ಸಭಾ ಪರ್ವ: ದ್ಯೂತ ಪರ್ವ
೬೫
ಇಂದ್ರಪ್ರಸ್ಥಕ್ಕೆ ಯುಧಿಷ್ಠಿರನ ಪ್ರಯಾಣ
ಏನು ಮಾಡಬೇಕೆಂದು ಕೇಳಲು (೧) ಧೃತರಾಷ್ಟ್ರನು ಯುಧಿಷ್ಠಿರನಿಗೆ ಇಂದ್ರಪ್ರಸ್ಥಕ್ಕೆ ಮರಳಿ, ದುರ್ಯೋಧನಾದಿಗಳ ವಿರುದ್ಧ ವೈರವನ್ನು ಸಾಧಿಸದೇ, ವೃದ್ಧ ಗಾಂಧಾರಿ ಮತ್ತು ರಾಜನನ್ನು ಗೌರವಿಸಿಕೊಂಡು, ನಿನ್ನ ರಾಜ್ಯವನ್ನು ಆಳು ಎಂದು ಸಲಹೆಯನ್ನು ನೀಡುವುದು (೨-೧೫). ಯುಧಿಷ್ಠಿರನು ದ್ರೌಪದಿ ಮತ್ತು ತಮ್ಮಂದಿರೊಡನೆ ರಥಗಳನ್ನೇರಿ ಇಂದ್ರಪ್ರಸ್ಥದ ಕಡೆ ಪ್ರಯಾಣಿಸಿದುದು (೧೬-೧೭).
02065001 ಯುಧಿಷ್ಠಿರ ಉವಾಚ|
02065001a ರಾಜನ್ಕಿಂ ಕರವಾಮಸ್ತೇ ಪ್ರಶಾಧ್ಯಸ್ಮಾಂಸ್ತ್ವಮೀಶ್ವರಃ|
02065001c ನಿತ್ಯಂ ಹಿ ಸ್ಥಾತುಮಿಚ್ಛಾಮಸ್ತವ ಭಾರತ ಶಾಸನೇ||
ಯುಧಿಷ್ಠಿರನು ಹೇಳಿದನು: “ರಾಜನ್! ಈಗ ನಾವು ಏನು ಮಾಡಬೇಕು? ನಮಗೆ ಆಜ್ಞಾಪಿಸು. ನೀನು ನಮ್ಮ ಒಡೆಯ. ಭಾರತ! ನಿತ್ಯವೂ ನಾವು ನಿನ್ನ ಶಾಸನದಂತೆ ನಡೆದುಕೊಳ್ಳಲು ಬಯಸುತ್ತೇವೆ.”
02065002 ಧೃತರಾಷ್ಟ್ರ ಉವಾಚ|
02065002a ಅಜಾತಶತ್ರೋ ಭದ್ರಂ ತೇ ಅರಿಷ್ಟಂ ಸ್ವಸ್ತಿ ಗಚ್ಛತ|
02065002c ಅನುಜ್ಞಾತಾಃ ಸಹಧನಾಃ ಸ್ವರಾಜ್ಯಮನುಶಾಸತ||
ಧೃತರಾಷ್ಟ್ರನು ಹೇಳಿದನು: “ಅಜಾತಶತ್ರು! ನಿನಗೆ ಮಂಗಳವಾಗಲಿ! ಶಾಂತಿ ಮತ್ತು ಸುಖದಿಂದ ಹೋಗು. ನಿನಗೆ ಅನುಜ್ಞೆಯಿದೆ. ನಿನ್ನ ರಾಜ್ಯವನ್ನು ಧನದೊಂದಿಗೆ ಆಳು.
02065003a ಇದಂ ತ್ವೇವಾವಬೋದ್ಧವ್ಯಂ ವೃದ್ಧಸ್ಯ ಮಮ ಶಾಸನಂ|
02065003c ಧಿಯಾ ನಿಗದಿತಂ ಕೃತ್ಸ್ನಂ ಪಥ್ಯಂ ನಿಃಶ್ರೇಯಸಂ ಪರಂ||
ಆದರೆ ಈ ವೃದ್ಧನು ನಿನಗೆ ನೀಡುವ ಸಲಹೆಯನ್ನು ಹೃದಯಕ್ಕೆ ತೆಗೆದುಕೋ. ಏಕೆಂದರೆ ಇದು ನಿಶ್ಚಯವಾಗಿಯೂ ಪರಮ ಶ್ರೇಯಸ್ಸಿಗೆ ಪಥ್ಯ.
02065004a ವೇತ್ಥ ತ್ವಂ ತಾತ ಧರ್ಮಾಣಾಂ ಗತಿಂ ಸೂಕ್ಷ್ಮಾಂ ಯುಧಿಷ್ಠಿರ|
02065004c ವಿನೀತೋಽಸಿ ಮಹಾಪ್ರಾಜ್ಞ ವೃದ್ಧಾನಾಂ ಪರ್ಯುಪಾಸಿತಾ||
ಯುಧಿಷ್ಠಿರ! ಮಹಾಪ್ರಾಜ್ಞ! ಮಗನೇ! ನಿನಗೆ ಧರ್ಮಗಳ ಸೂಕ್ಷ್ಮ ಗತಿಯು ತಿಳಿದಿದೆ. ವಿನೀತನಾಗಿರುವೆ ಮತ್ತು ವೃದ್ಧರ ಸೇವೆ ಮಾಡುತ್ತೀಯೆ.
02065005a ಯತೋ ಬುದ್ಧಿಸ್ತತಃ ಶಾಂತಿಃ ಪ್ರಶಮಂ ಗಚ್ಛ ಭಾರತ|
02065005c ನಾದಾರೌ ಕ್ರಮತೇ ಶಸ್ತ್ರಂ ದಾರೌ ಶಸ್ತ್ರಂ ನಿಪಾತ್ಯತೇ||
ಭಾರತ! ಎಲ್ಲಿ ಬುದ್ಧಿಯಿದೆಯೋ ಅಲ್ಲಿ ಶಾಂತಿಯಿರುತ್ತದೆ. ಶಾಂತನಾಗಿ ಹೋಗು. ಕಟ್ಟಿಗೆಯಲ್ಲದುದನ್ನು ಶಸ್ತ್ರವು ಕಡಿಯುವುದಿಲ್ಲ. ಕಟ್ಟಿಗೆಯ ಮೇಲೆ ಮಾತ್ರ ಶಸ್ತ್ರವನ್ನು ಪ್ರಯೋಗಿಸಬಹುದು.
02065006a ನ ವೈರಾಣ್ಯಭಿಜಾನಂತಿ ಗುಣಾನ್ಪಶ್ಯಂತಿ ನಾಗುಣಾನ್|
02065006c ವಿರೋಧಂ ನಾಧಿಗಚ್ಛಂತಿ ಯೇ ತ ಉತ್ತಮಪೂರುಷಾಃ||
ಉತ್ತಮ ಪುರುಷನು ವೈರತ್ವವನ್ನು ತಿಳಿದಿರುವುದಿಲ್ಲ. ಗುಣಗಳನ್ನು ನೋಡುತ್ತಾನೆ, ಅವಗುಣಗಳನ್ನಲ್ಲ ಮತ್ತು ವಿರೋಧವನ್ನು ಸಾಧಿಸುವುದಿಲ್ಲ.
02065007a ಸಂವಾದೇ ಪರುಷಾಣ್ಯಾಹುರ್ಯುಧಿಷ್ಠಿರ ನರಾಧಮಾಃ|
02065007c ಪ್ರತ್ಯಾಹುರ್ಮಧ್ಯಮಾಸ್ತ್ವೇತಾನುಕ್ತಾಃ ಪರುಷಮುತ್ತರಂ||
02065008a ನೈವೋಕ್ತಾ ನೈವ ಚಾನುಕ್ತಾ ಅಹಿತಾಃ ಪರುಷಾ ಗಿರಃ|
02065008c ಪ್ರತಿಜಲ್ಪಂತಿ ವೈ ಧೀರಾಃ ಸದಾ ಉತ್ತಮಪೂರುಷಾಃ||
ಯುಧಿಷ್ಠಿರ! ನರಾಧಮರು ಮಾತ್ರ ಮಾತನಾಡುವಾಗ ಅಪಮಾನ ಮಾಡುತ್ತಾರೆ. ಆದರೆ ಉತ್ತಮ ಪುರುಷರು ಹೇಳದೇ ಇದ್ದ ಅಥವಾ ಹೇಳಿದ ಯಾವುದೇ ಅಹಿತ ಮಾತುಗಳಿಗೆ ಪ್ರತಿಕ್ರಿಯೆ ತೋರಿಸದೇ ಸಹಿಸಿಕೊಳ್ಳುತ್ತಾರೆ.
02065009a ಸ್ಮರಂತಿ ಸುಕೃತಾನ್ಯೇವ ನ ವೈರಾಣಿ ಕೃತಾನ್ಯಪಿ|
02065009c ಸಂತಃ ಪ್ರತಿವಿಜಾನಂತೋ ಲಬ್ಧ್ವಾ ಪ್ರತ್ಯಯಮಾತ್ಮನಃ||
ಸಂತರು ಸುಕೃತಗಳನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಮತ್ತು ಗುರುತಿಸುತ್ತಾರೆ. ದ್ವೇಷದಲ್ಲಿ ಮಾಡಿದವುಗಳನ್ನಲ್ಲ. ಏಕೆಂದರೆ ಅವರಿಗೆ ತಮ್ಮ ಮೇಲೆಯೇ ವಿಶ್ವಾಸವಿರುತ್ತದೆ.
02065010a ತಥಾಚರಿತಮಾರ್ಯೇಣ ತ್ವಯಾಸ್ಮಿನ್ಸತ್ಸಮಾಗಮೇ|
02065010c ದುರ್ಯೋಧನಸ್ಯ ಪಾರುಷ್ಯಂ ತತ್ತಾತ ಹೃದಿ ಮಾ ಕೃಥಾಃ||
ಈ ಸತ್ಸಮಾಗಮದಲ್ಲಿ ನೀನು ಗೌರವಯುತವಾಗಿ ನಡೆದುಕೊಂಡಿದ್ದೀಯೆ. ಮಗನೇ! ದುರ್ಯೋಧನನ ಕೆಟ್ಟ ವರ್ತನೆಗಳನ್ನು ಹೃದಯಕ್ಕೆ ತೆಗೆದುಕೊಳ್ಳಬೇಡ.
02065011a ಮಾತರಂ ಚೈವ ಗಾಂಧಾರೀಂ ಮಾಂ ಚ ತ್ವದ್ಗುಣಕಾಂಕ್ಷಿಣಂ|
02065011c ಉಪಸ್ಥಿತಂ ವೃದ್ಧಮಂಧಂ ಪಿತರಂ ಪಶ್ಯ ಭಾರತ||
ಭಾರತ! ನಿನ್ನ ಋಣಾಕಾಂಕ್ಷಿಗಳಾಗಿ ಉಪಸ್ಥಿತರಿರುವ ಈ ವೃದ್ಧರೂ ಅಂಧರೂ ಆದ ನಿನ್ನ ತಾಯಿ ಗಾಂಧಾರಿ ಮತ್ತು ತಂದೆ ನನ್ನನ್ನು ನೋಡು.
02065012a ಪ್ರೇಕ್ಷಾಪೂರ್ವಂ ಮಯಾ ದ್ಯೂತಮಿದಮಾಸೀದುಪೇಕ್ಷಿತಂ|
02065012c ಮಿತ್ರಾಣಿ ದ್ರಷ್ಟುಕಾಮೇನ ಪುತ್ರಾಣಾಂ ಚ ಬಲಾಬಲಂ||
ಮಿತ್ರರನ್ನು ಮತ್ತು ಪುತ್ರರ ಬಲಾಬಲವನ್ನು ನೋಡುವುದಕ್ಕೋಸ್ಕರ ನಾನು ಈ ದ್ಯೂತವನ್ನು ಏರ್ಪಡಿಸಿದ್ದೆ.
02065013a ಅಶೋಚ್ಯಾಃ ಕುರವೋ ರಾಜನ್ಯೇಷಾಂ ತ್ವಮನುಶಾಸಿತಾ|
02065013c ಮಂತ್ರೀ ಚ ವಿದುರೋ ಧೀಮಾನ್ಸರ್ವಶಾಸ್ತ್ರವಿಶಾರದಃ||
ರಾಜನ್! ನಿನ್ನ ಅನುಶಾಸನದಲ್ಲಿರುವ ಕುರುಗಳ ಮತ್ತು ಧೀಮಂತ ಸರ್ವಶಾಸ್ತ್ರವಿಶಾರದ ಮಂತ್ರಿ ವಿದುರನ ಕುರಿತು ಶೋಕಿಸಬೇಡ.
02065014a ತ್ವಯಿ ಧರ್ಮೋಽರ್ಜುನೇ ವೀರ್ಯಂ ಭೀಮಸೇನೇ ಪರಾಕ್ರಮಃ|
02065014c ಶ್ರದ್ಧಾ ಚ ಗುರುಶುಶ್ರೂಷಾ ಯಮಯೋಃ ಪುರುಷಾಗ್ರ್ಯಯೋಃ||
ನಿನ್ನಲ್ಲಿ ಧರ್ಮವಿದೆ. ಅರ್ಜುನನಲ್ಲಿ ವೀರ್ಯವಿದೆ. ಭೀಮಸೇನನಲ್ಲಿ ಪರಾಕ್ರಮವಿದೆ ಮತ್ತು ಯಮಳರಲ್ಲಿ ಶ್ರದ್ಧೆ, ಗುರು-ಹಿರಿಯರ ಶುಶ್ರೂಷೆಯಿದೆ.
02065015a ಅಜಾತಶತ್ರೋ ಭದ್ರಂ ತೇ ಖಾಂಡವಪ್ರಸ್ಥಮಾವಿಶ|
02065015c ಭ್ರಾತೃಭಿಸ್ತೇಽಸ್ತು ಸೌಭ್ರಾತ್ರಂ ಧರ್ಮೇ ತೇ ಧೀಯತಾಂ ಮನಃ||
ಅಜಾತಶತ್ರು! ನಿನಗೆ ಮಂಗಳವಾಗಲಿ! ಖಾಂಡವಪ್ರಸ್ಥವನ್ನು ಸೇರು. ನಿನ್ನ ಭ್ರಾತೃಗಳಲ್ಲಿ ನಿನಗೆ ಸೌಹಾರ್ದತ್ವ ಇರಲಿ ಮತ್ತು ನಿನ್ನ ಮನಸ್ಸು ಧರ್ಮದಲ್ಲಿ ನೆಲೆಸಿರಲಿ.””
02065016 ವೈಶಂಪಾಯನ ಉವಾಚ|
02065016a ಇತ್ಯುಕ್ತೋ ಭರತಶ್ರೇಷ್ಠೋ ಧರ್ಮರಾಜೋ ಯುಧಿಷ್ಠಿರಃ|
02065016c ಕೃತ್ವಾರ್ಯಸಮಯಂ ಸರ್ವಂ ಪ್ರತಸ್ಥೇ ಭ್ರಾತೃಭಿಃ ಸಹ||
ವೈಶಂಪಾಯನನು ಹೇಳಿದನು: “ಭರತಶ್ರೇಷ್ಠ ಧರ್ಮರಾಜ ಯುಧಿಷ್ಠಿರನು ಈ ಮಾತುಗಳೆಲ್ಲವನ್ನೂ ಗೌರವಾನ್ವಿತವಾಗಿ ಒಪ್ಪಿಕೊಂಡು ಭ್ರಾತೃಗಳ ಸಹಿತ ಹೊರಟನು.
02065017a ತೇ ರಥಾನ್ಮೇಘಸಂಕಾಶಾನಾಸ್ಥಾಯ ಸಹ ಕೃಷ್ಣಯಾ|
02065017c ಪ್ರಯಯುರ್ಹೃಷ್ಟಮನಸ ಇಂದ್ರಪ್ರಸ್ಥಂ ಪುರೋತ್ತಮಂ||
ಅವರು ಮೇಘದಂತೆ ಗರ್ಜಿಸುವ ರಥಗಳನ್ನೇರಿ ಕೃಷ್ಣೆಯ ಸಹಿತ ಹೃಷ್ಠಮನಸ್ಕರಾಗಿ ಉತ್ತಮ ಪುರ ಇಂದ್ರಪ್ರಸ್ಥದ ಕಡೆ ಹೊರಟರು.”
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ಇಂದ್ರಪ್ರಸ್ಥಂ ಪ್ರತಿ ಯುಧಿಷ್ಠಿರಗಮನೇ ಪಂಚಷಷ್ಟಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ಇಂದ್ರಪ್ರಸ್ಥಕ್ಕೆ ಯುಧಿಷ್ಠಿರನ ಪ್ರಯಾಣ ಎನ್ನುವ ಅರವತ್ತೈದನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಃ||
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-೧/೧೮, ಉಪಪರ್ವಗಳು-೨೭/೧೦೦, ಅಧ್ಯಾಯಗಳು-೨೯೦/೧೯೯೫, ಶ್ಲೋಕಗಳು-೯೩೪೮/೭೩೭೮೪