Sabha Parva: Chapter 6

ಸಭಾಪರ್ವ: ಸಭಾಕ್ರಿಯಾ ಪರ್ವ

ಲೋಕಪಾಲಕರ ಸಭೆಗಳ ವರ್ಣನೆ

ಮಯಸಭೆಗಿಂತಲೂ ಉತ್ತಮವಾದ ಸಭೆಯಾವುದನ್ನಾದರೂ ನೋಡಿದ್ದೀರಾ ಎಂದು ಯುಧಿಷ್ಠಿರನು ಕೇಳಲು ನಾರದನು ಲೋಕಪಾಲರ ಸಭೆಗಳನ್ನು ವರ್ಣಿಸಿದುದು (೧-೧೮).

02006001 ವೈಶಂಪಾಯನ ಉವಾಚ|

02006001a ಸಂಪೂಜ್ಯಾಥಾಭ್ಯನುಜ್ಞಾತೋ ಮಹರ್ಷೇರ್ವಚನಾತ್ಪರಂ|

02006001c ಪ್ರತ್ಯುವಾಚಾನುಪೂರ್ವ್ಯೇಣ ಧರ್ಮರಾಜೋ ಯುಧಿಷ್ಠಿರಃ||

ವೈಶಂಪಾಯನನು ಹೇಳಿದನು: “ಮಹರ್ಷಿಯ ವಚನಗಳಿಂದ ಪರಮಸಂತುಷ್ಟನಾದ ಧರ್ಮರಾಜ ಯುಧಿಷ್ಠಿರನು ಅವನನ್ನು ಪೂಜಿಸಿ, ಅನುಜ್ಞೆಯನ್ನು ಪಡೆದು ಈ ಮಾತುಗಳನ್ನಾಡಿದನು:

02006002a ಭಗವನ್ನ್ಯಾಯ್ಯಮಾಹೈತಂ ಯಥಾವದ್ಧರ್ಮನಿಶ್ಚಯಂ|

02006002c ಯಥಾಶಕ್ತಿ ಯಥಾನ್ಯಾಯಂ ಕ್ರಿಯತೇಽಯಂ ವಿಧಿರ್ಮಯಾ||

“ಭಗವನ್! ನೀವು ಹೇಳಿದ ಧರ್ಮನಿಶ್ಚಯವೂ ಅನುಸರಣೀಯವೂ ಆದುದನ್ನು ಯಥಾಶಕ್ತಿಯಾಗಿ, ಯಥಾನ್ಯಾಯವಾಗಿ ಮತ್ತು ವಿಧಿವತ್ತಾಗಿ ಮಾಡುತ್ತೇನೆ.

02006003a ರಾಜಭಿಯದ್ಯಥಾ ಕಾರ್ಯಂ ಪುರಾ ತತ್ತನ್ನ ಸಂಶಯಃ|

02006003c ಯಥಾನ್ಯಾಯೋಪನೀತಾರ್ಥಂ ಕೃತಂ ಹೇತುಮದರ್ಥವತ್||

ಹಿಂದಿನ ರಾಜರು ಇವೆಲ್ಲವನ್ನೂ ಯಥಾನ್ಯಾಯವಾಗಿ ಅರ್ಥವತ್ತಾಗಿ ವಿಚಾರಿಸಿ ಆಚರಿಸಿ ಫಲಗಳನ್ನು ಪಡೆದರು.

02006004a ವಯಂ ತು ಸತ್ಪಥಂ ತೇಷಾಂ ಯಾತುಮಿಚ್ಛಾಮಹೇ ಪ್ರಭೋ|

02006004c ನ ತು ಶಕ್ಯಂ ತಥಾ ಗಂತುಂ ಯಥಾ ತೈರ್ನಿಯತಾತ್ಮಭಿಃ||

ಪ್ರಭೋ! ನಾವೂ ಕೂಡ ನಿನ್ನ ಈ ಸತ್ಪಥದಲ್ಲಿ ನಡೆಯಲು ಇಚ್ಛಿಸುತ್ತೇವೆ. ಆದರೆ ನಿಯತಾತ್ಮರಾದ ಹಿಂದಿನವರು ನಡೆದುಕೊಂಡಂತೆ ನಡೆದುಕೊಳ್ಳಲು ಶಕ್ಯವಿಲ್ಲದಿರಬಹುದು.”

02006005a ಏವಮುಕ್ತ್ವಾ ಸ ಧರ್ಮಾತ್ಮಾ ವಾಕ್ಯಂ ತದಭಿಪೂಜ್ಯ ಚ|

02006005c ಮುಹೂರ್ತಾತ್ಪ್ರಾಪ್ತಕಾಲಂ ಚ ದೃಷ್ಟ್ವಾ ಲೋಕಚರಂ ಮುನಿಂ||

02006006a ನಾರದಂ ಸ್ವಸ್ಥಮಾಸೀನಮುಪಾಸೀನೋ ಯುಧಿಷ್ಠಿರಃ|

02006006c ಅಪೃಚ್ಛತ್ಪಾಂಡವಸ್ತತ್ರ ರಾಜಮಧ್ಯೇ ಮಹಾಮತಿಃ||

ಹೀಗೆ ಮಾತನಾಡಿದ ಆ ಧರ್ಮಾತ್ಮ ಮಹಾಮತಿ ಪಾಂಡವ ಯುಧಿಷ್ಠಿರನು ಅವನನ್ನು ಪೂಜಿಸಿ, ಒಂದು ಕ್ಷಣ ಕಾದು, ಸಮಯ ಪ್ರಾಪ್ತಿಯಾದಾಗ, ಆ ಲೋಕಚರ ಮುನಿ ನಾರದನು ತನ್ನ ಆಸನದಲ್ಲಿ ಕುಳಿತುಕೊಂಡಿದ್ದುದನ್ನು ನೋಡಿ, ರಾಜರ ಮಧ್ಯದಲ್ಲಿ ಕೇಳಿದನು:

02006007a ಭವಾನ್ಸಂಚರತೇ ಲೋಕಾನ್ಸದಾ ನಾನಾವಿಧಾನ್ಬಹೂನ್|

02006007c ಬ್ರಹ್ಮಣಾ ನಿರ್ಮಿತಾನ್ಪೂರ್ವಂ ಪ್ರೇಕ್ಷಮಾಣೋ ಮನೋಜವಃ||

“ಮನೋವೇಗದಲ್ಲಿ ಪ್ರಯಾಣಿಸಬಲ್ಲ ನೀನು ಸದಾ ಪೂರ್ವದಲ್ಲಿ ಬ್ರಹ್ಮನು ನಿರ್ಮಿಸಿದ ಪ್ರೇಕ್ಷಣೀಯ ನಾನಾ ವಿಧದ ಬಹಳಷ್ಟು ಲೋಕಗಳನ್ನು ಸಂಚರಿಸುತ್ತಿರುತ್ತೀಯೆ.

02006008a ಈದೃಶೀ ಭವತಾ ಕಾ ಚಿದ್ದೃಷ್ಟಪೂರ್ವಾ ಸಭಾ ಕ್ವ ಚಿತ್|

02006008c ಇತೋ ವಾ ಶ್ರೇಯಸೀ ಬ್ರಹ್ಮಂಸ್ತನ್ಮಮಾಚಕ್ಷ್ವ ಪೃಚ್ಛತಃ||

ಬ್ರಹ್ಮನ್! ಈ ರೀತಿಯ ಅಥವಾ ಇದಕ್ಕಿಂತಲೂ ಉತ್ತಮ ಸಭಾಭವನವನ್ನು ನೀನು ಇದಕ್ಕೂ ಮೊದಲು ಎಲ್ಲಿಯಾದರೂ ನೋಡಿದ್ದೆಯಾ? ನನ್ನ ಈ ಪ್ರಶ್ನೆಗೆ ಉತ್ತರಿಸು!”

02006009a ತಚ್ಛೃತ್ವಾ ನಾರದಸ್ತಸ್ಯ ಧರ್ಮರಾಜಸ್ಯ ಭಾಷಿತಂ|

02006009c ಪಾಂಡವಂ ಪ್ರತ್ಯುವಾಚೇದಂ ಸ್ಮಯನ್ಮಧುರಯಾ ಗಿರಾ||

ಧರ್ಮರಾಜನಾಡಿದ ಮಾತುಗಳನ್ನು ಕೇಳಿ ನಾರದನು ಮುಗುಳ್ನಗುತ್ತಾ ಪಾಂಡವನಿಗೆ ಮಧುರ ವಾಣಿಯಲ್ಲಿ ಉತ್ತರಿಸಿದನು:

02006010a ಮಾನುಷೇಷು ನ ಮೇ ತಾತ ದೃಷ್ಟಪೂರ್ವಾ ನ ಚ ಶ್ರುತಾ|

02006010c ಸಭಾ ಮಣಿಮಯೀ ರಾಜನ್ಯಥೇಯಂ ತವ ಭಾರತ||

“ರಾಜನ್! ಭಾರತ! ಮಗೂ! ಮನುಷ್ಯರಲ್ಲಿ ಇದರಂಥಹ ಮಣಿಮಯ ಸಭೆಯನ್ನು ಇದಕ್ಕೂ ಮೊದಲು ನೋಡಿರಲಿಲ್ಲ ಕೇಳಿರಲಿಲ್ಲ.

02006011a ಸಭಾಂ ತು ಪಿತೃರಾಜಸ್ಯ ವರುಣಸ್ಯ ಚ ಧೀಮತಃ|

02006011c ಕಥಯಿಷ್ಯೇ ತಥೇಂದ್ರಸ್ಯ ಕೈಲಾಸನಿಲಯಸ್ಯ ಚ||

02006012a ಬ್ರಹ್ಮಣಶ್ಚ ಸಭಾಂ ದಿವ್ಯಾಂ ಕಥಯಿಷ್ಯೇ ಗತಕ್ಲಮಾಂ|

02006012c ಯದಿ ತೇ ಶ್ರವಣೇ ಬುದ್ಧಿರ್ವರ್ತತೇ ಭರತರ್ಷಭ||

ಭರತರ್ಷಭ! ಆದರೆ ನಿನಗೆ ಕೇಳಲು ಮನಸ್ಸಿದ್ದರೆ ನಾನು ಪಿತೃರಾಜ ಯಮನ, ಧೀಮತ ವರುಣನ, ಇಂದ್ರನ, ಕೈಲಾಸನಿಲಯ ಕುಬೇರನ, ಮತ್ತು ಬ್ರಹ್ಮನ ದಿವ್ಯ ದುಃಖವನ್ನು ಹೋಗಲಾಡಿಸುವ ಸಭೆಗಳ ಕುರಿತು ಹೇಳುತ್ತೇನೆ.”

02006013a ನಾರದೇನೈವಮುಕ್ತಸ್ತು ಧರ್ಮರಾಜೋ ಯುಧಿಷ್ಠಿರಃ|

02006013c ಪ್ರಾಂಜಲಿರ್ಭ್ರಾತೃಭಿಃ ಸಾರ್ಧಂ ತೈಶ್ಚ ಸರ್ವೈರ್ನೃಪೈರ್ವೃತಃ||

02006014a ನಾರದಂ ಪ್ರತ್ಯುವಾಚೇದಂ ಧರ್ಮರಾಜೋ ಮಹಾಮನಾಃ|

02006014c ಸಭಾಃ ಕಥಯ ತಾಃ ಸರ್ವಾಃ ಶ್ರೋತುಮಿಚ್ಛಾಮಹೇ ವಯಂ||

ನಾರದನ ಈ ಮಾತುಗಳನ್ನು ಕೇಳಿ ಧರ್ಮರಾಜ ಮಹಾಮನಸ್ವಿ ಯುಧಿಷ್ಠಿರನು ಸಹೋದರರೊಂದಿಗೆ ಸರ್ವ ನೃಪರ ಮಧ್ಯದಲ್ಲಿ ಅಂಜಲೀಬದ್ಧನಾಗಿ ಉತ್ತರಿಸಿದನು: “ನಾವು ಆ ಎಲ್ಲ ಸಭೆಗಳ ಕುರಿತು ಕೇಳಲು ಬಯಸುತ್ತೇವೆ. ಹೇಳಿ.

02006015a ಕಿಂದ್ರವ್ಯಾಸ್ತಾಃ ಸಭಾ ಬ್ರಹ್ಮನ್ಕಿಂವಿಸ್ತಾರಾಃ ಕಿಮಾಯತಾಃ|

02006015c ಪಿತಾಮಹಂ ಚ ಕೇ ತಸ್ಯಾಂ ಸಭಾಯಾಂ ಪರ್ಯುಪಾಸತೇ||

02006016a ವಾಸವಂ ದೇವರಾಜಂ ಚ ಯಮಂ ವೈವಸ್ವತಂ ಚ ಕೇ|

02006016c ವರುಣಂ ಚ ಕುಬೇರಂ ಚ ಸಭಾಯಾಂ ಪರ್ಯುಪಾಸತೇ||

ಬ್ರಹ್ಮನ್! ಆ ಸಭೆಗಳು ಯಾವ ದ್ರವ್ಯದಿಂದ ಮಾಡಲ್ಪಟ್ಟಿವೆ? ಅವುಗಳ ವಿಸ್ತಾರ ಮತ್ತು ಅಳತೆ ಏನು? ಅವನ ಸಭೆಯಲ್ಲಿ ಪಿತಾಮಹನನ್ನು ಯಾರು ಉಪಾಸಿಸುತ್ತಾರೆ? ಹಾಗೆಯೇ ದೇವರಾಜ ವಾಸವನ, ವೈವಸ್ವತ ಯಮನ, ವರುಣನ, ಕುಬೇರನ ಸಭೆಗಳಲ್ಲಿ ಯಾರು ಯಾರು ಉಪಸ್ಥಿತರಿರುತ್ತಾರೆ?

02006017a ಏತತ್ಸರ್ವಂ ಯಥಾತತ್ತ್ವಂ ದೇವರ್ಷೇ ವದತಸ್ತವ|

02006017c ಶ್ರೋತುಮಿಚ್ಛಾಮ ಸಹಿತಾಃ ಪರಂ ಕೌತೂಹಲಂ ಹಿ ನಃ||

ದೇವರ್ಷಿ! ಇವೆಲ್ಲವನ್ನು ನೀನು ಹೇಳಿದಂತೆ ಕೇಳಲು ಬಯಸುತ್ತೇವೆ. ಇದರ ಕುತೂಹಲವು ಅತ್ಯಧಿಕವಾಗಿದೆ.”

02006018a ಏವಮುಕ್ತಃ ಪಾಂಡವೇನ ನಾರದಃ ಪ್ರತ್ಯುವಾಚ ತಂ|

02006018c ಕ್ರಮೇಣ ರಾಜನ್ದಿವ್ಯಾಸ್ತಾಃ ಶ್ರೂಯಂತಾಮಿಹ ನಃ ಸಭಾಃ||

ಪಾಂಡವನು ಈ ರೀತಿ ಹೇಳಲು ನಾರದನು ಅವನಿಗೆ ಉತ್ತರಿಸಿದನು: “ರಾಜನ್! ಒಂದೊಂದಾಗಿ ಆ ಸಭೆಗಳ ಕುರಿತು ಹೇಳುತ್ತೇನೆ. ಕೇಳು.”

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಸಭಾಕ್ರಿಯಾಪರ್ವಣಿ ಯುಧಿಷ್ಠಿರ ಸಭಾಜಿಜ್ಞಾಸಾಯಾಂ ಷಷ್ಠೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸಭಾಪರ್ವದಲ್ಲಿ ಸಭಾಕ್ರಿಯಾ ಪರ್ವದಲ್ಲಿ ಯುಧಿಷ್ಠಿರನಿಂದ ಸಭೆಗಳ ಜಿಜ್ಞಾಸೆ ಎನ್ನುವ ಆರನೆಯ ಅಧ್ಯಾಯವು.

Related image

Comments are closed.