Shalya Parva: Chapter 14

ಶಲ್ಯಪರ್ವ: ಶಲ್ಯವಧ ಪರ್ವ

೧೪

ದುರ್ಯೋಧನ-ಧೃಷ್ಟದ್ಯುಮ್ನರ ಯುದ್ಧ (೧-೬).  ಕೃಪ-ಕೃತವರ್ಮರೊಡನೆ ಶಿಖಂಡಿಯ ಯುದ್ಧ (೭-೮). ಯುಧಿಷ್ಠಿರ-ಭೀಮಸೇನ-ಮಾದ್ರೀಪುತ್ರರು ಮತ್ತು ಸಾತ್ಯಕಿಯೊಡನೆ ಶಲ್ಯನ ಯುದ್ಧ (೯-೪೧).

09014001 ಸಂಜಯ ಉವಾಚ

09014001a ದುರ್ಯೋಧನೋ ಮಹಾರಾಜ ಧೃಷ್ಟದ್ಯುಮ್ನಶ್ಚ ಪಾರ್ಷತಃ|

09014001c ಚಕ್ರತುಃ ಸುಮಹದ್ಯುದ್ಧಂ ಶರಶಕ್ತಿಸಮಾಕುಲಂ||

ಸಂಜಯನು ಹೇಳಿದನು: “ಮಹಾರಾಜ! ದುರ್ಯೋಧನ ಮತ್ತು ಪಾರ್ಷತ ಧೃಷ್ಟದ್ಯುಮ್ನರು ಬಾಣ-ಶಕ್ತ್ಯಾಯುಧಗಳಿಂದ ಕೂಡಿ ಮಹಾ ಯುದ್ಧದಲ್ಲಿ ತೊಡಗಿದರು.

09014002a ತಯೋರಾಸನ್ಮಹಾರಾಜ ಶರಧಾರಾಃ ಸಹಸ್ರಶಃ|

09014002c ಅಂಬುದಾನಾಂ ಯಥಾ ಕಾಲೇ ಜಲಧಾರಾಃ ಸಮಂತತಃ||

ಮಹಾರಾಜ! ವರ್ಷಾಕಾಲದಲ್ಲಿ ಮೋಡಗಳು ಜಲಧಾರೆಗಳನ್ನು ಸುರಿಸುವಂತೆ ಅಲ್ಲಿ ಸಹಸ್ರಾರು ಬಾಣಗಳ ಮಳೆಯೇ ಸುರಿಯಿತು.

09014003a ರಾಜಾ ತು ಪಾರ್ಷತಂ ವಿದ್ಧ್ವಾ ಶರೈಃ ಪಂಚಭಿರಾಯಸೈಃ|

09014003c ದ್ರೋಣಹಂತಾರಮುಗ್ರೇಷುಃ ಪುನರ್ವಿವ್ಯಾಧ ಸಪ್ತಭಿಃ||

ರಾಜಾ ದುರ್ಯೋಧನನು ಪಾರ್ಷತನನ್ನು ಐದು ಉಕ್ಕಿನ ಶರಗಳಿಂದ ಹೊಡೆದು ಆ ದ್ರೋಣಹಂತಾರನನ್ನು ಪುನಃ ಏಳು ಉಗ್ರಬಾಣಗಳಿಂದ ಪ್ರಹರಿಸಿದನು.

09014004a ಧೃಷ್ಟದ್ಯುಮ್ನಸ್ತು ಸಮರೇ ಬಲವಾನ್ದೃಢವಿಕ್ರಮಃ|

09014004c ಸಪ್ತತ್ಯಾ ವಿಶಿಖಾನಾಂ ವೈ ದುರ್ಯೋಧನಮಪೀಡಯತ್||

ಬಲವಾನ್ ದೃಢವಿಕ್ರಮಿ ಧೃಷ್ಟದ್ಯುಮ್ನನಾದರೋ ಸಮರದಲ್ಲಿ ದುರ್ಯೋಧನನನ್ನು ಎಪ್ಪತ್ತು ವಿಶಿಖಗಳಿಂದ ಪೀಡಿಸಿದನು.

09014005a ಪೀಡಿತಂ ಪ್ರೇಕ್ಷ್ಯ ರಾಜಾನಂ ಸೋದರ್ಯಾ ಭರತರ್ಷಭ|

09014005c ಮಹತ್ಯಾ ಸೇನಯಾ ಸಾರ್ಧಂ ಪರಿವವ್ರುಃ ಸ್ಮ ಪಾರ್ಷತಂ||

ಭರತರ್ಷಭ! ರಾಜನು ಪೀಡಿತನಾಗುತ್ತಿರುವುದನ್ನು ನೋಡಿ ಅವನ ಸಹೋದರರು ಮಹಾ ಸೇನೆಯೊಂದಿಗೆ ಪಾರ್ಷತನನ್ನು ಸುತ್ತುವರೆದು ಆಕ್ರಮಣಿಸಿದರು.

09014006a ಸ ತೈಃ ಪರಿವೃತಃ ಶೂರೈಃ ಸರ್ವತೋಽತಿರಥೈರ್ಭೃಶಂ|

09014006c ವ್ಯಚರತ್ಸಮರೇ ರಾಜನ್ದರ್ಶಯನ್ ಹಸ್ತಲಾಘವಂ||

ರಾಜನ್! ಎಲ್ಲಕಡೆಗಳಿಂದಲೂ ಆ ಶೂರ ಅತಿರಥರಿಂದ ಸುತ್ತುವರೆಯಲ್ಪಟ್ಟ ಧೃಷ್ಟದ್ಯುಮ್ನನು ಸಮರದಲ್ಲಿ ತನ್ನ ಹಸ್ತಲಾಘವವನ್ನು ಚೆನ್ನಾಗಿ ಪ್ರದರ್ಶಿಸಿದನು.

09014007a ಶಿಖಂಡೀ ಕೃತವರ್ಮಾಣಂ ಗೌತಮಂ ಚ ಮಹಾರಥಂ|

09014007c ಪ್ರಭದ್ರಕೈಃ ಸಮಾಯುಕ್ತೋ ಯೋಧಯಾಮಾಸ ಧನ್ವಿನೌ||

ಶಿಖಂಡಿಯು ಪ್ರಭದ್ರಕರಿಂದ ಕೂಡಿ ಧನ್ವಿಗಳಾದ ಮಹಾರಥ ಗೌತಮ -ಕೃತವರ್ಮರೊಡನೆ ಯುದ್ಧಮಾಡಿದನು.

09014008a ತತ್ರಾಪಿ ಸುಮಹದ್ಯುದ್ಧಂ ಘೋರರೂಪಂ ವಿಶಾಂ ಪತೇ|

09014008c ಪ್ರಾಣಾನ್ಸಂತ್ಯಜತಾಂ ಯುದ್ಧೇ ಪ್ರಾಣದ್ಯೂತಾಭಿದೇವನೇ||

ವಿಶಾಂಪತೇ! ಅಲ್ಲಿ ಕೂಡ ಪ್ರಾಣಗಳನ್ನೇ ತೊರೆದು ಯುದ್ಧವೆಂಬ ದ್ಯೂತದಲ್ಲಿ ಪ್ರಾಣಗಳನ್ನೇ ಪಣವನ್ನಾಗಿಟ್ಟ ಘೋರರೂಪದ ಯುದ್ಧವು ನಡೆಯಿತು.

09014009a ಶಲ್ಯಸ್ತು ಶರವರ್ಷಾಣಿ ವಿಮುಂಚನ್ಸರ್ವತೋದಿಶಂ|

09014009c ಪಾಂಡವಾನ್ಪೀಡಯಾಮಾಸ ಸಸಾತ್ಯಕಿವೃಕೋದರಾನ್||

ಶಲ್ಯನಾದರೋ ಸರ್ವ ದಿಕ್ಕುಗಳಲ್ಲಿ ಶರವರ್ಷಗಳನ್ನು ಸುರಿಸುತ್ತಾ ಸಾತ್ಯಕಿ-ವೃಕೋದರರೊಡನಿದ್ದ ಪಾಂಡವರನ್ನು ಪೀಡಿಸತೊಡಗಿದನು.

09014010a ತಥೋಭೌ ಚ ಯಮೌ ಯುದ್ಧೇ ಯಮತುಲ್ಯಪರಾಕ್ರಮೌ|

09014010c ಯೋಧಯಾಮಾಸ ರಾಜೇಂದ್ರ ವೀರ್ಯೇಣ ಚ ಬಲೇನ ಚ||

ರಾಜೇಂದ್ರ! ಹಾಗೆಯೇ ಅವನು ಯುದ್ಧ ಪರಾಕ್ರಮದಲ್ಲಿ ಯಮನ ಸಮನಾಗಿದ್ದ ಯಮಳರೊಂದಿಗೆ ವೀರ್ಯ-ಬಲಗಳೊಂದಿಗೆ ಹೋರಾಡಿದನು.

09014011a ಶಲ್ಯಸಾಯಕನುನ್ನಾನಾಂ ಪಾಂಡವಾನಾಂ ಮಹಾಮೃಧೇ|

09014011c ತ್ರಾತಾರಂ ನಾಧ್ಯಗಚ್ಚಂತ ಕೇ ಚಿತ್ತತ್ರ ಮಹಾರಥಾಃ||

ಶಲ್ಯನ ಸಾಯಕಗಳಿಂದ ಪೀಡಿತರಾದ ಪಾಂಡವ ಮಹಾರಥರು ಆ ಮಹಾಯುದ್ಧದಲ್ಲಿ ಯಾವ ತ್ರಾತಾರನನ್ನೂ ಕಾಣದೇ ಹೋದರು.

09014012a ತತಸ್ತು ನಕುಲಃ ಶೂರೋ ಧರ್ಮರಾಜೇ ಪ್ರಪೀಡಿತೇ|

09014012c ಅಭಿದುದ್ರಾವ ವೇಗೇನ ಮಾತುಲಂ ಮಾದ್ರಿನಂದನಃ||

ಧರ್ಮರಾಜನೂ ಪೀಡಿತನಾಗಿರಲು ಶೂರ ಮಾದ್ರಿನಂದನ ನಕುಲನು ವೇಗದಿಂದ ತನ್ನ ಸೋದರ ಮಾವ ಶಲ್ಯನನ್ನು ಆಕ್ರಮಣಿಸಿದನು.

09014013a ಸಂಚಾದ್ಯ ಸಮರೇ ಶಲ್ಯಂ ನಕುಲಃ ಪರವೀರಹಾ|

09014013c ವಿವ್ಯಾಧ ಚೈನಂ ದಶಭಿಃ ಸ್ಮಯಮಾನಃ ಸ್ತನಾಂತರೇ||

ಸಮರದಲ್ಲಿ ಪರವೀರಹ ನಕುಲನು ಶಲ್ಯನನ್ನು ಬಾಣಗಳಿಂದ ಮುಚ್ಚಿಬಿಟ್ಟು, ನಸುನಗುತ್ತಾ ಅವನ ಎದೆಗೆ ಹತ್ತು ಬಾಣಗಳಿಂದ ಹೊಡೆದನು.

09014014a ಸರ್ವಪಾರಶವೈರ್ಬಾಣೈಃ ಕರ್ಮಾರಪರಿಮಾರ್ಜಿತೈಃ|

09014014c ಸ್ವರ್ಣಪುಂಖೈಃ ಶಿಲಾಧೌತೈರ್ಧನುರ್ಯಂತ್ರಪ್ರಚೋದಿತೈಃ||

09014015a ಶಲ್ಯಸ್ತು ಪೀಡಿತಸ್ತೇನ ಸ್ವಸ್ರೀಯೇಣ ಮಹಾತ್ಮನಾ|

09014015c ನಕುಲಂ ಪೀಡಯಾಮಾಸ ಪತ್ರಿಭಿರ್ನತಪರ್ವಭಿಃ||

ಮಹಾತ್ಮ ಸೋದರಳಿಯನ ಕಮ್ಮಾರನಿಂದ ಹದಗೊಳಿಸಲ್ಪಟ್ಟಿದ್ದ, ಸ್ವರ್ಣಪುಂಖಗಳ, ಶಿಲೆಗೆ ಉಜ್ಜಿ ಹರಿತಗೊಂಡಿದ್ದ, ಧನುಸ್ಸೆಂಬ ಯಂತ್ರದಿಂದ ಪ್ರಯೋಗಿಸಲ್ಪಟ್ಟ ಎಲ್ಲ ಲೋಹಮಯ ಬಾಣಗಳಿಂದ ಪೀಡಿತನಾದ ಶಲ್ಯನು ನತಪರ್ವ-ಪತ್ರಿಗಳಿಂದ ನಕುಲನನ್ನು ಪೀಡಿಸತೊಡಗಿದನು.

09014016a ತತೋ ಯುಧಿಷ್ಠಿರೋ ರಾಜಾ ಭೀಮಸೇನೋಽಥ ಸಾತ್ಯಕಿಃ|

09014016c ಸಹದೇವಶ್ಚ ಮಾದ್ರೇಯೋ ಮದ್ರರಾಜಮುಪಾದ್ರವನ್||

ಆಗ ರಾಜಾ ಯುಧಿಷ್ಠಿರ, ಭೀಮಸೇನ, ಸಾತ್ಯಕಿ ಮತ್ತು ಮಾದ್ರೇಯ ಸಹದೇವರು ಮದ್ರರಾಜನನ್ನು ಮುತ್ತಿದರು.

09014017a ತಾನಾಪತತ ಏವಾಶು ಪೂರಯಾನಾನ್ರಥಸ್ವನೈಃ|

09014017c ದಿಶಶ್ಚ ಪ್ರದಿಶಶ್ಚೈವ ಕಂಪಯಾನಾಂಶ್ಚ ಮೇದಿನೀಂ||

09014017e ಪ್ರತಿಜಗ್ರಾಹ ಸಮರೇ ಸೇನಾಪತಿರಮಿತ್ರಜಿತ್||

ರಥಘೋಷಗಳಿಂದ ದಿಕ್ಕು-ಉಪದಿಕ್ಕುಗಳನ್ನು ಮೊಳಗಿಸುತ್ತಾ, ಭೂಮಿಯನ್ನೇ ನಡುಗಿಸುತ್ತಾ ತನ್ನ ಮೇಲೆ ಬೀಳುತ್ತಿದ್ದ ಅವರನ್ನು ಸಮರದಲ್ಲಿ ಸೇನಾಪತಿ-ಅಮಿತ್ರಜಿತು ಶಲ್ಯನು ತಡೆದನು.

09014018a ಯುಧಿಷ್ಠಿರಂ ತ್ರಿಭಿರ್ವಿದ್ಧ್ವಾ ಭೀಮಸೇನಂ ಚ ಸಪ್ತಭಿಃ|

09014018c ಸಾತ್ಯಕಿಂ ಚ ಶತೇನಾಜೌ ಸಹದೇವಂ ತ್ರಿಭಿಃ ಶರೈಃ||

ಅವನು ಯುಧಿಷ್ಠಿರನನ್ನು ಮೂರು ಬಾಣಗಳಿಂದಲೂ, ಭೀಮಸೇನನನ್ನು ಏಳರಿಂದಲೂ, ಸಾತ್ಯಕಿಯನ್ನು ನೂರರಿಂದಲೂ ಮತ್ತು ಸಹದೇವನನ್ನು ಮೂರು ಶರಗಳಿಂದಲೂ ಹೊಡೆದನು.

09014019a ತತಸ್ತು ಸಶರಂ ಚಾಪಂ ನಕುಲಸ್ಯ ಮಹಾತ್ಮನಃ|

09014019c ಮದ್ರೇಶ್ವರಃ ಕ್ಷುರಪ್ರೇಣ ತದಾ ಚಿಚ್ಚೇದ ಮಾರಿಷ||

09014019e ತದಶೀರ್ಯತ ವಿಚ್ಚಿನ್ನಂ ಧನುಃ ಶಲ್ಯಸ್ಯ ಸಾಯಕೈಃ||

ಮಾರಿಷ! ಅನಂತರ ಮದ್ರರಾಜನು ಮಹಾತ್ಮ ನಕುಲನ ಬಾಣಸಹಿತ ಧನುಸ್ಸನ್ನು ಕ್ಷುರಪ್ರದಿಂದ ಕತ್ತರಿಸಿದನು. ಶಲ್ಯನ ಸಾಯಕಗಳಿಂದ ಸೀಳಲ್ಪಟ್ಟ ಆ ಧನುಸ್ಸು ಚೂರುಚೂರಾಯಿತು.

09014020a ಅಥಾನ್ಯದ್ಧನುರಾದಾಯ ಮಾದ್ರೀಪುತ್ರೋ ಮಹಾರಥಃ|

09014020c ಮದ್ರರಾಜರಥಂ ತೂರ್ಣಂ ಪೂರಯಾಮಾಸ ಪತ್ರಿಭಿಃ||

ಕೂಡಲೇ ಮಹಾರಥ ಮಾದ್ರೀಪುತ್ರನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಪತ್ರಿಗಳಿಂದ ಮದ್ರರಾಜನ ರಥವನ್ನು ತುಂಬಿಸಿಬಿಟ್ಟನು.

09014021a ಯುಧಿಷ್ಠಿರಸ್ತು ಮದ್ರೇಶಂ ಸಹದೇವಶ್ಚ ಮಾರಿಷ|

09014021c ದಶಭಿರ್ದಶಭಿರ್ಬಾಣೈರುರಸ್ಯೇನಮವಿಧ್ಯತಾಂ||

ಮಾರಿಷ! ಯುಧಿಷ್ಠಿರ ಮತ್ತು ಸಹದೇವರಾದರೋ ಮದ್ರೇಶನ ಎದೆಗೆ ಹತ್ತು-ಹತ್ತು ಬಾಣಗಳಿಂದ ಹೊಡೆದರು.

09014022a ಭೀಮಸೇನಸ್ತತಃ ಷಷ್ಟ್ಯಾ ಸಾತ್ಯಕಿರ್ನವಭಿಃ ಶರೈಃ|

09014022c ಮದ್ರರಾಜಮಭಿದ್ರುತ್ಯ ಜಘ್ನತುಃ ಕಂಕಪತ್ರಿಭಿಃ||

ಅನಂತರ ಭೀಮಸೇನನು ಅರವತ್ತು ಬಾಣಗಳಿಂದಲೂ ಸಾತ್ಯಕಿಯು ಒಂಭತ್ತು ಕಂಕಪತ್ರಿ ಶರಗಳಿಂದಲೂ ಮದ್ರರಾಜನನ್ನು ವೇಗದಿಂದ ಹೊಡೆದರು.

09014023a ಮದ್ರರಾಜಸ್ತತಃ ಕ್ರುದ್ಧಃ ಸಾತ್ಯಕಿಂ ನವಭಿಃ ಶರೈಃ|

09014023c ವಿವ್ಯಾಧ ಭೂಯಃ ಸಪ್ತತ್ಯಾ ಶರಾಣಾಂ ನತಪರ್ವಣಾಂ||

ಆಗ ಕ್ರುದ್ಧ ಮದ್ರರಾಜನು ಸಾತ್ಯಕಿಯನ್ನು ಒಂಭತ್ತು ಶರಗಳಿಂದ ಹೊಡೆದು ಪುನಃ ಅವನನ್ನು ಏಳು ನತಪರ್ವ ಶರಗಳಿಂದ ಹೊಡೆದನು.

09014024a ಅಥಾಸ್ಯ ಸಶರಂ ಚಾಪಂ ಮುಷ್ಟೌ ಚಿಚ್ಚೇದ ಮಾರಿಷ|

09014024c ಹಯಾಂಶ್ಚ ಚತುರಃ ಸಂಖ್ಯೇ ಪ್ರೇಷಯಾಮಾಸ ಮೃತ್ಯವೇ||

ಮಾರಿಷ! ಕೂಡಲೇ ಅವನು ಸಾತ್ಯಕಿಯ ಧನುಸ್ಸನ್ನು ಬಾಣದೊಂದಿಗೆ ಅದರ ಮುಷ್ಟಿಪ್ರದೇಶದಲ್ಲಿ ತುಂಡರಿಸಿ, ಯುದ್ಧದಲ್ಲಿ ಅವನ ನಾಲ್ಕು ಕುದುರೆಗಳನ್ನೂ ಮೃತ್ಯುಲೋಕಕ್ಕೆ ಕಳುಹಿಸಿದನು.

09014025a ವಿರಥಂ ಸಾತ್ಯಕಿಂ ಕೃತ್ವಾ ಮದ್ರರಾಜೋ ಮಹಾಬಲಃ|

09014025c ವಿಶಿಖಾನಾಂ ಶತೇನೈನಮಾಜಘಾನ ಸಮಂತತಃ||

ಸಾತ್ಯಕಿಯನ್ನು ವಿರಥನನ್ನಾಗಿಸಿ ಮಹಾಬಲ ಮದ್ರರಾಜನು ನೂರು ವಿಶಿಖಗಳಿಂದ ಅವನನ್ನು ಎಲ್ಲಕಡೆ ಗಾಯಗೊಳಿಸಿದನು.

09014026a ಮಾದ್ರೀಪುತ್ರೌ ತು ಸಂರಬ್ಧೌ ಭೀಮಸೇನಂ ಚ ಪಾಂಡವಂ|

09014026c ಯುಧಿಷ್ಠಿರಂ ಚ ಕೌರವ್ಯ ವಿವ್ಯಾಧ ದಶಭಿಃ ಶರೈಃ||

ಶಲ್ಯನು ಕ್ರುದ್ಧ ಮಾದ್ರೀಪುತ್ರರಿಬ್ಬರನ್ನೂ, ಪಾಂಡವ ಭೀಮಸೇನನನ್ನೂ, ಕೌರವ್ಯ ಯುಧಿಷ್ಠಿರನನ್ನೂ ಹತ್ತು ಶರಗಳಿಂದ ಪ್ರಹರಿಸಿದನು.

09014027a ತತ್ರಾದ್ಭುತಮಪಶ್ಯಾಮ ಮದ್ರರಾಜಸ್ಯ ಪೌರುಷಂ|

09014027c ಯದೇನಂ ಸಹಿತಾಃ ಪಾರ್ಥಾ ನಾಭ್ಯವರ್ತಂತ ಸಮ್ಯುಗೇ||

ಅಲ್ಲಿ ಮದ್ರರಾಜನ ಅದ್ಭುತ ಪೌರುಷವನ್ನು ನೋಡಿದೆವು. ಪಾರ್ಥರು ಒಂದಾಗಿ ಹೋರಾಡುತ್ತಿದ್ದರೂ ಅವನನ್ನು ಯುದ್ಧದಿಂದ ಹಿಮ್ಮೆಟ್ಟಿಸಲಾಗಲಿಲ್ಲ.

09014028a ಅಥಾನ್ಯಂ ರಥಮಾಸ್ಥಾಯ ಸಾತ್ಯಕಿಃ ಸತ್ಯವಿಕ್ರಮಃ|

09014028c ಪೀಡಿತಾನ್ಪಾಂಡವಾನ್ದೃಷ್ಟ್ವಾ ಮದ್ರರಾಜವಶಂ ಗತಾನ್||

09014028e ಅಭಿದುದ್ರಾವ ವೇಗೇನ ಮದ್ರಾಣಾಮಧಿಪಂ ಬಲೀ||

ಆಗ ಸತ್ಯವಿಕ್ರಮಿ ಸಾತ್ಯಕಿಯು ಇನ್ನೊಂದು ರಥವನ್ನೇರಿ ಮದ್ರರಾಜನ ವಶರಾಗಿ ಪೀಡೆಗೊಳಗಾಗುತ್ತಿದ್ದ ಪಾಂಡವರನ್ನು ನೋಡಿ ವೇಗದಿಂದ ಬಲಶಾಲೀ ಮದ್ರರಾಜನನ್ನು ಆಕ್ರಮಣಿಸಿದನು.

09014029a ಆಪತಂತಂ ರಥಂ ತಸ್ಯ ಶಲ್ಯಃ ಸಮಿತಿಶೋಭನಃ|

09014029c ಪ್ರತ್ಯುದ್ಯಯೌ ರಥೇನೈವ ಮತ್ತೋ ಮತ್ತಮಿವ ದ್ವಿಪಂ||

ಮೇಲೆ ಎರಗುತ್ತಿದ್ದ ಅವನ ರಥವನ್ನು ಸಮಿತಿಶೋಭನ ಶಲ್ಯನು ಮದಿಸಿದ ಆನೆಯು ಇನ್ನೊಂದು ಮದಿಸಿದ ಆನೆಯನ್ನು ಹೇಗೋ ಹಾಗೆ ರಥದಿಂದಲೇ ಆಕ್ರಮಣಿಸಿ ಯುದ್ಧಮಾಡಿದನು.

09014030a ಸ ಸಂನಿಪಾತಸ್ತುಮುಲೋ ಬಭೂವಾದ್ಭುತದರ್ಶನಃ|

09014030c ಸಾತ್ಯಕೇಶ್ಚೈವ ಶೂರಸ್ಯ ಮದ್ರಾಣಾಮಧಿಪಸ್ಯ ಚ||

09014030e ಯಾದೃಶೋ ವೈ ಪುರಾ ವೃತ್ತಃ ಶಂಬರಾಮರರಾಜಯೋಃ||

ಸಾತ್ಯಕಿ ಮತ್ತು ಶೂರ ಮದ್ರರಾಜರ ನಡುವೆ ನಡೆದ ಆ ತುಮುಲ ಯುದ್ಧವು ಹಿಂದೆ ಶಂಬರ-ಅಮರರಾಜರ ನಡುವೆ ನಡೆದ ಯುದ್ಧದಂತೆ ನೋಡಲು ಅದ್ಭುತವಾಗಿತ್ತು.

09014031a ಸಾತ್ಯಕಿಃ ಪ್ರೇಕ್ಷ್ಯ ಸಮರೇ ಮದ್ರರಾಜಂ ವ್ಯವಸ್ಥಿತಂ|

09014031c ವಿವ್ಯಾಧ ದಶಭಿರ್ಬಾಣೈಸ್ತಿಷ್ಠ ತಿಷ್ಠೇತಿ ಚಾಬ್ರವೀತ್||

ಸಮರದಲ್ಲಿ ವ್ಯವಸ್ಥಿತನಾಗಿದ್ದ ಮದ್ರರಾಜನನ್ನು ನೋಡಿ ಸಾತ್ಯಕಿಯು ಅವನನ್ನು ಹತ್ತು ಬಾಣಗಳಿಂದ ಪ್ರಹರಿಸಿ ನಿಲ್ಲು ನಿಲ್ಲೆಂದು ಹೇಳಿದನು.

09014032a ಮದ್ರರಾಜಸ್ತು ಸುಭೃಶಂ ವಿದ್ಧಸ್ತೇನ ಮಹಾತ್ಮನಾ|

09014032c ಸಾತ್ಯಕಿಂ ಪ್ರತಿವಿವ್ಯಾಧ ಚಿತ್ರಪುಂಖೈಃ ಶಿತೈಃ ಶರೈಃ||

ಆ ಮಹಾತ್ಮನಿಂದ ಬಹಳವಾಗಿ ಗಾಯಗೊಂಡ ಮದ್ರರಾಜನು ವಿಚಿತ್ರ ಪುಂಖಗಳ ನಿಶಿತ ಶರಗಳಿಂದ ಸಾತ್ಯಕಿಯನ್ನು ತಿರುಗಿ ಪ್ರಹರಿಸಿದನು.

09014033a ತತಃ ಪಾರ್ಥಾ ಮಹೇಷ್ವಾಸಾಃ ಸಾತ್ವತಾಭಿಸೃತಂ ನೃಪಂ|

09014033c ಅಭ್ಯದ್ರವನ್ರಥೈಸ್ತೂರ್ಣಂ ಮಾತುಲಂ ವಧಕಾಮ್ಯಯಾ||

ಆಗ ಮಹೇಷ್ವಾಸ ಪಾರ್ಥರು ಸಾತ್ವತನೊಡನೆ ಯುದ್ಧದಲ್ಲಿ ತೊಡಗಿದ್ದ ಸೋದರಮಾವ ನೃಪನನ್ನು ವಧಿಸಲು ಬಯಸಿ ಕೂಡಲೇ ರಥಗಳೊಂದಿಗೆ ಅವನನ್ನು ಆಕ್ರಮಣಿಸಿದರು.

09014034a ತತ ಆಸೀತ್ಪರಾಮರ್ದಸ್ತುಮುಲಃ ಶೋಣಿತೋದಕಃ|

09014034c ಶೂರಾಣಾಂ ಯುಧ್ಯಮಾನಾನಾಂ ಸಿಂಹಾನಾಮಿವ ನರ್ದತಾಂ||

ಆಗ ಅಲ್ಲಿ ಸಿಂಹಗಳಂತೆ ಗರ್ಜಿಸುತ್ತಿದ್ದ ಪರಸ್ಪರರನ್ನು ಗಾಯಗೊಳಿಸಿ ರಕ್ತದ ನೀರನ್ನೇ ಸುರಿಸುತ್ತಿದ್ದ ಶೂರರ ತುಮುಲಯುದ್ಧವು ನಡೆಯಿತು.

09014035a ತೇಷಾಮಾಸೀನ್ಮಹಾರಾಜ ವ್ಯತಿಕ್ಷೇಪಃ ಪರಸ್ಪರಂ|

09014035c ಸಿಂಹಾನಾಮಾಮಿಷೇಪ್ಸೂನಾಂ ಕೂಜತಾಮಿವ ಸಂಯುಗೇ||

ಮಹಾರಾಜ! ಒಂದೇ ಮಾಂಸದ ತುಂಡಿಗಾಗಿ ಗರ್ಜಿಸಿ ಹೊಡೆದಾಡುತ್ತಿರುವ ಸಿಂಹಗಳಂತೆ ಪರಸ್ಪರರನ್ನು ಗಾಯಗೊಳಿಸುವ ಮಹಾಯುದ್ಧವು ಅವರ ನಡುವೆ ನಡೆಯಿತು.

09014036a ತೇಷಾಂ ಬಾಣಸಹಸ್ರೌಘೈರಾಕೀರ್ಣಾ ವಸುಧಾಭವತ್|

09014036c ಅಂತರಿಕ್ಷಂ ಚ ಸಹಸಾ ಬಾಣಭೂತಮಭೂತ್ತದಾ||

ಅವರ ಸಹಸ್ರಾರು ಬಾಣಗಳಿಂದ ಭೂಮಿಯು ತುಂಬಿಹೋಯಿತು. ಕೂಡಲೇ ಅಂತರಿಕ್ಷವೂ ಕೂಡ ಬಾಣಮಯವಾಯಿತು.

09014037a ಶರಾಂಧಕಾರಂ ಬಹುಧಾ ಕೃತಂ ತತ್ರ ಸಮಂತತಃ|

09014037c ಅಭ್ರಚ್ಚಾಯೇವ ಸಂಜಜ್ಞೇ ಶರೈರ್ಮುಕ್ತೈರ್ಮಹಾತ್ಮಭಿಃ||

ಆ ಮಹಾತ್ಮರು ಪ್ರಯೋಗಿಸಿದ ಶರಗಳಿಂದ ಅಲ್ಲಿ ಎಲ್ಲ ಕಡೆ ಅತ್ಯಂತ ಶರಾಂಧಕಾರವುಂಟಾಗಿ, ಮೋಡಗಳಿಂದ ಉಂಟಾದ ನೆರಳಿನಂತೆಯೇ ಕಾಣುತ್ತಿತ್ತು.

09014038a ತತ್ರ ರಾಜನ್ ಶರೈರ್ಮುಕ್ತೈರ್ನಿರ್ಮುಕ್ತೈರಿವ ಪನ್ನಗೈಃ|

09014038c ಸ್ವರ್ಣಪುಂಖೈಃ ಪ್ರಕಾಶದ್ಭಿರ್ವ್ಯರೋಚಂತ ದಿಶಸ್ತಥಾ||

ರಾಜನ್! ಅಲ್ಲಿ ಪ್ರಯೋಗಿಸಲ್ಪಟ್ಟ ಪೊರೆಬಿಟ್ಟ ಸರ್ಪಗಳಂತೆ ಹೊಳೆಯುತ್ತಿದ್ದ ಸ್ವರ್ಣಪುಂಖ ಶರಗಳಿಂದ ದಿಕ್ಕುಗಳು ಬೆಳಗಿದವು.

09014039a ತತ್ರಾದ್ಭುತಂ ಪರಂ ಚಕ್ರೇ ಶಲ್ಯಃ ಶತ್ರುನಿಬರ್ಹಣಃ|

09014039c ಯದೇಕಃ ಸಮರೇ ಶೂರೋ ಯೋಧಯಾಮಾಸ ವೈ ಬಹೂನ್||

ಸಮರದಲ್ಲಿ ಶತ್ರುನಾಶಕ ಶೂರ ಶಲ್ಯನು ಒಬ್ಬನೇ ಅನೇಕರೊಡನೆ ಯುದ್ಧಮಾಡುತ್ತಿದ್ದ ಅದು ಒಂದು ಪರಮ ಅದ್ಭುತವಾಗಿತ್ತು.

09014040a ಮದ್ರರಾಜಭುಜೋತ್ಸೃಷ್ಟೈಃ ಕಂಕಬರ್ಹಿಣವಾಜಿತೈಃ|

09014040c ಸಂಪತದ್ಭಿಃ ಶರೈರ್ಘೋರೈರವಾಕೀರ್ಯತ ಮೇದಿನೀ||

ಮದ್ರರಾಜನ ಭುಜಗಳಿಂದ ಪ್ರಮುಕ್ತವಾಗಿ ಕೆಳಗೆ ಬೀಳುತ್ತಿದ್ದ ರಣಹದ್ದು-ನವಿಲ ಗರಿಗಳ ಘೋರಶರಗಳಿಂದ ರಣಭೂಮಿಯು ತುಂಬಿಹೋಯಿತು.

09014041a ತತ್ರ ಶಲ್ಯರಥಂ ರಾಜನ್ವಿಚರಂತಂ ಮಹಾಹವೇ|

09014041c ಅಪಶ್ಯಾಮ ಯಥಾ ಪೂರ್ವಂ ಶಕ್ರಸ್ಯಾಸುರಸಂಕ್ಷಯೇ||

ರಾಜನ್! ಹಿಂದೆ ಅಸುರವಿನಾಶನಸಮಯದಲ್ಲಿ ಶಕ್ರನ ರಥವು ಹೇಗಿತ್ತೋ ಹಾಗೆ ಆ ಮಹಾಯುದ್ಧದಲ್ಲಿ ಶಲ್ಯನ ರಥವು ಸಂಚರಿಸುತ್ತಿದ್ದುದನ್ನು ನಾವು ನೋಡಿದೆವು.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ಸಂಕುಲಯುದ್ಧೇ ಚತುರ್ದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ಸಂಕುಲಯುದ್ಧ ಎನ್ನುವ ಹದಿನಾಲ್ಕನೇ ಅಧ್ಯಾಯವು.

Comments are closed.