ಸಭಾ ಪರ್ವ: ಅನುದ್ಯೂತ ಪರ್ವ
೬೯
ಯುಧಿಷ್ಠಿರನ ವನಪ್ರಸ್ಥಾನ
ಯುಧಿಷ್ಠಿರನು ಸಭೆಯಲ್ಲಿದ್ದ ಎಲ್ಲರಿಂದ ಬೀಳ್ಕೊಳ್ಳುವುದು (೧-೪). ವಿದುರನು ಯುಧಿಷ್ಠಿರನಿಗೆ ಮಂಗಳವನ್ನು ಕೋರಿ, ಉಪದೇಶಗಳೊಂದಿಗೆ ಬೀಳ್ಕೊಡುವುದು (೫-೨೦), ಯುಧಿಷ್ಠಿರನು ಮುಂದುವರೆಯುವುದು (೨೧).
02069001 ಯುಧಿಷ್ಠಿರ ಉವಾಚ|
02069001a ಆಮಂತ್ರಯಾಮಿ ಭರತಾಂಸ್ತಥಾ ವೃದ್ಧಂ ಪಿತಾಮಹಂ|
02069001c ರಾಜಾನಂ ಸೋಮದತ್ತಂ ಚ ಮಹಾರಾಜಂ ಚ ಬಾಹ್ಲಿಕಂ||
ಯುಧಿಷ್ಠಿರನು ಹೇಳಿದನು: “ಭಾರತರೇ! ವೃದ್ಧ ಪಿತಾಮಹನೇ! ರಾಜ ಸೋಮದತ್ತ! ಮಹಾರಾಜ ಬಾಹ್ಲೀಕ! ನಿಮ್ಮಿಂದ ಬೀಳ್ಕೊಳ್ಳುತ್ತಿದ್ದೇನೆ.
02069002a ದ್ರೋಣಂ ಕೃಪಂ ನೃಪಾಂಶ್ಚಾನ್ಯಾನಶ್ವತ್ಥಾಮಾನಮೇವ ಚ|
02069002c ವಿದುರಂ ಧೃತರಾಷ್ಟ್ರಂ ಚ ಧಾರ್ತರಾಷ್ಟ್ರಾಂಶ್ಚ ಸರ್ವಶಃ||
02069003a ಯುಯುತ್ಸುಂ ಸಂಜಯಂ ಚೈವ ತಥೈವಾನ್ಯಾನ್ಸಭಾಸದಃ|
02069003c ಸರ್ವಾನಾಮಂತ್ರ್ಯ ಗಚ್ಛಾಮಿ ದ್ರಷ್ಟಾಸ್ಮಿ ಪುನರೇತ್ಯ ವಃ||
ದ್ರೋಣ, ಕೃಪ, ಅನ್ಯ ನೃಪರು, ಅಶ್ವತ್ಥಾಮ, ವಿದುರ, ಧೃತರಾಷ್ಟ್ರ, ಸರ್ವ ಧಾರ್ತರಾಷ್ಟ್ರರು, ಯುಯುತ್ಸು, ಸಂಜಯ, ಮತ್ತು ಸರ್ವ ಸಭಾಸದರಿಂದ ಬೀಳ್ಕೊಂಡು ಹೋಗುತ್ತಿದ್ದೇನೆ. ಪುನಃ ನಿಮ್ಮನ್ನು ಕಾಣುತ್ತೇನೆ.””
02069004 ವೈಶಂಪಾಯನ ಉವಾಚ|
02069004a ನ ಚ ಕಿಂ ಚಿತ್ತದೋಚುಸ್ತೇ ಹ್ರಿಯಾ ಸಂತೋ ಯುಧಿಷ್ಠಿರಂ|
02069004c ಮನೋಭಿರೇವ ಕಲ್ಯಾಣಂ ದಧ್ಯುಸ್ತೇ ತಸ್ಯ ಧೀಮತಃ||
ವೈಶಂಪಾಯನನು ಹೇಳಿದನು: “ನಾಚಿಕೆಯಿಂದ ಆ ಸಂತರು ಯುಧಿಷ್ಠಿರನಿಗೆ ಏನನ್ನೂ ಹೇಳಲಿಲ್ಲ. ಮನಸ್ಸಿನಲ್ಲಿಯೇ ಅವರು ಆ ಧೀಮಂತನಿಗೆ ಕಲ್ಯಾಣವನ್ನು ಬಯಸಿದರು.
02069005 ವಿದುರ ಉವಾಚ|
02069005a ಆರ್ಯಾ ಪೃಥಾ ರಾಜಪುತ್ರೀ ನಾರಣ್ಯಂ ಗಂತುಮರ್ಹತಿ|
02069005c ಸುಕುಮಾರೀ ಚ ವೃದ್ಧಾ ಚ ನಿತ್ಯಂ ಚೈವ ಸುಖೋಚಿತಾ||
ವಿದುರನು ಹೇಳಿದನು: “ಆರ್ಯೆ ರಾಜಪುತ್ರಿ ಸುಕುಮಾರಿ, ವೃದ್ಧೆ, ನಿತ್ಯವೂ ಸುಖವನ್ನೇ ಹೊಂದಿದ್ದ ಪೃಥೆಯು ಅರಣ್ಯಕ್ಕೆ ಹೋಗಬಾರದು.
02069006a ಇಹ ವತ್ಸ್ಯತಿ ಕಲ್ಯಾಣೀ ಸತ್ಕೃತಾ ಮಮ ವೇಶ್ಮನಿ|
02069006c ಇತಿ ಪಾರ್ಥಾ ವಿಜಾನೀಧ್ವಮಗದಂ ವೋಽಸ್ತು ಸರ್ವಶಃ||
ಅವಳು ಇಲ್ಲಿ ನನ್ನ ಮನೆಯಲ್ಲಿ ಸತ್ಕೃತಳಾಗಿ ವಾಸಿಸುತ್ತಾಳೆ. ಪಾರ್ಥರೇ! ಇದನ್ನು ತಿಳಿದು ಎಲ್ಲ ರೀತಿಯಲ್ಲಿಯೂ ಸುರಕ್ಷಿತರಾಗಿರಿ.
02069007a ಯುಧಿಷ್ಠಿರ ವಿಜಾನೀಹಿ ಮಮೇದಂ ಭರತರ್ಷಭ|
02069007c ನಾಧರ್ಮೇಣ ಜಿತಃ ಕಶ್ಚಿದ್ವ್ಯಥತೇ ವೈ ಪರಾಜಯಾತ್||
ಭರತರ್ಷಭ ಯುಧಿಷ್ಠಿರ! ನನ್ನಿಂದ ಇದನ್ನು ತಿಳಿದುಕೋ. ಅಧರ್ಮದಿಂದ ಗೆಲ್ಲಲ್ಪಟ್ಟವರು ಎಂದೂ ಸೋಲಿನಿಂದ ವ್ಯಥಿತರಾಗುವುದಿಲ್ಲ.
02069008a ತ್ವಂ ವೈ ಧರ್ಮಾನ್ವಿಜಾನೀಷೇ ಯುಧಾಂ ವೇತ್ತಾ ಧನಂಜಯಃ|
02069008c ಹಂತಾರೀಣಾಂ ಭೀಮಸೇನೋ ನಕುಲಸ್ತ್ವರ್ಥಸಂಗ್ರಹೀ||
02069009a ಸಮ್ಯಂತಾ ಸಹದೇವಸ್ತು ಧೌಮ್ಯೋ ಬ್ರಹ್ಮವಿದುತ್ತಮಃ|
02069009c ಧರ್ಮಾರ್ಥಕುಶಲಾ ಚೈವ ದ್ರೌಪದೀ ಧರ್ಮಚಾರಿಣೀ||
ನೀನು ಧರ್ಮವನ್ನು ತಿಳಿದಿದ್ದೀಯೆ. ಧನಂಜಯನು ಯೋದ್ಧರಲ್ಲಿ ತಿಳಿದವನು. ಅರಿಗಳನ್ನು ಕೊಲ್ಲುವುದರಲ್ಲಿ ಭೀಮಸೇನನಿದ್ದಾನೆ. ನಕುಲನು ಸಂಪತ್ತನ್ನು ಕೂಡಿಸುವವನು. ಸಹದೇವನು ಸದೆಬಡಿಯುವವನು. ಧೌಮ್ಯನು ಬ್ರಹ್ಮವಿದರಲ್ಲಿ ಉತ್ತಮನು. ದ್ರೌಪದಿಯು ಧರ್ಮ-ಅರ್ಥಗಳಲ್ಲಿ ಕುಶಲಳೂ ಧರ್ಮಚಾರಿಣಿಯೂ ಆಗಿದ್ದಾಳೆ.
02069010a ಅನ್ಯೋನ್ಯಸ್ಯ ಪ್ರಿಯಾಃ ಸರ್ವೇ ತಥೈವ ಪ್ರಿಯವಾದಿನಃ|
02069010c ಪರೈರಭೇದ್ಯಾಃ ಸಂತುಷ್ಟಾಃ ಕೋ ವೋ ನ ಸ್ಪೃಹಯೇದಿಹ||
ನೀವು ಎಲ್ಲರೂ ಅನ್ಯೋನ್ಯರನ್ನು ಪ್ರೀತಿಸುತ್ತೀರಿ ಮತ್ತು ಅನ್ಯೋನ್ಯರಲ್ಲಿ ಪ್ರೀತಿಯಿಂದ ಮಾತನಾಡುತ್ತೀರಿ. ಸಂತುಷ್ಟರಾದ ನಿಮ್ಮನ್ನು ಇತರರು ಬೇರೆ ಮಾಡಲು ಸಾಧ್ಯವಿಲ್ಲ. ನಿಮ್ಮನ್ನು ಯಾರು ತಾನೇ ದ್ವೇಷಿಸುವುದಿಲ್ಲ?
02069011a ಏಷ ವೈ ಸರ್ವಕಲ್ಯಾಣಃ ಸಮಾಧಿಸ್ತವ ಭಾರತ|
02069011c ನೈನಂ ಶತ್ರುರ್ವಿಷಹತೇ ಶಕ್ರೇಣಾಪಿ ಸಮೋಽಚ್ಯುತ||
ಭಾರತ! ಅಚ್ಯುತ! ಈ ಎಲ್ಲ ಒಳ್ಳೆಯವೂ ನಿನ್ನಲ್ಲಿ ಒಂದಾಗಿವೆ. ಯಾವ ಶತ್ರುವೂ, ಶಕ್ರನ ಸಮನಾಗಿದ್ದರೂ ಅದನ್ನು ಕೊಲ್ಲಲು ಸಾಧ್ಯವಿಲ್ಲ.
02069012a ಹಿಮವತ್ಯನುಶಿಷ್ಟೋಽಸಿ ಮೇರುಸಾವರ್ಣಿನಾ ಪುರಾ|
02069012c ದ್ವೈಪಾಯನೇನ ಕೃಷ್ಣೇನ ನಗರೇ ವಾರಣಾವತೇ||
02069013a ಭೃಗುತುಂಗೇ ಚ ರಾಮೇಣ ದೃಷದ್ವತ್ಯಾಂ ಚ ಶಂಭುನಾ|
02069013c ಅಶ್ರೌಷೀರಸಿತಸ್ಯಾಪಿ ಮಹರ್ಷೇರಂಜನಂ ಪ್ರತಿ||
02069014a ದ್ರಷ್ಟಾ ಸದಾ ನಾರದಸ್ಯ ಧೌಮ್ಯಸ್ತೇಽಯಂ ಪುರೋಹಿತಃ|
02069014c ಮಾ ಹಾರ್ಷೀಃ ಸಾಂಪರಾಯೇ ತ್ವಂ ಬುದ್ಧಿಂ ತಾಮೃಷಿಪೂಜಿತಾಂ||
ಹಿಂದೆ ಹಿಮಾಲಯದಲ್ಲಿರುವಾಗ ಮೇರು ಪರ್ವತದ ಸಾವರ್ಣಿಯಿಂದ, ವಾರಣಾವತ ನಗರಿಯಲ್ಲಿ ದ್ವೈಪಾಯನ ಕೃಷ್ಣನಿಂದ, ಭೃಗುತುಂಗದಲ್ಲಿ ರಾಮನಿಂದ, ದೃಷದ್ವತೀ ತೀರದಲ್ಲಿ ಶಂಭುವಿನಿಂದ ಉಪದೇಶವನ್ನು ಪಡೆದಿದ್ದೀಯೆ. ಅಂಜನದ ಬಳಿ ಮಹರ್ಷಿ ಅಸಿತನನ್ನೂ ಕೇಳಿದ್ದೀಯೆ. ನಿನ್ನ ಈ ಪುರೋಹಿತ ಧೌಮ್ಯನು ಋಷಿಪೂಜಿತ ಬುದ್ಧಿಯನ್ನು ನೀನು ಕಳೆದುಕೊಳ್ಳಬಾರದೆಂದು ಸದಾ ನಾರದನನ್ನು ಕಾಣುತ್ತಿರುತ್ತಾನೆ.
02069015a ಪುರೂರವಸಮೈಲಂ ತ್ವಂ ಬುದ್ಧ್ಯಾ ಜಯಸಿ ಪಾಂಡವ|
02069015c ಶಕ್ತ್ಯಾ ಜಯಸಿ ರಾಜ್ಞೋಽನ್ಯಾನೃಷೀನ್ಧರ್ಮೋಪಸೇವಯಾ||
ಪಾಂಡವ! ಬುದ್ಧಿಯಲ್ಲಿ ನೀನು ಪುರೂರವ ಐಲನನ್ನೂ ಗೆಲ್ಲುತ್ತೀಯೆ! ಶಕ್ತಿಯಲ್ಲಿ ಅನ್ಯ ರಾಜರನ್ನು ಮತ್ತು ಧರ್ಮದ ಉಪಸೇವೆಯಲ್ಲಿ ಋಷಿಗಳನ್ನೂ ಗೆಲ್ಲುತ್ತೀಯೆ.
02069016a ಐಂದ್ರೇ ಜಯೇ ಧೃತಮನಾ ಯಾಮ್ಯೇ ಕೋಪವಿಧಾರಣೇ|
02069016c ವಿಸರ್ಗೇ ಚೈವ ಕೌಬೇರೇ ವಾರುಣೇ ಚೈವ ಸಂಯಮೇ||
ಜಯದಲ್ಲಿ ಇಂದ್ರನಂತೆ, ಕೋಪವನ್ನು ತಡೆಹಿಡಿದುಕೊಳ್ಳುವುದರಲ್ಲಿ ಯಮನಂತೆ, ಉದಾರತೆಯಲ್ಲಿ ಕುಬೇರನಂತೆ, ಸಂಯಮದಲ್ಲಿ ವರುಣನಂತೆ ಮನಸ್ಸನ್ನಿಡು.
02069017a ಆತ್ಮಪ್ರದಾನಂ ಸೌಮ್ಯತ್ವಮದ್ಭ್ಯಶ್ಚೈವೋಪಜೀವನಂ|
02069017c ಭೂಮೇಃ ಕ್ಷಮಾ ಚ ತೇಜಶ್ಚ ಸಮಗ್ರಂ ಸೂರ್ಯಮಂಡಲಾತ್||
ಚಂದ್ರನಿಂದ ಆತ್ಮವನ್ನು, ನೀರಿನಿಂದ ಉಪಜೀವನವನ್ನು, ಭೂಮಿಯಿಂದ ಕ್ಷಮೆಯನ್ನು, ಸಮಗ್ರ ತೇಜಸ್ಸನ್ನೂ ಸೂರ್ಯಮಂಡಲದಿಂದ ಪಡೆದುಕೋ.
02069018a ವಾಯೋರ್ಬಲಂ ವಿದ್ಧಿ ಸ ತ್ವಂ ಭೂತೇಭ್ಯಶ್ಚಾತ್ಮಸಂಭವಂ|
02069018c ಅಗದಂ ವೋಽಸ್ತು ಭದ್ರಂ ವೋ ದ್ರಕ್ಷ್ಯಾಮಿ ಪುನರಾಗತಾನ್||
ನಿನ್ನ ಬಲವು ವಾಯುವಿನಿಂದ ಮತ್ತು ಆತ್ಮವು ಭೂತಗಳಿಂದ ಹುಟ್ಟಿದೆ ಎಂದು ತಿಳಿ. ಆರೋಗ್ಯವಾಗಿರು ಮತ್ತು ನಿನಗೆ ಮಂಗಳವಾಗಲಿ. ಹಿಂದಿರುಗಿದಾಗ ಪುನಃ ನೋಡುತ್ತೇನೆ.
02069019a ಆಪದ್ಧರ್ಮಾರ್ಥಕೃಚ್ಛ್ರೇಷು ಸರ್ವಕಾರ್ಯೇಷು ವಾ ಪುನಃ|
02069019c ಯಥಾವತ್ಪ್ರತಿಪದ್ಯೇಥಾಃ ಕಾಲೇ ಕಾಲೇ ಯುಧಿಷ್ಠಿರ||
02069020a ಆಪೃಷ್ಟೋಽಸೀಹ ಕೌಂತೇಯ ಸ್ವಸ್ತಿ ಪ್ರಾಪ್ನುಹಿ ಭಾರತ|
02069020c ಕೃತಾರ್ಥಂ ಸ್ವಸ್ತಿಮಂತಂ ತ್ವಾಂ ದ್ರಕ್ಷ್ಯಾಮಃ ಪುನರಾಗತಂ||
ಯುಧಿಷ್ಠಿರ! ಆಪತ್ತಿನಲ್ಲಿ ಧರ್ಮವನ್ನು, ಅಪಾಯದಲ್ಲಿ ಅರ್ಥವನ್ನು ಅನುಸರಿಸಿ ಕಾಲ ಕಾಲದಲ್ಲಿ ಸರ್ವ ಕಾರ್ಯದಲ್ಲಿ ಯಥಾವತ್ತಾಗಿ ನಡೆದುಕೋ. ಕೌಂತೇಯ! ಭಾರತ! ಬೀಳ್ಕೊಡುತ್ತಿದ್ದೇನೆ. ಸುಖವನ್ನು ಹೊಂದು. ನೀನು ಕೃತಾರ್ಥನಾಗಿ ಸುಖದಿಂದ ಹಿಂದಿರುಗುವುದನ್ನು ಕಾಯುತ್ತಿರುತ್ತೇನೆ.””
02069021 ವೈಶಂಪಾಯನ ಉವಾಚ|
02069021a ಏವಮುಕ್ತಸ್ತಥೇತ್ಯುಕ್ತ್ವಾ ಪಾಂಡವಃ ಸತ್ಯವಿಕ್ರಮಃ|
02069021c ಭೀಷ್ಮದ್ರೋಣೌ ನಮಸ್ಕೃತ್ಯ ಪ್ರಾತಿಷ್ಠತ ಯುಧಿಷ್ಠಿರಃ||
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಹಾಗೆಯೇ ಆಗಲೆಂದು ಹೇಳಿ ಸತ್ಯವಿಕ್ರಮ ಪಾಂಡವ ಯುಧಿಷ್ಠಿರನು ಭೀಷ್ಮ-ದ್ರೋಣರನ್ನು ನಮಸ್ಕರಿಸಿ ಮುಂದುವರೆದನು.”
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಅನುದ್ಯೂತಪರ್ವಣಿ ಯುಧಿಷ್ಠಿರವನಪ್ರಸ್ಥಾನೇ ಏಕೋನಸಪ್ತತಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅನುದ್ಯೂತಪರ್ವದಲ್ಲಿ ಯುಧಿಷ್ಠಿರವನಪ್ರಸ್ಥಾನ ಎನ್ನುವ ಅರವತ್ತೊಂಭತ್ತನೆಯ ಅಧ್ಯಾಯವು.