ಸಭಾ ಪರ್ವ: ಅನುದ್ಯೂತ ಪರ್ವ
೬೭
ಪುನಃ ಯುಧಿಷ್ಠಿರನ ಪರಾಜಯ
ಧೃತರಾಷ್ಟ್ರನ ಆಜ್ಞೆಯಂತೆ ಪ್ರತಿಕಾಮಿಯು ಹಿಂದಿರುಗಿ ಹೋಗುತ್ತಿದ್ದ ಯುಧಿಷ್ಠಿರನಿಗೆ ಪುನಃ ದ್ಯೂತದ ಆಹ್ವಾನವನ್ನು ನೀಡುವುದು (೧-೨). ಯುಧಿಷ್ಠಿರನು ಚಿಂತಿಸಿ ದ್ಯೂತಕ್ಕೆ ಸಭೆಗೆ ಮರಳುವುದು (೩-೭). ಶಕುನಿಯು ದ್ಯೂತದ ನಿಬಂಧನೆಗಳನ್ನು ವಿವರಿಸುವುದು (೮-೧೩). ಸಭಾಸದರ ಉದ್ಗಾರ (೧೪). ಯುಧಿಷ್ಠಿರನು ನಿಬಂಧನೆಗಳಿಗೆ ಒಪ್ಪಿಕೊಳ್ಳುವುದು (೧೫-೧೭). ಶಕುನಿಯು ಪಣವನ್ನಿಟ್ಟು ದಾಳಗಳನ್ನು ಹಿಡಿದು ಗೆದ್ದೆ ಎನ್ನುವುದು (೧೮-೨೧).
02067001 ವೈಶಂಪಾಯನ ಉವಾಚ|
02067001a ತತೋ ವ್ಯಧ್ವಗತಂ ಪಾರ್ಥಂ ಪ್ರಾತಿಕಾಮೀ ಯುಧಿಷ್ಠಿರಂ|
02067001c ಉವಾಚ ವಚನಾದ್ರಾಜ್ಞೋ ಧೃತರಾಷ್ಟ್ರಸ್ಯ ಧೀಮತಃ||
ವೈಶಂಪಾಯನನು ಹೇಳಿದನು: “ಧೀಮಂತ ರಾಜ ಧೃತರಾಷ್ಟ್ರನ ವಚನದಂತೆ ಪ್ರತಿಕಾಮಿಯೋರ್ವನು ಬಹಳಷ್ಟು ದೂರ ಪ್ರಯಾಣಿಸಿದ್ದ ಯುಧಿಷ್ಠಿರನಿಗೆ ಹೇಳಿದನು:
02067002a ಉಪಸ್ತೀರ್ಣಾ ಸಭಾ ರಾಜನ್ನಕ್ಷಾನುಪ್ತ್ವಾ ಯುಧಿಷ್ಠಿರ|
02067002c ಏಹಿ ಪಾಂಡವ ದೀವ್ಯೇತಿ ಪಿತಾ ತ್ವಾಮಾಹ ಭಾರತ||
“ರಾಜನ್! ಯುಧಿಷ್ಠಿರ! ಸಭೆಯು ಹಾಸಿ ತಯಾರಾಗಿದೆ. ದಾಳಗಳನ್ನು ಎಸೆಯಲಾಗಿದೆ. ಭಾರತ! ಪಾಂಡವ! ಬಂದು ಆಡು! ಎಂದು ನಿನ್ನ ತಂದೆಯು ನಿನಗೆ ಹೇಳಿದ್ದಾನೆ.”
02067003 ಯುಧಿಷ್ಠಿರ ಉವಾಚ|
02067003a ಧಾತುರ್ನಿಯೋಗಾದ್ಭೂತಾನಿ ಪ್ರಾಪ್ನುವಂತಿ ಶುಭಾಶುಭಂ|
02067003c ನ ನಿವೃತ್ತಿಸ್ತಯೋರಸ್ತಿ ದೇವಿತವ್ಯಂ ಪುನರ್ಯದಿ||
ಯುಧಿಷ್ಠಿರನು ಹೇಳಿದನು: “ಧಾತುವಿನ ನಿಯೋಗದಿಂದಲೇ ಜೀವಿಗಳು ಶುಭಾಶುಭಗಳನ್ನು ಹೊಂದುತ್ತವೆ. ನಾವು ಪುನಃ ದ್ಯೂತವನ್ನಾಡಬೇಕೆಂದಿದ್ದರೆ ಅದನ್ನು ತಡೆಯಲು ಸಾಧ್ಯವಿಲ್ಲ!
02067004a ಅಕ್ಷದ್ಯೂತೇ ಸಮಾಹ್ವಾನಂ ನಿಯೋಗಾತ್ ಸ್ಥವಿರಸ್ಯ ಚ|
02067004c ಜಾನನ್ನಪಿ ಕ್ಷಯಕರಂ ನಾತಿಕ್ರಮಿತುಮುತ್ಸಹೇ||
ವಯೋವೃದ್ಧನ ನಿಯೋಗದಂತೆ ಅಕ್ಷದ್ಯೂತದ ಆಹ್ವಾನವನ್ನು ಸ್ವೀಕರಿಸುವುದು ಕ್ಷಯಕರ ಎಂದು ತಿಳಿದಿದ್ದರೂ ಅವನ ಮಾತುಗಳನ್ನು ಅತಿಕ್ರಮಿಸಲಾರೆ.””
02067005 ವೈಶಂಪಾಯನ ಉವಾಚ|
02067005a ಇತಿ ಬ್ರುವನ್ನಿವವೃತೇ ಭ್ರಾತೃಭಿಃ ಸಹ ಪಾಂಡವಃ|
02067005c ಜಾನಂಶ್ಚ ಶಕುನೇರ್ಮಾಯಾಂ ಪಾರ್ಥೋ ದ್ಯೂತಮಿಯಾತ್ಪುನಃ||
ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಪಾರ್ಥ ಪಾಂಡವನು ಶಕುನಿಯ ಮಾಯೆಯನ್ನು ತಿಳಿದಿದ್ದರೂ ದ್ಯೂತಕ್ಕೆ ತನ್ನ ತಮ್ಮಂದಿರೊಡನೆ ಹಿಂದಿರುಗಿದನು.
02067006a ವಿವಿಶುಸ್ತೇ ಸಭಾಂ ತಾಂ ತು ಪುನರೇವ ಮಹಾರಥಾಃ|
02067006c ವ್ಯಥಯಂತಿ ಸ್ಮ ಚೇತಾಂಸಿ ಸುಹೃದಾಂ ಭರತರ್ಷಭಾಃ||
ಪುನಃ ಆ ಮಹಾರಥಿ ಭರತರ್ಷಭರು ತಮ್ಮ ಸುಹೃದಯರ ಮನಸ್ಸನ್ನು ಚಿಂತೆಗೊಳಪಡಿಸುತ್ತಾ ಆ ಸಭೆಯನ್ನು ಪ್ರವೇಶಿಸಿದರು.
02067007a ಯಥೋಪಜೋಷಮಾಸೀನಾಃ ಪುನರ್ದ್ಯೂತಪ್ರವೃತ್ತಯೇ|
02067007c ಸರ್ವಲೋಕವಿನಾಶಾಯ ದೈವೇನೋಪನಿಪೀಡಿತಾಃ||
ಸರ್ವಲೋಕವಿನಾಶದ ದೈವ ನಿಶ್ಚಯದಿಂದ ಪೀಡಿತರಾದ ಅವರು ಕುಳಿತುಕೊಂಡು ಪುನಃ ದ್ಯೂತವನ್ನು ಪಾರಂಭಿಸಿದರು.
02067008 ಶಕುನಿರುವಾಚ|
02067008a ಅಮುಂಚತ್ ಸ್ಥವಿರೋ ಯದ್ವೋ ಧನಂ ಪೂಜಿತಮೇವ ತತ್|
02067008c ಮಹಾಧನಂ ಗ್ಲಹಂ ತ್ವೇಕಂ ಶೃಣು ಮೇ ಭರತರ್ಷಭ||
ಶಕುನಿಯು ಹೇಳಿದನು: “ಭರತರ್ಷಭ! ಈ ವಯೋವೃದ್ಧನು ನಿನ್ನ ಧನವನ್ನು ನಿನಗೆ ಬಿಡುಗಡೆ ಮಾಡಿದನು. ಅದಕ್ಕೆ ಅವನನ್ನು ಗೌರವಿಸುತ್ತೇನೆ. ಆದರೆ ಈ ಮಹಾಧನಕ್ಕಾಗಿ ಒಂದೇ ಒಂದು ಆಟವಿದೆ. ಕೇಳು.
02067009a ವಯಂ ದ್ವಾದಶ ವರ್ಷಾಣಿ ಯುಷ್ಮಾಭಿರ್ದ್ಯೂತನಿರ್ಜಿತಾಃ|
02067009c ಪ್ರವಿಶೇಮ ಮಹಾರಣ್ಯಂ ರೌರವಾಜಿನವಾಸಸಃ||
02067010a ತ್ರಯೋದಶಂ ಚ ಸಜನೇ ಅಜ್ಞಾತಾಃ ಪರಿವತ್ಸರಂ|
02067010c ಜ್ಞಾತಾಶ್ಚ ಪುನರನ್ಯಾನಿ ವನೇ ವರ್ಷಾಣಿ ದ್ವಾದಶ||
ನಿಮ್ಮಿಂದ ನಾವು ದ್ಯೂತದಲ್ಲಿ ಸೋತರೆ ರುರು ಮತ್ತು ಜಿಂಕೆಯ ಚರ್ಮಗಳ ವಸ್ತ್ರಧಾರಣೆ ಮಾಡಿ ಹನ್ನೆರಡು ವರ್ಷ ಮಹಾರಣ್ಯವನ್ನು ಪ್ರವೇಶಿಸುತ್ತೇವೆ. ಮತ್ತು ಹದಿಮೂರನೆಯ ವರ್ಷ ಜನರ ಮಧ್ಯದಲ್ಲಿ ಅಜ್ಞಾತವಾಸ ಮಾಡುತ್ತೇವೆ. ಆ ಒಂದು ವರ್ಷದಲ್ಲಿ ಗುರುತಿಸಲ್ಪಟ್ಟರೆ ಪುನಃ ಹನ್ನೆರಡು ವರ್ಷಗಳ ವನವಾಸವನ್ನು ಮುಗಿಸುತ್ತೇವೆ.
02067011a ಅಸ್ಮಾಭಿರ್ವಾ ಜಿತಾ ಯೂಯಂ ವನೇ ವರ್ಷಾಣಿ ದ್ವಾದಶ|
02067011c ವಸಧ್ವಂ ಕೃಷ್ಣಯಾ ಸಾರ್ಧಮಜಿನೈಃ ಪ್ರತಿವಾಸಿತಾಃ||
ಅಥವಾ ನಾವು ನಿಮ್ಮನ್ನು ಸೋಲಿಸಿದರೆ ನೀವು ಕೃಷ್ಣೆಯೊಡನೆ ಹನ್ನೆರಡು ವರ್ಷಗಳು ಜಿನವನ್ನು ಧರಿಸಿ ವನದಲ್ಲಿ ವಾಸಿಸಬೇಕು.
02067012a ತ್ರಯೋದಶೇ ಚ ನಿರ್ವೃತ್ತೇ ಪುನರೇವ ಯಥೋಚಿತಂ|
02067012c ಸ್ವರಾಜ್ಯಂ ಪ್ರತಿಪತ್ತವ್ಯಮಿತರೈರಥ ವೇತರೈಃ||
ಹದಿಮೂರನೆಯ ವರ್ಷವು ಮುಗಿದ ನಂತರ ಪುನಃ ಯಥೋಚಿತವಾಗಿ ತಮ್ಮ ರಾಜ್ಯವನ್ನು ಒಬ್ಬರು ಇನ್ನೊಬ್ಬರಿಂದ ಹಿಂದೆ ತೆಗೆದುಕೊಳ್ಳಬೇಕು.
02067013a ಅನೇನ ವ್ಯವಸಾಯೇನ ಸಹಾಸ್ಮಾಭಿರ್ಯುಧಿಷ್ಠಿರ|
02067013c ಅಕ್ಷಾನುಪ್ತ್ವಾ ಪುನರ್ದ್ಯೂತಮೇಹಿ ದೀವ್ಯಸ್ವ ಭಾರತ||
ಭಾರತ! ಯುಧಿಷ್ಠಿರ! ಈ ಒಪ್ಪಂದದೊಂದಿಗೆ ಪುನಃ ನಮ್ಮೊಂದಿಗೆ ದಾಳವನ್ನೆಸೆದು ಪಣವನ್ನಿಟ್ಟು ದ್ಯೂತವನ್ನಾಡು.”
02067014 ಸಭಾಸದ ಊಚುಃ|
02067014a ಅಹೋ ಧಿಗ್ಬಾಂಧವಾ ನೈನಂ ಬೋಧಯಂತಿ ಮಹದ್ಭಯಂ|
02067014c ಬುದ್ಧ್ಯಾ ಬೋಧ್ಯಂ ನ ಬುಧ್ಯಂತೇ ಸ್ವಯಂ ಚ ಭರತರ್ಷಭಾಃ||
ಸಭಾಸದರು ಹೇಳಿದರು: “ಅಹೋ! ಧಿಕ್ಕಾರ! ಈ ಬಾಂಧವನು ಮಹಾ ಭಯವನ್ನು ತಿಳಿದಿಲ್ಲ! ಯಾರೂ ಕೂಡ ಇದನ್ನು ತಿಳಿಯಬಹುದು. ಆದರೆ ಸ್ವಯಂ ಭರತರ್ಷಭರೇ ಇದನ್ನು ಅರ್ಥಮಾಡಿಕೊಳ್ಳುತ್ತಿಲ್ಲ!””
02067015 ವೈಶಂಪಾಯನ ಉವಾಚ|
02067015a ಜನಪ್ರವಾದಾನ್ಸುಬಹೂನಿತಿ ಶೃಣ್ವನ್ನರಾಧಿಪಃ|
02067015c ಹ್ರಿಯಾ ಚ ಧರ್ಮಸಂಗಾಚ್ಚ ಪಾರ್ಥೋ ದ್ಯೂತಮಿಯಾತ್ಪುನಃ||
ವೈಶಂಪಾಯನನು ಹೇಳಿದನು: “ನರಾಧಿಪ ಪಾರ್ಥನು ಜನರ ಕೂಗನ್ನು ಕೇಳಿಸಿಕೊಂಡರೂ ತನಗಾದ ನಾಚಿಕೆಯಿಂದ ಮತ್ತು ಧರ್ಮದೊಂದಿಗಿರಬೇಕೆಂಬ ಇಚ್ಛೆಯಿಂದ ಪುನಃ ದ್ಯೂತಕ್ಕೆ ಒಪ್ಪಿಕೊಂಡನು.
02067016a ಜಾನನ್ನಪಿ ಮಹಾಬುದ್ಧಿಃ ಪುನರ್ದ್ಯೂತಮವರ್ತಯತ್|
02067016c ಅಪ್ಯಯಂ ನ ವಿನಾಶಃ ಸ್ಯಾತ್ಕುರೂಣಾಮಿತಿ ಚಿಂತಯನ್||
ಆ ಮಹಾಬುದ್ಧಿಯು ತಿಳಿದಿದ್ದರೂ “ಇದು ಕುರುಗಳ ವಿನಾಶವನ್ನು ತರುವುದಿಲ್ಲವೇ?” ಎಂದು ಚಿಂತಿಸಿ ಪುನಃ ದ್ಯೂತಕ್ಕೆ ಮರಳಿದನು.
02067017 ಯುಧಿಷ್ಠಿರ ಉವಾಚ|
02067017a ಕಥಂ ವೈ ಮದ್ವಿಧೋ ರಾಜಾ ಸ್ವಧರ್ಮಮನುಪಾಲಯನ್|
02067017c ಆಹೂತೋ ವಿನಿವರ್ತೇತ ದೀವ್ಯಾಮಿ ಶಕುನೇ ತ್ವಯಾ||
ಯುಧಿಷ್ಠಿರನು ಹೇಳಿದನು: “ಸ್ವಧರ್ಮವನ್ನು ಅನುಸರಿಸುವ ನನ್ನಂಥಹ ರಾಜನು ಆಹ್ವಾನಿಸಲ್ಪಟ್ಟಾಗ ಹಿಂದಿರುಗಿ ಬರದೇ ಇರಲು ಹೇಗೆ ಸಾಧ್ಯ? ಶಕುನಿ! ನಿನ್ನೊಂದಿಗೆ ಆಡುತ್ತೇನೆ!”
02067018 ಶಕುನಿರುವಾಚ|
02067018a ಗವಾಶ್ವಂ ಬಹುಧೇನೂಕಮಪರ್ಯಂತಮಜಾವಿಕಂ|
02067018c ಗಜಾಃ ಕೋಶೋ ಹಿರಣ್ಯಂ ಚ ದಾಸೀದಾಸಂ ಚ ಸರ್ವಶಃ||
ಶಕುನಿಯು ಹೇಳಿದನು: “ಗೋವುಗಳು, ಕುದುರೆಗಳು, ಹಾಲುಕೊಡುವ ಹಸುಗಳು, ಲೆಕ್ಕವಿಲ್ಲದಷ್ಟು ಕುರಿಗಳು ಮತ್ತು ಆಡುಗಳು, ಆನೆಗಳು, ಕೋಶ, ಹಿರಣ್ಯ ಮತ್ತು ದಾಸಿಯರು ಎಲ್ಲವೂ ಪಣವಾಗಿರಲಿ.
02067019a ಏಷ ನೋ ಗ್ಲಹ ಏವೈಕೋ ವನವಾಸಾಯ ಪಾಂಡವಾಃ|
02067019c ಯೂಯಂ ವಯಂ ವಾ ವಿಜಿತಾ ವಸೇಮ ವನಮಾಶ್ರಿತಾಃ||
02067020a ಅನೇನ ವ್ಯವಸಾಯೇನ ದೀವ್ಯಾಮ ಭರತರ್ಷಭ|
02067020c ಸಮುತ್ಕ್ಷೇಪೇಣ ಚೈಕೇನ ವನವಾಸಾಯ ಭಾರತ||
ಪಾಂಡವರೇ! ಇದು ನನ್ನ ಒಂದೇ ಒಂದು ಎಸೆತ! ಇದರಲ್ಲಿ ಸೋತ ನೀವು ಅಥವಾ ನಾವು ವನವನ್ನು ಸೇರಿ ವಾಸಿಸೋಣ. ಭರತರ್ಷಭ! ಈ ಒಪ್ಪಂದದೊಂದಿಗೆ ಆಡೋಣ. ಭಾರತ! ಒಂದೇ ಒಂದು ದಾಳದಿಂದ ವನವಾಸ!””
02067021 ವೈಶಂಪಾಯನ ಉವಾಚ|
02067021a ಪ್ರತಿಜಗ್ರಾಹ ತಂ ಪಾರ್ಥೋ ಗ್ಲಹಂ ಜಗ್ರಾಹ ಸೌಬಲಃ|
02067021c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ||
ವೈಶಂಪಾಯನನು ಹೇಳಿದನು: “ಪಾರ್ಥನು ಅದಕ್ಕೆ ಒಪ್ಪಿಕೊಳ್ಳಲು ಸೌಬಲ ಶಕುನಿಯು ದಾಳಗಳನ್ನು ಹಿಡಿದು ಯುಧಿಷ್ಠಿರನಿಗೆ “ಗೆದ್ದೆ!” ಎಂದು ಕೂಗಿ ಹೇಳಿದನು.”
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಅನುದ್ಯೂತಪರ್ವಣಿ ಪುನರ್ಯುಧಿಷ್ಠಿರಪರಾಜಯೇ ಸಪ್ತಷಷ್ಟಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅನುದ್ಯೂತಪರ್ವದಲ್ಲಿ ಪುನಃ ಯುಧಿಷ್ಠಿರನ ಪರಾಜಯ ಎನ್ನುವ ಅರವತ್ತೇಳನೆಯ ಅಧ್ಯಾಯವು.