ಸಭಾ ಪರ್ವ: ದ್ಯೂತ ಪರ್ವ
೬೪
ಭೀಮನ ಕ್ರೋಧ
ಕರ್ಣನು ಮುಳುಗುತ್ತಿರುವ ಪಾಂಡವರಿಗೆ ದ್ರೌಪದಿಯೇ ಪಾರುಮಾಡಿಸಿದಳು ಎಂದು ಅಪಮಾನಿಸಿದುದು (೧-೩). ಭೀಮಸೇನನು ಕೃದ್ಧನಾಗಿ “ಉಲ್ಲಂಘನೆಗೊಂಡ ಪತ್ನಿಯಿಂದ ಸಂತಾನವನ್ನು ಹೇಗೆ ಪಡೆಯಬಹುದು?” ಎಂದು ಕೇಳಲು (೪-೭), ಅರ್ಜುನನು ಅವನಿಗೆ ಶಾಂತನಾಗಲು ಹೇಳಿದುದು (೮-೯). ಭೀಮನು ಕ್ರೋಧದಿಂದ ಸಭೆಯಲ್ಲಿರುವರನ್ನು ನಾಶಪಡಿಸುವೆನೆಂದು ಗರ್ಜಿಸಿ ಎದ್ದು ನಿಲ್ಲುವುದು (೧೦-೧೫). ಯುಧಿಷ್ಠಿರನು ಭೀಮನನ್ನು ತಡೆಹಿಡಿದು ಕುಳ್ಳಿರಿಸಿ ಧೃತರಾಷ್ಟ್ರನ ಬಳಿ ಹೋಗುವುದು (೧೬-೧೭).
02064001 ಕರ್ಣ ಉವಾಚ|
02064001a ಯಾ ನಃ ಶ್ರುತಾ ಮನುಷ್ಯೇಷು ಸ್ತ್ರಿಯೋ ರೂಪೇಣ ಸಮ್ಮತಾಃ|
02064001c ತಾಸಾಮೇತಾದೃಶಂ ಕರ್ಮ ನ ಕಸ್ಯಾಂ ಚನ ಶುಶ್ರುಮಃ||
ಕರ್ಣನು ಹೇಳಿದನು: “ಇದೂವರೆಗೆ ಕೇಳಿದ್ದ ರೂಪಸಮನ್ವಿತ ಯಾವ ಮನುಷ್ಯ ಸ್ತ್ರೀಯೂ ಇಂಥಹ ಕರ್ಮವನ್ನು ಸಾಧಿಸಿದುದನ್ನು ಕೇಳಿಲ್ಲ.
02064002a ಕ್ರೋಧಾವಿಷ್ಟೇಷು ಪಾರ್ಥೇಷು ಧಾರ್ತರಾಷ್ಟ್ರೇಷು ಚಾಪ್ಯತಿ|
02064002c ದ್ರೌಪದೀ ಪಾಂಡುಪುತ್ರಾಣಾಂ ಕೃಷ್ಣಾ ಶಾಂತಿರಿಹಾಭವತ್||
ಪಾರ್ಥರು ಮತ್ತು ಧಾರ್ತರಾಷ್ಟ್ರರು ಕ್ರೋಧಾವಿಷ್ಟರಾಗುತ್ತಿರಲು ಈ ದ್ರೌಪದಿ ಕೃಷ್ಣೆಯು ಪಾಂಡುಪುತ್ರರರಿಗೆ ಶಾಂತಿಯನ್ನು ತಂದಿಟ್ಟಹಾಗಾಯಿತು.
02064003a ಅಪ್ಲವೇಂಽಭಸಿ ಮಗ್ನಾನಾಮಪ್ರತಿಷ್ಠೇ ನಿಮಜ್ಜತಾಂ|
02064003c ಪಾಂಚಾಲೀ ಪಾಂಡುಪುತ್ರಾಣಾಂ ನೌರೇಷಾ ಪಾರಗಾಭವತ್||
ಮುಳುಗುತ್ತಿದ್ದ ದೋಣಿಯಿಂದ ತಳವಿಲ್ಲದ ಸಾಗರದಲ್ಲಿ ಮುಳುಗಿ ಹೋಗುತ್ತಿದ್ದ ಈ ಪಾಂಡುಪುತ್ರರಿಗೆ ಪಾಂಚಾಲಿಯು ಪಾರುಮಾಡುವ ದೋಣಿಯಂತಾದಳು.””
02064004 ವೈಶಂಪಾಯನ ಉವಾಚ|
02064004a ತದ್ವೈ ಶ್ರುತ್ವಾ ಭೀಮಸೇನಃ ಕುರುಮಧ್ಯೇಽತ್ಯಮರ್ಷಣಃ|
02064004c ಸ್ತ್ರೀ ಗತಿಃ ಪಾಂಡುಪುತ್ರಾಣಾಮಿತ್ಯುವಾಚ ಸುದುರ್ಮನಾಃ||
ವೈಶಂಪಾಯನನು ಹೇಳಿದನು: “ಪಾಂಡುಪುತ್ರರಿಗೆ ಸ್ತ್ರೀಯೇ ಗತಿಯಾದಳು ಎಂದು ಕುರುಮಧ್ಯದಲ್ಲಿ ಹೇಳಿದ್ದುದನ್ನು ಕೇಳಿದ ಭೀಮಸೇನನು ಅತಿ ಕೋಪಗೊಂಡು ಮನನೊಂದು ಹೇಳಿದನು:
02064005a ತ್ರೀಣಿ ಜ್ಯೋತೀಂಷಿ ಪುರುಷ ಇತಿ ವೈ ದೇವಲೋಽಬ್ರವೀತ್|
02064005c ಅಪತ್ಯಂ ಕರ್ಮ ವಿದ್ಯಾ ಚ ಯತಃ ಸೃಷ್ಟಾಃ ಪ್ರಜಾಸ್ತತಃ||
“ಪುರುಶನಿಗೆ ಮೂರು ಜ್ಯೋತಿಗಳಿವೆ ಎಂದು ದೇವಲನು ಹೇಳಿದ್ದಾನೆ: ಸಂತಾನ, ಕರ್ಮ ಮತ್ತು ವಿದ್ಯೆ. ಇವುಗಳಿಂದಲೇ ಸೃಷ್ಟಿಯಾದವುಗಳು ಬಾಳುತ್ತವೆ.
02064006a ಅಮೇಧ್ಯೇ ವೈ ಗತಪ್ರಾಣೇ ಶೂನ್ಯೇ ಜ್ಞಾತಿಭಿರುಂಝಿತೇ|
02064006c ದೇಹೇ ತ್ರಿತಯಮೇವೈತತ್ಪುರುಷಸ್ಯೋಪಜಾಯತೇ||
ಬಾಂಧವರು ಬಿಸಾಡಿದ ಪುರುಷನ ಮಾಂಸವಿಲ್ಲದ ಪ್ರಾಣಗತ ಶೂನ್ಯ ದೇಹದ ನಂತರ ಉಳಿಯುವುದೆಂದರೆ ಇವು ಮೂರೇ.
02064007a ತನ್ನೋ ಜ್ಯೋತಿರಭಿಹತಂ ದಾರಾಣಾಮಭಿಮರ್ಶನಾತ್|
02064007c ಧನಂಜಯ ಕಥಂ ಸ್ವಿತ್ಸ್ಯಾದಪತ್ಯಮಭಿಮೃಷ್ಟಜಂ||
ಧನಂಜಯ! ನಮ್ಮ ಪತ್ನಿಯನ್ನು ಇವರು ಉಲ್ಲಂಘಿಸಿ ಒಂದು ಜ್ಯೋತಿಯನ್ನು ಆರಿಸಿದ್ದಾರೆ. ಉಲ್ಲಂಘನೆಗೊಂಡ ಪತ್ನಿಯಿಂದ ಸಂತಾನವನ್ನು ಹೇಗೆ ಪಡೆಯಬಹುದು?”
02064008 ಅರ್ಜುನ ಉವಾಚ|
02064008a ನ ಚೈವೋಕ್ತಾ ನ ಚಾನುಕ್ತಾ ಹೀನತಃ ಪರುಷಾ ಗಿರಃ|
02064008c ಭಾರತಾಃ ಪ್ರತಿಜಲ್ಪಂತಿ ಸದಾ ತೂತ್ತಮಪೂರುಷಾಃ||
02064009a ಸ್ಮರಂತಿ ಸುಕೃತಾನ್ಯೇವ ನ ವೈರಾಣಿ ಕೃತಾನಿ ಚ|
02064009c ಸಂತಃ ಪ್ರತಿವಿಜಾನಂತೋ ಲಬ್ಧ್ವಾ ಪ್ರತ್ಯಯಮಾತ್ಮನಃ||
ಅರ್ಜುನನು ಹೇಳಿದನು: “ಹೀನಪುರುಷರು ಆಡಿದ ಅಥವಾ ಆಡದೇ ಇದ್ದ ಮಾತುಗಳಿಗೆ ಭಾರತರು ಪ್ರತಿಕ್ರಿಯೆಯನ್ನು ನೀಡುವುದಿಲ್ಲ. ಉತ್ತಮ ಪುರುಷರು ಸದಾ ಸುಕೃತಗಳನ್ನೇ ನೆನಪಿಟ್ಟುಕೊಳ್ಳುತ್ತಾರೆ. ವೈರತ್ವದಿಂದ ಮಾಡಿದ ಕರ್ಮಗಳನ್ನಲ್ಲ. ತಮ್ಮ ಮೇಲೆಯೇ ವಿಶ್ವಾಸವಿರುವ ಸಂತರು ಒಳ್ಳೆಯದನ್ನು ಗುರುತಿಸುತ್ತಾರೆ[1].”
02064010 ಭೀಮ ಉವಾಚ|
02064010a ಇಹೈವೈತಾಂಸ್ತುರಾ ಸರ್ವಾನ್ ಹನ್ಮಿ ಶತ್ರೂನ್ಸಮಾಗತಾನ್|
02064010c ಅಥ ನಿಷ್ಕ್ರಮ್ಯ ರಾಜೇಂದ್ರ ಸಮೂಲಾನ್ಕೃಂಧಿ ಭಾರತ||
ಭೀಮನು ಹೇಳಿದನು: “ಸಮಾಗತ ಎಲ್ಲ ಶತ್ರುಗಳನ್ನೂ ಇಲ್ಲಿಯೇ ಕೊಂದುಬಿಡುತ್ತೇನೆ. ಆದುದರಿಂದ ರಾಜೇಂದ್ರ! ಭಾರತ! ಹೊರಗೆ ಹೋಗು. ಇವರನ್ನು ಸಮೂಲವಾಗಿ ಸಂಹರಿಸುತ್ತೇನೆ.
02064011a ಕಿಂ ನೋ ವಿವದಿತೇನೇಹ ಕಿಂ ನಃ ಕ್ಲೇಶೇನ ಭಾರತ|
02064011c ಅದ್ಯೈವೈತಾನ್ನಿಹನ್ಮೀಹ ಪ್ರಶಾಧಿ ವಸುಧಾಮಿಮಾಂ||
ಭಾರತ! ಇಲ್ಲಿ ಇನ್ನೂ ಏಕೆ ವಿವಾದದಲ್ಲಿ ತೊಡಗಿ ಕ್ಲೇಶವನ್ನು ಅನುಭವಿಸಬೇಕು? ಇಂದೇ ಇಲ್ಲಿಯೇ ಇವರನ್ನು ವಧಿಸುತ್ತೇನೆ. ನೀನು ಈ ವಸುಧೆಯನ್ನು ಆಳು.””
02064012 ವೈಶಂಪಾಯನ ಉವಾಚ|
02064012a ಇತ್ಯುಕ್ತ್ವಾ ಭೀಮಸೇನಸ್ತು ಕನಿಷ್ಠೈರ್ಭ್ರಾತೃಭಿರ್ವೃತಃ|
02064012c ಮೃಗಮಧ್ಯೇ ಯಥಾ ಸಿಂಹೋ ಮುಹುಃ ಪರಿಘಮೈಕ್ಷತ||
ವೈಶಂಪಾಯನನು ಹೇಳಿದನು: “ಹೀಗೆ ಹೇಳಿದ ಭೀಮಸೇನನು ತನ್ನ ಕಿರಿಯ ತಮ್ಮಂದಿರಿಂದ ಆವೃತನಾಗಿ ಮೃಗಮಧ್ಯದಲ್ಲಿದ್ದ ಸಿಂಹನಂತೆ ಕಾಣುತ್ತಿದ್ದನು ಮತ್ತು ಆಗಾಗ ಪರಿಘವನ್ನು ನೋಡುತ್ತಿದ್ದನು.
02064013a ಸಾಂತ್ವ್ಯಮಾನೋ ವೀಜ್ಯಮಾನಃ ಪಾರ್ಥೇನಾಕ್ಲಿಷ್ಟಕರ್ಮಣಾ|
02064013c ಸ್ವಿದ್ಯತೇ ಚ ಮಹಾಬಾಹುರಂತರ್ದಾಹೇನ ವೀರ್ಯವಾನ್||
ಅಕ್ಲಿಷ್ಟಕರ್ಮಿ ಪಾರ್ಥರು ಅವನನ್ನು ಒಳ್ಳೆಯ ರೀತಿಯಲ್ಲಿ ಸಂತವಿಸುತ್ತಿರಲು ವೀರ್ಯವಾನ್ ಮಹಾಬಾಹುವು ಒಳಗಿಂದೊಳಗೇ ಬೇಯತೊಡಗಿದನು.
02064014a ಕ್ರುದ್ಧಸ್ಯ ತಸ್ಯ ಸ್ರೋತೋಭ್ಯಃ ಕರ್ಣಾದಿಭ್ಯೋ ನರಾಧಿಪ|
02064014c ಸಧೂಮಃ ಸಸ್ಫುಲಿಂಗಾರ್ಚಿಃ ಪಾವಕಃ ಸಮಜಾಯತ||
ನರಾಧಿಪ! ಅವನ ಕಿವಿ ಮತ್ತು ಇತರ ರಂಧ್ರಗಳಿಂದ ಧೂಮದೊಂದಿಗೆ ನಿಧಾನವಾಗಿ ಉರಿಯುತ್ತಿರುವ ಕೆಂಡದಂತೆ ಬೆಂಕಿಯು ಹೊರಬಂದಿತು.
02064015a ಭ್ರುಕುಟೀಪುಟದುಷ್ಪ್ರೇಕ್ಷ್ಯಮಭವತ್ತಸ್ಯ ತನ್ಮುಖಂ|
02064015c ಯುಗಾಂತಕಾಲೇ ಸಂಪ್ರಾಪ್ತೇ ಕೃತಾಂತಸ್ಯೇವ ರೂಪಿಣಃ||
ಅವನ ಮುಖವು ಯುಗಾಂತಕಾಲವು ಪ್ರಾಪ್ತವಾದಾಗ ಸ್ವಯಂ ಕೃತಾಂತನ ರೂಪವು ಹೇಗೋ ಹಾಗೆ ನೋಡಿದವರಿಗೆ ಭಯವನ್ನುಂಟುಮಾಡುವಂಥಾಯಿತು.
02064016a ಯುಧಿಷ್ಠಿರಸ್ತಮಾವಾರ್ಯ ಬಾಹುನಾ ಬಾಹುಶಾಲಿನಂ|
02064016c ಮೈವಮಿತ್ಯಬ್ರವೀಚ್ಚೈನಂ ಜೋಷಮಾಸ್ಸ್ವೇತಿ ಭಾರತ||
ಯುಧಿಷ್ಠಿರನು ಆ ಬಾಹುಬಲಶಾಲಿಯ ಬಾಹುಗಳನ್ನು ಹಿಡಿದು “ಭಾರತ! ಬೇಡ! ಸುಮ್ಮನಿರು!” ಎಂದು ಕೂರಿಸಿದನು.
02064017a ನಿವಾರ್ಯ ತಂ ಮಹಾಬಾಹುಂ ಕೋಪಸಂರಕ್ತಲೋಚನಂ|
02064017c ಪಿತರಂ ಸಮುಪಾತಿಷ್ಠದ್ಧೃತರಾಷ್ಟ್ರಂ ಕೃತಾಂಜಲಿಃ||
ಆ ಕೋಪಸಂರಕ್ತಲೋಚನ ಮಹಾಬಾಹುವನ್ನು ತಡೆಹಿಡಿದ ಯುಧಿಷ್ಠಿರನು ಅಂಜಲೀ ಬದ್ಧನಾಗಿ ತನ್ನ ಪಿತ ಧೃತರಾಷ್ಟ್ರನ ಸಮುಪಸ್ಥಿತಿಯಲ್ಲಿ ಬಂದನು.
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ಭೀಮಕ್ರೋಧೇ ಚತುಷ್ಷಷ್ಟಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ಭೀಮಕ್ರೋಧ ಎನ್ನುವ ಅರವತ್ನಾಲ್ಕನೆಯ ಅಧ್ಯಾಯವು.
[1]ಇದೇ ಅರ್ಥವನ್ನುಳ್ಳ ಸಲಹೆಯನ್ನು ಧೃತರಾಷ್ಟ್ರನು ಯುಧಿಷ್ಠಿರನಿಗೆ ನೀಡುತ್ತಾನೆ (ಮುಂದಿನ ಅಧ್ಯಾಯ).