Sabha Parva: Chapter 56

ಸಭಾ ಪರ್ವ: ದ್ಯೂತ ಪರ್ವ

೫೬

ವಿದುರನು ದ್ಯೂತವನ್ನು ನಿಲ್ಲಿಸುವಂತೆ ಧೃತರಾಷ್ಟ್ರನಲ್ಲಿ ಕೇಳಿಕೊಂಡಿದುದು (೧-೧೦).

02056001 ವಿದುರ ಉವಾಚ|

02056001a ದ್ಯೂತಂ ಮೂಲಂ ಕಲಹಸ್ಯಾನುಪಾತಿ

         ಮಿಥೋಭೇದಾಯ ಮಹತೇ ವಾ ರಣಾಯ|

02056001c ಯದಾಸ್ಥಿತೋಽಯಂ ಧೃತರಾಷ್ಟ್ರಸ್ಯ ಪುತ್ರೋ

         ದುರ್ಯೋಧನಃ ಸೃಜತೇ ವೈರಮುಗ್ರಂ||

ವಿದುರನು ಹೇಳಿದನು: “ಎಲ್ಲ ಕಲಹಗಳಿಗೆ, ಸುಳ್ಳು ಬೇಧಗಳಿಗೆ ಮತ್ತು ಮಹಾ ಯುದ್ಧಕ್ಕೆ ದ್ಯೂತವೇ ಕಾರಣವಾಗುತ್ತದೆ. ಇದಕ್ಕೆ ತೊಡಗಿರುವ ಧೃತರಾಷ್ಟ್ರ ಪುತ್ರ ದುರ್ಯೋಧನನು ಉಗ್ರ ವೈರತ್ವವನ್ನು ಸೃಷ್ಠಿಸುತ್ತಿದ್ದಾನೆ.

02056002a ಪ್ರಾತಿಪೀಯಾಃ ಶಾಂತನವಾ ಭೈಮಸೇನಾಃ ಸಬಾಹ್ಲಿಕಾಃ|

02056002c ದುರ್ಯೋಧನಾಪರಾಧೇನ ಕೃಚ್ಛ್ರಂ ಪ್ರಾಪ್ಸ್ಯಂತಿ ಸರ್ವಶಃ||

ದುರ್ಯೋಧನನ ಅಪರಾಧದಿಂದ ಪ್ರತೀಪನ ಕುಲದವರು, ಶಾಂತನವರು, ಭೀಮಸೇನನ ಕುಲದವರು, ಮತ್ತು ಬಾಹ್ಲೀಕರು ಎಲ್ಲರೂ ಶೋಕವನ್ನು ಹೊಂದುತ್ತಾರೆ.

02056003a ದುರ್ಯೋಧನೋ ಮದೇನೈವ ಕ್ಷೇಮಂ ರಾಷ್ಟ್ರಾದಪೋಹತಿ|

02056003c ವಿಷಾಣಂ ಗೌರಿವ ಮದಾತ್ಸ್ವಯಮಾರುಜತೇ ಬಲಾತ್||

ಬರಿಯ ಮದದಿಂದ ದುರ್ಯೋಧನನು ಮದದಲ್ಲಿರುವ ಹೋರಿಯು ಹೇಗೆ ತನ್ನ ಕೋಡನ್ನೇ ತೀವಿ ತುಂಡುಮಾಡಿಕೊಳ್ಳುತ್ತದೆಯೋ ಹಾಗೆ ಇಡೀ ರಾಷ್ಟ್ರದ ಸುರಕ್ಷತೆಯನ್ನು ಅಪಹರಿಸಿದ್ದಾನೆ.

02056004a ಯಶ್ಚಿತ್ತಮನ್ವೇತಿ ಪರಸ್ಯ ರಾಜನ್

         ವೀರಃ ಕವಿಃ ಸ್ವಾಮತಿಪತ್ಯ ದೃಷ್ಟಿಂ|

02056004c ನಾವಂ ಸಮುದ್ರ ಇವ ಬಾಲನೇತ್ರಾಂ

         ಆರುಹ್ಯ ಘೋರೇ ವ್ಯಸನೇ ನಿಮಜ್ಜೇತ್||

ರಾಜನ್! ವೀರನಾಗಿರಲಿ ಕವಿಯಾಗಿರಲಿ ಯಾರು ತನ್ನ ದೃಷ್ಟಿಕೋಣವನ್ನು ಬಿಟ್ಟು ಇನ್ನೊಬ್ಬರ ಮನಸ್ಸಿನಂತೆ ನಡೆದುಕೊಳ್ಳುತ್ತಾನೋ ಅವನು ಬಾಲಕನಿಂದ ನಡೆಸಲ್ಪಡುವ ದೋಣಿಯನ್ನು ಏರಿ ಸಮುದ್ರವನ್ನು ದಾಟಲು ಹೋಗಿ ಘೋರವಾದ ವ್ಯಸನದಲ್ಲಿ ಮುಳುಗುತ್ತಾನೆ.

02056005a ದುರ್ಯೋಧನೋ ಗ್ಲಹತೇ ಪಾಂಡವೇನ

         ಪ್ರಿಯಾಯಸೇ ತ್ವಂ ಜಯತೀತಿ ತಚ್ಚ|

02056005c ಅತಿನರ್ಮಾಜ್ಜಾಯತೇ ಸಂಪ್ರಹಾರೋ

         ಯತೋ ವಿನಾಶಃ ಸಮುಪೈತಿ ಪುಂಸಾಂ||

ದುರ್ಯೋಧನನು ಪಾಂಡವರೊಂದಿಗೆ ಆಡುತ್ತಿದ್ದಾನೆ, ಮತ್ತು ಅವನು ಗೆಲ್ಲುತ್ತಿದ್ದಾನೆ ಎಂದು ನೀನು ಸಂತೋಷಪಡುತ್ತಿದ್ದೀಯೆ. ಈ ಒಂದು ಆಟದಿಂದ ಯುದ್ಧವು ಹುಟ್ಟುತ್ತದೆ, ಮತ್ತು ಅದರಿಂದ ಎಲ್ಲರ ವಿನಾಶವು ಉಂಟಾಗುತ್ತದೆ.

02056006a ಆಕರ್ಷಸ್ತೇಽವಾಕ್ಫಲಃ ಕುಪ್ರಣೀತೋ

         ಹೃದಿ ಪ್ರೌಢೋ ಮಂತ್ರಪದಃ ಸಮಾಧಿಃ|

02056006c ಯುಧಿಷ್ಠಿರೇಣ ಸಫಲಃ ಸಂಸ್ತವೋಽಸ್ತು

         ಸಾಮ್ನಃ ಸುರಿಕ್ತೋಽರಿಮತೇಃ ಸುಧನ್ವಾ||

ಈ ಕುಪ್ರಣೀತ ಆಟವು ಇದನ್ನು ಆಯೋಜಿಸಿದ ಪ್ರೌಢನ ಹೃದಯದ ಅಂತರಾಳದಲ್ಲಿ ಅಧೋಗತಿಯಲ್ಲಿರುವ ಫಲವನ್ನು ಆಕರ್ಷಿಸುತ್ತದೆ. ಯುಧಿಷ್ಠಿರನೊಂದಿಗೆ ಇದು ಸಫಲವಾದರೆ ಸುಧನ್ವಿಯಲ್ಲಿ ವೈರತ್ವವನ್ನು ಉಂಟುಮಾಡುತ್ತದೆ.

02056007a ಪ್ರಾತಿಪೀಯಾಃ ಶಾಂತನವಾಶ್ಚ ರಾಜನ್

         ಕಾವ್ಯಾಂ ವಾಚಂ ಶೃಣುತ ಮಾತ್ಯಗಾದ್ವಃ|

02056007c ವೈಶ್ವಾನರಂ ಪ್ರಜ್ವಲಿತಂ ಸುಘೋರಂ

         ಅಯುದ್ಧೇನ ಪ್ರಶಮಯತೋತ್ಪತಂತಂ||

ರಾಜನ್! ಪ್ರತೀಪನ ಮತ್ತು ಶಾಂತನವನ ಕುಲದವರೇ! ಕಾವ್ಯನ ಮಾತುಗಳನ್ನು ಕೇಳಿ. ಕಿಚ್ಚೇಳುತ್ತಿರುವ ಈ ಕೆಟ್ಟ ಬೆಂಕಿಯು ನಿಮ್ಮನ್ನು ಆವರಿಸದಿರಲಿ. ಯುದ್ಧದ ಮೊದಲೇ ಇದನ್ನು ಶಾಂತಗೊಳಿಸಿ.

02056008a ಯದಾ ಮನ್ಯುಂ ಪಾಂಡವೋಽಜಾತಶತ್ರುರ್

         ನ ಸಮ್ಯಚ್ಛೇದಕ್ಷಮಯಾಭಿಭೂತಃ|

02056008c ವೃಕೋದರಃ ಸವ್ಯಸಾಚೀ ಯಮೌ ಚ

         ಕೋಽತ್ರ ದ್ವೀಪಃ ಸ್ಯಾತ್ತುಮುಲೇ ವಸ್ತದಾನೀಂ||

ದ್ಯೂತದಿಂದ ಪಾಂಡವ ಅಜಾತಶತ್ರುವಿಗೆ ಅಥವಾ ವೃಕೋದರ, ಸವ್ಯಸಾಚೀ ಅಥವಾ ಯಮಳರಿಗೆ ಉಂಟಾದ ಸಿಟ್ಟು ತಣಿಯದಿದ್ದರೆ ಅದರಿಂದ ಉಂಟಾಗುವ ತುಮುಲದಲ್ಲಿ ಯಾವ ದ್ವೀಪವು ದೊರೆಯಬಲ್ಲದು?

02056009a ಮಹಾರಾಜ ಪ್ರಭವಸ್ತ್ವಂ ಧನಾನಾಂ

         ಪುರಾ ದ್ಯೂತಾನ್ಮನಸಾ ಯಾವದಿಚ್ಛೇಃ|

02056009c ಬಹು ವಿತ್ತಂ ಪಾಂಡವಾಂಶ್ಚೇಜ್ಜಯೇಸ್ತ್ವಂ

         ಕಿಂ ತೇನ ಸ್ಯಾದ್ವಸು ವಿಂದೇಹ ಪಾರ್ಥಾನ್||

ಮಹಾರಾಜ! ಈ ದ್ಯೂತದ ಮೊದಲೂ ನೀನು ನಿನ್ನ ಮನಸ್ಸಿನಲ್ಲಿ ಬಯಸಿದಷ್ಟು ಸಂಪತ್ತಿನ ಒಡೆಯನಾಗಿರುವೆ. ಪಾಂಡವರಿಂದ ಇನ್ನೂ ಹೆಚ್ಚಿನ ಸಂಪತ್ತನ್ನು ಪಡೆದರೆ ಅದು ಯಾರಿಗೆ ಬೇಕು? ಪಾರ್ಥರೇ ನಿನ್ನ ಸಂಪತ್ತಲ್ಲವೇ?

02056010a ಜಾನೀಮಹೇ ದೇವಿತಂ ಸೌಬಲಸ್ಯ

         ವೇದ ದ್ಯೂತೇ ನಿಕೃತಿಂ ಪಾರ್ವತೀಯಃ|

02056010c ಯತಃ ಪ್ರಾಪ್ತಃ ಶಕುನಿಸ್ತತ್ರ ಯಾತು

         ಮಾಯಾಯೋಧೀ ಭಾರತ ಪಾರ್ವತೀಯಃ||

ಭಾರತ! ಸೌಬಲನಾಡುವ ದ್ಯೂತವು ನಮಗೆಲ್ಲ ಗೊತ್ತೇ ಇದೆ. ಆ ಪಾರ್ವತೀಯನು ದ್ಯೂತದಲ್ಲಿ ಕೈಚಳಕವನ್ನು ತಿಳಿದಿದ್ದಾನೆ. ಆದುದರಿಂದ ಮಾಯೆಯಿಂದ ಆಡುವ ಈ ಪಾರ್ವತೀಯ ಶಕುನಿಯು ಎಲ್ಲಿಂದ ಬಂದಿದ್ದಾನೋ ಅಲ್ಲಿಗೇ ಹೋಗಲಿ.”

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ವಿದುರಹಿತವಾಕ್ಯೇ ಷಟ್‌ಪಂಚಶತ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ವಿದುರಹಿತವಾಕ್ಯ ಎನ್ನುವ ಐವತ್ತಾರನೆಯ ಅಧ್ಯಾಯವು.

Related image

Comments are closed.