Sabha Parva: Chapter 71

ಸಭಾ ಪರ್ವ: ಅನುದ್ಯೂತ ಪರ್ವ

೭೧

ಧೃತರಾಷ್ಟ್ರ-ವಿದುರ-ದ್ರೋಣ ಸಂವಾದ

ದ್ಯೂತದಲ್ಲಿ ಸೋತು ವನವಾಸಕ್ಕೆ ಹೊರಟ ಪಾಂಡವರು ಯಾವ ಪ್ರಕಾರವಾಗಿ ಹೊರಟರು ಎಂದು ಧೃತರಾಷ್ಟ್ರನು ಕೇಳಲು ವಿದುರನು ಪ್ರತಿಯೊಬ್ಬ ಪಾಂಡವನೂ, ದ್ರೌಪದಿ-ಧೌಮ್ಯರೂ ಹೇಗೆ ಹೊರಟರು ಎಂದು ಅವರ ಅಂಗವಿಚೇಷ್ಟೆಗಳನ್ನು ಹೇಳಿದುದು (೧-೭). ಅವರ ಅಂಗವಿಚೇಷ್ಟೆಗಳ ಅರ್ಥವೇನೆಂದು ಕೇಳಲು ವಿದುರನು ರಾಜನಿಗೆ ವಿವರಿಸುವುದು (೮-೨೩). ಪಾಂಡವರು ವನವಾಸಕ್ಕೆ ಹೋಗುವಾಗ ನಡೆದ ಇತರ ದುಃಶಕುನ-ಉತ್ಪಾತಗಳನ್ನು ವಿದುರನು ರಾಜನಿಗೆ ವರ್ಣಿಸುವುದು (೨೪-೨೮). ಕುರುಸಭೆಯಲ್ಲಿ ದೇವರ್ಷಿ ನಾರದನು ಕಾಣಿಸಿಕೊಂಡು ಮುಂದೆ ನಡೆಯಲಿರುವ ಕುರುನಾಶದ ಕುರಿತು ಎಚ್ಚರಿಸುವುದು (೨೯-೩೧). ದುರ್ಯೋಧನನು ದ್ರೋಣನಿಗೆ ರಾಜ್ಯವನ್ನು ಒಪ್ಪಿಸುವುದು (೩೨). ದ್ರೋಣನು ದುರ್ಯೋಧನನಿಗೆ ಆಶ್ವಾಸನೆಯನ್ನು ನೀಡುವುದು, ದೈವದ ವಿರುದ್ಧ ತನ್ನ ಅಸಹಾಯಕತೆಯನ್ನು ತೋಡಿಕೊಳ್ಳುವುದು, ಧಾರ್ಮಿಕ ಕಾರ್ಯಗಳನ್ನು ಮಾಡಲು ಮತ್ತು ಪಾಂಡವರೊಂದಿಗೆ ಸಂಧಿಮಾಡಿಕೊಳ್ಳಲು ಹೇಳುವುದು (೩೩-೪೫). ದ್ರೋಣನ ಮಾತುಗಳನ್ನು ಕೇಳಿ ಧೃತರಾಷ್ಟ್ರನು ವಿದುರನಿಗೆ ಪಾಂಡವರನ್ನು ಹಿಂದೆ ಕರೆತರಲು ಅಥವಾ ಮರಳಿ ಬರದೇ ಇದ್ದರೆ ರಥ, ಶಸ್ತ್ರ ಮತ್ತು ಸೇವಕರೊಂದಿಗೆ ಅವರನ್ನು ಗೌರವಿಸಿ ಕಳುಹಿಸಬೇಕೆಂದು ಆಜ್ಞಾಪಿಸುವುದು (೪೬-೪೭).

02071001 ಧೃತರಾಷ್ಟ್ರ ಉವಾಚ|

02071001a ಕಥಂ ಗಚ್ಛತಿ ಕೌಂತೇಯೋ ಧರ್ಮರಾಜೋ ಯುಧಿಷ್ಠಿರಃ|

02071001c ಭೀಮಸೇನಃ ಸವ್ಯಸಾಚೀ ಮಾದ್ರೀಪುತ್ರೌ ಚ ತಾವುಭೌ||

ಧೃತರಾಷ್ಟ್ರನು ಹೇಳಿದನು: “ಕೌಂತೇಯ ಧರ್ಮರಾಜ ಯುಧಿಷ್ಠಿರ, ಭೀಮಸೇನ, ಸವ್ಯಸಾಚಿ ಮತ್ತು ಆ ಇಬ್ಬರು ಮಾದ್ರೀಪುತ್ರರು ಹೇಗೆ ಹೋದರು?

02071002a ಧೌಮ್ಯಶ್ಚೈವ ಕಥಂ ಕ್ಷತ್ತರ್ದ್ರೌಪದೀ ವಾ ತಪಸ್ವಿನೀ|

02071002c ಶ್ರೋತುಮಿಚ್ಛಾಮ್ಯಹಂ ಸರ್ವಂ ತೇಷಾಮಂಗವಿಚೇಷ್ಟಿತಂ||

ಕ್ಷತ್ತ! ಧೌಮ್ಯ ಮತ್ತು ತಪಸ್ವಿನೀ ದ್ರೌಪದಿಯು ಹೇಗೆ ಹೋದರು? ಅವರ ಎಲ್ಲ ಅಂಗವಿಚೇಷ್ಟಗಳನ್ನು ಕೇಳ ಬಯಸುತ್ತೇನೆ.”

02071003 ವಿದುರ ಉವಾಚ|

02071003a ವಸ್ತ್ರೇಣ ಸಂವೃತ್ಯ ಮುಖಂ ಕುಂತೀಪುತ್ರೋ ಯುಧಿಷ್ಠಿರಃ|

02071003c ಬಾಹೂ ವಿಶಾಲೌ ಕೃತ್ವಾ ತು ಭೀಮೋ ಗಚ್ಛತಿ ಪಾಂಡವಃ||

ವಿದುರನು ಹೇಳಿದನು: “ಕುಂತೀಪುತ್ರ ಯುದಿಷ್ಠಿರನು ಮುಖವನ್ನು ವಸ್ತ್ರದಿಂದ ಮುಚ್ಚಿಕೊಂಡಿದ್ದನು ಮತ್ತು ಪಾಂಡವ ಭೀಮಸೇನನು ತನ್ನ ಎರಡೂ ಬಾಹುಗಳನ್ನು ಹೊರಚಾಚಿಕೊಂಡು ಹೋದನು.

02071004a ಸಿಕತಾ ವಪನ್ಸವ್ಯಸಾಚೀ ರಾಜಾನಮನುಗಚ್ಛತಿ|

02071004c ಮಾದ್ರೀಪುತ್ರಃ ಸಹದೇವೋ ಮುಖಮಾಲಿಪ್ಯ ಗಚ್ಛತಿ||

02071005a ಪಾಂಸೂಪಲಿಪ್ತಸರ್ವಾಂಗೋ ನಕುಲಶ್ಚಿತ್ತವಿಹ್ವಲಃ|

02071005c ದರ್ಶನೀಯತಮೋ ಲೋಕೇ ರಾಜಾನಮನುಗಚ್ಛತಿ||

ಸವ್ಯಸಾಚಿಯು ಮರಳನ್ನು ಚೆಲ್ಲುತ್ತಾ ರಾಜನನ್ನು ಹಿಂಬಾಲಿಸಿದನು. ಮಾದ್ರೀಪುತ್ರ ಸಹದೇವನು ಮುಖಕ್ಕೆ ಬಣ್ಣವನ್ನು ಬಳಿದುಕೊಂಡು ಹೋದನು. ಲೋಕದಲ್ಲಿಯೇ ಅತೀವ ಸುಂದರ ನಕುಲನು ತನ್ನ ಇಡೀ ದೇಹಕ್ಕೆ ಧೂಳನ್ನು ಬಳಿದುಕೊಂಡು ಚಿತ್ತವಿಹ್ವಲನಾಗಿ ರಾಜನನ್ನು ಅನುಸರಿಸಿದನು.

02071006a ಕೃಷ್ಣಾ ಕೇಶೈಃ ಪ್ರತಿಚ್ಛಾದ್ಯ ಮುಖಮಾಯತಲೋಚನಾ|

02071006c ದರ್ಶನೀಯಾ ಪ್ರರುದತೀ ರಾಜಾನಮನುಗಚ್ಛತಿ||

ಸುಂದರಿ ಆಯತಲೋಚನೆ ಕೃಷ್ಣೆಯು ತಲೆಗೂದಲಿನಿಂದ ಮುಖವನ್ನು ಮುಚ್ಚಿಕೊಂಡು ರೋದಿಸುತ್ತಾ ರಾಜನನ್ನು ಹಿಂಬಾಲಿಸಿದಳು.

02071007a ಧೌಮ್ಯೋ ಯಾಮ್ಯಾನಿ ಸಾಮಾನಿ ರೌದ್ರಾಣಿ ಚ ವಿಶಾಂ ಪತೇ|

02071007c ಗಾಯನ್ಗಚ್ಛತಿ ಮಾರ್ಗೇಷು ಕುಶಾನಾದಾಯ ಪಾಣಿನಾ||

ವಿಶಾಂಪತೇ! ಧೌಮ್ಯನು ರೌದ್ರ ಯಮಸಾಮವನ್ನು ಹೇಳುತ್ತಾ ಕೈಗಳಲ್ಲಿ ದರ್ಬೆಗಳನ್ನು ಹಿಡಿದು ಮಾರ್ಗಕೂಡಿ ಹೋದನು.”

02071008 ಧೃತರಾಷ್ಟ್ರ ಉವಾಚ|

02071008a ವಿವಿಧಾನೀಹ ರೂಪಾಣಿ ಕೃತ್ವಾ ಗಚ್ಛಂತಿ ಪಾಂಡವಾಃ|

02071008c ತನ್ಮಮಾಚಕ್ಷ್ವ ವಿದುರ ಕಸ್ಮಾದೇವಂ ವ್ರಜಂತಿ ತೇ||

ಧೃತರಾಷ್ಟ್ರನು ಹೇಳಿದನು: “ವಿವಿಧರೂಪಗಳನ್ನು ಮಾಡಿಕೊಂಡು ಪಾಂಡವರು ಹೋಗುತ್ತಿದ್ದಾರೆ. ವಿದುರ! ಈ ರೀತಿ ಅವರು ಏಕೆ ಹೋಗುತ್ತಿದ್ದಾರೆ ಎನ್ನುವುದನ್ನು ಹೇಳು.”

02071009 ವಿದುರ ಉವಾಚ|

02071009a ನಿಕೃತಸ್ಯಾಪಿ ತೇ ಪುತ್ರೈರ್ಹೃತೇ ರಾಜ್ಯೇ ಧನೇಷು ಚ|

02071009c ನ ಧರ್ಮಾಚ್ಚಲತೇ ಬುದ್ಧಿರ್ಧರ್ಮರಾಜಸ್ಯ ಧೀಮತಃ||

ವಿದುರನು ಹೇಳಿದನು: “ನಿನ್ನ ಪುತ್ರರು ವಂಚನೆಯಿಂದ ಅವರ ರಾಜ್ಯ ಮತ್ತು ಧನವನ್ನು ಅಪಹರಿಸಿದರೂ ಧೀಮಂತ ಧರ್ಮರಾಜನ ಬುದ್ಧಿಯು ಧರ್ಮದಿಂದ ವಿಚಲಿತವಾಗುವುದಿಲ್ಲ.

02071010a ಯೋಽಸೌ ರಾಜಾ ಘೃಣೀ ನಿತ್ಯಂ ಧಾರ್ತರಾಷ್ಟ್ರೇಷು ಭಾರತ|

02071010c ನಿಕೃತ್ಯಾ ಕ್ರೋಧಸಂತಪ್ತೋ ನೋನ್ಮೀಲಯತಿ ಲೋಚನೇ||

ಭಾರತ! ನಿತ್ಯವೂ ಧಾರ್ತರಾಷ್ಟ್ರರ ಮೇಲೆ ಕರುಣೆತೋರುವ ಈ ರಾಜನು ಮೋಸದಿಂದ ಕ್ರೋಧಸಂತಪ್ತ ತನ್ನ ಕೆಟ್ಟ ದೃಷ್ಟಿಯನ್ನು ಎಲ್ಲಿ ಹಾಯಿಸಲೂ ನಿರಾಕರಿಸುತ್ತಾನೆ.

02071011a ನಾಹಂ ಜನಂ ನಿರ್ದಹೇಯಂ ದೃಷ್ಟ್ವಾ ಘೋರೇಣ ಚಕ್ಷುಷಾ|

02071011c ಸ ಪಿಧಾಯ ಮುಖಂ ರಾಜಾ ತಸ್ಮಾದ್ಗಚ್ಛತಿ ಪಾಂಡವಃ||

ಈ ಕಾರಣದಿಂದಲೇ ರಾಜ ಪಾಂಡವನು “ನಾನು ನೋಡಿ ಜನರನ್ನು ಸುಡಬಾರದು!” ಎಂದು ತನ್ನ ಘೋರ ದೃಷ್ಟಿಯನ್ನು ಮುಚ್ಚಿಕೊಂಡು ಹೋಗುತ್ತಾನೆ.

02071012a ಯಥಾ ಚ ಭೀಮೋ ವ್ರಜತಿ ತನ್ಮೇ ನಿಗದತಃ ಶೃಣು|

02071012c ಬಾಹ್ವೋರ್ಬಲೇ ನಾಸ್ತಿ ಸಮೋ ಮಮೇತಿ ಭರತರ್ಷಭ||

02071013a ಬಾಹೂ ವಿಶಾಲೌ ಕೃತ್ವಾ ತು ತೇನ ಭೀಮೋಽಪಿ ಗಚ್ಛತಿ|

02071013c ಬಾಹೂ ದರ್ಶಯಮಾನೋ ಹಿ ಬಾಹುದ್ರವಿಣದರ್ಪಿತಃ|

02071013e ಚಿಕೀರ್ಷನ್ಕರ್ಮ ಶತ್ರುಭ್ಯೋ ಬಾಹುದ್ರವ್ಯಾನುರೂಪತಃ||

ಭರತರ್ಷಭ! ಭೀಮನು ಏಕೆ ಹಾಗೆ ಹೋಗುತ್ತಿದ್ದಾನೆ ಎಂದು ಹೇಳುತ್ತೇನೆ ಕೇಳು. “ನನ್ನ ಸಮನಾದ ಬಾಹುಬಲಿಯು ಇಲ್ಲ!” ಎಂದು ತನ್ನ ದಪ್ಪ ಬಾಹುಗಳಿಂದ ದರ್ಪಿತ ಭೀಮನು ತನ್ನ ಬಾಹುಗಳನ್ನು ಚಾಚಿ, ತನ್ನ ಬಾಹುಬಲದ ಅನುರೂಪ ಶತ್ರುಗಳ ವಿರುದ್ಧ ಬಳಸುವ ಬಾಹುಗಳನ್ನು ತೋರಿಸುತ್ತಾ ಹೋಗುತ್ತಾನೆ.

02071014a ಪ್ರದಿಶಂ ಶರಸಂಪಾತಾನ್ಕುಂತೀಪುತ್ರೋಽರ್ಜುನಸ್ತದಾ|

02071014c ಸಿಕತಾ ವಪನ್ಸವ್ಯಸಾಚೀ ರಾಜಾನಮನುಗಚ್ಛತಿ||

ಕುಂತೀಪುತ್ರ ಅರ್ಜುನ ಸವ್ಯಸಾಚಿಯು ತನ್ನ ಬಾಣಗಳಿಂದ ಘಾತಿಗೊಳ್ಳುವವರ ಸಂಖ್ಯೆಯನ್ನು ಸೂಚಿಸಲು ಮರಳನ್ನು ಚೆಲ್ಲುತ್ತಾ ರಾಜನನ್ನು ಅನುಸರಿಸುತ್ತಾನೆ.  

02071015a ಅಸಕ್ತಾಃ ಸಿಕತಾಸ್ತಸ್ಯ ಯಥಾ ಸಂಪ್ರತಿ ಭಾರತ|

02071015c ಅಸಕ್ತಂ ಶರವರ್ಷಾಣಿ ತಥಾ ಮೋಕ್ಷ್ಯತಿ ಶತ್ರುಷು||

ಭಾರತ! ಬಿಡಿಬಿಡಿಯಾದ ಮರಳುಗಳಷ್ಟೇ ಬಾಣಗಳ ಮಳೆಯನ್ನು ಶತ್ರುಗಳ ಮೇಲೆ ಸುರಿಸುತ್ತಾನೆ.

02071016a ನ ಮೇ ಕಶ್ಚಿದ್ವಿಜಾನೀಯಾನ್ಮುಖಮದ್ಯೇತಿ ಭಾರತ|

02071016c ಮುಖಮಾಲಿಪ್ಯ ತೇನಾಸೌ ಸಹದೇವೋಽಪಿ ಗಚ್ಛತಿ||

ಭಾರತ! ಇಂದು ಯಾರೂ ತನ್ನ ಮುಖವನ್ನು ಗುರುತಿಸಬಾರದು ಎಂದು ಸಹದೇವನು ಮುಖಕ್ಕೆ ಬಳಿದುಕೊಂಡು ಹೋಗುತ್ತಿದ್ದಾನೆ.

02071017a ನಾಹಂ ಮನಾಂಸ್ಯಾದದೇಯಂ ಮಾರ್ಗೇ ಸ್ತ್ರೀಣಾಮಿತಿ ಪ್ರಭೋ|

02071017c ಪಾಂಸೂಪಚಿತಸರ್ವಾಂಗೋ ನಕುಲಸ್ತೇನ ಗಚ್ಛತಿ||

ಪ್ರಭೋ! ಮಾರ್ಗದಲ್ಲಿ ಸ್ತ್ರೀಯರ ಹೃದಯವನ್ನು ಅಪಹರಿಸಬಾರದೆಂದು ನಕುಲನು ತನ್ನ ಸರ್ವಾಂಗಗಳನ್ನು ಧೂಳಿನಿಂದ ಬಳಿದುಕೊಂಡು ಹೋಗುತ್ತಿದ್ದಾನೆ.

02071018a ಏಕವಸ್ತ್ರಾ ತು ರುದತೀ ಮುಕ್ತಕೇಶೀ ರಜಸ್ವಲಾ|

02071018c ಶೋಣಿತಾಕ್ತಾರ್ದ್ರವಸನಾ ದ್ರೌಪದೀ ವಾಕ್ಯಮಬ್ರವೀತ್||

ಏಕವಸ್ತ್ರಾ, ಮುಕ್ತಕೇಶೀ, ರಜಸ್ವಲೆ, ರಕ್ತದ ಕಲೆಯುಳ್ಳ ವಸ್ತ್ರವನ್ನು ಧರಿಸಿ ರೋದಿಸುತ್ತಿರುವ ದ್ರೌಪದಿಯು ಈ ಮಾತುಗಳನ್ನು ಹೇಳಿದಳು:

02071019a ಯತ್ಕೃತೇಽಹಮಿಮಾಂ ಪ್ರಾಪ್ತಾ ತೇಷಾಂ ವರ್ಷೇ ಚತುರ್ದಶೇ|

02071019c ಹತಪತ್ಯೋ ಹತಸುತಾ ಹತಬಂಧುಜನಪ್ರಿಯಾಃ||

“ಇಂದಿನಿಂದ ಹದಿನಾಲ್ಕನೆಯ ವರ್ಷದಲ್ಲಿ ಯಾರ ಕಾರಣದಿಂದ ನಾನು ಈ ಅವಸ್ಥೆಯನ್ನು ಪಡೆದೆನೋ ಅವರ ಪತ್ನಿಯರು ತಮ್ಮ ಪತಿ, ಮಕ್ಕಳು, ಬಾಂಧವರು ಮತ್ತು ಮಿತ್ರರನ್ನು ಕಳೆದುಕೊಳ್ಳುತ್ತಾರೆ.

02071020a ಬಂಧುಶೋಣಿತದಿಗ್ಧಾಂಗ್ಯೋ ಮುಕ್ತಕೇಶ್ಯೋ ರಜಸ್ವಲಾಃ|

02071020c ಏವಂ ಕೃತೋದಕಾ ನಾರ್ಯಃ ಪ್ರವೇಕ್ಷ್ಯಂತಿ ಗಜಾಹ್ವಯಂ||

ಬಂಧುಗಳ ರಕ್ತದಿಂದ ಲೇಪಿತರಾಗಿ ತಲೆಗೂದಲನ್ನು ಬಿಚ್ಚಿಕೊಂಡು ಹೀಗೆಯೇ ರಜಸ್ವಲೆಯರಾಗಿ ನಾರಿಯರು ತರ್ಪಣಗಳನ್ನು ನೀಡುತ್ತಿರುವುದು ಗಜಸಾಹ್ವಯದಲ್ಲಿ ಕಂಡುಬರುತ್ತದೆ!”

02071021a ಕೃತ್ವಾ ತು ನೈರೃತಾನ್ದರ್ಭಾನ್ಧೀರೋ ಧೌಮ್ಯಃ ಪುರೋಹಿತಃ|

02071021c ಸಾಮಾನಿ ಗಾಯನ್ಯಾಮ್ಯಾನಿ ಪುರತೋ ಯಾತಿ ಭಾರತ||

ಭಾರತ! ಅವರ ಪುರೋಹಿತ ಧೀರ ಧೌಮ್ಯನು ನೈ‌ಋತ ದರ್ಭೆಗಳನ್ನು ನೈರುತ್ಯದ ಕಡೆ ಮಾಡಿ ಹಾಕುತ್ತಾ ಯಮಸಾಮವನ್ನು ಹಾಡುತ್ತಾ ಮುಂದೆ ಹೋಗುತ್ತಿದ್ದಾನೆ.

02071022a ಹತೇಷು ಭಾರತೇಷ್ವಾಜೌ ಕುರೂಣಾಂ ಗುರವಸ್ತದಾ|

02071022c ಏವಂ ಸಾಮಾನಿ ಗಾಸ್ಯಂತೀತ್ಯುಕ್ತ್ವಾ ಧೌಮ್ಯೋಽಪಿ ಗಚ್ಛತಿ||

“ಯುದ್ಧದಲ್ಲಿ ಭಾರತರು ಹತರಾಗಲು ಕುರು ಪುರೋಹಿತರು ಹೀಗೆ ಯಮಸಾಮವನ್ನು ಹಾಡುತ್ತಾರೆ!” ಎಂದು ಹೇಳಿ ಧೌಮ್ಯನೂ ಹೋಗುತ್ತಾನೆ. 

02071023a ಹಾ ಹಾ ಗಚ್ಛಂತಿ ನೋ ನಾಥಾಃ ಸಮವೇಕ್ಷಧ್ವಮೀದೃಶಂ|

02071023c ಇತಿ ಪೌರಾಃ ಸುದುಃಖಾರ್ತಾಃ ಕ್ರೋಶಂತಿ ಸ್ಮ ಸಮಂತತಃ||

“ಹಾ! ಹಾ! ನಮ್ಮ ನಾಥರು ಹೋಗುತ್ತಿದ್ದಾರೆ! ಈ ದೃಶ್ಯವನ್ನು ನೋಡಿ!” ಎಂದು ಬಹಳ ದುಃಖಾರ್ತ ಪೌರರು ಸುತ್ತುವರೆದು ಆಕ್ರಂದಿಸುತ್ತಿದ್ದಾರೆ.

02071024a ಏವಮಾಕಾರಲಿಂಗೈಸ್ತೇ ವ್ಯವಸಾಯಂ ಮನೋಗತಂ|

02071024c ಕಥಯಂತಃ ಸ್ಮ ಕೌಂತೇಯಾ ವನಂ ಜಗ್ಮುರ್ಮನಸ್ವಿನಃ||

ಈ ರೀತಿಯ ಆಕಾರ ಚಿಹ್ನೆಗಳೊಂದಿಗೆ ತಮ್ಮ ನಿರ್ಧಾರ ಮನೋಗತವನ್ನು ಹೇಳುತ್ತಾ ಮನಸ್ವಿ ಕೌಂತೇಯರು ವನಕ್ಕೆ ಹೋದರು.

02071025a ಏವಂ ತೇಷು ನರಾಗ್ರ್ಯೇಷು ನಿರ್ಯತ್ಸು ಗಜಸಾಹ್ವಯಾತ್|

02071025c ಅನಭ್ರೇ ವಿದ್ಯುತಶ್ಚಾಸನ್ಭೂಮಿಶ್ಚ ಸಮಕಂಪತ||

ಹೀಗೆ ಈ ನರಾಗ್ರರು ಗಜಸಾಹ್ವಯದಿಂದ ಹೋಗುವಾಗ ಮೋಡವಿಲ್ಲದ ಆಕಾಶದಲ್ಲಿ ಮಿಂಚು ಕಂಡುಬಂದಿತು ಮತ್ತು ಭೂಮಿಯು ನಡುಗಿತು. 

02071026a ರಾಹುರಗ್ರಸದಾದಿತ್ಯಮಪರ್ವಣಿ ವಿಶಾಂ ಪತೇ|

02071026c ಉಲ್ಕಾ ಚಾಪ್ಯಪಸವ್ಯಂ ತು ಪುರಂ ಕೃತ್ವಾ ವ್ಯಶೀರ್ಯತ||

ವಿಶಾಂಪತೇ! ಗ್ರಹಣದ ಕಾಲವಲ್ಲದಿದ್ದರೂ ರಾಹುವು ಆದಿತ್ಯನಿಗೆ ಗ್ರಹಣವನ್ನುಂಟು ಮಾಡಿದನು. ಪುರವನ್ನು ನಡುಗಿಸುವಂಥ ಉಲ್ಕಾಪಾತವಾಯಿತು. 

02071027a ಪ್ರವ್ಯಾಹರಂತಿ ಕ್ರವ್ಯಾದಾ ಗೃಧ್ರಗೋಮಾಯುವಾಯಸಾಃ|

02071027c ದೇವಾಯತನಚೈತ್ಯೇಷು ಪ್ರಾಕಾರಾಟ್ಟಾಲಕೇಷು ಚ||

ದೇವಾಲಯಗಳ ಹತ್ತಿರ ಮತ್ತು ಅರಮನೆಯ ಕಾವಲು ಗೋಪುರಗಳ ಮೇಲೆ ಹದ್ದು, ನರಿಗಳು ಮತ್ತು ಕಾಗೆಗಳು ಕೂಗಿದವು.

02071028a ಏವಮೇತೇ ಮಹೋತ್ಪಾತಾ ವನಂ ಗಚ್ಛತಿ ಪಾಂಡವೇ|

02071028c ಭಾರತಾನಾಮಭಾವಾಯ ರಾಜನ್ದುರ್ಮಂತ್ರಿತೇ ತವ||

ರಾಜನ್! ನಿನ್ನ ದುಷ್ಟ ಸಲಹೆಯಂತೆ ಪಾಂಡವರು ವನಕ್ಕೆ ತೆರಳುವಾಗ ಆದ ಈ ಮಹೋತ್ಪಾತಗಳು ಭಾರತರ ಅಂತ್ಯವನ್ನು ಸೂಚಿಸುತ್ತವೆ.”

02071029a ನಾರದಶ್ಚ ಸಭಾಮಧ್ಯೇ ಕುರೂಣಾಮಗ್ರತಃ ಸ್ಥಿತಃ|

02071029c ಮಹರ್ಷಿಭಿಃ ಪರಿವೃತೋ ರೌದ್ರಂ ವಾಕ್ಯಮುವಾಚ ಹ||

ಆಗ ಸಭಾಮಧ್ಯದಲ್ಲಿ ಕುರುಗಳ ಎದುರಿಗೆ ಮಹರ್ಷಿಗಳಿಂದ ಸುತ್ತುವರೆದ ನಾರದನು ಬಂದು ನಿಂತು ಈ ರೀತಿಯ ರೌದ್ರ ಮಾತುಗಳನ್ನಾಡಿದನು.

02071030a ಇತಶ್ಚತುರ್ದಶೇ ವರ್ಷೇ ವಿನಂಕ್ಷ್ಯಂತೀಹ ಕೌರವಾಃ|

02071030c ದುರ್ಯೋಧನಾಪರಾಧೇನ ಭೀಮಾರ್ಜುನಬಲೇನ ಚ||

“ಇಂದಿನಿಂದ ಹದಿನಾಲ್ಕನೆಯ ವರ್ಷದಲ್ಲಿ ಇಲ್ಲಿರುವ ಕೌರವರು ದುರ್ಯೋಧನನ ಅಪರಾಧದಿಂದ ಮತ್ತು ಭೀಮಾರ್ಜುನರ ಬಲದಿಂದ ವಿನಾಶವನ್ನು ಹೊಂದುತ್ತಾರೆ!”

02071031a ಇತ್ಯುಕ್ತ್ವಾ ದಿವಮಾಕ್ರಮ್ಯ ಕ್ಷಿಪ್ರಮಂತರಧೀಯತ|

02071031c ಬ್ರಾಹ್ಮೀಂ ಶ್ರಿಯಂ ಸುವಿಪುಲಾಂ ಬಿಭ್ರದ್ದೇವರ್ಷಿಸತ್ತಮಃ||

ಹೀಗೆ ಹೇಳಿ ತಕ್ಷಣವೇ ವಿಪುಲ ಬ್ರಹ್ಮಕಾಂತಿಯ ಆ ದೇವರ್ಷಿಸತ್ತಮನು ಆಕಾಶವನ್ನೇರಿ ಅಂತರ್ಧಾನನಾದನು. 

02071032a ತತೋ ದುರ್ಯೋಧನಃ ಕರ್ಣಃ ಶಕುನಿಶ್ಚಾಪಿ ಸೌಬಲಃ|

02071032c ದ್ರೋಣಂ ದ್ವೀಪಮಮನ್ಯಂತ ರಾಜ್ಯಂ ಚಾಸ್ಮೈ ನ್ಯವೇದಯನ್||

ಆಗ ದುರ್ಯೋಧನ, ಕರ್ಣ ಮತ್ತು ಸೌಬಲ ಶಕುನಿಯೂ ಕೂಡ “ದ್ರೋಣನೇ ನಮ್ಮನ್ನು ಉಳಿಸಬಲ್ಲ!” ಎಂದು ತಿಳಿದು ರಾಜ್ಯವನ್ನು ಅವನಿಗೆ ಒಪ್ಪಿಸಿದರು.

02071033a ಅಥಾಬ್ರವೀತ್ತತೋ ದ್ರೋಣೋ ದುರ್ಯೋಧನಮಮರ್ಷಣಂ|

02071033c ದುಃಶಾಸನಂ ಚ ಕರ್ಣಂ ಚ ಸರ್ವಾನೇವ ಚ ಭಾರತಾನ್||

ಅದಕ್ಕೆ ದ್ರೋಣನು ಅಮರ್ಷಣ ದುರ್ಯೋದನ, ದುಃಶಾಸನ, ಕರ್ಣ ಮತ್ತು ಸರ್ವ ಭಾರತರನ್ನೂ ಉದ್ದೇಶಿಸಿ ಹೇಳಿದನು:

02071034a ಅವಧ್ಯಾನ್ಪಾಂಡವಾನಾಹುರ್ದೇವಪುತ್ರಾನ್ದ್ವಿಜಾತಯಃ|

02071034c ಅಹಂ ತು ಶರಣಂ ಪ್ರಾಪ್ತಾನ್ವರ್ತಮಾನೋ ಯಥಾಬಲಂ||

“ದೇವಪುತ್ರ ಪಾಂಡವರು ಅವಧ್ಯರು ಎಂದು ದ್ವಿಜರು ಹೇಳಿದ್ದಾರೆ. ಆದರೂ ನನ್ನಲ್ಲಿ ಶರಣುಬಂದವರಿಗೆ ಯಥಾಶಕ್ತಿ ಮಾಡುತ್ತೇನೆ.

02071035a ಗತಾನ್ಸರ್ವಾತ್ಮನಾ ಭಕ್ತ್ಯಾ ಧಾರ್ತರಾಷ್ಟ್ರಾನ್ಸರಾಜಕಾನ್|

02071035c ನೋತ್ಸಹೇ ಸಮಭಿತ್ಯಕ್ತುಂ ದೈವಮೂಲಮತಃ ಪರಂ||

ತಾವಾಗಿಯೇ ಭಕ್ತಿಯಿಂದ ನನ್ನ ಬಳಿ ಶರಣುಬಂದಿರುವ ಧಾರ್ತರಾಷ್ಟ್ರರನ್ನೂ ರಾಜನನ್ನೂ ದೂರವಿಡಲು ಸಾಧ್ಯವಿಲ್ಲ. ಇನ್ನು ಉಳಿದದ್ದು ದೈವಕ್ಕಿರುವಂತೆ ನಡೆಯುತ್ತದೆ!

02071036a ಧರ್ಮತಃ ಪಾಂಡುಪುತ್ರಾ ವೈ ವನಂ ಗಚ್ಛಂತಿ ನಿರ್ಜಿತಾಃ|

02071036c ತೇ ಚ ದ್ವಾದಶ ವರ್ಷಾಣಿ ವನೇ ವತ್ಸ್ಯಂತಿ ಕೌರವಾಃ|

ಸೋತ ಪಾಂಡುಪುತ್ರರು ಧರ್ಮಕ್ಕನುಸಾರ ವನಕ್ಕೆ ಹೋಗಿದ್ದಾರೆ. ಆ ಕೌರವರು ಹನ್ನೆರಡು ವರ್ಷಗಳು ವನದಲ್ಲಿ ವಾಸಿಸುತ್ತಾರೆ.

02071037a ಚರಿತಬ್ರಹ್ಮಚರ್ಯಾಶ್ಚ ಕ್ರೋಧಾಮರ್ಷವಶಾನುಗಾಃ||

02071037c ವೈರಂ ಪ್ರತ್ಯಾನಯಿಷ್ಯಂತಿ ಮಮ ದುಃಖಾಯ ಪಾಂಡವಾಃ|

ಬ್ರಹ್ಮಚರ್ಯವನ್ನು ಅನುಸರಿಸಿ, ಕ್ರೋಧ ಮತ್ತು ಅಸಹನೆಗಳಿಂದೊಡಗೂಡಿ ಪಾಂಡವರು ನನ್ನ ದುಃಖಕ್ಕೋಸ್ಕರ ವೈರವನ್ನು ತೆಗೆದುಕೊಂಡು ಬರುತ್ತಾರೆ.

02071038a ಮಯಾ ತು ಭ್ರಂಶಿತೋ ರಾಜ್ಯಾದ್ದ್ರುಪದಃ ಸಖಿವಿಗ್ರಹೇ||

02071038c ಪುತ್ರಾರ್ಥಮಯಜತ್ಕ್ರೋಧಾದ್ವಧಾಯ ಮಮ ಭಾರತ|

ಭಾರತ! ಸಖ್ಯವನ್ನು ಪುನಃ ಪಡೆಯುವುದಕ್ಕೋಸ್ಕರ ನನ್ನಿಂದ ರಾಜ್ಯವನ್ನು ಕಳೆದುಕೊಂಡ ದ್ರುಪದನು ಕ್ರೋಧದಿಂದ ನನ್ನ ವಧೆಗೆಂದು ಪುತ್ರನಿಗಾಗಿ ಯಜ್ಞ ಮಾಡಿದ್ದನು. 

02071039a ಯಾಜೋಪಯಾಜತಪಸಾ ಪುತ್ರಂ ಲೇಭೇ ಸ ಪಾವಕಾತ್||

02071039c ಧೃಷ್ಟದ್ಯುಮ್ನಂ ದ್ರೌಪದೀಂ ಚ ವೇದೀಮಧ್ಯಾತ್ಸುಮಧ್ಯಮಾಂ|

ಯಾಜ-ಉಪಯಾಜರ ತಪಸ್ಸಿನಿಂದ ಅವನು ವೇದಿಮಧ್ಯದಲ್ಲಿ ಪಾವಕನಿಂದ ಪುತ್ರ ಧೃಷ್ಟಧ್ಯುಮ್ನನನ್ನು ಮತ್ತು ಸುಮಧ್ಯಮೆ ದ್ರೌಪದಿಯನ್ನೂ ಪಡೆದನು.

02071040a ಜ್ವಾಲಾವರ್ಣೋ ದೇವದತ್ತೋ ಧನುಷ್ಮಾನ್ಕವಚೀ ಶರೀ||

02071040c ಮರ್ತ್ಯಧರ್ಮತಯಾ ತಸ್ಮಾದಿತಿ ಮಾಂ ಭಯಮಾವಿಶತ್|

ಮರ್ತ್ಯರ ಧರ್ಮಕ್ಕೊಳಗಾದ ನನಗೆ ಕವಚ-ಧನುರ್ಬಾಣಗಳೊಂದಿಗೇ ಹುಟ್ಟಿದ ಆ ಜ್ವಾಲವರ್ಣಿ ದೇವದತ್ತನ ಭಯವು ಆವರಿಸಿದೆ.

02071041a ಗತೋ ಹಿ ಪಕ್ಷತಾಂ ತೇಷಾಂ ಪಾರ್ಷತಃ ಪುರುಷರ್ಷಭಃ||

02071041c ಸೃಷ್ಟಪ್ರಾಣೋ ಭೃಶತರಂ ತಸ್ಮಾದ್ಯೋತ್ಸ್ಯೇ ತವಾರಿಭಿಃ|

ಈ ಪುರುಷರ್ಷಭ ಪಾರ್ಷತನು ಅವರ ಪಕ್ಷಕ್ಕೆ ಹೋಗಿದ್ದುದರಿಂದ ಬದುಕಿನಲ್ಲಿ ಅತ್ಯಂತ ನಿರಾಸೆಯುಳ್ಳ ನಾನು ನಿಮ್ಮ ಅರಿಗಳ ವಿರುದ್ಧ ಯುದ್ಧ ಮಾಡುತ್ತೇನೆ.

02071042a ಮದ್ವಧಾಯ ಶ್ರುತೋ ಹ್ಯೇಷ ಲೋಕೇ ಚಾಪ್ಯತಿವಿಶ್ರುತಃ||

02071042c ನೂನಂ ಸೋಽಯಮನುಪ್ರಾಪ್ತಸ್ತ್ವತ್ಕೃತೇ ಕಾಲಪರ್ಯಯಃ|

ಈ ಅತಿವಿಶ್ರುತನು ನನ್ನ ವಧೆಗಾಗಿಯೇ ಇದ್ದಾನೆ ಎಂದು ಲೋಕವೇ ತಿಳಿದಿದೆ. ನೀವೇ ಕಾಲವನ್ನು ಬದಲಾಯಿಸಿದ್ದೀರಿ! 

02071043a ತ್ವರಿತಾಃ ಕುರುತ ಶ್ರೇಯೋ ನೈತದೇತಾವತಾ ಕೃತಂ||

02071043c ಮುಹೂರ್ತಂ ಸುಖಮೇವೈತತ್ತಾಲಚ್ಛಾಯೇವ ಹೈಮನೀ|

ಆದುದರಿಂದ ಶ್ರೇಯವಾದುದ್ದನ್ನು ಬೇಗ ಮಾಡಿ. ಇದೂವರೆಗೆ ಮಾಡಿದ್ದುದು ಸಾಕಾಗಲಿಲ್ಲ. ಛಳಿಗಾಲದಲ್ಲಿ ತಾಳೆಯಮರದ ನೆರಳು ಹೇಗೋ ಹಾಗೆ ಈ ಸುಖವು ಸ್ವಲ್ಪವೇ ಸಮಯವಿರುವಂತಹುದು.

02071044a ಯಜಧ್ವಂ ಚ ಮಹಾಯಜ್ಞೈರ್ಭೋಗಾನಶ್ನೀತ ದತ್ತ ಚ||

02071044c ಇತಶ್ಚತುರ್ದಶೇ ವರ್ಷೇ ಮಹತ್ಪ್ರಾಪ್ಸ್ಯಥ ವೈಶಸಂ|

ಮಹಾ ಯಜ್ಞಗಳನ್ನು ಯಾಜಿಸಿ. ಭೋಗಿಸುವುದರ ಜೊತೆಗೆ ದಾನವನ್ನೂ ನೀಡಿ. ಇಂದಿನಿಂದ ಹದಿನಾಲ್ಕನೆಯ ವರ್ಷದಲ್ಲಿ ಮಹಾ ವಿನಾಶವನ್ನು ಹೊಂದುತ್ತೀರಿ!

02071045a ದುರ್ಯೋಧನ ನಿಶಮ್ಯೈತತ್ಪ್ರತಿಪದ್ಯ ಯಥೇಚ್ಛಸಿ||

02071045c ಸಾಮ ವಾ ಪಾಂಡವೇಯೇಷು ಪ್ರಯುಂಕ್ತ್ವ ಯದಿ ಮನ್ಯಸೇ|

ದುರ್ಯೋಧನ! ನಿನಗಿಷ್ಟವಾದುದನ್ನು ಕೇಳಿಸಿಕೊಂಡಿದ್ದೀಯೆ ಮತ್ತು ಅರ್ಥಮಾಡಿಕೊಂಡಿದ್ದೀಯೆ. ಒಂದುವೇಳೆ ಒಪ್ಪಿಕೊಂಡರೆ ಪಾಂಡವೇಯರನ್ನು ಸಾಮದಿಂದ ಸಂತೋಷಗೊಳಿಸು.””

02071046 ವೈಶಂಪಾಯನ ಉವಾಚ|

02071046a ದ್ರೋಣಸ್ಯ ವಚನಂ ಶ್ರುತ್ವಾ ಧೃತರಾಷ್ಟ್ರೋಽಬ್ರವೀದಿದಂ|

02071046c ಸಮ್ಯಗಾಹ ಗುರುಃ ಕ್ಷತ್ತರುಪಾವರ್ತಯ ಪಾಂಡವಾನ್||

ವೈಶಂಪಾಯನನು ಹೇಳಿದನು: “ದ್ರೋಣನ ಮಾತುಗಳನ್ನು ಕೇಳಿದ ಧೃತರಾಷ್ಟ್ರನು ಹೇಳಿದನು: “ಈ ಗುರುವು ಸರಿಯಾಗಿಯೇ ಹೇಳಿದ್ದಾನೆ. ಕ್ಷತ್ತ! ಪಾಂಡವರನ್ನು ಹಿಂದೆ ಕರೆದುಕೊಂಡು ಬಾ!

02071047a ಯದಿ ವಾ ನ ನಿವರ್ತಂತೇ ಸತ್ಕೃತಾ ಯಾಂತು ಪಾಂಡವಾಃ|

02071047c ಸಶಸ್ತ್ರರಥಪಾದಾತಾ ಭೋಗವಂತಶ್ಚ ಪುತ್ರಕಾಃ||

ಮರಳಿ ಬರದಿದ್ದರೆ, ಪಾಂಡವರು ಶಸ್ತ್ರ, ರಥ, ಸೇವಕರು, ಮತ್ತು ಮಕ್ಕಳೊಂದಿಗೆ ಸುಖವಾಗಿ ಸತ್ಕೃತರಾಗಿ ಹೋಗಲಿ.””

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಅನುದ್ಯೂತಪರ್ವಣಿ ವಿದುರಧೃತರಾಷ್ಟ್ರದ್ರೋಣವಾಕ್ಯೇ ಏಕಸಪ್ತತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅನುದ್ಯೂತಪರ್ವದಲ್ಲಿ ವಿದುರಧೃತರಾಷ್ಟ್ರದ್ರೋಣವಾಕ್ಯ ಎನ್ನುವ ಎಪ್ಪತ್ತೊಂದನೆಯ ಅಧ್ಯಾಯವು.

Related image

Comments are closed.