ಶಲ್ಯಪರ್ವ: ಸಾರಸ್ವತಪರ್ವ
೩೩
ಬಲದೇವನ ಆಗಮನ; ಪಾಂಡವ-ಸೃಂಜಯರು ಮತ್ತು ದುರ್ಯೋಧನನು ಅವನನ್ನು ಸ್ವಾಗತಿಸಿದುದು (೧-೧೪). ಭೀಮ-ದುರ್ಯೋಧನರ ಗದಾಯುದ್ಧವನ್ನು ನೋಡಲು ಬಲರಾಮನು ಕುಳಿತುಕೊಂಡಿದುದು (೧೫-೧೮).
09033001 ಸಂಜಯ ಉವಾಚ
09033001a ತಸ್ಮಿನ್ಯುದ್ಧೇ ಮಹಾರಾಜ ಸಂಪ್ರವೃತ್ತೇ ಸುದಾರುಣೇ|
09033001c ಉಪವಿಷ್ಟೇಷು ಸರ್ವೇಷು ಪಾಂಡವೇಷು ಮಹಾತ್ಮಸು||
09033002a ತತಸ್ತಾಲಧ್ವಜೋ ರಾಮಸ್ತಯೋರ್ಯುದ್ಧ ಉಪಸ್ಥಿತೇ|
09033002c ಶ್ರುತ್ವಾ ತಚ್ಚಿಷ್ಯಯೋ ರಾಜನ್ನಾಜಗಾಮ ಹಲಾಯುಧಃ||
ಸಂಜಯನು ಹೇಳಿದನು: “ಮಹಾರಾಜ! ರಾಜನ್! ಆ ಸುದಾರುಣ ಯುದ್ಧವು ಪ್ರಾರಂಭವಾಗಲಿದ್ದಾಗ, ಸರ್ವ ಮಹಾತ್ಮ ಪಾಂಡವರೂ ಕುಳಿತುಕೊಂಡಿರುವಾಗ, ತನ್ನ ಶಿಷ್ಯರ ನಡುವೆ ಯುದ್ಧವು ನಡೆಯಲಿದೆಯೆಂದು ಕೇಳಿದ ಹಲಾಯುಧ ತಾಲಧ್ವಜ ರಾಮನು ಅಲ್ಲಿಗೆ ಆಗಮಿಸಿದನು.
09033003a ತಂ ದೃಷ್ಟ್ವಾ ಪರಮಪ್ರೀತಾಃ ಪೂಜಯಿತ್ವಾ ನರಾಧಿಪಾಃ|
09033003c ಶಿಷ್ಯಯೋಃ ಕೌಶಲಂ ಯುದ್ಧೇ ಪಶ್ಯ ರಾಮೇತಿ ಚಾಬ್ರುವನ್||
ಅವನನ್ನು ನೋಡಿ ಪರಮಪ್ರೀತ ನರಾಧಿಪರು ಪೂಜಿಸಿ “ರಾಮ! ಶಿಷ್ಯರ ಕೌಶಲ ಯುದ್ಧವನ್ನು ನೋಡು!” ಎಂದು ಹೇಳಿದರು.
09033004a ಅಬ್ರವೀಚ್ಚ ತದಾ ರಾಮೋ ದೃಷ್ಟ್ವಾ ಕೃಷ್ಣಂ ಚ ಪಾಂಡವಂ|
09033004c ದುರ್ಯೋಧನಂ ಚ ಕೌರವ್ಯಂ ಗದಾಪಾಣಿಮವಸ್ಥಿತಂ||
ಆಗ ರಾಮನು ಕೃಷ್ಣ, ಮತ್ತು ಗದಾಪಾಣಿಗಳಾಗಿ ನಿಂತಿದ್ದ ಪಾಂಡವ ಮತ್ತು ಕೌರವ್ಯ ದುರ್ಯೋಧನನನ್ನು ನೋಡಿ ಹೀಗೆಂದನು:
09033005a ಚತ್ವಾರಿಂಶದಹಾನ್ಯದ್ಯ ದ್ವೇ ಚ ಮೇ ನಿಃಸೃತಸ್ಯ ವೈ|
09033005c ಪುಷ್ಯೇಣ ಸಂಪ್ರಯಾತೋಽಸ್ಮಿ ಶ್ರವಣೇ ಪುನರಾಗತಃ||
09033005e ಶಿಷ್ಯಯೋರ್ವೈ ಗದಾಯುದ್ಧಂ ದ್ರಷ್ಟುಕಾಮೋಽಸ್ಮಿ ಮಾಧವ||
“ನಾನು ಹೊರಟುಹೋಗಿ ಇಂದಿಗೆ ನಲವತ್ತೆರಡು ದಿನಗಳಾದವು. ಪುಷ್ಯ ನಕ್ಷತ್ರದಲ್ಲಿ ಹೋದ ನಾನು ಶ್ರವಣ ನಕ್ಷತ್ರದಲ್ಲಿ ಹಿಂದಿರುಗಿದ್ದೇನೆ. ಮಾಧವ! ಶಿಷ್ಯರಿಬ್ಬರ ನಡುವಿನ ಗದಾಯುದ್ಧವನ್ನು ನೋಡಲು ಬಯಸುತ್ತೇನೆ.”
09033006a ತತೋ ಯುಧಿಷ್ಠಿರೋ ರಾಜಾ ಪರಿಷ್ವಜ್ಯ ಹಲಾಯುಧಂ|
09033006c ಸ್ವಾಗತಂ ಕುಶಲಂ ಚಾಸ್ಮೈ ಪರ್ಯಪೃಚ್ಚದ್ಯಥಾತಥಂ||
ಆಗ ರಾಜಾ ಯುಧಿಷ್ಠಿರನು ಹಲಾಯುಧನನ್ನು ಆಲಂಗಿಸಿ ಸ್ವಾಗತಿಸಿ ಯಥಾವತ್ತಾಗಿ ಅವನ ಕುಶಲವನ್ನು ಕೇಳಿದನು.
09033007a ಕೃಷ್ಣೌ ಚಾಪಿ ಮಹೇಷ್ವಾಸಾವಭಿವಾದ್ಯ ಹಲಾಯುಧಂ|
09033007c ಸಸ್ವಜಾತೇ ಪರಿಪ್ರೀತೌ ಪ್ರಿಯಮಾಣೌ ಯಶಸ್ವಿನೌ||
ಮಹೇಷ್ವಾಸ ಯಶಸ್ವಿ ಕೃಷ್ಣಾರ್ಜುನರು ಕೂಡ ಹಲಾಯುಧನನ್ನು ನಮಸ್ಕರಿಸಿ ಅತ್ಯಂತಪ್ರಸನ್ನರಾಗಿ ಪ್ರೇಮಪೂರ್ವಕವಾಗಿ ಆಲಂಗಿಸಿಕೊಂಡರು.
09033008a ಮಾದ್ರೀಪುತ್ರೌ ತಥಾ ಶೂರೌ ದ್ರೌಪದ್ಯಾಃ ಪಂಚ ಚಾತ್ಮಜಾಃ|
09033008c ಅಭಿವಾದ್ಯ ಸ್ಥಿತಾ ರಾಜನ್ರೌಹಿಣೇಯಂ ಮಹಾಬಲಂ||
ಶೂರ ಮಾದ್ರೀಪುತ್ರರಿಬ್ಬರೂ ಮತ್ತು ಹಾಗೆಯೇ ದ್ರೌಪದಿಯ ಐವರು ಮಕ್ಕಳೂ ಮಹಾಬಲ ರೌಹಿಣೇಯನನ್ನು ನಮಸ್ಕರಿಸಿ ನಿಂತುಕೊಂಡರು.
09033009a ಭೀಮಸೇನೋಽಥ ಬಲವಾನ್ಪುತ್ರಸ್ತವ ಜನಾಧಿಪ|
09033009c ತಥೈವ ಚೋದ್ಯತಗದೌ ಪೂಜಯಾಮಾಸತುರ್ಬಲಂ||
ಜನಾಧಿಪ! ಆಗ ಭೀಮಸೇನ ಮತ್ತು ನಿನ್ನ ಬಲವಾನ್ ಮಗನೂ ಕೂಡ ಗದೆಗಳನ್ನು ಮೇಲೆತ್ತಿ ಬಲರಾಮನನ್ನು ಗೌರವಿಸಿದರು.
09033010a ಸ್ವಾಗತೇನ ಚ ತೇ ತತ್ರ ಪ್ರತಿಪೂಜ್ಯ ಪುನಃ ಪುನಃ|
09033010c ಪಶ್ಯ ಯುದ್ಧಂ ಮಹಾಬಾಹೋ ಇತಿ ತೇ ರಾಮಮಬ್ರುವನ್||
09033010e ಏವಮೂಚುರ್ಮಹಾತ್ಮಾನಂ ರೌಹಿಣೇಯಂ ನರಾಧಿಪಾಃ||
ಪುನಃ ಪುನಃ ಅವನನ್ನು ಅಲ್ಲಿಗೆ ಸ್ವಾಗತಿಸಿ “ಮಹಾಬಾಹೋ! ಯುದ್ಧವನ್ನು ನೋಡು!” ಎಂದು ನರಾಧಿಪರು ಮಹಾತ್ಮ ರೌಹಿಣೇಯ ರಾಮನಿಗೆ ಹೇಳಿದರು.
09033011a ಪರಿಷ್ವಜ್ಯ ತದಾ ರಾಮಃ ಪಾಂಡವಾನ್ಸೃಂಜಯಾನಪಿ|
09033011c ಅಪೃಚ್ಚತ್ಕುಶಲಂ ಸರ್ವಾನ್ಪಾಂಡವಾಂಶ್ಚಾಮಿತೌಜಸಃ||
09033011e ತಥೈವ ತೇ ಸಮಾಸಾದ್ಯ ಪಪ್ರಚ್ಚುಸ್ತಮನಾಮಯಂ||
ಆಗ ಅಮಿತೌಜಸ ರಾಮನು ಪಾಂಡವ-ಸೃಂಜಯರನ್ನು ಆಲಂಗಿಸಿ ಪಾಂಡವರ ಮತ್ತು ಎಲ್ಲರ ಕುಶಲವನ್ನೂ ಕೇಳಿದನು. ಹಾಗೆಯೇ ಅವರೂ ಸಹ ಅವನ ಯೋಗಕ್ಷೇಮಗಳನ್ನು ವಿಚಾರಿಸಿದರು.
09033012a ಪ್ರತ್ಯಭ್ಯರ್ಚ್ಯ ಹಲೀ ಸರ್ವಾನ್ ಕ್ಷತ್ರಿಯಾಂಶ್ಚ ಮಹಾಮನಾಃ|
09033012c ಕೃತ್ವಾ ಕುಶಲಸಮ್ಯುಕ್ತಾಂ ಸಂವಿದಂ ಚ ಯಥಾವಯಃ||
ಮಹಾಮನ ಹಲಿಯೂ ಕೂಡ ಸರ್ವ ಕ್ಷತ್ರಿಯರನ್ನು ಪ್ರತಿಯಾಗಿ ಅಭಿನಂದಿಸಿ ವಯಸ್ಸಿಗೆ ತಕ್ಕಂತೆ ಕುಶಲಸಂಯುಕ್ತ ಮಾತುಗಳನ್ನಾಡಿದನು.
09033013a ಜನಾರ್ದನಂ ಸಾತ್ಯಕಿಂ ಚ ಪ್ರೇಮ್ಣಾ ಸ ಪರಿಷಸ್ವಜೇ|
09033013c ಮೂರ್ಧ್ನಿ ಚೈತಾವುಪಾಘ್ರಾಯ ಕುಶಲಂ ಪರ್ಯಪೃಚ್ಚತ||
ಪ್ರೇಮದಿಂದ ಜನಾರ್ದನ-ಸಾತ್ಯಕಿಯರನ್ನು ಆಲಂಗಿಸಿ ಅವರ ನೆತ್ತಿಗಳನ್ನು ಆಘ್ರಾಣಿಸಿ ಕುಶಲಪ್ರಶ್ನೆಗಳನ್ನು ಕೇಳಿದನು.
09033014a ತೌ ಚೈನಂ ವಿಧಿವದ್ರಾಜನ್ಪೂಜಯಾಮಾಸತುರ್ಗುರುಂ|
09033014c ಬ್ರಹ್ಮಾಣಮಿವ ದೇವೇಶಮಿಂದ್ರೋಪೇಂದ್ರೌ ಮುದಾ ಯುತೌ||
ರಾಜನ್! ಉಪೇಂದ್ರರಿಬ್ಬರು ದೇವೇಶ ಬ್ರಹ್ಮನನ್ನು ಹೇಗೋ ಹಾಗೆ ಮುದದಿಂದ ಅವರಿಬ್ಬರೂ ವಿಧಿವತ್ತಾಗಿ ಹಿರಿಯನನ್ನು ಪೂಜಿಸಿದರು.
09033015a ತತೋಽಬ್ರವೀದ್ಧರ್ಮಸುತೋ ರೌಹಿಣೇಯಮರಿಂದಮಂ|
09033015c ಇದಂ ಭ್ರಾತ್ರೋರ್ಮಹಾಯುದ್ಧಂ ಪಶ್ಯ ರಾಮೇತಿ ಭಾರತ||
ಭಾರತ! ಆಗ ಧರ್ಮಸುತನು ಅರಿಂದಮ ರೌಹಿಣೇಯನಿಗೆ “ರಾಮ! ಸಹೋದರರ ಈ ಮಹಾಯುದ್ಧವನ್ನು ನೋಡು!” ಎಂದನು.
09033016a ತೇಷಾಂ ಮಧ್ಯೇ ಮಹಾಬಾಹುಃ ಶ್ರೀಮಾನ್ಕೇಶವಪೂರ್ವಜಃ|
09033016c ನ್ಯವಿಶತ್ಪರಮಪ್ರೀತಃ ಪೂಜ್ಯಮಾನೋ ಮಹಾರಥೈಃ||
ಮಹಾರಥರಿಂದ ಗೌರವಿಸಲ್ಪಟ್ಟು ಪರಮಪ್ರೀತನಾದ ಮಹಾಬಾಹು ಶ್ರೀಮಾನ್ ಕೇಶವಪೂರ್ವಜನು ಅವರ ಮಧ್ಯ ಕುಳಿತುಕೊಂಡನು.
09033017a ಸ ಬಭೌ ರಾಜಮಧ್ಯಸ್ಥೋ ನೀಲವಾಸಾಃ ಸಿತಪ್ರಭಃ|
09033017c ದಿವೀವ ನಕ್ಷತ್ರಗಣೈಃ ಪರಿಕೀರ್ಣೋ ನಿಶಾಕರಃ||
ನೀಲವಸ್ತ್ರವನ್ನುಟ್ಟಿದ್ದ ಬಿಳಿಯ ಬಣ್ಣದ ಬಲರಾಮನು ರಾಜರ ಮಧ್ಯದಲ್ಲಿ ಕುಳಿತು ಆಕಾಶದಲ್ಲಿ ನಕ್ಷತ್ರಗಣಗಳ ಮಧ್ಯದಲ್ಲಿದ್ದ ನಿಶಾಕರ ಚಂದ್ರನಂತೆ ಶೋಭಿಸಿದನು.
09033018a ತತಸ್ತಯೋಃ ಸಂನಿಪಾತಸ್ತುಮುಲೋ ರೋಮಹರ್ಷಣಃ|
09033018c ಆಸೀದಂತಕರೋ ರಾಜನ್ವೈರಸ್ಯ ತವ ಪುತ್ರಯೋಃ||
ರಾಜನ್! ಆಗ ನಿನ್ನ ಪುತ್ರರ ವೈರವನ್ನು ಅಂತ್ಯಗೊಳಿಸುವ ರೋಮಹರ್ಷಣ ತುಮುಲಯುದ್ಧವು ಪ್ರಾರಂಭವಾಯಿತು.””
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವಾಗಮನೇ ತ್ರಯಾಸ್ತ್ರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವಾಗಮನ ಎನ್ನುವ ಮೂವತ್ಮೂರನೇ ಅಧ್ಯಾಯವು.