ಸಭಾ ಪರ್ವ: ಅನುದ್ಯೂತ ಪರ್ವ
೬೮
ಪಾಂಡವರ ಪ್ರತಿಜ್ಞೆಗಳು
ಪಾಂಡವರು ಜಿನವಸ್ತ್ರಗಳನ್ನು ಉಡುತ್ತಿರುವಾಗ ದುಃಶಾಸನನು ಪಾಂಡವರು ಶಂಡತಿಲರೆಂದೂ ದ್ರೌಪದಿಯು ಬೇರೆಯಾರನ್ನಾದರೂ ಪತಿಯನ್ನಾಗಿ ಸ್ವೀಕರಿಸಬೇಕೆಂದೂ ಮೂದಲಿಸಿ ನಗುವುದು (೧-೧೫). ಭೀಮಸೇನನು ರಣದಲ್ಲಿ ದುಃಶಾಸನನ ಎದೆಯನ್ನು ಸೀಳಿ ರಕ್ತವನ್ನು ಕುಡಿಯುತ್ತೇನೆಂದು ಪ್ರತಿಜ್ಞೆ ಮಾಡುವುದು (೧೬-೨೨). ದುರ್ಯೋಧನನು ಭೀಮನ ನಡುಗೆಯನ್ನು ನಡೆದು ಅಣಕಿಸುವುದು (೨೩). ಭೀಮನು ದುರ್ಯೋಧನನನ್ನು ರಣದಲ್ಲಿ ಗದೆಯಿಂದ ಹೊಡೆದುರುಳಿಸಿ ಕಾಲಿನಿಂದ ತುಳಿಯುವೆನೆಂದು ಪ್ರತಿಜ್ಞೆ ಮಾಡುವುದು (೨೪-೨೯). ಕರ್ಣನನ್ನು ಯುದ್ಧದಲ್ಲಿ ಕೊಲ್ಲುವೆನೆಂದು ಅರ್ಜುನನು ಪ್ರತಿಜ್ಞೆ ಮಾಡುವುದು (೩೦-೩೬). ಸಹದೇವನು ಶಕುನಿಯನ್ನು ಕೊಲ್ಲುವುದಾಗಿ ಪ್ರತಿಜ್ಞೆ ಮಾಡುವುದು (೩೭-೪೧). ನಕುಲನ ಪ್ರತಿಜ್ಞೆ (೪೨-೪೬).
02068001 ವೈಶಂಪಾಯನ ಉವಾಚ|
02068001a ವನವಾಸಾಯ ಚಕ್ರುಸ್ತೇ ಮತಿಂ ಪಾರ್ಥಾಃ ಪರಾಜಿತಾಃ|
02068001c ಅಜಿನಾನ್ಯುತ್ತರೀಯಾಣಿ ಜಗೃಹುಶ್ಚ ಯಥಾಕ್ರಮಂ||
ವೈಶಂಪಾಯನನು ಹೇಳಿದನು: “ಪರಾಜಿತ ಪಾರ್ಥರು ವನವಾಸಕ್ಕೆ ಮನಸ್ಸುಮಾಡಿ, ಒಬ್ಬೊಬ್ಬರಾಗಿ ಜಿನ ವಸ್ತ್ರ ಉತ್ತರೀಯಗಳನ್ನು ತೊಟ್ಟರು.
02068002a ಅಜಿನೈಃ ಸಂವೃತಾನ್ದೃಷ್ಟ್ವಾ ಹೃತರಾಜ್ಯಾನರಿಂದಮಾನ್|
02068002c ಪ್ರಸ್ಥಿತಾನ್ವನವಾಸಾಯ ತತೋ ದುಃಶಾಸನೋಽಬ್ರವೀತ್||
ರಾಜ್ಯವನ್ನು ಕಳೆದುಕೊಂಡು ಜಿನವಸ್ತ್ರಗಳನ್ನು ಸುತ್ತಿಕೊಂಡು ವನವಾಸಕ್ಕೆ ಹೊರಡುತ್ತಿರುವ ಆ ಅರಿಂದಮರನ್ನು ನೋಡಿ ದುಃಶಾಸನನು ಹೇಳಿದನು:
02068003a ಪ್ರವೃತ್ತಂ ಧಾರ್ತರಾಷ್ಟ್ರಸ್ಯ ಚಕ್ರಂ ರಾಜ್ಞೋ ಮಹಾತ್ಮನಃ|
02068003c ಪರಾಭೂತಾಃ ಪಾಂಡುಪುತ್ರಾ ವಿಪತ್ತಿಂ ಪರಮಾಂ ಗತಾಃ||
“ಮಹಾತ್ಮ ರಾಜ ಧಾರ್ತರಾಷ್ಟ್ರನ ಚಕ್ರವು ತಿರುಗಲು ಪ್ರಾರಂಬಿಸಿದೆ. ಸೋತ ಪಾಂಡುಪತ್ರರು ಪರಮ ವಿಪತ್ತನ್ನು ಹೊಂದಿದ್ದಾರೆ.
02068004a ಅದ್ಯ ದೇವಾಃ ಸಂಪ್ರಯಾತಾಃ ಸಮೈರ್ವರ್ತ್ಮಭಿರಸ್ಥಲೈಃ|
02068004c ಗುಣಜ್ಯೇಷ್ಠಾಸ್ತಥಾ ಜ್ಯೇಷ್ಠಾ ಭೂಯಾಂಸೋ ಯದ್ವಯಂ ಪರೈಃ||
ಇಂದು ದೇವತೆಗಳು ತಮ್ಮ ಸುಲಭ ಆಕಾಶಮಾರ್ಗಗಳಲ್ಲಿ ಬಂದಿದ್ದಾರೆ. ಯಾಕೆಂದರೆ ನಾವು ಗುಣದಲ್ಲಿ ಅವರಿಗಿಂತಲೂ ಶ್ರೇಷ್ಠರು ಮತ್ತು ಸಂಖ್ಯೆಯಲ್ಲಿಯೂ ಅವರಿಗಿಂತ ಹೆಚ್ಚಾಗಿದ್ದೇವೆ.
02068005a ನರಕಂ ಪಾತಿತಾಃ ಪಾರ್ಥಾ ದೀರ್ಘಕಾಲಮನಂತಕಂ|
02068005c ಸುಖಾಚ್ಚ ಹೀನಾ ರಾಜ್ಯಾಚ್ಚ ವಿನಷ್ಟಾಃ ಶಾಶ್ವತೀಃ ಸಮಾಃ||
ಪಾರ್ಥರು ಸುಖವನ್ನು ಕಳೆದುಕೊಂಡು, ರಾಜ್ಯಭ್ರಷ್ಟರಾಗಿ ಬಹು ವರ್ಷಗಳ ದೀರ್ಘಕಾಲದ ಕೊನೆಯೇ ಇಲ್ಲದ ನರಕದಲ್ಲಿ ಬಿದ್ದಿದ್ದಾರೆ!
02068006a ಬಲೇನ ಮತ್ತಾ ಯೇ ತೇ ಸ್ಮ ಧಾರ್ತರಾಷ್ಟ್ರಾನ್ಪ್ರಹಾಸಿಷುಃ|
02068006c ತೇ ನಿರ್ಜಿತಾ ಹೃತಧನಾ ವನಮೇಷ್ಯಂತಿ ಪಾಂಡವಾಃ||
ಬಲಮತ್ತರಾಗಿ ಧಾರ್ತರಾಷ್ಟ್ರರನ್ನು ಗೇಲಿಮಾಡುತ್ತಿದ್ದ ಪಾಂಡವರು ಈಗ ಸೋತು ಸಂಪತ್ತನ್ನು ಕಳೆದುಕೊಂಡು ವನವನ್ನು ಸೇರುತ್ತಿದ್ದಾರೆ!
02068007a ಚಿತ್ರಾನ್ಸನ್ನಾಹಾನವಮುಂಚಂತು ಚೈಷಾಂ
ವಾಸಾಂಸಿ ದಿವ್ಯಾನಿ ಚ ಭಾನುಮಂತಿ|
02068007c ನಿವಾಸ್ಯಂತಾಂ ರುರುಚರ್ಮಾಣಿ ಸರ್ವೇ
ಯಥಾ ಗ್ಲಹಂ ಸೌಬಲಸ್ಯಾಭ್ಯುಪೇತಾಃ||
ಸೌಬಲನ ದಾಳವನ್ನು ಒಪ್ಪಿಕೊಂಡ ಅವರೆಲ್ಲರೂ ತಮ್ಮ ಹೊಳೆಯುವ ಬಣ್ಣದ ದಿವ್ಯ ಅಂಗಿ-ಮೇಲಂಗಿಗಳನ್ನು ಕಳಚಿ ರುರು ಚರ್ಮಗಳನ್ನು ಧರಿಸಬೇಕಾಗಿದೆ!
02068008a ನ ಸಂತಿ ಲೋಕೇಷು ಪುಮಾಂಸ ಈದೃಶಾ
ಇತ್ಯೇವ ಯೇ ಭಾವಿತಬುದ್ಧಯಃ ಸದಾ|
02068008c ಜ್ಞಾಸ್ಯಂತಿ ತೇಽತ್ಮಾನಮಿಮೇಽದ್ಯ ಪಾಂಡವಾ
ವಿಪರ್ಯಯೇ ಷಂಡತಿಲಾ ಇವಾಫಲಾಃ||
ತಮ್ಮಂಥಹ ಪುರುಷರು ಲೋಕದಲ್ಲಿಯೇ ಇಲ್ಲ ಎಂದು ತಿಳಿದು ಸದಾ ಅಭಿಮಾನಿಗಳಾಗಿದ್ದ ಪಾಂಡವರು ಇಂದು ಕಷ್ಟದಲ್ಲಿ ಷಂಡತಿಲದಂತೆ ನಿಷ್ಪಲರು ಎಂದು ತಮ್ಮ ಕುರಿತು ಸರಿಯಾಗಿ ತಿಳಿದುಕೊಳ್ಳಲಿ!
02068009a ಅಯಂ ಹಿ ವಾಸೋದಯ ಈದೃಶಾನಾಂ
ಮನಸ್ವಿನಾಂ ಕೌರವ ಮಾ ಭವೇದ್ವಃ|
02068009c ಅದೀಕ್ಷಿತಾನಾಮಜಿನಾನಿ ಯದ್ವದ್
ಬಲೀಯಸಾಂ ಪಶ್ಯತ ಪಾಂಡವಾನಾಂ||
ಕೌರವ್ಯ! ನಿನ್ನ ವನವಾಸವು ಮನಸ್ವಿಗಳ ವನವಾಸದಂತೆ ಇಲ್ಲ. ಇವುಗಳು ಸಂಸ್ಕರಿಸದೇ ಇದ್ದ ಜಿನಗಳು. ಇವು ಬಲಶಾಲಿ ಪಾಂಡವರದ್ದು!
02068010a ಮಹಾಪ್ರಾಜ್ಞಃ ಸೋಮಕೋ ಯಜ್ಞಸೇನಃ
ಕನ್ಯಾಂ ಪಾಂಚಾಲೀಂ ಪಾಂಡವೇಭ್ಯಃ ಪ್ರದಾಯ|
02068010c ಅಕಾರ್ಷೀದ್ವೈ ದುಷ್ಕೃತಂ ನೇಹ ಸಂತಿ
ಕ್ಲೀಬಾಃ ಪಾರ್ಥಾಃ ಪತಯೋ ಯಾಜ್ಞಸೇನ್ಯಾಃ||
ಮಹಾಪ್ರಾಜ್ಞ ಸೋಮಕ ಯಜ್ಞಸೇನನು ಕನ್ಯೆ ಪಾಂಚಾಲಿಯನ್ನು ಪಾಂಡವರಿಗೆ ನೀಡಿ ತಪ್ಪು ಮಾಡಿದನು. ಯಾಕೆಂದರೆ ನಪುಂಸಕ ಪಾರ್ಥರು ಯಾಜ್ಞಸೇನೆಗೆ ಪತಿಗಳಾಗಿ ಉಳಿದಿಲ್ಲ!
02068011a ಸೂಕ್ಷ್ಮಾನ್ಪ್ರಾವಾರಾನಜಿನಾನಿ ಚೋದಿತಾನ್
ದೃಷ್ಟ್ವಾರಣ್ಯೇ ನಿರ್ಧನಾನಪ್ರತಿಷ್ಠಾನ್|
02068011c ಕಾಂ ತ್ವಂ ಪ್ರೀತಿಂ ಲಪ್ಸ್ಯಸೇ ಯಾಜ್ಞಸೇನಿ
ಪತಿಂ ವೃಣೀಷ್ವ ಯಮಿಹಾನ್ಯಮಿಚ್ಛಸಿ||
ಯಾಜ್ಞಸೇನಿ! ಸೂಕ್ಷ್ಮ ವಸ್ತ್ರಗಳನ್ನು ಧರಿಸಿದ್ದವರು ಈಗ ಜಿನವನ್ನು ಧರಿಸಿ, ನಿರ್ಧನರಾಗಿ, ಅಪ್ರತಿಷ್ಠರಾಗಿ ವನವಾಸಿಗಳಾದುದನ್ನು ನೋಡಿ ನೀನು ಏನು ಸುಖವನ್ನು ಅನುಭವಿಸಬಲ್ಲೆ? ಇಲ್ಲಿರುವ ಬೇರೆ ಯಾರನ್ನಾದರನ್ನು ನಿನ್ನ ಪತಿಯನ್ನಾಗಿ ವರಿಸು.
02068012a ಏತೇ ಹಿ ಸರ್ವೇ ಕುರವಃ ಸಮೇತಾಃ
ಕ್ಷಾಂತಾ ದಾಂತಾಃ ಸುದ್ರವಿಣೋಪಪನ್ನಾಃ|
02068012c ಏಷಾಂ ವೃಣೀಷ್ವೈಕತಮಂ ಪತಿತ್ವೇ
ನ ತ್ವಾಂ ತಪೇತ್ಕಾಲವಿಪರ್ಯಯೋಽಯಂ||
ಇಲ್ಲಿ ಸೇರಿರುವ ಸರ್ವ ಕುರುಗಳೂ ಗಂಭೀರರೂ, ಅಧಿಕಾರವುಳ್ಳವರೂ, ಉತ್ತಮ ಧನವಂತರೂ ಆಗಿದ್ದಾರೆ. ಈ ಕಾಲ ವಿಪರ್ಯಾಸವು ನಿನಗೆ ಕಷ್ಟವಾಗಬಾರದೆಂದು ಇವರಲ್ಲಿ ಯಾರನ್ನಾದರನ್ನೂ ನಿನ್ನ ಪತಿಯನ್ನಾಗಿ ಆರಿಸಿಕೋ.
02068013a ಯಥಾಫಲಾಃ ಷಂಡತಿಲಾ ಯಥಾ ಚರ್ಮಮಯಾ ಮೃಗಾಃ|
02068013c ತಥೈವ ಪಾಂಡವಾಃ ಸರ್ವೇ ಯಥಾ ಕಾಕಯವಾ ಅಪಿ||
ಪೊಳ್ಳು ಎಳ್ಳಿನಂತೆ, ಕೇವಲ ಚರ್ಮಮಾತ್ರವಿರುವ ಜಿಂಕೆಯಂತೆ ಮತ್ತು ಪೊಳ್ಳು ಕಾಕಯದಂತೆ ಪಾಂಡವರೆಲ್ಲರೂ ಅಫಲರಾಗಿದ್ದಾರೆ!
02068014a ಕಿಂ ಪಾಂಡವಾಂಸ್ತ್ವಂ ಪತಿತಾನುಪಾಸ್ಸೇ
ಮೋಘಃ ಶ್ರಮಃ ಷಂಡತಿಲಾನುಪಾಸ್ಯ|
02068014c ಏವಂ ನೃಶಂಸಃ ಪರುಷಾಣಿ ಪಾರ್ಥಾನ್
ಅಶ್ರಾವಯದ್ಧೃತರಾಷ್ಟ್ರಸ್ಯ ಪುತ್ರಃ||
ಪತಿತ ಪಾಂಡವರನ್ನು ನೀನು ಏಕೆ ಉಪಾಸಿಸುತ್ತೀಯೆ? ಪೊಳ್ಳು ಎಳ್ಳನ್ನು ಉಪಾಸಿಸಿ ಶ್ರಮಿಸುವುದು ವ್ಯರ್ಥ!” ಈ ರೀತಿ ಧೃತರಾಷ್ಟ್ರನ ಕ್ರೂರ ಪುತ್ರನು ತನ್ನ ಚುಚ್ಚುಮಾತುಗಳನ್ನು ಪಾರ್ಥರಿಗೆ ಕೇಳಿಸಿದನು.
02068015a ತದ್ವೈ ಶ್ರುತ್ವಾ ಭೀಮಸೇನೋಽತ್ಯಮರ್ಷೀ
ನಿರ್ಭರ್ತ್ಸ್ಯೋಚ್ಚೈಸ್ತಂ ನಿಗೃಹೈವ ರೋಷಾತ್|
02068015c ಉವಾಚೇದಂ ಸಹಸೈವೋಪಗಮ್ಯ
ಸಿಂಹೋ ಯಥಾ ಹೈಮವತಃ ಶೃಗಾಲಂ||
ಇದನ್ನು ಕೇಳಿ ಅತಿ ಕುಪಿತನಾದ ಭೀಮಸೇನನು ಅವನನ್ನು ಮೂದಲಿಸುತ್ತಾ ತನ್ನ ಕೋಪವನ್ನು ತಡೆಹಿಡಿಯುತ್ತಾ ಹಿಮಾಲಯದ ಸಿಂಹವು ನರಿಗೆ ಹೇಳುವಂತೆ ಜೋರಾಗಿ ಕೂಗಿ ಹೇಳಿದನು:
02068016 ಭೀಮಸೇನ ಉವಾಚ|
02068016a ಕ್ರೂರ ಪಾಪಜನೈರ್ಜುಷ್ಟಮಕೃತಾರ್ಥಂ ಪ್ರಭಾಷಸೇ|
02068016c ಗಾಂಧಾರವಿದ್ಯಯಾ ಹಿ ತ್ವಂ ರಾಜಮಧ್ಯೇ ವಿಕತ್ಥಸೇ||
ಭೀಮಸೇನನು ಹೇಳಿದನು: “ಕ್ರೂರ! ಪಾಪಿ! ದುಷ್ಟನಂತೆ ಹುರುಳಿಲ್ಲದ ಮಾತನ್ನಾಡುತ್ತಿದ್ದೀಯೆ. ರಾಜರ ಮಧ್ಯದಲ್ಲಿ ಗಾಂಧಾರರ ಕೌಶಲ್ಯವನ್ನು ಪ್ರಶಂಸಿಸುತ್ತಿದ್ದೀಯೆ!
02068017a ಯಥಾ ತುದಸಿ ಮರ್ಮಾಣಿ ವಾಕ್ಶರೈರಿಹ ನೋ ಭೃಶಂ|
02068017c ತಥಾ ಸ್ಮಾರಯಿತಾ ತೇಽಹಂ ಕೃಂತನ್ಮರ್ಮಾಣಿ ಸಂಯುಗೇ||
ನಮ್ಮ ಮರ್ಮಸ್ಥಾನಗಳನ್ನು ನಿನ್ನ ತೀಕ್ಷ್ಣ ಮಾತುಗಳಿಂದ ಹೇಗೆ ಚುಚ್ಚುತ್ತಿರುವೆಯೋ ಹಾಗೆ ಯುದ್ಧದಲ್ಲಿ ನಿನಗೂ ಮಾಡಿ ನೆನಪಿಸಿಕೊಡುತ್ತೇನೆ.
02068018a ಯೇ ಚ ತ್ವಾಮನುವರ್ತಂತೇ ಕಾಮಲೋಭವಶಾನುಗಾಃ|
02068018c ಗೋಪ್ತಾರಃ ಸಾನುಬಂಧಾಂಸ್ತಾನ್ನೇಷ್ಯಾಮಿ ಯಮಸಾದನಂ||
ಕಾಮಲೋಭವಶರಾಗಿ ಯಾರು ನಿನ್ನನ್ನು ಹಿಂಬಾಲಿಸಿ ಪ್ರೋತ್ಸಾಹಿಸಿ ರಕ್ಷಿಸುವರೋ ಅವರನ್ನೂ ಕೂಡ ಅವರ ಸಂಬಂಧಿಗಳೊಂದಿಗೆ ಯಮಸಾದನಕ್ಕೆ ಕಳುಹಿಸುತ್ತೇನೆ.””
02068019 ವೈಶಂಪಾಯನ ಉವಾಚ|
02068019a ಏವಂ ಬ್ರುವಾಣಮಜಿನೈರ್ವಿವಾಸಿತಂ
ದುಃಖಾಭಿಭೂತಂ ಪರಿನೃತ್ಯತಿ ಸ್ಮ|
02068019c ಮಧ್ಯೇ ಕುರೂಣಾಂ ಧರ್ಮನಿಬದ್ಧಮಾರ್ಗಂ
ಗೌರ್ಗೌರಿತಿ ಸ್ಮಾಹ್ವಯನ್ಮುಕ್ತಲಜ್ಜಃ||
ವೈಶಂಪಾಯನನು ಹೇಳಿದನು: “ಜಿನವಸ್ತ್ರವನ್ನು ಧರಿಸಿ ದುಃಖ ಪೀಡಿತನಾಗಿ ಹೀಗೆ ಹೇಳಿ ಕುರುಗಳ ಮಧ್ಯೆ ಧರ್ಮಮಾರ್ಗದಲ್ಲಿ ನಡೆಯುತ್ತಿದ್ದ ಅವನನ್ನು ಸುತ್ತುವರೆದು ನಾಚಿಕೆಯನ್ನು ಬಿಟ್ಟು “ಹಸು! ಹಸು!”ಎಂದು ಕುಣಿದಾಡಿದರು.
02068020 ಭೀಮಸೇನ ಉವಾಚ|
02068020a ನೃಶಂಸಂ ಪರುಷಂ ಕ್ರೂರಂ ಶಕ್ಯಂ ದುಃಶಾಸನ ತ್ವಯಾ|
02068020c ನಿಕೃತ್ಯಾ ಹಿ ಧನಂ ಲಬ್ಧ್ವಾ ಕೋ ವಿಕತ್ಥಿತುಮರ್ಹತಿ||
ಭೀಮಸೇನನು ಹೇಳಿದನು: “ದುಃಶಾಸನ! ಈ ರೀತಿ ಒರಟು ಕ್ರೂರ ಪೌರುಷದ ಮಾತನಾಡಲು ನಿನಗೆ ಮಾತ್ರ ಸಾಧ್ಯ. ಯಾಕೆಂದರೆ, ವಂಚನೆಯಿಂದ ಧನವನ್ನು ತೆಗೆದುಕೊಂಡ ಯಾರು ತಾನೆ ಈ ರೀತಿ ಕೊಚ್ಚಿಕೊಳ್ಳುತ್ತಾರೆ.
02068021a ಮಾ ಹ ಸ್ಮ ಸುಕೃತಾಽಲ್ಲೋಕಾನ್ಗಚ್ಛೇತ್ಪಾರ್ಥೋ ವೃಕೋದರಃ|
02068021c ಯದಿ ವಕ್ಷಸಿ ಭಿತ್ತ್ವಾ ತೇ ನ ಪಿಬೇಚ್ಶೋಣಿತಂ ರಣೇ||
ರಣದಲ್ಲಿ ನಿನ್ನ ಎದೆಯನ್ನು ಸೀಳಿ ರಕ್ತವನ್ನು ಕುಡಿಯದೇ ಇದ್ದರೆ ಈ ಪಾರ್ಥ ವೃಕೋದರನು ಸುಕೃತಲೋಕಗಳಿಗೆ ಹೋಗದಿರಲಿ!
02068022a ಧಾರ್ತರಾಷ್ಟ್ರಾನ್ರಣೇ ಹತ್ವಾ ಮಿಷತಾಂ ಸರ್ವಧನ್ವಿನಾಂ|
02068022c ಶಮಂ ಗಂತಾಸ್ಮಿ ನಚಿರಾತ್ಸತ್ಯಮೇತದ್ಬ್ರವೀಮಿ ವಃ||
ಧಾರ್ತರಾಷ್ಟ್ರರನ್ನು ರಣದಲ್ಲಿ ಸರ್ವ ಧನ್ವಿಗಳ ಎದಿರು ಕೊಂದ ಕೂಡಲೇ ಶಾಂತನಾಗುತ್ತೇನೆ. ಸತ್ಯವನ್ನೇ ನಾನು ಹೇಳುತ್ತಿದ್ದೇನೆ.””
02068023 ವೈಶಂಪಾಯನ ಉವಾಚ|
02068023a ತಸ್ಯ ರಾಜಾ ಸಿಂಹಗತೇಃ ಸಖೇಲಂ
ದುರ್ಯೋಧನೋ ಭೀಮಸೇನಸ್ಯ ಹರ್ಷಾತ್|
02068023c ಗತಿಂ ಸ್ವಗತ್ಯಾನುಚಕಾರ ಮಂದೋ
ನಿರ್ಗಚ್ಛತಾಂ ಪಾಂಡವಾನಾಂ ಸಭಾಯಾಃ||
ವೈಶಂಪಾಯನನು ಹೇಳಿದನು: “ಪಾಂಡವರು ಸಭೆಯಿಂದ ಹೊರಡುತ್ತಿರುವಾಗ ಮಂದಬುದ್ಧಿ ರಾಜ ದುರ್ಯೋಧನನು ಹರ್ಷದಿಂದ ಆಟವಾಡುತ್ತಾ ಭೀಮಸೇನನ ಸಿಂಹ ನಡುಗೆಯನ್ನು ತಾನೇ ನಡೆದು ಅಣಕಿಸಿದನು.
02068024a ನೈತಾವತಾ ಕೃತಮಿತ್ಯಬ್ರವೀತ್ತಂ
ವೃಕೋದರಃ ಸಮ್ನಿವೃತ್ತಾರ್ಧಕಾಯಃ|
02068024c ಶೀಘ್ರಂ ಹಿ ತ್ವಾ ನಿಹತಂ ಸಾನುಬಂಧಂ
ಸಂಸ್ಮಾರ್ಯಾಹಂ ಪ್ರತಿವಕ್ಷ್ಯಾಮಿ ಮೂಢ||
ತನ್ನ ಅರ್ಧದೇಹವನ್ನು ದುರ್ಯೋಧನನ ಕಡೆ ತಿರುಗಿಸಿ ವೃಕೋದರನು ಹೇಳಿದನು: “ಆಟದಲ್ಲಿ ಇದು ಗೆಲ್ಲಲು ಸಹಾಯ ಮಾಡುವುದಿಲ್ಲ! ಮೂಢ! ನಿನ್ನನ್ನು ಮತ್ತು ನಿನ್ನ ಅನುಯಾಯಿಗಳನ್ನು ಶೀಘ್ರವೇ ಕೊಲ್ಲುವಾಗ ನಿನಗೆ ಇದನ್ನು ನೆನಪಿಸಿಕೊಟ್ಟು ಉತ್ತರ ನೀಡುತ್ತೇನೆ!”
02068025a ಏತತ್ಸಮೀಕ್ಷ್ಯಾತ್ಮನಿ ಚಾವಮಾನಂ
ನಿಯಮ್ಯ ಮನ್ಯುಂ ಬಲವಾನ್ಸ ಮಾನೀ|
02068025c ರಾಜಾನುಗಃ ಸಂಸದಿ ಕೌರವಾಣಾಂ
ವಿನಿಷ್ಕ್ರಮನ್ವಾಕ್ಯಮುವಾಚ ಭೀಮಃ||
ತನಗಾದ ಈ ಅವಮಾನವನ್ನು ತಾನೇ ವೀಕ್ಷಿಸಿ ತನ್ನ ಸಿಟ್ಟನ್ನು ತಡೆಹಿಡಿದುಕೊಂಡು, ಆ ಮಾನಿನಿ ಬಲವಾನ್ ಭೀಮನು ರಾಜನನ್ನು ಅನುಸರಿಸಿ ಕೌರವರ ಸಂಸದಿಯಿಂದ ಹೊರ ಹೋಗುವಾಗ ಈ ಮಾತನ್ನಾಡಿದನು:
02068026a ಅಹಂ ದುರ್ಯೋಧನಂ ಹಂತಾ ಕರ್ಣಂ ಹಂತಾ ಧನಂಜಯಃ|
02068026c ಶಕುನಿಂ ಚಾಕ್ಷಕಿತವಂ ಸಹದೇವೋ ಹನಿಷ್ಯತಿ||
“ನಾನು ದುರ್ಯೋಧನನನ್ನು ಕೊಲ್ಲುತ್ತೇನೆ. ಧನಂಜಯನು ಕರ್ಣನನ್ನು ಕೊಲ್ಲುತ್ತಾನೆ. ಮೋಸದ ಜೂಜುಗಾರ ಶಕುನಿಯನ್ನು ಸಹದೇವನು ಕೊಲ್ಲುತ್ತಾನೆ.
02068027a ಇದಂ ಚ ಭೂಯೋ ವಕ್ಷ್ಯಾಮಿ ಸಭಾಮಧ್ಯೇ ಬೃಹದ್ವಚಃ|
02068027c ಸತ್ಯಂ ದೇವಾಃ ಕರಿಷ್ಯಂತಿ ಯನ್ನೋ ಯುದ್ಧಂ ಭವಿಷ್ಯತಿ||
02068028a ಸುಯೋಧನಮಿಮಂ ಪಾಪಂ ಹಂತಾಸ್ಮಿ ಗದಯಾ ಯುಧಿ|
02068028c ಶಿರಃ ಪಾದೇನ ಚಾಸ್ಯಾಹಮಧಿಷ್ಠಾಸ್ಯಾಮಿ ಭೂತಲೇ||
02068029a ವಾಕ್ಯಶೂರಸ್ಯ ಚೈವಾಸ್ಯ ಪರುಷಸ್ಯ ದುರಾತ್ಮನಃ|
02068029c ದುಃಶಾಸನಸ್ಯ ರುಧಿರಂ ಪಾತಾಸ್ಮಿ ಮೃಗರಾಡಿವ||
ಈ ಸಭಾಮಧ್ಯದಲ್ಲಿ ಇನ್ನೊಮ್ಮೆ ಮುಂದಾಗುವ ಈ ಮಹಾ ವಚನವನ್ನು ಹೇಳುತ್ತಿದ್ದೇನೆ: ನಮ್ಮ ನಡುವೆ ಯುದ್ಧವಾದಾಗ ದೇವತೆಗಳು ಇದನ್ನು ಸತ್ಯಮಾಡುತ್ತಾರೆ - ಈ ಪಾಪಿ ಸುಯೋಧನನನ್ನು ಯುದ್ಧದಲ್ಲಿ ಗದೆಯಿಂದ ಕೊಲ್ಲುತ್ತೇನೆ ಮತ್ತು ಇವನ ಶಿರವನ್ನು ಭೂಮಿಯಮೇಲೆ ಉರುಳಿಸಿ ಕಾಲಿನಿಂದ ತುಳಿಯುತ್ತೇನೆ. ಮತ್ತು ಈ ಮಾತಿನ ಮಲ್ಲ ಪೌರುಷದ ದುರಾತ್ಮ ದುಃಶಾಸನನ ರಕ್ತವನ್ನು ಸಿಂಹದಂತೆ ಕುಡಿಯುತ್ತೇನೆ.”
02068030 ಅರ್ಜುನ ಉವಾಚ|
02068030a ನೈವ ವಾಚಾ ವ್ಯವಸಿತಂ ಭೀಮ ವಿಜ್ಞಾಯತೇ ಸತಾಂ|
02068030c ಇತಶ್ಚತುರ್ದಶೇ ವರ್ಷೇ ದ್ರಷ್ಟಾರೋ ಯದ್ಭವಿಷ್ಯತಿ||
ಅರ್ಜುನನು ಹೇಳಿದನು: “ಭೀಮನ ಈ ನಿರ್ಧಾರಿತ ಮಾತುಗಳು ಕೇವಲ ಮಾತುಗಳೆಂದು ತಿಳಿಯಬೇಡಿ. ಇಂದಿನಿಂದ ಹದಿಮೂರನೆಯ ವರ್ಷದಲ್ಲಿ ಇದು ನಡೆಯುವುದನ್ನು ನೋಡುವಿರಿ!
02068031a ದುರ್ಯೋಧನಸ್ಯ ಕರ್ಣಸ್ಯ ಶಕುನೇಶ್ಚ ದುರಾತ್ಮನಃ|
02068031c ದುಃಶಾಸನಚತುರ್ಥಾನಾಂ ಭೂಮಿಃ ಪಾಸ್ಯತಿ ಶೋಣಿತಂ||
ಭೂಮಿಯು ದುರ್ಯೋಧನ, ಕರ್ಣ, ದುರಾತ್ಮ ಶಕುನಿ, ಮತ್ತು ದುಃಶಾಸನ ಈ ನಾಲ್ವರ ರಕ್ತವನ್ನು ಕುಡಿಯುತ್ತದೆ!
02068032a ಅಸೂಯಿತಾರಂ ವಕ್ತಾರಂ ಪ್ರಸ್ರಷ್ಟಾರಂ ದುರಾತ್ಮನಾಂ|
02068032c ಭೀಮಸೇನ ನಿಯೋಗಾತ್ತೇ ಹಂತಾಹಂ ಕರ್ಣಮಾಹವೇ||
ಭೀಮಸೇನ! ನಿನ್ನ ಆಜ್ಞೆಯಂತೆ ನಾನು ದುರಾತ್ಮರನ್ನು ಜೋರಾಗಿ ಹೊಗಳುವ ಹೊಗಳುಭಟ್ಟ ಈ ಕರ್ಣನನ್ನು ಕೊಲ್ಲುತ್ತೇನೆ.
02068033a ಅರ್ಜುನಃ ಪ್ರತಿಜಾನೀತೇ ಭೀಮಸ್ಯ ಪ್ರಿಯಕಾಮ್ಯಯಾ|
02068033c ಕರ್ಣಂ ಕರ್ಣಾನುಗಾಂಶ್ಚೈವ ರಣೇ ಹಂತಾಸ್ಮಿ ಪತ್ರಿಭಿಃ||
ಭೀಮನಿಗೆ ಸಂತೋಷವನ್ನುಂಟುಮಾಡಲು ಈ ಅರ್ಜುನನು ಕರ್ಣನನ್ನು ಮತ್ತು ಕರ್ಣನ ಅನುಯಾಯಿಗಳನ್ನು ಗರಿಯುಕ್ತ ಬಾಣಗಳಿಂದ ಕೊಲ್ಲುತ್ತೇನೆ ಎಂದು ಭರವಸೆಯನ್ನು ನೀಡುತ್ತೇನೆ.
02068034a ಯೇ ಚಾನ್ಯೇ ಪ್ರತಿಯೋತ್ಸ್ಯಂತಿ ಬುದ್ಧಿಮೋಹೇನ ಮಾಂ ನೃಪಾಃ|
02068034c ತಾಂಶ್ಚ ಸರ್ವಾಂ ಶಿತೈರ್ಬಾಣೈರ್ನೇತಾಸ್ಮಿ ಯಮಸಾದನಂ||
ಬುದ್ಧಿಗೆಟ್ಟು ನನ್ನೊಡನೆ ಹೋರಾಡುವ ಅನ್ಯ ಸರ್ವ ನೃಪರನ್ನೂ ಕೂಡ ತೀಕ್ಷ್ಣ ಬಾಣಗಳಿಂದ ಯಮಸಾದನಕ್ಕೆ ಕಳುಹಿಸುತ್ತೇನೆ.
02068035a ಚಲೇದ್ಧಿ ಹಿಮವಾನ್ ಸ್ಥಾನಾನ್ನಿಷ್ಪ್ರಭಃ ಸ್ಯಾದ್ದಿವಾಕರಃ|
02068035c ಶೈತ್ಯಂ ಸೋಮಾತ್ಪ್ರಣಶ್ಯೇತ ಮತ್ಸತ್ಯಂ ವಿಚಲೇದ್ಯದಿ||
ಒಂದು ವೇಳೆ ನಾನು ಈ ಸತ್ಯದಿಂದ ದೂರಾದೆನೆಂದರೆ ಹಿಮಾಲಯವು ತನ್ನ ಸ್ಥಾನದಿಂದ ಚಲಿಸಲಿ, ದಿವಾಕರನು ತನ್ನ ಪ್ರಭೆಯನ್ನು ಕಳೆದುಕೊಳ್ಳಲಿ, ಮತ್ತು ಚಂದ್ರನು ತನ್ನ ಶೀತಲವನ್ನು ಕಳೆದುಕೊಳ್ಳಲಿ!
02068036a ನ ಪ್ರದಾಸ್ಯತಿ ಚೇದ್ರಾಜ್ಯಮಿತೋ ವರ್ಷೇ ಚತುರ್ದಶೇ|
02068036c ದುರ್ಯೋಧನೋ ಹಿ ಸತ್ಕೃತ್ಯ ಸತ್ಯಮೇತದ್ಭವಿಷ್ಯತಿ||
ಇಂದಿನಿಂದ ಹದಿನಾಲ್ಕನೆಯ ವರ್ಷದಲ್ಲಿ ದುರ್ಯೋಧನನು ಗೌರವದಿಂದ ರಾಜ್ಯವನ್ನು ಹಿಂದೆ ಕೊಡದಿದ್ದರೆ ಇದು ಸತ್ಯವಾಗುತ್ತದೆ!””
02068037 ವೈಶಂಪಾಯನ ಉವಾಚ|
02068037a ಇತ್ಯುಕ್ತವತಿ ಪಾರ್ಥೇ ತು ಶ್ರೀಮಾನ್ಮಾದ್ರವತೀಸುತಃ|
02068037c ಪ್ರಗೃಹ್ಯ ವಿಪುಲಂ ಬಾಹುಂ ಸಹದೇವಃ ಪ್ರತಾಪವಾನ್||
02068038a ಸೌಬಲಸ್ಯ ವಧಂ ಪ್ರೇಪ್ಸುರಿದಂ ವಚನಮಬ್ರವೀತ್|
02068038c ಕ್ರೋಧಸಂರಕ್ತನಯನೋ ನಿಃಶ್ವಸನ್ನಿವ ಪನ್ನಗಃ||
ವೈಶಂಪಾಯನನು ಹೇಳಿದನು: “ಈ ರೀತಿ ಪಾರ್ಥನು ಮಾತನಾಡಲು ಶ್ರೀಮಾನ್ ಮಾದ್ರವತೀ ಸುತ ಪ್ರತಾಪವಾನ್ ಸಹದೇವನು ತನ್ನ ವಿಪುಲ ಬಾಹುವನ್ನು ಹಿಡಿದು ಸೌಬಲನ ವಧೆಯನ್ನು ಬಯಸುತ್ತಾ ಸರ್ಪದಂತೆ ಭುಸುಗುಟ್ಟುತ್ತಾ ಕ್ರೋಧದಿಂದ ಕೆಂಪಾದ ಕಣ್ಣುಗಳುಳ್ಳವನಾಗಿ ಈ ಮಾತುಗಳನ್ನಾಡಿದನು:
02068039a ಅಕ್ಷಾನ್ಯಾನ್ಮನ್ಯಸೇ ಮೂಢ ಗಾಂಧಾರಾಣಾಂ ಯಶೋಹರ|
02068039c ನೈತೇಽಕ್ಷಾ ನಿಶಿತಾ ಬಾಣಾಸ್ತ್ವಯೈತೇ ಸಮರೇ ವೃತಾಃ||
“ಗಾಂಧಾರರ ಯಶೋಹರ! ಮೂಢ! ದಾಳಗಳೆಂದು ತಿಳಿದು ಎಸೆದ ದಾಳಗಳು ದಾಳಗಳಲ್ಲ! ಸಮರದಲ್ಲಿ ನೀನೇ ಆರಿಸಿಕೊಂಡ ತೀಕ್ಷ್ಣ ಬಾಣಗಳು!
02068040a ಯಥಾ ಚೈವೋಕ್ತವಾನ್ಭೀಮಸ್ತ್ವಾಮುದ್ದಿಶ್ಯ ಸಬಾಂಧವಂ|
02068040c ಕರ್ತಾಹಂ ಕರ್ಮಣಸ್ತಸ್ಯ ಕುರು ಕಾರ್ಯಾಣಿ ಸರ್ವಶಃ||
ನೀನು ಮತ್ತು ನಿನ್ನ ಸಂಬಂಧಿಕರ ಕುರಿತು ಭೀಮನು ಹೇಳಿದ ಎಲ್ಲವನ್ನೂ ನಾನು ಮಾಡಿ ಮುಗಿಸುತ್ತೇನೆ. ನೀನು ನಿನ್ನ ಎಲ್ಲ ಕಾರ್ಯಗಳನ್ನೂ ಮಾಡಿ ಮುಗಿಸು!
02068041a ಹಂತಾಸ್ಮಿ ತರಸಾ ಯುದ್ಧೇ ತ್ವಾಂ ವಿಕ್ರಮ್ಯ ಸಬಾಂಧವಂ|
02068041c ಯದಿ ಸ್ಥಾಸ್ಯಸಿ ಸಂಗ್ರಾಮೇ ಕ್ಷತ್ರಧರ್ಮೇಣ ಸೌಬಲ||
ಸೌಬಲ! ಕ್ಷತ್ರಧರ್ಮಾನುಸಾರವಾಗಿ ಸಂಗ್ರಾಮದಲ್ಲಿ ನಿಲ್ಲುವೆಯಾದರೆ ನಿನ್ನನ್ನು ನಿನ್ನ ಬಾಂಧವರೊಡನೆ ವಿಕ್ರಮದಿಂದ ಯುದ್ಧದಲ್ಲಿ ಅಲ್ಪವೇ ಸಮಯದಲ್ಲಿ ಕೊಲ್ಲುತ್ತೇನೆ.”
02068042a ಸಹದೇವವಚಃ ಶ್ರುತ್ವಾ ನಕುಲೋಽಪಿ ವಿಶಾಂ ಪತೇ|
02068042c ದರ್ಶನೀಯತಮೋ ನೄಣಾಮಿದಂ ವಚನಮಬ್ರವೀತ್||
ವಿಶಾಂಪತೇ! ಸಹದೇವನ ಮಾತುಗಳನ್ನು ಕೇಳಿ ಮನುಷ್ಯರಲ್ಲೆಲ್ಲ ಅತಿ ಸುಂದರ ನಕುಲನೂ ಕೂಡ ಈ ಮಾತನ್ನಾಡಿದನು.
02068043a ಸುತೇಯಂ ಯಜ್ಞಸೇನಸ್ಯ ದ್ಯೂತೇಽಸ್ಮಿನ್ಧೃತರಾಷ್ಟ್ರಜೈಃ|
02068043c ಯೈರ್ವಾಚಃ ಶ್ರಾವಿತಾ ರೂಕ್ಷಾಃ ಸ್ಥಿತೈರ್ದುರ್ಯೋಧನಪ್ರಿಯೇ||
02068044a ತಾಂಧಾರ್ತರಾಷ್ಟ್ರಾನ್ದುರ್ವೃತ್ತಾನ್ಮುಮೂರ್ಷೂನ್ಕಾಲಚೋದಿತಾನ್|
02068044c ದರ್ಶಯಿಷ್ಯಾಮಿ ಭೂಯಿಷ್ಠಮಹಂ ವೈವಸ್ವತಕ್ಷಯಂ||
“ಈ ದ್ಯೂತದಲ್ಲಿ ದುರ್ಯೋಧನನ ಪ್ರಿಯರಾಗಿ ಉಳಿದಕೊಳ್ಳಲು ಈ ಯಜ್ಞಸೇನ ಸುತೆಗೆ ಕ್ರೂರ ಮಾತುಗಳನ್ನು ಕೇಳಿಸಿ ಅಪಮಾನ ಮಾಡಿದ ಕಾಲಚೋದಿತ ಈ ದುರ್ವೃತ್ತ ಧಾರ್ತರಾಷ್ಟ್ರರ ಬೀಡಿಗೆ ಅವರಿಗಿಷ್ಟವಾದ ವೈವಸ್ವತಕ್ಷಯದ ದಾರಿಯನ್ನು ತೋರಿಸಿಕೊಡುತ್ತೇನೆ.
02068045a ನಿದೇಶಾದ್ಧರ್ಮರಾಜಸ್ಯ ದ್ರೌಪದ್ಯಾಃ ಪದವೀಂ ಚರನ್|
02068045c ನಿರ್ಧಾರ್ತರಾಷ್ಟ್ರಾಂ ಪೃಥಿವೀಂ ಕರ್ತಾಸ್ಮಿ ನಚಿರಾದಿವ||
ಧರ್ಮರಾಜನ ಆದೇಶದಂತೆ ದ್ರೌಪದಿಯ ಹೆಜ್ಜೆಗಳಲ್ಲಿ ನಡೆದು ಬೇಗನೇ ಈ ಪೃಥ್ವಿಯಲ್ಲಿ ಧಾರ್ತರಾಷ್ಟ್ರರಿಲ್ಲದಂತೆ ಮಾಡುತ್ತೇನೆ!”
02068046a ಏವಂ ತೇ ಪುರುಷವ್ಯಾಘ್ರಾಃ ಸರ್ವೇ ವ್ಯಾಯತಬಾಹವಃ|
02068046c ಪ್ರತಿಜ್ಞಾ ಬಹುಲಾಃ ಕೃತ್ವಾ ಧೃತರಾಷ್ಟ್ರಮುಪಾಗಮನ್||
ಹೀಗೆ ಪುರಷವ್ಯಾಘ್ರರೆಲ್ಲರೂ ತಮ್ಮ ಬಾಹುಗಳನ್ನು ಮುಂದೆ ಚಾಚಿ ಬಹಳ ಪ್ರತಿಜ್ಞೆಗಳನ್ನು ಮಾಡಿ ಧೃತರಾಷ್ಟ್ರನ ಎದಿರು ಹೋದರು.
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಅನುದ್ಯೂತಪರ್ವಣಿ ಪಾಂಡವಪ್ರತಿಜ್ಞಾಕರಣೇ ಅಷ್ಟಷಷ್ಟಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅನುದ್ಯೂತಪರ್ವದಲ್ಲಿ ಪಾಂಡವರ ಪ್ರತಿಜ್ಞೆ ಎನ್ನುವ ಅರವತ್ತೆಂಟನೆಯ ಅಧ್ಯಾಯವು.