ಸಭಾ ಪರ್ವ: ಅನುದ್ಯೂತ ಪರ್ವ
೭೨
ಧೃತರಾಷ್ಟ್ರ-ಸಂಜಯ ಸಂವಾದ
ಚಿಂತಾಪರನಾಗಿದ್ದ ಧೃತರಾಷ್ಟ್ರನಿಗೆ ಸಂಜಯನು ತಾನೇ ಎಲ್ಲವನ್ನೂ ಮಾಡಿಕೊಂಡು ಚಿಂತಿಸುವುದಕ್ಕೆ ಅರ್ಥವಿಲ್ಲ ಎನ್ನುವುದು (೧-೭). ಧೃತರಾಷ್ಟ್ರನು ಕುರುಗಳ ಪರಾಭವವು ದೈವನಿಶ್ಚಿತವಾದುದೆಂದೂ (೮-೧೨), ಸಭೆಯಲ್ಲಿ ನಡೆದ ಘಟನೆಗಳಿಂದಾದ ತುಮುಲಗಳು, ಶಕುನಗಳು, ಮಹಾ ಆಪತ್ತನ್ನು ಸೂಚಿಸುತ್ತವೆ ಎಂದೂ (೧೩-೨೪), ವಿದುರನು ಸಭೆಯಲ್ಲಿ ಹೇಳಿದ ಮಾತನ್ನೂ (೨೫-೩೫) ಮತ್ತು ತಾನು ಅದನ್ನು ಸ್ವೀಕರಿಸಲಿಲ್ಲ (೩೬) ಎನ್ನುವುದನ್ನು ಸಂಜಯನಲ್ಲಿ ಹೇಳಿಕೊಳ್ಳುವುದು.
02072001 ವೈಶಂಪಾಯನ ಉವಾಚ|
02072001a ವನಂ ಗತೇಷು ಪಾರ್ಥೇಷು ನಿರ್ಜಿತೇಷು ದುರೋದರೇ|
02072001c ಧೃತರಾಷ್ಟ್ರಂ ಮಹಾರಾಜ ತದಾ ಚಿಂತಾ ಸಮಾವಿಶತ್||
ವೈಶಂಪಾಯನನು ಹೇಳಿದನು: “ಮಹಾರಾಜ! ದ್ಯೂತದಲ್ಲಿ ಸೋತ ಪಾರ್ಥರು ವನಕ್ಕೆ ಹೋಗಲು ಧೃತರಾಷ್ಟ್ರನನ್ನು ಚಿಂತೆಯು ಸಮಾವೇಶಗೊಂಡಿತು.
02072002a ತಂ ಚಿಂತಯಾನಮಾಸೀನಂ ಧೃತರಾಷ್ಟ್ರಂ ಜನೇಶ್ವರಂ|
02072002c ನಿಃಶ್ವಸಂತಮನೇಕಾಗ್ರಮಿತಿ ಹೋವಾಚ ಸಂಜಯಃ||
ಆ ಜನೇಶ್ವರ ಧೃತರಾಷ್ಟ್ರನು ಚಿಂತೆಯಲ್ಲಿ ನಿಟ್ಟುಸಿರು ಬಿಡುತ್ತಾ ಏಕಾಗ್ರಚಿತ್ತನಾಗಿರದೇ ಕುಳಿತುಕೊಂಡಿರಲು ಸಂಜಯನು ಹೇಳಿದನು:
02072003a ಅವಾಪ್ಯ ವಸುಸಂಪೂರ್ಣಾಂ ವಸುಧಾಂ ವಸುಧಾಧಿಪ|
02072003c ಪ್ರವ್ರಾಜ್ಯ ಪಾಂಡವಾನ್ರಾಜ್ಯಾದ್ರಾಜನ್ಕಿಮನುಶೋಚಸಿ||
“ವಸುಧಾಧಿಪ! ರಾಜನ್! ಸಂಪತ್ತಿನೊಂದಿಗೆ ಸಂಪೂರ್ಣ ವಸುಧೆಯನ್ನು ಪಡೆದು, ಪಾಂಡವರನ್ನು ಅವರ ರಾಜ್ಯದಿಂದ ಹೊರಹಾಕಿ, ಯಾಕೆ ಶೋಕಿಸುತ್ತಿದ್ದೀಯೆ?”
02072004 ಧೃತರಾಷ್ಟ್ರ ಉವಾಚ|
02072004a ಅಶೋಚ್ಯಂ ತು ಕುತಸ್ತೇಷಾಂ ಯೇಷಾಂ ವೈರಂ ಭವಿಷ್ಯತಿ|
02072004c ಪಾಂಡವೈರ್ಯುದ್ಧಶೌಂಡೈರ್ಹಿ ಮಿತ್ರವದ್ಭಿರ್ಮಹಾರಥೈಃ||
ಧೃತರಾಷ್ಟ್ರನು ಹೇಳಿದನು: “ಯುದ್ಧಶೌಂಡರನ್ನು ಮಿತ್ರರನ್ನಾಗಿ ಪಡೆದಿರುವ ಆ ಮಹಾರಥಿ ಪಾಂಡವರೊಂದಿಗೆ ವೈರವಾಗಿರುವರಿಗೆ ಚಿಂತೆ ಮಾಡಲು ಏನೂ ಇಲ್ಲವೇ?”
02072005 ಸಂಜಯ ಉವಾಚ|
02072005a ತವೇದಂ ಸುಕೃತಂ ರಾಜನ್ಮಹದ್ವೈರಂ ಭವಿಷ್ಯತಿ|
02072005c ವಿನಾಶಃ ಸರ್ವಲೋಕಸ್ಯ ಸಾನುಬಂಧೋ ಭವಿಷ್ಯತಿ||
ಸಂಜಯನು ಹೇಳಿದನು: “ರಾಜನ್! ಇದು ನೀನೇ ಮಾಡಿಕೊಂಡ ಸುಕೃತ. ಅತಿದೊಡ್ಡ ವೈರವು ಉಂಟಾಗುತ್ತದೆ. ಅನುಯಾಯಿಗಳೊಂದಿಗೆ ಸರ್ವಲೋಕದ ವಿನಾಶವಾಗುತ್ತದೆ.
02072006a ವಾರ್ಯಮಾಣೋಽಪಿ ಭೀಷ್ಮೇಣ ದ್ರೋಣೇನ ವಿದುರೇಣ ಚ|
02072006c ಪಾಂಡವಾನಾಂ ಪ್ರಿಯಾಂ ಭಾರ್ಯಾಂ ದ್ರೌಪದೀಂ ಧರ್ಮಚಾರಿಣೀಂ||
02072007a ಪ್ರಾಹಿಣೋದಾನಯೇಹೇತಿ ಪುತ್ರೋ ದುರ್ಯೋಧನಸ್ತವ|
02072007c ಸೂತಪುತ್ರಂ ಸುಮಂದಾತ್ಮಾ ನಿರ್ಲಜ್ಜಃ ಪ್ರಾತಿಕಾಮಿನಂ||
ಭೀಷ್ಮ, ದ್ರೋಣ ಮತ್ತು ವಿದುರರು ಬೇಡವೆಂದರೂ ಅತ್ಯಂತ ದಡ್ಡನೂ ನಿರ್ಲಜ್ಜನೂ ಆದ ನಿನ್ನ ಪುತ್ರ ದುರ್ಯೋಧನನು ಪಾಂಡವರ ಪ್ರಿಯ ಭಾರ್ಯೆ ಧರ್ಮಚಾರಿಣಿ ದ್ರೌಪದಿಯನ್ನು ಕರೆತರಲು ಸೂತಪುತ್ರ ಪ್ರತಿಕಾಮಿಯನ್ನು ಕಳುಹಿಸಿದನು.”
02072008 ಧೃತರಾಷ್ಟ್ರ ಉವಾಚ|
02072008a ಯಸ್ಮೈ ದೇವಾಃ ಪ್ರಯಚ್ಛಂತಿ ಪುರುಷಾಯ ಪರಾಭವಂ|
02072008c ಬುದ್ಧಿಂ ತಸ್ಯಾಪಕರ್ಷಂತಿ ಸೋಽಪಾಚೀನಾನಿ ಪಶ್ಯತಿ||
ಧೃತರಾಷ್ಟ್ರನು ಹೇಳಿದನು: “ಯಾರ ಪರಾಭವವನ್ನು ದೇವತೆಗಳೇ ನಿಶ್ಚಯಿಸಿದ್ದಾರೋ ಅವನು ವಿಷಯವನ್ನು ಸರಿಯಾಗಿ ಕಾಣದೇ ಇರಲಿ ಎಂದು ಮೊದಲು ಅವನ ಬುದ್ಧಿಯನ್ನು ಕಿತ್ತುಕೊಳ್ಳುತ್ತಾರೆ.
02072009a ಬುದ್ಧೌ ಕಲುಷಭೂತಾಯಾಂ ವಿನಾಶೇ ಪ್ರತ್ಯುಪಸ್ಥಿತೇ|
02072009c ಅನಯೋ ನಯಸಂಕಾಶೋ ಹೃದಯಾನ್ನಾಪಸರ್ಪತಿ||
ವಿನಾಶವು ನಿಶ್ಚಿತವಾದಾಗ ಮತ್ತು ಬುದ್ಧಿಯು ಕಲುಷಿತವಾದಾಗ ಅನ್ಯಾಯವೂ ನ್ಯಾಯವೆಂದೇ ತೋರುತ್ತದೆ ಮತ್ತು ಅದನ್ನಲ್ಲದೇ ಬೇರೆ ಏನನ್ನೂ ಹೃದಯವು ಬಯಸುವುದಿಲ್ಲ.
02072010a ಅನರ್ಥಾಶ್ಚಾರ್ಥರೂಪೇಣ ಅರ್ಥಾಶ್ಚಾನರ್ಥರೂಪಿಣಃ|
02072010c ಉತ್ತಿಷ್ಠಂತಿ ವಿನಾಶಾಂತೇ ನರಂ ತಚ್ಚಾಸ್ಯ ರೋಚತೇ||
ವಿನಾಶವು ಹತ್ತಿರವಾದಾಗ ಕೆಟ್ಟದ್ದು ಒಳ್ಳೆಯದಾಗಿಯೂ ಒಳ್ಳೆಯದು ಕೆಟ್ಟದ್ದಾಗಿಯೂ ತೋರುತ್ತದೆ ಮತ್ತು ಮನುಷ್ಯನು ತನಗೆ ಕಂಡದ್ದನ್ನೇ ಸ್ವೀಕರಿಸುತ್ತಾನೆ.
02072011a ನ ಕಾಲೋ ದಂಡಮುದ್ಯಮ್ಯ ಶಿರಃ ಕೃಂತತಿ ಕಸ್ಯ ಚಿತ್|
02072011c ಕಾಲಸ್ಯ ಬಲಮೇತಾವದ್ವಿಪರೀತಾರ್ಥದರ್ಶನಂ||
ಕಾಲವು ದಂಡವನ್ನೆತ್ತಿ ಶಿರವನ್ನೆಂದೂ ಒಡೆಯುವುದಿಲ್ಲ[1]. ಈ ರೀತಿಯ ವಿಪರೀತ ಅರ್ಥಗಳನ್ನು ತೋರಿಸುವುದೇ ಕಾಲದ ಬಲ.
02072012a ಆಸಾದಿತಮಿದಂ ಘೋರಂ ತುಮುಲಂ ಲೋಮಹರ್ಷಣಂ|
02072012c ಪಾಂಚಾಲೀಮಪಕರ್ಷದ್ಭಿಃ ಸಭಾಮಧ್ಯೇ ತಪಸ್ವಿನೀಂ||
ಮೈನವಿರೇಳಿಸುವ ಈ ಘೋರ ತುಮುಲವು ತಪಸ್ವಿನೀ ಪಾಂಚಾಲಿಯನ್ನು ಸಭಾಮಧ್ಯದಲ್ಲಿ ಎಳೆದು ತಂದಿರುವುದರಿಂದ ಆಗಿದ್ದುದು.
02072013a ಅಯೋನಿಜಾಂ ರೂಪವತೀಂ ಕುಲೇ ಜಾತಾಂ ವಿಭಾವರೀಂ|
02072013c ಕೋ ನು ತಾಂ ಸರ್ವಧರ್ಮಜ್ಞಾಂ ಪರಿಭೂಯ ಯಶಸ್ವಿನೀಂ||
02072014a ಪರ್ಯಾನಯೇತ್ಸಭಾಮಧ್ಯಮೃತೇ ದುರ್ದ್ಯೂತದೇವಿನಂ|
ಕೆಟ್ಟ ಜೂಜಾಡುವವನಲ್ಲದೇ ಬೇರೆ ಯಾರು ತಾನೆ ಆ ಅಯೋನಿಜೆ, ರೂಪವತಿ, ಉತ್ತಮ ಕುಲದಲ್ಲಿ ಹುಟ್ಟಿದ, ವಿಭಾವರೀ, ಸರ್ವಧರ್ಮಜ್ಞೆ, ಯಶಸ್ವಿನಿಯನ್ನು ಬಲವಂತವಾಗಿ ಸಭಾಮಧ್ಯದಲ್ಲಿ ಎಳೆದು ತಂದಾರು?
02072014c ಸ್ತ್ರೀಧರ್ಮಿಣೀಂ ವರಾರೋಹಾಂ ಶೋಣಿತೇನ ಸಮುಕ್ಷಿತಾಂ||
02072015a ಏಕವಸ್ತ್ರಾಂ ಚ ಪಾಂಚಾಲೀಂ ಪಾಂಡವಾನಭ್ಯವೇಕ್ಷತೀಂ|
02072015c ಹೃತಸ್ವಾನ್ಭ್ರಷ್ಟಚಿತ್ತಾಂಸ್ತಾನ್ ಹೃತದಾರಾನ್ ಹೃತಶ್ರಿಯಃ||
02072016a ವಿಹೀನಾನ್ಸರ್ವಕಾಮೇಭ್ಯೋ ದಾಸಭಾವವಶಂ ಗತಾನ್|
02072016c ಧರ್ಮಪಾಶಪರಿಕ್ಷಿಪ್ತಾನಶಕ್ತಾನಿವ ವಿಕ್ರಮೇ||
ಆ ಸ್ತ್ರೀಧರ್ಮಿಣೀ, ವರಾರೋಹೆ, ರಕ್ತದಿಂದ ತೋಯ್ದ ಏಕ ವಸ್ತ್ರಧಾರಿಣಿ ಪಾಂಚಾಲಿಯು ಸೋತ, ಭ್ರಷ್ಟಚಿತ್ತ, ಪತ್ನಿಯನ್ನು ಕಳೆದುಕೊಂಡ, ಸಂಪತ್ತನ್ನು ಕಳೆದುಕೊಂಡ, ಸರ್ವಕಾಮಗಳಿಂದ ವಂಚಿತರಾದ, ದಾಸಭಾವವನ್ನು ಹೊಂದಿದ, ಧರ್ಮಪಾಶದಲ್ಲಿ ಸಿಲುಕಿಕೊಂಡ, ವಿಕ್ರಮದಲ್ಲಿ ಅಶಕ್ತರಂತಿರುವ ಪಾಂಡವರನ್ನು ನೋಡಿದಳು.
02072017a ಕ್ರುದ್ಧಾಮಮರ್ಷಿತಾಂ ಕೃಷ್ಣಾಂ ದುಃಖಿತಾಂ ಕುರುಸಂಸದಿ|
02072017c ದುರ್ಯೋಧನಶ್ಚ ಕರ್ಣಶ್ಚ ಕಟುಕಾನ್ಯಭ್ಯಭಾಷತಾಂ||
ಕೃದ್ಧಳೂ, ಅಸಹಾಯಕಳೂ. ದುಃಖಿತಳೂ ಆಗಿದ್ದ ಕೃಷ್ಣೆಯನ್ನು ದುರ್ಯೋಧನ ಕರ್ಣರು ಕಟು ಮಾತುಗಳಿಂದ ಅವಮಾನಿಸಿದರು.
02072018a ತಸ್ಯಾಃ ಕೃಪಣಚಕ್ಷುರ್ಭ್ಯಾಂ ಪ್ರದಹ್ಯೇತಾಪಿ ಮೇದಿನೀ|
02072018c ಅಪಿ ಶೇಷಂ ಭವೇದದ್ಯ ಪುತ್ರಾಣಾಂ ಮಮ ಸಂಜಯ||
ಸಂಜಯ! ಅವಳ ದೀನ ಕಣ್ಣುಗಳಿಂದ ಇಡೀ ಭೂಮಿಯೇ ಸುಟ್ಟುಹೋಗಬಹುದಾಗಿತ್ತು. ಇನ್ನು ನನ್ನ ಪುತ್ರರು ಉಳಿಯುವರೇ?
02072019a ಭಾರತಾನಾಂ ಸ್ತ್ರಿಯಃ ಸರ್ವಾ ಗಾಂಧಾರ್ಯಾ ಸಹ ಸಂಗತಾಃ|
02072019c ಪ್ರಾಕ್ರೋಶನ್ಭೈರವಂ ತತ್ರ ದೃಷ್ಟ್ವಾ ಕೃಷ್ಣಾಂ ಸಭಾಗತಾಂ||
ಅಲ್ಲಿ ಸೇರಿದ್ದ ಗಾಂಧಾರಿಯನ್ನೂ ಸೇರಿ ಸರ್ವ ಭಾರತ ಸ್ತ್ರೀಯರು ಕೃಷ್ಣೆಯನ್ನು ಸಭೆಗೆ ಕರಿಸಿದ್ದುದನ್ನು ನೋಡಿ ಭೈರವವಾಗಿ ಕೂಗಿಕೊಂಡರು.
02072020a ಅಗ್ನಿಹೋತ್ರಾಣಿ ಸಾಯಾಹ್ನೇ ನ ಚಾಹೂಯಂತ ಸರ್ವಶಃ|
02072020c ಬ್ರಾಹ್ಮಣಾಃ ಕುಪಿತಾಶ್ಚಾಸನ್ದ್ರೌಪದ್ಯಾಃ ಪರಿಕರ್ಷಣೇ||
ಸರ್ವ ಬ್ರಾಹ್ಮಣರೂ ದ್ರೌಪದಿಯ ಬಲಾತ್ಕಾರದಿಂದ ಕುಪಿತರಾಗಿ ಅಂದಿನ ಸಂಜೆ ಅಗ್ನಿಹೋತ್ರಗಳು ಉರಿಯಲಿಲ್ಲ.
02072021a ಆಸೀನ್ನಿಷ್ಟಾನಕೋ ಘೋರೋ ನಿರ್ಘಾತಶ್ಚ ಮಹಾನಭೂತ್|
02072021c ದಿವೋಲ್ಕಾಶ್ಚಾಪತನ್ಘೋರಾ ರಾಹುಶ್ಚಾರ್ಕಮುಪಾಗ್ರಸತ್|
02072021e ಅಪರ್ವಣಿ ಮಹಾಘೋರಂ ಪ್ರಜಾನಾಂ ಜನಯನ್ಭಯಂ||
ಅನಿಷ್ಟ ಘೋರ ಭೂಕಂಪನದ ಧ್ವನಿಯು ಕೇಳಿಬಂದಿತು. ಆಕಾಶದಿಂದ ಘೋರ ಉಲ್ಕೆಗಳು ಬಿದ್ದವು. ಗ್ರಹಣ ಕಾಲವಲ್ಲದಿದ್ದರೂ ಮಹಾಘೋರ ರಾಹುವು ಸೂರ್ಯಗ್ರಹಣ ಮಾಡಿ ಪ್ರಜೆಗಳಲ್ಲಿ ಭಯವನ್ನುಂಟು ಮಾಡಿದನು.
02072022a ತಥೈವ ರಥಶಾಲಾಸು ಪ್ರಾದುರಾಸೀದ್ಧುತಾಶನಃ|
02072022c ಧ್ವಜಾಶ್ಚ ವ್ಯವಶೀರ್ಯಂತ ಭರತಾನಾಮಭೂತಯೇ||
ಹಾಗೆಯೇ ಭಾರತರ ವಿನಾಶವನ್ನು ಸೂಚಿಸುವಂತೆ ರಥಶಾಲೆಗಳಲ್ಲಿ ಬೆಂಕಿಯು ಕಾಣಿಸಿಕೊಂಡಿತು ಮತ್ತು ಧ್ವಜಸ್ಥಂಭಗಳು ತಾವಾಗಿಯೇ ಮುರಿದು ಬಿದ್ದವು.
02072023a ದುರ್ಯೋಧನಸ್ಯಾಗ್ನಿಹೋತ್ರೇ ಪ್ರಾಕ್ರೋಶನ್ಭೈರವಂ ಶಿವಾಃ|
02072023c ತಾಸ್ತದಾ ಪ್ರತ್ಯಭಾಷಂತ ರಾಸಭಾಃ ಸರ್ವತೋದಿಶಂ||
ದುರ್ಯೋಧನನ ಅಗ್ನಿಹೋತ್ರದಲ್ಲಿ ನರಿಗಳು ಭೈರವವಾಗಿ ಕೂಗಿದವು, ಅದಕ್ಕೆ ಪ್ರತ್ಯುತ್ತರವಾಗಿ ಎಲ್ಲ ದಿಕ್ಕುಗಳಿಂದಲೂ ಕತ್ತೆಗಳು ಕೂಗಿದವು.
02072024a ಪ್ರಾತಿಷ್ಠತ ತತೋ ಭೀಷ್ಮೋ ದ್ರೋಣೇನ ಸಹ ಸಂಜಯ|
02072024c ಕೃಪಶ್ಚ ಸೋಮದತ್ತಶ್ಚ ಬಾಹ್ಲೀಕಶ್ಚ ಮಹಾರಥಃ||
ಸಂಜಯ! ಆಗ ಭೀಷ್ಮನು ದ್ರೋಣ, ಕೃಪ, ಸೋಮದತ್ತ, ಮಹಾರಥಿ ಬಾಹ್ಲೀಕರೊಂದಿಗೆ ಸಭೆಯನ್ನು ಬಿಟ್ಟು ಹೊರಟು ಹೋದನು.
02072025a ತತೋಽಹಮಬ್ರುವಂ ತತ್ರ ವಿದುರೇಣ ಪ್ರಚೋದಿತಃ|
02072025c ವರಂ ದದಾನಿ ಕೃಷ್ಣಾಯೈ ಕಾಂಕ್ಷಿತಂ ಯದ್ಯದಿಚ್ಛತಿ||
ಆಗ ನಾನು ವಿದುರನಿಂದ ಪ್ರಚೋದಿತನಾಗಿ ಬೇಡಿದ ವರವನ್ನು ಕೊಡುತ್ತೇನೆ ಎಂದು ಕೃಷ್ಣೆಗೆ ಹೇಳಿದೆನು.
02072026a ಅವೃಣೋತ್ತತ್ರ ಪಾಂಚಾಲೀ ಪಾಂಡವಾನಮಿತೌಜಸಃ|
02072026c ಸರಥಾನ್ಸಧನುಷ್ಕಾಂಶ್ಚಾಪ್ಯನುಜ್ಞಾಸಿಷಮಪ್ಯಹಂ||
ಆಗ ಪಾಂಚಾಲಿಯು ಅಮಿತೌಜಸ ಪಾಂಡವರನ್ನು ಕೇಳಿಕೊಂಡಳು. ನಾನು ರಥ, ಧನುಸ್ಸುಗಳೊಂದಿಗೆ ಅವರಿಗೆ ಹೋಗಲು ಅನುಮತಿಯನ್ನಿತ್ತೆನು.
02072027a ಅಥಾಬ್ರವೀನ್ಮಹಾಪ್ರಾಜ್ಞೋ ವಿದುರಃ ಸರ್ವಧರ್ಮವಿತ್|
02072027c ಏತದಂತಾಃ ಸ್ಥ ಭರತಾ ಯದ್ವಃ ಕೃಷ್ಣಾ ಸಭಾಂ ಗತಾ||
ಆಗ ಮಹಾಪ್ರಾಜ್ಞ, ಸರ್ವಧರ್ಮವಿದು ವಿದುರನು ಹೇಳಿದನು: “ಭಾರತರೇ! ಕೃಷ್ಣೆಯು ಸಭೆಗೆ ಬಂದಿರುವುದು ನಿಮ್ಮ ಅಂತ್ಯವನ್ನು ಸೂಚಿಸುತ್ತದೆ.
02072028a ಏಷಾ ಪಾಂಚಾಲರಾಜಸ್ಯ ಸುತೈಷಾ ಶ್ರೀರನುತ್ತಮಾ|
02072028c ಪಾಂಚಾಲೀ ಪಾಂಡವಾನೇತಾನ್ದೈವಸೃಷ್ಟೋಪಸರ್ಪತಿ||
ಈ ಪಾಂಚಾಲರಾಜನ ಸುತೆ ಪಾಂಚಾಲಿಯು ಪಾಂಡವರಿಗಾಗಿಯೇ ದೇವತೆಗಳು ಸೃಷ್ಟಿಸಿದ ಉತ್ತಮ ಶ್ರೀ.
02072029a ತಸ್ಯಾಃ ಪಾರ್ಥಾಃ ಪರಿಕ್ಲೇಶಂ ನ ಕ್ಷಂಸ್ಯಂತೇಽತ್ಯಮರ್ಷಣಾಃ|
02072029c ವೃಷ್ಣಯೋ ವಾ ಮಹೇಷ್ವಾಸಾಃ ಪಾಂಚಾಲಾ ವಾ ಮಹೌಜಸಃ||
ಅವಳ ಅಪಮಾನವನ್ನು ಸಿಟ್ಟಿಗೆದ್ದ ಪಾಂಡವರಾಗಲೀ, ಮಹೇಷ್ವಾಸ ವೃಷ್ಣಿಗಳಾಗಲೀ, ಅಥವಾ ಮಹೌಜಸ ಪಾಂಚಾಲರಾಗಲೀ ಸಹಿಸುವುದಿಲ್ಲ.
02072030a ತೇನ ಸತ್ಯಾಭಿಸಂಧೇನ ವಾಸುದೇವೇನ ರಕ್ಷಿತಾಃ|
02072030c ಆಗಮಿಷ್ಯತಿ ಬೀಭತ್ಸುಃ ಪಾಂಚಾಲೈರಭಿರಕ್ಷಿತಃ||
ಅವರು ಸತ್ಯಾಭಿಸಂಧ ವಾಸುದೇವನ ರಕ್ಷಣೆಯಲ್ಲಿದ್ದಾರೆ. ಪಾಂಚಾಲರಿಂದ ರಕ್ಷಿತನಾದ ಬೀಭತ್ಸುವು ಬರುತ್ತಾನೆ.
02072031a ತೇಷಾಂ ಮಧ್ಯೇ ಮಹೇಷ್ವಾಸೋ ಭೀಮಸೇನೋ ಮಹಾಬಲಃ|
02072031c ಆಗಮಿಷ್ಯತಿ ಧುನ್ವಾನೋ ಗದಾಂ ದಂಡಮಿವಾಂತಕಃ||
ಅವರ ಮಧ್ಯದಲ್ಲಿ ಮಹೇಷ್ವಾಸ ಮಹಾಬಲ ಭೀಮಸೇನನು ಅಂತಕನ ದಂಡದಂತಿರುವ ಗದೆಯನ್ನು ಬೀಸುತ್ತಾ ಬರುತ್ತಾನೆ.
02072032a ತತೋ ಗಾಂಡೀವನಿರ್ಘೋಷಂ ಶ್ರುತ್ವಾ ಪಾರ್ಥಸ್ಯ ಧೀಮತಃ|
02072032c ಗದಾವೇಗಂ ಚ ಭೀಮಸ್ಯ ನಾಲಂ ಸೋಢುಂ ನರಾಧಿಪಾಃ||
ಧೀಮತ ಪಾರ್ಥನ ಗಾಂಡೀವದ ಘೋಷವನ್ನಾಗಲೀ, ಭೀಮನ ಗದಾಪ್ರಹಾರದ ರಭಸವನ್ನಾಗಲೀ ಕೇಳಲು ನರಾಧಿಪರಿಗಾಗಲಿಕ್ಕಿಲ್ಲ.
02072033a ತತ್ರ ಮೇ ರೋಚತೇ ನಿತ್ಯಂ ಪಾರ್ಥೈಃ ಸಾರ್ಧಂ ನ ವಿಗ್ರಹಃ|
02072033c ಕುರುಭ್ಯೋ ಹಿ ಸದಾ ಮನ್ಯೇ ಪಾಂಡವಾಂ ಶಕ್ತಿಮತ್ತರಾನ್||
ಆದುದರಿಂದ ಪಾರ್ಥರೊಂದಿಗೆ ಎಂದೂ ಯುದ್ಧವನ್ನು ಬಯಸಬಾರದು ಎಂದು ನನಗನ್ನಿಸುತ್ತದೆ. ಕುರುಗಳಿಗಿಂತ ಪಾಂಡವರೇ ಹೆಚ್ಚು ಶಕ್ತಿವಂತರು ಎಂದು ಸದಾ ನನ್ನ ಅಭಿಪ್ರಾಯ.
02072034a ತಥಾ ಹಿ ಬಲವಾನ್ರಾಜಾ ಜರಾಸಂಧೋ ಮಹಾದ್ಯುತಿಃ|
02072034c ಬಾಹುಪ್ರಹರಣೇನೈವ ಭೀಮೇನ ನಿಹತೋ ಯುಧಿ||
ಮಹಾದ್ಯುತಿ ರಾಜ ಜರಾಸಂಧನು ಬಲಶಾಲಿಯಾಗಿದ್ದರೂ ಅವನನ್ನು ಭೀಮನು ಕೇವಲ ಬಾಹುಪ್ರಹಾರದಿಂದಲೇ ಕೊಂದನು.
02072035a ತಸ್ಯ ತೇ ಶಮ ಏವಾಸ್ತು ಪಾಂಡವೈರ್ಭರತರ್ಷಭ|
02072035c ಉಭಯೋಃ ಪಕ್ಷಯೋರ್ಯುಕ್ತಂ ಕ್ರಿಯತಾಮವಿಶಂಕಯಾ||
ಭರತರ್ಷಭ! ಪಾಂಡವರೊಂದಿಗೆ ಶಾಂತಿಯಿಂದಿರು ಮತ್ತು ಎರಡೂ ಪಕ್ಷಗಳಿಗೂ ಯುಕ್ತವಾಗಿರುವ ಕಾರ್ಯವನ್ನು ಶೀಘ್ರವೇ ಕೈಗೊಳ್ಳು!”
02072036a ಏವಂ ಗಾವಲ್ಗಣೇ ಕ್ಷತ್ತಾ ಧರ್ಮಾರ್ಥಸಹಿತಂ ವಚಃ|
02072036c ಉಕ್ತವಾನ್ನ ಗೃಹೀತಂ ಚ ಮಯಾ ಪುತ್ರಹಿತೇಪ್ಸಯಾ||
ಗಾವಲ್ಗಣಿ! ಪುತ್ರನಿಗೆ ಹಿತವನ್ನುಂಟುಮಾಡಲು ಬಯಸಿದ ನಾನು ಕ್ಷತ್ತನು ಈ ರೀತಿ ಧರ್ಮಾರ್ಥಸಂಹಿತ ಮಾತುಗಳನ್ನು ಹೇಳಿದರೂ ಸ್ವೀಕರಿಸಲಿಲ್ಲ!””
ಇತಿ ಶ್ರೀ ಮಹಾಭಾರತೇ ಶತಸಹಸ್ರ್ಯಾಂ ಸಂಹಿತಾಯಾಂ ಸಭಾಪರ್ವಣಿ ಅನುದ್ಯೂತಪರ್ವಣಿ ಧೃತರಾಷ್ಟ್ರಸಂಜಯಸಂವಾದೇ ದ್ವಿಸಪ್ತತಿತಮೋಽಧ್ಯಾಯಃ||
ಇದು ಒಂದು ಲಕ್ಷ ಶ್ಲೋಕಗಳ ಸಂಹಿತೆ ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅನುದ್ಯೂತಪರ್ವದಲ್ಲಿ ಧೃತರಾಷ್ಟ್ರಸಂಜಯಸಂವಾದ ಎನ್ನುವ ಎಪ್ಪತ್ತೆರಡನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಶತಸಹಸ್ರ್ಯಾಂ ಸಂಹಿತಾಯಾಂ ಸಭಾಪರ್ವಣಿ ಅನುದ್ಯೂತಪರ್ವಃ||
ಇದು ಒಂದು ಲಕ್ಷ ಶ್ಲೋಕಗಳ ಸಂಹಿತೆ ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅನುದ್ಯೂತಪರ್ವವು.
ಇತಿ ಶ್ರೀ ಮಹಾಭಾರತೇ ಶತಸಹಸ್ರ್ಯಾಂ ಸಂಹಿತಾಯಾಂ ಸಭಾಪರ್ವಃ||
ಇದು ಒಂದು ಲಕ್ಷ ಶ್ಲೋಕಗಳ ಸಂಹಿತೆ ಶ್ರೀ ಮಹಾಭಾರತದಲ್ಲಿ ಸಭಾಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-೨/೧೮, ಉಪಪರ್ವಗಳು-೨೯/೧೦೦, ಅಧ್ಯಾಯಗಳು-೨೯೭, ಶ್ಲೋಕಗಳು-೯೫೮೦.
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಅನುದ್ಯೂತಪರ್ವಃ||
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅನುದ್ಯೂತಪರ್ವವು.
ಇತಿ ಶ್ರೀ ಮಹಾಭಾರತೇ ಸಭಾಪರ್ವಃ||
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-೨/೧೮, ಉಪಪರ್ವಗಳು-೨೮/೧೦೦, ಅಧ್ಯಾಯಗಳು-೨೯೭/೧೯೯೫, ಶ್ಲೋಕಗಳು-೯೫೮೦/೭೩೭೮೪
ಸ್ವಸ್ತಿಪ್ರಜಾಭ್ಯಃ ಪರಿಪಾಲಯಂತಾಮ್
ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ|
ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ
ಲೋಕಾಃ ಸಮಸ್ತಾಃ ಸುಖಿನೋ ಭವಂತು||
ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ|
ದೇಶೋಽಯಂ ಕ್ಷೋಭರಹಿತೋ ಬ್ರಾಹ್ಮಣಾಃ ಸಂತು ನಿರ್ಭಯಾಃ||
ಅಪುತ್ರಾಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ|
ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್||
ಕಾಯೇನ ವಾಚಾ ಮನಸೇಂದ್ರಿಯೈರ್ವಾ
ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್|
ಕರೋಮಿ ಯದ್ಯತ್ಸಕಲಂ ಪರಸ್ಮೈ
ನಾರಾಯಣಾಯೇತಿ ಸಮರ್ಪಯಾಮಿ||
ಯದಕ್ಷರಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್|
ತತ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋಽಸ್ತು ತೇ||
|| ಹರಿಃ ಓಂ ಕೃಷ್ಣಾರ್ಪಣಮಸ್ತು ||
[1]ಅಂದರೆ ಕಾಲವು ಒಂದೇ ಸಮನೆ ಮನುಷ್ಯನನ್ನು ನಾಶಗೊಳಿಸುವುದಿಲ್ಲ. ಅವನನ್ನು ನಿಧಾನವಾಗಿ, ವಿಪರೀತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಿ, ಕೊಲ್ಲುತ್ತದೆ.