ಸಭಾ ಪರ್ವ: ದ್ಯೂತ ಪರ್ವ
೫೭
ದುರ್ಯೋಧನನು ವಿದುರನನ್ನು ನಿಂದಿಸಿ, ಬಿಟ್ಟುಹೋಗೆಂದು ಹೇಳುವುದು (೧-೧೨). ವಿದುರನು ದುರ್ಯೋಧನನಿಗೆ ಹಿತವಚನವನ್ನಾಡಿದುದು (೧೩-೨೧).
02057001 ದುರ್ಯೋಧನ ಉವಾಚ|
02057001a ಪರೇಷಾಮೇವ ಯಶಸಾ ಶ್ಲಾಘಸೇ ತ್ವಂ
ಸದಾ ಚನ್ನಃ ಕುತ್ಸಯನ್ಧಾರ್ತರಾಷ್ಟ್ರಾನ್|
02057001c ಜಾನೀಮಸ್ತ್ವಾಂ ವಿದುರ ಯತ್ಪ್ರಿಯಸ್ತ್ವಂ
ಬಾಲಾನಿವಾಸ್ಮಾನವಮನ್ಯಸೇ ತ್ವಂ||
ದುರ್ಯೋಧನನು ಹೇಳಿದನು: “ವಿದುರ! ನೀನು ಯಾವಾಗಲೂ ಪರರ ಯಶಸ್ಸನ್ನು ಶ್ಲಾಘಿಸುತ್ತೀಯೆ ಮತ್ತು ಧಾರ್ತರಾಷ್ಟ್ರರನ್ನು ಒಳಗಿಂದೊಳಗೇ ಹೀಯಾಳಿಸುತ್ತೀಯೆ. ನಿನಗೆ ಯಾರಲ್ಲಿ ಪ್ರೀತಿಯಿದೆ ಎನ್ನುವುದನ್ನು ತಿಳಿದಿದ್ದೇವೆ. ಬಾಲಕರೆಂದು ತಿಳಿದು ನಮ್ಮನ್ನು ನೀನು ಮನ್ನಿಸುವುದಿಲ್ಲ.
02057002a ಸುವಿಜ್ಞೇಯಃ ಪುರುಷೋಽನ್ಯತ್ರಕಾಮೋ
ನಿಂದಾಪ್ರಶಂಸೇ ಹಿ ತಥಾ ಯುನಕ್ತಿ|
02057002c ಜಿಹ್ವಾ ಮನಸ್ತೇ ಹೃದಯಂ ನಿರ್ವ್ಯನಕ್ತಿ
ಜ್ಯಾಯೋ ನಿರಾಹ ಮನಸಃ ಪ್ರಾತಿಕೂಲ್ಯಂ||
ಅವನ ನಿಂದನೆ ಪ್ರಶಂಸೆಯಲ್ಲಿಯೇ ಒಬ್ಬ ಪುರುಷನ ಪ್ರೀತಿ ಯಾರಲ್ಲಿದೆ ಎನ್ನುವುದನ್ನು ಚೆನ್ನಾಗಿ ತಿಳಿಯಬಹುದು. ನಿನ್ನ ನಾಲಗೆಯು ಹೃದಯ ಮತ್ತು ಮನಸ್ಸನ್ನು ತೆರೆಯುತ್ತದೆ. ಮನಸ್ಸಿನಲ್ಲಿರುವ ದ್ವಂದ್ವಗಳನ್ನೂ ಅದು ಪ್ರಕಟಿಸುತ್ತದೆ.
02057003a ಉತ್ಸಂಗೇನ ವ್ಯಾಲ ಇವಾಹೃತೋಽಸಿ
ಮಾರ್ಜಾರವತ್ಪೋಷಕಂ ಚೋಪಹಂಸಿ|
02057003c ಭರ್ತೃಘ್ನತ್ವಾನ್ನ ಹಿ ಪಾಪೀಯ ಆಹುಸ್
ತಸ್ಮಾತ್ ಕ್ಷತ್ತಃ ಕಿಂ ನ ಬಿಭೇಷಿ ಪಾಪಾತ್||
ಅಪ್ಪಿಕೊಂಡ ಹಾವಿನಂತೆ ಇದ್ದೀಯೆ. ಪೋಷಕನನ್ನೇ ಕಾಡಿಸುವ ಬೆಕ್ಕಿನಂತಿದ್ದೀಯೆ. ಸಹೋದರನಿಗೆ ಕೇಡನ್ನು ಬಯಸುವುದು ಪಾಪವೆಂದು ಹೇಳುತ್ತಾರೆ. ಕ್ಷತ್ತ! ನಿನಗೆ ಪಾಪದ ಭಯ ಸ್ವಲ್ಪವೂ ಇಲ್ಲವೇ?
02057004a ಜಿತ್ವಾ ಶತ್ರೂನ್ಫಲಮಾಪ್ತಂ ಮಹನ್ನೋ
ಮಾಸ್ಮಾನ್ ಕ್ಷತ್ತಃ ಪರುಷಾಣೀಹ ವೋಚಃ|
02057004c ದ್ವಿಷದ್ಭಿಸ್ತ್ವಂ ಸಂಪ್ರಯೋಗಾಭಿನನ್ದೀ
ಮುಹುರ್ದ್ವೇಷಂ ಯಾಸಿ ನಃ ಸಂಪ್ರಮೋಹಾತ್||
ಶತ್ರುಗಳನ್ನು ಗೆದ್ದು ಮಹಾ ಫಲವನ್ನು ಗಳಿಸುತ್ತೇವೆ. ಕ್ಷತ್ತ! ನಮ್ಮೊಡನೆ ಇಷ್ಟೊಂದು ನಿಷ್ಟೂರವಾಗಿ ಮಾತನಾಡಬೇಡ. ನಮ್ಮ ದ್ವೇಷಿಗಳೊಂದಿಗೆ ನೀನು ಸೇರಿಕೊಂಡು ಸಂತೋಷದಿಂದಿರುವೆ ಮತ್ತು ಇನ್ನೂ ಕೆಟ್ಟದ್ದೆಂದರೆ ನಮ್ಮೊಡನೆಯೇ ದ್ವೇಷವನ್ನು ಸಾಧಿಸುತ್ತಿರುವೆ.
02057005a ಅಮಿತ್ರತಾಂ ಯಾತಿ ನರೋಽಕ್ಷಮಂ ಬ್ರುವನ್
ನಿಗೂಹತೇ ಗುಹ್ಯಮಮಿತ್ರಸಂಸ್ತವೇ|
02057005c ತದಾಶ್ರಿತಾಪತ್ರಪಾ ಕಿಂ ನ ಬಾಧತೇ
ಯದಿಚ್ಛಸಿ ತ್ವಂ ತದಿಹಾದ್ಯ ಭಾಷಸೇ||
ಅಕ್ಷಮವಾಗಿ ಮಾತನಾಡಿದವನು ಅಮಿತ್ರನಾಗುತ್ತಾನೆ ಮತ್ತು ಅಮಿತ್ರರನ್ನು ಪ್ರಶಂಸಿಸುವುದರ ಮೂಲಕ ತನ್ನ ಗುಟ್ಟನ್ನು ಅಡಗಿಸಿಟ್ಟುಕೊಳ್ಳುತ್ತಾನೆ. ನಾಚಿಕೆಯಿಂದಲಾದರೂ ಅವನ ಬಾಯಿಯು ಏಕೆ ಮುಚ್ಚುವುದಿಲ್ಲ? ನೀನು ಏನನ್ನು ಬಯಸಿದ್ದೆಯೋ ಅದನ್ನು ಇಂದು ಮಾತನಾಡುತ್ತಿದ್ದೀಯೆ.
02057006a ಮಾ ನೋಽವಮಂಸ್ಥಾ ವಿದ್ಮ ಮನಸ್ತವೇದಂ
ಶಿಕ್ಷಸ್ವ ಬುದ್ಧಿಂ ಸ್ಥವಿರಾಣಾಂ ಸಕಾಶಾತ್|
02057006c ಯಶೋ ರಕ್ಷಸ್ವ ವಿದುರ ಸಂಪ್ರಣೀತಂ
ಮಾ ವ್ಯಾಪೃತಃ ಪರಕಾರ್ಯೇಷು ಭೂಸ್ತ್ವಂ||
ನಮ್ಮನ್ನು ಅಪಮಾನಿಸಬೇಡ. ನಿನ್ನ ಮನಸ್ಸಿನಲ್ಲೇನಿದೆ ಎನ್ನುವುದನ್ನು ನಾವು ತಿಳಿದಿದ್ದೇವೆ. ವಿದುರ! ಇದೂವರೆಗೆ ಗಳಿಸಿರುವ ಗೌರವವನ್ನು ಉಳಿಸಿಕೋ. ಇನ್ನೊಬ್ಬರ ವ್ಯವಹಾರದಲ್ಲಿ ಹೆಚ್ಚು ತಲೆಹಾಕಬೇಡ.
02057007a ಅಹಂ ಕರ್ತೇತಿ ವಿದುರ ಮಾವಮಂಸ್ಥಾ
ಮಾ ನೋ ನಿತ್ಯಂ ಪರುಷಾಣೀಹ ವೋಚಃ|
02057007c ನ ತ್ವಾಂ ಪೃಚ್ಛಾಮಿ ವಿದುರ ಯದ್ಧಿತಂ ಮೇ
ಸ್ವಸ್ತಿ ಕ್ಷತ್ತರ್ಮಾ ತಿತಿಕ್ಷೂನ್ ಕ್ಷಿಣು ತ್ವಂ||
ವಿದುರ! ನಾನೇ ಮಾಡುತ್ತಿದ್ದೇನೆ ಎಂದು ನನ್ನನ್ನು ದೂರಬೇಡ. ಅಂಥಹ ಕಠೋರ ಮಾತುಗಳಿಂದ ಸದಾ ನಮ್ಮನ್ನು ಹೀಯಾಳಿಸಬೇಡ. ವಿದುರ! ನೀನು ಏನನ್ನು ಯೋಚಿಸುತ್ತಿದ್ದೀಯೆ ಎಂದು ನಾನು ಎಂದೂ ನಿನ್ನನ್ನು ಕೇಳಲಿಲ್ಲ. ಕ್ಷತ್ತ! ನಿನ್ನನ್ನು ಬೀಳ್ಕೊಡುತ್ತೇನೆ. ನಮ್ಮ ತಾಳ್ಮೆಯು ಕಡಿಮೆಯಾಗುತ್ತಿದೆ.
02057008a ಏಕಃ ಶಾಸ್ತಾ ನ ದ್ವಿತೀಯೋಽಸ್ತಿ ಶಾಸ್ತಾ
ಗರ್ಭೇ ಶಯಾನಂ ಪುರುಷಂ ಶಾಸ್ತಿ ಶಾಸ್ತಾ|
02057008c ತೇನಾನುಶಿಷ್ಟಃ ಪ್ರವಣಾದಿವಾಂಭೋ
ಯಥಾ ನಿಯುಕ್ತೋಽಸ್ಮಿ ತಥಾ ವಹಾಮಿ||
ಗುರುವು ಒಬ್ಬನೇ. ಎರಡನೆಯ ಗುರುವೇ ಇಲ್ಲ. ಆ ಗುರುವು ಗರ್ಭದಲ್ಲಿ ಮಲಗಿರುವ ಪುರುಷನಿಗೆ ಹೇಳಿಕೊಡುತ್ತಾನೆ. ಅವನ ಹೇಳಿಕೆಯಂತೆಯೇ, ನೀರು ಹೇಗೆ ಹರಿಯುತ್ತದೆಯೋ ಹಾಗೆ, ನಾನೂ ಕೂಡ ಹರಿಯುತ್ತೇನೆ.
02057009a ಭಿನತ್ತಿ ಶಿರಸಾ ಶೈಲಮಹಿಂ ಭೋಜಯತೇ ಚ ಯಃ|
02057009c ಸ ಏವ ತಸ್ಯ ಕುರುತೇ ಕಾರ್ಯಾಣಾಮನುಶಾಸನಂ||
ತಲೆಯಿಂದ ಕಲ್ಲನ್ನು ತುಂಡುಮಾಡುವವನಾಗಲೀ, ಅಥವಾ ಹಾವಿಗೆ ತಿನ್ನಿಸುವವನಾಗಲೀ ಏನು ಮಾಡಬೇಕೆಂದು ಅವನ ಅನುಶಾಸನವಿರುತ್ತದೆಯೋ ಅದರಂತೆಯೇ ಮಾಡುತ್ತಾನೆ.
02057010a ಯೋ ಬಲಾದನುಶಾಸ್ತೀಹ ಸೋಽಮಿತ್ರಂ ತೇನ ವಿನ್ದತಿ|
02057010c ಮಿತ್ರತಾಮನುವೃತ್ತಂ ತು ಸಮುಪೇಕ್ಷೇತ ಪಂಡಿತಃ||
ಯಾರು ಬಲವಂತವಾಗಿ ಆಜ್ಞೆಯನ್ನು ನೀಡುತ್ತಾನೋ ಅವನನ್ನು ಅಮಿತ್ರನೆಂದು ತಿಳಿಯುತ್ತಾರೆ. ಪಂಡಿತನು ಮಿತ್ರನಂತೆ ವರ್ತಿಸುವವನ ಸಾಂಗತ್ಯವನ್ನು ಬಯಸುತ್ತಾನೆ.
02057011a ಪ್ರದೀಪ್ಯ ಯಃ ಪ್ರದೀಪ್ತಾಗ್ನಿಂ ಪ್ರಾಕ್ತ್ವರನ್ನಾಭಿಧಾವತಿ|
02057011c ಭಸ್ಮಾಪಿ ನ ಸ ವಿನ್ದೇತ ಶಿಷ್ಟಂ ಕ್ವ ಚನ ಭಾರತ||
ಭಾರತ! ಉರಿಯುತ್ತಿರುವ ಬೆಂಕಿಯನ್ನು ಹಚ್ಚಿದವನು ಮೊದಲೇ ಓಡಿ ಹೋಗದಿದ್ದರೆ ಉಳಿದಿರುವ ಭಸ್ಮವೂ ಅವನಿಗೆ ಕಾಣಲಿಕ್ಕೆ ಸಿಗುವುದಿಲ್ಲ.
02057012a ನ ವಾಸಯೇತ್ಪಾರವರ್ಗ್ಯಂ ದ್ವಿಷಂತಂ
ವಿಶೇಷತಃ ಕ್ಷತ್ತರಹಿತಂ ಮನುಷ್ಯಂ|
02057012c ಸ ಯತ್ರೇಚ್ಛಸಿ ವಿದುರ ತತ್ರ ಗಚ್ಛ
ಸುಸಾಂತ್ವಿತಾಪಿ ಹ್ಯಸತೀ ಸ್ತ್ರೀ ಜಹಾತಿ||
ಕ್ಷತ್ತ! ದ್ವೇಷಿಸುವ ಶತ್ರುವಿನ ವರ್ಗದವನನ್ನು, ಅದರಲ್ಲೂ ವಿಶೇಷವಾಗಿ ಕೆಟ್ಟದ್ದನ್ನು ಬಯಸುವ ಮನುಷ್ಯನನ್ನು ಎಂದೂ ಇಟ್ಟುಕೊಳ್ಳಬಾರದು. ವಿದುರ! ನಿನಗಿಷ್ಟವಿದ್ದ ಕಡೆ ಹೋಗು. ಯಾಕೆಂದರೆ ಕೆಟ್ಟ ಹೆಂಡತಿಯು ಎಷ್ಟು ಒತ್ತಾಯಮಾಡಿದರೂ ಬಿಟ್ಟೇ ಹೋಗುತ್ತಾಳೆ.”
02057013 ವಿದುರ ಉವಾಚ|
02057013a ಏತಾವತಾ ಯೇ ಪುರುಷಂ ತ್ಯಜಂತಿ
ತೇಷಾಂ ಸಖ್ಯಮಂತವದ್ಬ್ರೂಹಿ ರಾಜನ್|
02057013c ರಾಜ್ಞಾಂ ಹಿ ಚಿತ್ತಾನಿ ಪರಿಪ್ಲುತಾನಿ
ಸಾಂತ್ವಂ ದತ್ತ್ವಾ ಮುಸಲೈರ್ಘಾತಯಂತಿ||
ವಿದುರನು ಹೇಳಿದನು: “ಇಷ್ಟು ಮಾತ್ರಕ್ಕೆ ಯಾರನ್ನು ತ್ಯಜಿಸುತ್ತಾರೋ ಅವರ ಸಖ್ಯವು ಅಂತ್ಯವಾಯಿತೆಂದು ಇವನಿಗೆ ಹೇಳು ರಾಜನ್! ರಾಜರ ಬುದ್ಧಿಯು ತಿರುಗುತ್ತಿರುತ್ತದೆ. ಸಂತವಿಸುತ್ತಾ ಮುಸಲದಿಂದ ಹೊಡೆಯುತ್ತಾರೆ.
02057014a ಅಬಾಲಸ್ತ್ವಂ ಮನ್ಯಸೇ ರಾಜಪುತ್ರ
ಬಾಲೋಽಹಮಿತ್ಯೇವ ಸುಮಂದಬುದ್ಧೇ|
02057014c ಯಃ ಸೌಹೃದೇ ಪುರುಷಂ ಸ್ಥಾಪಯಿತ್ವಾ
ಪಶ್ಚಾದೇನಂ ದೂಷಯತೇ ಸ ಬಾಲಃ||
ರಾಜಪುತ್ರ! ನೀನು ಇನ್ನೂ ಬಾಲಕನೆಂದು ತಿಳಿದಿದ್ದೀಯೆ. ಬಾಲಕನಾದ ನೀನು ನಾನೊಬ್ಬ ಮಂದಬುದ್ಧಿಯೆಂದು ತಿಳಿದಿದ್ದೀಯೆ. ಮೊದಲು ಒಬ್ಬನನ್ನು ಸ್ನೇಹಿತನನ್ನಾಗಿ ಮಾಡಿಕೊಂಡು ನಂತರ ಅವನನ್ನೇ ದೂಷಿಸುವವನು ಬಾಲಕನೇ ಸರಿ.
02057015a ನ ಶ್ರೇಯಸೇ ನೀಯತೇ ಮನ್ದಬುದ್ಧಿಃ
ಸ್ತ್ರೀ ಶ್ರೋತ್ರಿಯಸ್ಯೇವ ಗೃಹೇ ಪ್ರದುಷ್ಟಾ|
02057015c ಧ್ರುವಂ ನ ರೋಚೇದ್ಭರತರ್ಷಭಸ್ಯ
ಪತಿಃ ಕುಮಾರ್ಯಾ ಇವ ಷಷ್ಟಿವರ್ಷಃ||
ಶ್ರೋತ್ರಿಯ ಮನೆಯಲ್ಲಿ ದುಷ್ಟ ಸ್ತ್ರೀಯಿದ್ದರೆ ಹೇಗೋ ಹಾಗೆ ಮಂದಬುದ್ಧಿಯು ಯಾವ ಶ್ರೇಯಸ್ಸಿನೆಡೆಯೂ ಕೊಂಡೊಯ್ಯುವುದಿಲ್ಲ. ಆದರೆ ಅರುವತ್ತು ವರ್ಷದ ಪತಿಯು ಕುಮಾರಿಯೋರ್ವಳಿಗೆ ಹೇಗೋ ಹಾಗೆ ಇದು ಈ ಭರತರ್ಷಭನಿಗೆ ಇಷ್ಟವಾಗುವುದಿಲ್ಲ.
02057016a ಅನುಪ್ರಿಯಂ ಚೇದನುಕಾಂಕ್ಷಸೇ ತ್ವಂ
ಸರ್ವೇಷು ಕಾರ್ಯೇಷು ಹಿತಾಹಿತೇಷು|
02057016c ಸ್ತ್ರಿಯಶ್ಚ ರಾಜಂ ಜಡಪಂಗುಕಾಂಶ್ಚ
ಪೃಚ್ಛ ತ್ವಂ ವೈ ತಾದೃಶಾಂಶ್ಚೈವ ಮೂಢಾನ್||
ರಾಜನ್! ನೀನು ಮಾಡುವ ಎಲ್ಲ ಕಾರ್ಯಗಳ, ಅವು ಎಷ್ಟೇ ಹಿತವಾಗಿರಲಿ ಅಥವಾ ಅಹಿತವಾಗಿರಲಿ, ಪ್ರಿಯವಾದುದನ್ನು ಮಾತ್ರ ಕೇಳಲು ಬಯಸುತ್ತೀಯಾದರೆ ಸ್ತ್ರೀಯರಲ್ಲಿ, ಜಡರಲ್ಲಿ, ಪಂಗುಕರಲ್ಲಿ ಅಥವಾ ಅವರಂತೆ ಮೂಢರಾಗಿರುವವರಲ್ಲಿ ಹೋಗಿ ಕೇಳು.
02057017a ಲಭ್ಯಃ ಖಲು ಪ್ರಾತಿಪೀಯ ನರೋಽನುಪ್ರಿಯವಾಗಿಹ|
02057017c ಅಪ್ರಿಯಸ್ಯ ತು ಪಥ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭಃ||
ಪ್ರಾತಿಪೀಯ! ನಿನಗೆ ಇಲ್ಲಿ ಅನುಪ್ರಿಯವಾಗಿ ಮಾತನಾಡುವ ಜನರು ಖಂಡಿತವಾಗಿಯೂ ದೊರೆಯುತ್ತಾರೆ. ಆದರೆ ಅಪ್ರಿಯವಾಗಿದ್ದರೂ ಒಳ್ಳೆಯ ಸಲಹೆಯನ್ನು ನೀಡುವವರು ದುರ್ಲಭ ಎಂದು ತಿಳಿದವರು ಹೇಳುತ್ತಾರೆ.
02057018a ಯಸ್ತು ಧರ್ಮೇ ಪರಾಶ್ವಸ್ಯ ಹಿತ್ವಾ ಭರ್ತುಃ ಪ್ರಿಯಾಪ್ರಿಯೇ|
02057018c ಅಪ್ರಿಯಾಣ್ಯಾಹ ಪಥ್ಯಾನಿ ತೇನ ರಾಜಾ ಸಹಾಯವಾನ್||
ಒಡೆಯನಿಗೆ ಯಾವುದು ಇಷ್ಟ ಯಾವುದು ಇಷ್ಟವಿಲ್ಲ ಎನ್ನುವುದನ್ನು ಮರೆತು ತಾನು ಧರ್ಮದಲ್ಲಿದ್ದುಕೊಂಡು ಅಪ್ರಿಯವಾದರೂ ಉತ್ತಮ ಸಲಹೆಗಳನ್ನು ನೀಡುವವನಲ್ಲಿಯೇ ರಾಜನು ಸಹಾಯಕನನ್ನು ಕಾಣುತ್ತಾನೆ.
02057019a ಅವ್ಯಾಧಿಜಂ ಕಟುಕಂ ತೀಕ್ಷ್ಣಮುಷ್ಣಂ
ಯಶೋಮುಷಂ ಪರುಷಂ ಪೂತಿಗಂಧಿ|
02057019c ಸತಾಂ ಪೇಯಂ ಯನ್ನ ಪಿಬಂತ್ಯಸಂತೋ
ಮನ್ಯುಂ ಮಹಾರಾಜ ಪಿಬ ಪ್ರಶಾಮ್ಯ||
ಆರೋಗ್ಯದಿಂದಿರಲು ಕಟುಕಾದ, ತೀಕ್ಷ್ಣವಾದ, ಸುಡುತ್ತಿರುವ, ಕೆಟ್ಟವಾಸನೆಯ ದ್ರವವನ್ನು ಸಾತ್ವಿಕರು ಕುಡಿಯುತ್ತಾರೆ. ಆದರೆ ಕೆಟ್ಟವರು ಅದನ್ನೇ ನಿರಾಕರಿಸುತ್ತಾರೆ. ಮಹಾರಾಜ! ಇದನ್ನು ಕುಡಿದು ನಿನ್ನ ಸಿಟ್ಟನ್ನು ಶಾಂತಗೊಳಿಸು.
02057020a ವೈಚಿತ್ರವೀರ್ಯಸ್ಯ ಯಶೋ ಧನಂ ಚ
ವಾಂಚಾಮ್ಯಹಂ ಸಹಪುತ್ರಸ್ಯ ಶಶ್ವತ್|
02057020c ಯಥಾ ತಥಾ ವೋಽಸ್ತು ನಮಶ್ಚ ವೋಽಸ್ತು
ಮಮಾಪಿ ಚ ಸ್ವಸ್ತಿ ದಿಶಂತು ವಿಪ್ರಾಃ||
ವೈಚಿತ್ರವೀರ್ಯನಿಗೆ ಮತ್ತು ಅವನ ಮಗನಿಗೆ ಶಾಶ್ವತ ಯಶಸ್ಸು ಮತ್ತು ಸಂಪತ್ತನ್ನು ಬಯಸುತ್ತೇನೆ. ಇದು ಹೀಗಿರುವಾಗ ನಾನು ನಿನಗೆ ನಮಸ್ಕರಿಸಿ ಬೀಳ್ಕೊಳ್ಳುತ್ತೇನೆ. ನನಗೂ ಕೂಡ ವಿಪ್ರರು ಅವರ ಅಶೀರ್ವಾದಗಳನ್ನು ನೀಡಲಿ.
02057021a ಆಶೀವಿಷಾನ್ನೇತ್ರವಿಷಾನ್ಕೋಪಯೇನ್ನ ತು ಪಂಡಿತಃ|
02057021c ಏವಂ ತೇಽಹಂ ವದಾಮೀದಂ ಪ್ರಯತಃ ಕುರುನಂದನ||
ಕಣ್ಣಿನಲ್ಲಿ ವಿಷಕಾರುವ ಹಾವುಗಳನ್ನು ಸಿಟ್ಟಿಗೆಬ್ಬಿಸಬಾರದು ಎಂದು ಪಂಡಿತರು ಹೇಳುತ್ತಾರೆ. ಕುರುನಂದನ! ಅದನ್ನೇ ನಾನು ನಿನಗೆ ಹೇಳಲು ಪ್ರಯತ್ನಿಸಿದೆ.”
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ವಿದುರಹಿತವಾಕ್ಯೇ ಸಪ್ತಪಂಚಶತ್ತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ವಿದುರಹಿತವಾಕ್ಯ ಎನ್ನುವ ಐವತ್ತೇಳನೆಯ ಅಧ್ಯಾಯವು.