Shalya Parva: Chapter 18

ಶಲ್ಯಪರ್ವ: ಹ್ರದಪ್ರವೇಶಪರ್ವ

೧೮

ಕುರುಸೇನೆಯ ಪಲಾಯನ (೧-೧೦). ಪಾಂಡವ-ಪಾಂಚಾಲ ಯೋಧರು ಪರಸ್ಪರರಲ್ಲಿ ಮಾತನಾಡಿಕೊಳ್ಳುತ್ತಾ ಪಲಾಯನ ಮಾಡುತ್ತಿದ್ದ ಕೌರವ ಸೇನೆಯನ್ನು ಆಕ್ರಮಣಿಸಿದುದು (೧೧-೩೦). ದುರ್ಯೋಧನನು ಕುರುಸೇನೆಯ ಹಿಂಭಾಗಕ್ಕೆ ತನ್ನ ರಥವನ್ನು ಒಯ್ಯುವಂತೆ ತನ್ನ ಸಾರಥಿಗೆ ಹೇಳಿದುದು (೩೧-೩೬). ಭೀಮಸೇನನಿಂದ ಇಪ್ಪತ್ತೊಂದು ಸಾವಿರ ಪದಾತಿಗಳ ಸಂಹಾರ (೩೭-೫೦). ಪಲಾಯನ ಮಾಡುತ್ತಿದ್ದ ತನ್ನ ಸೇನೆಯನ್ನು ಹಿಂದಿರುಗಲು ದುರ್ಯೋಧನನನಾಡಿದ ಮಾತು (೫೧-೬೧). ಕುರು ಸೇನೆಯು ಯುದ್ಧಕ್ಕೆ ಹಿಂದಿರುಗುವುದು; ಕುರು-ಪಾಂಡರವರ ಯುದ್ಧವು ಮುಂದುವರೆದುದು (೬೨-೬೫).

09018001 ಸಂಜಯ ಉವಾಚ

09018001a ಪಾತಿತೇ ಯುಧಿ ದುರ್ಧರ್ಷೇ ಮದ್ರರಾಜೇ ಮಹಾರಥೇ|

09018001c ತಾವಕಾಸ್ತವ ಪುತ್ರಾಶ್ಚ ಪ್ರಾಯಶೋ ವಿಮುಖಾಭವನ್||

ಸಂಜಯನು ಹೇಳಿದನು: “ಯುದ್ಧದಲ್ಲಿ ದುರ್ಧರ್ಷ ಮಹಾರಥ ಮದ್ರರಾಜನು ಕೆಳಗುರುಳಲು ಪ್ರಾಯಶಃ ನಿನ್ನ ಪುತ್ರರು ವಿಮುಖರಾದರು.

09018002a ವಣಿಜೋ ನಾವಿ ಭಿನ್ನಾಯಾಂ ಯಥಾಗಾಧೇಽಪ್ಲವೇಽರ್ಣವೇ|

09018002c ಅಪಾರೇ ಪಾರಮಿಚ್ಚಂತೋ ಹತೇ ಶೂರೇ ಮಹಾತ್ಮನಿ||

09018003a ಮದ್ರರಾಜೇ ಮಹಾರಾಜ ವಿತ್ರಸ್ತಾಃ ಶರವಿಕ್ಷತಾಃ|

09018003c ಅನಾಥಾ ನಾಥಮಿಚ್ಚಂತೋ ಮೃಗಾಃ ಸಿಂಹಾರ್ದಿತಾ ಇವ||

ಶೂರ ಮಹಾತ್ಮ ಮದ್ರರಾಜನು ಹತನಾಗಲು ಶರಗಳಿಂದ ಗಾಯಗೊಂಡ ಕುರುಸೇನೆಯು ಅಗಾಧ ಮಹಾಸಾಗರದ ಸುಳಿಗೆ ಸಿಲುಕಿ ಒಡೆದುಹೋದ ನೌಕೆಯ ಆಶ್ರಯದಲ್ಲಿ ಅಪಾರ ಸಾಗರವನ್ನು ದಾಟಲು ಬಯಸುವ ವರ್ತಕರಂತೆ, ಸಿಂಹಾರ್ದಿತ ಮೃಗದಂತೆ, ನಾಥನನ್ನು ಬಯಸುವ ಅನಾಥರಂತೆ ಭಯವಿಹ್ವಲಗೊಂಡಿತು.

09018004a ವೃಷಾ ಯಥಾ ಭಗ್ನಶೃಂಗಾಃ ಶೀರ್ಣದಂತಾ ಗಜಾ ಇವ|

09018004c ಮಧ್ಯಾಹ್ನೇ ಪ್ರತ್ಯಪಾಯಾಮ ನಿರ್ಜಿತಾ ಧರ್ಮಸೂನುನಾ||

ಕೋಡುಮುರಿದು ಹೋದ ಹೋರಿಯಂತೆ ಮತ್ತು ದಂತಗಳನ್ನು ಕಳೆದುಕೊಂಡ ಆನೆಯಂತೆ ನಾವು ಯುಧಿಷ್ಠಿರನಿಂದ ಪರಾಜಿತರಾಗಿ ಮಧ್ಯಾಹ್ನನ ಹೊತ್ತಿಗೆ ಯುದ್ಧದಿಂದ ಹಿಂದೆಸರಿದೆವು.

09018005a ನ ಸಂಧಾತುಮನೀಕಾನಿ ನ ಚ ರಾಜನ್ಪರಾಕ್ರಮೇ|

09018005c ಆಸೀದ್ಬುದ್ಧಿರ್ಹತೇ ಶಲ್ಯೇ ತವ ಯೋಧಸ್ಯ ಕಸ್ಯ ಚಿತ್||

ರಾಜನ್! ಶಲ್ಯನು ಹತನಾಗಲು ನಿನ್ನ ಯಾವ ಯೋಧನಲ್ಲಿಯೂ ಸೇನೆಗಳನ್ನು ಸಂಘಟಿಸುವ ಪರಾಕ್ರಮವಾಗಲೀ ಬುದ್ಧಿಯಾಗಲೀ ಇರಲಿಲ್ಲ.

09018006a ಭೀಷ್ಮೇ ದ್ರೋಣೇ ಚ ನಿಹತೇ ಸೂತಪುತ್ರೇ ಚ ಭಾರತ|

09018006c ಯದ್ದುಃಖಂ ತವ ಯೋಧಾನಾಂ ಭಯಂ ಚಾಸೀದ್ವಿಶಾಂ ಪತೇ||

09018006e ತದ್ಭಯಂ ಸ ಚ ನಃ ಶೋಕೋ ಭೂಯ ಏವಾಭ್ಯವರ್ತತ|

ಭಾರತ! ವಿಶಾಂಪತೇ! ಭೀಷ್ಮ, ದ್ರೋಣ ಮತ್ತು ಸೂತಪುತ್ರರು ಹತರಾದಾಗ ನಿನ್ನ ಯೋಧರಲ್ಲಿ ಯಾವ ದುಃಖವುಂಟಾಗಿತ್ತೋ ಅದೇ ಭಯ-ಶೋಕಗಳು ಪುನಃ ಅವರಲ್ಲಿ ಉಂಟಾಯಿತು.

09018007a ನಿರಾಶಾಶ್ಚ ಜಯೇ ತಸ್ಮಿನ್ ಹತೇ ಶಲ್ಯೇ ಮಹಾರಥೇ||

09018007c ಹತಪ್ರವೀರಾ ವಿಧ್ವಸ್ತಾ ವಿಕೃತ್ತಾಶ್ಚ ಶಿತೈಃ ಶರೈಃ|

09018007e ಮದ್ರರಾಜೇ ಹತೇ ರಾಜನ್ಯೋಧಾಸ್ತೇ ಪ್ರಾದ್ರವನ್ಭಯಾತ್||

ರಾಜನ್! ಪ್ರಮುಖ ಯೋಧರನ್ನು ಕಳೆದುಕೊಂಡಿದ್ದ ನಿನ್ನ ಸೇನೆಯು ಮಹಾರಥ ಶಲ್ಯನು ಹತನಾಗಲು ನಿಶಿತ ಶರಗಳಿಂದ ಗಾಯಗೊಂಡು ವಿಧ್ವಸ್ತಗೊಂಡು ಜಯದಲ್ಲಿ ನಿರಾಶೆಯನ್ನು ತಾಳಿತು. ಮದ್ರರಾಜನು ಹತನಾಗಲು ನಿನ್ನ ಯೋಧರು ಭಯದಿಂದ ಪಲಾಯನಮಾಡಿದರು.

09018008a ಅಶ್ವಾನನ್ಯೇ ಗಜಾನನ್ಯೇ ರಥಾನನ್ಯೇ ಮಹಾರಥಾಃ|

09018008c ಆರುಹ್ಯ ಜವಸಂಪನ್ನಾಃ ಪಾದಾತಾಃ ಪ್ರಾದ್ರವನ್ಭಯಾತ್||

ಭಯದಿಂದ ಮಹಾರಥರಲ್ಲಿ ಕೆಲವರು ಕುದುರೆಗಳನ್ನು, ಕೆಲವರು ಆನೆಗಳನ್ನು, ಕೆಲವರು ರಥಗಳನ್ನು ಏರಿ ಮತ್ತು ವೇಗವಾಗಿ ಓಡಬಲ್ಲವರು ಪದಾತಿಗಳಾಗಿಯೇ ಓಡಿಹೋದರು.

09018009a ದ್ವಿಸಾಹಸ್ರಾಶ್ಚ ಮಾತಂಗಾ ಗಿರಿರೂಪಾಃ ಪ್ರಹಾರಿಣಃ|

09018009c ಸಂಪ್ರಾದ್ರವನ್ ಹತೇ ಶಲ್ಯೇ ಅಂಕುಶಾಂಗುಷ್ಠಚೋದಿತಾಃ||

ಶಲ್ಯನು ಹತನಾಗಲು ಪ್ರಹರಿಸುವ ಗಿರಿಗಳಂತಿದ್ದ ಎರಡು ಸಾವಿರ ಆನೆಗಳು ಅಂಕುಶ-ಅಂಗುಷ್ಠಗಳಿಂದ ಪ್ರಚೋದಿಸಲ್ಪಟ್ಟು ಓಡಿ ಹೋದವು.

09018010a ತೇ ರಣಾದ್ಭರತಶ್ರೇಷ್ಠ ತಾವಕಾಃ ಪ್ರಾದ್ರವನ್ದಿಶಃ|

09018010c ಧಾವಂತಶ್ಚಾಪ್ಯದೃಶ್ಯಂತ ಶ್ವಸಮಾನಾಃ ಶರಾತುರಾಃ||

ಭರತಶ್ರೇಷ್ಠ! ರಣದಿಂದ ದಿಕ್ಕಾಪಾಲಾಗಿ ಓಡಿಹೋಗುತ್ತಿರುವ ನಿನ್ನವರಲ್ಲಿ ಬಾಣಗಳಿಗೆ ಹೆದರಿ ಏದುಸಿರುಬಿಡುತ್ತಾ ಓಡುತ್ತಿರುವವರನ್ನೂ ಕಂಡೆವು.

09018011a ತಾನ್ಪ್ರಭಗ್ನಾನ್ದ್ರುತಾನ್ದೃಷ್ಟ್ವಾ ಹತೋತ್ಸಾಹಾನ್ಪರಾಜಿತಾನ್|

09018011c ಅಭ್ಯದ್ರವಂತ ಪಾಂಚಾಲಾಃ ಪಾಂಡವಾಶ್ಚ ಜಯೈಷಿಣಃ||

ಪರಾಜಿತಗೊಂಡು ನಿರುತ್ಸಾಹದಿಂದ ಓಡಿ ಹೋಗುತ್ತಿದ್ದ ಅವರನ್ನು ನೋಡಿ ಜಯವನ್ನು ಬಯಸಿದ ಪಾಂಚಾಲ-ಪಾಂಡವರು ಬೆನ್ನಟ್ಟಿ ಹೋದರು.

09018012a ಬಾಣಶಬ್ದರವಶ್ಚಾಪಿ ಸಿಂಹನಾದಶ್ಚ ಪುಷ್ಕಲಃ|

09018012c ಶಂಖಶಬ್ದಶ್ಚ ಶೂರಾಣಾಂ ದಾರುಣಃ ಸಮಪದ್ಯತ||

ಬಾಣಗಳ ಶಬ್ಧ, ಪುಷ್ಕಲ ಸಿಂಹನಾದಗಳು, ಮತ್ತು ಶೂರರ ದಾರುಣ ಶಂಖಶಬ್ಧಗಳು ಕೇಳಿಬಂದವು.

09018013a ದೃಷ್ಟ್ವಾ ತು ಕೌರವಂ ಸೈನ್ಯಂ ಭಯತ್ರಸ್ತಂ ಪ್ರವಿದ್ರುತಂ|

09018013c ಅನ್ಯೋನ್ಯಂ ಸಮಭಾಷಂತ ಪಾಂಚಾಲಾಃ ಪಾಂಡವೈಃ ಸಹ||

ಭಯದಿಂದ ನಡುಗಿ ಓಡಿಹೋಗುತ್ತಿರುವ ಕೌರವ ಸೈನ್ಯವನ್ನು ನೋಡಿ ಪಾಂಚಾಲ-ಪಾಂಡವರು ಒಟ್ಟಿಗೇ ಅನ್ಯೋನ್ಯರಲ್ಲಿ ಮಾತನಾಡಿಕೊಂಡರು:

09018014a ಅದ್ಯ ರಾಜಾ ಸತ್ಯಧೃತಿರ್ಜಿತಾಮಿತ್ರೋ ಯುಧಿಷ್ಠಿರಃ|

09018014c ಅದ್ಯ ದುರ್ಯೋಧನೋ ಹೀನೋ ದೀಪ್ತಯಾ ನೃಪತಿಶ್ರಿಯಾ||

“ಇಂದು ಸತ್ಯಧೃತಿ ಅಮಿತ್ರ ರಾಜಾ ಯುಧಿಷ್ಠಿರನು ಗೆದ್ದಿದ್ದಾನೆ. ಇಂದು ದುರ್ಯೋಧನನು ಪ್ರದೀಪ್ತ ರಾಜಶ್ರೀಯನ್ನು ಕಳೆದುಕೊಂಡಿದ್ದಾನೆ.

09018015a ಅದ್ಯ ಶ್ರುತ್ವಾ ಹತಂ ಪುತ್ರಂ ಧೃತರಾಷ್ಟ್ರೋ ಜನೇಶ್ವರಃ|

09018015c ನಿಃಸಂಜ್ಞಃ ಪತಿತೋ ಭೂಮೌ ಕಿಲ್ಬಿಷಂ ಪ್ರತಿಪದ್ಯತಾಂ||

ಇಂದು ಜನೇಶ್ವರ ಧೃತರಾಷ್ಟ್ರನು ಮಗನು ಹತನಾದನೆಂದು ಕೇಳಿ ಮೂರ್ಛಿತನಾಗಿ ಭೂಮಿಯ ಮೇಲೆ ಬಿದ್ದು ಚೆನ್ನಾಗಿ ರೋದಿಸುವಂತಾಗಲಿ!

09018016a ಅದ್ಯ ಜಾನಾತು ಕೌಂತೇಯಂ ಸಮರ್ಥಂ ಸರ್ವಧನ್ವಿನಾಂ|

09018016c ಅದ್ಯಾತ್ಮಾನಂ ಚ ದುರ್ಮೇಧಾ ಗರ್ಹಯಿಷ್ಯತಿ ಪಾಪಕೃತ್||

09018016e ಅದ್ಯ ಕ್ಷತ್ತುರ್ವಚಃ ಸತ್ಯಂ ಸ್ಮರತಾಂ ಬ್ರುವತೋ ಹಿತಂ||

ಸರ್ವಧನ್ವಿಗಳಲ್ಲಿ ಕೌಂತೇಯನು ಸಮರ್ಥನು ಎಂದು ಇಂದು ತಿಳಿದುಕೊಳ್ಳಲಿ! ಕೆಟ್ಟಬುದ್ಧಿ ಪಾಪಕರ್ಮಿಯು ಇಂದು ತನ್ನನ್ನು ತಾನೇ ನಿಂದಿಸಿಕೊಳ್ಳುವಂತಾಗಲಿ! ಕ್ಷತ್ತ ವಿದುರನ ಸತ್ಯ ಹಿತೋಕ್ತಿಗಳನ್ನು ಇಂದು ನೆನಪಿಸಿಕೊಳ್ಳಲಿ!

09018017a ಅದ್ಯಪ್ರಭೃತಿ ಪಾರ್ಥಾಂಶ್ಚ ಪ್ರೇಷ್ಯಭೂತ ಉಪಾಚರನ್|

09018017c ವಿಜಾನಾತು ನೃಪೋ ದುಃಖಂ ಯತ್ಪ್ರಾಪ್ತಂ ಪಾಂಡುನಂದನೈಃ||

ಇಂದಿನಿಂದ ಪಾರ್ಥರ ಸೇವಕನಾಗಿದ್ದುಕೊಂಡು ನೃಪನು ಪಾಂಡುನಂದನರು ಅನುಭವಿಸಿದ ದುಃಖಗಳನ್ನು ಅರಿತುಕೊಳ್ಳಲಿ!

09018018a ಅದ್ಯ ಕೃಷ್ಣಸ್ಯ ಮಾಹಾತ್ಮ್ಯಂ ಜಾನಾತು ಸ ಮಹೀಪತಿಃ|

09018018c ಅದ್ಯಾರ್ಜುನಧನುರ್ಘೋಷಂ ಘೋರಂ ಜಾನಾತು ಸಮ್ಯುಗೇ||

ಇಂದು ಆ ಮಹೀಪತಿಯು ಕೃಷ್ಣನ ಮಹಾತ್ಮೆಯನ್ನು ತಿಳಿದುಕೊಳ್ಳಲಿ! ಯುದ್ಧದಲ್ಲಿ ಅರ್ಜುನನ ಧನುರ್ಘೋಷವು ಘೋರವಾದುದು ಎನ್ನುವುದನ್ನು ಇಂದು ಅವನು ಅರಿತುಕೊಳ್ಳಲಿ!

09018019a ಅಸ್ತ್ರಾಣಾಂ ಚ ಬಲಂ ಸರ್ವಂ ಬಾಹ್ವೋಶ್ಚ ಬಲಮಾಹವೇ|

09018019c ಅದ್ಯ ಜ್ಞಾಸ್ಯತಿ ಭೀಮಸ್ಯ ಬಲಂ ಘೋರಂ ಮಹಾತ್ಮನಃ||

ಅಸ್ತ್ರಗಳ ಬಲವನ್ನೂ, ಯುದ್ಧದಲ್ಲಿ ಬಾಹುಗಳ ಬಲವನ್ನೂ, ಭೀಮನ ಘೋರ ಸರ್ವಬಲವನ್ನು ಇಂದು ಆ ಮಹಾತ್ಮನು ತಿಳಿದುಕೊಳ್ಳಲಿ!

09018020a ಹತೇ ದುರ್ಯೋಧನೇ ಯುದ್ಧೇ ಶಕ್ರೇಣೇವಾಸುರೇ ಮಯೇ|

09018020c ಯತ್ಕೃತಂ ಭೀಮಸೇನೇನ ದುಃಶಾಸನವಧೇ ತದಾ||

09018020e ನಾನ್ಯಃ ಕರ್ತಾಸ್ತಿ ಲೋಕೇ ತದೃತೇ ಭೀಮಂ ಮಹಾಬಲಂ||

ಯುದ್ಧದಲ್ಲಿ ಶಕ್ರನಿಂದ ಮಯಾಸುರನು ಹತನಾದಂತೆ ದುರ್ಯೋಧನನು ಹತನಾಗಲು, ಭೀಮಸೇನನು ಮಾಡಿದ ದುಃಶಾಸನವಧೆಯಂತಹ ಕೃತ್ಯವನ್ನು ಮಹಾಬಲ ಭೀಮನಲ್ಲದೇ ಲೋಕದಲ್ಲಿ ಬೇರೆ ಯಾರು ಮಾಡಬಲ್ಲರು?

09018021a ಜಾನೀತಾಮದ್ಯ ಜ್ಯೇಷ್ಠಸ್ಯ ಪಾಂಡವಸ್ಯ ಪರಾಕ್ರಮಂ|

09018021c ಮದ್ರರಾಜಂ ಹತಂ ಶ್ರುತ್ವಾ ದೇವೈರಪಿ ಸುದುಃಸ್ಸಹಂ||

ದೇವತೆಗಳಿಗೂ ದುಸ್ಸಹನಾಗಿದ್ದ ಮದ್ರರಾಜನು ಹತನಾದುದನ್ನು ಕೇಳಿ ಇಂದು ಅವನು ಜ್ಯೇಷ್ಠ ಪಾಂಡವನ ಪರಾಕ್ರಮವೇನೆಂದು ತಿಳಿದುಕೊಳ್ಳಲಿ!

09018022a ಅದ್ಯ ಜ್ಞಾಸ್ಯತಿ ಸಂಗ್ರಾಮೇ ಮಾದ್ರೀಪುತ್ರೌ ಮಹಾಬಲೌ|

09018022c ನಿಹತೇ ಸೌಬಲೇ ಶೂರೇ ಗಾಂಧಾರೇಷು ಚ ಸರ್ವಶಃ||

ಇಂದಿನ ಸಂಗ್ರಾಮದಲ್ಲಿ ಶೂರ ಗಾಂಧಾರ ಸೌಬಲ ಮತ್ತು ಎಲ್ಲರೂ ಹತರಾಗಲು ಮಾದ್ರೀಪುತ್ರರ ಮಹಾಬಲವನ್ನು ಅವನು ತಿಳಿದುಕೊಳ್ಳಲಿ!

09018023a ಕಥಂ ತೇಷಾಂ ಜಯೋ ನ ಸ್ಯಾದ್ಯೇಷಾಂ ಯೋದ್ಧಾ ಧನಂಜಯಃ|

09018023c ಸಾತ್ಯಕಿರ್ಭೀಮಸೇನಶ್ಚ ಧೃಷ್ಟದ್ಯುಮ್ನಶ್ಚ ಪಾರ್ಷತಃ||

09018024a ದ್ರೌಪದ್ಯಾಸ್ತನಯಾಃ ಪಂಚ ಮಾದ್ರೀಪುತ್ರೌ ಚ ಪಾಂಡವೌ|

09018024c ಶಿಖಂಡೀ ಚ ಮಹೇಷ್ವಾಸೋ ರಾಜಾ ಚೈವ ಯುಧಿಷ್ಠಿರಃ||

ಧನಂಜಯ, ಸಾತ್ಯಕಿ, ಭೀಮಸೇನ, ಪಾರ್ಷತ ಧೃಷ್ಟದ್ಯುಮ್ನ, ದ್ರೌಪದಿಯರ ಐವರು ಮಕ್ಕಳು, ಪಾಂಡವ ಮಾದ್ರೀಪುತ್ರ, ಮಹೇಷ್ವಾಸ ಶಿಖಂಡೀ ಮತ್ತು ರಾಜಾ ಯುಧಷ್ಠಿರರು ಯಾರ ಕಡೆಯ ಯೋದ್ಧರೋ ಅವರಿಗೆ ಹೇಗೆ ತಾನೆ ಜಯವು ಲಭಿಸುವುದಿಲ್ಲ?

09018025a ಯೇಷಾಂ ಚ ಜಗತಾಂ ನಾಥೋ ನಾಥಃ ಕೃಷ್ಣೋ ಜನಾರ್ದನಃ|

09018025c ಕಥಂ ತೇಷಾಂ ಜಯೋ ನ ಸ್ಯಾದ್ಯೇಷಾಂ ಧರ್ಮೋ ವ್ಯಪಾಶ್ರಯಃ||

ಜಗತ್ತಿಗೇ ನಾಥನಾಗಿರುವ ಜನಾರ್ದನ ಕೃಷ್ಣನು ಯಾರ ನಾಥನೋ, ಯಾರು ಧರ್ಮವನ್ನೇ ಆಶ್ರಯಿಸಿರುವರೋ ಅವರಿಗೆ ಜಯವು ಹೇಗೆ ಸಾಧ್ಯವಾಗುವುದಿಲ್ಲ?

09018026a ಭೀಷ್ಮಂ ದ್ರೋಣಂ ಚ ಕರ್ಣಂ ಚ ಮದ್ರರಾಜಾನಮೇವ ಚ|

09018026c ತಥಾನ್ಯಾನ್ನೃಪತೀನ್ವೀರಾನ್ ಶತಶೋಽಥ ಸಹಸ್ರಶಃ||

09018027a ಕೋಽನ್ಯಃ ಶಕ್ತೋ ರಣೇ ಜೇತುಂ ಋತೇ ಪಾರ್ಥಂ ಯುಧಿಷ್ಠಿರಂ|

09018027c ಯಸ್ಯ ನಾಥೋ ಹೃಷೀಕೇಶಃ ಸದಾ ಧರ್ಮಯಶೋನಿಧಿಃ||

ಸದಾ ಧರ್ಮಯಶೋನಿಧಿಯಾಗಿರುವ ಹೃಷೀಕೇಶನು ಯಾರ ನಾಥನೋ ಅಂತಹ ಪಾರ್ಥ ಯುಧಿಷ್ಠಿರನ ಹೊರತಾಗಿ ಬೇರೆ ಯಾರು ತಾನೇ ರಣದಲ್ಲಿ ಭೀಷ್ಮ, ದ್ರೋಣ, ಕರ್ಣ, ಮದ್ರರಾಜ, ಮತ್ತು ಅನ್ಯ ನೂರಾರು ಸಹಸ್ರಾರು ನೃಪತಿವೀರರನ್ನು ಗೆಲ್ಲಲು ಶಕ್ಯರು?”

09018028a ಇತ್ಯೇವಂ ವದಮಾನಾಸ್ತೇ ಹರ್ಷೇಣ ಮಹತಾ ಯುತಾಃ|

09018028c ಪ್ರಭಗ್ನಾಂಸ್ತಾವಕಾನ್ರಾಜನ್ಸೃಂಜಯಾಃ ಪೃಷ್ಠತೋಽನ್ವಯುಃ||

ರಾಜನ್! ಹೀಗೆ ಮಾತನಾಡಿಕೊಳ್ಳುತ್ತಾ, ಮಹಾ ಹರ್ಷದಿಂದ ಸೃಂಜಯರು ಓಡಿಹೋಗುತ್ತಿರುವ ನಿನ್ನವರನ್ನು ಬೆನ್ನಟ್ಟಿ ಹೋದರು.

09018029a ಧನಂಜಯೋ ರಥಾನೀಕಮಭ್ಯವರ್ತತ ವೀರ್ಯವಾನ್|

09018029c ಮಾದ್ರೀಪುತ್ರೌ ಚ ಶಕುನಿಂ ಸಾತ್ಯಕಿಶ್ಚ ಮಹಾರಥಃ||

ವೀರ್ಯವಾನ್ ಧನಂಜಯ, ಮಾದ್ರೀಪುತ್ರರು ಮತ್ತು ಮಹಾರಥ ಸಾತ್ಯಕಿಯು ಶಕುನಿಯ ರಥಸೇನೆಯನ್ನು ಆಕ್ರಮಣಿಸಿದರು.

09018030a ತಾನ್ಪ್ರೇಕ್ಷ್ಯ ದ್ರವತಃ ಸರ್ವಾನ್ಭೀಮಸೇನಭಯಾರ್ದಿತಾನ್|

09018030c ದುರ್ಯೋಧನಸ್ತದಾ ಸೂತಮಬ್ರವೀದುತ್ಸ್ಮಯನ್ನಿವ||

ಭೀಮಸೇನನ ಭಯದಿಂದ ಪೀಡಿತರಾಗಿ ಓಡಿ ಹೋಗುತ್ತಿದ್ದ ಅವರೆಲ್ಲರನ್ನೂ ನೋಡಿ ದುರ್ಯೋಧನನು ಸೂತನಿಗೆ ಹೇಳಿದನು:

09018031a ನ ಮಾತಿಕ್ರಮತೇ ಪಾರ್ಥೋ ಧನುಷ್ಪಾಣಿಮವಸ್ಥಿತಂ|

09018031c ಜಘನೇ ಸರ್ವಸೈನ್ಯಾನಾಂ ಮಮಾಶ್ವಾನ್ಪ್ರತಿಪಾದಯ||

“ಧನುಷ್ಪಾಣಿಯಾಗಿ ನಿಂತಿರುವ ನನ್ನನ್ನು ಪಾರ್ಥನು ಅತಿಕ್ರಮಿಸಲಾರದಂತೆ ನನ್ನ ಕುದುರೆಗಳನ್ನು ಸರ್ವಸೇನೆಗಳ ಹಿಂಭಾಗಕ್ಕೆ ನಡೆಸಿಕೊಂಡು ಹೋಗು!

09018032a ಜಘನೇ ಯುಧ್ಯಮಾನಂ ಹಿ ಕೌಂತೇಯೋ ಮಾಂ ಧನಂಜಯಃ|

09018032c ನೋತ್ಸಹೇತಾಭ್ಯತಿಕ್ರಾಂತುಂ ವೇಲಾಮಿವ ಮಹೋದಧಿಃ||

ಹಿಂದಿನಿಂದ ಯುದ್ಧಮಾಡುತ್ತಿರುವ ನನ್ನನ್ನು ತೀರವನ್ನು ನೋಡಿದ ಮಹೋದಧಿಯು ಹೇಗೋ ಹಾಗೆ ಕೌಂತೇಯ ಧನಂಜಯನು ಮೀರಿಹೋಗಲು ಉತ್ಸಾಹಿಸುವುದಿಲ್ಲ.

09018033a ಪಶ್ಯ ಸೈನ್ಯಂ ಮಹತ್ಸೂತ ಪಾಂಡವೈಃ ಸಮಭಿದ್ರುತಂ|

09018033c ಸೈನ್ಯರೇಣುಂ ಸಮುದ್ಧೂತಂ ಪಶ್ಯಸ್ವೈನಂ ಸಮಂತತಃ||

ಸೂತ! ಪಾಂಡವರ ಆಕ್ರಮಣಕ್ಕೆ ಒಳಗಾಗಿರುವ ಮಹಾ ಸೇನೆಯನ್ನು ನೋಡು! ಸೈನ್ಯಗಳಿಂದ ಮೇಲೆದ್ದ ಧೂಳು ಸರ್ವತ್ರ ವ್ಯಾಪಿಸಿರುವುದನ್ನು ನೋಡು!

09018034a ಸಿಂಹನಾದಾಂಶ್ಚ ಬಹುಶಃ ಶೃಣು ಘೋರಾನ್ಭಯಾನಕಾನ್|

09018034c ತಸ್ಮಾದ್ಯಾಹಿ ಶನೈಃ ಸೂತ ಜಘನಂ ಪರಿಪಾಲಯ||

ಘೋರ-ಭಯಂಕರ ಸಿಂಹನಾದಗಳನೇಕವು ಕೇಳಿಬರುತ್ತಿವೆ. ಆದುದರಿಂದ ಸೂತ! ನಿಧಾನವಾಗಿ ಸೇನೆಯ ಹಿಂಭಾಗಕ್ಕೆ ನಡೆಸಿಕೊಂಡು ಹೋಗು.

09018035a ಮಯಿ ಸ್ಥಿತೇ ಚ ಸಮರೇ ನಿರುದ್ಧೇಷು ಚ ಪಾಂಡುಷು|

09018035c ಪುನರಾವರ್ತತೇ ತೂರ್ಣಂ ಮಾಮಕಂ ಬಲಮೋಜಸಾ||

ನಾನು ಸಮರಸನ್ನದ್ಧನಾಗಿ ಪಾಂಡವರನ್ನು ವಿರೋಧಿಸಿ ಯುದ್ಧಮಾಡಲು ನನ್ನ ಸೇನೆಯು ತೇಜಸ್ಸಿನಿಂದ ಪುನಃ ಬೇಗನೇ ಹಿಂದಿರುಗಿ ಬರುತ್ತದೆ.”

09018036a ತಚ್ಛೃತ್ವಾ ತವ ಪುತ್ರಸ್ಯ ಶೂರಾಗ್ರ್ಯಸದೃಶಂ ವಚಃ|

09018036c ಸಾರಥಿರ್ಹೇಮಸಂಚನ್ನಾನ್ ಶನೈರಶ್ವಾನಚೋದಯತ್||

ಶೂರಾಗ್ರನಿಗೆ ತಕ್ಕುದಾದ ನಿನ್ನ ಮಗನ ಆ ಮಾತನ್ನು ಕೇಳಿದ ಸಾರಥಿಯು ಸುವರ್ಣಭೂಷಿತ ಕುದುರೆಗಳನ್ನು ಮೆಲ್ಲನೆ ಪ್ರಚೋದಿಸಿದನು.

09018037a ಗಜಾಶ್ವರಥಿಭಿರ್ಹೀನಾಸ್ತ್ಯಕ್ತಾತ್ಮಾನಃ ಪದಾತಯಃ|

09018037c ಏಕವಿಂಶತಿಸಾಹಸ್ರಾಃ ಸಂಯುಗಾಯಾವತಸ್ಥಿರೇ||

ಆನೆ-ಕುದುರೆ-ರಥಗಳಿಂದ ವಿಹೀನರಾಗಿದ್ದ, ತಮ್ಮ ಜೀವಿತವನ್ನೇ ತೊರೆದಿದ್ದ, ಇಪ್ಪತ್ತೊಂದು ಸಾವಿರ ಪದಾತಿಗಳು ಅಲ್ಲಿ ಯುದ್ಧಮಾಡಲು ನಿಂತಿದ್ದರು.

09018038a ನಾನಾದೇಶಸಮುದ್ಭೂತಾ ನಾನಾರಂಜಿತವಾಸಸಃ|

09018038c ಅವಸ್ಥಿತಾಸ್ತದಾ ಯೋಧಾಃ ಪ್ರಾರ್ಥಯಂತೋ ಮಹದ್ಯಶಃ||

ನಾನಾದೇಶಗಳಲ್ಲಿ ಹುಟ್ಟಿದ್ದ ಮತ್ತು ನಾನಾ ನಗರಗಳಲ್ಲಿ ವಾಸಮಾಡುತ್ತಿದ್ದ ಯೋಧರು ಮಹಾಯಶಸ್ಸನ್ನು ಬಯಸಿ ಅಲ್ಲಿ ಯುದ್ಧಕ್ಕೆ ಸಿದ್ಧರಾಗಿದ್ದರು.

09018039a ತೇಷಾಮಾಪತತಾಂ ತತ್ರ ಸಂಹೃಷ್ಟಾನಾಂ ಪರಸ್ಪರಂ|

09018039c ಸಮ್ಮರ್ದಃ ಸುಮಹಾನ್ಜಜ್ಞೇ ಘೋರರೂಪೋ ಭಯಾನಕಃ||

ಪ್ರಹೃಷ್ಟರಾಗಿ ಪರಸ್ಪರರ ಮೇಲೆ ಬಿದ್ದು ಮರ್ದಿಸುತ್ತಿದ್ದ ಅವರ ನಡುವೆ ಘೋರರೂಪದ ಭಯಾನಕ ಯುದ್ಧವು ಪ್ರಾರಂಭವಾಯಿತು.

09018040a ಭೀಮಸೇನಂ ತದಾ ರಾಜನ್ಧೃಷ್ಟದ್ಯುಮ್ನಂ ಚ ಪಾರ್ಷತಂ|

09018040c ಬಲೇನ ಚತುರಂಗೇಣ ನಾನಾದೇಶ್ಯಾ ನ್ಯವಾರಯನ್||

ರಾಜನ್! ಆಗ ಭೀಮಸೇನ ಮತ್ತು ಪಾರ್ಷತ ಧೃಷ್ಟದ್ಯುಮ್ನರು ತಮ್ಮ ಚತುರಂಗ ಬಲದಿಂದ ಆ ನಾನಾದೇಶದ ಪದಾತಿಗಳನ್ನು ತಡೆದರು.

09018041a ಭೀಮಮೇವಾಭ್ಯವರ್ತಂತ ರಣೇಽನ್ಯೇ ತು ಪದಾತಯಃ|

09018041c ಪ್ರಕ್ಷ್ವೇಡ್ಯಾಸ್ಫೋಟ್ಯ ಸಂಹೃಷ್ಟಾ ವೀರಲೋಕಂ ಯಿಯಾಸವಃ||

ವೀರಲೋಕಗಳಿಗೆ ಹೋಗಲು ಬಯಸಿ ಸಂಹೃಷ್ಟರಾದ ಕೆಲವು ಪದಾತಿಗಳು ಭುಜಗಳನ್ನು ತಟ್ಟಿಕೊಳ್ಳುತ್ತಾ ಸಿಂಹನಾದಗೈಯುತ್ತಾ ರಣದಲ್ಲಿ ಭೀಮಸೇನನನ್ನೇ ಆಕ್ರಮಣಿಸುತ್ತಿದ್ದರು.

09018042a ಆಸಾದ್ಯ ಭೀಮಸೇನಂ ತು ಸಂರಬ್ಧಾ ಯುದ್ಧದುರ್ಮದಾಃ|

09018042c ಧಾರ್ತರಾಷ್ಟ್ರಾ ವಿನೇದುರ್ಹಿ ನಾನ್ಯಾಂ ಚಾಕಥಯನ್ಕಥಾಂ||

09018042e ಪರಿವಾರ್ಯ ರಣೇ ಭೀಮಂ ನಿಜಘ್ನುಸ್ತೇ ಸಮಂತತಃ||

ರೋಷಗೊಂಡಿದ್ದ ಆ ಧಾರ್ತರಾಷ್ಟ್ರ ಯುದ್ಧದುರ್ಮದರು ಭೀಮಸೇನನ ಬಳಿಹೋಗಿ ಸಿಂಹನಾದಗೈಯುತ್ತಿದ್ದರು. ಅನ್ಯರು ಏನನ್ನೂ ಹೇಳುತ್ತಿರಲಿಲ್ಲ. ರಣದಲ್ಲಿ ಭೀಮಸೇನನನ್ನು ಸುತ್ತುವರೆದು ಎಲ್ಲಕಡೆಗಳಿಂದ ಪ್ರಹರಿಸುತ್ತಿದ್ದರು.

09018043a ಸ ವಧ್ಯಮಾನಃ ಸಮರೇ ಪದಾತಿಗಣಸಂವೃತಃ|

09018043c ನ ಚಚಾಲ ರಥೋಪಸ್ಥೇ ಮೈನಾಕ ಇವ ಪರ್ವತಃ||

ಸಮರದಲ್ಲಿ ಪದಾತಿಗಣಗಳಿಂದ ಸುತ್ತುವರೆಯಲ್ಪಟ್ಟು ಪ್ರಹಾರಕ್ಕೊಳಪಟ್ಟಿದ್ದ ಭೀಮನು ಅಲುಗಾಡದೇ ಮೈನಾಕ ಪರ್ವತದಂತೆ ರಥದಲ್ಲಿಯೇ ಕುಳಿತಿದ್ದನು.

09018044a ತೇ ತು ಕ್ರುದ್ಧಾ ಮಹಾರಾಜ ಪಾಂಡವಸ್ಯ ಮಹಾರಥಂ|

09018044c ನಿಗ್ರಹೀತುಂ ಪ್ರಚಕ್ರುರ್ಹಿ ಯೋಧಾಂಶ್ಚಾನ್ಯಾನವಾರಯನ್||

ಮಹಾರಾಜ! ಮಹಾರಥ ಪಾಂಡವನನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದ ಯೋಧರು ಅನ್ಯರು ಯಾರೂ ಅಲ್ಲಿಗೆ ಬಾರದಂತೆ ತಡೆದರು.

09018045a ಅಕ್ರುಧ್ಯತ ರಣೇ ಭೀಮಸ್ತೈಸ್ತದಾ ಪರ್ಯವಸ್ಥಿತೈಃ|

09018045c ಸೋಽವತೀರ್ಯ ರಥಾತ್ತೂರ್ಣಂ ಪದಾತಿಃ ಸಮವಸ್ಥಿತಃ||

ಅವರಿಂದ ರಣದಲ್ಲಿ ಹಾಗೆ ಮುತ್ತಲ್ಪಟ್ಟ ಭೀಮಸೇನನು ಅತ್ಯಂತ ಕ್ರೋಧಿತನಾದನು. ಬೇಗನೇ ಅವನು ರಥದಿಂದ ಕೆಳಕ್ಕಿಳಿದು ತಾನೂ ಪದಾತಿಯಾದನು.

09018046a ಜಾತರೂಪಪರಿಚ್ಚನ್ನಾಂ ಪ್ರಗೃಹ್ಯ ಮಹತೀಂ ಗದಾಂ|

09018046c ಅವಧೀತ್ತಾವಕಾನ್ಯೋಧಾನ್ದಂಡಪಾಣಿರಿವಾಂತಕಃ||

ಸುವರ್ಣಪಟ್ಟಿಯನ್ನು ಸುತ್ತಿದ್ದ ಮಹಾಗದೆಯನ್ನು ಕೈಗೆತ್ತಿಕೊಂಡು ದಂಡಪಾಣಿ ಯಮನಂತೆ ನಿನ್ನ ಕಡೆಯ ಪದಾತಿಸೈನಿಕರನ್ನು ಸಂಹರಿಸತೊಡಗಿದನು.

09018047a ರಥಾಶ್ವದ್ವಿಪಹೀನಾಂಸ್ತು ತಾನ್ಭೀಮೋ ಗದಯಾ ಬಲೀ|

09018047c ಏಕವಿಂಶತಿಸಾಹಸ್ರಾನ್ಪದಾತೀನವಪೋಥಯತ್||

ರಥ-ಕುದುರೆ-ಆನೆಗಳಿಂದ ವಿಹೀನವಾಗಿದ್ದ ಆ ಇಪ್ಪತ್ತೊಂದು ಸಾವಿರ ಪದಾತಿಗಳನ್ನು ಬಲಶಾಲೀ ಭೀಮನು ಗದೆಯಿಂದ ಸಂಹರಿಸಿ ಕೆಳಕ್ಕುರುಳಿಸಿದನು.

09018048a ಹತ್ವಾ ತತ್ಪುರುಷಾನೀಕಂ ಭೀಮಃ ಸತ್ಯಪರಾಕ್ರಮಃ|

09018048c ಧೃಷ್ಟದ್ಯುಮ್ನಂ ಪುರಸ್ಕೃತ್ಯ ನಚಿರಾತ್ಪ್ರತ್ಯದೃಶ್ಯತ||

ಆ ಪುರುಷಸೇನೆಯನ್ನು ಸಂಹರಿಸಿ ಸತ್ಯಪರಾಕ್ರಮಿ ಭೀಮನು ಸ್ವಲ್ಪವೇ ಸಮಯದಲ್ಲಿ ಧೃಷ್ಟದ್ಯುಮ್ನನ ಎದುರಿಗೆ ಕಾಣಿಸಿಕೊಂಡನು.

09018049a ಪಾದಾತಾ ನಿಹತಾ ಭೂಮೌ ಶಿಶ್ಯಿರೇ ರುಧಿರೋಕ್ಷಿತಾಃ|

09018049c ಸಂಭಗ್ನಾ ಇವ ವಾತೇನ ಕರ್ಣಿಕಾರಾಃ ಸುಪುಷ್ಪಿತಾಃ||

ಭಿರುಗಾಳಿಯಿಂದ ಧ್ವಂಸಗೊಂಡ ಹೂಬಿಟ್ಟ ಕರ್ಣಿಕಾರ ವೃಕ್ಷಗಳಂತೆ ರಕ್ತದಿಂದ ತೋಯ್ದುಹೋಗಿದ್ದ ಪದಾತಿಗಳು ಹತರಾಗಿ ಭೂಮಿಯ ಮೇಲೆ ಮಲಗಿದರು.

09018050a ನಾನಾಪುಷ್ಪಸ್ರಜೋಪೇತಾ ನಾನಾಕುಂಡಲಧಾರಿಣಃ|

09018050c ನಾನಾಜಾತ್ಯಾ ಹತಾಸ್ತತ್ರ ನಾನಾದೇಶಸಮಾಗತಾಃ||

ನಾನಾ ಪುಷ್ಪಗಳ ಮಾಲೆಗಳನ್ನು ಧರಿಸಿದ್ದ, ನಾನಾ ಕುಂಡಲಗಳನ್ನು ಧರಿಸಿದ್ದ, ನಾನಾ ಜಾತಿಯ ನಾನಾ ದೇಶಗಳಿಂದ ಬಂದುಸೇರಿದ್ದ ಪದಾತಿಗಳು ಅಲ್ಲಿ ಹತರಾದರು.

09018051a ಪತಾಕಾಧ್ವಜಸಂಚನ್ನಂ ಪದಾತೀನಾಂ ಮಹದ್ಬಲಂ|

09018051c ನಿಕೃತ್ತಂ ವಿಬಭೌ ತತ್ರ ಘೋರರೂಪಂ ಭಯಾನಕಂ||

ಪತಾಕೆ-ಧ್ವಜಗಳಿಂದ ಆಚ್ಛಾದಿತವಾಗಿದ್ದ ಪದಾತಿಗಳ ಆ ಮಹಾ ಸೇನೆಯು ಕತ್ತರಿಸಲ್ಪಟ್ಟು ಭಯಾನಕ ಘೋರರೂಪವನ್ನು ತಾಳಿತು.

09018052a ಯುಧಿಷ್ಠಿರಪುರೋಗಾಸ್ತು ಸರ್ವಸೈನ್ಯಮಹಾರಥಾಃ|

09018052c ಅಭ್ಯಧಾವನ್ಮಹಾತ್ಮಾನಂ ಪುತ್ರಂ ದುರ್ಯೋಧನಂ ತವ||

ಯುಧಿಷ್ಠಿರನ ನಾಯಕತ್ವದಲ್ಲಿ ಸರ್ವಸೇನೆಗಳೊಡನೆ ಮಹಾರಥರು ನಿನ್ನ ಪುತ್ರ ಮಹಾತ್ಮ ದುರ್ಯೋಧನನನ್ನು ಆಕ್ರಮಣಿಸಿದರು.

09018053a ತೇ ಸರ್ವೇ ತಾವಕಾನ್ದೃಷ್ಟ್ವಾ ಮಹೇಷ್ವಾಸಾನ್ಪರಾಙ್ಮುಖಾನ್|

09018053c ನಾಭ್ಯವರ್ತಂತ ತೇ ಪುತ್ರಂ ವೇಲೇವ ಮಕರಾಲಯಂ||

ನಿನ್ನ ಕಡೆಯ ಮಹೇಷ್ವಾಸರೆಲ್ಲರೂ ಪರಾಙ್ಮುಖರಾದುದನ್ನು ನೋಡಿ ಆಕ್ರಮಣಿಸಿದ ಅವರನ್ನು ನಿನ್ನ ಪುತ್ರನು ಸಾಗರವನ್ನು ತಡೆಯುವ ತೀರದಂತೆ ತಡೆದನು.

09018054a ತದದ್ಭುತಮಪಶ್ಯಾಮ ತವ ಪುತ್ರಸ್ಯ ಪೌರುಷಂ|

09018054c ಯದೇಕಂ ಸಹಿತಾಃ ಪಾರ್ಥಾ ನ ಶೇಕುರತಿವರ್ತಿತುಂ||

ಆಗ ನಿನ್ನ ಮಗನ ಪೌರುಷವನ್ನು ನೋಡಿದೆವು. ಒಬ್ಬನೇ ಇದ್ದರೂ ಒಟ್ಟಾಗಿದ್ದ ಪಾರ್ಥರು ಅವನನ್ನು ದಾಟಿಹೋಗಲು ಶಕ್ಯರಾಗಲಿಲ್ಲ!

09018055a ನಾತಿದೂರಾಪಯಾತಂ ತು ಕೃತಬುದ್ಧಿಂ ಪಲಾಯನೇ|

09018055c ದುರ್ಯೋಧನಃ ಸ್ವಕಂ ಸೈನ್ಯಮಬ್ರವೀದ್ಭೃಶವಿಕ್ಷತಂ||

ಅನತಿದೂರದಲ್ಲಿಯೇ ಪಲಾಯನದ ಮನಸ್ಸುಮಾಡಿ ಓಡಿಹೋಗುತ್ತಿದ್ದ ಬಹಳವಾಗಿ ಗಾಯಗೊಂಡಿದ್ದ ತನ್ನ ಸೈನ್ಯವನ್ನು ಉದ್ದೇಶಿಸಿ ದುರ್ಯೋಧನನು ಇಂತೆಂದನು:

09018056a ನ ತಂ ದೇಶಂ ಪ್ರಪಶ್ಯಾಮಿ ಪೃಥಿವ್ಯಾಂ ಪರ್ವತೇಷು ವಾ|

09018056c ಯತ್ರ ಯಾತಾನ್ನ ವೋ ಹನ್ಯುಃ ಪಾಂಡವಾಃ ಕಿಂ ಸೃತೇನ ವಃ||

“ಯೋಧರೇ! ನೀವು ಪೃಥ್ವಿ-ಪರ್ವತ ಎಲ್ಲಿ ಹೋದರೂ ಪಾಂಡವರು ನಿಮ್ಮನ್ನು ಸಂಹರಿಸಲಾಗದ ಸ್ಥಳವನ್ನು ನಾನು ಕಾಣೆ! ಹೀಗಿರುವಾಗ ಓಡಿಹೋಗುವುದೇಕೆ?

09018057a ಅಲ್ಪಂ ಚ ಬಲಮೇತೇಷಾಂ ಕೃಷ್ಣೌ ಚ ಭೃಶವಿಕ್ಷತೌ|

09018057c ಯದಿ ಸರ್ವೇಽತ್ರ ತಿಷ್ಠಾಮೋ ಧ್ರುವೋ ನೋ ವಿಜಯೋ ಭವೇತ್||

ಕೃಷ್ಣಾರ್ಜುನರಿಬ್ಬರೂ ಬಹಳವಾಗಿ ಗಾಯಗೊಂಡಿದ್ದಾರೆ. ಅವರ ಸೇನೆಯೂ ಸ್ವಲ್ಪವೇ ಉಳಿದಿದೆ. ಒಂದುವೇಳೆ ನಾವೆಲ್ಲರೂ ಒಟ್ಟಾಗಿ ನಿಂತರೆ ನಿಶ್ಚಯವಾಗಿಯೂ ನಮಗೆ ವಿಜಯವಾಗುವುದು.

09018058a ವಿಪ್ರಯಾತಾಂಸ್ತು ವೋ ಭಿನ್ನಾನ್ಪಾಂಡವಾಃ ಕೃತಕಿಲ್ಬಿಷಾನ್|

09018058c ಅನುಸೃತ್ಯ ಹನಿಷ್ಯಂತಿ ಶ್ರೇಯೋ ನಃ ಸಮರೇ ಸ್ಥಿತಂ||

ನಾವು ಬೇರೆ ಬೇರೆಯಾಗಿ ಓಡಿಹೋದರೆ ತಮಗೆ ಅಪ್ರಿಯವೆಸಗಿದ ನಮ್ಮನ್ನು ಪಾಂಡವರು ಬೆನ್ನಟ್ಟಿ ಬಂದು ಸಂಹರಿಸುತ್ತಾರೆ. ಸಮರದಲ್ಲಿ ನಿಲ್ಲುವುದೇ ನಮಗೆ ಶ್ರೇಯಸ್ಕರವಾದುದು.

09018059a ಶೃಣುಧ್ವಂ ಕ್ಷತ್ರಿಯಾಃ ಸರ್ವೇ ಯಾವಂತಃ ಸ್ಥ ಸಮಾಗತಾಃ|

09018059c ಯದಾ ಶೂರಂ ಚ ಭೀರುಂ ಚ ಮಾರಯತ್ಯಂತಕಃ ಸದಾ||

09018059e ಕೋ ನು ಮೂಢೋ ನ ಯುಧ್ಯೇತ ಪುರುಷಃ ಕ್ಷತ್ರಿಯಬ್ರುವಃ|

ಇಲ್ಲಿಗೆ ಬಂದು ಸೇರಿರುವ ಕ್ಷತ್ರಿಯರೆಲ್ಲರೂ ಇದನ್ನು ಕೇಳಿ! ಅಂತಕನು ಸದಾ ಶೂರ ಮತ್ತು ಹೇಡಿಗಳೆಂಬ ತಾರತಮ್ಯವಿಲ್ಲದೇ ಕೊಲ್ಲುತ್ತಾನೆ. ಹೀಗಿರುವಾಗ ಕ್ಷತ್ರಿಯನೆನಿಸಿಕೊಳ್ಳುವ ಯಾವ ಮೂಢ ಪುರುಷನು ತಾನೇ ಯುದ್ಧಮಾಡುವುದಿಲ್ಲ?

09018060a ಶ್ರೇಯೋ ನೋ ಭೀಮಸೇನಸ್ಯ ಕ್ರುದ್ಧಸ್ಯ ಪ್ರಮುಖೇ ಸ್ಥಿತಂ|

09018060c ಸುಖಃ ಸಾಂಗ್ರಾಮಿಕೋ ಮೃತ್ಯುಃ ಕ್ಷತ್ರಧರ್ಮೇಣ ಯುಧ್ಯತಾಂ||

09018060e ಜಿತ್ವೇಹ ಸುಖಮಾಪ್ನೋತಿ ಹತಃ ಪ್ರೇತ್ಯ ಮಹತ್ಫಲಂ

ಕ್ರುದ್ಧ ಭೀಮಸೇನನ ಎದಿರು ನಿಲ್ಲುವುದೇ ನಮಗೆ ಶ್ರೇಯಸ್ಕರವಾದುದು. ಕ್ಷತ್ರಧರ್ಮದಿಂದ ಯುದ್ಧಮಾಡುವಾಗ ದೊರಕುವ ಮೃತ್ಯುವು ಸುಖಕರವಾದುದು. ಗೆದ್ದರೆ ಸುಖವನ್ನು ಪಡೆಯುತ್ತಾನೆ. ಹತನಾದರೆ ನಂತರದ ಮಹಾಫಲವನ್ನು ಪಡೆಯುತ್ತಾನೆ.

09018061a ನ ಯುದ್ಧಧರ್ಮಾಚ್ಚ್ರೇಯಾನ್ವೈ ಪಂಥಾಃ ಸ್ವರ್ಗಸ್ಯ ಕೌರವಾಃ|

09018061c ಅಚಿರೇಣ ಜಿತಾಽಲ್ಲೋಕಾನ್ ಹತೋ ಯುದ್ಧೇ ಸಮಶ್ನುತೇ||

ಕೌರವರೇ! ಸ್ವರ್ಗದ ಮಾರ್ಗಕ್ಕೆ ಯುದ್ಧಧರ್ಮಕ್ಕಿಂತಲೂ ಶ್ರೇಯಸ್ಕರವಾದುದಿಲ್ಲ. ಯುದ್ಧದಲ್ಲಿ ಹತನಾದವನು ಅಲ್ಪಕಾಲದಲ್ಲಿಯೇ ಉತ್ತಮ ಲೋಕಗಳನ್ನು ಗೆಲ್ಲುತ್ತಾನೆ.”

09018062a ಶ್ರುತ್ವಾ ತು ವಚನಂ ತಸ್ಯ ಪೂಜಯಿತ್ವಾ ಚ ಪಾರ್ಥಿವಾಃ|

09018062c ಪುನರೇವಾನ್ವವರ್ತಂತ ಪಾಂಡವಾನಾತತಾಯಿನಃ||

ಅವನ ಆ ಮಾತನ್ನು ಕೇಳಿ ಗೌರವಿಸಿ ಪಾರ್ಥಿವರು ಪುನಃ ಆತತಾಯಿ ಪಾಂಡವರನ್ನು ಎದುರಿಸಲು ಹಿಂದಿರುಗಿದರು.

09018063a ತಾನಾಪತತ ಏವಾಶು ವ್ಯೂಢಾನೀಕಾಃ ಪ್ರಹಾರಿಣಃ|

09018063c ಪ್ರತ್ಯುದ್ಯಯುಸ್ತದಾ ಪಾರ್ಥಾ ಜಯಗೃಧ್ರಾಃ ಪ್ರಹಾರಿಣಃ||

ಮೇಲೇರಿ ಬರುತ್ತಿದ್ದ ಅವರನ್ನು ವಿಜಯೇಚ್ಛು-ಪ್ರಹಾರಿ ಪಾರ್ಥರು ಸೇನೆಗಳನ್ನು ವ್ಯೂಹದಲ್ಲಿ ರಚಿಸಿ ಪ್ರತಿಯಾಗಿ ಆಕ್ರಮಣಿಸಿದರು.

09018064a ಧನಂಜಯೋ ರಥೇನಾಜಾವಭ್ಯವರ್ತತ ವೀರ್ಯವಾನ್|

09018064c ವಿಶ್ರುತಂ ತ್ರಿಷು ಲೋಕೇಷು ಗಾಂಡೀವಂ ವಿಕ್ಷಿಪನ್ ಧನುಃ||

ಮೂರು ಲೋಕಗಳಲ್ಲಿಯೂ ವಿಶ್ರುತ ಗಾಂಡೀವ ಧನುಸ್ಸನ್ನು ಟೇಂಕರಿಸುತ್ತಾ ವೀರ್ಯವಾನ್ ಧನಂಜಯನು ರಥದಲ್ಲಿ ಅಲ್ಲಿಗೆ ಆಗಮಿಸಿದನು.

09018065a ಮಾದ್ರೀಪುತ್ರೌ ಚ ಶಕುನಿಂ ಸಾತ್ಯಕಿಶ್ಚ ಮಹಾಬಲಃ|

09018065c ಜವೇನಾಭ್ಯಪತನ್ ಹೃಷ್ಟಾ ಯತೋ ವೈ ತಾವಕಂ ಬಲಂ||

ಮಹಾಬಲ ಸಾತ್ಯಕಿ ಮತ್ತು ಮಾದ್ರೀಪುತ್ರರಿಬ್ಬರೂ ಹೃಷ್ಟರಾಗಿ ಪ್ರಯತ್ನಪಟ್ಟು ವೇಗದಿಂದ ಶಕುನಿ ಮತ್ತು ನಿನ್ನ ಸೇನೆಯನ್ನು ಆಕ್ರಮಣಿಸಿದರು.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಹ್ರದಪ್ರವೇಶಪರ್ವಣಿ ಸಂಕುಲಯುದ್ಧೇ ಅಷ್ಠಾದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಹ್ರದಪವೇಶಪರ್ವದಲ್ಲಿ ಸಂಕುಲಯುದ್ಧ ಎನ್ನುವ ಹದಿನೆಂಟನೇ ಅಧ್ಯಾಯವು.

Comments are closed.