ಸಭಾ ಪರ್ವ: ದ್ಯೂತ ಪರ್ವ
೫೩
ದ್ಯೂತಾರಂಭ
ಯುಧಿಷ್ಠಿರ-ಶಕುನಿಯರ ಸಂವಾದ ಮತ್ತು ದ್ಯೂತಾರಂಭ (೧-೨೧). ಮೊದಲನೆಯ ಪಣವನ್ನು ಶಕುನಿಯು ದುರ್ಯೋಧನನಿಗೆ ಗೆದ್ದುದುದು (೨೨-೨೫).
02053001a ಉಪಸ್ತೀರ್ಣಾ ಸಭಾ ರಾಜನ್ರಂತುಂ ಚೈತೇ ಕೃತಕ್ಷಣಾಃ|
02053001c ಅಕ್ಷಾನುಪ್ತ್ವಾ ದೇವನಸ್ಯ ಸಮಯೋಽಸ್ತು ಯುಧಿಷ್ಠಿರ||
ಶಕುನಿಯು ಹೇಳಿದನು: “ರಾಜನ್! ಸಭೆಯಲ್ಲಿ ಜಮಖಾನವನ್ನು ಹಾಸಿಯಾಗಿದೆ ಮತ್ತು ಇಲ್ಲಿರುವವರು ಸಂತೋಷಪಡಲು ಸಮಯವನ್ನು ತೆಗೆದಿಟ್ಟಿದ್ದಾರೆ. ಯುಧಿಷ್ಠಿರ! ನಾವು ದಾಳಗಳನ್ನು ಉರುಳಿಸುವಾಗ ಪಣದ ಕುರಿತು ಪರಸ್ಪರರಲ್ಲಿ ಒಪ್ಪಂದವಿರಲಿ.”
02053002 ಯುಧಿಷ್ಠಿರ ಉವಾಚ|
02053002a ನಿಕೃತಿರ್ದೇವನಂ ಪಾಪಂ ನ ಕ್ಷಾತ್ರೋಽತ್ರ ಪರಾಕ್ರಮಃ|
02053002c ನ ಚ ನೀತಿರ್ಧ್ರುವಾ ರಾಜನ್ಕಿಂ ತ್ವಂ ದ್ಯೂತಂ ಪ್ರಶಂಸಸಿ||
ಯುಧಿಷ್ಠಿರನು ಹೇಳಿದನು: “ರಾಜನ್! ಪಣವಿಟ್ಟು ಜೂಜಾಡುವುದು ಮೋಸ ಮತ್ತು ಪಾಪದ ಕೆಲಸ. ಅದರಲ್ಲಿ ಕ್ಷತ್ರಿಯ ಪರಾಕ್ರಮವೇನೂ ಇಲ್ಲ ಮತ್ತು ಶಾಶ್ವತ ನೀತಿಯೂ ಇಲ್ಲ. ನೀನು ಏಕೆ ದ್ಯೂತವನ್ನು ಪ್ರಶಂಸಿಸುತ್ತಿದ್ದೀಯೆ?
02053003a ನ ಹಿ ಮಾನಂ ಪ್ರಶಂಸಂತಿ ನಿಕೃತೌ ಕಿತವಸ್ಯ ಹ|
02053003c ಶಕುನೇ ಮೈವ ನೋ ಜೈಷೀರಮಾರ್ಗೇಣ ನೃಶಂಸವತ್||
ಶಕುನಿ! ಜೂಜಾಡುವವನ ಕಪಟವನ್ನು ಯಾರೂ ಪ್ರಶಂಸಿಸುವುದಿಲ್ಲ, ಗೌರವಿಸುವುದಿಲ್ಲ. ನಮ್ಮನ್ನು ಕಪಟಮಾರ್ಗದಿಂದ ಕ್ರೂರವಾಗಿ ಸೋಲಿಸಬೇಡ.”
02053004 ಶಕುನಿರುವಾಚ|
02053004a ಯೋಽನ್ವೇತಿ ಸಂಖ್ಯಾಂ ನಿಕೃತೌ ವಿಧಿಜ್ಞಃ
ಚೇಷ್ಟಾಸ್ವಖಿನ್ನಃ ಕಿತವೋಽಕ್ಷಜಾಸು|
02053004c ಮಹಾಮತಿರ್ಯಶ್ಚ ಜಾನಾತಿ ದ್ಯೂತಂ
ಸ ವೈ ಸರ್ವಂ ಸಹತೇ ಪ್ರಕ್ರಿಯಾಸು||
ಶಕುನಿಯು ಹೇಳಿದನು: “ಸಂಖ್ಯೆಗಳನ್ನು ಅನುಸರಿಸುವ, ಮೋಸವನ್ನು ಗುರುತಿಸುವ, ದಾಳಗಳನ್ನು ಉರುಳಿಸುವುದರಲ್ಲಿ ನಿರಾಯಾಸನಾದ, ಮತ್ತು ದ್ಯೂತವನ್ನು ತಿಳಿದ ಮಹಾಮತಿಯು ದ್ಯೂತದ ಎಲ್ಲ ಪ್ರಕ್ರಿಯೆಗಳನ್ನೂ ಸಹಿಸಬಲ್ಲ.
02053005a ಅಕ್ಷಗ್ಲಹಃ ಸೋಽಭಿಭವೇತ್ಪರಂ ನಃ
ತೇನೈವ ಕಾಲೋ ಭವತೀದಮಾತ್ಥ|
02053005c ದೀವ್ಯಾಮಹೇ ಪಾರ್ಥಿವ ಮಾ ವಿಶಂಕಾಂ
ಕುರುಷ್ವ ಪಾಣಂ ಚ ಚಿರಂ ಚ ಮಾ ಕೃಥಾಃ||
ಜೂಜಿನಲ್ಲಿ ಇಡುವ ಪಣವನ್ನು ಕಳೆದುಕೊಳ್ಳುವುದರಿಂದ ನಮಗೆ ಪರಮ ಕಷ್ಟವೆನಿಸಬಹುದು. ಆದುದರಿಂದ ಜೂಜಾಡುವುದು ಕೆಟ್ಟದೆಂದು ಹೇಳುತ್ತಾರೆ. ಪಾರ್ಥಿವ! ಜೂಜಾಡೋಣ. ಅನುಮಾನಪಡಬೇಡ. ಈಗಲೇ ಪಣವನ್ನು ಇಡು. ತಡಮಾಡಬೇಡ.”
02053006 ಯುಧಿಷ್ಠಿರ ಉವಾಚ|
02053006a ಏವಮಾಹಾಯಮಸಿತೋ ದೇವಲೋ ಮುನಿಸತ್ತಮಃ|
02053006c ಇಮಾನಿ ಲೋಕದ್ವಾರಾಣಿ ಯೋ ವೈ ಸಂಚರತೇ ಸದಾ||
ಯುಧಿಷ್ಠಿರನು ಹೇಳಿದನು: “ಸದಾ ಲೋಕದ್ವಾರಗಳಿಗೆ ಸಂಚರಿಸುವ ಮುನಿಸತ್ತಮ ಅಸಿತ ದೇವಲನು ಈ ರೀತಿ ಹೇಳಿದ್ದಾನೆ:
02053007a ಇದಂ ವೈ ದೇವನಂ ಪಾಪಂ ಮಾಯಯಾ ಕಿತವೈಃ ಸಹ|
02053007c ಧರ್ಮೇಣ ತು ಜಯೋ ಯುದ್ಧೇ ತತ್ಪರಂ ಸಾಧು ದೇವನಂ||
“ಮಾಯೆಯಿಂದ ಜೂಜಾಡುವವರೊಂದಿಗೆ ಪಣವಿಡುವುದು ಪಾಪ. ಧರ್ಮವನ್ನು ಪಣವಿಟ್ಟು ಯುದ್ಧದಲ್ಲಿ ಜಯಗಳಿಸುವುದು ಇದಕ್ಕಿಂತಲೂ ಉತ್ತಮವಾದುದು.
02053008a ನಾರ್ಯಾ ಮ್ಲೇಚ್ಛಂತಿ ಭಾಷಾಭಿರ್ಮಾಯಯಾ ನ ಚರಂತ್ಯುತ|
02053008c ಅಜಿಹ್ಮಮಶಠಂ ಯುದ್ಧಮೇತತ್ಸತ್ಪುರುಷವ್ರತಂ||
ಯಾವ ಆರ್ಯನೂ ಮ್ಲೇಚ್ಛಭಾಷೆಯಲ್ಲಿ ಮಾತನಾಡುವುದಿಲ್ಲ ಮತ್ತು ಮಾಯೆಯಿಂದ ನಡೆದುಕೊಳ್ಳುವುದಿಲ್ಲ. ಓರೆ ಕೋರೆಗಳಿಲ್ಲದ ನೇರ ಯುದ್ಧವೇ ಸತ್ಪುರುಷನ ವ್ರತ.”
02053009a ಶಕ್ತಿತೋ ಬ್ರಾಹ್ಮಣಾನ್ವಂದ್ಯಾಂ ಶಿಕ್ಷಿತುಂ ಪ್ರಯತಾಮಹೇ|
02053009c ತದ್ವೈ ವಿತ್ತಂ ಮಾತಿದೇವೀರ್ಮಾ ಜೈಷೀಃ ಶಕುನೇ ಪರಂ||
ನಮ್ಮ ಶಕ್ತಿಗನುಗುಣವಾಗಿ ಅರ್ಹ ಬ್ರಾಹ್ಮಣರನ್ನು ಪೂಜಿಸಲು ಪ್ರಯತ್ನಿಸುತ್ತೇವೆ. ಶಕುನಿ! ಆ ವಿತ್ತವನ್ನು ಮೀರಿ ಪಣವಿಟ್ಟು ಆಡಬೇಡ. ಅದಕ್ಕಿಂತಲೂ ಹೆಚ್ಚಿನದನ್ನು ಗೆಲ್ಲಬೇಡ.
02053010a ನಾಹಂ ನಿಕೃತ್ಯಾ ಕಾಮಯೇ ಸುಖಾನ್ಯುತ ಧನಾನಿ ವಾ|
02053010c ಕಿತವಸ್ಯಾಪ್ಯನಿಕೃತೇರ್ವೃತ್ತಮೇತನ್ನ ಪೂಜ್ಯತೇ||
ನಾನು ಮೋಸದಿಂದ ಸುಖವನ್ನಾಗಲೀ ಧನವನ್ನಾಗಲೀ ಬಯಸುವುದಿಲ್ಲ. ಆದರೆ, ಮೋಸವಿಲ್ಲದ ಜೂಜಿಗೆ ಮಾನ್ಯತೆಯಿಲ್ಲ.”
02053011 ಶಕುನಿರುವಾಚ|
02053011a ಶ್ರೋತ್ರಿಯೋಽಶ್ರೋತ್ರಿಯಮುತ ನಿಕೃತ್ಯೈವ ಯುಧಿಷ್ಠಿರ|
02053011c ವಿದ್ವಾನವಿದುಷೋಽಭ್ಯೇತಿ ನಾಹುಸ್ತಾಂ ನಿಕೃತಿಂ ಜನಾಃ||
ಶಕುನಿಯು ಹೇಳಿದನು: “ಯುಧಿಷ್ಠಿರ! ಶ್ರೋತ್ರಿಯನ್ನು ಅಶ್ರೋತ್ರಿಯು ಕೇವಲ ಮೋಸದಿಂದಲೇ ಗೆಲ್ಲಬಹುದು. ವಿದ್ವಾನನು ಅವಿದುಷಿಯನ್ನೂ ಕೂಡ ಮೋಸದಿಂದಲೇ ಹಿಂದೆಮಾಡುತ್ತಾನೆ. ಆದರೆ ಜನರು ಅದನ್ನು ಮೋಸವೆಂದು ಕರೆಯುವುದಿಲ್ಲ.
02053012a ಏವಂ ತ್ವಂ ಮಾಮಿಹಾಭ್ಯೇತ್ಯ ನಿಕೃತಿಂ ಯದಿ ಮನ್ಯಸೇ|
02053012c ದೇವನಾದ್ವಿನಿವರ್ತಸ್ವ ಯದಿ ತೇ ವಿದ್ಯತೇ ಭಯಂ||
ನೀನು ನನ್ನಲ್ಲಿಗೆ ಬಂದಿದ್ದೀಯೆ. ಒಮ್ಮೆ ನಾನು ಮೋಸಗಾರನೆಂದು ನಿನಗನ್ನಿಸಿದರೆ ಮತ್ತು ಇದರಲ್ಲಿ ನಿನಗೆ ಭಯವೆನಿಸಿದರೆ ಜೂಜಿನಿಂದ ದೂರವಿರು.”
02053013 ಯುಧಿಷ್ಠಿರ ಉವಾಚ|
02053013a ಆಹೂತೋ ನ ನಿವರ್ತೇಯಮಿತಿ ಮೇ ವ್ರತಮಾಹಿತಂ|
02053013c ವಿಧಿಶ್ಚ ಬಲವಾನ್ರಾಜನ್ದಿಷ್ಟಸ್ಯಾಸ್ಮಿ ವಶೇ ಸ್ಥಿತಃ||
ಯುಧಿಷ್ಠಿರನು ಹೇಳಿದನು: “ಎದುರಾಳಿಯು ಕರೆದಾಗ ನಾನು ಹಿಂಜರಿಯುವುದಿಲ್ಲ. ಇದು ನಾನು ನಡೆಸುತ್ತಿರುವ ವ್ರತ. ರಾಜನ್! ವಿಧಿಯು ಬಲಶಾಲಿಯು. ನಾನು ದೈವದ ವಶನಾಗಿದ್ದೇನೆ.
02053014a ಅಸ್ಮಿನ್ಸಮಾಗಮೇ ಕೇನ ದೇವನಂ ಮೇ ಭವಿಷ್ಯತಿ|
02053014c ಪ್ರತಿಪಾಣಶ್ಚ ಕೋಽನ್ಯೋಽಸ್ತಿ ತತೋ ದ್ಯೂತಂ ಪ್ರವರ್ತತಾಂ||
ಈ ಸಮಾಗಮದಲ್ಲಿ ಯಾರೊಡನೆ ನಾನು ಜೂಜಾಡಬೇಕಾಗುತ್ತದೆ? ಎದಿರು ಪಣವೇನಿದೆ? ದ್ಯೂತವನ್ನು ಆರಂಭಿಸೋಣ.”
02053015 ದುರ್ಯೋಧನ ಉವಾಚ|
02053015a ಅಹಂ ದಾತಾಸ್ಮಿ ರತ್ನಾನಾಂ ಧನಾನಾಂ ಚ ವಿಶಾಂ ಪತೇ|
02053015c ಮದರ್ಥೇ ದೇವಿತಾ ಚಾಯಂ ಶಕುನಿರ್ಮಾತುಲೋ ಮಮ||
ದುರ್ಯೋಧನನು ಹೇಳಿದನು: “ವಿಶಾಂಪತೇ! ನಾನು ರತ್ನಗಳನ್ನು ಧನವನ್ನು ನೀಡುತ್ತೇನೆ. ನನ್ನ ಪರವಾಗಿ ನನ್ನ ಮಾತುಲ ಶಕುನಿಯು ದಾಳಗಳನ್ನೆಸೆಯುತ್ತಾನೆ.”
02053016 ಯುಧಿಷ್ಠಿರ ಉವಾಚ|
02053016a ಅನ್ಯೇನಾನ್ಯಸ್ಯ ವಿಷಮಂ ದೇವನಂ ಪ್ರತಿಭಾತಿ ಮೇ|
02053016c ಏತದ್ವಿದ್ವನ್ನುಪಾದತ್ಸ್ವ ಕಾಮಮೇವಂ ಪ್ರವರ್ತತಾಂ||
ಯುಧಿಷ್ಠಿರನು ಹೇಳಿದನು: “ಒಬ್ಬನ ಪರವಾಗಿ ಇನ್ನೊಬ್ಬನು ಜೂಜಾಡುವುದು ನನಗೆ ಸರಿಯೆನಿಸುವುದಿಲ್ಲ. ನಿನಗೆ ಇದು ತಿಳಿದಿದೆ. ಇದನ್ನು ತಿಳಿದುಕೊಂಡು ನಿನಗಿಷ್ಟವಿದ್ದಂತೆ ಆಟವು ಪ್ರಾರಂಭವಾಗಲಿ.””
02053017 ವೈಶಂಪಾಯನ ಉವಾಚ|
02053017a ಉಪೋಹ್ಯಮಾನೇ ದ್ಯೂತೇ ತು ರಾಜಾನಃ ಸರ್ವ ಏವ ತೇ|
02053017c ಧೃತರಾಷ್ಟ್ರಂ ಪುರಸ್ಕೃತ್ಯ ವಿವಿಶುಸ್ತಾಂ ಸಭಾಂ ತತಃ||
02053018a ಭೀಷ್ಮೋ ದ್ರೋಣಃ ಕೃಪಶ್ಚೈವ ವಿದುರಶ್ಚ ಮಹಾಮತಿಃ|
02053018c ನಾತೀವಪ್ರೀತಮನಸಸ್ತೇಽನ್ವವರ್ತಂತ ಭಾರತ||
ವೈಶಂಪಾಯನನು ಹೇಳಿದನು: “ಭಾರತ! ದ್ಯೂತವು ಪ್ರಾರಂಭವಾದ ಹಾಗೆಯೇ ಧೃತರಾಷ್ಟ್ರನ ಮುಂದಾಳುತ್ವದಲ್ಲಿ ಸರ್ವ ರಾಜರು - ಇದರಿಂದ ಅತೀವ ಪ್ರೀತಮನಸ್ಕರಾಗಿರದ ಭೀಷ್ಮ, ದ್ರೋಣ, ಕೃಪ, ಮಹಾಮತಿ ವಿದುರ, ಮತ್ತು ಅನ್ಯರು - ಸಭೆಯನ್ನು ಪ್ರವೇಶಿಸಿದರು.
02053019a ತೇ ದ್ವಂದ್ವಶಃ ಪೃಥಕ್ಚೈವ ಸಿಂಹಗ್ರೀವಾ ಮಹೌಜಸಃ|
02053019c ಸಿಂಹಾಸನಾನಿ ಭೂರೀಣಿ ವಿಚಿತ್ರಾಣಿ ಚ ಭೇಜಿರೇ||
ಆ ಸಿಂಹಗ್ರೀವ ಮಹೌಜಸರು ಜೋಡಿಗಳಲ್ಲಿ ಅಥವಾ ಒಬ್ಬಂಟಿಗರಾಗಿ ಸುಂದರ ವಿಶಾಲ ಸಿಂಹಾಸನಗಳಲ್ಲಿ ಆಸೀನರಾದರು.
02053020a ಶುಶುಭೇ ಸಾ ಸಭಾ ರಾಜನ್ರಾಜಭಿಸ್ತೈಃ ಸಮಾಗತೈಃ|
02053020c ದೇವೈರಿವ ಮಹಾಭಾಗೈಃ ಸಮವೇತೈಸ್ತ್ರಿವಿಷ್ಟಪಂ||
02053021a ಸರ್ವೇ ವೇದವಿದಃ ಶೂರಾಃ ಸರ್ವೇ ಭಾಸ್ವರಮೂರ್ತಯಃ|
02053021c ಪ್ರಾವರ್ತತ ಮಹಾರಾಜ ಸುಹೃದ್ದ್ಯೂತಮನಂತರಂ||
ರಾಜನ್! ಆ ಸಭೆಯು ಮಹಾಭಾಗ ದೇವತೆಗಳ ಸಮಾಗಮದಿಂದ ಶೋಭಿಸುವ ದಿವಿಯಂತೆ ಸಮಾಗತ ರಾಜರಿಂದ ಶೋಭಿಸುತ್ತಿತ್ತು. ಎಲ್ಲರೂ ವೇದವಿದರೂ, ಶೂರರೂ ಆಗಿದ್ದು ಸರ್ವರೂ ಭಾಸ್ಕರಮೂರ್ತಿಗಳಾಗಿದ್ದರು. ಮಹಾರಾಜ! ನಂತರ ಆ ಸುಹೃದಯಕರ ದ್ಯೂತವು ಪ್ರಾರಂಭವಾಯಿತು.
02053022 ಯುಧಿಷ್ಠಿರ ಉವಾಚ|
02053022a ಅಯಂ ಬಹುಧನೋ ರಾಜನ್ಸಾಗರಾವರ್ತಸಂಭವಃ|
02053022c ಮಣಿರ್ಹಾರೋತ್ತರಃ ಶ್ರೀಮಾನ್ಕನಕೋತ್ತಮಭೂಷಣಃ||
ಯುಧಿಷ್ಠಿರನು ಹೇಳಿದನು: “ರಾಜನ್! ಇಗೋ! ಸಾಗರಾವರ್ತಸಂಭವ ಮಣಿಹಾರಗಳು ಮತ್ತು ಶ್ರೀಮಾನ ಕನಕ ಉತ್ತಮ ಭೂಷಣಗಳ ಬಹುಧನ.
02053023a ಏತದ್ರಾಜನ್ಧನಂ ಮಹ್ಯಂ ಪ್ರತಿಪಾಣಸ್ತು ಕಸ್ತವ|
02053023c ಭವತ್ವೇಷ ಕ್ರಮಸ್ತಾತ ಜಯಾಮ್ಯೇನಂ ದುರೋದರಂ||
ರಾಜನ್! ಇದು ನನ್ನ ಪಣ. ಇದಕ್ಕೆ ಪ್ರತಿಯಾದ ನಿನ್ನ ಪಣವೇನು? ತಾತ! ನೀನು ಕ್ರಮದಿಂದಿರು. ಈ ಪಣವನ್ನು ನಾನೇ ಗೆಲ್ಲುತ್ತೇನೆ.”
02053024 ದುರ್ಯೋಧನ ಉವಾಚ|
02053024a ಸಂತಿ ಮೇ ಮಣಯಶ್ಚೈವ ಧನಾನಿ ವಿವಿಧಾನಿ ಚ|
02053024c ಮತ್ಸರಶ್ಚ ನ ಮೇಽರ್ಥೇಷು ಜಯಾಮ್ಯೇನಂ ದುರೋದರಂ||
ದುರ್ಯೋಧನನು ಹೇಳಿದನು: “ನನ್ನಲ್ಲಿಯೂ ಮಣಿಗಳಿವೆ. ವಿವಿಧ ಧನಗಳಿವೆ. ಅರ್ಥದಲ್ಲಿ ನನಗೆ ಮತ್ಸರವಿಲ್ಲ. ಈ ಪಣವನ್ನು ನಾನೇ ಗೆಲ್ಲುತ್ತೇನೆ.””
02053025 ವೈಶಂಪಾಯನ ಉವಾಚ|
02053025a ತತೋ ಜಗ್ರಾಹ ಶಕುನಿಸ್ತಾನಕ್ಷಾನಕ್ಷತತ್ತ್ವವಿತ್|
02053025c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ||
ವೈಶಂಪಾಯನನು ಹೇಳಿದನು: “ಆಗ ಅಕ್ಷತತ್ವವನ್ನು ತಿಳಿದಿದ್ದ ಶಕುನಿಯು ದಾಳಗಳನ್ನು ಹಿಡಿದನು. ಶಕುನಿಯು ಯುಧಿಷ್ಠಿರನಿಗೆ “ಗೆದ್ದೆ!” ಎಂದು ಹೇಳಿದನು.
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ದ್ಯೂತಾರಂಭೇ ತ್ರಿಪಂಚಶತ್ತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ದ್ಯೂತಾರಂಭ ಎನ್ನುವ ಐವತ್ಮೂರನೆಯ ಅಧ್ಯಾಯವು.