತದಾ||

09038017e ತಚ್ಚಿರಶ್ಚರಣಂ ಮುಕ್ತ್ವಾ ಪಪಾತಾಂತರ್ಜಲೇ ತದಾ||

ಆಗ ಆ ದ್ವಿಜನು ಔಶಸನ ತೀರ್ಥಕ್ಕೆ ಹೋಗಿ ಔಶಸನ ತೀರ್ಥದಲ್ಲಿ ಸ್ನಾನಮಾಡುತ್ತಿರಲು ಆ ಶಿರವು ಅವನ ಕಾಲನ್ನು ಬಿಟ್ಟು ನೀರಿನೊಳಗೆ ಬಿದ್ದಿತು.

09038018a ತತಃ ಸ ವಿರುಜೋ ರಾಜನ್ಪೂತಾತ್ಮಾ ವೀತಕಲ್ಮಷಃ|

09038018c ಆಜಗಾಮಾಶ್ರಮಂ ಪ್ರೀತಃ ಕೃತಕೃತ್ಯೋ ಮಹೋದರಃ||

ರಾಜನ್! ಪೂತಾತ್ಮನೂ ಕಲ್ಮಷಗಳನ್ನು ಕಳೆದುಕೊಂಡವನೂ, ಶಿರದಿಂದ ಮುಕ್ತನಾದವನೂ ಆದ ಕೃತಕೃತ್ಯ ಮಹೋದರನು ಪ್ರೀತನಾಗಿ ತನ್ನ ಆಶ್ರಮಕ್ಕೆ ಮರಳಿದನು.

09038019a ಸೋಽಥ ಗತ್ವಾಶ್ರಮಂ ಪುಣ್ಯಂ ವಿಪ್ರಮುಕ್ತೋ ಮಹಾತಪಾಃ|

09038019c ಕಥಯಾಮಾಸ ತತ್ಸರ್ವಂ ಋಷೀಣಾಂ ಭಾವಿತಾತ್ಮನಾಂ||

ತನ್ನ ಪುಣ್ಯ ಆಶ್ರಮಕ್ಕೆ ಹೋಗಿ ಮುಕ್ತನಾದ ಮಹಾತಪಸ್ವಿ ವಿಪ್ರನು ನಡೆದುದೆಲ್ಲವನ್ನೂ ಅಲ್ಲಿದ್ದ ಭಾವಿತಾತ್ಮ ಋಷಿಗಳಿಗೆ ಹೇಳಿದನು.

09038020a ತೇ ಶ್ರುತ್ವಾ ವಚನಂ ತಸ್ಯ ತತಸ್ತೀರ್ಥಸ್ಯ ಮಾನದ|

09038020c ಕಪಾಲಮೋಚನಮಿತಿ ನಾಮ ಚಕ್ರುಃ ಸಮಾಗತಾಃ||

ಮಾನದ! ಅವನ ಆ ಮಾತನ್ನು ಕೇಳಿ ಅಲ್ಲಿ ಸೇರಿದ್ದ ಮುನಿಗಳು ಆ ತೀರ್ಥಕ್ಕೆ ಕಪಾಲಮೋಚನ ಎಂಬ ಹೆಸರಿನ್ನಿತ್ತರು.

09038021a ತತ್ರ ದತ್ತ್ವಾ ಬಹೂನ್ದಾಯಾನ್ವಿಪ್ರಾನ್ಸಂಪೂಜ್ಯ ಮಾಧವಃ|

09038021c ಜಗಾಮ ವೃಷ್ಣಿಪ್ರವರೋ ರುಷಂಗೋರಾಶ್ರಮಂ ತದಾ||

ಅಲ್ಲಿ ಅನೇಕ ದಾನಗಳನ್ನಿತ್ತು ವಿಪ್ರರನ್ನು ಪೂಜಿಸಿ ವೃಷ್ಣಿಪ್ರವರ ಮಾಧವನು ರುಷಂಗುವಿನ ಆಶ್ರಮಕ್ಕೆ ಹೋದನು.

09038022a ಯತ್ರ ತಪ್ತಂ ತಪೋ ಘೋರಮಾರ್ಷ್ಟಿಷೇಣೇನ ಭಾರತ|

09038022c ಬ್ರಾಹ್ಮಣ್ಯಂ ಲಬ್ಧವಾಂಸ್ತತ್ರ ವಿಶ್ವಾಮಿತ್ರೋ ಮಹಾಮುನಿಃ||

ಭಾರತ! ಅಲ್ಲಿಯೇ ಆರ್ಷ್ಟಿಷೇಣನು ಘೋರ ತಪಸ್ಸನ್ನು ತಪಿಸಿದ್ದನು ಮತ್ತು ಮಹಾಮುನಿ ವಿಶ್ವಾಮಿತ್ರನು ಬ್ರಾಹ್ಮಣ್ಯವನ್ನು ಪಡೆದುಕೊಂಡನು.

09038023a ತತೋ ಹಲಧರಃ ಶ್ರೀಮಾನ್ಬ್ರಾಹ್ಮಣೈಃ ಪರಿವಾರಿತಃ|

09038023c ಜಗಾಮ ಯತ್ರ ರಾಜೇಂದ್ರ ರುಷಂಗುಸ್ತನುಮತ್ಯಜತ್||

ರಾಜೇಂದ್ರ! ಅನಂತರ ಶ್ರೀಮಾನ್ ಹಲಧರನು ಬ್ರಾಹ್ಮಣರಿಂದ ಸುತ್ತುವರೆಯಲ್ಪಟ್ಟು ರುಷಂಗುವು ದೇಹತ್ಯಾಗಮಾಡಿದ ಸ್ಥಳಕ್ಕೆ ಹೋದನು.

09038024a ರುಷಂಗುರ್ಬ್ರಾಹ್ಮಣೋ ವೃದ್ಧಸ್ತಪೋನಿತ್ಯಶ್ಚ ಭಾರತ|

09038024c ದೇಹನ್ಯಾಸೇ ಕೃತಮನಾ ವಿಚಿಂತ್ಯ ಬಹುಧಾ ಬಹು||

ಭಾರತ! ರುಷಂಗು ಬ್ರಾಹ್ಮಣನು ವೃದ್ಧನೂ ನಿತ್ಯ ತಪೋನಿರತನೂ ಆಗಿದ್ದನು. ಬಹಳಷ್ಟು ಚಿಂತಿಸಿ ಅವನು ದೇಹತ್ಯಾಗಮಾಡಲು ನಿಶ್ಚಯಿಸಿದನು.

09038025a ತತಃ ಸರ್ವಾನುಪಾದಾಯ ತನಯಾನ್ವೈ ಮಹಾತಪಾಃ|

09038025c ರುಷಂಗುರಬ್ರವೀತ್ತತ್ರ ನಯಧ್ವಂ ಮಾ ಪೃಥೂದಕಂ||

ಆಗ ಆ ಮಹಾತಪಸ್ವಿ ರುಷಂಗುವು ತನ್ನ ಮಕ್ಕಳೆಲ್ಲರನ್ನೂ ಕರೆದು “ನನ್ನನ್ನು ಪೃಥೂದಕಕ್ಕೆ ಕೊಂಡೊಯ್ಯಿರಿ!” ಎಂದು ಹೇಳಿದನು.

09038026a ವಿಜ್ಞಾಯಾತೀತವಯಸಂ ರುಷಂಗುಂ ತೇ ತಪೋಧನಾಃ|

09038026c ತಂ ವೈ ತೀರ್ಥಮುಪಾನಿನ್ಯುಃ ಸರಸ್ವತ್ಯಾಸ್ತಪೋಧನಂ||

ಆ ತಪೋಧನರು ಅತ್ಯಂತ ವೃದ್ಧನಾಗಿದ್ದ ತಪೋಧನ ರುಷಂಗುವನ್ನು ಸರಸ್ವತಿಯ ಆ ತೀರ್ಥಕ್ಕೆ ಕೊಂಡೊಯ್ದರು.

09038027a ಸ ತೈಃ ಪುತ್ರೈಸ್ತದಾ ಧೀಮಾನಾನೀತೋ ವೈ ಸರಸ್ವತೀಂ|

09038027c ಪುಣ್ಯಾಂ ತೀರ್ಥಶತೋಪೇತಾಂ ವಿಪ್ರಸಂಘೈರ್ನಿಷೇವಿತಾಂ||

ಪುತ್ರರು ಆ ಧೀಮಂತನನ್ನು ನೂರಾರು ತೀರ್ಥಗಳಿಂದ ಕೂಡಿದ್ದ, ವಿಪ್ರಸಂಘಗಳು ಸೇವಿಸುತ್ತಿದ್ದ ಪುಣ್ಯ ಸರಸ್ವತೀ ತೀರ್ಥಕ್ಕೆ ಕರೆತಂದರು.

09038028a ಸ ತತ್ರ ವಿಧಿನಾ ರಾಜನ್ನಾಪ್ಲುತಃ ಸುಮಹಾತಪಾಃ|

09038028c ಜ್ಞಾತ್ವಾ ತೀರ್ಥಗುಣಾಂಶ್ಚೈವ ಪ್ರಾಹೇದಂ ಋಷಿಸತ್ತಮಃ||

09038028e ಸುಪ್ರೀತಃ ಪುರುಷವ್ಯಾಘ್ರ ಸರ್ವಾನ್ಪುತ್ರಾನುಪಾಸತಃ||

ರಾಜನ್! ಪುರುಷವ್ಯಾಘ್ರ! ಅಲ್ಲಿ ವಿಧಿವತ್ತಾಗಿ ಸ್ನಾನಮಾಡಿದ ಆ ಸುಮಹಾತಪಸ್ವಿ ಋಷಿಸತ್ತಮನು ತೀರ್ಥಗುಣಗಳನ್ನು ತಿಳಿದು ಸುಪ್ರೀತನಾಗಿ ಸಮೀಪದಲ್ಲಿದ್ದ ಎಲ್ಲಮಕ್ಕಳಿಗೂ ಹೇಳಿದನು:

09038029a ಸರಸ್ವತ್ಯುತ್ತರೇ ತೀರೇ ಯಸ್ತ್ಯಜೇದಾತ್ಮನಸ್ತನುಂ|

09038029c ಪೃಥೂದಕೇ ಜಪ್ಯಪರೋ ನೈನಂ ಶ್ವೋಮರಣಂ ತಪೇತ್||

“ಸರಸ್ವತಿಯ ಉತ್ತರತೀರದ ಪ್ರಥೂದಕದಲ್ಲಿ ಯಾರು ಜಪಿಸುತ್ತಾ ತಮ್ಮ ಶರೀರವನ್ನೂ ತ್ಯಜಿಸುತ್ತಾರೋ ಅವರಿಗೆ ಮುಂದೆ ಮರಣವು ಕಾಡುವುದಿಲ್ಲ!”

09038030a ತತ್ರಾಪ್ಲುತ್ಯ ಸ ಧರ್ಮಾತ್ಮಾ ಉಪಸ್ಪೃಶ್ಯ ಹಲಾಯುಧಃ|

09038030c ದತ್ತ್ವಾ ಚೈವ ಬಹೂನ್ದಾಯಾನ್ವಿಪ್ರಾಣಾಂ ವಿಪ್ರವತ್ಸಲಃ||

ಅಲ್ಲಿ ಧರ್ಮಾತ್ಮ ಹಲಾಯುಧನು ಮುಳುಗಿ ಸ್ನಾನಾಚಮನೀಯಗಳನ್ನು ಪೂರೈಸಿ ಆ ವಿಪ್ರವತ್ಸಲನು ವಿಪ್ರರಿಗೆ ಅನೇಕ ದಾನಗಳನ್ನಿತ್ತನು.

09038031a ಸಸರ್ಜ ಯತ್ರ ಭಗವಾಽಲ್ಲೋಕಾಽಲ್ಲೋಕಪಿತಾಮಹಃ|

09038031c ಯತ್ರಾರ್ಷ್ಟಿಷೇಣಃ ಕೌರವ್ಯ ಬ್ರಾಹ್ಮಣ್ಯಂ ಸಂಶಿತವ್ರತಃ||

09038031e ತಪಸಾ ಮಹತಾ ರಾಜನ್ಪ್ರಾಪ್ತವಾನೃಷಿಸತ್ತಮಃ||

09038032a ಸಿಂಧುದ್ವೀಪಶ್ಚ ರಾಜರ್ಷಿರ್ದೇವಾಪಿಶ್ಚ ಮಹಾತಪಾಃ|

09038032c ಬ್ರಾಹ್ಮಣ್ಯಂ ಲಬ್ಧವಾನ್ಯತ್ರ ವಿಶ್ವಾಮಿತ್ರೋ ಮಹಾಮುನಿಃ||

09038032e ಮಹಾತಪಸ್ವೀ ಭಗವಾನುಗ್ರತೇಜಾ ಮಹಾತಪಾಃ||

09038033a ತತ್ರಾಜಗಾಮ ಬಲವಾನ್ಬಲಭದ್ರಃ ಪ್ರತಾಪವಾನ್|

ಅನಂತರ ಬಲವಾನ್ ಪ್ರತಾಪವಾನ್ ಬಲಭದ್ರನು ಸಿಂಧುದ್ವೀಪಕ್ಕೆ ಹೋದನು. ಅಲ್ಲಿಯೇ ಲೋಕಪಿತಾಮಹ ಭಗವಂತನು ಲೋಕಾಲೋಕಗಳನ್ನು ಸೃಷ್ಟಿಸಿದ್ದನು. ಕೌರವ್ಯ! ಅಲ್ಲಿಯೇ ಸಂಶಿತವ್ರತ ಋಷಿಸತ್ತಮ ಆರ್ಷ್ಟಿಷೇಣನು ಮಹಾತಪಸ್ಸಿನಿಂದ ಬ್ರಾಹ್ಮಣ್ಯವನ್ನು ಪಡೆದಿದ್ದನು. ಅಲ್ಲಿಯೇ ರಾಜರ್ಷಿ ಸಿಂಧುದ್ವೀಪ, ಮಹಾಮುನಿ ದೇವಾಪಿ, ಮತ್ತು ಮಹಾಮುನಿ ಮಹಾತಪಸ್ವೀ ಉಗ್ರತೇಜಸ್ವೀ ಮಹಾತಪಸ್ವೀ ಭಗವಾನ್ ವಿಶ್ವಾಮಿತ್ರರು ಬ್ರಾಹ್ಮಣ್ಯವನ್ನು ಪಡೆದಿದ್ದರು.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತಿರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನೇ ಅಷ್ಠಾತ್ರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ ಎನ್ನುವ ಮೂವತ್ತೆಂಟನೇ ಅಧ್ಯಾಯವು.

ಸಾರಸ್ವತ ಪರ್ವದ ಇತರ ಅಧ್ಯಾಯಗಳು:

  1. ಪಾಂಡವಾನಾಂ ಸರೋವರಾಗಮನ
  2. ಸುಯೋಧನಯುಧಿಷ್ಠಿರಸಂವಾದ
  3. ಸುಯೋಧನಯುಧಿಷ್ಠಿರಸಂವಾದ
  4. ಭೀಮಸೇನದುರ್ಯೋಧನಸಂವಾದ
  5. ಬಲದೇವಾಗಮನ
  6. ಬಲದೇವತೀರ್ಥಯಾತ್ರಾಯಾಂ ಪ್ರಭಾಸೋತ್ಪತ್ತಿಕಥನ
  7. ಬಲದೇವತೀರ್ಥಯಾತ್ರಾಯಾಂ ತ್ರಿತಾಖ್ಯಾನ
  8. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  9. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  10. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  11. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  12. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  13. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  14. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  15. ಬಲದೇವತೀರ್ಥಯಾತ್ರಾಯಾಂ ಕುಮಾರಾಭಿಷೇಕಕ್ರಮ
  16. ಬಲದೇವತೀರ್ಥಯಾತ್ರಾಯಾಂ ಸ್ಕಂದಾಭಿಷೇಕ
  17. ಬಲದೇವತೀರ್ಥಯಾತ್ರಾಯಾಂ ತಾರಕವಧ
  18. ಬಲದೇವತೀರ್ಥಯಾತ್ರಾ
  19. ಬಲದೇವತೀರ್ಥಯಾತ್ರಾಯಾಂ ಬದರಪಾಚನತೀರ್ಥಕಥನ
  20. ಬಲದೇವತೀರ್ಥಯಾತ್ರಾ
  21. ಬಲದೇವತೀರ್ಥಯಾತ್ರಾ
  22. ಬಲದೇವತೀರ್ಥಯಾತ್ರಾ
  23. ಬಲದೇವತೀರ್ಥಯಾತ್ರಾ
  24. ಬಲದೇವತೀರ್ಥಯಾತ್ರಾಯಾಂ ಕುರುಕ್ಷೇತ್ರಕಥನ
  25. ಬಲದೇವತೀರ್ಥಯಾತ್ರಾ

Comments are closed.