ಸೌಪ್ತಿಕಪರ್ವ
೨
ಕೃಪನು ದುರ್ಯೋಧನನನ್ನು ನಿಂದಿಸುತ್ತಾ ತಾವು ಧೃತರಾಷ್ಟ್ರ-ಗಾಂಧಾರೀ-ವಿದುರರಲ್ಲಿಗೆ ಹೋಗಿ ಮುಂದೆ ಮಾಡುವುದರ ಕುರಿತು ಕೇಳಬೇಕೆಂದು ಹೇಳಿದುದು (೧-೩೩).
10002001 ಕೃಪ ಉವಾಚ|
10002001a ಶ್ರುತಂ ತೇ ವಚನಂ ಸರ್ವಂ ಹೇತುಯುಕ್ತಂ ಮಯಾ ವಿಭೋ|
10002001c ಮಮಾಪಿ ತು ವಚಃ ಕಿಂ ಚಿಚ್ಚೃಣುಷ್ವಾದ್ಯ ಮಹಾಭುಜ||
ಕೃಪನು ಹೇಳಿದನು: “ವಿಭೋ! ಮಹಾಭುಜ! ನೀನು ಹೇಳಿದ ಎಲ್ಲವನ್ನೂ ನಾನು ಕೇಳಿದೆನು. ಈಗ ನೀನು ನನ್ನ ಮಾತುಗಳಲ್ಲಿ ಕಿಂಚಿತ್ತನ್ನಾದರೂ ಕೇಳು!
10002002a ಆಬದ್ಧಾ ಮಾನುಷಾಃ ಸರ್ವೇ ನಿರ್ಬಂಧಾಃ ಕರ್ಮಣೋರ್ದ್ವಯೋಃ|
10002002c ದೈವೇ ಪುರುಷಕಾರೇ ಚ ಪರಂ ತಾಭ್ಯಾಂ ನ ವಿದ್ಯತೇ||
ಮನುಷ್ಯರೆಲ್ಲರೂ ಎರಡು ಕರ್ಮಗಳಿಂದ ಬದ್ಧರಾಗಿರುತ್ತಾರೆ – ದೈವ ಮತ್ತು ಪುರುಷಕರ್ಮ. ಇವೆರಡರ ಹೊರತಾಗಿ ಯಾವುದರಿಂದಲೂ ಬದ್ಧನಾಗಿರುವುದಿಲ್ಲ.
10002003a ನ ಹಿ ದೈವೇನ ಸಿಧ್ಯಂತಿ ಕರ್ಮಾಣ್ಯೇಕೇನ ಸತ್ತಮ|
10002003c ನ ಚಾಪಿ ಕರ್ಮಣೈಕೇನ ದ್ವಾಭ್ಯಾಂ ಸಿದ್ಧಿಸ್ತು ಯೋಗತಃ||
ಸತ್ತಮ! ದೈವವೊಂದರಿಂದಲೇ ಕಾರ್ಯಗಳು ಸಿದ್ಧಿಸುವುದಿಲ್ಲ. ಹಾಗೆಯೇ ಕೇವಲ ಕರ್ಮಗಳನ್ನು ಮಾಡುವುದರಿಂದಲೂ ಕಾರ್ಯಗಳು ಸಿದ್ಧಿಸುವುದಿಲ್ಲ. ಈ ಎರಡೂ ಒಂದುಗೂಡಿದಾಗಲೇ ಕಾರ್ಯಗಳು ಸಿದ್ಧಿಯಾಗುತ್ತವೆ.
10002004a ತಾಭ್ಯಾಮುಭಾಭ್ಯಾಂ ಸರ್ವಾರ್ಥಾ ನಿಬದ್ಧಾ ಹ್ಯಧಮೋತ್ತಮಾಃ|
10002004c ಪ್ರವೃತ್ತಾಶ್ಚೈವ ದೃಶ್ಯಂತೇ ನಿವೃತ್ತಾಶ್ಚೈವ ಸರ್ವಶಃ||
ಈ ಎರಡರಿಂದಲೇ ಉತ್ತಮ ಮತ್ತು ಅಧಮ ಕರ್ಮಗಳೆಲ್ಲವೂ ಬದ್ಧವಾಗಿವೆ. ಎಲ್ಲೆಡೆ ಕಾಣುವ ಆಗುಹೋಗುಗಳೂ ಇವುಗಳಿಂದಲೇ ನಡೆಯುತ್ತವೆ.
10002005a ಪರ್ಜನ್ಯಃ ಪರ್ವತೇ ವರ್ಷನ್ಕಿಂ ನು ಸಾಧಯತೇ ಫಲಂ|
10002005c ಕೃಷ್ಟೇ ಕ್ಷೇತ್ರೇ ತಥಾವರ್ಷನ್ಕಿಂ ನು ಸಾಧಯತೇ ಫಲಂ||
ಪರ್ಜನ್ಯನು ಪರ್ವತದ ಮೇಲೆ ಮಳೆಸುರಿಸಿದರೆ ಯಾವ ಫಲವು ದೊರಕುತ್ತದೆ? ಹಾಗೆಯೇ ಫಲವತ್ತಾದ ಭೂಮಿಯಮೇಲೆ ಮಳೆಸುರಿಯದೇ ಇದ್ದರೆ ಯಾವ ಫಲವು ದೊರಕುತ್ತದೆ?[1]
10002006a ಉತ್ಥಾನಂ ಚಾಪ್ಯದೈವಸ್ಯ ಹ್ಯನುತ್ಥಾನಸ್ಯ ದೈವತಂ|
10002006c ವ್ಯರ್ಥಂ ಭವತಿ ಸರ್ವತ್ರ ಪೂರ್ವಂ ಕಸ್ತತ್ರ ನಿಶ್ಚಯಃ||
ದೈವಬಲವಿಲ್ಲದ ಪುರುಷಪ್ರಯತ್ನವೂ ಪುರುಷಯತ್ನವಿಲ್ಲದ ದೈವಬಲವೂ ಸರ್ವಪ್ರಕಾರದಲ್ಲಿ ವ್ಯರ್ಥವಾಗುತ್ತದೆ. ಆದರೆ ಮೊದಲನೆಯ ದೈವವಿಲ್ಲದ ಪುರುಷಪ್ರಯತ್ನವು ವ್ಯರ್ಥವೆನ್ನುವುದು ನಿಶ್ಚಯವೇ ಸರಿ!
10002007a ಪ್ರವೃಷ್ಟೇ ಚ ಯಥಾ ದೇವೇ ಸಮ್ಯಕ್ಕ್ಷೇತ್ರೇ ಚ ಕರ್ಷಿತೇ|
10002007c ಬೀಜಂ ಮಹಾಗುಣಂ ಭೂಯಾತ್ತಥಾ ಸಿದ್ಧಿರ್ಹಿ ಮಾನುಷೀ||
ಚೆನ್ನಾಗಿ ಉತ್ತಿರುವ ಹೊಲದಲ್ಲಿ ಮಳೆಸುರಿದರೆ ಬೀಜವು ಮಹಾಫಲದಾಯಕವಾಗುತ್ತದೆ. ಹಾಗೆಯೇ ಮನುಷ್ಯನ ಕಾರ್ಯಸಿದ್ಧಿಯು ದೈವದ ಸಹಯೋಗದಿಂದಲೇ ಸಾಧ್ಯ.
10002008a ತಯೋರ್ದೈವಂ ವಿನಿಶ್ಚಿತ್ಯ ಸ್ವವಶೇನೈವ ವರ್ತತೇ|
10002008c ಪ್ರಾಜ್ಞಾಃ ಪುರುಷಕಾರಂ ತು ಘಟಂತೇ ದಾಕ್ಷ್ಯಮಾಸ್ಥಿತಾಃ||
ಇವೆರಡರಲ್ಲಿ ದೈವವು ಸ್ವಯಂ ನಿಶ್ಚಯಿಸಿ ವರ್ತಿಸುತ್ತದೆ. ತಮ್ಮ ಸಾಮರ್ಥ್ಯವನ್ನು ಅವಲಂಬಿಸಿರುವವರು ಪುರುಷಪ್ರಯತ್ನವೇ ಹೆಚ್ಚೆಂದು ತಿಳಿತು ನಡೆಯುತ್ತಿರುತ್ತಾರೆ.
10002009a ತಾಭ್ಯಾಂ ಸರ್ವೇ ಹಿ ಕಾರ್ಯಾರ್ಥಾ ಮನುಷ್ಯಾಣಾಂ ನರರ್ಷಭ|
10002009c ವಿಚೇಷ್ಟಂತಶ್ಚ ದೃಶ್ಯಂತೇ ನಿವೃತ್ತಾಶ್ಚ ತಥೈವ ಹಿ||
ನರರ್ಷಭ! ಮನುಷ್ಯರ ಸರ್ವ ಕಾರ್ಯಾರ್ಥಗಳೂ ಇವೆರಡರಿಂದ ನಡೆಯುತ್ತಿರುವಂತೆ ಮತ್ತು ನಿಲ್ಲುತ್ತಿರುವಂತೆ ಕಾಣುತ್ತವೆ.
10002010a ಕೃತಃ ಪುರುಷಕಾರಃ ಸನ್ಸೋಽಪಿ ದೈವೇನ ಸಿಧ್ಯತಿ|
10002010c ತಥಾಸ್ಯ ಕರ್ಮಣಃ ಕರ್ತುರಭಿನಿರ್ವರ್ತತೇ ಫಲಂ||
ಪುರುಷಪ್ರಯತ್ನವೂ ಕೂಡ ದೈವಸಂಕಲ್ಪದಿಂದಲೇ ಮಾಡಲ್ಪಡುತ್ತದೆ. ದೈವದ ಪ್ರೇರಣೆಗೆ ಅನುಸಾರವಾಗಿ ಕಾರ್ಯವನ್ನು ಮಾಡುತ್ತಿದ್ದರೆ ಅದು ಫಲವನ್ನು ನೀಡುತ್ತದೆ.
10002011a ಉತ್ಥಾನಂ ತು ಮನುಷ್ಯಾಣಾಂ ದಕ್ಷಾಣಾಂ ದೈವವರ್ಜಿತಂ|
10002011c ಅಫಲಂ ದೃಶ್ಯತೇ ಲೋಕೇ ಸಮ್ಯಗಪ್ಯುಪಪಾದಿತಂ||
ದಕ್ಷ ಮನುಷ್ಯರ ಪ್ರಯತ್ನಗಳೂ ಕೂಡ ದೈವದಿಂದ ವರ್ಜಿತಗೊಂಡರೆ ಅಫಲವಾಗುತ್ತದೆ ಎನ್ನುವುದಕ್ಕೆ ಅನೇಕ ಉದಾಹರಣೆಗಳು ಲೋಕದಲ್ಲಿ ಕಾಣಸಿಗುತ್ತವೆ.
10002012a ತತ್ರಾಲಸಾ ಮನುಷ್ಯಾಣಾಂ ಯೇ ಭವಂತ್ಯಮನಸ್ವಿನಃ|
10002012c ಉತ್ಥಾನಂ ತೇ ವಿಗರ್ಹಂತಿ ಪ್ರಾಜ್ಞಾನಾಂ ತನ್ನ ರೋಚತೇ||
ಆಲಸ್ಯ ಮನುಷ್ಯರು ಇದು ಹೀಗಾಗುತ್ತದೆಯೆಂದು ತಿಳಿದು ಪ್ರಯತ್ನವನ್ನೇ ಮಾಡಲು ಹಿಂಜರಿಯುತ್ತಾರೆ. ಪ್ರಾಜ್ಞರಿಗೆ ಅದು ಸರಿಯೆನಿಸುವುದಿಲ್ಲ.
10002013a ಪ್ರಾಯಶೋ ಹಿ ಕೃತಂ ಕರ್ಮ ಅಫಲಂ ದೃಶ್ಯತೇ ಭುವಿ|
10002013c ಅಕೃತ್ವಾ ಚ ಪುನರ್ದುಃಖಂ ಕರ್ಮ ದೃಶ್ಯೇನ್ಮಹಾಫಲಂ||
ಪ್ರಾಯಶಃ ಭುವಿಯಲ್ಲಿ ಮಾಡುವ ಕರ್ಮಗಳು ಅಫಲವಾದಂತೆ ಕಾಣುತ್ತವೆ. ಆದರೆ ಕರ್ಮಗಳನ್ನು ಮಾಡದೇ ಇದ್ದರೆ ಪುನಃ ಪುನಃ ದುಃಖಗಳು ದೊರೆಯುತ್ತವೆ. ಕರ್ಮಗಳಲ್ಲಿ ತೊಡಗಿರುವುದೇ ಮಹಾಫಲದಾಯಕವೆಂದು ಕಾಣುತ್ತದೆ.
10002014a ಚೇಷ್ಟಾಮಕುರ್ವಽಲ್ಲಭತೇ ಯದಿ ಕಿಂ ಚಿದ್ಯದೃಚ್ಚಯಾ|
10002014c ಯೋ ವಾ ನ ಲಭತೇ ಕೃತ್ವಾ ದುರ್ದಶೌ ತಾವುಭಾವಪಿ||
ಪ್ರಯತ್ನಮಾಡದೇ ಕೇವಲ ದೈವೇಚ್ಛೆಯಿಂದಲೇ ಫಲವನ್ನು ಅನುಭವಿಸುವವರು ಅಥವಾ ಪ್ರಯತ್ನಮಾಡುತ್ತಿದ್ದರೂ ಫಲವನ್ನು ಅನುಭವಿಸದೇ ಇರತಕ್ಕವರು - ಈ ಇಬ್ಬರನ್ನೂ ಲೋಕದಲ್ಲಿ ಕಾಣುವುದು ದುರ್ಲಭ.
10002015a ಶಕ್ನೋತಿ ಜೀವಿತುಂ ದಕ್ಷೋ ನಾಲಸಃ ಸುಖಮೇಧತೇ|
10002015c ದೃಶ್ಯಂತೇ ಜೀವಲೋಕೇಽಸ್ಮಿನ್ದಕ್ಷಾಃ ಪ್ರಾಯೋ ಹಿತೈಷಿಣಃ||
ದಕ್ಷನಾದವನು ಸುಖವಾಗಿ ಜೀವಿಸಬಹುದು. ಆದರೆ ಆಲಸಿಯು ಸುಖವನ್ನು ಪಡೆಯುವುದಿಲ್ಲ. ಈ ಜೀವಲೋಕದಲ್ಲಿ ದಕ್ಷರಾಗಿರುವವರು ಪ್ರಾಯಶಃ ಹಿತೈಷಿಗಳೂ ಆಗಿರುತ್ತಾರೆ.
10002016a ಯದಿ ದಕ್ಷಃ ಸಮಾರಮ್ಭಾತ್ಕರ್ಮಣಾಂ ನಾಶ್ನುತೇ ಫಲಂ|
10002016c ನಾಸ್ಯ ವಾಚ್ಯಂ ಭವೇತ್ಕಿಂ ಚಿತ್ತತ್ತ್ವಂ ಚಾಪ್ಯಧಿಗಚ್ಚತಿ||
ಒಂದುವೇಳೆ ದಕ್ಷನಾದವನು ಕರ್ಮಗಳನ್ನು ಪ್ರಾರಂಭಿಸಿ ಫಲವನ್ನು ಪಡೆಯದೇ ಇದ್ದರೆ ಅವನು ನಿಂದನೆಗೆ ಒಳಗಾಗುವುದಿಲ್ಲ. ಅದಕ್ಕೆ ಕಿಂಚಿತ್ತಾದರೂ ಫಲವು ಲಭಿಸಿಯೇ ಲಭಿಸುತ್ತದೆ.
10002017a ಅಕೃತ್ವಾ ಕರ್ಮ ಯೋ ಲೋಕೇ ಫಲಂ ವಿಂದತಿ ವಿಷ್ಟಿತಃ|
10002017c ಸ ತು ವಕ್ತವ್ಯತಾಂ ಯಾತಿ ದ್ವೇಷ್ಯೋ ಭವತಿ ಪ್ರಾಯಶಃ||
ಆದರೆ ಕರ್ಮಗಳನ್ನು ಮಾಡದೆಯೇ ಕೇವಲ ಅದೃಷ್ಟವಶದಿಂದ ಫಲವನ್ನು ಅನುಭವಿಸುವವನು ಲೋಕನಿಂದನೆಗೆ ಒಳಗಾಗುತ್ತಾನೆ. ಅಂಥವನನ್ನು ಪ್ರಾಯಶಃ ಜನರು ದ್ವೇಷಿಸುತ್ತಾರೆ.
10002018a ಏವಮೇತದನಾದೃತ್ಯ ವರ್ತತೇ ಯಸ್ತ್ವತೋಽನ್ಯಥಾ|
10002018c ಸ ಕರೋತ್ಯಾತ್ಮನೋಽನರ್ಥಾನ್ನೈಷ ಬುದ್ಧಿಮತಾಂ ನಯಃ||
ಹೀಗೆ ದೈವ ಮತ್ತು ಪುರುಷಕಾರಗಳ ಸಹಯೋಗವನ್ನು ಅನಾದರಿಸಿ ಅದಕ್ಕೆ ವಿರುದ್ಧವಾಗಿ ವರ್ತಿಸುವವನು ತನಗೆ ತಾನೇ ಅನರ್ಥವನ್ನು ತಂದುಕೊಳ್ಳುತ್ತಾನೆ. ಪ್ರಯತ್ನವನ್ನು ಮಾಡುತ್ತಾ ಕಾರ್ಯಸಿದ್ಧಿಗೆ ದೈವದ ಒಲುಮೆಯನ್ನು ಪಡೆದುಕೊಳ್ಳಬೇಕೆಂಬುದು ಬುದ್ಧಿವಂತರ ನೀತಿಯಾಗಿದೆ.
10002019a ಹೀನಂ ಪುರುಷಕಾರೇಣ ಯದಾ ದೈವೇನ ವಾ ಪುನಃ|
10002019c ಕಾರಣಾಭ್ಯಾಮಥೈತಾಭ್ಯಾಮುತ್ಥಾನಮಫಲಂ ಭವೇತ್|
10002019e ಹೀನಂ ಪುರುಷಕಾರೇಣ ಕರ್ಮ ತ್ವಿಹ ನ ಸಿಧ್ಯತಿ||
ಪುರುಷಪ್ರಯತ್ನವಿಲ್ಲದೇ ಅದೃಷ್ಟದ ನಿರೀಕ್ಷಣೆ ಅಥವಾ ಪ್ರಯತ್ನಿಸಿದರೂ ದೈವದ ಒಲುಮೆಯಿಲ್ಲದೇ ಇರುವುದು – ಈ ಎರಡು ಕಾರಣಗಳಿಂದಲೂ ಮನುಷ್ಯನ ಪ್ರಯತ್ನಗಳು ನಿಷ್ಫಲವಾಗುತ್ತವೆ. ಪುರುಷಪ್ರಯತ್ನವಿಲ್ಲದೇ ಈ ಲೋಕದಲ್ಲಿ ಯಾವ ಕರ್ಮಗಳೂ ಸಿದ್ಧಿಸುವುದಿಲ್ಲ.
10002020a ದೈವತೇಭ್ಯೋ ನಮಸ್ಕೃತ್ಯ ಯಸ್ತ್ವರ್ಥಾನ್ಸಮ್ಯಗೀಹತೇ|
10002020c ದಕ್ಷೋ ದಾಕ್ಷಿಣ್ಯಸಂಪನ್ನೋ ನ ಸ ಮೋಘಂ ವಿಹನ್ಯತೇ||
ದೇವತೆಗಳಿಗೆ ನಮಸ್ಕರಿಸಿ ಪ್ರಯತ್ನಿಸುವ ದಕ್ಷ ದಾಕ್ಷಿಣ್ಯಸಂಪನ್ನನು ಸಿದ್ಧಿಯನ್ನು ಪಡೆಯುತ್ತಾನೆ. ಎಂದೂ ಅಸಫಲತೆಯನ್ನು ಹೊಂದುವುದಿಲ್ಲ.
10002021a ಸಮ್ಯಗೀಹಾ ಪುನರಿಯಂ ಯೋ ವೃದ್ಧಾನುಪಸೇವತೇ|
10002021c ಆಪೃಚ್ಚತಿ ಚ ಯಚ್ಚ್ರೇಯಃ ಕರೋತಿ ಚ ಹಿತಂ ವಚಃ||
ಈ ಸಮ್ಯಕ್ಪ್ರಯತ್ನವು ಪುನಃ ವೃದ್ಧರ ಸೇವೆಯನ್ನು ಮಾಡುವವರಿಗೆ, ಶ್ರೇಯಸ್ಕರವಾದುದೇನೆಂದು ವೃದ್ಧರಿಂದ ಕೇಳಿ ಅವರ ಹಿತವಚನದಂತೆ ಮಾಡುವವರಿಗೆ ಮಾತ್ರ ಸಾಧ್ಯವಾಗುತ್ತದೆ.
10002022a ಉತ್ಥಾಯೋತ್ಥಾಯ ಹಿ ಸದಾ ಪ್ರಷ್ಟವ್ಯಾ ವೃದ್ಧಸಂಮತಾಃ|
10002022c ತೇಽಸ್ಯ ಯೋಗೇ ಪರಂ ಮೂಲಂ ತನ್ಮೂಲಾ ಸಿದ್ಧಿರುಚ್ಯತೇ||
ಸಿದ್ಧಿಯಾಗುವ ಕಾರ್ಯದ ಕುರಿತು ವೃದ್ಧಸಮ್ಮತರನ್ನು ಸದಾ ಕೇಳಬೇಕು. ಯಾವುದರಿಂದ ಸಿದ್ಧಿಯುಂಟಾಗುತ್ತದೆಯೆಂದು ಹೇಳುವ ಅವರೇ ಆ ದೈವಯೋಗದ ಪರಮ ಮೂಲರು.
10002023a ವೃದ್ಧಾನಾಂ ವಚನಂ ಶ್ರುತ್ವಾ ಯೋ ಹ್ಯುತ್ಥಾನಂ ಪ್ರಯೋಜಯೇತ್|
10002023c ಉತ್ಥಾನಸ್ಯ ಫಲಂ ಸಮ್ಯಕ್ತದಾ ಸ ಲಭತೇಽಚಿರಾತ್||
ವೃದ್ಧರ ವಚನವನ್ನು ಕೇಳಿ ಯಾರು ಪ್ರಯತ್ನವನ್ನು ಪ್ರಾರಂಭಿಸುತ್ತಾರೋ ಅವರು ಬೇಗ ಉತ್ತಮ ಫಲವನ್ನು ಪಡೆದುಕೊಳ್ಳುತ್ತಾರೆ.
10002024a ರಾಗಾತ್ಕ್ರೋಧಾದ್ಭಯಾಲ್ಲೋಭಾದ್ಯೋಽರ್ಥಾನೀಹೇತ ಮಾನವಃ|
10002024c ಅನೀಶಶ್ಚಾವಮಾನೀ ಚ ಸ ಶೀಘ್ರಂ ಭ್ರಶ್ಯತೇ ಶ್ರಿಯಃ||
ರಾಗ-ಕ್ರೋಧ-ಭಯ-ಲೋಭಗಳಿಂದ ಅರ್ಥಸಿದ್ಧಿಯನ್ನು ಪಡೆಯಲು ಬಯಸುವ ಮಾನವನು ಅದನ್ನು ಪಡೆಯದೇ ಅಪಮಾನಕ್ಕೂ ಗುರಿಯಾಗುತ್ತಾನೆ ಮತ್ತು ಶೀಘ್ರವಾಗಿ ಐಶ್ವರ್ಯದಿಂದಲೂ ಭ್ರಷ್ಟನಾಗುತ್ತಾನೆ.
10002025a ಸೋಽಯಂ ದುರ್ಯೋಧನೇನಾರ್ಥೋ ಲುಬ್ಧೇನಾದೀರ್ಘದರ್ಶಿನಾ|
10002025c ಅಸಮರ್ಥ್ಯ ಸಮಾರಬ್ಧೋ ಮೂಢತ್ವಾದವಿಚಿಂತಿತಃ||
ಈ ದುರ್ಯೋಧನನಾದರೋ ಮಹಾಲೋಭಿ. ಮುಂದೇನಾಗುವುದೆಂಬುದರ ಬಗೆಗೆ ತಿಳುವಳಿಕೆಯಿಲ್ಲದವನು. ಅಸಮರ್ಥನು. ದುಡುಕುವವನು. ಮೂಢತ್ವದಿಂದಾಗಿ ಯೋಚನೆಯನ್ನೇ ಮಾಡದವನು.
10002026a ಹಿತಬುದ್ಧೀನನಾದೃತ್ಯ ಸಂಮಂತ್ರ್ಯಾಸಾಧುಭಿಃ ಸಹ|
10002026c ವಾರ್ಯಮಾಣೋಽಕರೋದ್ವೈರಂ ಪಾಂಡವೈರ್ಗುಣವತ್ತರೈಃ||
ಅವನಿಗೆ ಹಿತವಾಗಬೇಕೆಂಬ ಮನಸ್ಸಿದ್ದವರ ಮಾತುಗಳೆಲ್ಲವನ್ನೂ ಅವನು ಅನಾದರಿಸಿ, ದುಷ್ಟರೊಡನೆ ಸಮಾಲೋಚನೆ ನಡೆಸಿ, ಬೇಡವೆಂದು ಎಷ್ಟು ಹೇಳಿದರೂ ಗುಣದಲ್ಲಿ ಅವನಿಗಿಂತಲೂ ವರಿಷ್ಟರಾದ ಪಾಂಡವರೊಂದಿಗೆ ವೈರವನ್ನು ಸಾಧಿಸಿದನು.
10002027a ಪೂರ್ವಮಪ್ಯತಿದುಃಶೀಲೋ ನ ದೈನ್ಯಂ ಕರ್ತುಮರ್ಹತಿ|
10002027c ತಪತ್ಯರ್ಥೇ ವಿಪನ್ನೇ ಹಿ ಮಿತ್ರಾಣಾಮಕೃತಂ ವಚಃ||
ಮೊದಲಿನಿಂದಲೂ ಅವನು ದುಃಶೀಲನಾಗಿದ್ದನು. ದೈನ್ಯವೆಂಬುದೇ ಇರಲಿಲ್ಲ. ಮಿತ್ರರ ವಚನದಂತೆ ಮಾಡುತ್ತಿರಲಿಲ್ಲ. ಅದರ ಕಾರಣದಿಂದಲೇ ಅವನು ಈ ವಿಪತ್ತಿಗೆ ಒಳಗಾಗಿದ್ದಾನೆ.
10002028a ಅನ್ವಾವರ್ತಾಮಹಿ ವಯಂ ಯತ್ತು ತಂ ಪಾಪಪೂರುಷಂ|
10002028c ಅಸ್ಮಾನಪ್ಯನಯಸ್ತಸ್ಮಾತ್ಪ್ರಾಪ್ತೋಽಯಂ ದಾರುಣೋ ಮಹಾನ್||
ನಾವು ಕೂಡ ಆ ಪಾಪಪುರುಷನನ್ನೇ ಅನುಸರಿಸಿ ನಡೆದುಕೊಂಡು ಬಂದೆವು. ಅದರಿಂದಲೇ ನಾವು ಈ ಮಹಾ ದಾರುಣ ದುಃಖವನ್ನು ಅನುಭವಿಸುತ್ತಿದ್ದೇವೆ.
10002029a ಅನೇನ ತು ಮಮಾದ್ಯಾಪಿ ವ್ಯಸನೇನೋಪತಾಪಿತಾ|
10002029c ಬುದ್ಧಿಶ್ಚಿಂತಯತಃ ಕಿಂ ಚಿತ್ಸ್ವಂ ಶ್ರೇಯೋ ನಾವಬುಧ್ಯತೇ||
ಈ ವ್ಯಸನದಿಂದ ಸಂತಾಪಗೊಂಡಿರುವ ನನ್ನ ಬುದ್ಧಿಯು ಎಷ್ಟೇ ಯೋಚಿಸಿದರೂ ನಮಗೆ ಶ್ರೇಯಸ್ಕರವಾದುದೇನೂ ತಿಳಿಯುತ್ತಿಲ್ಲ.
10002030a ಮುಹ್ಯತಾ ತು ಮನುಷ್ಯೇಣ ಪ್ರಷ್ಟವ್ಯಾಃ ಸುಹೃದೋ ಬುಧಾಃ|
10002030c ತೇ ಚ ಪೃಷ್ಟಾ ಯಥಾ ಬ್ರೂಯುಸ್ತತ್ಕರ್ತವ್ಯಂ ತಥಾ ಭವೇತ್||
ತಿಳಿದಿರುವವರು ಮೋಹಗೊಂಡಿರುವಾಗ ಸುಹೃದಯರನ್ನು ಕೇಳಬೇಕು. ಅವರು ಏನನ್ನು ಹೇಳುತ್ತಾರೋ ಅದೇ ಅವರಿಗೆ ಕರ್ತವ್ಯವಾಗುತ್ತದೆ.
10002031a ತೇ ವಯಂ ಧೃತರಾಷ್ಟ್ರಂ ಚ ಗಾಂಧಾರೀಂ ಚ ಸಮೇತ್ಯ ಹ|
10002031c ಉಪಪೃಚ್ಚಾಮಹೇ ಗತ್ವಾ ವಿದುರಂ ಚ ಮಹಾಮತಿಂ||
ಆದುದರಿಂದ ನಾವು ಒಟ್ಟಾಗಿ ಧೃತರಾಷ್ಟ್ರ, ಗಾಂಧಾರೀ ಮತ್ತು ಮಹಾಮತಿ ವಿದುರರ ಬಳಿಹೋಗಿ ಅವರನ್ನು ಕೇಳೋಣ.
10002032a ತೇ ಪೃಷ್ಟಾಶ್ಚ ವದೇಯುರ್ಯಚ್ಚ್ರೇಯೋ ನಃ ಸಮನಂತರಂ|
10002032c ತದಸ್ಮಾಭಿಃ ಪುನಃ ಕಾರ್ಯಮಿತಿ ಮೇ ನೈಷ್ಠಿಕೀ ಮತಿಃ||
ನಮ್ಮ ಕೇಳಿಕೆಗೆ ಅವರು ನಮಗೆ ಶ್ರೇಯಸ್ಕರವಾದುದನ್ನೇ ಹೇಳಿಯಾರು. ಅನಂತರ ನಾವು ಅವರ ಸಲಹೆಯಂತೆ ಮಾಡಬೇಕು. ಇದು ನನ್ನ ಬುದ್ಧಿಯ ನಿಶ್ಚಯವಾಗಿರುತ್ತದೆ.
10002033a ಅನಾರಂಭಾತ್ತು ಕಾರ್ಯಾಣಾಂ ನಾರ್ಥಃ ಸಂಪದ್ಯತೇ ಕ್ವ ಚಿತ್|
10002033c ಕೃತೇ ಪುರುಷಕಾರೇ ಚ ಯೇಷಾಂ ಕಾರ್ಯಂ ನ ಸಿಧ್ಯತಿ|
10002033e ದೈವೇನೋಪಹತಾಸ್ತೇ ತು ನಾತ್ರ ಕಾರ್ಯಾ ವಿಚಾರಣಾ||
ಕಾರ್ಯಗಳನ್ನು ಆರಂಭಿಸದೇ ಇದ್ದರೆ ಯಾವ ಪ್ರಯೋಜನವೂ ಇಲ್ಲ. ಒಂದು ವೇಳೆ ಪುರುಷಪ್ರಯತ್ನದಿಂದಲೂ ಕಾರ್ಯವು ಸಿದ್ಧಿಯಾಗದಿದ್ದರೆ ಅವರು ದೈವೋಪಹತರೆಂದೇ ತಿಳಿದುಕೊಳ್ಳಬೇಕು. ಈ ವಿಷಯದಲ್ಲಿ ಪುನಃ ವಿಮರ್ಶಿಸುವ ಅವಶ್ಯಕತೆಯೇ ಇಲ್ಲ.””
ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ದ್ರೌಣಿಕೃಪಸಂವಾದೇ ದ್ವಿತೀಯೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ದ್ರೌಣಿಕೃಪಸಂವಾದ ಎನ್ನುವ ಎರಡನೇ ಅಧ್ಯಾಯವು.
[1] ಪರ್ವತದ ಮೇಲೆ ಮಳೆಬೀಳುವುದೂ ದೈವಯೋಗದಿಂದಲೇ. ಹೊಲದ ಮೇಲೆ ಬೀಳುವ ಮಳೆಯೂ ದೈವಯೋಗದಿಂದಲೇ. ಆದರೆ ಪರ್ವತದ ಮೇಲೆ ಮಳೆಬಿದ್ದಾಗ ಅಲ್ಲಿ ಪುರುಷಪ್ರಯತ್ನದ ಸಂಯೋಗವಿಲ್ಲದೇ ಇರುವುದರಿಂದ ವ್ಯರ್ಥವಾಗಿ ಹೋಗುತ್ತದೆ. ಪುರುಷಪ್ರಯತ್ನದ ಸಂಯೋಗವಿರುವುದರಿಂದ ಹೊಲದ ಮೇಲೆ ಬೀಳುವ ಮಳೆಯು ಫಲವನ್ನು ನೀಡುತ್ತದೆ.