Sabha Parva: Chapter 70

ಸಭಾ ಪರ್ವ: ಅನುದ್ಯೂತ ಪರ್ವ

೭೦

ದ್ರೌಪದೀ-ಕುಂತಿ ಸಂವಾದ

ದ್ರೌಪದಿಯು ಕುಂತಿಯನ್ನು ಬೀಳ್ಕೊಳ್ಳಲು ಹೋಗುವುದು (೧-೩). ಕುಂತಿಯು ದ್ರೌಪದಿಗೆ ಸಾಂತ್ವನ ಮತ್ತು ಉಪದೇಶದ ನುಡಿಗಳನ್ನು ಹೇಳುವುದು (೪-೯). ಕುಂತಿಯು ಮಕ್ಕಳನ್ನು ನೋಡಿ ರೋದಿಸುವುದು (೧೦-೨೧). ಕುಂತಿಯನ್ನು ವಿದುರನ ಮನೆಗೆ ಕರೆದೊಯ್ಯುವುದು (೨೨). ಚಿಂತಾಪರನಾದ ಧೃತರಾಷ್ಟ್ರನು ವಿದುರನನ್ನು ಕರೆಸುವುದು (೨೩-೨೪).

02070001 ವೈಶಂಪಾಯನ ಉವಾಚ|

02070001a ತಸ್ಮಿನ್ಸಂಪ್ರಸ್ಥಿತೇ ಕೃಷ್ಣಾ ಪೃಥಾಂ ಪ್ರಾಪ್ಯ ಯಶಸ್ವಿನೀಂ|

02070001c ಆಪೃಚ್ಛದ್ಭೃಶದುಃಖಾರ್ತಾ ಯಾಶ್ಚಾನ್ಯಾಸ್ತತ್ರ ಯೋಷಿತಃ||

ವೈಶಂಪಾಯನನು ಹೇಳಿದನು: “ಅವನು ಹೊರಡುತ್ತಿರುವಾಗ ಕೃಷ್ಣೆಯು ಯಶಸ್ವಿನೀ ಪೃಥೆಯಲ್ಲಿಗೆ ಹೋದಳು. ಅಲ್ಲಿ ಅತ್ಯಂತ ದುಃಖಾರ್ತಳಾಗಿ ಅವಳಿಂದ ಮತ್ತು ಇತರರಿಂದ ಬೀಳ್ಕೊಂಡಳು.

02070002a ಯಥಾರ್ಹಂ ವಂದನಾಶ್ಲೇಷಾನ್ಕೃತ್ವಾ ಗಂತುಮಿಯೇಷ ಸಾ|

02070002c ತತೋ ನಿನಾದಃ ಸುಮಹಾನ್ಪಾಂಡವಾಂತಃಪುರೇಽಭವತ್||

ಅವರವರಿಗೆ ತಕ್ಕಂತೆ ನಮಸ್ಕರಿಸಿ ಅಥವಾ ಆಲಂಗಿಸಿ[1] ಅವಳು ಹೋಗಲು ಸಿದ್ಧವಾಗಿರಲು ಪಾಂಡವರ ಅಂತಃಪುರದಲ್ಲಿ ಜೋರಾದ ರೋದನವು ಕೇಳಿಬಂದಿತು.

02070003a ಕುಂತೀ ಚ ಭೃಶಸಂತಪ್ತಾ ದ್ರೌಪದೀಂ ಪ್ರೇಕ್ಷ್ಯ ಗಚ್ಛತೀಂ|

02070003c ಶೋಕವಿಹ್ವಲಯಾ ವಾಚಾ ಕೃಚ್ಛ್ರಾದ್ವಚನಮಬ್ರವೀತ್||

ದುಃಖಸಂತಪ್ತೆ ಕುಂತಿಯು ಹೊರಡುತ್ತಿರುವ ದ್ರೌಪದಿಯನ್ನು ನೋಡಿ ಶೋಕವಿಹ್ವಲಳಾಗಿ ಕಷ್ಟದಿಂದ ಈ ಮಾತುಗಳನ್ನಾಡಿದಳು:

02070004a ವತ್ಸೇ ಶೋಕೋ ನ ತೇ ಕಾರ್ಯಃ ಪ್ರಾಪ್ಯೇದಂ ವ್ಯಸನಂ ಮಹತ್|

02070004c ಸ್ತ್ರೀಧರ್ಮಾಣಾಮಭಿಜ್ಞಾಸಿ ಶೀಲಾಚಾರವತೀ ತಥಾ||

“ವತ್ಸೇ! ಈ ಮಹಾ ವ್ಯಸನವನ್ನು ಪಡೆದುದಕ್ಕೆ ಶೋಕಿಸಬೇಡ. ಸ್ತ್ರೀಧರ್ಮಗಳನ್ನು ಅರಿತಿದ್ದೀಯೆ ಮತ್ತು ಶೀಲಾಚಾರವತಿಯೂ ಆಗಿದ್ದೀಯೆ.

02070005a ನ ತ್ವಾಂ ಸಂದೇಷ್ಟುಮರ್ಹಾಮಿ ಭರ್ತೄನ್ಪ್ರತಿ ಶುಚಿಸ್ಮಿತೇ|

02070005c ಸಾಧ್ವೀಗುಣಸಮಾಧಾನೈರ್ಭೂಷಿತಂ ತೇ ಕುಲದ್ವಯಂ||

ಶುಚಿಸ್ಮಿತೇ! ನಿನ್ನ ಪತಿಗಳ ಕುರಿತು ನಾನು ಏನನ್ನೂ ಹೇಳಬೇಕಾದ್ದಿಲ್ಲ. ನೀನು ನಿನ್ನ ಸಾಧ್ವೀಗುಣ ಸಮಾಧಾನಗಳಿಂದ ಎರಡೂ ಕುಲಗಳನ್ನು[2] ಸಿಂಗರಿಸಿದ್ದೀಯೆ.

02070006a ಸಭಾಗ್ಯಾಃ ಕುರವಶ್ಚೇಮೇ ಯೇ ನ ದಗ್ಧಾಸ್ತ್ವಯಾನಘೇ|

02070006c ಅರಿಷ್ಟಂ ವ್ರಜ ಪಂಥಾನಂ ಮದನುಧ್ಯಾನಬೃಂಹಿತಾ||

02070007a ಭಾವಿನ್ಯರ್ಥೇ ಹಿ ಸತ್ಸ್ತ್ರೀಣಾಂ ವೈಕ್ಲವ್ಯಂ ನೋಪಜಾಯತೇ|

02070007c ಗುರುಧರ್ಮಾಭಿಗುಪ್ತಾ ಚ ಶ್ರೇಯಃ ಕ್ಷಿಪ್ರಮವಾಪ್ಸ್ಯಸಿ||

ಅನಘೇ! ನಿನ್ನಿಂದ ಸುಟ್ಟುಹೋಗದೇ ಇದ್ದ ಕುರುಗಳು ಭಾಗ್ಯವಂತರು. ನನ್ನ ಧ್ಯಾನದಿಂದ ಶಕ್ತಿಯನ್ನು ಪಡೆದು ಅರಿಷ್ಟ[3] ಮಾರ್ಗವನ್ನು ನಿನ್ನದಾಗಿಸಿಕೋ. ಆಗಲೇ ಬೇಕಾದುದಕ್ಕೆ ಸತ್ಸ್ತ್ರೀಯರು ಹಿಂಜರಿಯುವುದಿಲ್ಲ. ನಿನ್ನ ಹಿರಿಯರ ಧರ್ಮದ ರಕ್ಷಣೆಯಿರುವ ನೀನು ಅಲ್ಪ ಸಮಯದಲ್ಲಿಯೇ ಶ್ರೇಯಸ್ಸನ್ನು ಹೊಂದುತ್ತೀಯೆ!

02070008a ಸಹದೇವಶ್ಚ ಮೇ ಪುತ್ರಃ ಸದಾವೇಕ್ಷ್ಯೋ ವನೇ ವಸನ್|

02070008c ಯಥೇದಂ ವ್ಯಸನಂ ಪ್ರಾಪ್ಯ ನಾಸ್ಯ ಸೀದೇನ್ಮಹನ್ಮನಃ||

ವನದಲ್ಲಿ ವಾಸಿಸುವಾಗ ನನ್ನ ಪುತ್ರ ಸಹದೇವನನ್ನು ಸದಾ ನೋಡಿಕೋ! ಈ ವ್ಯಸನವನ್ನು ಹೊಂದಿದ ಅವನ ಮಹಾಮನಸ್ಸು ದುಃಖಿಸಬಾರದು.”

02070009a ತಥೇತ್ಯುಕ್ತ್ವಾ ತು ಸಾ ದೇವೀ ಸ್ರವನ್ನೇತ್ರಜಲಾವಿಲಾ|

02070009c ಶೋಣಿತಾಕ್ತೈಕವಸನಾ ಮುಕ್ತಕೇಶ್ಯಭಿನಿರ್ಯಯೌ||

ಹಾಗೆಯೇ ಅಗಲೆಂದು ಹೇಳಿ ಸುರಿಯುವ ಕಣ್ಣೀರಿನಿಂದ ಮುಖವು ಕಲೆಯಾಗಿರಲು, ರಜಸ್ವಲೆಯಾಗಿ ಏಕವಸ್ತ್ರದಲ್ಲಿದ್ದ  ಆ ದೇವಿಯು ತಲೆಕೂದಲನ್ನು ಕಟ್ಟದೆಯೇ ಹೊರಟಳು.

02070010a ತಾಂ ಕ್ರೋಶಂತೀಂ ಪೃಥಾ ದುಃಖಾದನುವವ್ರಾಜ ಗಚ್ಛತೀಂ|

02070010c ಅಥಾಪಶ್ಯತ್ಸುತಾನ್ಸರ್ವಾನ್ ಹೃತಾಭರಣವಾಸಸಃ||

02070011a ರುರುಚರ್ಮಾವೃತತನೂನ್ ಹ್ರಿಯಾ ಕಿಂ ಚಿದವಾಮ್ಮುಖಾನ್|

02070011c ಪರೈಃ ಪರೀತಾನ್ಸಂಹೃಷ್ಟೈಃ ಸುಹೃದ್ಭಿಶ್ಚಾನುಶೋಚಿತಾನ್||

ಅಳುತ್ತಾ ಹೋಗುತ್ತಿದ್ದ ಅವಳನ್ನು ಪೃಥೆಯು ದುಃಖದಿಂದ ಹಿಂಬಾಲಿಸಿ ಬಂದು ವಸ್ತ್ರಾಭರಣಗಳನ್ನು ಕಳಚಿಕೊಂಡು, ದೇಹಕ್ಕೆ ರುರುಚರ್ಮವನ್ನು ಸುತ್ತಿಕೊಂಡು, ಕೇಳಿ ಹಾಕುತ್ತಿದ್ದ ತಮ್ಮ ಶತ್ರುಗಳ ಮಧ್ಯದಲ್ಲಿ ನಾಚಿಕೆಯಿಂದ ತಲೆತಗ್ಗಿಸಿದ್ದ, ಆದರೆ ಸುಹೃದಯರ ಶೋಕದ ವಿಷಯರಾದ ಸರ್ವ ಸುತರನ್ನೂ ನೋಡಿದಳು.

02070012a ತದವಸ್ಥಾನ್ಸುತಾನ್ಸರ್ವಾನುಪಸೃತ್ಯಾತಿವತ್ಸಲಾ|

02070012c ಸಸ್ವಜಾನಾವದಚ್ಶೋಕಾತ್ತತ್ತದ್ವಿಲಪತೀ ಬಹು||

ಅತಿಪ್ರೀತಿಯಿಂದ ಬೇಗನೇ ಅದೇ ಅವಸ್ಥೆಯಲ್ಲಿ ಅವರ ಹತ್ತಿರ ಹೋಗಿ ಶೋಕದಿಂದ ವಿಲಪಿಸುತ್ತಾ ಅವರಿಗೆ ಮತ್ತು ಅವರ ಜನರಿಗೆ ಹೇಳಿದಳು:

02070013a ಕಥಂ ಸದ್ಧರ್ಮಚಾರಿತ್ರವೃತ್ತಸ್ಥಿತಿವಿಭೂಷಿತಾನ್|

02070013c ಅಕ್ಷುದ್ರಾನ್ದೃಢಭಕ್ತಾಂಶ್ಚ ದೈವತೇಜ್ಯಾಪರಾನ್ಸದಾ||

02070014a ವ್ಯಸನಂ ವಃ ಸಮಭ್ಯಾಗಾತ್ಕೋಽಯಂ ವಿಧಿವಿಪರ್ಯಯಃ|

02070014c ಕಸ್ಯಾಪಧ್ಯಾನಜಂ ಚೇದಮಾಗಃ ಪಶ್ಯಾಮಿ ವೋ ಧಿಯಾ||

“ಸದ್ಧರ್ಮ-ಚಾರಿತ್ರ್ಯಗಳನ್ನು ಸುತ್ತಿಕೊಂಡು ವಿಭೂಷಿತರಾದ, ಎಂದೂ ಕೆಳಮಟ್ಟಕ್ಕಿಳಿಯದೇ, ದೃಢಭಕ್ತರಾಗಿದ್ದ, ಸದಾ ದೇವತೆಗಳ ಪೂಜೆಯಲ್ಲಿ ನಿರತರಾದ ನಿಮಗೆ ಹೇಗೆ ಈ ವ್ಯಸನವು ಬಂದು ಸೇರಿಕೊಂಡಿತು? ಅಥವಾ ಇದು ಯಾವ ವಿಧಿವಿಪರ್ಯಾಸ? ಯಾರ ಶತ್ರುತ್ವ-ತಪ್ಪಿನಿಂದಾಗಿ ನಿಮ್ಮನ್ನು ಈ ಪರಿಸ್ಥಿತಿಯಲ್ಲಿ ಕಾಣುತ್ತಿದ್ದೇನೆ?

02070015a ಸ್ಯಾತ್ತು ಮದ್ಭಾಗ್ಯದೋಷೋಽಯಂ ಯಾಹಂ ಯುಷ್ಮಾನಜೀಜನಂ|

02070015c ದುಃಖಾಯಾಸಭುಜೋಽತ್ಯರ್ಥಂ ಯುಕ್ತಾನಪ್ಯುತ್ತಮೈರ್ಗುಣೈಃ||

ಬಹುಷಃ ನಿಮಗೆ ಜನ್ಮವಿತ್ತ ನನ್ನದೇ ದುರ್ಭಾಗ್ಯದಿಂದ, ಎಷ್ಟೇ ಉತ್ತಮ ಗುಣಾನ್ವಿತರಾಗಿದ್ದರೂ ನೀವು ಈ ಮಹಾ ದುಃಖಾಯಾಸಗಳನ್ನು ಅನುಭವಿಸುತ್ತಿರುವಿರಿ. 

02070016a ಕಥಂ ವತ್ಸ್ಯಥ ದುರ್ಗೇಷು ವನೇಷ್ವೃದ್ಧಿವಿನಾಕೃತಾಃ|

02070016c ವೀರ್ಯಸತ್ತ್ವಬಲೋತ್ಸಾಹತೇಜೋಭಿರಕೃಶಾಃ ಕೃಶಾಃ||

ಸಂಪತ್ತು ಇಲ್ಲದವರಾಗಿ, ವೀರ್ಯ, ಸತ್ವ, ಬಲ, ಉತ್ಸಾಹ, ತೇಜಸ್ಸನ್ನು ಕಳೆದುಕೊಳ್ಳದಿದ್ದರೂ ಕೃಶರಾಗಿ ಹೇಗೆ ಆ ವನದುರ್ಗಗಳಲ್ಲಿ ವಾಸಿಸುವಿರಿ?

02070017a ಯದ್ಯೇತದಹಮಜ್ಞಾಸ್ಯಂ ವನವಾಸೋ ಹಿ ವೋ ಧ್ರುವಂ|

02070017c ಶತಶೃಂಗಾನ್ಮೃತೇ ಪಾಂಡೌ ನಾಗಮಿಷ್ಯಂ ಗಜಾಹ್ವಯಂ||

ವನವಾಸವೇ ನಿಮಗೆ ನಿಶ್ಚಿತವಾದುದು ಎಂದು ನಾನು ತಿಳಿದಿದ್ದರೆ ಪಾಂಡುವಿನ ಮರಣದ ನಂತರ ಶತಶೃಂಗದಿಂದ ಗಜಾಹ್ವಯಕ್ಕೆ ಬರುತ್ತಲೇ ಇರಲಿಲ್ಲ.

02070018a ಧನ್ಯಂ ವಃ ಪಿತರಂ ಮನ್ಯೇ ತಪೋಮೇಧಾನ್ವಿತಂ ತಥಾ|

02070018c ಯಃ ಪುತ್ರಾಧಿಮಸಂಪ್ರಾಪ್ಯ ಸ್ವರ್ಗೇಚ್ಛಾಮಕರೋತ್ಪ್ರಿಯಾಂ||

ಪ್ರಿಯ ಪುತ್ರರಿಗಾಗಿ ಶೋಕಿಸುವ ಮೊದಲೇ ಸ್ವರ್ಗಕ್ಕೆ ಹೋಗಲು ಬಯಸಿದ ತಪೋಮೇಧಾನ್ವಿತ ನಿಮ್ಮ ತಂದೆಯೇ ಧನ್ಯ ಎಂದು ತಿಳಿಯುತ್ತೇನೆ.

02070019a ಧನ್ಯಾಂ ಚಾತೀಂದ್ರಿಯಜ್ಞಾನಾಮಿಮಾಂ ಪ್ರಾಪ್ತಾಂ ಪರಾಂ ಗತಿಂ|

02070019c ಮನ್ಯೇಽದ್ಯ ಮಾದ್ರೀಂ ಧರ್ಮಜ್ಞಾಂ ಕಲ್ಯಾಣೀಂ ಸರ್ವಥೈವ ಹಿ||

ಸರ್ವಥಾ ಧರ್ಮಜ್ಞೆಯೂ, ಕಲ್ಯಾಣಿಯೂ, ಅತೀಂದ್ರಿಯಜ್ಞಾನಿಯೂ ಆದ ಮಾದ್ರಿಯೂ ಕೂಡ ಪರಮ ಗತಿಯನ್ನು ಹೊಂದಿ ಧನ್ಯಳಾದಳು ಎಂದು ತಿಳಿಯುತ್ತೇನೆ.

02070020a ರತ್ಯಾ ಮತ್ಯಾ ಚ ಗತ್ಯಾ ಚ ಯಯಾಹಮಭಿಸಂಧಿತಾ|

02070020c ಜೀವಿತಪ್ರಿಯತಾಂ ಮಹ್ಯಂ ಧಿಗಿಮಾಂ ಕ್ಲೇಶಭಾಗಿನೀಂ||

ಪ್ರೀತಿ, ಚಿಂತೆ ಮತ್ತು ಗತಿಯು ನನ್ನನ್ನು ಇನ್ನೂ ಜೀವವನ್ನು ಹಿಡಿದಿಟ್ಟುಕೊಂಡಿರುವಂತೆ ಮಾಡಿವೆ. ಈ ಅಪ್ರಿಯ, ಕ್ಲೇಶವನ್ನೇ ಕೊಟ್ಟಿರುವ ನನ್ನ ಈ ಜೀವಿತಕ್ಕೆ ಧಿಕ್ಕಾರ!”

02070021a ಏವಂ ವಿಲಪತೀಂ ಕುಂತೀಮಭಿಸಾಂತ್ವ್ಯ ಪ್ರಣಮ್ಯ ಚ|

02070021c ಪಾಂಡವಾ ವಿಗತಾನಂದಾ ವನಾಯೈವ ಪ್ರವವ್ರಜುಃ||

ಈ ರೀತಿ ವಿಲಪಿಸುತ್ತಿರುವ ಕುಂತಿಯನ್ನು ಸಂತವಿಸಿ, ನಮಸ್ಕರಿಸಿ, ಬೀಳ್ಕೊಂಡು ಪಾಂಡವರು ವನದಕಡೆ ಮುಂದುವರೆದರು.

02070022a ವಿದುರಾದಯಶ್ಚ ತಾಮಾರ್ತಾಂ ಕುಂತೀಮಾಶ್ವಾಸ್ಯ ಹೇತುಭಿಃ|

02070022c ಪ್ರಾವೇಶಯನ್ಗೃಹಂ ಕ್ಷತ್ತುಃ ಸ್ವಯಮಾರ್ತತರಾಃ ಶನೈಃ||

ವಿದುರ ಮೊದಲಾದವರು ಸ್ವಯಂ ತಾವೇ ದುಃಖಿತರಾಗಿದ್ದರೂ ಆರ್ತೆ ಕುಂತಿಯನ್ನು ಕಾರಣಗಳನ್ನಿತ್ತು ಸಮಾಧಾನ ಪಡಿಸಿ ನಿಧಾನವಾಗಿ ಕ್ಷತ್ತನ ಮನೆಗೆ ಕರೆದೊಯ್ದರು.

02070023a ರಾಜಾ ಚ ಧೃತರಾಷ್ಟ್ರಃ ಸ ಶೋಕಾಕುಲಿತಚೇತನಃ|

02070023c ಕ್ಷತ್ತುಃ ಸಂಪ್ರೇಷಯಾಮಾಸ ಶೀಘ್ರಮಾಗಮ್ಯತಾಮಿತಿ||

ಶೋಕಾಕುಲಿತಚೇತನ ರಾಜಾ ಧೃತರಾಷ್ಟ್ರನು “ಶೀಘ್ರವೇ ಬಾ!” ಎಂದು ಕ್ಷತ್ತನಿಗೆ ಹೇಳಿ ಕಳುಹಿಸಿದನು.

02070024a ತತೋ ಜಗಾಮ ವಿದುರೋ ಧೃತರಾಷ್ಟ್ರನಿವೇಶನಂ|

02070024c ತಂ ಪರ್ಯಪೃಚ್ಛತ್ಸಂವಿಗ್ನೋ ಧೃತರಾಷ್ಟ್ರೋ ನರಾಧಿಪಃ||

ಆಗ ವಿದುರನು ಧೃತರಾಷ್ಟ್ರನ ಮನೆಗೆ ಹೋದನು. ಅಲ್ಲಿ ಸಂವಿಗ್ನ ನರಾಧಿಪ ಧೃತರಾಷ್ಟ್ರನು ಅವನನ್ನು ಪ್ರಶ್ನಿಸಿದನು.

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಅನುದ್ಯೂತಪರ್ವಣಿ ದ್ರೌಪದೀಕುಂತೀಸಂವಾದೇ ಸಪ್ತತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅನುದ್ಯೂತಪರ್ವದಲ್ಲಿ ದ್ರೌಪದೀಕುಂತೀಸಂವಾದ ಎನ್ನುವ ಎಪ್ಪತ್ತನೆಯ ಅಧ್ಯಾಯವು.

Related image

[1]ಹಿರಿಯರಿಗೆ ನಮಸ್ಕರಿಸಿ, ಸಮವಯಸ್ಕರನ್ನು ಮತ್ತು ಕಿರಿಯವರನ್ನು ಆಲಂಗಿಸಿ

[2]ಪಾಂಡವ ಮತ್ತು ಪಾಂಚಾಲ ಕುಲಗಳು

[3]ಭಯವಿಲ್ಲದಿರುವ

Comments are closed.