Sauptika Parva: Chapter 4

ಸೌಪ್ತಿಕಪರ್ವ

ಕೃಪ-ಅಶ್ವತ್ಥಾಮರ ಸಂವಾದ (೧-೩೩).

10004001 ಕೃಪ ಉವಾಚ|

10004001a ದಿಷ್ಟ್ಯಾ ತೇ ಪ್ರತಿಕರ್ತವ್ಯೇ ಮತಿರ್ಜಾತೇಯಮಚ್ಯುತ|

10004001c ನ ತ್ವಾ ವಾರಯಿತುಂ ಶಕ್ತೋ ವಜ್ರಪಾಣಿರಪಿ ಸ್ವಯಂ||

ಕೃಪನು ಹೇಳಿದನು: “ಅಚ್ಯುತ! ಒಳ್ಳೆಯದಾಯಿತು! ನಿನ್ನಲ್ಲಿ ಪ್ರತೀಕಾರವನ್ನು ಮಾಡುವ ಯೋಚನೆಯುಂಟಾಗಿದೆ! ಸ್ವಯಂ ವಜ್ರಪಾಣಿಯೂ ನಿನ್ನನ್ನು ತಡೆಯಲು ಶಕ್ತನಿಲ್ಲ!

10004002a ಅನುಯಾಸ್ಯಾವಹೇ ತ್ವಾಂ ತು ಪ್ರಭಾತೇ ಸಹಿತಾವುಭೌ|

10004002c ಅದ್ಯ ರಾತ್ರೌ ವಿಶ್ರಮಸ್ವ ವಿಮುಕ್ತಕವಚಧ್ವಜಃ||

ಆದರೆ ಇಂದಿನ ರಾತ್ರಿ ಕವಚ-ಧ್ವಜಗಳನ್ನು ಕಳಚಿ ವಿಶ್ರಮಿಸು. ಬೆಳಗಾಗುತ್ತಲೇ ನಾವಿಬ್ಬರೂ ನಿನ್ನನ್ನು ಅನುಸರಿಸಿ ಯುದ್ಧಮಾಡುತ್ತೇವೆ.

10004003a ಅಹಂ ತ್ವಾಮನುಯಾಸ್ಯಾಮಿ ಕೃತವರ್ಮಾ ಚ ಸಾತ್ವತಃ|

10004003c ಪರಾನಭಿಮುಖಂ ಯಾಂತಂ ರಥಾವಾಸ್ಥಾಯ ದಂಶಿತೌ||

ಸಾತ್ವತ ಕೃತವರ್ಮ ಮತ್ತು ನಾನು ಕವಚಗಳನ್ನು ಧರಿಸಿ ರಥಗಳನ್ನೇರಿ ಶತ್ರುಗಳನ್ನು ಎದುರಿಸುವ ನಿನ್ನನ್ನು ಅನುಸರಿಸುತ್ತೇವೆ.

10004004a ಆವಾಭ್ಯಾಂ ಸಹಿತಃ ಶತ್ರೂನ್ ಶ್ವೋಽಸಿ ಹಂತಾ ಸಮಾಗಮೇ|

10004004c ವಿಕ್ರಮ್ಯ ರಥಿನಾಂ ಶ್ರೇಷ್ಠ ಪಾಂಚಾಲಾನ್ಸಪದಾನುಗಾನ್||

ರಥಿಗಳಲ್ಲಿ ಶ್ರೇಷ್ಠನೇ! ನಮ್ಮಿಬ್ಬರ ಜೊತೆಗೆ ನೀನು ವಿಕ್ರಮದಿಂದ ರಣದಲ್ಲಿ ಪಾಂಚಾಲರನ್ನು ಎದುರಿಸಿ ಅವರ ಅನುಯಾಯಿಗಳೊಂದಿಗೆ ಶತ್ರುಗಳನ್ನು ಜಯಿಸಬಲ್ಲೆ!

10004005a ಶಕ್ತಸ್ತ್ವಮಸಿ ವಿಕ್ರಾಂತುಂ ವಿಶ್ರಮಸ್ವ ನಿಶಾಮಿಮಾಂ|

10004005c ಚಿರಂ ತೇ ಜಾಗ್ರತಸ್ತಾತ ಸ್ವಪ ತಾವನ್ನಿಶಾಮಿಮಾಂ||

ಮಗೂ! ಈ ರಾತ್ರಿ ವಿಶ್ರಮಿಸು! ಈ ವಿಕ್ರಾಂತಕ್ಕೆ ನೀನು ಶಕ್ತನಾಗಿದ್ದೀಯೆ! ಬೇಗನೆ ಏಳುವಿಯಂತೆ. ಇಂದು ರಾತ್ರಿ ಮಲಗಿಕೋ!

10004006a ವಿಶ್ರಾಂತಶ್ಚ ವಿನಿದ್ರಶ್ಚ ಸ್ವಸ್ಥಚಿತ್ತಶ್ಚ ಮಾನದ|

10004006c ಸಮೇತ್ಯ ಸಮರೇ ಶತ್ರೂನ್ವಧಿಷ್ಯಸಿ ನ ಸಂಶಯಃ||

ಮಾನದ! ವಿಶ್ರಮಿಸು. ಸ್ವಸ್ಥಚಿತ್ತನಾಗಿ ನಿದ್ರಿಸು! ಒಟ್ಟಿಗೇ ಸಮರದಲ್ಲಿ ಶತ್ರುಗಳನ್ನು ವಧಿಸುತ್ತೀಯೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

10004007a ನ ಹಿ ತ್ವಾ ರಥಿನಾಂ ಶ್ರೇಷ್ಠ ಪ್ರಗೃಹೀತವರಾಯುಧಂ|

10004007c ಜೇತುಮುತ್ಸಹತೇ ಕಶ್ಚಿದಪಿ ದೇವೇಷು ಪಾವಕಿಃ||

ರಥಿಗಳಲ್ಲಿ ಶ್ರೇಷ್ಠನೇ! ವರಾಯುಧವನ್ನು ಹಿಡಿದಿರುವ ನಿನ್ನನ್ನು ದೇವತೆಗಳ ಪಾವಕಿಯು ಕೂಡ ಗೆಲ್ಲಲು ಇಚ್ಛಿಸುವುದಿಲ್ಲ!

10004008a ಕೃಪೇಣ ಸಹಿತಂ ಯಾಂತಂ ಯುಕ್ತಂ ಚ ಕೃತವರ್ಮಣಾ|

10004008c ಕೋ ದ್ರೌಣಿಂ ಯುಧಿ ಸಂರಬ್ಧಂ ಯೋಧಯೇದಪಿ ದೇವರಾಟ್||

ಕೃಪನೊಂದಿಗೆ ಮತ್ತು ಕೃತವರ್ಮನನ್ನು ಕೂಡಿಕೊಂಡು ಯುದ್ಧದಲ್ಲಿ ಸಂರಬ್ಧನಾಗಿ ಬರುತ್ತಿರುವ ದ್ರೌಣಿಯನ್ನು ಯಾರುತಾನೇ ಎದುರಿಸಿಯಾರು? ಯೋಧನು ದೇವರಾಜನೇ ಆದರೂ ಎದುರಿಸಲಾರನು.

10004009a ತೇ ವಯಂ ಪರಿವಿಶ್ರಾಂತಾ ವಿನಿದ್ರಾ ವಿಗತಜ್ವರಾಃ|

10004009c ಪ್ರಭಾತಾಯಾಂ ರಜನ್ಯಾಂ ವೈ ನಿಹನಿಷ್ಯಾಮ ಶಾತ್ರವಾನ್||

ವ್ಯಾಕುಲವಿಲ್ಲದೇ ಈ ರಾತ್ರಿ ನಿದ್ದೆಮಾಡಿ ವಿಶ್ರಾಂತಿಪಡೆಯೋಣ! ಬೆಳಗಾಗುತ್ತಲೇ ನಾವು ಶತ್ರುಗಳನ್ನು ಸಂಹರಿಸೋಣ!

10004010a ತವ ಹ್ಯಸ್ತ್ರಾಣಿ ದಿವ್ಯಾನಿ ಮಮ ಚೈವ ನ ಸಂಶಯಃ|

10004010c ಸಾತ್ವತೋಽಪಿ ಮಹೇಷ್ವಾಸೋ ನಿತ್ಯಂ ಯುದ್ಧೇಷು ಕೋವಿದಃ||

ನಿನ್ನಲ್ಲಿ ದಿವ್ಯಾಸ್ತ್ರಗಳಿವೆ ಮತ್ತು ನನ್ನಲ್ಲಿಯೂ ಇವೆ ಎನ್ನುವುದರಲ್ಲಿ ಸಂಶಯವಿಲ್ಲ. ಮಹೇಷ್ವಾಸ ಸಾತ್ವತನು ಕೂಡ ನಿತ್ಯವೂ ಯುದ್ಧದಲ್ಲಿ ಕೋವಿದನಾಗಿದ್ದಾನೆ.

10004011a ತೇ ವಯಂ ಸಹಿತಾಸ್ತಾತ ಸರ್ವಾನ್ ಶತ್ರೂನ್ಸಮಾಗತಾನ್|

10004011c ಪ್ರಸಹ್ಯ ಸಮರೇ ಹತ್ವಾ ಪ್ರೀತಿಂ ಪ್ರಾಪ್ಸ್ಯಾಮ ಪುಷ್ಕಲಾಂ|

10004011e ವಿಶ್ರಮಸ್ವ ತ್ವಮವ್ಯಗ್ರಃ ಸ್ವಪ ಚೇಮಾಂ ನಿಶಾಂ ಸುಖಂ||

ಮಗೂ! ಸೇರಿರುವ ಸರ್ವ ಶತ್ರುಗಳನ್ನೂ ನಾವು ಒಟ್ಟಿಗೇ ಸಮರದಲ್ಲಿ ಹೊಡೆದು ಸಂಹರಿಸಿ ಪುಷ್ಕಲ ಸಂತೋಷವನ್ನು ಹೊಂದೋಣ! ಅವ್ಯಗ್ರನಾಗಿ ನೀನು ವಿಶ್ರಮಿಸು. ಈ ರಾತ್ರಿ ಸುಖವಾಗಿ ನಿದ್ರಿಸು!

10004012a ಅಹಂ ಚ ಕೃತವರ್ಮಾ ಚ ಪ್ರಯಾಂತಂ ತ್ವಾಂ ನರೋತ್ತಮ|

10004012c ಅನುಯಾಸ್ಯಾವ ಸಹಿತೌ ಧನ್ವಿನೌ ಪರತಾಪಿನೌ|

10004012e ರಥಿನಂ ತ್ವರಯಾ ಯಾಂತಂ ರಥಾವಾಸ್ಥಾಯ ದಂಶಿತೌ||

ತ್ವರೆಮಾಡಿ ರಥವನ್ನೇರಿ ಹೋಗುವ ನಿನ್ನನ್ನು ಧನ್ವಿಗಳೂ ಪರತಾಪಿಗಳೂ ಆದ ನಾನು ಮತ್ತು ಕೃತವರ್ಮ ಇಬ್ಬರೂ ಕವಚಗಳನ್ನು ಧರಿಸಿ ರಥವನ್ನೇರಿ ನಿನ್ನನ್ನು ಅನುಸರಿಸಿ ಬರುತ್ತೇವೆ.

10004013a ಸ ಗತ್ವಾ ಶಿಬಿರಂ ತೇಷಾಂ ನಾಮ ವಿಶ್ರಾವ್ಯ ಚಾಹವೇ|

10004013c ತತಃ ಕರ್ತಾಸಿ ಶತ್ರೂಣಾಂ ಯುಧ್ಯತಾಂ ಕದನಂ ಮಹತ್||

ಅವರ ಶಿಬಿರಕ್ಕೆ ಹೋಗಿ ನೀನು ನಿನ್ನ ಹೆಸರನ್ನು ಕೂಗಿ ಯುದ್ಧಕ್ಕೆ ಅವರನ್ನು ಕರೆಯಬೇಕು. ಆಗ ನೀನು ಶತ್ರುಗಳೊಂದಿಗೆ ಮಹಾ ಕದನವನ್ನು ಹೋರಾಡುವೆಯಂತೆ!

10004014a ಕೃತ್ವಾ ಚ ಕದನಂ ತೇಷಾಂ ಪ್ರಭಾತೇ ವಿಮಲೇಽಹನಿ|

10004014c ವಿಹರಸ್ವ ಯಥಾ ಶಕ್ರಃ ಸೂದಯಿತ್ವಾ ಮಹಾಸುರಾನ್||

ಪ್ರಭಾತವಾಗುತ್ತಲೇ ಶುಭ್ರದಿನದಲ್ಲಿ ನೀನು ಅವರೊಂದಿಗೆ ಕದನವಾಡಿ ಮಹಾಸುರರನ್ನು ಸಂಹರಿಸುತ್ತಾ ವಿಹರಿಸಿದ ಇಂದ್ರನಂತೆ ರಣರಂಗದಲ್ಲಿ ವಿಹರಿಸುವಿಯಂತೆ!

10004015a ತ್ವಂ ಹಿ ಶಕ್ತೋ ರಣೇ ಜೇತುಂ ಪಾಂಚಾಲಾನಾಂ ವರೂಥಿನೀಂ|

10004015c ದೈತ್ಯಸೇನಾಮಿವ ಕ್ರುದ್ಧಃ ಸರ್ವದಾನವಸೂದನಃ||

ಕ್ರುದ್ಧ ಸರ್ವದಾನವಸೂದನ ಇಂದ್ರನು ದೈತ್ಯಸೇನೆಯನ್ನು ಹೇಗೋ ಹಾಗೆ ಪಾಂಚಾಲರ ಸೇನೆಗಳನ್ನು ರಣದಲ್ಲಿ ಗೆಲ್ಲಲು ನೀನೊಬ್ಬನೇ ಶಕ್ತ!

10004016a ಮಯಾ ತ್ವಾಂ ಸಹಿತಂ ಸಂಖ್ಯೇ ಗುಪ್ತಂ ಚ ಕೃತವರ್ಮಣಾ|

10004016c ನ ಸಹೇತ ವಿಭುಃ ಸಾಕ್ಷಾದ್ವಜ್ರಪಾಣಿರಪಿ ಸ್ವಯಂ||

ಕೃತವರ್ಮ ಮತ್ತು ನನ್ನಿಂದ ರಕ್ಷಿತನಾದ ನಿನ್ನನ್ನು ಯುದ್ಧದಲ್ಲಿ ಸಾಕ್ಷಾತ್ ಸ್ವಯಂ ವಿಭು ವಜ್ರಪಾಣಿಯೂ ಸಹಿಸಿಕೊಳ್ಳಲಾರನು.

10004017a ನ ಚಾಹಂ ಸಮರೇ ತಾತ ಕೃತವರ್ಮಾ ತಥೈವ ಚ|

10004017c ಅನಿರ್ಜಿತ್ಯ ರಣೇ ಪಾಂಡೂನ್ವ್ಯಪಯಾಸ್ಯಾವ ಕರ್ಹಿ ಚಿತ್||

ಮಗೂ! ನಾನಾಗಲೀ ಕೃತವರ್ಮನಾಗಲೀ ಸಮರದಲ್ಲಿ ಪಾಂಡವರನ್ನು ಸೋಲಿಸದೇ ರಣದಿಂದ ಎಂದೂ ಹಿಂದಿರುಗುವುದಿಲ್ಲ,

10004018a ಹತ್ವಾ ಚ ಸಮರೇ ಕ್ಷುದ್ರಾನ್ಪಾಂಚಾಲಾನ್ಪಾಂಡುಭಿಃ ಸಹ|

10004018c ನಿವರ್ತಿಷ್ಯಾಮಹೇ ಸರ್ವೇ ಹತಾ ವಾ ಸ್ವರ್ಗಗಾ ವಯಂ||

ಸಮರದಲ್ಲಿ ಪಾಂಡವರೊಂದಿಗೆ ಕ್ಷುದ್ರ ಪಾಂಚಾಲರನ್ನು ಎಲ್ಲರನ್ನೂ ಸಂಹರಿಸಿ ಹಿಂದಿರುಗುತ್ತೇವೆ ಅಥವಾ ನಾವೇ ಹತರಾಗಿ ಸ್ವರ್ಗಕ್ಕೆ ಹೋಗುತ್ತೇವೆ!

10004019a ಸರ್ವೋಪಾಯೈಃ ಸಹಾಯಾಸ್ತೇ ಪ್ರಭಾತೇ ವಯಮೇವ ಹಿ|

10004019c ಸತ್ಯಮೇತನ್ಮಹಾಬಾಹೋ ಪ್ರಬ್ರವೀಮಿ ತವಾನಘ||

ಮಹಾಬಾಹೋ! ಅನಘ! ಬೆಳಗಾಗುತ್ತಲೇ ನಿನ್ನ ಸರ್ವ ಉಪಾಯಗಳಲ್ಲಿ ನಾವು ಸಹಾಯಮಾಡುತ್ತೇವೆ. ಸತ್ಯವನ್ನೇ ಹೇಳುತ್ತಿದ್ದೇನೆ!”

10004020a ಏವಮುಕ್ತಸ್ತತೋ ದ್ರೌಣಿರ್ಮಾತುಲೇನ ಹಿತಂ ವಚಃ|

10004020c ಅಬ್ರವೀನ್ಮಾತುಲಂ ರಾಜನ್ಕ್ರೋಧಾದುದ್ವೃತ್ಯ ಲೋಚನೇ||

ರಾಜನ್! ಸೋದರಮಾವನ ಈ ಹಿತಮಾತನ್ನು ಕೇಳಿ ಕ್ರೋಧದಿಂದ ಕಣ್ಣುಗಳು ಉಬ್ಬಿದ ದ್ರೌಣಿಯು ಈ ಮಾತುಗಳನ್ನಾಡಿದನು:

10004021a ಆತುರಸ್ಯ ಕುತೋ ನಿದ್ರಾ ನರಸ್ಯಾಮರ್ಷಿತಸ್ಯ ಚ|

10004021c ಅರ್ಥಾಂಶ್ಚಿಂತಯತಶ್ಚಾಪಿ ಕಾಮಯಾನಸ್ಯ ವಾ ಪುನಃ||

“ಆತುರನಾದವನಿಗೆ, ಕುಪಿತನಾದ ಮನುಷ್ಯನಿಗೆ, ಉದ್ದೇಶಗಳ ಕುರಿತು ಚಿಂತಿಸುವವನಿಗೆ ಮತ್ತು ಆಸೆಗಳಿರುವವನಿಗೆ ಎಲ್ಲಿಂದ ನಿದ್ರೆಬರಬೇಕು?

10004022a ತದಿದಂ ಸಮನುಪ್ರಾಪ್ತಂ ಪಶ್ಯ ಮೇಽದ್ಯ ಚತುಷ್ಟಯಂ|

10004022c ಯಸ್ಯ ಭಾಗಶ್ಚತುರ್ಥೋ ಮೇ ಸ್ವಪ್ನಮಹ್ನಾಯ ನಾಶಯೇತ್||

ಈ ನಾಲ್ಕರಲ್ಲಿ ಒಂದನ್ನು ಪಡೆದಿದ್ದರೂ ಅದು ನಿದ್ರೆಯನ್ನು ನಾಶಗೊಳಿಸುವಾಗ ಇಂದು ಈ ನಾಲ್ಕನ್ನೂ ಹೊಂದಿ ನಾನು ಪೀಡೆಗೊಳಗಾಗಿರುವುದು ನಿನಗೆ ಕಾಣುತ್ತಿಲ್ಲವೇ?

10004023a ಕಿಂ ನಾಮ ದುಃಖಂ ಲೋಕೇಽಸ್ಮಿನ್ಪಿತುರ್ವಧಮನುಸ್ಮರನ್|

10004023c ಹೃದಯಂ ನಿರ್ದಹನ್ಮೇಽದ್ಯ ರಾತ್ರ್ಯಹಾನಿ ನ ಶಾಮ್ಯತಿ||

ತಂದೆಯ ವಧೆಯನ್ನು ಸ್ಮರಿಸಿಕೊಂಡು ಆಗುವ ಈ ದುಃಖಕ್ಕೆ ಲೋಕದಲ್ಲಿ ಯಾವ ಹೆಸರಿದೆ? ಇಂದು ನನ್ನ ಹೃದಯವನ್ನು ಸುಡುತ್ತಿರುವ ಈ ದುಃಖವು ರಾತ್ರಿಯಾಗಲೀ ಹಗಲಾಗಲೀ ಶಾಂತವಾಗುವುದಿಲ್ಲ.

10004024a ಯಥಾ ಚ ನಿಹತಃ ಪಾಪೈಃ ಪಿತಾ ಮಮ ವಿಶೇಷತಃ|

10004024c ಪ್ರತ್ಯಕ್ಷಮಪಿ ತೇ ಸರ್ವಂ ತನ್ಮೇ ಮರ್ಮಾಣಿ ಕೃಂತತಿ||

ಪಾಪಿಗಳಿಂದ ನನ್ನ ತಂದೆಯು ಹತನಾದುದನ್ನು ವಿಶೇಷತಃ ನೀನು ಪ್ರತ್ಯಕ್ಷವಾಗಿ ನೋಡಿದ್ದೀಯೆ. ಅದು ನನ್ನ ಮರ್ಮಗಳನ್ನು ಕತ್ತರಿಸುತ್ತಿದೆ.

10004025a ಕಥಂ ಹಿ ಮಾದೃಶೋ ಲೋಕೇ ಮುಹೂರ್ತಮಪಿ ಜೀವತಿ|

10004025c ದ್ರೋಣೋ ಹತೇತಿ ಯದ್ವಾಚಃ ಪಾಂಚಾಲಾನಾಂ ಶೃಣೋಮ್ಯಹಂ||

“ದ್ರೋಣನು ಹತನಾದನು!” ಎಂದು ಪಾಂಚಾಲರು ಹೇಳಿದುದನ್ನು ಕೇಳಿಯೂ ನನ್ನಂಥವನು ಮುಹೂರ್ತಕಾಲವಾದರೂ ಲೋಕದಲ್ಲಿ ಹೇಗೆ ಜೀವವನ್ನಿಟ್ಟುಕೊಂಡಿರಬಲ್ಲನು?

10004026a ದೃಷ್ಟದ್ಯುಮ್ನಮಹತ್ವಾಜೌ ನಾಹಂ ಜೀವಿತುಮುತ್ಸಹೇ|

10004026c ಸ ಮೇ ಪಿತೃವಧಾದ್ವಧ್ಯಃ ಪಾಂಚಾಲಾ ಯೇ ಚ ಸಂಗತಾಃ||

ಧೃಷ್ಟದ್ಯುಮ್ನನನ್ನು ಕೊಲ್ಲುವವರೆಗೆ ನನಗೆ ಜೀವನದಲ್ಲಿ ಉತ್ಸಾಹವಿಲ್ಲ! ನನ್ನ ತಂದೆಯನ್ನು ಕೊಂದಿರುವುದರಿಂದ ಆ ಪಾಂಚಾಲನು ತನ್ನ ಅನುಯಾಯಿಗಳೊಂದಿಗೆ ವಧಿಸಲ್ಪಡಬೇಕು!

10004027a ವಿಲಾಪೋ ಭಗ್ನಸಕ್ಥಸ್ಯ ಯಸ್ತು ರಾಜ್ಞೋ ಮಯಾ ಶ್ರುತಃ|

10004027c ಸ ಪುನರ್ಹೃದಯಂ ಕಸ್ಯ ಕ್ರೂರಸ್ಯಾಪಿ ನ ನಿರ್ದಹೇತ್||

ನಾನು ಕೇಳಿದಂತೆ ತೊಡೆಮುರಿದು ಬಿದ್ದಿರುವ ರಾಜನ ವಿಲಾಪವನ್ನು ಕೇಳಿದ ಬೇರೆ ಯಾವ ಹೃದಯವು, ಅವನು ಎಷ್ಟೇ ಕ್ರೂರನಾಗಿದ್ದರೂ, ಸುಡುವುದಿಲ್ಲ?

10004028a ಕಸ್ಯ ಹ್ಯಕರುಣಸ್ಯಾಪಿ ನೇತ್ರಾಭ್ಯಾಮಶ್ರು ನಾವ್ರಜೇತ್|

10004028c ನೃಪತೇರ್ಭಗ್ನಸಕ್ಥಸ್ಯ ಶ್ರುತ್ವಾ ತಾದೃಗ್ವಚಃ ಪುನಃ||

ತೊಡೆಮುರಿದಿರುವ ನೃಪತಿಯ ಆ ಮಾತುಗಳನ್ನು ಕೇಳಿದ ಯಾರ ಕಣ್ಣುಗಳು, ಅವನು ಎಷ್ಟೇ ನಿಷ್ಕರುಣಿಯಾಗಿದ್ದರೂ, ಕಂಬನಿಯನ್ನು ಸುರಿಸುವುದಿಲ್ಲ?

10004029a ಯಶ್ಚಾಯಂ ಮಿತ್ರಪಕ್ಷೋ ಮೇ ಮಯಿ ಜೀವತಿ ನಿರ್ಜಿತಃ|

10004029c ಶೋಕಂ ಮೇ ವರ್ಧಯತ್ಯೇಷ ವಾರಿವೇಗ ಇವಾರ್ಣವಂ|

10004029e ಏಕಾಗ್ರಮನಸೋ ಮೇಽದ್ಯ ಕುತೋ ನಿದ್ರಾ ಕುತಃ ಸುಖಂ||

ನನ್ನ ಮಿತ್ರಪಕ್ಷನಾಗಿರುವವನು ನಾನು ಜೀವಿತವಾಗಿರುವಾಗಲೇ ಸೋತುಹೋದನೆಂದರೆ ಭರತದಲ್ಲಿರುವ ಸಮುದ್ರದಂತೆ ನನ್ನ ಶೋಕವು ಉಕ್ಕಿಬರುತ್ತದೆ! ಏಕಾಗ್ರಮನಸ್ಕನಾಗಿರುವ ನನಗೆ ಇಂದು ನಿದ್ರೆಯೆಲ್ಲಿಂದ? ಸುಖವೆಲ್ಲಿಂದ?

10004030a ವಾಸುದೇವಾರ್ಜುನಾಭ್ಯಾಂ ಹಿ ತಾನಹಂ ಪರಿರಕ್ಷಿತಾನ್||

10004030c ಅವಿಷಹ್ಯತಮಾನ್ಮನ್ಯೇ ಮಹೇಂದ್ರೇಣಾಪಿ ಮಾತುಲ|

ಮಾವ! ವಾಸುದೇವ-ಅರ್ಜುನರು ರಕ್ಷಿಸುತ್ತಿರುವವರೆಗೆ ಮಹೇಂದ್ರನು ಕೂಡ ಅವರನ್ನು ಸೋಲಿಸಲಾರನೆಂದು ನನಗೆ ಗೊತ್ತು.

10004031a ನ ಚಾಸ್ಮಿ ಶಕ್ಯಃ ಸಂಯಂತುಮಸ್ಮಾತ್ಕಾರ್ಯಾತ್ಕಥಂ ಚನ||

10004031c ನ ತಂ ಪಶ್ಯಾಮಿ ಲೋಕೇಽಸ್ಮಿನ್ಯೋ ಮಾಂ ಕಾರ್ಯಾನ್ನಿವರ್ತಯೇತ್|

10004031e ಇತಿ ಮೇ ನಿಶ್ಚಿತಾ ಬುದ್ಧಿರೇಷಾ ಸಾಧುಮತಾ ಚ ಮೇ||

ಆದುದರಿಂದ ನನ್ನ ಈ ಕಾರ್ಯದಿಂದ ಹಿಂದೆಸರಿಯುವುದು ಎಂದಿಗೂ ಸಾಧ್ಯವಿಲ್ಲ. ಈ ಲೋಕದಲ್ಲಿ ನನ್ನ ಈ ಕಾರ್ಯದಿಂದ ತಡೆಯುವವನನ್ನು ಯಾರನ್ನೂ ಕಾಣೆ! ಇದು ನನ್ನ ನಿಶ್ಚಯ! ಈ ಯೋಚನೆಯು ಒಳ್ಳೆಯದು ಎಂದು ನನಗನ್ನಿಸುತ್ತಿದೆ.

10004032a ವಾರ್ತ್ತಿಕೈಃ ಕಥ್ಯಮಾನಸ್ತು ಮಿತ್ರಾಣಾಂ ಮೇ ಪರಾಭವಃ|

10004032c ಪಾಂಡವಾನಾಂ ಚ ವಿಜಯೋ ಹೃದಯಂ ದಹತೀವ ಮೇ||

ವಾರ್ತಾಕಾರರು ಹೇಳಿದ ನನ್ನ ಮಿತ್ರರ ಪರಾಭವ ಮತ್ತು ಪಾಂಡವರ ವಿಜಯವು ನನ್ನ ಹೃದಯವನ್ನು ಸುಡುತ್ತಿದೆ.

10004033a ಅಹಂ ತು ಕದನಂ ಕೃತ್ವಾ ಶತ್ರೂಣಾಮದ್ಯ ಸೌಪ್ತಿಕೇ|

10004033c ತತೋ ವಿಶ್ರಮಿತಾ ಚೈವ ಸ್ವಪ್ತಾ ಚ ವಿಗತಜ್ವರಃ||

ನಾನಾದರೋ ಇಂದು ಕದನಗೈದು ಮಲಗಿರುವ ಶತ್ರುಗಳನ್ನು ಸಂಹರಿಸುತ್ತೇನೆ. ನಂತರವೇ ನಾನು ಉದ್ವೇಗಗಳಿಲ್ಲದೇ ನಿದ್ರಿಸುತ್ತೇನೆ ಮತ್ತು ವಿಶ್ರಮಿಸುತ್ತೇನೆ!”

ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ದ್ರೌಣಿಮಂತ್ರಣಾಯಾಂ ಚತುರ್ಥೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ದ್ರೌಣಿಮಂತ್ರಣ ಎನ್ನುವ ನಾಲ್ಕನೇ ಅಧ್ಯಾಯವು.

Comments are closed.