Shalya Para: Chapter 58

ಶಲ್ಯಪರ್ವ: ಗದಾಯುದ್ಧ ಪರ್ವ

೫೮

ಭೀಮಸೇನನು ಕೆಳಗೆ ಬಿದ್ದಿದ್ದ ದುರ್ಯೋಧನನನ್ನು ಒದೆದು ಕುಣಿದಾಡುತ್ತಾ ಆಡಿದ ಮಾತುಗಳು (೧-೧೨). ಯುಧಿಷ್ಠಿರನು ಕೆಳಗೆ ಬಿದ್ದಿದ್ದ ದುರ್ಯೋಧನನ ಬಳಿಸಾರಿ ವಿಲಪಿಸಿದುದು (೧೩-೨೪).

09058001 ಸಂಜಯ ಉವಾಚ

09058001a ತಂ ಪಾತಿತಂ ತತೋ ದೃಷ್ಟ್ವಾ ಮಹಾಶಾಲಮಿವೋದ್ಗತಂ|

09058001c ಪ್ರಹೃಷ್ಟಮನಸಃ ಸರ್ವೇ ಬಭೂವುಸ್ತತ್ರ ಪಾಂಡವಾಃ||

ಸಂಜಯನು ಹೇಳಿದನು: “ಮಹಾಶಾಲವೃಕ್ಷದಂತಿದ್ದ ಅವನು ಬಿದ್ದುದನ್ನು ನೋಡಿ ಪಾಂಡವರೆಲ್ಲರೂ ಹರ್ಷಿತರಾದರು.

09058002a ಉನ್ಮತ್ತಮಿವ ಮಾತಂಗಂ ಸಿಂಹೇನ ವಿನಿಪಾತಿತಂ|

09058002c ದದೃಶುರ್ಹೃಷ್ಟರೋಮಾಣಃ ಸರ್ವೇ ತೇ ಚಾಪಿ ಸೋಮಕಾಃ||

ಸಿಂಹದಿಂದ ಕೆಳಗುರುಳಿಸಲ್ಪಟ್ಟ ಮದಿಸಿದ ಆನೆಯಂತಿದ್ದ ಅವನನ್ನು ನೋಡಿ ಅಲ್ಲಿದ್ದ ಸೋಮಕರೆಲ್ಲರೂ ರೋಮಾಂಚಿತರಾದರು.

09058003a ತತೋ ದುರ್ಯೋಧನಂ ಹತ್ವಾ ಭೀಮಸೇನಃ ಪ್ರತಾಪವಾನ್|

09058003c ಪತಿತಂ ಕೌರವೇಂದ್ರಂ ತಮುಪಗಮ್ಯೇದಮಬ್ರವೀತ್||

ದುರ್ಯೋಧನನನ್ನು ಹೊಡೆದ ಪ್ರತಾಪವಾನ್ ಭೀಮಸೇನನು ಕೆಳಗೆ ಬಿದ್ದಿದ್ದ ಕೌರವೇಂದ್ರನ ಬಳಿ ಹೋಗಿ ಹೀಗೆ ಹೇಳಿದನು:

09058004a ಗೌರ್ಗೌರಿತಿ ಪುರಾ ಮಂದ ದ್ರೌಪದೀಮೇಕವಾಸಸಂ|

09058004c ಯತ್ಸಭಾಯಾಂ ಹಸನ್ನಸ್ಮಾಂಸ್ತದಾ ವದಸಿ ದುರ್ಮತೇ||

09058004e ತಸ್ಯಾವಹಾಸಸ್ಯ ಫಲಮದ್ಯ ತ್ವಂ ಸಮವಾಪ್ನುಹಿ||

“ಮೂಢ! ದುರ್ಮತೇ! ಹಿಂದೆ ಸಭೆಯಲ್ಲಿ ಏಕವಸ್ತ್ರಳಾಗಿದ್ದ ದ್ರೌಪದಿಯನ್ನು “ಹಸು! ಹಸು!” ಎಂದು ಹೇಳಿಕೊಂಡು ಹಾಸ್ಯಮಾಡಿದೆಯಲ್ಲವೇ? ಆ ಅಪಮಾನದ ಫಲವನ್ನು ಇಂದು ನೀನು ಪಡೆದಿದ್ದೀಯೆ!”

09058005a ಏವಮುಕ್ತ್ವಾ ಸ ವಾಮೇನ ಪದಾ ಮೌಲಿಮುಪಾಸ್ಪೃಶತ್|

09058005c ಶಿರಶ್ಚ ರಾಜಸಿಂಹಸ್ಯ ಪಾದೇನ ಸಮಲೋಡಯತ್||

ಹೀಗೆ ಹೇಳಿ ಅವನು ಎಡಗಾಲಿನಿಂದ ಅವನ ಕಿರೀಟವನ್ನು ಒದೆದನು. ರಾಜಸಿಂಹನ ಶಿರವನ್ನೂ ಕಾಲಿನಿಂದ ತುಳಿದನು.

09058006a ತಥೈವ ಕ್ರೋಧಸಂರಕ್ತೋ ಭೀಮಃ ಪರಬಲಾರ್ದನಃ|

09058006c ಪುನರೇವಾಬ್ರವೀದ್ವಾಕ್ಯಂ ಯತ್ತಚ್ಚೃಣು ನರಾಧಿಪ||

ಹಾಗೆಯೇ ಕ್ರೋಧಸಂರಕ್ತನಾದ ಪರಬಲಾರ್ದನ ಭೀಮನು ಪುನಃ ಈ ಮಾತುಗಳನ್ನಾಡಿದನು. ಅದನ್ನು ಕೇಳು ನರಾಧಿಪ!

09058007a ಯೇಽಸ್ಮಾನ್ಪುರೋಽಪನೃತ್ಯಂತ ಪುನರ್ಗೌರಿತಿ ಗೌರಿತಿ|

09058007c ತಾನ್ವಯಂ ಪ್ರತಿನೃತ್ಯಾಮಃ ಪುನರ್ಗೌರಿತಿ ಗೌರಿತಿ||

“ಯಾರು ನಮ್ಮ ಮುಂದೆ “ಹಸು! ಹಸು!” ಎಂದು ಹೇಳಿಕೊಂಡು ಕುಣಿದಾಟುತಿದ್ದನೋ ಅವನ ಎದಿರು ನಾವು ಪ್ರತಿಯಾಗಿ ಪುನಃ “ಹಸು! ಹಸು!” ಎಂದು ಹೇಳಿಕೊಳ್ಳುತ್ತಾ ನರ್ತಿಸುತ್ತೇವೆ!

09058008a ನಾಸ್ಮಾಕಂ ನಿಕೃತಿರ್ವಹ್ನಿರ್ನಾಕ್ಷದ್ಯೂತಂ ನ ವಂಚನಾ|

09058008c ಸ್ವಬಾಹುಬಲಮಾಶ್ರಿತ್ಯ ಪ್ರಬಾಧಾಮೋ ವಯಂ ರಿಪೂನ್||

ಮೋಸ, ಬೆಂಕಿ, ಅಕ್ಷದ್ಯೂತ, ಮತ್ತು ವಂಚನೆಗಳು ನಮ್ಮಲ್ಲಿಲ್ಲ. ನಮ್ಮದೇ ಬಾಹುಬಲವನ್ನು ಆಶ್ರಯಿಸಿ ನಾವು ಶತ್ರುಗಳನ್ನು ಸದೆಬಡಿದಿದ್ದೇವೆ.”

09058009a ಸೋಽವಾಪ್ಯ ವೈರಸ್ಯ ಪರಸ್ಯ ಪಾರಂ

         ವೃಕೋದರಃ ಪ್ರಾಹ ಶನೈಃ ಪ್ರಹಸ್ಯ|

09058009c ಯುಧಿಷ್ಠಿರಂ ಕೇಶವಸೃಂಜಯಾಂಶ್ಚ

         ಧನಂಜಯಂ ಮಾದ್ರವತೀಸುತೌ ಚ||

ವೈರದ ಅಂತಿಮ ಚರಣವನ್ನು ದಾಟಿದ್ದ ವೃಕೋದರನು ನಸುನಗುತ್ತಾ ಯುಧಿಷ್ಠಿರ, ಕೇಶವ, ಸೃಂಜಯರು, ಧನಂಜಯ ಮತ್ತು ಮಾದ್ರವತೀಸುತರಿಗೆ ಹೇಳಿದನು:

09058010a ರಜಸ್ವಲಾಂ ದ್ರೌಪದೀಮಾನಯನ್ಯೇ

         ಯೇ ಚಾಪ್ಯಕುರ್ವಂತ ಸದಸ್ಯವಸ್ತ್ರಾಂ|

09058010c ತಾನ್ಪಶ್ಯಧ್ವಂ ಪಾಂಡವೈರ್ಧಾರ್ತರಾಷ್ಟ್ರಾನ್

         ರಣೇ ಹತಾಂಸ್ತಪಸಾ ಯಾಜ್ಞಸೇನ್ಯಾಃ||

“ರಜಸ್ವಲೆ ದ್ರೌಪದಿಯನ್ನು ಎಳೆದುತಂದು ಯಾರು ಅವಳನ್ನು ಅವಸ್ತ್ರಳನ್ನಾಗಿ ಮಾಡಲು ಪ್ರಯತ್ನಿಸಿದ್ದರೋ ಆ ಧಾರ್ತರಾಷ್ಟ್ರರು ಇಂದು ಯಾಜ್ಞಸೇನಿಯ ತಪಃಫಲದಿಂದ ರಣದಲ್ಲಿ ಹತರಾಗಿರುವುದನ್ನು ನೋಡಿ!

09058011a ಯೇ ನಃ ಪುರಾ ಷಂಡತಿಲಾನವೋಚನ್

         ಕ್ರೂರಾ ರಾಜ್ಞೋ ಧೃತರಾಷ್ಟ್ರಸ್ಯ ಪುತ್ರಾಃ|

09058011c ತೇ ನೋ ಹತಾಃ ಸಗಣಾಃ ಸಾನುಬಂಧಾಃ

         ಕಾಮಂ ಸ್ವರ್ಗಂ ನರಕಂ ವಾ ವ್ರಜಾಮಃ||

ಹಿಂದೆ ನಮ್ಮನ್ನು ಯಾರು ಎಣ್ಣೆಯಿಲ್ಲದ ಎಳ್ಳಿಗೆ ಸಮಾನ ನಪುಂಸಕರೆಂದು ಕರೆದಿದ್ದರೋ ಆ ಕ್ರೂರ ರಾಜ ಧೃತರಾಷ್ಟ್ರನ ಪುತ್ರರು ತಮ್ಮ ಪಂಗಡದವರೊಂದಿಗೆ ಮತ್ತು ಅನುಯಾಯಿಗಳೊಂದಿಗೆ ಹತರಾಗಿದ್ದಾರೆ. ಇನ್ನು ಬೇಕಾದರೆ ಸ್ವರ್ಗ ಅಥವಾ ನರಕಕ್ಕೆ ಹೋದರೂ ವ್ಯತ್ಯಾಸವಿಲ್ಲ!”

09058012a ಪುನಶ್ಚ ರಾಜ್ಞಃ ಪತಿತಸ್ಯ ಭೂಮೌ

         ಸ ತಾಂ ಗದಾಂ ಸ್ಕಂಧಗತಾಂ ನಿರೀಕ್ಷ್ಯ|

09058012c ವಾಮೇನ ಪಾದೇನ ಶಿರಃ ಪ್ರಮೃದ್ಯ

         ದುರ್ಯೋಧನಂ ನೈಕೃತಿಕೇತ್ಯವೋಚತ್||

ಪುನಃ ಅವನು ಗದೆಯನ್ನು ಹೆಗಲ ಮೇಲಿರಿಸಿಕೊಂಡು ಭೂಮಿಯ ಮೇಲೆ ಬಿದ್ದಿದ್ದ ರಾಜನನ್ನು ನೋಡಿ ಎಡಗಾಲಿನಿಂದ ದುರ್ಯೋಧನನ ಶಿರವನ್ನು ಮೆಟ್ಟಿ “ಮೋಸಗಾರ!” ಎಂದು ಹೇಳಿದನು.

09058013a ಹೃಷ್ಟೇನ ರಾಜನ್ಕುರುಪಾರ್ಥಿವಸ್ಯ

         ಕ್ಷುದ್ರಾತ್ಮನಾ ಭೀಮಸೇನೇನ ಪಾದಂ|

09058013c ದೃಷ್ಟ್ವಾ ಕೃತಂ ಮೂರ್ಧನಿ ನಾಭ್ಯನಂದನ್

         ಧರ್ಮಾತ್ಮಾನಃ ಸೋಮಕಾನಾಂ ಪ್ರಬರ್ಹಾಃ||

ರಾಜನ್! ಕುರುಪಾರ್ಥಿವನ ತಲೆಯನ್ನು ಹರ್ಷಿತನಾದ ಕ್ಷುದ್ರಾತ್ಮ ಭೀಮಸೇನನು ಕಾಲಿನಿಂದ ತುಳಿದುದನ್ನು ನೋಡಿದ ಧರ್ಮಾತ್ಮ ಸೋಮಕರಿಗೆ ಸಂತಸವಾಗಲಿಲ್ಲ. ಅವರು ಅವನನ್ನು ಅಭಿನಂದಿಸಲೂ ಇಲ್ಲ.

09058014a ತವ ಪುತ್ರಂ ತಥಾ ಹತ್ವಾ ಕತ್ಥಮಾನಂ ವೃಕೋದರಂ|

09058014c ನೃತ್ಯಮಾನಂ ಚ ಬಹುಶೋ ಧರ್ಮರಾಜೋಽಬ್ರವೀದಿದಂ||

ನಿನ್ನ ಮಗನನ್ನು ಹಾಗೆ ಹೊಡೆದು ಬಹಳವಾಗಿ ಕೊಚ್ಚಿಕೊಳ್ಳುತ್ತಾ ಕುಣಿಯುತ್ತಿದ್ದ ವೃಕೋದರನಿಗೆ ಧರ್ಮರಾಜನು ಹೇಳಿದನು:

09058015a ಮಾ ಶಿರೋಽಸ್ಯ ಪದಾ ಮರ್ದೀರ್ಮಾ ಧರ್ಮಸ್ತೇಽತ್ಯಗಾನ್ಮಹಾನ್|

09058015c ರಾಜಾ ಜ್ಞಾತಿರ್ಹತಶ್ಚಾಯಂ ನೈತನ್ನ್ಯಾಯ್ಯಂ ತವಾನಘ||

“ಅನಘ! ಕಾಲಿನಿಂದ ಇವನ ತಲೆಯನ್ನು ಮೆಟ್ಟಬೇಡ! ನಿನ್ನಿಂದ ಧರ್ಮದ ಉಲ್ಲಂಘನೆಯಾಗದಿರಲಿ! ರಾಜನಾಗಿರುವ, ನಮ್ಮ ದಾಯಾದಿಯಾಗಿರುವ ಮತ್ತು ಕೆಳಗೆ ಬಿದ್ದಿರುವ ಅವನೊಡನೆ ಈ ರೀತಿ ವರ್ತಿಸುವುದು ಸರಿಯಲ್ಲ!

09058016a ವಿಧ್ವಸ್ತೋಽಯಂ ಹತಾಮಾತ್ಯೋ ಹತಭ್ರಾತಾ ಹತಪ್ರಜಃ|

09058016c ಉತ್ಸನ್ನಪಿಂಡೋ ಭ್ರಾತಾ ಚ ನೈತನ್ನ್ಯಾಯ್ಯಂ ಕೃತಂ ತ್ವಯಾ||

ಅಮಾತ್ಯರನ್ನು, ಸಹೋದರರನ್ನು ಮತ್ತು ಪ್ರಜೆಗಳನ್ನು ಕಳೆದುಕೊಂಡ ಇವನು ಪಿಂಡಪ್ರದಾನಮಾಡುವವರೂ ಇಲ್ಲದಂತವನಾಗಿ ಸಂಪೂರ್ಣವಾಗಿ ನಾಶಹೊಂದಿದ್ದಾನೆ. ನಮ್ಮ ಸಹೋದರನಾಗಿರುವನಿಗೆ ಹೀಗೆ ಮಾಡುವುದು ಸರಿಯಲ್ಲ.

09058017a ಧಾರ್ಮಿಕೋ ಭೀಮಸೇನೋಽಸಾವಿತ್ಯಾಹುಸ್ತ್ವಾಂ ಪುರಾ ಜನಾಃ|

09058017c ಸ ಕಸ್ಮಾದ್ಭೀಮಸೇನ ತ್ವಂ ರಾಜಾನಮಧಿತಿಷ್ಠಸಿ||

ಈ ಮೊದಲು ಜನರು “ಭೀಮಸೇನನು ಧಾರ್ಮಿಕ!” ಎಂದು ಹೇಳುತ್ತಿದ್ದರು. ಹಾಗಿದ್ದಾಗ ಭೀಮಸೇನ! ನೀನು ಏಕೆ ರಾಜನನ್ನು ಮೆಟ್ಟಿ ತುಳಿಯುತ್ತಿರುವೆ?”

09058018a ದೃಷ್ಟ್ವಾ ದುರ್ಯೋಧನಂ ರಾಜಾ ಕುಂತೀಪುತ್ರಸ್ತಥಾಗತಂ|

09058018c ನೇತ್ರಾಭ್ಯಾಮಶ್ರುಪೂರ್ಣಾಭ್ಯಾಮಿದಂ ವಚನಮಬ್ರವೀತ್||

ರಾಜಾ ದುರ್ಯೋಧನನನ್ನು ನೋಡಿ ಕುಂತೀಪುತ್ರನು ಅವನ ಬಳಿಹೋಗಿ ಕಣ್ಣುಗಳಲ್ಲಿ ಕಣ್ಣೀರುತುಂಬಿದವನಾಗಿ ಈ ಮಾತನ್ನಾಡಿದನು:

09058019a ನೂನಮೇತದ್ಬಲವತಾ ಧಾತ್ರಾದಿಷ್ಟಂ ಮಹಾತ್ಮನಾ|

09058019c ಯದ್ವಯಂ ತ್ವಾಂ ಜಿಘಾಂಸಾಮಸ್ತ್ವಂ ಚಾಸ್ಮಾನ್ಕುರುಸತ್ತಮ||

“ಕುರುಸತ್ತಮ! ಹೀಗೆ ನಾವು ನಿನ್ನನ್ನು ಮತ್ತು ನೀನು ನಮ್ಮನ್ನು ಕೊಲ್ಲಲು ಮುಂದಾದುದು ಬಲಶಾಲಿ ಮಹಾತ್ಮ ಧಾತ್ರನು ನಮಗೆ ವಿಧಿಸಿದುದಲ್ಲದೇ ಇನ್ನೇನು?

09058020a ಆತ್ಮನೋ ಹ್ಯಪರಾಧೇನ ಮಹದ್ವ್ಯಸನಮೀದೃಶಂ|

09058020c ಪ್ರಾಪ್ತವಾನಸಿ ಯಲ್ಲೋಭಾನ್ಮದಾದ್ಬಾಲ್ಯಾಚ್ಚ ಭಾರತ||

ಭಾರತ! ನಿನ್ನದೇ ಅಪರಾಧಗಳಿಂದ ಲೋಭ, ಮದ ಮತ್ತು ಬಾಲಬುದ್ಧಿ ಇವುಗಳಿಂದ ನೀನು ಈ ರೀತಿಯ ಮಹಾ ವ್ಯಸನವನ್ನು ಪಡೆದಿರುವೆ!

09058021a ಘಾತಯಿತ್ವಾ ವಯಸ್ಯಾಂಶ್ಚ ಭ್ರಾತೄನಥ ಪಿತೄಂತಥಾ|

09058021c ಪುತ್ರಾನ್ಪೌತ್ರಾಂಸ್ತಥಾಚಾರ್ಯಾಂಸ್ತತೋಽಸಿ ನಿಧನಂ ಗತಃ||

ಮಿತ್ರರನ್ನೂ, ಸಹೋದರರನ್ನೂ, ಪಿತೃಗಳನ್ನೂ, ಪುತ್ರರನ್ನೂ, ಪೌತ್ರರನ್ನೂ ಮತ್ತು ಆಚಾರ್ಯರನ್ನೂ ಸಾವಿಗೀಡುಮಾಡಿ ಕೊನೆಯಲ್ಲಿ ನೀನೂ ನಿಧನಹೊಂದಿದೆ.

09058022a ತವಾಪರಾಧಾದಸ್ಮಾಭಿರ್ಭ್ರಾತರಸ್ತೇ ಮಹಾರಥಾಃ|

09058022c ನಿಹತಾ ಜ್ಞಾತಯಶ್ಚಾನ್ಯೇ ದಿಷ್ಟಂ ಮನ್ಯೇ ದುರತ್ಯಯಂ||

ನಿನ್ನ ಅಪರಾಧದಿಂದ ನಿನ್ನ ಮಹಾರಥ ಸಹೋದರರು ಮತ್ತು ಅನ್ಯ ದಾಯಾದಿಗಳು ನಮ್ಮಿಂದ ಹತರಾದರು. ದೈವವನ್ನು ಮೀರುವುದು ಸಾಧ್ಯವಿಲ್ಲ!

09058023a ಸ್ನುಷಾಶ್ಚ ಪ್ರಸ್ನುಷಾಶ್ಚೈವ ಧೃತರಾಷ್ಟ್ರಸ್ಯ ವಿಹ್ವಲಾಃ|

09058023c ಗರ್ಹಯಿಷ್ಯಂತಿ ನೋ ನೂನಂ ವಿಧವಾಃ ಶೋಕಕರ್ಶಿತಾಃ||

ವಿಧವೆಯರಾಗಿ ಶೋಕದಿಂದ ವಿಹ್ವಲರಾಗಿರುವ ಧೃತರಾಷ್ಟ್ರನ ಸೊಸೆಯಂದಿರೂ ಮತ್ತು ಮೊಮ್ಮಕ್ಕಳ ಪತ್ನಿಯರೂ ನಿಂದಿಸದಿರಲಿ!”

09058024a ಏವಮುಕ್ತ್ವಾ ಸುದುಃಖಾರ್ತೋ ನಿಶಶ್ವಾಸ ಸ ಪಾರ್ಥಿವಃ|

09058024c ವಿಲಲಾಪ ಚಿರಂ ಚಾಪಿ ಧರ್ಮಪುತ್ರೋ ಯುಧಿಷ್ಠಿರಃ||

ಹೀಗೆ ಹೇಳಿ ಅತ್ಯಂತ ದುಃಖಿತನಾದ ಪಾರ್ಥಿವ ಧರ್ಮಪುತ್ರ ಯುಧಿಷ್ಠಿರನು ನಿಟ್ಟುಸಿರು ಬಿಡುತ್ತಾ ಬಹಳ ಹೊತ್ತಿನವರೆಗೆ ವಿಲಪಿಸಿದನು.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಗದಾಯುದ್ಧಪರ್ವಣಿ ಯುಧಿಷ್ಠಿರವಿಲಾಪೇ ಅಷ್ಟಪಂಚಾಶತ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಗದಾಯುದ್ಧಪರ್ವದಲ್ಲಿ ಯುಧಿಷ್ಠಿರವಿಲಾಪ ಎನ್ನುವ ಐವತ್ತೆಂಟನೇ ಅಧ್ಯಾಯವು.

Comments are closed.